ದೇವ -ದೇವರ ನಡುವೆ
ಹೌದು ಹಳ್ಳಿ ಅವ್ವನೆಂಬ ಶಕ್ತಿಯ ತವರು.ಅಪ್ಪನೆಂಬ ಬೆವರಿನ ತಾಣ.ಅನೇಕರ ಬಾಲ್ಯದ ತಾಯಿಬೇರುಗಳ ಹಲವು ಕವಲುಗಳ ಈ ಊರ ನೆನಪುಗಳು ಇವತ್ತಿಗೂ ವಿಶಿಷ್ಟ.ಈಗ ಊರುಗಳು ಮೆಲ್ಲಗೆ ತನ್ನ ಹಳ್ಳಿತನ ಕಳಚಿಕೊಂಡು ನಿಧಾನಕ್ಕೆ ನಗರದಂತೆ ಮೇಕಪ್ ಮಾಡಿಕೊಳ್ಳುತ್ತಿವೆ.ಇಲ್ಲಿ ಹಳೆಯ ಧೂಳು ತುಂಬಿದ ಕಾಲುದಾರಿಗಳು ನಾಶವಾಗಿವೆ.ಚರಂಡಿಗಳಲ್ಲದ ಓಣಿಗಳಲ್ಲಿ ಈಗ ಪಂಚಾಯ್ತಿಗಳಿಂದ ಬದಲಾಗಿವೆ.
ತಳವರ್ಗಗಳನ್ನ ಕೇರಿಗಳೆಂದು ದೂರ ವಿಟ್ಟಿದ್ದ ಜನರು ಈಗ ಅವುಗಳ ಪಕ್ಕ ಪಕ್ಕದಲ್ಲೇ ಬಣ್ಣ ಬಣ್ಣದ ರಂಗಿನ ಬೆಡಗಿಯರಂತಹ ಮನೆಗಳನ್ನ ಕಟ್ಟಿಕೊಂಡಿದ್ದಾರೆ.ಕೂಲಿ ಜನರ ಗುಡಿಸಲುಗಳು ಸರ್ಕಾರದ ಕೃಪೆಯಿಂದಾಗಿ ಮಾಳಿಗೆ ಮನೆಗಳಾಗುತ್ತಿವೆ.ಓಣಿ ಓಣಿಗಳಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹುಟ್ಟಿಕೊಂಡು ಕೆಲವೆಡೆಗೆ ಸಿಗಬೇಕಾದ ಬಡವರಿಗೆ ಮನೆ ಭಾಗ್ಯ ನೀಡದೇ ಲಂಚ ಋಷುವತ್ತುಗಳೆಂಬೋ ಕಮಟುವಾಸನೆಗಳು ಅಲ್ಲಲ್ಲಿ ನಾರುತ್ತಿವೆ.ಜನರಿಗೆ ಕುಡಿವ ನೀರು, ವಸತಿ ಸೌಲಭ್ಯ ಸಿಗಲು ಜನರು ಕಳ್ಳ ರಾಜಕಾರಣಿಗಳ ಜೊಲ್ಲು ಭರಿಸಲಾಗದೆ ಅಲ್ಲಲ್ಲಿ ಮೂಕವೇದನೆಗಳನ್ನ ಅನುಭವಿಸುತ್ತಿದ್ದಾರೆ.
