ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು..

Share

ಆಧುನಿಕ ಮನುಷ್ಯನೆಂದಾಗ ಸಂಪ್ರದಾಯದ ಕೊಂಡಿಗಳನ್ನು ಸಡಿಲಿಸಿಕೊಂಡವರು ಎಂಬ ಅರ್ಥ ಹೊಳೆದರೆ, ಆಧುನಿಕ ಆಲೋಚನೆ ಎಂದಾಗ ಸಂಪ್ರದಾಯದ ಜುಗುಟುತನಗಳನ್ನು ಮೀರಿ ವೈಚಾರಿಕವಾಗಿ ಯೊಚಿಸುವುದು ಎಂದರ್ಥವಾಗುತ್ತದೆ. ಆಧುನೀಕರಣ ಎಂದರೆ ಹೊಸ ಹೊಸ ಆಲೋಚನೆ, ನಮ್ಮಲ್ಲೇ ಪೂರ್ವದಿಂದಲೂ ಇರುವ ಜಾನಪದ ಜ್ಞಾನವನ್ನು ತಳ್ಳಿಕೊಂಡು ಬಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಬಲವನ್ನು ಬಿಂಬಿಸುತ್ತದೆ.


ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು..

ಆಧುನಿಕ ಈ ಪದದ ಬಳಕೆ ಅನೇಕ ರೀತಿಗಳಲ್ಲಿ ನಮ್ಮಲ್ಲಿ ಬಳಕೆಯಾಗುತ್ತಲಿದೆ. ಒಂದು ರೀತಿಯಲ್ಲಿ ಆಧುನಿಕ ಅನ್ನುವ ಪದವೇ ಕೆಲವರಿಗೆ ಆಶಾವಾದದ ಬೆಳಕನ್ನು ಮತ್ತೆ ಕೆಲವರಿಗೆ ನಿರಾಶಾವಾದದ ನೆರಳನ್ನು ಕವಿಸಬಲ್ಲುದು. ಆಧುನಿಕ ಮನುಷ್ಯ, ಆಧುನಿಕ ಆಲೊಚನೆ, ಆಧುನೀಕರಣ, ಆಧುನಿಕ ತಂತ್ರಜ್ಞಾನ, ಆಧುನಿಕ ಸಮಾಜ, ಆಧುನಿಕ ಸಾಹಿತ್ಯ, ಹೀಗೆ ಅನೇಕ ರೀತಿಯಲ್ಲಿ ಈ ಪದ ಬಳಕೆಯಾಗುತ್ತಲಿದೆ.
ಆಧುನಿಕ ಮನುಷ್ಯನೆಂದಾಗ ಸಂಪ್ರದಾಯದ ಕೊಂಡಿಗಳನ್ನು ಸಡಿಲಿಸಿಕೊಂಡವರು ಎಂಬ ಅರ್ಥ ಹೊಳೆದರೆ, ಆಧುನಿಕ ಆಲೋಚನೆ ಎಂದಾಗ ಸಂಪ್ರದಾಯದ ಜುಗುಟುತನಗಳನ್ನು ಮೀರಿ ವೈಚಾರಿಕವಾಗಿ ಯೊಚಿಸುವುದು ಎಂದರ್ಥವಾಗುತ್ತದೆ. ಆಧುನೀಕರಣ ಎಂದರೆ ಹೊಸ ಹೊಸ ಆಲೋಚನೆ, ನಮ್ಮಲ್ಲೇ ಪೂರ್ವದಿಂದಲೂ ಇರುವ ಜಾನಪದ ಜ್ಞಾನವನ್ನು ತಳ್ಳಿಕೊಂಡು ಬಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಬಲವನ್ನು ಬಿಂಬಿಸುತ್ತದೆ.


