ಜಗವಿದು ಪರಮಾತ್ಮನ ಸೃಷ್ಟಿ!

Share

ಜಗವಿದು ಪರಮಾತ್ಮನ ಸೃಷ್ಟಿ!

ಒಮ್ಮೆ ಸಿದ್ಧನು ಕೆಲವು ಹಡಗರೊಂದಿಗೆ ಒಂದು ತೋಟಕ್ಕೆ ಹೋದನು. ಅಲ್ಲಿ ನೇರಳೆ ಹಣ್ಣಿನ ಗಿಡದ ಕೆಳಗೆ ಬಿದ್ದಿರುವ ಹಣ್ಣಗಳನ್ನು ಕಾಣುತ್ತಲೇ ಹುಡುಗರು ಎಲ್ಲ ಮರೆತು ಹಣ್ಣು ಆಯ್ದು ತಿನ್ನಲಾರಂಭಿಸಿದರು. ಸಿದ್ಧ ನಿಂತು ನೋಡಿ ಆಲೋಚಿಸಿದ. ಈ ಹುಡುಗರಿಗೆ ಬುದ್ಧಿ ಕಲಿಸಬೇಕೆಂದು ಒಂದು ನೇರಳೆ ಹಣ್ಣನ್ನು ಚೆಲ್ಲಿದನು.ಅಲ್ಲಿ ನೇರಳೆ ಹಣ್ಣಿನ ರಾಶಿಯೇ ಉಂಟಾಯಿತು! ಹುಡುಗರು ಆ ರಾಶಿಯನ್ನು ಕಂಡು ಧಾವಿಸಿದರು, ಆಶ್ಚರ್ಯಪಟ್ಟರು. ಆಗ ಸಿದ್ಧನು ಹೀಗೆ ಹೇಳಿದನು:


ಪರಮಾತ್ಮನ ಲೀಲೆ ಅತಿ ವಿಚಿತ್ರ. ಒಂದೇ ಭೂಮಿಯಲ್ಲಿ ಬೆಳೆಯುವ ಮೆಣಸಿನಲ್ಲಿ ಖಾರ,ಬಾಳೆಯಲ್ಲಿ ಸಿಹಿ, ನೆಲ್ಲಿ ಹುಣಸೆಯಲ್ಲಿ ಹುಳಿ! ಮಣ್ಣು-ನೀರು-ಗೊಬ್ಬರಗಳ ಸ್ವರೂಪವೆಂಥದ್ದು? ಮರದ ಬೇರು-ಬುಡ-ಕಾಂಡ-ಟೊಂಗೆ-ಎಲೆ-ಹೂವು-ಕಾಯಿ-ಹಣ್ಣುಗಳ ಮೈಮಾಟವೆಂಥದ್ದು? ಕಾಯಿ ಹುಳಿ, ಹಣ್ಣು ಸಿಹಿ! ಮಣ್ಣು-ನೀರು-ಗೊಬ್ಬರಗಳ ಬಣ್ಣ ಯಾವುದು? ಹೂ ಹಣ್ಣು -ಕಾಯಿಗಳ ಬಣ್ಣವೇನು ವಿಚಿತ್ರ! ಮಣ್ಣು-ನೀರು ಗೊಬ್ಬರಗಳ ವಾಸನೆ ಎಂಥದ್ದು? ಬಗೆ ಬಗೆಯ ಹೂ ಹಣ್ಣು ಕಾಯಿಗಳ ನೂರಾರು ಪರಿಮಳವೆಂಥದ್ದು! ಗಿಡ-ಮರ ಸಸ್ಯ ಪ್ರಾಣಿ-ಪಕ್ಷಿ ಕ್ರಿಮಿ ಕೀಟ ಜೀವ ಸಂಕುಲದ ವೈವಿಧ್ಯವೇನು! ಒಂದರಂತೆ ಮತ್ತೊಂದು,ಒಬ್ಬರಂತೆ ಮತ್ತೊಬ್ಬರು ಬಲು ಆಪರೂಪ! ಮಗು ಹೆತ್ತ ತಾಯಿಯಾಗಲಿ, ತಂದೆಯಾಗಲಿ, ಅನ್ಯರಾಗಲಿ, ಮಗುವಿನ ಶ್ವಾಸಕೋಶ ನಿರ್ಮಸುವರೇ? ನರಮಂಡಲವನ್ನು ರಚಿಸುವರೇ? ಕಿಡ್ನಿ-ಹೃದಯ-ಮೆದುಳುಗಳನ್ನು,ಕೂದಲು-ಉಗುರು ಕೈಕಾಲು ಕಣ್ಣು-ಮೂಗು-ಕಿವಿ-ನಾಲಿಗೆ-ಚರ್ಮ-ಬೆರಳು-ಮೂಳೆಗಳನ್ನು ತಿದ್ದಿ ತೀಡಿ ಬೆಳಸುವರೇ? ಇದು ಪರಮಾತ್ಮನ ಲೀಲೆಯಲ್ಲದೇ ಮತ್ತಿನ್ನೇನು? ಪ್ರತಿಯೊಂದು ಜೀವಿಯನ್ನು ಹುಟ್ಟಿಸುವ ಪರಮಾತ್ಮನು ಆಯಾ ಜೀವಿಗಳ ಬದುಕಿಗೆ ಬೇಕಾದ ಅಂಗಾಂಗಗಳನ್ನೆಲ್ಲ ರಚಿಸಿ, ಭೂಮಿ-ಜಲ-ಅಗ್ನಿ- ವಾಯು- ಆಕಾಶಗಳಿರುವ ಈ ಪ್ರಪಂಚದ ವೇದಿಕೆ-ಮೈದಾನದಲ್ಲಿರಿಸಿದ್ದಾನೆ.


