ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು!
ನೇರಳೆ ತೋಟದಿಂದ ಸಿದ್ಧಬಾಲಕನು ಹುಡುಗರೊಂದಿಗೆ ಮನೆಯಕಡೆಗೆ ಹೊರಟನು. ದಾರಿಯಲ್ಲಿ ಒಂದು ಹಾವು ಬಿದ್ದಿತ್ತು. ಅದನ್ನು ಕಂಡೊಡನೆಯೇ ಹುಡುಗರೆಲ್ಲಾ ಭಯಪಟ್ಟು ಕಂಗಾಲಾಗಿ ಅತ್ತಿತ್ತ ದೂರಕ್ಕೆ ಓಡಿಹೋದರು. ಸಿದ್ಧನು ಹೆದರಲಿಲ್ಲ.ಹತ್ತಿರಕ್ಕೆ ಹೋಗಿ ಪರಿಶೀಲಿಸಿದನು. ಒಂದು ಸಣ್ಣ ಕಲ್ಲನ್ನು ಎಸೆದನು. ಅದು ಅಲುಗಾಡಲಿಲ್ಲ.ಹಾವು ಸತ್ತಿರುವುದನ್ನು ಮನಗಂಡನು.ಬಳಿಕ ಮಿತ್ರರನ್ನೆಲ್ಲಾ ಕೂಗಿ ಕರೆದನು. “ಏಕೆ ಹೆದರುತ್ತೀರೋ? ಬನ್ನಿ! ಇದು ಸತ್ತ ಹಾವು” ಎಂದನು. ಹುಡುಗರು ನಂಬಲಿಲ್ಲ. ಮುಂದಕ್ಕೆ ಹೆಜ್ಜೆ ಇಡಲು ಹಿಂಜರಿದರು. ಆಗ ಸಿದ್ಧನು, ಆ ಸತ್ತ ಹಾವನ್ನು ಕೈಯಲ್ಲಿ ಹಿಡಿದೆತ್ತಿ ತೋರಿಸಿದನು. ಆಗ ಹುಡುಗರಿಗೆ ನಂಬಿಕೆ ಬಂದಿತು.ಒಬ್ಬೊಬ್ಬರೇ ನಿಧಾನವಾಗಿ ಹೆಜ್ಜೆ ಹಾಕಿ ಹತ್ತಿರಕ್ಕೆ ಬಂದು ಸೇರಿದರು. ಆಗ ಸಿದ್ಧನು ಬುದ್ಧಿ ಹೇಳಲು ಮುಂದಾದನು.
ಈ ಲೋಕದಲ್ಲಿ ಬಹುತೇಕ ಜನರು ಕಂಡೊಡನೆ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ.ಇಂಥ ದುಡುಕಿನ ನಿರ್ಧಾರ ಸರಿಯಲ್ಲ. ದುಡುಕು ಬಲು ಕೆಡಕು. ಕಿರಾತಾರ್ಜುನೀಯ ಮಹಾಕಾವ್ಯದ ಪ್ರಸಿದ್ಧ ಮಾತೊಂದು ಹೀಗಿದೆ;
ಸಹಸಾ ವಿದಧೀತ ನಕ್ರಿಯಾಮ್
ಅವಿವೇಕಃ ಪರಮಾಪದಾಂ ಪದಮ್|
ವೃಣುತೇ ಹಿ ವಿಮೃಶ್ಯಕಾರಿಣಂ
ಗುಣಲುಬ್ಧಾಃ ಸ್ವಯಮೇವ ಸಂಪದಃ||
ಪೂರ್ವಾಪರ ವಿಚಾರವಿಲ್ಲದೆಯೇ, ಒಡನೆಯೇ ಕಾರ್ಯವನ್ನೆಸಗಬಾರದು. ಅವಿವೇಕವು ಬಹಳ ದುಷ್ಟ ಆಪತ್ತನ್ನು ತಂದೊಡ್ಡುತ್ತದೆ. ಪೂರ್ವಾಪರ ವಿಚಾರಮಾಡುವ, ಸಾಧಕ-ಬಾಧಕಗಳನ್ನು ಮೆಲುಕು ಹಾಕುವ, ಆಳ ಅಗಲಗಳತ್ತ ಗಮನಹರಿಸುವ,ಸತ್ಯ-ಅಸತ್ಯಗಳನ್ನು