ಆಧುನಿಕ ಜಗತ್ತು ಎಂದು ಕರೆಸಿಕೊಳ್ಳುವ ಇಂದಿನ ಸಮಾಜದೊಳಗೆ ನಿಂತು ಬರಹದ ಬಗ್ಗೆ ಯೋಚಿಸುವಾಗ ಅದು ಬಹುತೇಕ ವೈಚಾರಿಕ ಆಲೋಚನೆಗೆ ಜಾಗ ನೀಡುವಂತಹದ್ದಾಗಿದೆ. ಪಾಶ್ಚಿಮಾತ್ಯ ತತ್ತ್ವ-ಸಿದ್ಧಾಂತ-ಗ್ರಹಿಕೆಗಳನ್ನು ಅಳವಡಿಸಿಕೊಂಡಂತಹದ್ದು ಎಂಬ ಅರ್ಥಗಳಲ್ಲೂ ಜಾರಿಯಲ್ಲಿದೆ, ಈ ಪದ ತೋರಿಕೆಗೆ ದೇಸೀಯ ಜ್ಞಾನದಿಂದ ಬೇರ್ಪಟ್ಟು ನಿಂತಂತೆ ಕಂಡರೂ, ಇಡೀ ಪರಂಪರೆಯನ್ನೇ ಸಂಪೂರ್ಣ ನಿರಾಕರಿಸಿ ಏಕಾಏಕಿಯಾಗಿ ಹುಟ್ಟಿಕೊಂಡಿದ್ದಲ್ಲ.
ಆಧುನಿಕ ಗ್ರಹಿಕೆ ಗದ್ಯದಲ್ಲಿ ಪಡೆದಷ್ಟು ಜಾಗವನ್ನು ಪದ್ಯದಲ್ಲೂ ಪಡೆದಿಲ್ಲ ಎನಿಸಬಹುದು. ಈ ಯೋಚನೆಗೆ ರೆನೆಸ್ಸಾನ್ಸ್ ಚಳುವಳಿ ಮತ್ತು ಅದರಿಂದ ಉಂಟಾದ ರಾಷ್ಟ್ರೀಯತೆ ಒಂದು ಕಾರಣವಾದರೆ, ಆಧ್ಯಾತ್ಮ ಮತ್ತು ಅನುಭಾವ ಪರಂಪರೆ ಮತ್ತೊಂದು ಕಾರಣ, ಪರಂಪರೆಯೊಂದಿಗೆ ಬೆಸೆದುಕೊಂಡ ಇಂಗ್ಲೀಷ್ ಶಿಕ್ಷಣವೂ ಈ ರೀತಿಯ ಪ್ರತಿಕ್ರಿಯೆ ಹುಟ್ಟಿಸಲು ಕಾರಣವೆನ್ನಬಹುದು.
ಪರಂಪರೆ ಮತ್ತು ಆಧುನಿಕತೆ :
ಕವಿ ಮತ್ತು ಕಾವ್ಯ ಕುರಿತ ಚರ್ಚೆಯು ನಮ್ಮ ಭಾರತೀಯ ಸಮಾಜ ಹಾಗೂ ಸಂಸ್ಕೃತಿಯ ಚರ್ಚೆಯೂ ಹೌದು. ಕವಿಗಳ ಬಗೆಗೆ ದಂತಕಥೆಗಳನ್ನು, ಐತಿಹ್ಯಗಳನ್ನು ಸೃಷ್ಟಿಸಿದ ನಾಡಿದು. ಒಬ್ಬ ಕವಿಯ ಕೈಯನ್ನು ಉಜ್ಜಿಕೊಂಡರೆ ಎಲ್ಲಿಯೋ ಹತ್ತಿದ ಬೆಂಕಿ ಆರಿಹೋಗುತ್ತದೆ. ಪವಿತ್ರ ಕಾವ್ಯವನ್ನು ಬರೆಯುವುದರ ಮೂಲಕ ಮತ್ತೊಬ್ಬ ಕವಿಗೆ ಕಳಚಿ ಹೋದ ಹಲ್ಲಿನ ಜಾಗದಲ್ಲಿ ಹಲ್ಲು ಮೂಡುತ್ತದೆ. ಇನ್ನೊಬ್ಬ ಕವಿ ಕೀರ್ತನೆ ಮಾಡುತ್ತ ದೇವರ ಮೂರ್ತಿಯನ್ನು ತಿರುಗಿಸಿಬಿಡುತ್ತಾನೆ. ಈ ರೀತಿಯಲ್ಲಿ ಚಿತ್ರವಿಚಿತ ಮಿಥ್‌ಗಳನ್ನು ಸೃಷ್ಟಿಸುತ್ತ ಕವಿಗಳನ್ನು ಅಲೌಕಿಕತೆಗೆ ಏರಿಸಿದ ಈ ನಾಡಿನಲ್ಲಿ ಕವಿಗಳನ್ನು ಕಾವ್ಯ ಮುಖೇನ ಪುರಾಣರೂಪಿಗಳನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಕವಿಗಳನ್ನು ಕುರಿತಂತೆ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್ ಎನ್ನುವುದರಿಂದ ಹಿಡಿದು
