ಪಾದರಕ್ಷಾಯಣ

Share

ಪಾದರಕ್ಷಾಯಣ

ಆಂದು ನಾನು ಮತ್ತು ಸಹ ಶಿಕ್ಷಕಿ ಇಬ್ಬರೂ ಕೂಡಿ ಚಪ್ಪಲಿ ಅಂಗಡಿಗೆ ಹೋದೆವು. ಚಪ್ಪಲಿ ಅವಶ್ಯಕತೆ ನನಗೆ ಸಧ್ಯಕ್ಕೆ ಇರಲಿಲ್ಳ. ಗೆಳತಿಗೆ ಸುಂದರವಾದ ಮತ್ತು ಕೈಗೆಟುಕುವ ಬೆಲೆಗೆ ಚಂದದ ವಿನ್ಯಾಸದ ಚಪ್ಪಲಿ ಸಿಕ್ಕಿತು. ನನಗೂ ಅಂತದ್ದೇ ತೆಗೆದುಕೊಳ್ಳುವ ಮನಸ್ಸಾಯಿತು. ಅಂಗಡಿಯವರನ್ನು ಕೇಳಿದೆ. ಅವರು ಪಾಪ ಹುಡುಕಿ ಹುಡುಕಿ ಸುಸ್ತಾದರು. ನನ್ನ ಅಳತೆಯ ಚಪ್ಪಲಿ ಸಿಗಲಿಲ್ಲ. ನನಗೆ ನಿರಾಶೆಯಾಯಿತು. ಅದನ್ನು ಕಂಡು “ಮೇಡಂ ಏನೂ ಚಿಂತೆ ಮಾಡಬೇಡಿ ಬುಧವಾರದ ನಂತರ ಕರೆ ಮಾಡಿ ತಂದಿಟ್ಟಿರುತ್ತೇನೆ ಬಂದು ತಗೊಂಡು ಹೋಗಿ ಎಂದು ಭರವಸೆ ಕೊಟ್ಟರು. ತುಂಬಾ ಖುಷಿಯಾಯಿತು.

ಐದು ದಿನಗಳ ನಂತರ ಕರೆ ಮಾಡಿದೆ. “ತಂದಿಲ್ಲ ಮೇಡಮ್ ಶನಿವಾರ ಬರುತ್ತದೆ. ನೀವು ಶಾಲೆಗೆ ಬಂದಾಗ ಸೋಮವಾರ ಕರೆ ಮಾಡಿ”ಎಂಬ ಉತ್ತರ ಕೇಳಿ ಬೇಸರವಾದರೂ ಸುಮ್ಮನೆ ತಲೆ ಆಡಿಸಿದೆ. ಸೋಮವಾರ ಬಂತು. ಕೆಲಸದ ಮಧ್ಯೆ ಚಪ್ಪಲಿ ನೆನಪಾಯಿತು. ಖುಷಿಯಿಂದ ಕರೆ ಮಾಡಿದರೆ “ಮುಂದಿನ ಸೋಮವಾರ” ಎಂದರು. ಮನಸ್ಸನ್ನು ಸಮಾಧಾನ ಮಾಡಿಕೊಂಡು ಸುಮ್ಮನೆ ಬಂದೆ. ದಿನಗಳು ಕಳೆದು ಹೋದವು. ಕೊನೆಗೆ ಸೋಮವಾರ ಬಂತು. ನೋಡೋಣ ಎಂದು ಕರೆ ಮಾಡಿದೆ. ಅಂಗಡಿಯವರು ಕರೆ ಸ್ವೀಕರಿಸಿ ಯಾರೆಡೆಯೋ ಮಾತನಾಡುತ್ತಿದ್ದರು ನಾನು ಹಲೋ ಹಲೋ ಎಂದು ಎರಡು ಮೂರು ಸಾರಿ ಕರೆದೆ. ಸಿಟ್ಟು ಬಂದಿತ್ತು. ಫೋನ್ ತುಂಡರಿಸಬೇಕೆನ್ನುವಷ್ಟರಲ್ಲಿ… “ಆ.. ಮೇಡಮ್ ಬನ್ನಿ ಚಪ್ಪಲಿ ಬಂದಿದೆ”ಎಂದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂಜೆ ಅಂಗಡಿಗೆ ಹೋಗಿ ತೆಗೆದುಕೊಂಡು ಬಂದೆ. ಬಯಸಿದ್ದ ಚಪ್ಪಲಿ ಪಡೆದ ಖುಷಿಯಲ್ಲಿ ಹಿಗ್ಗಿದ್ದೆ.

