ನಿವೃತ್ತರಾಗಿಬಿಡಬೇಕಿತ್ತು ಜವಾಹರಲಾಲ ನೆಹರೂ
ತಾಯಿ ಭಾರತಿಯ ಹೆಮ್ಮೆಯ ಪುತ್ರ ರತ್ನವೆಂದು ನರೇಂದ್ರ ಮೋದಿಯವರನ್ನೂ, ಜವಾಹರಲಾಲ್ ನೆಹರೂ ಎಂದರೆ ಯಾರದು ಎಂದು ಕೇಳುವಂತಹ ಭವಿತವ್ಯವನ್ನೂ ಜೊತೆ ಜತೆಗೆ ರೂಪಿಸುವ ಘನ ಪ್ರಯತ್ನ ದೇಶದಲ್ಲಿ ಹಗಲಿರುಳು ಜರುಗಿದೆ.
ಅವರ ತಪ್ಪುತಡೆಗಳನ್ನಷ್ಟೇ ಎತ್ತಿ ಭೂತಗಾಜಿನಡಿ ಇರಿಸಿ ತೋರಲಾಗುತ್ತಿದೆ. ತಪ್ಪುಗಳ ಮಾಡದಿರುವ ನಾಯಕನಿದ್ದಾನೆಯೇ? ಅವರು ಮಾಡಿದ ದೊಡ್ಡ ತಪ್ಪುಗಳ ಪೈಕಿ ದೀರ್ಘಕಾಲ ಅಧಿಕಾರಕ್ಕೆ ಅಂಟಿಕೊಂಡದ್ದೂ ಒಂದು.
ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಕಾಂಗ್ರೆಸ್ ಸಮಾಜವಾದೀ ಹಾದಿಯಲ್ಲಿ ನಡೆಯಬೇಕಿದೆ ಎಂಬ ಮಾತನ್ನು ನೆಹರೂ 1930ರಲ್ಲೇ ಹೇಳಿದ್ದರು. ಇವರ ವಿಚಾರಗಳ ಕುರಿತು ಹಿಂದೂ ಬಲಪಂಥದ ವಿರೋಧವಿತ್ತು. ಹಿಂದೂ ಬಲಪಂಥವನ್ನು ‘ಕೋಮುವಾದಿ, ಪ್ರಗತಿಗಾಮಿ ದೇಶವಿರೋಧಿ’ ಎಂದು ನೆಹರೂ ಜರೆಯುತ್ತಿದ್ದರು. ಮುಸ್ಲಿಮ್ ಲೀಗ್ ಮತ್ತು ಮುಸ್ಲಿಮ್ ಆಲ್ ಪಾರ್ಟೀಸ್ ಕಾನ್ಫರೆನ್ಸ್ ಪಕ್ಷಗಳನ್ನು ನೆಹರೂ ತೀವ್ರವಾಗಿ ಟೀಕಿಸುತ್ತಿದ್ದರು. ಆದರೂ ಮುಸ್ಲಿಮ್ ಮೂಲಭೂತವಾದಿಗಳು ಮತ್ತು ಪ್ರತ್ಯೇಕವಾದಿಗಳ ಕುರಿತು ಮೆದು ಧೋರಣೆ ಹೊಂದಿರುವರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗಿತ್ತು.
1964ರ ಮೇ 27ರಂದು ಅಧಿಕಾರದಲ್ಲಿದ್ದಾಗಲೇ ನಿಧನರಾಗುತ್ತಾರೆ. ಆದರೆ ಅಂದಿಗೆ ಆರು ವರ್ಷಗಳ ಮುನ್ನ 1958ರಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಜಿಸಲು ಮುಂದಾಗಿರುತ್ತಾರೆ. ಅದೇ ನಿರ್ಧಾರಕ್ಕೆ ಅಂಟಿಕೊಂಡಿದ್ದರೆ ಹಲವು ಅಪನಿಂದೆಗಳಿಂದ ಅವರು ಪಾರಾಗಬಹುದಿತ್ತು.
ನೆಹರೂ ಚಾಚಿದ್ದ ಪಂಚಶೀಲ ತತ್ವದ ಸ್ನೇಹ ಹಸ್ತವನ್ನು ತಿರುಚಿ 1962ರಲ್ಲಿ ದಂಡೆತ್ತಿ ಬಂದು ಹೇರಿದ ಪರಾಭವದ ಅವಹೇಳನ ಭಾರತ ಸುಲಭವಾಗಿ ಮರೆಯುವಂತಹುದಲ್ಲ ಈ ಸೋಲು ನೆಹರೂ ಅವರನ್ನು ಪ್ರಕ್ಷುಬ್ಧಗೊಳಿಸಿತ್ತು. ಆರೋಗ್ಯವನ್ನೂ ಬಾಧಿಸಿತ್ತು. ಎರಡೇ ವರ್ಷಗಳಲ್ಲಿ ಸಾವಿಗೂ ನೂಕಿತು ಎನ್ನುತ್ತಾರೆ ಇತಿಹಾಸಕಾರರು.
ದಣಿವು ಮತ್ತು ನೀರಸ ತಮ್ಮನ್ನು ಆವರಿಸಿವೆಯೆಂದು ದೂರುವ ನೆಹರೂ ಪ್ರಧಾನಿ ಪದವಿಯನ್ನು ತೊರೆಯಬಯಸುತ್ತಾರೆ ಅದು 1958ರ ವರ್ಷ. ಆ ಹೊತ್ತಿಗೆ ಪ್ರಧಾನಿ ಹುದ್ದೆಯನ್ನೇರಿ ಹನ್ನೆರಡು ವರ್ಷಗಳು ಸಂದಿರುತ್ತವೆ. ಅವರಿಗೆ ಸರಿಸಮನಾಗಿ ದೇಶದ ಏಕತೆ ಸಮಗ್ರತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ನಿಧನರಾಗಿ ಏಳು ವರ್ಷಗಳು ಉರುಳಿರುತ್ತವೆ. 1920ರಿಂದ ಅವಿರತ ಸ್ವಾತಂತ್ರ್ಯ ಹೋರಾಟ. ಆನಂತರ ಹಲವು ಸಮಸ್ಯೆಗಳು ಮುತ್ತಿದ್ದ ದೇಶವನ್ನು ಮುನ್ನಡೆಸುವ ಜಂಜಾಟದಲ್ಲಿ ಅವರು ಹೈರಾಣಾಗಿರುತ್ತಾರೆ.
1958ರ ಏಪ್ರಿಲ್ 29. ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ರಾಜೀನಾಮೆ ಸಲ್ಲಿಸುವ ಇರಾದೆಯನ್ನು ಔಪಚಾರಿಕವಾಗಿ ಪ್ರಕಟಿಸುತ್ತಾರೆ. ಲಿಖಿತ ಹೇಳಿಕೆಯೊಂದನ್ನು ಓದುತ್ತಾರೆ. ತಮ್ಮ ನಿರ್ಧಾರ ಅವಸರದ್ದಲ್ಲವೆಂದೂ, ಈ ಕುರಿತು ರಾಷ್ಟ್ರಪತಿಯವರಿಗೆ ಈಗಾಗಲೆ ಬರೆದಿರುವುದಾಗಿಯೂ, ಇದೀಗ ಪಕ್ಷದ ವೇದಿಕೆಯಲ್ಲಿ ಮನವಿ ಮಾಡುತ್ತಿರುವುದಾಗಿಯೂ ಹೇಳುತ್ತಾರೆ. ಕೆಲ ಕಾಲ ಸಭೆಯನ್ನು ಗಾಢ ಮೌನ ಕವಿದು ಆವರಿಸುತ್ತದೆ. ನಂತರ ಅವರ ಹೇಳಿಕೆಗೆ ಅಸಮ್ಮತಿ ಸೂಚಿಸುತ್ತದೆ.
