ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಡಾ.ಕಾಂತರಾಜ್ ಆಯೋಗದ ವರದಿ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ಅದನ್ನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸುವ ಕೆಲಸವನ್ನು ಆಯೋಗದ ಅಧ್ಯಕ್ಷರು ಆಗ ಮಾಡಲಿಲ್ಲ. ವರದಿಯಲ್ಲಿರುವ ಶಿಫಾರಸುಗಳ ವಿರುದ್ಧ ಹೈಕೋರ್ಟ್‌ನಲ್ಲಿ ಖಟ್ಲೆ ದಾಖಲಾಗಿರುವುದರಿಂದ ಅದು ಇತ್ಯರ್ಥವಾಗುವರೆಗೆ ಕಾಯಬೇಕಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ
ಜಾತಿ ಸಮೀಕ್ಷೆ ಆಗಬೇಕೆಂಬ ಆಗ್ರಹಕ್ಕೆ ಬಹುದೊಡ್ಡ ಬೆಂಬಲ ದೇಶವ್ಯಾಪಿ ವ್ಯಕ್ತವಾಗುತ್ತಿದೆ. ಕರ್ನಾಟಕ ಈಗಾಗಲೇ ಈ ನಿಟ್ಟಿನಲ್ಲಿ ದಾಪುಗಾಲನ್ನಿಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧವಾದ ಡಾ.ಕಾಂತರಾಜ್ ಆಯೋಗದ ವರದಿ ಅತ್ತ ಗೆದ್ದಲು ಹಿಡಿಯುತ್ತಿದೆ. ಇತ್ತ ಸಿದ್ದರಾಮಯ್ಯ ಹಾಗೂ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಡುವೆ ಕೆಸರೆರಚಾಟಕ್ಕೆ ವೇದಿಕೆ ಕಲ್ಪಿಸಿದೆ. ಇವರಿಬ್ಬರ ನಡುವಣ, ಮುಂದಿನ ಚುನಾವಣೆವರೆಗೂ ನಡೆಯಬಹುದಾದ ವಾಗ್ಯುದ್ಧ ಆಡಳಿತಾರೂಢ ಬಿಜೆಪಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗುವ ಲಕ್ಷಣಗಳು ತೋರುತ್ತಿವೆ.
ತಾವು ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಎಂದು ರಚಿಸಿದ್ದ ಡಾ. ಕಾಂತರಾಜ್ ನೇತೃತ್ವದ ಆಯೋಗದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ನೆನಗುದಿಗೆ ದೂಡಿದ ಆರೋಪವನ್ನು ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಮೇಲೆ ಹೊರಿಸಿದ್ದಾರೆ. ಅದನ್ನು ಸಮರ್ಥಿಸುವುದಕ್ಕೆ ತಮ್ಮದೇ ಆದ ಕೆಲವು ಸಾಕ್ಷ್ಯಾಧಾರಗಳನ್ನೂ ಅವರು ಒದಗಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದುದು ೧೯೧೩ರಲ್ಲಿ. ಮರು ವರ್ಷವೇ ಆಯೋಗವನ್ನು ಸರ್ಕಾರ ರಚಿಸಿತು. ಆಯೋಗ ತನ್ನ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸುವ ಹಂತ ಮುಟ್ಟುವಷ್ಟರಲ್ಲಿ ೧೯೧೮ರ ಚುನಾವಣೆ ಘೋಷಣೆಯಾಗಿತ್ತು. ಚುನಾವಣೆ ಬಳಿಕ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕುಮಾರಸ್ವಾಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತಾದರೂ ಈ ವರದಿಯನ್ನು ಮಂಡಿಸುವ ಜವಾಬ್ದಾರಿಯನ್ನು ಸಿಎಂ ನಿಭಾಯಿಸಲಿಲ್ಲ ಎನ್ನುವುದು ಸಿದ್ದರಾಮಯ್ಯ ಮಾಡುತ್ತಿರುವ ಆರೋಪ. ಮಾತ್ರವಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸುವುದಕ್ಕೆ ಸಿದ್ಧತೆ ಮಾಡುತ್ತಿರುವಾಗ ಅವರನ್ನು ಕುಮಾರಸ್ವಾಮಿಯವರು ಬೆದರಿಸಿ ಸುಮ್ಮನಾಗುವಂತೆ ಮಾಡಿದರು ಎಂದೂ ದೂರಿದ್ದಾರೆ.