೧) ಕವಿ ಋಷಿ ಸದೃಶನಾದವನು
೨) ಕವಿಯೇ ಬ್ರಹ್ಮ
೩) ಕವಿಯ ಮಾನಸಿಕ ಅವಸ್ಥೆಯೇ ಕವಿತೆಗೆ ಕಾರಣ
೪) ಕವಿಗೆ ಸಂಸ್ಕಾರ ಮುಖ್ಯ
೫) ಕವಿಯ ಹಿನ್ನೆಲೆಯಲ್ಲಿ ಜನಾಂಗವೊಂದರ ಸ್ಮೃತಿಗಳು ಇರುತ್ತವೆ.


ಎಂಬೆಲ್ಲಾ ಗ್ರಹಿಕೆಗಳು ಬಂದಿವೆ. ಒಂದು ರೀತಿಯಲ್ಲಿ ಓದುಗ-ಕೇಳುಗ ವಲಯ ಹಾಗೂ ಅಂದಿನ ಸಾಮಾಜಿಕ ಸಂಸ್ಕೃತಿ, ಕವಿಯನ್ನು ಆ ರೀತಿ ನಡೆಸಿಕೊಂಡು ಬಂದಿವೆ. ಏಕೆಂದರೆ ಒಂದು ಕಾಲಕ್ಕೆ ಕಾವ್ಯವು ಸಾಹಿತ್ಯದ ಕೇಂದ್ರಮಾತ್ರವಲ್ಲ ಸಮಸ್ತವೂ ಆಗಿತ್ತು. ಸಾಹಿತ್ಯ ಹಾಗೂ ಕಾವ್ಯ ಎರಡೂ ಸಮಾನಾರ್ಥಕವಾಗಿದ್ದ ಕಾಲ ಅದು.
ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ನವೋದಯ ಹಾಗೂ ನವ್ಯ ಸಂದರ್ಭಗಳಲ್ಲಿ ಸಾಹಿತ್ಯ ಚರ್ಚೆ ಮೂಲತಃ ಕಾವ್ಯಕೇಂದ್ರವಾಗಿದ್ದರೆ, ಪ್ರಗತಿಶೀಲ ಮತ್ತು ದಲಿತ-ಬಂಡಾಯ ಸಾಹಿತ್ಯ ಚಳುವಳಿಗಳ ಸಂದರ್ಭಗಳಲ್ಲಿ ಸಾಹಿತ್ಯವನ್ನು ಕುರಿತ ಚರ್ಚೆ ಕೇವಲ ಕಾವ್ಯ ಕೇಂದ್ರವಾಗದೆ ಸಮೂಹ ಹಾಗೂ ಸಮಾಜ ಕೇಂದ್ರವಾಗಿದೆ. ಆರಂಭದಿಂದಲೂ ಕವಿ ತನ್ನ ಅಂತಃಶಕ್ತಿಯ ಜೊತೆಗೇ ಸಾಮುದಾಯಿಕ ಕಾಳಜಿಯನ್ನು ವಿಸ್ತರಿಸಿಕೊಳ್ಳುತ್ತ, ಪರಂಪರಾಗತ ವಸ್ತು ಪರಂಪರೆಯನ್ನು ಮುಂದುವರೆಸುತ್ತ ತನ್ನ ಮೂಲಕೃತಿಯನ್ನು ಬೇರೊಂದಾಗಿ ಮಾರ್ಪಡಿಸಲು ಹೆಣಗಿದ್ದಾನೆ. ಅಂತಲೇ ಆತನ ಅನಿಸಿಕೆಗಳು ಆಯಾ ಮತಧರ್ಮ ನಿಷ್ಠತೆಗಳನ್ನು ದಾಟುತ್ತದೆ. ವಚನಕಾರರು ಕಂಡಂತೆ ವಿಷಯವ ಬಿಟ್ಟು ನಿರ್ವಿಷಯವಾಗುವುದು ಕೂಡ ಕಾವ್ಯವಾಗಿದೆ.