ಕುರುಡು ಗಣ್ಣಂತೆ ಕುಕ್ಕರು ಕುಳಿತ ಬಡವರ ಮನೆಗಳು ನೆರಿಕೆ, ತಗಡು,ಹೊದ್ದ ಗೂಡುಗಳಂತೆ,ತಮ್ಮದೇ ವಿಚಿತ್ರವಾದ ರಬ್ಬು ರಬ್ಬಾದ ಬಣ್ಣಗಳಲ್ಲಿ ಮುಖವೊಡ್ಡಿಕೊಂಡ ಆ ಗೋಡೆಗಳು ನಾಚಿ ನೆಲಕ್ಕೆ ಒರಗಿದಂತಿವೆ.ಹಳ್ಳಿಗಳಲ್ಲಿ ನೀರಿನ ಹಪಾ ಹಪಿ ಇನ್ನೂ ನಿಂತಿಲ್ಲ.ಮೊದಲು ಕಿಲೋ ಮೀಟರ್ ಗಟ್ಟಲೆ ಬಾವಿನೀರು ಸೇದಿ ಇರುವೆ ಸಾಲಂತೆ ಬರುತಿದ್ದ ಹರಿಯುತಿದ್ದ ಜಾಗದಲ್ಲಿ ಜನ ಪುಟಾಣಿ ಬಂಡಿಯಂತಹ ಸೈಕಲ್ ಗಾಡಿಯಲ್ಲಿ ಹಲವಾರು ಕೊಡಗಳನ್ನ ಇಟ್ಟುಕೊಂಡು ನೂಕಿಕೊಂಡು ಬರುತ್ತಿದ್ದಾರೆ.
ಅವರ ಮುಖಗಳಲ್ಲಿ ಇನ್ನೂ ಹಳೇ ಹಳ್ಳಿ ಕಳೆ ಮಾಸಿಲ್ಲ.ಮುಖದ ತುಂಬಾ ಕಳೆ ಬೆಳೆದ ಹೊಲದಂತೆ ಕರಿ ಬಿಳಿ ಗಡ್ಡಗಳು.ಸ್ನಾನಕ್ಕೂ ನಮಗೂ ವಾರ,ಹಬ್ಬ,ಜಾತ್ರೆಗಳ ತನಕ ಸಂಬಂಧವಿಲ್ಲ ಎಂಬಂತಹ ಬನೀನ್ ಸೀರೆಗಳ ಕಮಟು ಕೆಂಗು ಗೆಂಪು ಬಣ್ಣ ಹೊತ್ತಿವೆ. ಬಾಚಿರದ ಗಂಡು ಮಕ್ಕಳ ತಲೆಗಳು ಮಾರ್ಡನ್ ಹೇರ್ ಸ್ಟೈಲ್ ಬಂದಿದ್ದೇ ಇವರಿಂದ ಎಂಬಂತೆ ನೆಟ್ಟಗೆ ಸೊಟ್ಟಗೆ ಉದ್ದ ಕೂದಲು ಉದ್ದನೆಯ ಗಡ್ಡ,ಜಡೆ ಬಿಟ್ಟಂತ ತಲೆಗಳು..ಇತ್ಯಾದಿ ಇತ್ಯಾದಿ..
ಥೇಟ್ ಮಂಜುಳಾ ಥರವೇ ಮೆರೆದ ಗಂಡು ಬೀರಿಗಳು, ವಿಭೂತಿ ಹಚ್ಚಿಕೊಂಡು ಆರತಿಯಂತೆ ಕಾಣುತಿದ್ದ ಸತಿ ಸಕ್ಕೂಬಾಯಿಗಳು,ಜಂಯಂತಿಯಂತೆಯೇ ಎಡಕಲ್ಲು ಗುಡ್ಡ ಏರಿದ ಗಮಲು ಮಹಿಳೆಯರೆಲ್ಲಾ ತಮ್ಮ ತಮ್ಮ ಗಂಡಂದಿರ ಪ್ರಿಯಕರರ ಚಿತ್ರಗಳಲ್ಲನ್ನೆಲ್ಲಾ ಎದೆಗಳ ಒಳಗೋಡೆಗೆ ನೇತು ಹಾಕಿ ಬರಿ ಹಣೆಗಳಲ್ಲಿ ಹಬ್ಬ ಮುಗಿದ ಬಯಲಿನಂತೆ ಹಳೆ ಸೀರೆ ಉಟ್ಟು ಕರುಳೇ ಕತ್ತರಿಸುವಂತೆ ನಡೆದು ಬರುತ್ತಾರೆ.