ಒರೆಗಲ್ಲಿಗೆ ಹಚ್ಚಿ ಪರಿಶೀಲಿಸುವ, ವಿಮರ್ಶಾತ್ಮಕ,ವಿಚಿಕಿತ್ಸಕ ಬುದ್ಧಿಯುಳ್ಳ ಜಾಣನ ಹಿಂದೆ, ಸಕಲ ಸಂಪತ್ತುಗಳು ಬೆನ್ಹತ್ತಿ, ತಾವಾಗಿಯೇ ತಾವು ಬಂದು ಸೇರುತ್ತವೆ. ಪರಿಶೀಲನೆ ಮಾಡದೇ, ನೇರ ಪ್ರತ್ಯಕ್ಷಜ್ಞಾನದಿಂದಲೇ ಒಂದು ದಿಢೀರ್ ತೀರ್ಮಾನಕ್ಕೆ ಬಂದು ಕಾರ್ಯ ತತ್ಪರರಾದರೆ, ಅಡ್ಡಿ-ತೊಂದರೆ-ಅನಾಹುತಗಳು ಜರುಗುತ್ತವೆ. ಉದಾಹರಣೆಗೆ ಹಾಲು ಹಾಗೂ ಸುಣ್ಣದ ನೀರು, ನೋಡಲು ಒಂದೇ ರೀತಿಯಾಗಿರುತ್ತವೆ.
ಬಾಟಲಿಯಲ್ಲಿನ,ಲೋಟಾದಲ್ಲಿನ ಸುಣ್ಣದ ನೀರನ್ನು ಪರಿಶೀಲಿಸದೇ ಗಟಗಟನೇ ಕುಡಿದರೆ? ಪ್ರಾಣಕ್ಕೆ ಕುತ್ತು! ಎಷ್ಟೋ ಜನರು ಸ್ಪಿರಿಟ್ ನ್ನು ನೀರೆಂದು ಕುಡಿದು, ಕ್ರಿಮಿನಾಶಕ ಔಷಧವನ್ನು ಟಾನಿಕ್ ಎಂದು ಸೇವಿಸಿ, ಸತ್ತಿರುವುದುಂಟು! ಆದ್ದರಿಂದ ಯಾವುದೇ ಕಾರ್ಯವನ್ನು ಮಾಡುವ ಮೊದಲು, ಕೂಡಿ-ಕಳೆಯುವ,ಲಾಭ-ನಷ್ಟದ, ಸಾಧಕ-ಬಾಧಕಗಳ ಪರಿಶೀಲನೆಯನ್ನು ಮಾಡಬೇಕು. ಸರಿಯಾದ ಪರಿಶೀಲನೆ ಇದ್ದಲ್ಲಿ, ಇಂಥ ಅನಾಹುತಗಳನ್ನು ತಡೆಯಬಹುದಾಗಿದೆ. ನಷ್ಟವಿಲ್ಲದೇ ಲಾಭವನ್ನು ಸಂಪಾದಿಸಬಹುದಾಗಿದೆ. ಇದನ್ನು ಮನಗಂಡೇ ನಮ್ಮ ಹಿರಿಯರು ಹೇಳಿದ್ದು: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು-ಎಂದು. ಕಣ್ಣು, ಕಿವಿ ,ಮೂಗು, ನಾಲಿಗೆ, ಚರ್ಮ-ಎಂಬ ಐದು ಜ್ಞಾನೇಂದ್ರಿಯಗಳಿಗೆ ಕ್ರಮವಾಗಿ, ರೂಪ-ಶಬ್ದ-ಗಂಧ-ರಸ-ಸ್ಪರ್ಶ-ಎಂಬ ಐದು ವಿಷಯಗಳ ಸಂಪರ್ಕದಿಂದ ಉಂಟಾಗುವ ಜ್ಞಾನವೇ ಪ್ರತ್ಯಕ್ಷಜ್ಞಾನ.ಇದನ್ನು ತಾರ್ಕಿಕರು ಹೀಗೆ ಹೇಳಿದ್ದಾರೆ:
ಇಂದ್ರಿಯಾರ್ಥಸನ್ನಿಕರ್ಷಜನ್ಯಂ ಜ್ಞಾನಂ ಪ್ರತ್ಯಕ್ಷಂ=ಇಂದ್ರಿಯ ಮತ್ತು ವಿಷಯ-ಇವೆರಡೂ ಪರಸ್ಪರ ಬೆರೆಯುವುದರಿಂದ ಉಂಟಾಗುವ ಜ್ಞಾನವೇ ಪ್ರತ್ಯಕ್ಷ ಜ್ಞಾನ-ಎಂದು.
