ಜೋಡೆತ್ತು ಮಾಡೀತೆ ಕಸರತ್ತು?

Share

ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಕಸರತ್ತನ್ನು ಜಾತ್ಯತೀತ ಜನತಾ ದಳ ಈಗಾಗಲೇ ಆರಂಭಿಸಿದೆ. ಚುನಾವಣೆಗೆ ಎರಡು ವರ್ಷ ಇರುವಾಗಲೇ ತಾನು ಸಾಗಲಿರುವ ದಾರಿಯ ಸೂಚನೆಯನ್ನು ಅದು ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ನೆಪದಲ್ಲಿ ಕೊಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅದರ ತೀರ್ಮಾನ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆಯುವ ತಂತ್ರವಾಗಿ ಜೆಡಿಎಸ್ ನಾಯಕತ್ವ ಈ ಹೆಜ್ಜೆ ಇಟ್ಟಿದೆ.

ಜೋಡೆತ್ತು ಮಾಡೀತೆ ಕಸರತ್ತು?

ಕರ್ನಾಟಕ ವಿಧಾನ ಸಭೆಗೆ ನಿಯಮದಂತೆ ಚುನಾವಣೆ ನಡೆಯಬೇಕಿರುವುದು ೨೦೨೩ರಲ್ಲಿ. ಅಂದರೆ ಇನ್ನೂ ಎರಡು ವರ್ಷವಿದೆ. ಆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾತ್ಯತೀತ ಜನತಾ ದಳ ಈಗಿನಿಂದಲೆ ತಯಾರಿ ನಡೆಸಿರುವುದು ರಾಜಕೀಯ ವಿಶೇಷ. ಬಿ-ಫಾರ್ಮ್ ಕೊಡುವುದಕ್ಕೆ ಕೆಲವು ತಾಸು ಮೊದಲು ಅಭ್ಯರ್ಥಿಯ ಹೆಸರನ್ನು ಘೋಷಿಸಿಸುವ ಪರಂಪರೆಯೂ ಇರುವ ಆ ಪಕ್ಷ ಆ ನೀತಿಗೆ ಭಿನ್ನವಾಗಿ “ಸಕಲ ಶಿಸ್ತು” ಸಹಿತ ಮುಂದುವರಿಯುವ ಎಲ್ಲ ಸಾಧ್ಯತೆಗಳೂ ಸ್ಪಷ್ಟವಾಗುತ್ತಿವೆ. ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮತ್ತು ಪಕ್ಷದ ಇನ್ನೊಬ್ಬ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮುಖಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಅದರ ಸೂಚನೆಗಳು ನಿಚ್ಚಳವಾಗಿವೆ. ಹೊಸ ಮುಖಗಳನ್ನು ನೋಡಬಯಸುವ ಮತದಾರರ ಮುಂದೆ “ಇನ್ನೂ ಹೆಸರು ಕೆಡಿಸಿಕೊಳ್ಳದ” ಯುವ ನಾಯಕರನ್ನು ತಂದರೆ ಅದರಿಂದ ರಾಜಕೀಯ ಲಾಭ ಹೆಚ್ಚೆಂಬ ಯೋಚನೆಯಲ್ಲಿ ಈ ತೀರ್ಮಾನಕ್ಕೆ ಪಕ್ಷದ ವರಿಷ್ಟ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಂದಿರುವಂತಿದೆ.


ಮೂವತ್ತು ನಲವತ್ತು ಸೀಟಿಗೆ ಸಮಾಧಾನಪಟ್ಟುಕೊಳ್ಳುವ ರಾಜಕೀಯವನ್ನು ತಾವು ಮಾಡುವುದಿಲ್ಲ. ಯಾರ ಹಂಗೂ ಇಲ್ಲದಂತೆ ರಾಜ್ಯ ಹಿತ ಕಾಯುವ ರಾಜಕಾರಣ ಮಾಡಲು ಏನೆಲ್ಲ ಬೇಕೋ ಆ ಕೆಲಸವನ್ನು ಪಕ್ಷ ಮಾಡಲಿದೆ. ಇತರ ಪಕ್ಷಗಳಿಗಿಂತ ಮುಂಚೆಯೇ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿ ಚುನಾವಣಾ ತಯಾರಿ ನಡೆಸುವಂತೆ ಸೂಚಿಸಲಾಗುವುದು. ನಮ್ಮ ಗೆಲುವಿನ ಗುರಿ ಕನಿಷ್ಟಪಕ್ಷ ೧೨೩ ಸೀಟು ಎಂದು ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ದಕ್ಷಿಣ ಕರ್ನಾಟಕದ ನಾಲ್ಕೈದು ಜಿಲ್ಲೆಗಳನ್ನು ಹೊರತಾಗಿಸಿದರೆ ಬೇರೆ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಮುಂಬೈ ಕರ್ನಾಟಕ, ಈಶಾನ್ಯ ಕರ್ನಾಟಕದಲ್ಲಿ ಪಕ್ಷದ ಪ್ರಭಾವ ಕಡಿಮೆ ಎನ್ನುವವರಿಗೆ ಈ ಬಾರಿಯ ಚುನಾವಣಾ ಫಲಿತಾಂಶ ಉತ್ತರ ಕೊಡಲಿದೆ ಎಂಬ ಆತ್ಮವಿಶ್ವಾಸದ ಮಾತನ್ನೂ ಅವರು ಆಡಿದ್ದಾರೆ. ದಕ್ಷಿಣ ಕರ್ನಾಟಕದ ಆ ನಾಲೈದು ಜಿಲ್ಲೆ ಎಂದರೆ ಒಕ್ಕಲಿಗ ಪ್ರಧಾನವೆಂದೂ ಮುಂಬೈ ಕರ್ನಾಟಕ, ಈಶಾನ್ಯ ಕರ್ನಾಟಕವೆಂದರೆ ಲಿಂಗಾಯತ ಪ್ರಧಾನ ಎಂದೂ ಓದಿಕೊಳ್ಳಬೇಕು. ಲಿಂಗಾಯತ ಕೋಟೆಗೆ ಲಗ್ಗೆ ಹಾಕುವುದು ಕುಮಾರಸ್ವಾಮಿ ಹಾಕಿಕೊಂಡಿರುವ ಸಮರ ತಂತ್ರವಾಗಿದೆ.


ಪ್ರಜ್ವಲ್ ರೇವಣ್ಣ, ಲೋಕಸಭೆಯಲ್ಲಿ ಮಾಡಿರುವ ಕೆಲವು ಭಾಷಣಗಳು ಜೆಡಿಎಸ್‌ನ ಕರ್ನಾಟಕ ಪರ ವಕೀಲಿಗೆ ಪೂರಕವಾಗಿರುವುದನ್ನು ನಾವು ಗಮನಿಸಬೇಕು. ಕಾವೇರಿ ನದಿ ನೀರು ಹಂಚಿಕೆ ಮುಖ್ಯವಾಗಿ ಮೇಕೆದಾಟು ಯೋಜನೆ ವಿಚಾರದಲ್ಲಿ ಅವರು ಮಂಡಿಸಿರುವ ಅಭಿಮತಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತೂಕಬದ್ಧವಾಗಿ ಮಾತಾಡುವ ಯುವ ನಾಯಕ ಎಂಬ ಗೌರವಭಾವ ಅವರ ಬಗ್ಗೆ ಮೂಡಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ, ಮಂಡ್ಯ ಲೋಕಸಭಾ ಚುನಾವಣೆಯನ್ನು ಸೋತ ತರುವಾಯದಲ್ಲಿ ಒಂದಿಷ್ಟು ಹಿನ್ನಡೆಯಾಗಿದ್ದು ದಿಟ. ಮದುವೆ, ಮಗು ಇತ್ಯಾದಿ ಸಾಂಸಾರಿಕವಾಗಿ ಏನೆಲ್ಲ ಆಗಬೇಕೋ ಅದೆಲ್ಲವನ್ನೂ ಪೂರೈಸಿರುವ ನಿಖಿಲ್ ಇದೀಗ ಸಂಪೂರ್ಣ ಸಜ್ಜಾಗಿ ರಾಜಕೀಯಕ್ಕೆ ಮರಳಿದ್ದಾರೆ. ಈ ಇಬ್ಬರೂ ಯುವ ಮುಖಗಳನ್ನು “ಜೋಡೆತ್ತು” ರೂಪದಲ್ಲಿ ಶಕ್ತಿಯಾಗಿ ಉಪಯೋಗಿಸಿಕೊಳ್ಳಲು ಜೆಡಿಎಸ್ ಮುಂದಾಗಿರುವುದು ಆ ಪಕ್ಷದ ದೃಷ್ಟಿಯಿಂದ ಧನಾತ್ಮಕ ಬೆಳವಣಿಗೆ.