ಕೇರಿಗಳ ಎದುರು ಅಂಬೇಡ್ಕರ್ ಪ್ಲಕ್ಸ ಉದ್ದಕ್ಕೆ ನಿಂತರೂ ಓದುವವರ ಸಂಖ್ಯೆ ಮಾತ್ರ ಹೀನಾತಿ ಹೀನವಾಗಿದೆ. ಕಳೆದ ಐವತ್ತು ವರ್ಷಗಳಿಂದಲೂ ಅಲ್ಲಿನ ಹೊಲಗೇರಿಯಲ್ಲಿ,ವಡ್ಡರ ಕೇರಿಗಳಲ್ಲಿ,ಬೇಡರ ಕೇರಿಗಳಲ್ಲಿ,ಕುರುಬಗೇರಿಗಳಲ್ಲಿ ಅನೇಕ ನೌಕಸ್ತ ಕುಟುಂಬಗಳಿವೆ ಸರ್ಕಾರಿ ನೌಕರರು ಹಬ್ಬ ಹರಿದಿನಗಳಿಗೆ ಮನೆಗಳ ಕಾರ್ಯಕ್ರಮಗಳಿಗೆ ಹಿಂಡು ಹಿಂಡು ವಲಸೆ ಹಕ್ಕಿಗಳಂತೆ ಬಣ್ಣ ಬಣ್ಣದ ಕಾರುಗಳಲ್ಲಿ ಊರವರಿಗೆ ಕಣ್ಣು ಕುಕ್ಕುವಂತೆ ಬಂದಿಳಿಯುತ್ತಾರೆ.ಆದರೆ ಇದುವರೆಗೂ ಮಾದರ ಕೇರಿ ಕೊರಚರ ಕೇರಿಗಳಲ್ಲಿ ಇನ್ನೂ ಒಬ್ಬೇ ಒಬ್ಬ ಸರ್ಕಾರಿ ನೌಕರಿಲ್ಲ.
ಅಲ್ಲಿ ಬಡತನಕ್ಕೆ ಬರವಿಲ್ಲ.ದೇವದಾಸಿಯರಿಗೆ ಕೊರತೆಯಿಲ್ಲ.ಸೋಬಾನ ಹೇಳುವ, ಕೋಲಾಟ ಹಾಡುವ,ನಾಟಕ ಮಾಡುವ,ಕುಡಿವ,ದುಡಿವ,ಎಲ್ಲೆಲ್ಲಿಗೋ.. ಗುಳೆ ಹೋಗುವ ಜನರ ಅಮಲಿಗೆ ಕೊನೆಯಿಲ್ಲ.
ಕಳೆದ ಐವತ್ತು ವರ್ಷಗಳಿಂದಲೂ ನಮ್ಮ ಊರಿನ ದೊಡ್ಡ ಕುಲಗಳು ಕ್ರಾಂತಿಕಾರಿ ಶ್ರೀ ಗೋಣಿ ಬಸವೇಶ್ವರ ನಾಟಕವನ್ನ ಪ್ರತಿ ವರ್ಷ ಆಡಿಕೊಂಡು ಬರುತಿದ್ದಾರೆ ಆದರೆ ರೈತರಾದ ಅವರ ಬದುಕುಗಳೂ ಅಂತಹ ದೊಡ್ಡ ಬದಲಾವಣೆಯನ್ನ ಕಂಡಿಲ್ಲ. ಗೋಣಿ ಬಸಪ್ಪ ನಿತ್ಯವೂ ತರಕಾರಿ ಪುಟ್ಟಿ ಹೊತ್ತು ಮಾರುತ್ತಾ ಊರೆಲ್ಲಾ ಅಲೆಯುತ್ತಾನೆ.ಮಹಾರಾಜ ಶಿವನಯ್ಯ ಕೆದರಿದ ಕೂದಲು ಹರಿದ ಬನೀನು ಧರಿಸಿ ಎತ್ತುಗಳನ್ನ ಹೊಡಕೊಂಡು ಹೊಲದ ಕಡೆ ಹೋಗುತಿರುತ್ತಾನೆ.ಪಾಳೆಗಾರ ಸೋಮಶೇಖರ ದೊರೆ ಊರಾಚೆಯ ಕಾಳಮ್ಮನ ಗುಡಿ ಹತ್ತಿರ ಥೇಟ್ ಬಿಕ್ಷುಕನಂತೆ ಕಿವಿ ಸಂದಿನ ಕೊರಬೀಡಿ ಹಚ್ಚಿಕೊಂಡು ಹಾದಿ ಆಚೆ ಈಚೆಯ ಜನರನ್ನ ಕಕ್ಕಾಬಿಕ್ಕಿಯಾಗಿ ನೋಡುತ್ತಿರುತ್ತಾನೆ.ಬಣ್ಣ ಸಿನಿಮಾ ನಟರಿಗೂ ನಾಟಕದ ನಟರಿಗೂ ಎಷ್ಟೊಂದು ದೂರವಿಸಿದೆ? ಬಳ್ಳಾರಿಯ ರೈತನ ರಕ್ತ ರಾತ್ರಿಯ ಅಶ್ವತ್ಧಾಮನ ಪಾತ್ರ ನೀವೊಮ್ಮೆ ನೋಡಬೇಕು!
