ದಲಿತರಿಗೆ ಅಧಿಕಾರ: ಪೈಪೋಟಿ ವ್ಯವಹಾರ

Share

ಪಂಜಾಬಿನಲ್ಲಿ ದಲಿತ ಮುಖಂಡ ಚರಣಜಿತ್ ಸಿಂಗ್ ಚೆನ್ನಿಯವರನ್ನು ಮುಖ್ಯಮಂತ್ರಿ ಮಾಡಿರುವ ಕಾಂಗ್ರೆಸ್ ಇಷ್ಟರಲ್ಲೇ ನಡೆಯಲಿರುವ ಚುನಾವಣೆ ನಂತರ ಬೇರೆ ರಾಗ ಹಾಡುವ ಲಕ್ಷಣ ಸ್ಪುಟವಾಗುತ್ತಿದೆ. ಕಾಂಗ್ರೆಸ್ ಮಾತ್ರವೇ ಅಲ್ಲ, ಬಿಜೆಪಿ, ಆಪ್, ಶಿರೋಮಣಿ ಅಕಾಲಿ ದಳ ಪಕ್ಷಗಳೂ ದಲಿತ ಕಾರ್ಡ್‌ನೊಂದಿಗೆ ಚುನಾವಣಾ ಆಟ ಆಡುವುದಕ್ಕೆ ಸಿದ್ಧತೆ ನಡೆಸಿವೆ.

ದಲಿತರಿಗೆ ಅಧಿಕಾರ: ಪೈಪೋಟಿ ವ್ಯವಹಾರ

ಇಷ್ಟು ವರ್ಷದ ಜನತಂತ್ರವನ್ನು ಅನುಭವಿಸಿರುವ ದೇಶ ಇದೀಗ ಮತ್ತೊಂದು ಹೊಸ ಆಯಾಮಕ್ಕೆ ಹೊರಳುವ ಸನ್ನಾಹದಲ್ಲಿರುವುದು ಪಂಜಾಬ್‌ನಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಬಹುಮತದಲ್ಲಿ ಆಡಳಿತಕ್ಕೆ ತಂದು ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಹೊಸ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಣ ಜಂಗೀ ಕುಸ್ತಿ ಅಂತಿಮವಾಗಿ ದಲಿತ ಸಮುದಾಯದ ಚರಣ್‌ಜಿತ್‌ಸಿಂಗ್ ಚೆನ್ನಿ ಮುಖ್ಯಮಂತ್ರಿ ಆಗುವಂತೆ ಮಾಡಿದೆ. ರಾಜ್ಯದ ಜನ ಸಂಖ್ಯೆಯಲ್ಲಿ ನೂರಕ್ಕೆ ಮೂವತ್ತೆರಡರಷ್ಟಿರುವ ದಲಿತ ಸಮುದಾಯದ ಮುಖಂಡರೊಬ್ಬರು ಸ್ವಾತಂತ್ರ್ಯೋದಯದ ಅಮೃತ ಮಹೋತ್ಸವದ ಸಡಗರ ಸಾಗಿರುವಾಗ ರಾಜ್ಯದ ನಂಬರ್ ಒನ್ ಕುರ್ಚಿಯನ್ನೇರಿದ್ದಾರೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಅನಿಸಬಹುದು. ಆದರೆ ಘಟಿಸಿರುವುದು ಮಾತ್ರ ಅಸಾಮಾನ್ಯ ಬೆಳಚವಣಿಗೆ.
ಜನತಂತ್ರದ ಮೊದಲ ಐದು ದಶಕ ಕೇಂದ್ರ ಮತ್ತು ಬಹುತೇಕ ರಾಜ್ಯಗಳಲ್ಲಿ ಪ್ರತಿಸ್ಪರ್ಧೆಯೇ ಇಲ್ಲದೆ ಆಳಿದ ಕಾಂಗ್ರೆಸ್ ಪಕ್ಷ ತನ್ನನ್ನು ಕಾಲಕ್ರಮೇಣ ತಿರಸ್ಕರಿಸಿ ಕೈಬಿಟ್ಟು ಹೋದ ದಲಿತ ಸಮುದಾಯದ ಮೂಗಿಗೆ ತುಪ್ಪ ಸವರುವ ರಾಜಕೀಯ ಇಲ್ಲಿ ಒಡೆದೆದ್ದು ಕಾಣಿಸುತ್ತಿದೆ. ಕಾಂಗ್ರೆಸ್‌ನ ಓಟ್ ಬ್ಯಾಂಕ್ ಎಂದೇ ಹೆಸರಾಗಿದ್ದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯ ಈಗ ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿಹೋಗಿದೆ.

ಸಮಾಜವಾದಿ ಪಕ್ಷ (ಮುಲಾಯಂ/ ಅಖಿಲೇಶ ಯಾದವ್), ತೃಣಮೂಲ ಕಾಂಗ್ರೆಸ್ (ಮಮತಾ ಬ್ಯಾನರ್ಜಿ), ಬಹುಜನ ಸಮಾಜ ಪಕ್ಷ (ಮಾಯಾವತಿ), ಜಾತ್ಯತೀತ ಜನತಾ ದಳ (ಎಚ್.ಡಿ.ದೇವೇಗೌಡ), ರಾಷ್ಟ್ರೀಯ ಜನತಾ ದಳ(ಲಾಲೂ ಪ್ರಸಾದ ಯಾದವ್), ಡಿಎಂಕೆ (ಎಂ.ಕೆ. ಸ್ಟ್ಯಾಲಿನ್), ವೈಎಸ್‌ಆರ್ ಕಾಂಗ್ರೆಸ್ (ಜಗನ್‌ಮೋಹನ್ ರೆಡ್ಡಿ), ತೆಲಂಗಾಣ ರಾಷ್ಟ್ರ ಸಮಿತಿ (ಕೆ.ಚಂದ್ರಶೇಖರ ರಾವ್), ರಾಷ್ಟ್ರೀಯ ಕಾಂಗ್ರೆಸ್(ಶರದ್ ಪವಾರ್), ನ್ಯಾಷನಲ್ ಕಾನ್ಫರೆನ್ಸ್ (ಫಾರೂಕ್ ಅಬ್ದುಲ್ಲಾ), ಆಮ್ ಆದ್ಮಿ ಪಾರ್ಟಿ (ಕೇಜರೀವಾಲ್), ಎಐಎಂಐಎಂ (ಅಸಾದುದ್ದೀನ್ ಓವೈಸಿ) ಮುಂತದವರು ಕಾಂಗ್ರೆಸ್ ಮತ ಬುಟ್ಟಿಗೆ ಕೈಹಾಕಿ ತಮ್ಮ ತಮ್ಮ ಕೈಲಾದಷ್ಟನ್ನು ದೋಚಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿರುವ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಯಥಾಸ್ಥಿತಿಯಲ್ಲೇ ಇದೆ ಎಂಬ ಭ್ರಮೆಯಲ್ಲಿ ವಾಸ್ತವದ ಪರಿವೆಯೇ ಇಲ್ಲದಂತೆ ಕಾಲಿ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಸಾಗಿರುವಾಗ ಅದೇ ಪಕ್ಷದ ದಲಿತ ಮುಖ ಚರಣ್‌ಜಿತ್‌ಸಿಂಗ್ ಚೆನ್ನಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪಂಜಾಬ್ ವಿಧಾನ ಸಭೆಗೆ ಮುಂದಿನ ವರ್ಷದ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್ ಹಾಕಿಕೊಂಡಿರುವ ನಿಯಮದ ಪ್ರಕಾರ, ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಅದು ಚುನಾವಣೆ ಪೂರ್ವ ಪ್ರಕಟಿಸುವುದಿಲ್ಲ. ಚುನಾವಣೆ ಹೊತ್ತಿಗೆ ಸಿಎಂ ಹುದ್ದೆಯಲ್ಲಿ ಆರು ತಿಂಗಳಷ್ಟೆ ಕೂತಿರುವ ಚೆನ್ನಿ ವಿಚಾರದಲ್ಲಿ ಕಾಂಗ್ರೆಸ್ ಯಾವ ತೀರ್ಮಾನಕ್ಕೆ ಬರಲಿದೆಯೋ ಕುತೂಹಲ ಮೂಡಿಸಿದೆ. ಕುತೂಹಲಕ್ಕೆ ಕಾರಣ ಕಾಂಗ್ರೆಸ್ಸು ಈ ಹಿಂದೆ ದಲಿತ ಮುಖಂಡರನ್ನು ನಡೆಸಿಕೊಂಡ ರೀತಿಯಲ್ಲೇ ಇದೆ. ಸುಶೀಲ್ ಕುಮಾರ್ ಶಿಂಧೆ ೨೦೦೩ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ನೇಮಕಗೊಂಡರು. ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಿದ್ದು ತಮ್ಮ ಪಕ್ಷ ಎಂದು ಕಾಂಗ್ರೆಸ್ ಮುಖಂಡರು ಆಕಾಶ ಬಿರಿಯುವಂತೆ ಕೂಗು ಹಾಕಿದ್ದರು. ಮರು ವರ್ಷ ವಿಧಾನ ಸಭೆಗೆ ಚುನಾವಣೆ. ದಲಿತ ಮುಖ ಎಂದು ಶಿಂಧೆಯವರನ್ನು ಜನಕ್ಕೆ ತೋರಿಸಿ ಗೆದ್ದ ಕಾಂಗ್ರೆಸ್ಸು ಬಹುಮತ ಪಡೆದದ್ದೇ ತಡ ಬ್ರಾಹ್ಮಣ ಸಮುದಾಯದ ವಿಲಾಸರಾವ್ ದೇಶಮುಖ್‌ರನ್ನು ಸಿಎಂ ಗಾದಿಯಲ್ಲಿ ಕೂರಿಸಿತು.