ಈ ಆರೋಪವನ್ನು ಕುಮಾರಸ್ವಾಮಿ ನುಂಗಿಕೊಂಡು ಕುಳಿತಿಲ್ಲ. ತಾವು ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರಷ್ಟೇ ಅಲ್ಲ, ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಮಾತ್ರವಲ್ಲ ಅದೇ ಪಕ್ಷದ ಹಲವರು ಸಚಿವರೂ ಇದ್ದರು. ಆಗ ಈ ಪ್ರಸ್ತಾಪ ಮಾಡದೆ ಈಗ ವೃಥಾ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಹೇಳುವುದರಲ್ಲಿ ಒಂದಿಷ್ಟು ತಥ್ಯವಿರುವುದನ್ನು ಅಲ್ಲಗಳೆಯಲಾಗದು. ಕಾಂತರಾಜ್ ವರದಿ ಸಿದ್ಧವಾದಾಗ ಚುನಾವಣೆ ಘೋಷಣೆಯಾಗಿದ್ದು ನಿಜ. ಆದರೆ ವರದಿಯನ್ನು ಸರ್ಕಾರ ಸ್ವೀಕರಿಸುವುದಕ್ಕೆ ಸಿದ್ದರಾಮಯ್ಯನವರಿಗೆ ಯಾವುದೇ ನಿರ್ಬಂಧವೂ ಇರಲಿಲ್ಲ. ಏಕೆಂದರೆ ಚುನಾವಣೆ ಘೋಷಣೆಯಾದ ಬಳಿಕ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವರೆಗೂ ಉಸ್ತುವಾರಿ ಮುಖ್ಯಮಂತ್ರಿ ಅವರೇ ಆಗಿದ್ದರು. ಉಸ್ತುವಾರಿ ಸರ್ಕಾರಕ್ಕೆ, ಮುಖ್ಯಮಂತ್ರಿಗೆ ಯಾವುದೇ ನೀತಿ ಕುರಿತ ತೀರ್ಮಾನ ತೆಗೆದುಕೊಳ್ಳಲು ಸಂವಿಧಾನ ರೀತ್ಯ ಅವಕಾಶವಿಲ್ಲ. ಆದರೆ ವರದಿಯೊಂದನ್ನು ಸ್ವೀಕರಿಸುವುದಕ್ಕೆ ಯಾವುದೇ ಪ್ರತಿಬಂಧವೂ ಇರಲಿಲ್ಲ. ಇದನ್ನು ಹಿನ್ನೆಲೆಯಾಗಿಟ್ಟು ನೋಡಿದಾಗ ಸಿದ್ದರಾಮಯ್ಯನವರಿಗೂ ಈ ವರದಿ ಬಹಿರಂಗ ಆಗುವುದು ಒಳಗೊಳಗೇ ಬೇಕಾಗಿರಲಿಲ್ಲ ಎಂಬ ಅನುಮಾನ ಕುಮಾರ ಸ್ವಾಮಿಯವರಿಗೆ ಬಂದಂತೆ ಅನೇಕರಿಗೆ ಬಂದಿರುವ ಸಾಧ್ಯತೆ ಇದೆ.
ಯಾವುದೇ ಆಯೋಗ ರಚನೆಯಾದರೂ ಅಧ್ಯಕ್ಷರಿಗೆ ನೆರವಾಗಲೆಂದು ಅವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸಲು ಕಾರ್ಯದರ್ಶಿಯೊಬ್ಬರನ್ನು ಸರ್ಕಾರ ನೇಮಕ ಮಾಡುತ್ತದೆ. ತಾವು ಆ ವರದಿಯನ್ನು ಕಾರ್ಯದರ್ಶಿಗೆ ಸಲ್ಲಿಸಿರುವುದಾಗಿ ಕಾಂತರಾಜ್ ಹೇಳಿದ್ದಾರೆ. ಆಯೋಗದ ಅಧ್ಯಕ್ಷರು ಮಾಡಿರುವ ತಪ್ಪು ಅದು. ಪಕ್ಕಾ ಸರ್ಕಾರ ಇಲ್ಲ ಎಂದಾದರೆ ಆ ವರದಿಯನ್ನು ಆಯೋಗದ ಅಧ್ಯಕ್ಷರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬಹುದಾಗಿತ್ತು. ಅದೂ ಸಮ್ಮತವಾಗದ ಪಕ್ಷದಲ್ಲಿ ಸೀದಾ ರಾಜಭವನಕ್ಕೆ ತೆರಳಿ ರಾಜಜ್ಯಪಾಲರಿಗೆ ಸಲ್ಲಿಸಲು ಅವಕಾಶವಿತ್ತು. ಇದ್ಯಾವುದನ್ನೂ ಮಾಡದ ಕಾಂತರಾಜ್, ಈಗ ಪಿಳಿಪಿಳಿ ಕಣ್ಣುಬಿಡುತ್ತಿರುವುದು ಎಲ್ಲೋ ಏನೋ ಎಡವಟ್ಟಾಗಿದೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತಿದೆ. ಆಯೋಗದ ಕಾರ್ಯದರ್ಶಿ ಆಯೋಗದ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರಾದರೂ ವರದಿಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾಂತರಾಜ್ ವಿವರಿಸುವ ಅಗತ್ಯವಿದೆ. ಈ ಮಧ್ಯೆ ಆಯೋಗದ ವರದಿ ಒಳಗೊಂಡಿರುವ ಶಿಫಾರಸುಗಳ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಸರ್ಕಾರ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕಾಗಿದೆ. ಕೋರ್ಟ್ ಎಲ್ಲ ವಿಚಾರಗಳನ್ನು ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಕೆಲವು ಕಾಲ ಹಿಡಿಯುತ್ತದೆ. ಇದು ಆಳುವ ವರ್ಗಕ್ಕೆ ಅನುಕೂಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿರುವ ಪ್ರಕಾರ ಆಯೋಗದ ಪ್ರತಿಗೆ ಅಧ್ಯಕ್ಷರು ಸಹಿಯನ್ನೇ ಮಾಡಿಲ್ಲ. ಸಹಿ ಮಾಡದ ಯಾವುದೇ ವರದಿ ಅಧಿಕೃತವಾಗುವುದಾದರೂ ಹೇಗೆ…? ಅದನ್ನು ಅಂಗೀಕರಿಸುವುದಾದರೂ ಹೇಗೆ…?
ಸಿದ್ದರಾಮಯ್ಯ ಸರ್ಕಾರ ಈ ಆಯೋಗದ ವರದಿಗೆ ಕಾದಿದ್ದುದು ನಿಜ. ಆ ಸರ್ಕಾರ ಆಯೋಗದ ಕಾರ್ಯಕ್ಕೆ ಮಾಡಿರುವ ವೆಚ್ಚ ಬರೋಬ್ಬರಿ ೧೬೯ ಕೋಟಿ ರೂಪಾಯಿ. ವಿಚಿತ್ರವಾದೊಂದು ರಾಜಕೀಯಕ್ಕೆ ಈ ವರದಿ ಕಾರಣವಾಗಿರುವುದನ್ನು ನಾವು ಈಗ ನೋಡುತ್ತಿದ್ದೇವೆ. ಇದನ್ನು ನೋಡುವುದಕ್ಕೆ ಮೊದಲು ಇತಿಹಾಸದತ್ತ ಒಂದು ಇಣಿಕು ನೋಟದ ಅಗತ್ಯವಿದೆ. ನಮ್ಮಲ್ಲಿ ಸ್ವಾತಂತ್ರ್ಯಾನಂತರ ಜಾತಿ ಗಣತಿ ಎನ್ನುವುದು ನಡೆದಿಲ್ಲ. ಇದುವರೆಗೆ ನಡೆದಿರುವುದೆಲ್ಲವೂ ಜನ ಗಣತಿ ಮಾತ್ರ. ಅದೂ ಕೂಡಾ ಸಮಗ್ರವಾಗಿ ನಡೆದಿಲ್ಲ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ೧೯೩೯ರಲ್ಲಿ ಜಾತಿ ಗಣತಿ ನಡೆದಿತ್ತು. ಇದಾಗಿ ಈಗ ತೊಂಭತ್ತು ವರ್ಷ. ಅಷ್ಟು ವರ್ಷದ ಹಿಂದಿನ ವರದಿಯನ್ನಿಟ್ಟುಕೊಂಡು ಆ ಜಾತಿ ಜನ ಇಷ್ಟಿದ್ದಾರೆ, ಈ ಜಾತಿ ಜನ ಇಷ್ಟಿದ್ದಾರೆಂಬ ಲೆಕ್ಕಾಚಾರದಲ್ಲಿ ರಾಜಕಾರಣ ನಡೆದುಕೊಂಡು ಬಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಕೊಟ್ಟಿರುವ ೧೫+೩= ಶೇಕಡಾ ೧೮ ಮೀಸಲಾತಿ ಸೇರಿದಂತೆ ವಿವಿಧ ಮೀಸಲಾತಿಗಳನ್ನು ಹೆಚ್ಚಿಸಬೇಕೆಂಬ ಆಗ್ರಹ ಹೆಚ್ಚುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕೆನ್ನುವುದು ಆಗ್ರಹದ ತಿರುಳು. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನ ರೀತ್ಯ ಪ್ರತಿಶತ ಐವತ್ತನ್ನು ಮೀಸಲಾತಿ ಪ್ರಮಾಣ ಹೆಚ್ಚಬಾರದು. ಆದಾಗ್ಯೂ ಕೇಂದ್ರ ಸರ್ಕಾರ ಶೇ ೧೦ ಮೀಸಲಾತಿಯನ್ನು ಆರ್ಥಿಕ ದುರ್ಬಲರಿಗೆ ಘೋಷಿಸಿದೆ.