ಹೌದು ನಮ್ಮೂರಿನ ಹಳೆಯ ಗೋಣಿ ಬಸಪ್ಪ ಸಂತೆಯಲ್ಲಿ ಕೊಡೆಯನ್ನ ಊರುಗೋಲಂತೆ ಊರುತ್ತಾ ಬರುವುದನ್ನ ನೋಡಿದರೆ ಅಯ್ಯೋ ಅನಿಸದಿರದು.ಹಳೆಯ ಶಿವನಯ್ಯನ ಪಾತ್ರಧಾರಿ ಸಾಹುಕಾರ ಬಸವಲಿಂಗಪ್ಪ ಆಗ ಥೇಟ್ ಮಯೂರನಂತಹ ಡ್ರೆಸ್ ಮಾಡಿಕೊಂಡು ಬಂದು ನಿಂತರೆ ಜನರ ಕೇಕೆ ಸಿಳ್ಳೆ ಬಲ್ಲವರೇ ಬಲ್ಲರು.ಆ ಪಾತ್ರದಿಂದಲೇ ಆತನಿಗೆ ಊರ ತುಂಬಾ ಸಖಿಯರಿದ್ದರು.ಆದರೆ ಆ ಶಿವನಯ್ಯ ಶಿವನ ಪಾದ ಸೇರಿ ಆತನ ಊರಾಚೆಯ ಹತ್ತಿ ಗಿರಣಿ ಹಲ್ಲು ಕಳಕೊಂಡ ಬಾಯಿಯಂತೆ ಕುಗ್ಗಿ ನಿಂತಿದೆ. ಕಾಲುಮುರಕೊಂಡು ಬ್ಯಾಂಡೇಜ್ ಸುತ್ತಿ ಕೊಂಡು ನರಳುತ್ತಾ ಮಲಗಿದ ರೋಗಿಯಂತೆ ಕಾಂಪೌಂಡ್ ಕಾಣುತ್ತಿದೆ.ಶಿವನಯ್ಯನ ಗತದ ಕೆಲ ಸಖಿಯರು ದೀಪಕ್ಕೆ ಬಡಿದ ಚಿಟ್ಟೆಗಳಂತೆ ರೆಕ್ಕೆ ಕಳಕೊಂಡು ಅಲ್ಲಲ್ಲಿ ತೆವಳುತ್ತಾರೆ.ಗೋಣಿ ಬಸವೇಶ್ವರ ನಾಟಕ ಬರೆದ ನಮ್ಮ ಕನ್ನಡ ಮೇಷ್ಟ್ರು ಹರಾಳು ಕೊಟ್ರಪ್ಪನವರು ಊರೇ ತೊರೆದಿದ್ದಾರೆ!