ಲಾಲ್ ಬಹಾದೂರ್ ಶಾಸ್ತ್ರಿಯವರು ಕರೆಯುವ ಪಕ್ಷದ ತುರ್ತುಸಭೆಯು ಒಂದೇ ಒಂದು ದಿನದ ಮಟ್ಟಿಗಾದರೂ ನೆಹರೂ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದು ಸಾರುತ್ತದೆ. ಸಂಸದ್ ಭವನದ ಪ್ರಧಾನಿ ಕಚೇರಿಯ ಮುಂದೆ ಸರದಿಯ ಸಾಲು ಹಚ್ಚಿ ನಿಲ್ಲುವ ಕಾಂಗ್ರೆಸ್ ಸಂಸದರು ಪ್ರಧಾನಿ ಹುದ್ದೆ ತೊರೆಯಬಾರದೆಂದು ನೆಹರೂ ಅವರನ್ನು ಬೇಡಿಕೊಳ್ಳುತ್ತಾರೆ. ಅಮೆರಿಕೆ ಮತ್ತು ಸೋವಿಯತ್ ಒಕ್ಕೂಟ ಸೇರಿದಂತೆ ಅನೇಕ ದೇಶಗಳ ನಾಯಕರು ರಾಜೀನಾಮೆ ಸಲ್ಲದೆಂದು ಪತ್ರಗಳನ್ನು ಬರೆಯುತ್ತಾರೆ.
ಒತ್ತಡಕ್ಕೆ ಮಣಿಯುತ್ತಾರೆ ನೆಹರೂ. ದೀರ್ಘ ರಜೆ ಹಾಕಿ ಮನಾಲಿ ವಿಶ್ರಾಂತಿ ಧಾಮಕ್ಕೆ ತೆರಳುವ ಒಡಂಬಡಿಕೆ ಏರ್ಪಡುತ್ತದೆ.
ಮಗಳು ಇಂದಿರಾ ತಂದೆಯ ರಾಜೀನಾಮೆ ನಿರ್ಧಾರವನ್ನು ಬಲವಾಗಿ ಬೆಂಬಲಿಸಿರುತ್ತಾರೆ. 1958ರ ಮೇ 1ರಂದು ಪುಟ್ಟ ಪತ್ರವನ್ನು ತಂದೆಗೆ ಬರೆದಿರುತ್ತಾರೆ. ಪತ್ರದ ಅಜಮಾಸು ಒಕ್ಕಣೆ ಹೀಗಿರುತ್ತದೆ-
‘ಒಮ್ಮೆ ರಾಜೀನಾಮೆಯ ಆಲೋಚನೆ ಬಂದ ನಂತರ ಪುನಃ ಯಥಾಸ್ಥಿತಿಗೆ ಮರಳುವುದು ಸರಿಯಲ್ಲ. ನಮ್ಮ ರಾಜಕಾರಣದಲ್ಲಿ ಬಹಳಷ್ಟು ಕೊಳೆತು ಹೋಗಿದೆ. ಎಲ್ಲರೂ ತಮ್ಮ ತಮ್ಮ ಆಸೆಬುರುಕ ಕಣ್ಣುಗಳಿಂದ ನೋಡುತ್ತಾರೆಯೇ ವಿನಾ ಮಹಾನತೆಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರಧಾನಿ ಹುದ್ದೆಯನ್ನು ತೊರೆಯುವ ಉದ್ದೇಶವೇ ತಮಗೆ ಇರಲಿಲ್ಲವೆಂದೂ, ಸುಳ್ಳು ಹೇಳುತ್ತಿದ್ದಿರೆಂದೂ ಬಗೆಯುತ್ತಾರೆ. ಹೊಣೆಗಾರಿಕೆಯನ್ನು ಅವರೇ ನಿಭಾಯಿಸಲು ಬಿಡಿ, ಇಲ್ಲವಾದರೆ ಕೊಳಕುತನದಿಂದ ನಿಮ್ಮನ್ನೂ ಕೆಳಕ್ಕೆಳೆದು ಕೆಡವುವರು. ನೀವು ಕನಿಷ್ಠ ಪಕ್ಷ (ಸರ್ಕಾರದಿಂದ) ಹೊರಗಿದ್ದರೆ ಎಲ್ಲ ತಪ್ಪು ತಡೆಗಳಿಗೂ ನೀವೇ ಹೊಣೆಗಾರರಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆಯಾಗುತ್ತದೆ…ಹೇಳಬೇಕಾದದ್
ಭಾರತ ಉಸಿರಾಡಿರುವುದು ತನ್ನ ಹಳ್ಳಿಗಳಲ್ಲಿ ಎಂಬ ಗಾಂಧೀಜಿ ಮಾತನ್ನು ನೆಹರೂ ಗಂಭೀರವಾಗಿ ಪರಿಗಣಿಸಿದ್ದರು. ಭಾಕ್ರಾನಂಗಲ್, ಹಿರಾಕುಡ್, ನಾಗಾರ್ಜುನಸಾಗರದಂತಹ ಭಾರೀ ಜಲಾಶಯಗಳನ್ನು ನಿರ್ಮಿಸಿ ವ್ಯವಸಾಯಕ್ಕೆ ಉಸಿರು ತುಂಬಿದರು. ಭಾರೀ ಕೈಗಾರಿಕೆಗಳ ಸ್ಥಾಪಿಸಿದರು. ವಿಶ್ವವಿದ್ಯಾಲಯಗಳು, ಐಐಟಿ, ಐಐಎಂ ಗಳು ಮಾತ್ರವಲ್ಲದೆ ಶಾಲಾಶಿಕ್ಷಣದ ಗಟ್ಟಿ ತಳಪಾಯ ಹಾಕಿದರು. ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸ್ಥಾಪಿಸಿದರು. ಜನಮಾನಸದಲ್ಲಿ ವೈಜ್ಞಾನಿಕ ಮನೋಭಾವ ರೂಢಿಸಲು ಶ್ರಮಿಸಿದರು. ವಿಜ್ಞಾನ-ತಂತ್ರಜ್ಞಾನದ ನೆರವಿನೊಂದಿಗೆ ಆಧುನಿಕ ದೇಶವೊಂದನ್ನು ಕಟ್ಟಲು ಮುಂದಾದರು. ಬಾಹ್ಯಾಕಾಶ ಸಂಶೋಧನೆ ಮತ್ತು ಪರಮಾಣು ಯೋಜನೆಗಳಿಗೆ ಓನಾಮ ಹಾಕಿದರು.
ಗ್ರಾಮಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪಂಚಾಯತಿರಾಜ್ಯ ಸಂಸ್ಥೆಗಳನ್ನು ನೆಟ್ಟರು. ದೇಶ ವಿಭಜನೆ, ಗಾಂಧೀ ಹತ್ಯೆಯ ತಳಮಳಗಳಲ್ಲಿ ತಮ್ಮ ಸಮರ್ಥ ಸಂಗಾತಿಗಳ ಸಹಕಾರದೊಂದಿಗೆ ದಿಕ್ಕು ತಪ್ಪದಂತೆ ದೇಶವನ್ನು ಮುನ್ನಡೆಸಿದರು. ಕೋಮುವಾದ ಮತ್ತು ಧಾರ್ಮಿಕ ಧೃವೀಕರಣವನ್ನು ದೂರ ಇರಿಸಿ ಲೋಕಸಭಾ ಚುನಾವಣೆಗಳ ಜರುಗಿಸಿದರು.