ಕಾವ್ಯ ಕಟ್ಟುವ ಕೆಲಸ ಎಷ್ಟು ಪ್ರಮುಖವೋ ಪರಂಪರೆಯಲ್ಲಿ ಹಾಡುವಿಕೆಯೂ ಅಷ್ಟೇ ಪ್ರಮುಖವಾದದ್ದು. ಕುಮಾರವ್ಯಾಸನು ಹಾಡಿದನೆಂದರೆ… ಎನ್ನುವಲ್ಲಿ ಆ ಅರ್ಥ ಇದೆ. ಮುದ್ರಣ ಯಂತ್ರಗಳು ಬರುವ ಮುನ್ನ ಈ ರೀತಿ ಹಾಡುವಿಕೆ ಕವಿಯು ಸಮುದಾಯಕ್ಕೆ ಮಾದರಿ ಆಗಿತ್ತು. ಬಸವಣ್ಣ ಆನು ಒಲಿದಂತೆ ಹಾಡುವೆ ಎನ್ನುವುದು ಕೇವಲ ಖಾಸಗಿತನ ಮಾತ್ರವಲ್ಲ. ಅದು ಸಮುದಾಯಕ್ಕೆ ತಾನು ನಿವೇದಿಸಿಕೊಳ್ಳಬಯಸಿದ ಮಾದರಿ ಕೂಡ. ಹೀಗೆ ನಿವೇದಿಸಿಕೊಳ್ಳುವ ಕ್ರಮ ಜನಪದ ಮೂಲವಾದದ್ದೇ.. ಜನಪದರಲ್ಲಿ ಹಾಡುವ ಮತ್ತು ರಚಿಸುವ ಕವಿ ಬೇರೆ ಬೇರೆ ಅಲ್ಲ. ಹಾಡುವಿಕೆ ಮತ್ತು ಕಟ್ಟುವಿಕೆಗಳು ಬೇರೆ ಬೇರೆಯಾದದ್ದು. ಆಧುನಿಕತೆ ಕಾಲಿಟ್ಟ ಮೇಲೆ, ಮುದ್ರಣ ವ್ಯವಸ್ಥೆ ಬಂದ ಮೇಲೆಯೇ ಎನ್ನಬಹುದು. ಆಧುನಿಕ ಕವಿ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎನ್ನುವಾಗ ಈ ಕವಿ ಜನಪದ ಮೂಲದವನಲ್ಲ ಎಂಬುದೇ ವ್ಯಂಗ್ಯ.