ನಾ ಹೋದಾಗಲೆಲ್ಲಾ.. ?ಊರಲ್ಲಿ ಹೊಸದೇನೆಂದು ?? ಬಾಯಿತೆರದರೆ ” ಅಯ್ಯೋ ಊರು ಕುಲಗೆಟ್ಟು ಹೋಗೇತಿ ಅದರದೇನು ಕೇಳ್ತಿರಿ ಬಿಡ್ರಿ ಮೇಷ್ಟ್ರೇ ” ಅಂತ ಮಾತೇ ತಿರುವಿ ಹಾಕುತ್ತಾರೆ.ನಿಜ ಊರು ಕುಲಗೆಡೋದು ಒಳ್ಳೆಯದೇ! ಈಗ ಊರಲ್ಲಿ ಕೇರಿಗಳೆಂಬ ದೊಡ್ಡ ಅಂತರಗಳಿಲ್ಲ ಎಲ್ಲಾ ಮನೆಗಳು ಪಕ್ಕ ಪಕ್ಕ ಆತುಕೊಂಡಂತಿವೆ.ಹಳೆ ಮುಖಗಳಲ್ಲಿ ಇನ್ನೂ ಹೊಲಸು ಪಿಚ್ಚು ಹಾಗೇ ಇವೆ.ಹೋಟೆಲ್ ಗಳಲ್ಲಿ ಸರೀಕರೆಲ್ಲಾ ಕುಳಿತು ತಿನ್ನುವ ಪದ್ದತಿ ಬಂದಿದೆ.ಹಣಕ್ಕೆ ಕೆಲಸಕ್ಕೆ ಸಿಕ್ಕ ಮಾನ್ಯತೆ ಹೀನಾತಿ ಹೀನ ಕಡು ಬಡತನಕ್ಕೆ ಸಿಕ್ಕಿಲ್ಲ.
ನಿಜ ಈಗೀಗ ಕುಡುಕರಲ್ಲಿ ಹರೆಯಕ್ಕೆ ಬಂದವರೇ ಹೆಚ್ಚಾಗಿದ್ದಾರೆ.ಕೆಲವರಂತೂ ನಾತದಲ್ಲೇ ಮುಳಿಗೇಳುತ್ತಾರೆ.ದುಡಿದ್ದದ್ದೆಲ್ಲಾ ನಿಶೆಗಿಟ್ಟು ಮನೆತನಗಳನ್ನ ಬಕ್ಕ ಬಾರಲು ಮಲಗಿಸುತ್ತಿದ್ದಾರೆ.ನಮ್ಮೂರ ಮಾಗಳದ ಮನೆತನ ಕುಡಿತಕ್ಕೇ ಸಿಕ್ಕಿ ಸರ್ವನಾಶವಾಗಿರುವುದನ್ನ ಆ ಮನೆಯ ಗೋಡೆಗಳೇ ಸಾರುತ್ತವೆ.ಹುಲಿಯಂತೆ ಕಾಣುತಿದ್ದ ಸಂಗ್ಯ ಬಾಳ್ಯ ವಿರುಪಾಕ್ಷರೆಲ್ಲಾ ಹುಳ ತಿಂದ ತೆನಿಯಂತೆ ಗಾಳಿಯಲ್ಲಿ ಬರುತಿದ್ದಾರೆ.ಅವರ ಮಕ್ಕಳೂ ಅಪ್ಪಂದಿರನ್ನ ಎಂದೋ ಹಿಂದಿಕ್ಕಿಬಿಟ್ಟಿದ್ದಾರೆ.
ಮನೆ ಆಡಳಿತಗಳೆಲ್ಲಾ ಹೆಣ್ಣು ಮಕ್ಕಳ ಕೈಸೇರಿ ಮನೆ ದೀಪಗಳು ಕೊಟ್ಟಷ್ಟು ತಿಂದು ಬಾಲ ಆಡಿಸುವ ಕಜ್ಜಿ ಹಚ್ಚಿಕೊಂಡ ನಾಯಿಗಳಂತಾಗಿದ್ದಾರೆ.ಕುಳಿತು ಕೆದಕಿದರೆ ಸಾಕು ಒಂದೊಂದು ಮನೆಯ ಪುರಾಣವೂ ” ಬರಿಯೋ ನಿಮ್ಮಾಪ್ನಿ” ಅನ್ನೋವಷ್ಟು ಸುದೀರ್ಘವಾಗಿವೆ.