ಅಭಿನಯಿಸುವ-ಪಾತ್ರನಿರ್ವಹಿಸುವ-ಆಟವಾಡುವ ಕೆಲಸ ಪ್ರತಿ ಜೀವರಾಶಿಯದ್ದು! ಅಭಿನಯ-ಪಾತ್ರ ನಿರ್ವಹಣೆ-ಆಟ ಮುಗಿದ ಬಳಿಕ ಪರಮಾತ್ಮನಲ್ಲಿಯೇ ವಿಲೀನ!ಮನೆಯಿಂದ ಹೊರಹೊರಟು, ಮನೆಮರೆತು ವ್ಯವಹಾರಮಾಡಿ, ಮತ್ತೆ ಮನೆಗೆ ತೆರಳುವಂತೆ. ಪರಮಾತ್ಮನೇ ನಾವಾಗಿದ್ದರೂ,ಪರಮಾತ್ಮನ ಲೀಲೆಯೇ ಇದೆಲ್ಲವೂ ಆಗಿದ್ದರೂ, ಪರಮಾತ್ಮನ ಕರುಣೆಯಿಂದಲೇ ನಾವೆಲ್ಲಾ ಬದುಕುತ್ತಿದ್ದರೂ ನಾವಿದನ್ನೆಲ್ಲ ಮರೆತು, ನಾನು ನಾನು ಎನ್ನುತ್ತಾ, ನನ್ನಿಂದಲೇ ಎಲ್ಲಾ, ಇದೆಲ್ಲಾ ನನ್ನದೇ, ಎಂದು ಹೇಳುತ್ತಾ – ಭಾವಿಸುತ್ತಾ, ಅಹಂಕಾರ ಮಮಕಾರಗಳಿಂದ ಕೂಡಿ, ಭೋಗ-ವಿಷಯಾಸಕ್ತರಾಗಿದ್ದೇವೆ.