ಜನಸಂಖ್ಯೆ ಗಣತಿ ಮಾಡಿ ಲೆಕ್ಕ ತೆಗೆದರೆ ಈಗ ಇರುವ ರಾಜಕೀಯ ಮೇಲುಗೈಯಾಟದಲ್ಲಿ ಏರುಪೇರಾಗುತ್ತದೆನ್ನುವುದು ಕಾಂತರಾಜ್ ವರದಿ ಬಹಿರಂಗಕ್ಕೆ ಬಾರದೇ ಇರುವುದಕ್ಕೆ ಮುಖ್ಯ ಕಾರಣವೆಂದು ದಲಿತ ಸಮುದಾಯ ಧ್ವನಿ ಏರಿಸಿದೆ. ಲಿಂಗಾಯತರು, ಒಕ್ಕಲಿಗರು, ಕುರುಬರು ಪ್ರಸ್ತುತ ಕರ್ನಾಟಕದಲ್ಲಿ ರಾಜಕೀಯವಾಗಿ ಬಹಳ ಪ್ರಬಲರಾಗಿದ್ದಾರೆ. ಲಿಂಗಾಯತರ ಸಂಖ್ಯೆ ಹೇಳಿಕೊಳ್ಳುತ್ತಿರುವಷ್ಟು ಇಲ್ಲ ಎನ್ನುವುದು ಆಯೋಗದ ವರದಿಯಲ್ಲಿದೆ ಎನ್ನಲಾಗಿದೆ. ಹಾಗಾಗಿ ಲಿಂಗಾಯತ ಸಮುದಾಯಕ್ಕೆ ವರದಿ ಬಯಲಿಗೆ ಬರುವುದು ಬೇಕಾಗಿಲ್ಲ. ಅದು ದೂಳು ಹಿಡಿಯುವುದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪಕ್ಷದಲ್ಲಿರುವ ವೀರಶೈವ ಲಿಂಗಾಯತರಿಗೆ ಬೇಕಾಗಿದೆ. ಕಾಂಗ್ರೆಸ್‌ನ ಎಂ.ಬಿ. ಪಾಟೀಲ, ಶ್ಯಾಮನೂರು ಶಿವಶಂಕರಪ್ಪ ಮತ್ತಿತರ ನಾಯಕರಿಗೆ ಕೂಡಾ ವರದಿ ಒಳಗೇ ಉಳಿಯುವುದು ಬೇಕಾಗಿದೆ.