ನಮ್ಮ ವ್ಯವಹಾರಗಳಿಗೆ ಪ್ರತ್ಯಕ್ಷಜ್ಞಾನ ಮಾತ್ರ ಸಾಲದು.ಅದು ಅಪೂರ್ಣವೆನಿಸುವುದು.ಅದು ಹೇಗೆಂದರೆ,ಇವಳು ನನ್ನ ತಾಯಿ ಎಂಬುದು ಪ್ರತ್ಯಕ್ಷಜ್ಞಾನ.ಇವನೇ ನನ್ನ ತಂದೆ ಎಂಬುದು ಪ್ರತ್ಯಕ್ಷ ಜ್ಞಾನವಲ್ಲ. ತಾಯಿಯು ” ಇವನು ನಿನ್ನ ತಂದೆ” ಎಂದು ತಿಳಿಸಿಕೊಡುವ ಮಾತೇ ಅಲ್ಲಿ ಪ್ರಮಾಣ! ಆದ್ದರಿಂದ ಶಬ್ದವೂ ಪ್ರಮಾಣ. ದೂರದಲ್ಲಿ ಹೊಗೆಯಾಡುತ್ತಿರುತ್ತದೆ. ಹೊಗೆ ಕಾಣುವುದು. ಬೆಂಕಿ ಕಾಣದು. ಆದರೂ ಅಲ್ಲಿ ಬೆಂಕಿ ಇದೆ ಎಂದು ತಿಳಿಯುತ್ತೇವೆ. ಇದು ಪ್ರತ್ಯಕ್ಷ ಜ್ಞಾನವಲ್ಲ. ಹೊಗೆ ಇದ್ದಲ್ಲೆಲ್ಲ ಬೆಂಕಿ ಇರುವುದನ್ನು ಕಂಡ ಅನುಭವದ ಮೇಲೆ ಮಾಡುವ ಊಹೆ-ತರ್ಕವೇ ಅಲ್ಲಿ ಪ್ರಮಾಣ! ಊಹೆಗೆ ಅನುಮಾನ ಎನ್ನಲಾಗಿದೆ. ಹುಡುಗನ ಪರಿಚಯ ಇರುವುದಿಲ್ಲ,ಮುಖ ನೋಡಿರುವುದಿಲ್ಲ.ತಂದೆಯ ಅಥವಾ ತಾಯಿಯ ಮುಖಚರ್ಯೆ – ಹೋಲಿಕೆಯಿಂದಾಗಿ, ಈತನು ಇಂಥವರ ಮಗನಿರಬಹುದು ಎಂದು ತಿಳಿಯುತ್ತೇವೆ. ಇದು ಪ್ರತ್ಯಕ್ಷಜ್ಞಾನವಲ್ಲ.ಇದು ಹೋಲಿಕೆ-ಉಪಮಾನಜ್ಞಾನ. ಹೀಗೆ ಶಬ್ದದಿಂದ, ಊಹೆಯಿಂದ ಹೋಲಿಕೆಯಿಂದಲೂ ಜ್ಞಾನವುಂಟಾಗುತ್ತದೆ.ಜ್ಞಾನವನ್ನುಂಟುಮಾಡುವ ಅತ್ಯಂತ ಮುಖ್ಯ ಸಾಧನೆಗೆ ಪ್ರಮಾಣ ಎನ್ನಲಾಗಿದೆ. ಪ್ರಮಾಕರಣಂ ಪ್ರಮಾಣಂ=ಯಥಾರ್ಥ ಜ್ಞಾನಕ್ಕೆ ಮುಖ್ಯಸಾಧನವಾದುದನ್ನು ಪ್ರಮಾಣ ಎನ್ನಲಾಗುವುದು.