ವಸಾಹತೀಕರಣದಿಂದ ಬಂದ ಅಕ್ಷರವು ಒಂದು ರಾಜಕೀಯ ಶಕ್ತಿಯಾದ ಕಾಲವಿದು. ಹಾಗಾಗಿ ಕವಿತೆ ಸಮುದಾಯಿಕ ಪ್ರಧಾನತೆಯನ್ನು ಕಳೆದುಕೊಳ್ಳುತ್ತ ವೈಯಕ್ತಿಕ ರಚನೆಯಾಗಿ ಮಾರ್ಪಟ್ಟಿತು. ಸಂಬಂಧ ಮತ್ತು ಸಹಬಾಳ್ವೆಯನ್ನು ಬೆಳೆಸುವ ಬದುಕಿನ ರೀತಿಯಲ್ಲೇ ಹಿಂದಿನ ಕಾವ್ಯವೂ ಇತ್ತು. ಆಧುನಿಕತೆ ಕಾಲಿಟ್ಟ ಮೇಲೆ ಉಂಟಾದ ನಗರೀಕರಣ, ಹೊಸ ಆರ್ಥಿಕ ರಚನೆಗಳು, ವ್ಯಕ್ತಿಗಳನ್ನು ಅವಿಭಕ್ತ ಕುಟುಂಬದಿಂದ ಬೇರ್ಪಡಿಸಿ ಅವರವರ ಹೆಂಡತಿ ಮಗುವಿಗೆ ಮಾತ್ರ ಸೀಮಿತವಾಗಿಸುವತ್ತ ದೂಡಿತು. ಹೊಸ ಬಗೆಯ ಶಿಕ್ಷಣದಿಂದ ಬಂದ ಹೊಸ ಆರ್ಥಿಕ ರಚನೆಗಳು, ವ್ಯಕ್ತಿಗಳ ಖಾಸಗೀತನವನ್ನೇ ಒಂದು ಮೌಲ್ಯವಾಗಿಸಿದವು. ವಸಾಹತೀಕರಣದ ಪ್ರಭಾವ ದೇಶೀಯ ಮತ್ತು ವಿದೇಶಿಯ ಎರಡು ರೂಪಗಳಲ್ಲೂ ಘಟಿಸಿದ್ದು ಅಕ್ಷರ ಕಾವ್ಯದೊಳಗೆ, ಮೌಖಿಕ ಕಾವ್ಯದಲ್ಲಿ ಈ ಬಗೆ ಇಲ್ಲ.
ಬಂಗ್ಲದೊಳ ಸಾಬ ಬಂದಾನಂತ ಹೇಳಿದರೆ ಕಲ್ತವರು ಹೋಗತಾರ ಓಡೋಡಿ ಇಂಗ್ಲೀಷ್ ಮಾತಿಲೆ ಟಸ್‌ಪುಟ್ ಮಾತನಾಡಿ ಉಪಕಾರ ಮಾಡತಾರ ಲಗುಮಾಡಿ೧
ಇಲ್ಲಿನ ಬಂಗ್ಲೆ, ಇಂಗ್ಲೀಷ್ ಸಾಹೇಬ ಮತ್ತು ಅವನ ಭಾಷೆ ಮೂರೂ ಹೇಗೆ ಹೊರರೂಪಿಯಾಗಿ ಆಕರ್ಷಿಸುತಿದ್ದವೆಂಬುದಕ್ಕೆ ಈ ಎರಡು ಸಾಲುಗಳೇ ಸಾಕು.
ಅಕ್ಷರವನ್ನ ಸಮುದಾಯವಾಗಿಸುವಲ್ಲಿ ದಾಸರು ಮತ್ತು ತತ್ವಪದಕಾರರು ನಾದವನ್ನು ತಾಳವನ್ನೂ ನೃತ್ಯವನ್ನೂ ಹಿಡಿದಿದ್ದಾರೆ. ಹಾಗಾಗಿ ಇಡೀ ಅಕ್ಷರ ಕಾವ್ಯ ಪರಂಪರೆಯಲ್ಲಿ ಮೌನದ ಹುಟ್ಟಾಗಿ ಸಂಭವಿಸುತ್ತಿದ್ದ ರಚನೆಗಳು ಸಮುದಾಯಕ್ಕಾಗಿಯೇ ನಾದದ ಗತ್ತಿನ ಹೆಜ್ಜೆಯವರೆಗೂ ಬಂದಿದೆ.
ಆಧುನಿಕತೆಯ ಹಿನ್ನೆಲೆಯಲ್ಲಿ ನೋಡಿದಾಗಲೂ ಇಲ್ಲಿನ ಕಾವ್ಯ ರಚನೆಯ ಕ್ರಿಯೆಯು ನಿಂತ ನೀರಾಗಿಲ್ಲ. ಎಳೆ ಮುರಿದು ಬೆಳೆ ಬಾಡಿಲ್ಲ, ಭಿನ್ನ ಭಿನ್ನ ಪ್ರಾದೇಶಿಕ ವೈವಿಧ್ಯತೆಗಳ ನೃತ್ಯ, ಗೀತ, ಕಥಾರೂಪಗಳಿಗೆ (ಮೊಹರ್ರಂ ಹಾಡುಗಳು, ಹರದೇಶಿ-ನಾಗೇಶಿ, ಗೀಗೀಪದ, ಚೌಡಿಕೆ ಪದ) ಇತ್ಯಾದಿ ಆಕೃತಿಗಳು ಕಾವ್ಯದ ಆಧುನಿಕ ರೀತಿಗೆ ಸರಕಾಗಿ ಬಂದಿವೆ.