ಕುಟುಂಬ ರಾಜಕೀಯದ ಆರೋಪ ಆ ಪಕ್ಷದ ಮೇಲೆ ಇದೆ. ಅದು ಹಾಗೇ ಮುಂದುವರಿಯಲಿದೆ. ಆದರೆ ಯಾವ ಪಕ್ಷ ಕುಟುಂಬ ರಾಜಕೀಯದಿಂದ ಮುಕ್ತವಾಗಿದೆ ಎಂದು ನೋಡಿದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ; ಗುಜರಾತದಿಂದ ಪಶ್ಚಿಮ ಬಂಗಾಲದವರೆಗೆ ಎಲ್ಲೆಲ್ಲೂ ಕುಟುಂಬ ರಾಜಕೀಯದ ಪರ್ವವೇ ನಡೆದಿರುವುದು ರಾಚುತ್ತದೆ. ಒಂದು ಕಾಲದಲ್ಲಿ ಇದಕ್ಕಾಗಿ ದೇವೇಗೌಡರನ್ನು ಟೀಕಿಸುತ್ತಿದ್ದವರೆಲ್ಲರೂ ಕುಟುಂಬ ರಾಜಕೀಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವುದಕ್ಕೆ ಇಲ್ಲಿ ಕರ್ನಾಟಕದಲ್ಲೇ ಹಲವಾರು ಉದಾಹರಣೆಗಳಿವೆ. ಅಜ್ಜ, ಅಪ್ಪಂದಿರು ಮಾಡಿದ ರಾಜಕೀಯಕ್ಕಿಂತ ಭಿನ್ನವಾದುದನ್ನು ಪ್ರಜ್ವಲ್ ಮತ್ತು ನಿಖಿಲ್ ಇಬ್ಬರೂ ಭವಿಷ್ಯದಲ್ಲಿ ಮಾಡುತ್ತಾರೆಂಬ ಭ್ರಮೆ ಯಾರಿಗೂ ಇಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ಕರ್ನಾಕದ ಹಿತ ಕಾಯುವಲ್ಲಿ ಪದೇ ಪದೇ ವಿಫಲವಾಗುತ್ತಿರುವುದರಿಂದ ಈ ಯುವ ಮುಖಗಳು ಸಮಾಧಾನಕರ ಬಹುಮಾನವನ್ನಾದರೂ ಗಳಿಸುವಂಥ ರಾಜಕೀಯವನ್ನು ಮಾಡಿಯಾರೆಂಬ ದೂರದ ವಿಶ್ವಾಸವಿದೆ.

ಹಾಗಂತ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ. ೨೦೧೩ರ ಚುನಾವಣೆಯಲ್ಲಿ ಗೆದ್ದ ಪಕ್ಷದ ಕೆಲವು ಶಾಸಕರು ಕಾಂಗ್ರೆಸ್ ಸೇರಿದರು. ೨೦೧೮ರ ಚುನಾವಣೆಯಲ್ಲಿ ಗೆದ್ದ ಕೆಲವರು ಬಿಜೆಪಿ ಸೇರಿದರು. ಮೂರ್ನಾಲ್ಕು ಜನ ವಿಧಾನ ಸಭೆ/ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯರು ಬೇಲಿ ಹಾರಲು ತಯಾರಾಗಿದ್ದಾರೆ. ಗೋಗರೆದು ಕಾಲಿಗೆ ಬಿದ್ದು ಟಿಕೆಟ್ ಪಡೆದ ಅನೇಕರು ಪಕ್ಷಕ್ಕೆ ಚೂರಿ ಹಾಕುವ ಕೆಲಸ ಮಾಡಿದರೆಂಬ ಕುಮಾರಸ್ವಾಮಿ ಅಳಲಿನಲ್ಲಿ ಅರ್ಥವಿದೆ. ಒಮ್ಮೆ ಕಾಂಗ್ರೆಸ್‌ಗೆ ಮಗದೊಮ್ಮೆ ಬಿಜೆಪಿಗೆ ಸರ್ಕಾರ ರಚಿಸುವುದಕ್ಕೆ ನೆರವಾಗುವುದಷ್ಟೇ ಜೆಡಿಎಸ್‌ನ ಕೆಲಸ ಎಂಬ ಮಾತು ಹರಿದಾಡುತ್ತಲೇ ಇದೆ. ಬಿಜೆಪಿ ನೆರವನ್ನು ಒಮ್ಮೆ ಪಡೆದು, ಮತ್ತೆ ಕಾಂಗ್ರೆಸ್ ಮಾತನ್ನು ನಂಬಿ ಎರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದುದು ಹೌದಾದರೂ ಅದರಿಂದ ಅವರಿಗೆ ರಾಜಕೀಯವಾಗಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಸಣ್ಣ ಪಕ್ಷವಾದರೆ ಇಂಥ ದುರವಸ್ತೆ ಸಹಜ ಎನ್ನುವುದು ಜೆಡಿಎಸ್ ವರಿಷ್ಟರಿಗೆ ಇದೀಗ ಮನವರಿಕೆಯಾಗಿದೆ ಎಂದೇ ಅವರು ೧೨೩ ಸೀಟಿನ ಗುರಿಯನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಾಕ್ಕೆ ಧುಮುಕ ಹೊರಟಿದ್ದಾರೆ. ೨೦೧೩ರ ಚುನಾವಣೆ ಪೂರ್ವದಲ್ಲಿ ಅತಂತ್ರ ವಿಧಾನ ಸಭೆ ಆದರೆ ಸೂಕ್ತ ಎನ್ನುತ್ತಿದ್ದ ವರಿಷ್ಟರು ಅದರಿಂದ ಪಕ್ಷಕ್ಕೆ ಆಗಿರುವ ಬಹಳ ದೊಡ್ಡ ಹಾನಿಯ ಹಿನ್ನೆಲೆಯಲ್ಲಿ ಈ ಗುರಿಯನ್ನು ಹಾಕಿಕೊಂಡಿರುವುದನ್ನು ಅಲ್ಲಗಳೆಯಲಾಗದು.
ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸುವುದಕ್ಕೆ “ಜೋಡೆತ್ತು” ಓಡಾಡಿ ಭಾಷಣ ಮಾಡಿದರೆ ಸಾಕೇ ಎನ್ನುವುದನ್ನು ನಾಯಕತ್ವ ಯೋಚಿಸಬೇಕಿದೆ. ಬಹಳ ಜನ