ಹಿಂದೆ ಭಕ್ತಿ ಮೇರೆ ಮೀರಿದ ಊರ ದೇವರುಗಳಿಗೂ ವರ್ಗ ಜಾತಿಯ ನಿಶೆ ಹತ್ತಿತ್ತು. ಈಗ ಡಿಜಿಟಲ್ ದೇವರುಗಳ ನಡುವೆ ಹಳ್ಳಿದೇವರುಗಳು ಭಕ್ತರು ಬಂದರೆ ಸಾಕೆಂಬಂತಿವೆ.ಕೆಲವು ದೇವರು ಪೂಜೆಗಿರಲಿ ಕಸ ಹೊಡೆಸಿಕೊಳ್ಳಲಿಕ್ಕೂ ದಿಕ್ಕರದೇ ಹೋಗಿವೆ.
ಪೂಜಾರಿಗಳೆಂಬ ದೇವರ ಕುದರಿಗಳು ಉದುರಿ ಮಣ್ಣಲ್ಲಿ ಮಣ್ಣಾಗಿದ್ದರಿಂದ, ಹೊಸ ಹುಡುಗರಿಗೆ ಮೊಬೈಲ್ ದೇವರು ಸಿಕ್ಕಾಗಿನಿಂದ ಪಾಪ ಹಳೆ ದೇವರುಗಳ ಕೇಳುವವರಾರು.? ಎದ್ದು ಕಸ ಹೊಡೆಯೋನ ಅನ್ನೋ ಹಿರೀಕರಿಗೆ ಹಾಳಾದ ಮಂಡಿ ನೋವು! ಸೊಂಟನೋವು.ಪಾಪ ಅಮೃತ್ ನೋನಿ ಇನ್ನೂ ಇಲ್ಲಿಗೆ ಮುಟ್ಟಿಲ್ಲ !
ಚಂಬಿಡಿದು ಹೊರಟವರಿಗೆಲ್ಲಾ ರೇಗಿಸಿ ಉಗಿಸಿ ಕೊಳ್ಳುತಿದ್ದವರೆಲ್ಲಾ ದುಪಟಿ ಕಮಿಷನರ್ ಗಳಾಗಿದ್ದಾರೆ.ನಗರದ ಕಡೆಗೆ ಮುಖ ಮಾಡಿದ ಹುಡುಗರಿಗೆ ಗುಟ್ಕಾ,ಕುಡಿತಾ,ಸಿಗರೇಟ್ ,ಬೀಡಿ ಅಂತ ಅಂಟಿ ಬೆಂಡಾದ ಐಕಳ ಮುಖದ ತುಂಬಾ ಅನುಭಾವದ ಕಳೆ ಏರಿ ಅಯ್ಯಪ್ಪನ ಮಾಲೆಗೆ ಕಾಯುವ ದಿಗಿಲು ಸಂನ್ಯಾಸಿಗಳಾಗಿ ಬೇಲಿತುಂಬಾ ಬೆಳೆಯುತಿದ್ದಾರೆ.
ಆ ಊರು ಬಲು ಶ್ರೇಷ್ಟವಂತೆ!,ನೂರೊಂದು ಲಿಂಗಗಳು ಇರುವ ಊರಂತೆ!!.ಬಾಗಿ ಇಳಿ ಎಂಬ ಮಾತೇ ಆ ಊರಿನ ಹೆಸರು ಬಾಗಳಿ ಆಗಿದೆಯಂತೆ!!!.ಆದರೆ ಮಳೆ ಬಿಸಿಲಿಗೆ ಹಳೆಯ ಡಿಸ್ಕೋ ಶಾಂತಿಯ ಥರ ಕುಣಿದು ಮೈಮೇಲೆಯೇ ಬೀಳುವಂತಿರುವ ಮನೆಗಳ ನೋಡಿದರೆ ನನಗೆ ಒಮ್ಮೆಯೂ ಹೀಗನ್ನಿಸಿಲ್ಲ.