ಉದಾಹರಣೆಗೆ : ರೈಲು ಗಾಡಿ ಆಧುನಿಕತೆಯ ಸಂಕೇತವಾಗಿ ನಗರೀಕರಣದ ಕ್ರೌರ‍್ಯವಾಗಿ, ನಾಡಿಗೆ ಬರುವಾಗ ಅದು ಪರಂಗೇರು ಮಾಡಿದ ಕೌತುಕ ಎಂದಷ್ಟೇ ಸುಮ್ಮನಾಗುವುದಿಲ್ಲ. ಇದರಾಚೆಗೆ ಅದರ ಪರಿಣಾಮವನ್ನ ದಿಕ್ಕು ದಿಸೆಯೆಲ್ಲ ಮಾಡ್ಯಾರೋ ಸೆಡಕಾ ಎಂದು ಹಿಡಿದಿಟ್ಟು ಅನುಭಾವ ಪ್ರಧಾನ ಕಾವ್ಯ ಕೂಡಾ ಸಮಾಜಿಕ ಪ್ರತಿಗಾಮಿತನವನ್ನ ಯಾವುದು ಪ್ರಗತಿ ಎಂದು ಕರೆಯಲಾಗುತಿತ್ತೋ ಅದಕ್ಕೆ ಎದುರಾಗಿ ಹೆಣೆದು ತೋರಿದೆ.ಈ ಸಾಲು ಬೃಹತ್ ಮಾರುಕಟ್ಟೆಯ ಆಗಮನದ ವಿರುದ್ಧ ಸಿಟು ಸೆಡವುಗಳನ್ನು ಕಟ್ಟಿ ಕೊಡುತ್ತದೆ.

 


ಯಾಕೆ ಈ ಪದ್ಯ ಈ ಭಾವವನ್ನು ಹಿಡಿದಿದೆ ಎನ್ನುವುದಕ್ಕೆ ಕೇವಲ ಈ ಪದ್ಯದ ಒಳ ಮತ್ತು ಹೊರರೂಪವನ್ನು ಗಮನಿಸಿದರೆ ತಿಳಿಯದು. ಇದರ ಹೊರಗೆ ಬಂದು ಜನಪದರು ಹಾಡುವ ಕಾಸೀಬಾಯಿಯ ಪದ ಗಮನಿಸಿದರೆ, ಮೇಲಿನ ಚರ್ಚೆಗೆ ಇನ್ನೊಂದು ಆಯಾಮ ದೊರಕುವುದು.
ಒಂಟಿ ಹೆಣ್ಣನ್ನು ಈ ರೀತಿ ದಾರುಣ ಸ್ಥಿತಿಗೆ ತಳ್ಳುವಲ್ಲಿ ರೈಲು ಮುಖ್ಯವೇ ಅಲ್ಲ. ಅದರ ಹಿಂದಿನ ಸಂಸ್ಕೃತಿ ಮತ್ತು ಅದರೊಳಗಿನ ಮನೋಧರ್ಮ ಮುಖ್ಯವಾಗಿದೆ.ಹೆಣ್ಣು ಅಪ್ರಧಾನವಾದ ಆಕೆ ಕೇವಲ ಮನೋರಂಜೆಗೆ ಮೀಸಲಾದ ಸರಕಂತೆ ಬಳಸಲಾದ ನಮ್ಮ ಜಡ ಸಂಸ್ಕೃತಿಯ ಸಾಲಿನಂತೆಯೇ ಈ ಆಧುನಿಕ ಲಾಭ ಪ್ರಧಾನ ಸ್ವಾರ್ಥ ಪ್ರಧಾನ ಸಮುದಾಯವೂ ಬಂದಿರುವುದು ಯಾವ ಸೀಮೆಯ ಹೊಸತನ ಎಂಬಂತೆಯೇ ಕಾಣುತ್ತದೆ. ಹೆಣ್ಣಿಗೆ ಎರಡೂ ಸಂಸ್ಕೃತಿಗಳೂ ಮಾರಕವೇ ಎಂಬಂತೆ ಕಾಣುವುದೇ ಇಲ್ಲಿನ ವ್ಯಂಗ್ಯ ಸಾಲುಗಳಿವೆ.