ಪ್ರತ್ಯಕ್ಷ, ಅನುಮಾನ(ಊಹೆ), ಉಪಮಾನ(ಹೋಲಿಕೆ), ಶಬ್ದ, ಎಂಬುದಾಗಿ, ಶಾಸ್ರ್ತಕಾರರು ಮುಖ್ಯವಾಗಿ ನಾಲ್ಕು ಪ್ರಮಾಣಗಳನ್ನು ಪ್ರತಿಪಾದಿಸಿದ್ದಾರೆ. ಕೆಲವರು, ವಿಶೇಷವಾಗಿ ವೇದಾಂತಿಗಳು ಅರ್ಥಾಪತ್ತಿ,ಅನುಪಲಬ್ಧಿ ಎಂಬ ಇನ್ನೆರಡು ಪ್ರಮಾಣಗಳನ್ನು ಒಪ್ಪಿದ್ದಾರೆ.
ಕಣ್ಣಿನಿಂದ ಸುಣ್ಣದ ನೀರನ್ನು ನೋಡಿದೊಡನೆಯೇ ಇದು ಹಾಲು ಎಂಬ ತಿಳಿವಳಿಕೆ ಉಂಟಾಗಬಹುದು. ಇದು ಪ್ರತ್ಯಕ್ಷ ಜ್ಞಾನ. ಅಷ್ಟಕ್ಕೇ ನಾವು ನಿಲ್ಲುವುದು ತರವಲ್ಲ. ಮೂಗಿನಿಂದ ವಾಸನೆಯನ್ನು ಹೀರಬೇಕು!ಹಾಲಿನ ವಾಸನೆಯನ್ನು ಬಲ್ಲ ಮೂಗು ತಿಳಿಯುವುದು, ಇದು ಹಾಲಲ್ಲ ಎಂದು! ಇದು ಕೂಡಾ ಪ್ರತ್ಯಕ್ಷ ಜ್ಞಾನವೇ. ಆಗಲೂ ಕೆಲವೊಮ್ಮೆ ಸಂಶಯ ಉಂಟಾಗಬಹುದು! ಆಗ ಮತ್ತೆ ಅಷ್ಟಕ್ಕೇ ನಿಲ್ಲದೇ ಒಂದು ಹಾನಿಯನ್ನು ನಾಲಿಗೆಯ ಮೇಲೆ ಹಾಕಿಕೊಂಡು ರುಚಿ ನೋಡಬಹುದು. ಆದರೆ ಇಲ್ಲಿ ಬಹಳ ಎಚ್ಚರಿರಬೇಕು. ಅದು ವಿಷಕಾರಕವಾಗಿದ್ದರೆ, ಅಪಾಯದ್ದಾಗಿದ್ದರೆ ಅನಾಹುತವಾದೀತು! ಏಕಾಏಕಿ ನುಂಗಿ ಒಳಗಿಳಿಸಕೊಡದು! ನಾಲಿಗೆ ಅದನ್ನು ಹಾಲಲ್ಲವೆಂದು ಸಾಬೀತುಪಡಿಸಬಲ್ಲುದು. ನಾಲಿಗೆಯಿಂದ ಉಂಟಾಗುವ ಜ್ಞಾನವೂ ಪ್ರತ್ಯಕ್ಷ! ಹಿತ್ತಾಳೆ ಬಣ್ಣದ ದೊಡ್ಡ ಘಂಟೆಯನ್ನು