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ|
ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ|| [ಭಗವದ್ಗೀತೆ-೩-೨೭]

ಈ ಪ್ರಕೃತಿಯಲ್ಲಿನ ಆಗುಹೋಗುಗಳು ಅವುಗಳವುಗಳ ಗುಣಗಳಿಗನುಗುಣವಾಗಿ ನಡೆದು ಹೋಗುತ್ತಿವೆ. ಆದರೆ ಅಹಂಕಾರ ನೆತ್ತಿಗೇರಿದ ಮೂಢನು ಇದನ್ನು ನಾನು ಮಾಡಿದವನು ಎಂದು ಬೀಗುತ್ತಾನೆ. ವಾಸ್ತವವಾಗಿ:

ಭೂಮಿರಾಪೋನಲೋ ವಾಯುಃ ಖಂ ಮನೋಬುದ್ಧಿರೇವಚ|
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ||[ಭಗವದ್ಗೀತೆ ೭-೪]

ಪರಮಾತ್ಮನ ಪ್ರಕೃತಿಯು ಭೂಮಿ ನೀರು ಅಗ್ನಿ ವಾಯು ಆಕಾಶ ಮನಸ್ಸು ಬುದ್ಧಿ ಅಹಂಕಾರ ಎಂಬುದಾಗಿ ಎಂಟು ವಿಧವಾಗಿದೆ.

ಅಪರೇಯಮಿತಸ್ತ್ವನ್ಯಾಮ್‌ ಪ್ರಕೃತಿಂ ವಿದ್ಧಿ ಮೇ ಪರಾಮ್|
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್||[ಭಗವದ್ಗೀತೆ ೭-೫]

ಭೂಮಿ ಮೊದಲಾದ ಎಂಟು ವಿಧದ ಪ್ರಕೃತಿ ಅಪರಾಪ್ರಕೃತಿ, ಅವುಗಳಲ್ಲೆಲ್ಲ ಹುದುಗಿದ ಸಾಮಾನ್ಯ ಚೇತನ,ವಿಶೇಷ ಚೇತನ ಎಂಬ ಜೀವ ಸ್ವರೂಪವೇ ನನ್ನ ಮತ್ತೊಂದು ಪ್ರಕೃತಿ. ಇದೇ ಪರಾ ಪ್ರಕೃತಿ. ಈ ಪರಾ ಪ್ರಕೃತಿಯೇ ಈ ಜಗವೆಲ್ಲವನ್ನೂ ಧರಿಸಿದೆ.

ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ|
ಅಹಂ ಕೃತ್ನಸ್ಯ ಜಗತಃ
ಪ್ರಭವಃ ಪ್ರಲಯಸ್ತಥಾ|| [ಭಗವದ್ಗೀತೆ ೭-೬]

ನನ್ನ ಈ ಪರಾ ಅಪರಾ ಪ್ರಕೃತಿಗಳಿಂದಲೇ ಸಕಲ ಚೇತನ ಜೀವರಾಶಿಗಳು, ಸಮಸ್ತ ಜಡವಸ್ತುಗಳು ಉತ್ಪನ್ನವಾಗುತ್ತವೆ. ನಾನು ಈ ಸಮಸ್ತ ಜಗತ್ತಿನ ಸೃಷ್ಟಿಕರ್ತಾ ಮತ್ತು ಪ್ರಲಯಕರ್ತಾ.

ಮತ್ತಃ ಪರತರಂ ನಾನ್ಯತ್
ಕಿಂಚಿದಸ್ತಿ ಧನಂಜಯ|
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ||[ಭಗವದ್ಗೀತೆ ೭-೭]

ನನಗಿಂತ ಬೇರೆ ಯಾವುದೂ ಇಲ್ಲ. ಮುತ್ತುಗಳೆಲ್ಲವೂ ದಾರದಲ್ಲಿ ಪೋಣಿಸಿರುವಂತೆ, ಇದೆಲ್ಲವೂ ನನ್ನಲ್ಲಿ ಸೇರಿದೆ.