ಅಂದು ತಂಗಿಗೆ ಆರಾಮಿಲ್ಲೆಂದು ತಿಳಿದು ವೈಟ್ ಫೀಲ್ಡ್ ಗೆ ಹೊರಟೆ. ಹೊರಡುವಾಗ ಹೊಸದಾಗಿ ಕೊಂಡುತಂದಿದ್ದ ಚಪ್ಪಲಿ ನೆನಪಾಗಿ ಅದನ್ನೇ ಹಾಕಿಕೊಂಡು ಹೊರಟೆ. ಬಸ್ ಸ್ಟಾಪಿಗೆ ಬಂದು ಬಸ್ ಹಿಡಿದು ಕುಳಿತೆ. ಟಿಕೆಟ್ ನಂತರ ನೀಟಾದ ಭಂಗಿಯಲ್ಲಿ ಕುಳಿತುಕೊಳ್ಳುವಾಗ ಕಾಲಿನಲ್ಲಿ ಹಾಕಿಕೊಂಡ ಚಪ್ಪಲಿ ಕಾಣಿಸಿತು. ಇಷ್ಟವಾದ ಚಪ್ಪಲಿಯಿಂದಾಗಿ ನನ್ನ ಕಾಲಿನ ಚಂದ ಹೆಚ್ಚಾದಂತೆನಿಸಿತು. ತಂಗಿ ಮನೆಗೆ ಹೋಗಿ ಅವರ ಆರೋಗ್ಯ ಮತ್ತು ಮನೆಯಲ್ಲಿರುವವರ ಯೋಗಕ್ಷೇಮ ವಿಚಾರ ಮಾತುಕತೆಯಾಯಿತು. ಸಂಜೆ ಮನೆಗೆ ಬಂದ ತಂಗಿ ಮಗಳು ಆಚೆಯಿಂದಲೇ “ದೊಡ್ಡಮ್ಮ..ಯಾವಾಗ ಬಂದಿರಿ? ನಿಮ್ಮದಾ ಹೊಸ ಚಪ್ಪಲಿ ? ಎಂದಳು. ನಾನು ಮನದಲ್ಲೇ “ಬಂತಲ್ಲ ಗ್ರಹಚಾರ” ಅಂದುಕೊಂಡೆ. ಕಾರಣ ಅವಳು ನಮ್ಮ ಮನೆಗೆ ಬರಲಿ ಅಥವಾ ನಾನು ಅವರ ಮನೆಗೇ ಹೋಗಲಿ ಏನು ಚಂದವಿರುತ್ತದೋ ಅದನ್ನು “ನನಗೆ ಕೊಡಿ ದೊಡ್ಡಮ್ಮ” ಅಂತಾಳೆ . ಈಗ ಅವಳೂ ಪ್ರೌಢಶಾಲೆಗೆ ಬಂದಿರುವುದರಿಂದ ಬೆಳೆದಿದ್ದಾಳೆ ಹೆಚ್ಚು ಕಡಿಮೆ ನನ್ನ ಅಳತೆಯದೇ ಕಾಲುಗಳಾಗಿವೆ. ಮಗಳ ಮಾತಿಗೆ ನನ್ನ ತಂಗಿಯೂ ಚಪ್ಪಲಿ ನೋಡಿ ಚೆನ್ನಾಗಿವೆ ಕಣೇ’ ಎಂದಳು. ನಾನು ಅವಳು ಕೊಟ್ಟ ಟೀ ಕುಡಿಯುತ್ತಾ “ಚಪ್ಪಲಿ ಕೊಂಡ ಕತೆ.. ಅದಕ್ಕಾಗಿ ಅಂಗಡಿ ಸುತ್ತಿದ ಪುರಾಣದ ವಿಷಯ” ಹೇಳಿದೆ. ಅದನ್ನೆಲ್ಲ ಕೇಳಿ “ಓಹೋ ಸರಿ ಬಿಡಮ್ಮ” ಎಂದಳು.