ಕಂಡೊಡನೆ ಹಿತ್ತಾಳೆಯ ಘಂಟೆ ಎಂದೆನಿಸುವುದು. ಅದು ಹಿತ್ತಾಳೆಯೋ? ಕಬ್ಬಿಣವೋ? ಮತ್ತೊಂದೋ? ಎಂದು ಪರಿಶೀಲಿಸಲು, ಅದನ್ನು ಜೋರಾಗಿ ಬಾರಿಸಿ, ಅದಕ್ಕೆ ಕಿವಿಗೊಟ್ಟು, ಶಬ್ದ – ಧ್ವನಿತರಂಗಗಳನ್ನು ಆಲಿಸಿ. ಅನುಭವಿ ಕಿವಿಯು ಅದು ಹಿತ್ತಾಳೆಯೋ? ಅಲ್ಲವೋ? ಎಂಬುದನ್ನು ಸಾಬೀತುಪಡಿಸಬಲ್ಲುದು! ಇದು ಕೂಡಾ ಪ್ರತ್ಯಕ್ಷ ಜ್ಞಾನ. ಇನ್ನೂ ಸಂಶಯವಿದ್ದಲ್ಲಿ ಒರೆಗಲ್ಲಿಗೆ ಹಚ್ಚಿಯೋ, ಅನ್ಯ ಸಾಧನದಿಂದಲೋ, ಪರೀಕ್ಷಿಸಲಾಗುವುದು. ಹೀಗೆ ಜ್ಞಾನ ನಿಷ್ಕರ್ಷಕ್ಕಾಗಿ ಹಲವು ಸಾಧನಗಳಿಂದ ಪರೀಕ್ಷಿಸಬೇಕು.ಬಂಗಾರದ ಬಣ್ಣದ್ದೆಲ್ಲವೂ ಬಂಗಾರವಾಗಿರಲಾರದು! ಗಿಲೀಟಿನ ಆಭರಣಗಳೂ ಬಂಗಾರದ ಆಭರಣಗಳಂತೆಯೇ ಹೊಳೆಯುತ್ತವೆ! ಕೆಲವರು ಗಾಂಧೀವೇಷವನ್ನು ಹಾಕಿರುತ್ತಾರೆ. ಅವರಲ್ಲಿ ಗಾಂಧಿಯವರ ಆದರ್ಶಗಳು ಇವೆಯೋ? ಇಲ್ಲವೋ? ಎಂಬುದು ಪರಿಶೀಲನೆಯ ಬಳಿಕಮಾತ್ರವೇ ಸಾಬೀತಾಗುವುದು! ಅಡುಗೆಗೆ ಉಪ್ಪು ಹೆಚ್ಚಾಗಿದೆ ಎಂಬುದನ್ನು ನಾಲಿಗೆ ಹೇಳುತ್ತದೆ. ಇದು ಸರಿಯಾದ ಜ್ಞಾನವೇ. ಅಡುಗೆಯನ್ನು ತಾಯಿಯೇ ಮಾಡಿದ್ದು. ಇದು ಕೂಡಾ ಸರಿಯಾದ ಜ್ಞಾನವೇ. ಹಾಗೆಂದ ಮಾತ್ರಕ್ಕೆ ಕೂಡಲೇ ತಾಯಿಯ ಮೇಲೆ ಸಿಟ್ಟಾಗಬೇಕಿಲ್ಲ ! ಆಗದ ಕಾಣದ ಮತ್ತೊಂದು ಕೈ ಉಪ್ಪು ಹಾಕಿರಬಹದಲ್ಲ!