ಮನೆ ಮನೆಗಳ ಮುಂದೆ ಕವಿಯುತಿದ್ದ ಉಧೋ ..ಉಧೋ ಸಂವಂಡುಗಳು ನಿಂತಿವೆ.ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳೂ ಶುರುವಾಗಿವೆ.ಪಕ್ಕದೂರಿನ ಬಿಳಿ ಕುದುರೆಗಳ ಮೇಲೆ ಓಡಾಡುತಿದ್ದ ಸ್ವಾಮಿಗಳು ಮಣ್ಣು ಸೇರಿ ಹೊಸ ಸ್ವಾಮಿಗಳು ರಾಜಕಾರಣಿಗಳ ಕಾರಿನ ಎ.ಸಿ.ಯಲ್ಲಿ ಉಸಿರಾಡುತಿದ್ದಾರೆ!
ಹಿಂದೆ ಮುಟ್ಟಿಸಿಕೊಳ್ಳದ ದೇವರು.ಕಪ್ಪಾಳು ದೇವರು,ಮೈಮೇಲೆ ಬರುತಿದ್ದ ದೇವರು,ನಾಯಿ ಬೆಕ್ಕುಗಳು ನೆಕ್ಕಲೂ ಎಣ್ಣೆ ಸಿಗದ ಕಾಡುದೇವರು.ಬಾಗಿಲಿದ್ದರೆ ಬಣ್ಣವಿಲ್ಲದ,ಬಣ್ಣ ಕಂಡರೆ ಗುಡಿಯೇ ಇಲ್ಲದ ದೇವರು.ಮರದ ಚಾಟಿನಲ್ಲೇ ಕುಳಿತ ಗಡಿ ದೇವರುಗಳೆಲ್ಲಾ ದಸರ ಹಬ್ಬದಲ್ಲಿ ಮಾತ್ರ ಪಲ್ಲಕ್ಕಿಯಲ್ಲಿ ಕುಳಿತು ಊರ ಸುತ್ತುತ್ತ ಹಲಗಿ,ಮೇಳೆ,ಪಂಜಿನ ಬೆಳಕಲ್ಲಿ ಮಡಿಯ ಹಾಸಿಗೆಗಳ ಮೇಲೆ ದೇವ ದೇವರುಗಳನ್ನ ಮಾತಾಡಿಸಲು ಹೊರಡುತಿದ್ದವು! ಪೂಜಾರಿಗಳು ಓಡೋಡಿ ಬಂದು ಹಣ್ಣು ಕಾಯಿಗಳನ್ನ ಪರಸ್ಪರ ಎಡೆಗೆ ಒಪ್ಪಿಸಿಕೊಳ್ಳುತಿದ್ದದ್ದು ವಿಸ್ಮಯ ಹುಟ್ಟಿಸುತಿತ್ತು.ಈ ನಡುವೆ ಪಲ್ಲಕ್ಕಿಗಳ ಅಡಿಗೆ ಜಾತಿಯ ಹಂಗು ತೊರೆದು ತಳಗೇರಿಗಳ ದೇವರುಗಳಿಗೆ ಬೆನ್ನು ಒಡ್ಡುತಿದ್ದ ರೀತಿಯಂತೂ ಭಕ್ತಿಯನ್ನೇ ದುಂಡಗಾಗಿಸುತಿತ್ತು.ಈಗ ಗ್ರಾಮ ಪಂಚಾಯಿತಿ ಚುನಾವಣೆಗಳು ಬಂದಮೇಲೆ ದೇವರುಗಳೂ ಪರಸ್ಪರ ಮುನಿಸಿಕೊಂಡಂತೆ ಗುಡಿಗಳಲ್ಲೇ ಕುಳಿತಿವೆ.