ಒಕ್ಕಲಿಗ ಸಮುದಾಯವೂ ವರದಿ ಬಹಿರಂಗವಾಗದೇ ಇರುವುದರಿಂದ ಖುಷ್ ಆಗಿದೆ. ಅತ್ತ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆ ಪಕ್ಷದ ಒಕ್ಕಲಿಗ ಮುಖಂಡರು, ಬಿಜೆಪಿಯ ಆರ್.ಅಶೋಕ್, ಸದಾನಂದ ಗೌಡ, ಸಿ.ಟಿ.ರವಿ ಮುಂತಾದವರು ಒಳಗೊಳಗೇ ಮಂಡಿಗೆ ಮೆಲ್ಲುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ ಸಮುದಾಯದ ಗುರುಗಳು, ಸ್ವಾಮಿಗಳು, ಜಗದ್ಗುರುಗಳು ವರದಿ ಅಂಗೀಕರಿಸಿದರೆ ಅದಕ್ಕೆ ಕಾರಣರಾದವರಿಗೆ ಶಾಪ ಹಾಕಲು ಅಣಿಯಾಗುತ್ತಿದ್ದಾರೆ. ಆಯೋಗದ ವರದಿ ಪ್ರಕಾರ ಕುರುಬರ ಸಂಖ್ಯೆ ಹೇಳುತ್ತಿರುವಷ್ಟು ಇಲ್ಲ ಎನ್ನಲಾಗಿದೆ. ಹಾಗಾಗಿ ಅದು ಬಹಿರಂಗವಾಗುವುದು ಸ್ವತಃ ಸಿದ್ದರಾಮಯ್ಯನವರಿಗೂ ಬೇಕಾಗಿಲ್ಲ. ತಮ್ಮ ಪಕ್ಷದ ಸಹಭಾಗಿತ್ವವಿದ್ದ ಸಮ್ಮಿಶ್ರ ಸರ್ಕಾರ ಅದನ್ನು ವಿಧಾನ ಮಂಡಲದಲ್ಲಿ ಮಂಡಿಸುವಂತೆ ಮಾಡಲು ಸಮರ್ಥರಿದ್ದರೂ ಸಿದ್ದರಾಮಯ್ಯ ಆಗ ಸುಮ್ಮನಿದ್ದು ಈಗ ಮಾಡುತ್ತಿರುವ ಆರೋಪಕ್ಕೆ ಕಾಲುಕೈ ಇಲ್ಲ ಎನ್ನಬೇಕಾಗುತ್ತದೆ.
ವರದಿಯನ್ನು ಹೊರಕ್ಕೆ ತನ್ನಿ ಎಂಬ ಕೂಗು ದಲಿತ ಸಮುದಾಯದಿಂದ ಕೇಳಿಬಂದಿದೆ. ರಾಜ್ಯದಲ್ಲಿ ಹಾಲಿ ದಲಿತ ಸಮುದಾಯ ಅತಿ ದೊಡ್ಡ ಸಂಖ್ಯೆಯಲ್ಲಿರುವುದನ್ನು ಮತ್ತು ಮುಸ್ಲಿಂ ಸಮುದಾಯ ಎರಡನೇ ದೊಡ್ಡ ಸಂಖ್ಯೆಯಲ್ಲಿರುವುದನ್ನು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. ಹಾಗಾಗಿ ಅದಕ್ಕೆ ಅನುಗುಣವಾಗಿ ರಾಜಕೀಯ ಸೌಲಭ್ಯ ಸವಲತ್ತನ್ನು ಈ ಎರಡು ಸಮುದಾಯಗಳು ಕೇಳುವ ಸಾಧ್ಯತೆ ಇದ್ದೇ ಇದೆ. ಕಾಂತರಾಜ್ ತಮ್ಮ ವರದಿಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸದೇ ಇರುವುದು; ವರದಿಗೆ ಸಹಿ ಹಾಕದೇ ಇರುವುದು; ಆಯೋಗದ ಭಾಗವಾಗಿರುವ ಕಾರ್ಯದರ್ಶಿಗೆ ತಾನು ವರದಿಯನ್ನು ಸಲ್ಲಿಸಿದ್ದೇನೆಂದು ಆಯೋಗದ ಅಧ್ಯಕ್ಷರು ಹೇಳಿರುವುದು ಬಗೆಬಗೆಯ ಅನುಮಾನ ಹುಟ್ಟುವುದಕ್ಕೆ ಕಾರಣವಾಗಿದೆ.
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯೂ ಕೊಳೆಯುತ್ತ ಬಿದ್ದಿದೆ. ಒಳ ಮೀಸಲಾತಿಗಾಗಿ ದಲಿತ ಪಂಗಡದ ಎಡಗೈ ಸಮುದಾಯ ಒತ್ತಾಯ ಮಾಡುತ್ತಿರುವುದನ್ನು ಆಯೋಗ ಎತ್ತಿ ಹಿಡಿದಿದೆ. ಎಡಗೈ ಸಮುದಾಯಕ್ಕೆ ಬಿಜೆಪಿ ಒತ್ತಾಸೆಯಾಗಿ ನಿಂತಿದೆ. ಅತ್ತ ದಲತ ಬಲಗೈ ಪಂಗಡದವರು ಹೆಚ್ಚಿನ ರಾಜಕೀಯ ಮೀಸಲಾತಿಗೆ ಕಾಂಗ್ರೆಸ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ತನ್ನ ಬೆಂಬಲಕ್ಕೆ ನಿಂತಿರುವ ಬಲಗೈಯವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಕಾಂಗ್ರೆಸ್‌ಗೂ ಇಲ್ಲವಾಗಿದೆ. ಆ ಗುದ್ದಾಟ ನಡೆದಿರುವಾಗಲೇ ಕಾಂತರಾಜ್ ವರದಿ ನೆಪದಲ್ಲಿ ಮತ್ರತೊಂದು ಹೊಯ್‌ಕೈ ಶುರುವಾಗಿದೆ.