ಮನೆಯೊಡತಿಯೊಬ್ಬಳು ತನ್ನ ಕಂದಮ್ಮನನ್ನು ತೊಟ್ಟಿಲಲ್ಲಿಟ್ಟು, ತೂಗಿ ಮಲಗಿಸಿದಳು.ಅಲ್ಲಿ ಸಾಕಿದ ಮುಂಗಲಿ ಇತ್ತು. ಅದು ಮಗುವನ್ನು ಕಾಯುವುದೆಂದು ನಂಬಿ, ಒಡತಿ ನೀರನ್ನು ತರಲು ಬಿಂದಿಗೆ ಹಿಡಿದು ಹೊರನಡೆದಳು.ಅಷ್ಟರಲ್ಲಿ ಹಾವೊಂದು ಅಲ್ಲಿ ನುಗ್ಗಿತು. ಅದು ತೊಟ್ಟಿಲದ ಕಡೆ ಮುಖಮಾಡಿತು. ಕೂಡಲೇ ಮುಂಗಲಿಯು ಹಾವನ್ನು ತಡವಿತು. ಹಾವು ಮುಂಗಲಿಗಳ ನಡುವೆ ಭಯಾನಕ ರೋಚಕ ಕಾಳಗ ನಡೆಯಿತು.ಅಂತಿಮವಾಗಿ ಮುಂಗಲಿಯು ಹಾವನ್ನು ಕೊಂದಿತು! ಮುಂಗಲಿಯ ಮುಖ ರಕ್ತಮಯವಾಯಿತು! ನಿಟ್ಟುಸಿರು ಬಿಟ್ಟ ಮುಂಗಲಿಯು ಹೆಮ್ಮೆ ಪಟ್ಟಿತು! ಮನೆಯೊಡತಿ ತನ್ನ ಶೌರ್ಯವನ್ನು ತಿಳಿದು ಖುಷಿಪಟ್ಟು ತನ್ನ ಮೈಸವರುವಳೆಂದು ಭಾವಿಸಿ ವೀರೋಚಿತ ಭಂಗಿಯಲ್ಲಿ ಮುಂಗಲಿಯು ಮನೆಬಾಗಿಲಲ್ಲಿ ಮನೆಯೊಡತಿಗಾಗಿ ಕಾದು ಕುಳಿತಿತು! ಮನೆಯೊಡತಿ ಬರುತ್ತಲೇ ಮುಂಗಲಿಯ ರಕ್ತಮಯ ಮುಖನೋಡಿ ಚೀರಿಕೊಂಡಳು! ಮುಂಗಲಿಯೇ ಮಗುವನ್ನು ಕೊಂದಿದೆ ಎಂದು ಭಾವಿಸಿದಳು! ತುಂಬಿದ ಬಿಂದಿಗೆಯನ್ನು ಮುಂಗಲಿಯ ಬೆನ್ನ ಮೇಲೆ ಎಸೆದಳು! ಮುಂಗಲಿ ಸತ್ತಿತು! ಒಳಗೆ ಹೋಗಿ ನೋಡಲು, ಮಗು ನಗು ನಗುತ ಆಡುತ್ತಿತ್ತು! ಸಿಟ್ಟಿನಲಿ ಕೊಂದ ಮುಂಗಲಿಯನ್ನು ಮತ್ತೆ ಬದುಕಿಸಲಾದೀತೇ? ಆದ್ದರಿಂದಲೇ ದಿಢೀರ್ ತೀರ್ಮಾನ ಸರಿಯಲ್ಲ.