ಬಹುತೇಕ ಆಧುನಿಕ ಪದಗಳು ಸಾಮಾನ್ಯರಿಗೆ ಭೀಕರತೆಯನ್ನು ಒಡ್ಡುವ, ಒಂಟಿತನವನ್ನು ಸೃಷ್ಟಿಸುವ, ಅನ್ಯಾಯವನ್ನು ಮೆರೆಸುವ ಪದಗಳಾಗಿವೆ. ಹಾಗಾಗಿ ಇಲ್ಲಿನ ಕೋರ್ಟನ್ನು, ರೈಲು ಗಾಡಿಯನ್ನು, ಕ್ರಿಸ್ತನನ್ನು ಪದಗಳಾಗಿ ನೋಡುವುದಕ್ಕಿಂತ ಅದರೊಳಗಿನ ಮಾರಕ ಧೋರಣೆಯ ಹಿನ್ನೆಲೆಯಲ್ಲೂ ಈ ಲೋಕವನ್ನಿಟ್ಟಿ ಗಮನಿಸಬೇಕು.
ಇಲ್ಲಿ ಸುಳಿದ ಮಟಗದ ಆಟ ಒಂದು ರೀತಿಯ ವ್ಯಕ್ತಿಯ ಆಕ್ರಮಣವನ್ನು (ವ್ಯಕ್ತಿಯ ದಿವಾಳಿತನವನ್ನು) ಸೂಚಿಸಿದರೆ ಮಾರುಕಟ್ಟೆಯ ವಿವರ ಸಮುದಾಯಗನ್ನ ಬಗೆ ಬಗೆಯಲ್ಲಿ ದೋಚುವ ಹೊರ ರೂಪಿಯಾದ ಇನ್ನೊಂದು ಬಗೆಯ ದೇಶದ ದಿವಾಳಿತನವನ್ನು ಸಾರುವಂತಿದೆ.
ಹಿಂದುಸ್ಥಾನ ಖಜಾನಿ ಖಾಲಿಮಾಡಿ
ಇಂಗ್ಲೆಂಡಕ ಒಯ್ಯಾತಾರ ಓಡೋಡಿ
ಬ್ರಿಟೀಷ್ ಪಾರ್ಲಿಮೆಂಟಿನೊಳು ಕೂಡಿ
ಕಾಯ್ದೆ ತೆಗಿತಾರ ಬಹಳ ಅಡ್ನಾಡಿ
ಈ ಪಾರಂಪರಿಕ ಹಾಡುಗಳಲ್ಲಿ ವಾಚ್ಯ ವೆನ್ನಲಾಗುವ ಲಯಗಾರಿಕೆ ಇದ್ದರೂ ಇವು ಒಳಗಿನ ಜೀವಂತವಾಗಿರುವ ಮತ್ತು ಚಲಾವಣೆಯಲ್ಲಿರುವ ಆಧುನಿಕ ಕಾವ್ಯ ತೋರುವ ಹಾಡಿನ ರೂಪಗಳನ್ನು ತನ್ನ ಒಡಲೊಳಗೂ ಹುದುಗಿಸಿಕೊಂಡಂತೆ ಕಾಣಬಲ್ಲದು. ಜನಪರ ಹಾಡುಗಾರ ಸಂಪ್ರದಾಯಿಕನಂತೆ ಕಂಡರೂ ತನಗೆ ಅರಿವಿಲ್ಲದೇ ಆತನ ರಚನೆ ಆಧುನಿಕವಾಗಿರುತ್ತದೆ ಎಂಬುದಕ್ಕೆ ಈ ಸಾಲುಗಳು ಉದಾಹರಣೆಯಂತಿವೆ.

Girl in a jacket
error: Content is protected !!