‘ಮಹಾನ್ ದೇಶವೊಂದರ ಹೆಮ್ಮೆಯ ನಾಗರಿಕರು ನಾವು. ನಮ್ಮ ಸಂಸ್ಕೃತಿ, ಪರಂಪರೆಗಳು ನಮ್ಮ ಎದೆ ಉಬ್ಬಿಸುತ್ತವೆ. ಆದರೆ ಈ ಹೆಮ್ಮೆ ಹಮ್ಮುಗಳು ನಮ್ಮ ಹಲವು ದೌರ್ಬಲ್ಯಗಳು ವೈಫಲ್ಯಗಳನ್ನು ಮರೆಮಾಚಕೂಡದು. ಅವುಗಳನ್ನು ನಿವಾರಿಸಿಕೊಳ್ಳುವ ನಮ್ಮ ಆಶಯದ ಮೇಲೆ ಪರದೆ ಎಳೆಯಕೂಡದು. ಹಲವು ನಂಬುಗೆಗಳು – ಧರ್ಮಗಳಿರುವ ದೇಶ ನಮ್ಮದು… ಜಾತ್ಯಾತೀಯತೆಯಿರದೇ ಯಾವ ರಾಷ್ಟ್ರೀಯತೆಯನ್ನು ಕಟ್ಟಲು ಸಾಧ್ಯವಿಲ್ಲ’ ಎಂದಿದ್ದರು. ಹೋಗಿ ಬರ್ತೇನಜ್ಜ ಹೋಗಿ ಬರ್ತೇನೆ, ನಿನ್ನ ಪಾದದ ಧೂಳಿ ನನ್ನ ಹಣೆ ಮೇಲಿರಲಿ, ಕಣ್ಣೊಳಗೆ ಮಾತ್ರ ಅದು ಬೀಳದಿರಲಿ ಎಂಬ ಚಂದ್ರಶೇಖರ ಪಾಟೀಲರ ಕವಿತೆಯೊಂದರ ಸಾಲುಗಳು ನೆನಪಿಗೆ ತಂದು ಕೊಡುವ ನಿಲುವಿದು.
ನೆಹರೂ ನಂತರ ಯಾರು ಎಂಬ ಭಾರೀ ಚರ್ಚೆ ದೇಶದ ರಾಜಕೀಯ ವಲಯಗಳನ್ನು ಕಾಡಿದ್ದ ಆ ದಿನಗಳಲ್ಲಿ ನೆಹರೂ ಅವರ ದೀರ್ಘ ಆಡಳಿತದ ಕುರಿತು ಕೆಲ ವರ್ಗಗಳಲ್ಲಿ ದಣಿವು ಕಾಣಿಸಿಕೊಂಡದ್ದೂ ಹೌದು.
ಬಿಜೆಪಿಯ ಪೂರ್ವಾಶ್ರಮ ಪಕ್ಷವಾದ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಲೋಕ ಚುನಾವಣೆಗೆ ಸ್ಪರ್ಧಿಸಿದ್ದ ಕನ್ನಡದ ಪ್ರಮುಖ ಕವಿ ಎಂ.ಗೋಪಾಲಕೃಷ್ಣ ಅಡಿಗ ಅವರು
‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ವ್ಯಂಗ್ಯ ವಿಡಂಬನೆ ತೊಟ್ಟಿಕ್ಕುವ ಕವಿತೆಯೊಂದನ್ನು ಬರೆದದ್ದುಂಟು.
ನೆಹರೂ ನಿವೃತ್ತರಾಗುವುದಿಲ್ಲ
ಇನ್ನೂ ಪರವಾ ಇಲ್ಲ .