ಬಹುದೊಡ್ಡ ಪಿಡುಗಾಗಿರುವ ಜಾತಿ ಪದ್ಧತಿ ವಿನಾಶವಾಗದೆ ಭಾರತದ ಉದ್ಧಾರವಿಲ್ಲ ಎಂದವರು ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ. ಜಾತಿ ವ್ಯವಸ್ಥೆ ಜೀವಂತ ಇರುವವರೆಗೂ ಮೇಲು ಕೀಳು ಎಂಬ ಅ-ವ್ಯವಸ್ಥೆ ಅಸ್ತಿತ್ವದಲ್ಲಿರುತ್ತದೆ. ಅದರ ಆಮೂಲಾಗ್ರ ನಿರ್ಮೂಲನಕ್ಕೆ ನಾಗರಿಕ ಸಮಾಜ ಪಣ ತೊಡಬೇಕಾಗಿದೆ ಎಂಬ ಅವರ ಮಾತು ಒಂದು ಕಿವಿಯಲ್ಲಿ ತೂರಿ ಇನ್ನೊಂದರ ಮೂಲಕ ಹಾದು ಹೋಗಿದೆ. ಜಾತಿ ವ್ಯವಸ್ಥೆ ನಿರ್ಮೂಲನವಾಗುವುದು ಭಾರತದ ಸಂದರ್ಭದಲ್ಲಿ ಯಾರಿಗೂ ಬೇಡವಾಗಿರುವುದು ಒಂದು ವಿಪರ್ಯಾಸ.
ವರ್ಗ ನಾಶದ ಬಗ್ಗೆ ಮಾರ್ಕ್ಸ್ ಮಾತಾಡಿದರು. ಅವರಿದ್ದ ಪ್ರದೇಶ, ಸನ್ನಿವೇಶದಲ್ಲಿ ಜಾತಿ ಪಿಡುಗಾಗಿರಲಿಲ್ಲ. ಹಾಗಾಗಿ ಅವರು ವರ್ಗದ ಬಗ್ಗೆ ಮಾತ್ರವೇ ಮಾತಾಡಿದರು. ಭಾರತದಂಥ ಬಹು ಜಾತಿ ಪ್ರದೇಶದಲ್ಲಿ ವರ್ಗ ನಾಶದ ಜೊತೆಗೇ ಜಾತಿ ನಾಶವೂ ಆಗಬೇಕೆಂಬುದು ಲೋಹಿಯಾ ವಾದ. ಮಾರ್ಕ್ಸ್ ಪ್ರಣೀತ ಸಿದ್ಧಾಂತದ ಪ್ರಭಾವಕ್ಕೆ ಒಳಗಾದ ದೇಸೀ ಕಮ್ಯೂನಿಸ್ಟರು ಕೂಡಾ ವರ್ಗದ ಬಗ್ಗೆ ಮಾತಾಡಿದರೇ ಹೊರತೂ ಜಾತಿ ವಿನಾಶದ ಬಗ್ಗೆ ಮಾತಾಡಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಪ್ರಾಯಃ ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿಯ ಹಿನ್ನಡೆಗೆ ಕಾರಣವಾದ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದಾಗಿರಬಹುದು. ಅದು ಒತ್ತಟ್ಟಿಗಿರಲಿ. ಭಾರತೀಯರ ಬೇಕು?-ಡಗಳ ಕಾರಣವಾಗಿ ತಮ್ಮದೇ ಸಿದ್ಧಾಂತದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ರಾಜಕೀಯ ಪಕ್ಷಗಳು ಕೂಡಾ ಜಾತಿ ವಿನಾಶದ ಮಾತನ್ನಾಡುತ್ತಿಲ್ಲ. ಜಾತಿ ವ್ಯವಸ್ಥೆಯೇ ಅವುಗಳ ರಾಜಕೀಯ ತಳಹದಿ ಆಗಿರುವುದು ಮೇಲು ನೋಟಕ್ಕೇ ಒಡೆದೆದ್ದು ಕಾಣುವ ಸತ್ಯ.