ರಸೋಹಮಪ್ಸು ಕೌಂತೇಯ, ಪ್ರಭಾಸ್ಮಿ ಶಶಿಸೂರ್ಯಯೋಃ|
ಪ್ರಣವಃ ಸರ್ವವೇದೇಷು
ಶಬ್ದಃ ಖೇ ಪೌರುಷಂ ನೃಷು|| [ಭಗವದ್ಗೀತೆ ೭-೮]

ನೀರಿನಲ್ಲಿನ ರಸ, ಸೂರ್ಯಚಂದ್ರರಲ್ಲಿನ ಬೆಳಕು, ಸಕಲ ವೇದಗಳಲ್ಲಡಗಿರುವ ಓಂಕಾರ,ಆಕಾಶದಲ್ಲಿನ ಶಬ್ದ, ನರರಲ್ಲಿ ಹುದುಗಿದ ಬಲ, ನಾನಾಗಿದ್ದೇನೆ.

ಪುಣ್ಯೋ ಗಂಧಃ ಪೃಥಿವ್ಯಾಂಚ ತೇಜಶ್ಚಾಸ್ಮಿ ವಿಭಾವಸೌ|
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು|| [ಭಗವದ್ಗೀತೆ ೭-೯]

ಭೂಮಿಯಲ್ಲಿನ ವಾಸನೆ, ಅಗ್ನಿಯಲ್ಲಿನ ತೇಜಸ್ಸು, ತಪಸ್ವಿಗಳಲ್ಲಿನ ತಪಸ್ಸು, ಸರ್ವಜೀವರಾಶಿಗಳ ಚೈತನ್ಯ-ಜೀವ ನಾನು.
ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್|
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್|| [ಭಗವದ್ಗೀತೆ ೭-೧೦]

ಸಮಸ್ತ ಭೂತಗಳಿಗೆ ನಾನು ಸನಾತನವಾದ ಮೂಲ ಬೀಜವಾಗಿದ್ದೇನೆ. ಬುದ್ಧಿವಂತರ ಬುದ್ಧಿ ನಾನು. ತೇಜಸ್ವಿಗಳ ತೇಜಸ್ಸು ನಾನು.

ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್|
ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ|| [ಭಗವದ್ಗೀತೆ ೭-೧೧]

ಬಲಿಷ್ಠರಲ್ಲಿನ, ಆಸೆ ಅನುರಾಗವಿಲ್ಲದ ಬಲ ನಾನು.ಜೀವರಾಶಿಗಳಲ್ಲಿನ, ಧರ್ಮವಿರುದ್ಧವಲ್ಲದ ಕಾಮ ನಾನು.

ಯೇ ಚೈವ ಸಾತ್ತ್ವಿಕಾ ಭಾವಾಃ ರಾಜಸಾಸ್ತಾಮಸಾಶ್ಚ ಯೇ|
ಮತ್ತ ಏವೇತಿ ತಾನ್ವಿದ್ಧಿ
ನತ್ವಹಂ ತೇಷು ತೇ ಮಯಿ|| [ಭಗವದ್ಗೀತೆ ೭-೧೨]

ಸತ್ತ್ವ-ರಜಸ್-ತಮೋಗುಣಗಳ ಯಾವ ಯಾವ ಭಾವಗಳಿವೆಯೋ ಅವೆಲ್ಲ ನನ್ನಿಂದಲೇ ಉದ್ಭವಿಸಿವೆ. ಅವೆಲ್ಲ ನನ್ನಲ್ಲಿವೆ, ಹೊರತು ನಾನು ಅವುಗಳಲ್ಲಿಲ್ಲ! ಎಂದರೆ, ಅವು ನನ್ನ ಹೊರತಾಗಿಲ್ಲ ಎಂದರ್ಥ.