ಗಾಳಿಯಂಥಾ ಪ್ರಕಾರ ಬೀಸಲು ಬಹುದು ;
ಮೋಡ ಸೂಸಲು ಬಹುದು ;
ಕೋಳಿ ಕೋಕೋ ಎಂದು ಕುಕಿಲ ಬಹುದು ,
ಕಾಗೆ ಬಂಗಾರವೇ ಆಗಿ ಬಾರಿ ಬಂಗಾರ ,
ಉದ್ದುದ್ದ ಮಾತುಗಳ ಕೊಂಡಿ ಕೊಂಡಿ ನಿಚ್ಚಣಿಕೆತುದಿ
ಅಲಕಾವತಿಖಜಾನೆ ಮೂಸದಿರದು ;
ಹರಿದೀತು ವಾಗ್ರೂಪದಲಿ ಹಾಲಿನ ಹಳ್ಳ
ತುಂಬಿಕೊಳ್ಳುವ ಹಾಗೆ ತಗ್ಗು – ತೆವರು ;
ಬುದ್ಡಿಸಮತೆ ಧಮಾಸು ಕೂಗಿಗೆಲ್ಲ ಸಫಾಯಿ ,
ಆಸೇತು ತುಹಿನಾಚಲ !
ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ
ಯಾವ ಬಂದಳಿಕೆಗೂ ಶಂಕೆ ಬೇಡ !
ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ,
ಇಲ್ಲದ ತ್ರತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ;
ಬೇಸಿಗೆಯ ಗೆರೆತೊರೆಯ ಕನ್ನಡಿ ಜಲದ ಮೇಲೆ
ಮಳೆಗಾಳಿನೆಗಸುಗಳ ನಗುವ ವೀರ .
ಮುಗಿಲನೆಳೆಯುವ ಹೆಜ್ಜೆ ನೆಲಕೆ ಸೋಕಾದಿದ್ದಾರೆ ಸರಿಯೆ ;
ಬಲಿಯ ತಲೆಮುಟ್ಟುವುದೇ ಕಾರಭಾರ .
ಅಳಿವೆ ಬಳಿ ಬುಗುರಿಗಿರಗಿರ ದೋಣಿಗಳ ಮೇಲೆ
ಉದ್ಬಾಹು ನಿಗಚುವವನು ಮುಗಿಲ ಫಲಕೆ
ಅಳಿವೆಯಾಚೆಗೆ ಕಪ್ಪು ಕಡಲೇ ? ಅಸಂಬದ್ದ !
ಎಷ್ಟು ಚೆನ್ನಾಗಿದೆಯೋ ಮುಗಿಲ ಬಣ್ಣ !
ಭರತವಾಕ್ಯಕ್ಕು ಬೆದರನೀತ ಧೀರೋದಾತ್ತ ನಾಯಕ
ತೆರೆಬಿದ್ದರೂ ರಂಗಬಿಡದ ಚಿರ ಯುವಕ
ಹೊತ್ತು ಸುತ್ತುತ್ತಾನೆ ಬಲು ಭಾರೀ ಭೂಗೋಳ,
ಗಂಟೆಗೆಭಟ್ತೆಂಟು ಮೈಲಿ ಸ್ವಗತ
ಪ್ರೇಕ್ಷಕರ ಕಣ್ಣಲ್ಲೇ ಬೆವರೊರೆಸಿ, ನರಳಿ , ನಿಟ್ಟುಸಿರ ತಿದಿಯೊತ್ತಿ
ಹೊರೆಹೊಟ್ತು ನಿಂತ ನಸುನಗುವ ಭಂಗಿ !
ಚಪಾಳೆಗೊಂದೊಂದಪೂರ್ವ ತಾನಿನ ವರಸೆ ;
ಈತನಿಂದಲೇ ರಂಗಭೂಮಿ ಭರ್ತಿ ,
ಇಲ್ಲವಾದರೆ ಮರುಕ್ಷಣ ಕಂಪನಿ ದಿವಾಳಿ ;
ಇಲ್ಲ , ಇಲ್ಲ , ನೆಹರೂ ನಿವೃತ್ತರಾಗುವುದಿಲ್ಲ
ಶೇಕಡಾ ಹತ್ತಕ್ಕೆ ಮೋಸವಿಲ್ಲ !