ರಾತ್ರಿ ಊಟದ ನಂತರ ತಂಗಿ ಮಗಳು ತೇಜು ವಾಕ್ ಮಾಡಲು ನನ್ನ ಹೊಸ ಚಪ್ಪಲಿ ಹಾಕಿಕೊಂಡಿದ್ದು ಕಂಡು ಹುಸಿಮುನಿಸು ತೋರಿದೆ. “ನನ್ನ ಸಪ್ತಸಾಗರದಾಚೆಯಿಂದ ತಂದ ಚಪ್ಪಲಿಯನ್ನು ವಾಕಿಂಗ್ ಗೆ ಯೂಸ್ ಮಾಡುವೆಯಾ?” ಎಂದೆ. ಎಲ್ಲರೂ ನಕ್ಕು “ಓಹೋ ಬಿಡೇ ಸೀಮೇಯಲಿಲ್ಲದ ಚಪ್ಪಲಿ” ಎಂದು ತಮಾಷೆ ಮಾಡಿದರು.

ಬೆಳಗ್ಗೆ ನಾನು ಬೇಗ ಊರಿಗೆ ಹೋಗಬೇಕು ಎಂದು ಎದ್ದು ಸ್ನಾನ ಮುಗಿಸಿ ರೆಡಿ ಆದೆನು. ಹೊರಟು ಹೊರಗೆ ಬಂದು ನನ್ನ ಚಪ್ಪಲಿಗಾಗಿ ಹುಡುಕಿದೆ. ತೇಜುಳನ್ನು ಕರೆದು ರಾತ್ರಿ ವಾಕ್ ಮಾಡಿ ಎಲ್ಲಿ ಬಿಟ್ಟೆ? ಎಂದೆ. ಅವಳು ಒಳಗಿನಿಂದ “ಅಲ್ಲೇ ಬಿಟ್ಟಿದ್ದೆ ನೋಡಿ ದೊಡ್ಡಮ್ಮ” ಎಂದಳು. ಹುಡುಕಾಡಿದೆ ಹುಹ್ಞೂಮ್ ನನ್ನ ಚಪ್ಪಲಿ ಸಿಗಲಿಲ್ಲ. ಒಳಗೊಳಗೆ ನಿರಾಶೆ ಹುಟ್ಟುತ್ತಿತ್ತು. “ಮಾಲತಿ ನನ್ನ ಚಪ್ಪಲಿ ಎಲ್ಲೇ”? ಎಂದು ಜೋರಾಗಿ ಕೇಳಿದೆ. ಬಹುಶಃ ನನ್ನ ಧ್ವನಿ ಕಿರುಚಿದಂತೆ ಕೇಳಿಸಿತೋ ಏನೋ ಮನೆಯ ಎಲ್ಲರೂ ಆಚೆ ಬಂದು ಇಣುಕಿದರು. ಎಲ್ಲರೂ ಸೇರಿ ಹುಡುಕಿದರೂ ಸಿಗಲಿಲ್ಲ. ಚಿಕ್ಕ ಮಗುವಿನಂತೆ ಅಳು ಬಂದು ಅತ್ತು ಬಿಟ್ಟೆ. ಪಾಪಾ ತೇಜೂ ಸಹ ಅತ್ತುಕೊಂಡಳು.