ಇದನ್ನು ಒಂದು ಅಪವಾದ ಎನ್ನುವಂತಿಲ್ಲ. ರಾಜಾಸ್ತಾನದಲ್ಲಿ ೧೯೮೦ರಲ್ಲಿ ಜಗನ್ನಾಥ ಪಹಾಡಿಯಾರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸಿ ಆ ದಲಿತ ಮುಖವನ್ನು ಮುಂದಿಟ್ಟುಕೊಂಡು ೧೯೮೧ರ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗೆದ್ದಿತು. ಆದರೆ ಪಹಾಡಿಯಾ ಸಿಎಂ ಆಗಿ ಮುಂದುವರಿಯುವುದು ಪಕ್ಷದ ಹೈಕಮಾಂಡ್‌ಗೆ ಬೇಡವಾಯಿತು. ಆ ಜಾಗಕ್ಕೆ ಮೇಲ್ವರ್ಗದ ಶಿವ ಚರಣ ಮಾಥೂರರನ್ನು ತರಲಾಯಿತು. ಪಂಜಾಬದಲ್ಲಿ ಚರಣ್‌ಜಿತ್‌ಸಿಂಗ್ ಚೆನ್ನಿ ಸದ್ಯಕ್ಕೆ ಸಿಎಂ ಸ್ಥಾನದಲ್ಲಿದ್ದಾರೆ. ಮುಂಬರುವ ಚುನಾವಣೆ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ನಡೆಯುವುದೆಂದು ಪಕ್ಷದ ವಕ್ತಾರರು ಪ್ರಕಟಿಸಿದ್ದಾರೆ. ಇದರ ಅರ್ಥ ಸುಶೀಲಕುಮಾರ್ ಶಿಂಧೆ ಹಾಗೂ ಜಗನ್ನಾಥ ಪಹಾಡಿಯಾರಿಗೆ ಒದಗಿದ ಗತಿಯೇ ನಿಮಗೂ ಕಾದಿದೆ ಎಂಬ ಸಂದೇಶ ಚೆನ್ನಿ ಅವರಿಗೆ.
ಯೂಸ್ ಅಂಡ್ ಥ್ರೋ (ಬಳಸಿ ಬಿಸಾಕು) ಎನ್ನುವುದು ರಾಜಕಾರಣದಲ್ಲಿ ಎಲ್ಲ ಪಕ್ಷಗಳೂ ಸರ್ವಾನುಮತದಿಂದ ಒಪ್ಪಿಕೊಂಡಿರುವ ಸಿದ್ಧಾಂತ. ಹೈಕಮಾಂಡ್ ಸಂಸ್ಕೃತಿಯುಳ್ಳ ಎಲ್ಲ ಪಕ್ಷಗಳಲ್ಲೂ ಇದೊಂದು ರೋಗರೂಪಿಯಾಗಿ ಕಾಡುತ್ತಿದೆ. ಪಂಜಾಬಿನದು ೧೧೭ ಸದಸ್ಯ ಬಲದ ವಿಧಾನ ಸಭೆ. ೬೦ ಸ್ಥಾನ ಗೆದ್ದ ಪಕ್ಷ ಸರ್ಕಾರ ರಚಿಸಲು ಅವಕಾಶ. ಅಮರೀಂದರ್ ಸಿಂಗ್ ಸರ್ಕಾರದ ವಿರುದ್ಧ “ಅದು ಜನ ವಿರೋಧಿ” ಸರ್ಕಾರ ಎಂದು ಕರೆದುದು ವಿರೋಧ ಪಕ್ಷಗಳಲ್ಲ ಬದಲಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು. ತಾನು ಸಿಎಂ ಗಾದಿಗೆ ಬರುವರೆಗೆ ಆ ಕುರ್ಚಿಯನ್ನು ಕಾದು ಕೂತಿರುವ ಕೆಲಸವನ್ನು ಸಿಧು, ಚೆನ್ನಿಗೆ ವಹಿಸಿದ್ದಾರೆನ್ನುವುದು ಪಂಜಾಬ್ ರಾಜಕೀಯದ ಒಳಮರ್ಮ. ಉತ್ತರ ಭಾರತದ ಕೆಲವು ಪತ್ರಿಕೆಗಳ ಪ್ರಕಾರ ವನವಾಸದಲ್ಲಿರುವ ರಾಮನ ಪಾದುಕೆ ತಂದಿಟ್ಟು ಭರತ ಅಯೋಧ್ಯೆಯನ್ನು ಆಳಿದಂತೆ ಚೆನ್ನಿ ಕೆಲಸ.
ಪಂಜಾಬಿನ ಆಡಳಿತಾಧಿಕಾರವನ್ನು ೨೦೧೭ರ ಚುನಾವಣೆಯಲ್ಲಿ ಕಳೆದುಕೊಂಡಿರುವ ಬಿಜೆಪಿ, ಮುಂದಿನ ಮುಖ್ಯಮಂತ್ರಿ ದಲಿತ ಸಮುದಾಯದವರೇ ಆಗಿರುತ್ತಾರೆಂದು ಪ್ರಕಟಿಸಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿರುವ ೩೨ ಪರ್ಸೆಂಟ್ ದಲಿತ ಮತದಾರರು. ಬಿಜೆಪಿ-ಶಿರೋಮಣಿ ಅಕಾಲಿ ದಳದ ಸರ್ಕಾರ ಅದಾಗಿತ್ತು. ಬರಲಿರುವ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಡಲಿದೆ. ಬಿ.ಎಸ್. ಯಡಿಯೂರಪ್ಪ ಮೊನ್ನೆ ಮೊನ್ನೆ ದಾವಣಗೆರೆಯಲ್ಲಿ ಆಡಿದ ಮಾತು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರಣವಾಗಿ ಲೋಕಸಭಾ ಚುನಾವಣೆ ಗೆಲ್ಲಬಹುದು; ಆದರೆ ವಿಧಾನ ಸಭೆ ಚುನಾವಣೆಗಳನ್ನಲ್ಲ. ಈ ಮಾತು ಪಂಜಾಬ್ ವಿಧಾನ ಸಭಾ ಚುನಾವಣೆಗೂ ಅನ್ವಯಿಸುತ್ತದೆ. ಪಂಜಾಬಿನಲ್ಲಿ ಇತರ ಹಿಂದುಳಿದ ವರ್ಗಗಳ ಮತ ಶೇಕಡಾ ೧೮ ರಷ್ಟಿದೆ. ಮೋದಿ ಇತರ ಹಿಂದುಳಿದ ವರ್ಗಗಳ ನಾಯಕರಾಗಿರುವುದರಿಂದ ಆ ಲಾಭ ತನಗೇ ಸಿಗಬಹುದೆಂಬ ಲೆಕ್ಕಾಚಾರದಲ್ಲಿದೆ ಬಿಜೆಪಿ.