ಯಾರೋ ಏನೋ ಹೇಳಿದರೆಂದು ಯಥಾವತ್ತಾಗಿ ಒಪ್ಪಬೇಕಿಲ್ಲ. ಎತ್ತು ಕರು ಹಾಕಿತು ಎಂದೊಡನೆ ಕರುವನ್ನು ಕೊಟ್ಟಿಗೆಗೆ ಕಟ್ಟು ಎಂದು ಹೇಳಬೇಕಿಲ್ಲ. ಹಸು ಕರು ಹಾಕುವುದು ನಿಜ,ಆದರೆ ಎತ್ತು ಎಂದಾದರೂ ಕರು ಹಾಕಲು ಸಾಧ್ಯವೇ? ಎಂದು ಯೋಚಿಸಬೇಕಲ್ಲವೇ? ಮರದಲ್ಲಿ ಬ್ರಹ್ಮರಾಕ್ಷಸ ಇದೆ ಎಂದು ಹೇಳಿದ ಮಾತ್ರಕ್ಕೆ ಹೆದರಿ ಓಡುವುದೇ? ಅದು ಯಾರಿಗಾದರೂ ಎಂದಾದರೂ ಕಂಡಿರುವುದುಂಟೇ? ಇದ್ದದ್ದೇ ನಿಜವಾದಲ್ಲಿ, ಇದುವರೆಗೂ ಏನೂ ಮಾಡದ ಅದು, ಇವರು ಹಾಗೆ ಹೇಳಿದ ನಂತರವೇ ಅಪಾಯವನ್ನು ಮಾಡುತ್ತದೆ ಎಂದರೆ ಏನರ್ಥ? ಎಂದು ಆಲೋಚಿಸಬೇಕು. ಹಾವನ್ನು ಕಂಡೊಡನೆಯೇ ನೀವು ಭಯಪಡಬೇಕಿರಲಿಲ್ಲ. ನಂಬಿಗೆಸ್ಥನಾದ ನಾನು ಕೂಗಿ ಹೇಳಿದರೂ ನಂಬದಾದಿರಿ, ಓಡಿ ಹೋದಿರಿ. ಇದ್ದಕ್ಕಿದ್ದಂತೆ ಭಯಪಡುವುದು ಆರೋಗ್ಯಲಕ್ಷಣವಲ್ಲ.ದಿಢೀರ್ ಸಂತಸಪಟ್ಟು ಸತ್ತವರುಂಟು,ದಿಢೀರ್ ಭಯಪಟ್ಟೂ ಸತ್ತವರುಂಟು! ಬದುಕಿನಲ್ಲಿ ಹೆಚ್ಚಿನದನ್ನು ಸಾಧಿಸಲು, ಸರಿಯಾದ ಬಾಳನ್ನು ನಡೆಸಲು, ಧೈರ್ಯವಾಗಿರುವುದನ್ನು ರೂಢಿಸಿಕೊಳ್ಳಬೇಕು. ಅದಕ್ಕೇ ಹಿಂದಿನವರು ಹೇಳದ್ದು:
“ಧೈರ್ಯಂ ಸರ್ವತ್ರ ಸಾಧನಂ = ಎಲ್ಲಕಡೆಗೂ ಧೈರ್ಯವೇ ಕೆಸಲವನ್ನು ಈಡೇರಿಸುತ್ತದೆ ” ಎಂದು.
ಮುಂದುವರೆದು ಹೇಳುವುದಾದರೆ ಸಕಲ ಜೀವರಾಶಿಗಳಲ್ಲಿ ಚರಾಚರ ವಸ್ತುಗಳಲ್ಲಿ ಹುದುಗಿರುವವನು ಪರಮಾತ್ಮನೇ ಆಗಿರುವುದರಿಂದ, ಯಾರಿಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಗುರೂಪದೇಶದಿಂದ ಅಂತರ್ದೃಷ್ಟಿ ತೆರೆದುಕೊಂಡಾಗ ಭಯವು ಅಣುಮಾತ್ರವೂ ಇರುವುದಿಲ್ಲ- ಎಂದು. ಸಿದ್ಧನ ಈ ಮಾತನ್ನು ಕೇಳಿ ಹುಡುಗರು ತಲೆದೂಗಿದರು. ಎಲ್ಲರೂ ಮನೆಯತ್ತ ಸಾಗಿದರು. ಸದ್ಗುರು ಶ್ರೀ ಸಿದ್ಧಾರೂಢರ ಉಪದೇಶದಂತೆ ನಾವು ಧೈರ್ಯಶಾಲಿಗಳಾಗಿ, ವಿಚಾರವಂತರಾಗಿ ಬಾಳೋಣ!