ಮರೆತು ಹೋಗಿರಬಹುದಾದ ಮಾತು ಎಂದರೆ ಕುಮಾರಸ್ವಾಮಿಯವರು ಹುಬ್ಬಳ್ಳಿಯಲ್ಲಿ ಮನೆ ಮಾಡಿ ಆ ಭಾಗದಲ್ಲಿ ಪಕ್ಷದ ಸಂಘಟನೆಗೆ ಒತ್ತು ಕೊಡಲಿದ್ದಾರೆ ಎನ್ನುವುದು. ಹುಡುಕಿ ಹುಡುಕಿ ಅಂತಿಮವಾಗಿ ಭವ್ಯ ನಿವಾಸವೊಂದನ್ನು ಆಯ್ಕೆ ಮಾಡಿದ್ದಲ್ಲೀವರೆಗಿನ ಸುದ್ದಿ ಮಾಧ್ಯಮದಲ್ಲಿ ಬಂತು. ಮುಂದೇನಾಯಿತು ಎನ್ನುವುದು ಗೊತ್ತಾಗಲಿಲ್ಲ. ಯಾಕಾಗಿ ಕುಮಾರಸ್ವಾಮಿಯವರು ಹುಬ್ಬಳ್ಳಿಯಲ್ಲಿ ಮನೆ ಮಾಡುವ ನಿರ್ಧಾರಕ್ಕೆ ಬಂದರು; ನಂತರದಲ್ಲಿ ಯಾಕಾಗಿ ಹಿಂದಡಿ ಇಟ್ಟರು ಎನ್ನುವುದು ಮನೆ ಹುಡುಕಲೆಂದು ಬಹಳ ಓಡಾಡಿದ ಪಕ್ಷದ ಮಾಜಿ ಶಾಸಕ ಕೋನರೆಡ್ಡಿ ಅವರಿಗೂ ಗೊತ್ತಿರಲಾರದು. ಅದೇನೇ ಇರಲಿ, ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬೆಳೆಯದಿದ್ದರೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಆಗದ ಮಾತೆಂಬ ನಿಲುವಿಗೆ ಪಕ್ಷ ಬಂದಿರುವುದು ಒಳ್ಳೆಯ ನಿಲುವೇ ಸೈ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೇ ತಿಂಗಳ ೩೦ ರಂದು ಸಿಂಧಗಿ ಮತ್ತು ಹಾನಗಲ್ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯನ್ನು ನೋಡಬೇಕಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಕ್ಕೆ ಪಕ್ಷ ನಿರ್ಧರಿಸಿದೆ ಎಂದು ಕುಮಾರಸ್ವಾಮಿ ಪ್ರಕಟಿಸಿದ್ದಾಗಿದೆ. ಬಿಜೆಪಿಗೆ ಸಂತೋಷವೂ ಕಾಂಗ್ರೆಸ್‌ಗೆ ಸಂಕಟಕರವೂ ಆದ ಬೆಳವಣಿಗೆ ಇದು. ಮುಸ್ಲಿಂ ಮತಗಳು ಆ ಎರಡು ಪಕ್ಷದ ನಡುವೆ ಹಂಚಿಹೋದರೆ ಅದರಿಂದ ತನ್ನ ಚುನಾವಣಾ ಭವಿಷ್ಯ ಕುದುರಬಹುದು ಎಂಬ ಸಂತೋಷದ ಲೆಕ್ಕಾಚಾರ ಬಿಜೆಪಿಯದು. ಮುಸ್ಲಿಂ ಅಭ್ಯರ್ಥಿಯೇ ಇರುವಾಗ ಆ ಸಮುದಾಯದ ಮತಗಳು ಜೆಡಿಎಸ್‌ನತ್ತ ಹೋಗುವ ಸಹಜ ಆತಂಕ ಕಾಂಗ್ರೆಸ್‌ನದಾಗಿದೆ. ಬಿಜೆಪಿಯನ್ನು ಸೋಲಿಸುವುದಕ್ಕೆ ಜೆಡಿಎಸ್‌ನಿಂದ ಆಗದು ಎಂಬ ತೀರ್ಮಾನಕ್ಕೆ ಬರುವ ಮುಸ್ಲಿಂ ಮತದಾರರ ಸಂಖ್ಯೆ ಬಹಳ ಇರಲಾರದು. ಈ ಪೈಕಿ ಸಿಂಧಗಿ, ಜೆಡಿಎಸ್ ಶಾಸಕರಿದ್ದ ಕ್ಷೇತ್ರ. ಹಾನಗಲ್‌ನಿಂದ ಬಿಜೆಪಿ ಗೆದ್ದಿತ್ತು. ಹಾಗೆ ನೋಡಿದರೆ ಕಾಂಗ್ರೆಸ್ ಒಂದು ಕ್ಷೇತ್ರವನ್ನು ಗೆದ್ದರೂ ಅದಕ್ಕೆ ಲಾಭವೇ. ಸಿಂಧಗಿಯನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಸಾಧ್ಯವೇ ಎನ್ನುವುದು ಕುತೂಹಲಕಾರಿ.
ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ಮತದಾರ ಸಮುದಾಯ ತೆಗೆದುಕೊಂಡಿರುವ ನಿರ್ಧಾರ ಜೆಡಿಎಸ್‌ಗೆ ಉತ್ತೇಜಕವಾಗಿರುವಂತಿದೆ.

ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮತದಾರರು ಕಾಂಗ್ರೆಸ್, ಸಿಪಿಎಂ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ತೃಣಮೂಲ ಕಾಂಗ್ರೆಸ್ ಜೊತೆ ನಿಂತಿರುವುದು ಜೆಡಿಎಸ್ ಪಾಳಯದಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ದೇಶದ ಉದ್ದಗಲಕ್ಕೆ ಇಂಥದೇ ಬೆಳವಣಿಗೆ ನಡೆಯುತ್ತಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣಾ, ಆಂಧ್ರ ಪ್ರದೇಶ, ತಮಿಳುನಾಡು ಹೀಗೆ ಯಾವುದೇ ರಾಜ್ಯದ ಚುನಾವಣೆಗಳನ್ನು ನೋಡಿದರೂ ಮುಸ್ಲಿಂ ಓಟುದಾರರು ರಾಷ್ಟ್ರೀಯ ಪಕ್ಷಗಳ ಬದಲಿಗೆ ಪ್ರಾದೇಶಿಕ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಗೊತ್ತಾಗುತ್ತದೆ. ಅಯೋಧ್ಯಾದಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಕಾಂಗ್ರೆಸ್‌ಗೆ ಬೆನ್ನು ಹಾಕಿದ ಮುಸ್ಲಿಮರು ಸನಿಹ ಭವಿಷ್ಯದಲ್ಲಿ ಆ ಕಡೆ ಮತ್ತೆ ಮುಖ ತಿರುಗಿಸುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ.
ಇಲ್ಲಿ ಕರ್ನಾಟಕದಲ್ಲಿ ನಿರೀಕ್ಷೆಗಿಂತ ವೇಗವಾಗಿ ಬಿಜೆಪಿ ಬೆಳೆಯುತ್ತಿರುವುದು ಮುಸ್ಲಿಮರ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಜೊತೆಗೆ ಹೋಗಬೇಕೋ ಅಥವಾ ಜೆಡಿಎಸ್‌ನಲ್ಲಿ ಆಶ್ರಯ ಕಂಡುಕೊಳ್ಳಬೇಕೋ ಎಂಬ ದ್ವಂದ್ವ ಇಲ್ಲ ಎಂದಲ್ಲ. ಆದರೆ ಜೆಡಿಎಸ್, ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹೂಡುವುದಕ್ಕೆ ತೆಗೆದು ಕೊಂಡಿರುವ ತೀರ್ಮಾನ ಆ ಸಮುದಾಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಏಐಎಂಐಎಂ ಪಕ್ಷ ಈ ಉಪ ಚುನಾವಣೆಯಲ್ಲಿ ಏನು ಮಾಡುತ್ತದೋ ನೋಡಬೇಕು. ಅದರ ಮುಖಂಡ ಅಸಾದುದ್ದೀನ್ ಓವೈಸಿ, ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಪ್ರಕಟಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರೀ ಆಘಾತಕಾರಿ ಸುದ್ದಿ. ಓವೈಸಿಯವರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಶಕ್ತಿ ಇಲ್ಲವಾಗಿರಬಹುದು. ಆದರೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೀಳಬಹುದಾದ ಓಟುಗಳನ್ನು ಒಡೆಯುವ ಮೂಲಕ ಆ ಅಭ್ಯರ್ಥಿಗಳನ್ನು ಸೋಲಿಸುವ ಶಕ್ತಿ ಇದೆ. ಇದನ್ನು ಕಾಂಗ್ರೆಸ್ ಸುಲಭದಲ್ಲಿ ಜೀರ್ಣಿಸಿಕೊಳ್ಳಲಾರದು.
ಮುಖ್ಯವಾಗಿ ಜೆಡಿಎಸ್‌ನಲ್ಲಿ ಮುಸ್ಲಿಂ ನಾಯಕತ್ವದ ಕೊರತೆ ಇದೆ. ಇದೇ ಕಾರಣವಾಗಿಯೋ ಏನೋ, ಸಿ.ಎಂ. ಇಬ್ರಾಹಿಂರನ್ನು ಜೆಡಿಎಸ್‌ಗೆ ತರುವ ಯತ್ನ ನಿರಂತರವಾಗಿ ನಡೆದಿರುವುದು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದ ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಸಹವಾಸ ಸಾಕಾಗಿದೆ ಎನ್ನುವುದು ಅವರ ಆಪ್ತ ವಲಯದ ಅಂಬೋಣ. ತಮ್ಮ ರಾಜಕೀಯ ಹಿರಿತನಕ್ಕೆ ಕಾಂಗ್ರೆಸ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ ಎಂಬ ನೋವೂ ಅವರಲ್ಲಿ ಮನೆ ಮಾಡಿದೆಯಂತೆ. ಇಬ್ರಾಹಿಂ ಅವರನ್ನು ಪಕ್ಷಕ್ಕೆ ಕರೆದು ತರುವುದು ಮತ್ತು ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಪ್ರಸ್ತುತ ಜೆಡಿಎಸ್‌ನಲ್ಲಿ ನಡೆದಿರುವ ಆಂತರಿಕ ಚರ್ಚೆ ಎನ್ನಲಾಗುತ್ತಿದೆ.

 

Girl in a jacket
error: Content is protected !!