 


ದೆಹಲಿಯಿಂದಾಚೆಗೂ ಚುನಾವಣಾ ರಾಜಕೀಯದ ಅದೃಷ್ಟ ಪರೀಕ್ಷೆಗೆ ತನ್ನನ್ನು ಒಡ್ಡಿಕೊಂಡಿರುವ ಆಮ್ ಆದ್ಮಿ ಪಾರ್ಟಿ ಕೂಡಾ ಡಿಸಿಎಂ ಸ್ಥಾನಕ್ಕೆ ದಲಿತರೊಬ್ಬರನ್ನು ತರುವ ಭರವಸೆ ನೀಡಿದೆ. ಪಂಜಾಬು, ಗುಜರಾತ್, ಗೋವಾ ಮುಂತಾದೆಡೆ ಆಪ್ ಕಾರ್ಯಕರ್ತರು “ಮಾಡು ಇಲ್ಲ ಮಡಿ” ಎಂಬ ರೀತಿಯಲ್ಲಿ ಚುನಾವಣಾ ಸಮರಕ್ಕೆ ತೋಳೇರಿಸಿ ಸಿದ್ಧವಾಗುತ್ತಿದ್ದಾರೆ. ಪಂಜಾಬಿನಲ್ಲಿ ಸದ್ಯ ೨೦ ಜನ ಆಮ್ ಆದ್ಮಿ ಪಕ್ಷದ ಶಾಸಕರಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ೭೭ ಸೀಟು ಹೊಂದಿದೆ.

 

ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಪಕ್ಕಾ ಸಿಖ್ ರಾಜಕಾರಣ ಮಾಡಿಕೊಂಡೇ ಬಂದಿರುವ ಶಿರೋಮಣಿ ಅಕಾಲಿ ದಳ ಈ ಬಾರಿ ಬಹುಜನ ಸಮಾಜ ಪಕ್ಷದೊಂದಿಗೆ ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದೆ. ಅದರ ಜೊತೆಗೇ ಡಿಸಿಎಂ ಸ್ಥಾನಕ್ಕೆ ದಲಿತರೊಬ್ಬರನ್ನು ತರುವ ಆಶ್ವಾಸನೆ ಕೊಟ್ಟಿದೆ. ದಲಿತರನ್ನು ಮುಂದಿಟ್ಟುಕೊಂಡು ಮಾಡುವ ರಾಜಕೀಯಕ್ಕೆ ಪೈಪೋಟಿ ಸ್ವರೂಪ ಬಂದುಬಿಟ್ಟಿದೆ ಎನ್ನುವುದನ್ನು ಈ ಎಲ್ಲ ಬೆಳವಣಿಗೆಗಳು ಹೇಳುತ್ತವೆ. ಇಷ್ಟು ವರ್ಷದ ಬಳಿಕ ದಲಿತರು ಕೂಡಾ ಉನ್ನತ ಸ್ಥಾನಕ್ಕೆ ಯೋಗ್ಯರು ಎಂಬ ತೀರ್ಮಾನಕ್ಕೆ ನಮ್ಮ ರಾಜಕೀಯ ಪಕ್ಷಗಳು ಬಂದಿರುವುದರ ರಹಸ್ಯ ಚುನಾವಣಾ ರಾಜಕೀಯವಲ್ಲದೆ ಮತ್ತೇನೇನೂ ಅಲ್ಲ.
ಬಹುಜನ ಸಮಾಜ ಪಕ್ಷವನ್ನು ಖಾನ್ಶೀರಾಮ್ ಸ್ಥಾಪಿಸುವವರೆಗೆ ದಲಿತ ಪ್ರಧಾನವಾದ ಪಕ್ಷ ದೇಶದಲ್ಲಿ ಇರಲಿಲ್ಲ ಎಂದೇನೂ ಇಲ್ಲ. ಆದರೆ ಅವುಗಳಲ್ಲಿ ಯಾವೊಂದೂ ಸ್ವತಂತ್ರವಾಗಿ ಬೆಳೆಯಲಿಲ್ಲ. ಕೆಲವು ಲೆಟರ್‌ಹೆಡ್ ಪಕ್ಷಗಳಾದವು. ಕೆಲವಕ್ಕೆ ಬಾಲಗ್ರಹ ಬಡಿಯಿತು. ಮತ್ತೆ ಕೆಲವು ಒಂದಲ್ಲ ಒಂದು ರಾಷ್ಟ್ರೀಯ ಪಕ್ಷದ ಬಂದಳಿಕೆಯಾದವು. ಪ್ರಕೃತಿಯಲ್ಲಿ ಬಂದಳಿಕೆಗೆ ವಿಶೇಷ ಶಕ್ತಿ ಇರುತ್ತದೆ. ಕಾಲಕ್ರಮದಲ್ಲಿ ಬಂದಳಿಕೆಯೇ ಮರವನ್ನು ನಾಶ ಮಾಡುತ್ತದೆ. ಹಳ್ಳಿ ಜನ ಅದನ್ನು ಧೃತರಾಷ್ಟ್ರ ಅಪ್ಪುಗೆ ಎನ್ನುತ್ತಾರೆ.