ನಂತರ ತಂಗಿಯೊಡನೆ ಚಪ್ಪಲಿ ಅಂಗಡಿಗೆ ಹೋದೆನು. ಯಾವ ಚಪ್ಪಲಿ ನೋಡಿದರೂ ಅದೇ ಚಪ್ಪಲಿ ನೆನಪಾಗುತ್ತಿತ್ತು. ಹುಡುಕಿ ಹುಡುಕಿ ಸುಸ್ತಾದೆವು . ಕಡೆಗೆ ತಂಗಿ ಒಂದು ಚಪ್ಪಲಿ ತೋರಿಸಿ ನೋಡು ಇದು ಚೆನ್ನಾಗಿದೆ ಎಂದಳು. ಆಕಡೆ ನೋಡಿದೆ. ತುಂಬಾ ಚೆನ್ನಾಗಿದ್ದವು. ದೇವರು ಒಂದು ಕಿತ್ತುಕೊಂಡರೆ ಅದಕ್ಕಿಂತ ಇನ್ನೊಂದು ಒಳ್ಳೆಯದು ಕೊಡುತ್ತಾನೆಂದು ಹೇಳಿಕೊಳ್ಳುವುದು ಕೇಳಿದ್ದೆ. ಆದರೆ ಈಗ ಅದು ನಿಜವೆನಿಸಿ ಚಪ್ಪಲಿ ಖರೀದಿಸಿದೆ.
ಇದಾದ ಹದಿನೈದು ದಿನಕ್ಕೆ ಎರಡು ದಿನದ “ಶಿಕ್ಷಕರ ಕಾರ್ಯಾಗಾರಕ್ಕೆ” ಹೋಗಿದ್ದೆ. ಅದು ಆಶ್ರಮದ ಕಾರ್ಯಾಕ್ರಮ ವೇದಿಕೆಯ ಕೊಠಡಿಯಾದ್ದರಿಂದ ಎಲ್ಲ ಶಿಬಿರಾರ್ಥಿಗಳೂ ಚಪ್ಪಲಿ ಆಚೆ ಬಿಡಬೇಕಾಗಿತ್ತು. ನಾನು ಮನಸ್ಸಿಲ್ಲದ ಮನಸಿನಿಂದ ಚಪ್ಪಲಿ ಬಿಟ್ಟು ಒಳಗೆ ಹೋದೆ. ಒಳಗೆ ಹೋಗಿ ಉಪನ್ಯಾಸ ಕೇಳುತ್ತಿದ್ದರೂ ಆಗಾಗ ನನ್ನ ಚಪ್ಪಲಿಯ ಬಗ್ಗೆ ಗಮನ ಓಡುತ್ತಿತ್ತು. ಮಧ್ಯಾಹ್ನ ಊಟದ ವಿರಾಮಕ್ಕೆ ಬಿಟ್ಟರು ನಾನು ಬೇಗ ಹೋಗಿ ಚಪ್ಪಲಿ ನೋಡಿದೆ ಪುಣ್ಯಕ್ಕೆ ಇತ್ತು ನೋಡಿ ಸಮಾಧಾನವಾಯಿತು. ಊಟದ ನಂತರ ನಂಬಿಕೆ ಬಂದಿತ್ತು. ತರಗತಿಯಲ್ಲಿ ವಿಷಯ ಮಂಡನೆಯನ್ನು ಆಸಕ್ತಿಯಿಂದ ಆಲಿಸಿದೆ.

ಸಂಜೆ ತರಗತಿಯ ನಂತರ ಗೆಳತಿಯರೊಡನೆ ಮಾತನಾಡಿ ಆಚೆ ಬರಲು ತಡವಾಯಿತು. ನಂತರ ಎಲ್ಲರೂ ಹೊರಬಂದು ಚಪ್ಪಲಿ ಬಿಟ್ಟ ಜಾಗಕ್ಕೆ ಬಂದೆವು. ಎಲ್ಲರೂ ತಮ್ಮ ತಮ್ಮ ಚಪ್ಪಲಿ ಮೆಟ್ಟಿಕೊಂಡು ಹೊರಡಲನುವಾದರು. ಆದರೆ….. ಜೀವವೇ ಹೋದ ಅನುಭವ. “ನನ್ನ ಚಪ್ಪಲಿ ಇರಲಿಲ್ಲ” !! ಈ ಸಾರಿ ಅಳಲಿಲ್ಲ ಗಟ್ಟಿಯಾದೆ. “ಬದುಕು ಮಾಯೆಯ ಮಾಟ” ಭಾವಗೀತೆ ನೆನಪಾಯಿತು. ವಿಷಾದದಿಂದ ತುಟಿಯಲ್ಲೊಂದು ಮುಗುಳು ನಗು ಹಾದು ಹೋಯಿತು. ಚಪ್ಪಲಿ ಇರದಿದ್ದ ಕಾರಣ ಕಿರಿಯ ಗೆಳೆಯ ಚಲಪತಿ ಮನೆಯ ತನಕ ಬೈಕಿನಲ್ಲಿ ಬಿಟ್ಟು ಹೋದ.

Girl in a jacket
error: Content is protected !!