ರಾಜಕೀಯದಲ್ಲಿ ಮಾತ್ರ ಹಾಗಲ್ಲ. ಇಲ್ಲಿ ಬಂದಳಿಕೆಯೇ ಸಾಯುತ್ತದೆ. ಏತನ್ಮಧ್ಯೆ ಇನ್ನೂ ಪ್ರಬಲ ಶಕ್ತಿಯಾಗಿಯೇ ಇರುವ ಬಿಎಸ್‌ಪಿಗೆ ಬಹಳ ಮಹತ್ವ ಇದೆ. ಮಾಯಾವತಿ ಉತ್ತರ ಪ್ರದೇಶದಂಥ ಅತ್ಯಂತ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾದುದು ತಥಾಕಥಿತ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ನಿದ್ರೆಗೆಡಿಸಿರುವ ಬೆಳವಣಿಗೆ. ಬಿಎಸ್‌ಪಿಯನ್ನು ಹೊಸಕಿ ಹಾಕುವ ಆ ಕೆಲಸ ಆಗದಿದ್ದರೆ ಒಡೆದು ಆಳುವ ಯತ್ನವನ್ನು ರಾಷ್ಟ್ರೀಯ ಪಕ್ಷಗಳು ಕೈಬಿಟ್ಟಿಲ್ಲ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಬಲವಾಗಿ ಇರುವವರೆಗೂ ತನಗೆ ಉಳಿಗಾಲವಿಲ್ಲ ಎಂದು ಭಾವಿಸಿರುವ ಸಮಾಜವಾದಿ ಪಕ್ಷ ಈ ವಿಚಾರದಲ್ಲಿ ತಾನೂ ಒಂದು ಕೈ ನೋಡುವ ಯತ್ನದಲ್ಲಿದೆ.


ನರೇಂದ್ರ ಮೋದಿಯವರು ಕೇಂದ್ರ ಸಂಪುಟವನ್ನು ಇತ್ತೀಚೆಗೆ ಪುನರ್ರಚಿಸಿದರು. ಕೆಲವರನ್ನು ಹೊರಕ್ಕೆ ಹಾಕಿದರು. ಹೊಸಬರನ್ನು ಸಂಪುಟದೊಳಕ್ಕೆ ಕರೆತಂದರು. ಇದೇ ಮೊದಲ ಬಾರಿಗೆ ೧೨ ಜನ ಪರಿಶಿಷ್ಟ ಜಾತಿಗೆ ಸೇರಿದವರು ಕೇಂದ್ರ ಸಂಪುಟದಲ್ಲಿದ್ದಾರೆ. ಪರಿಶಿಷ್ಟ ವರ್ಗಕ್ಕೆ ಸೇರಿದ ಎಂಟು ಸಚಿವರಿದ್ದಾರೆ. ೧೧ ಜನ ಮಹಿಳಾ ಸಚಿವರನ್ನು ಒಳಗೊಂಡ ಸಂಪುಟದಲ್ಲಿ ೨೭ ಜನ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಮಂತ್ರಿಗಳಿದ್ದಾರೆ. ಮೋದಿ ತಾವೇ ಸ್ವತಃ ಒಬಿಸಿ ನಾಯಕ. ದಲಿತ ದಮನಿತ ಸಮುದಾಯದ ಕಲ್ಯಾಣ ಎಂದು ಇದನ್ನು ವರ್ಣಿಸುವ ಜನ ಇದ್ದಾರೆ. ವಾಸ್ತವದಲ್ಲಿ ಇದು ಪಕ್ಕಾ ರಾಜಕೀಯ. ಕಾಂಗ್ರೆಸ್ ಸೇರು ಎಂದರೆ ಬಿಜೆಪಿ ಸವ್ವಾಸೇರು ಎನ್ನುತ್ತದೆ.
ಇಷ್ಟೆಲ್ಲ ನಡೆದಿರುವಾಗ ಕರ್ನಾಟಕದಲ್ಲಿ ಮುಂದೆ ಏನಾಗಬಹುದು, ಆಸಕ್ತಿ ಸಹಜ. ತಾವೇ ಮುಂದಿನ ಸಿಎಂ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೋಳೇರಿಸಿದ್ದಾರೆ. ಇಬ್ಬರ ಬೆಂಬಲಿಗರೂ ತಮ್ಮ ನಾಯಕನೇ ಸಿಎಂ ಆಗಬೇಕೆಂದು ಕಂಡಕಂಡ ದೇವರಿಗೆಲ್ಲ ಹರಕೆ ಹೊರುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವೆ ಹೊಂದಾಣಿಕೆ ಎನ್ನುವುದು ನಾಪತ್ತೆ ಆಗಿರುವುದರಿಂದ ಪಕ್ಷ ಸರಳ ಬಹುಮತ (೧೧೩ ಸೀಟು) ಪಡೆಯುವುದು ಕಷ್ಟವಾಗಬಹುದು. ಹಾಗಂತ ಆಡಳಿತಾರೂಢ ಪಕ್ಷ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ವಿಚಾರದಲ್ಲಿ ಸಾಧಾರ ಅನುಮಾನಗಳಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಪಡೆಯದೆ ಅತಂತ್ರ ವಿಧಾನ ಸಭೆ ಅಸ್ತಿತ್ವಕ್ಕೆ ಬಂದರೆ ಅದರಿಂದ ಲಾಭ ಜಾತ್ಯತೀತ ಜನತಾ ದಳಕ್ಕೆ. ೨೦-೩೦ ಸೀಟಿನೊಂದಿಗೆ ರಾಜಕೀಯ ಮಾಡುವ ಕಲೆ ಅದರ ನಾಯಕರಿಗೆ ಕರಗತವಾಗಿದೆ.


ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದರೆ ಸಿಎಂ ಯಾರಾಗುತ್ತಾರೋ, ಬಸವರಾಜ ಬೊಮ್ಮಾಯಿಯವರೇ ಮುಂದುವರಿಯುತ್ತಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಜೊತೆ ಜೆಡಿಎಸ್ ಕೂಡಿಕೆ ಮಾಡಿಕೊಂಡರೆ

ಕರ್ನಾಟಕವೂ ಮೊದಲ ದಲಿತ ಮುಖ್ಯಮಂತ್ರಿಯನ್ನು ನೋಡಲಿದೆ. ಮಲ್ಲಿಕಾರ್ಜುನ ಖರ್ಗೆ ಹೆಚ್ಚೂ ಕಡಿಮೆ ನಾಲ್ಕೂವರೆ ದಶಕದಿಂದ ಕಾಂಗ್ರೆಸ್ ಪಕ್ಷಕ್ಕೆ ಮಣ್ಣು ಹೊರುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಅವರ ಪಕ್ಷದ ಹೈಕಮಾಂಡ್ ಆಶೀರ್ವಾದವಿದ್ದರೂ ಸಿಎಂ ಆಗುವ ಯೋಗ ಒಲಿದಿಲ್ಲ.

ಇದೀಗ ಎಚ್.ಡಿ. ದೇವೇಗೌಡರು ಮನಸ್ಸು ಮಾಡಿದರೆ ಖರ್ಗೆಯ ಕನಸು ನನಸಾಗಬಹುದು. ರಾಜ್ಯದಲ್ಲಿ ಮೊದಲ ದಲಿತ ಸಿಎಂ ಮಾಡಿದ್ದು ತಾವೇ ಎಂದು ಕಾಂಗ್ರೆಸ್ಸಿಗರೂ ಜೆಡಿಎಸ್‌ನವರೂ ಒಂದೇ ಧ್ವನಿಯಲ್ಲಿ ಹೇಳಬಹುದು. ಧರ್ಮಸಿಂಗ್ ಮುಖ್ಯಮಂತ್ರಿಯಾದುದು ದೇವೇಗೌಡರ ಕೃಪೆಯಿಂದ. ಆದರೆ ಇಪ್ಪತ್ತೇ ತಿಂಗಳಲ್ಲಿ ಅವರ ಮಗ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣರಾದರು. ಅಂಥದೇ ಸನ್ನಿವೇಶ ಖರ್ಗೆ ವಿಚಾರದಲ್ಲಿ ಪುನರಾವರ್ತನೆ ಆಗುವುದಿಲ್ಲ ಎನ್ನುವ ಧೈರ್ಯ ಯಾವ ಜೋತಿಷಿಗೂ ಇಲ್ಲ.

Girl in a jacket
error: Content is protected !!