ತ್ರಿಭಿರ್ಗುಣಮಯ್ಯೆರ್ಭಾವೈಃ
ಏಭಿಃ ಸರ್ವಮಿದಂ ಜಗತ್|
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್|| [ಭಗವದ್ಗೀತೆ ೭-೧೩]

ಈ ಜಗವೆಲ್ಲ ಮೇಲ್ಕಾಣಿಸಿದ ಈ ಮೂರು ಗುಣಗಳಿಂದ ತುಂಬಿದೆ.ಗುಣಪರವಶನಾಗಿ, ಮೋಹಪಾಶಕ್ಕೊಳಗಾದವನು, ಗುಣಾತೀತನಾದ ನನ್ನನ್ನು ತಿಳಿಯಲಾರ!

ದೈವೀ ಹ್ಯೇಷಾಂ ಗುಣಮಯೀ ಮಮ ಮಾಯಾ ದುರತ್ಯಯಾ|
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ|| [ಭಗವದ್ಗೀತೆ ೭-೧೪]

ಗುಣಮಯಿಯಾದ ದೈವೀ ಮಾಯೆಯನ್ನು ಮೀರುವುದು ಅತಿ ದುಃಸ್ಸಾಧ್ಯ. ನನ್ನ ನಿಜಸ್ವರೂಪವನ್ನು ತಿಳಿದವರು ಮಾತ್ರ ಈ ಮಾಯೆಯನ್ನು ದಾಟುತ್ತಾರೆ.

ನ ಮಾಂ ದುಷ್ಕೃತಿನೋ ಮೂಢಾಃ
ಪ್ರಪದ್ಯಂತೇ ನರಾಧಮಾಃ|
ಮಾಯಯಾಪಹೃತಜ್ಞಾನಾಃ ಆಸುರಂ ಭಾವಮಾಶ್ರಿತಾಃ|| [ಭಗವದ್ಗೀತೆ ೭-೧೫]

ಮಾಯೆಯಿಂದಾಗಿ ಸ್ವರೂಪಜ್ಞಾನವನ್ನು ಕಳೆದುಕೊಂಡವರು, ರಾಕ್ಷಸೀ ಸ್ವಭಾವವುಳ್ಳವರು,ದುರಾಚಾರವುಳ್ಳ ಮೂಢರು, ನರಾಧಮರು, ನನ್ನನ್ನು ತಿಳಿಯಲಾರರು, ಹೋದಲಾರರು.


ಇಂಥ ಪಾಮರ ಜನರ ಕಣ್ತೆರೆಸಲು,ಅಹಂಕಾರ ಅಳಿಸಲು ಪರಮಾತ್ಮನ- ತನ್ನ ಸ್ವಸ್ವರೂಪವನ್ನು ತಿಳಿಸಲು ಪರಮಾತ್ಮನು ಈ ಪ್ರಕೃತಿಯಲ್ಲಿ ಬಹುವಿಧಲೀಲೆಗಳನ್ನು ತೋರಿಸುತ್ತಲೇ ಇರುತ್ತಾನೆ. ಮಹಾತ್ಮರ ರೂಪದಿಂದಲೋ, ಜೀವರಾಶಿಗಳ ರೂಪದಿಂದಲೋ, ಪ್ರಕೃತಿಯಲ್ಲಿ ಯಾವುದಾದರೂ ಆಶ್ಚರ್ಯದಾಕ, ಭಯಾನಕ ಸಂತೋಷದಾಯಕ ಘಟನೆ- ಪವಾಡಗಳನ್ನು ಮಾಡುತ್ತಲೇ ಇರುತ್ತಾನೆ. ನಾವದನ್ನು ನೋಡಬೇಕು,ಗಮನಿಸಬೇಕು,ಅರಿಯಬೇಕಷ್ಟೇ! ಎತ್ತರದ ಈ ವಿಶಾಲ ನೇರಳೆ ಗಿಡಗಳನ್ನು, ಸುಮಧುರ ನೇರಳೆ ಹಣ್ಣುಗಳನ್ನು, ಪರಮಾತ್ಮನು ನಾಮಗಾಗಿ ಸೃಷ್ಟಿಸಿದ್ದಾನೆ! ಆದರೂ ಇದನ್ನು ನೀವು ಮನಗಾಣಲಿಲ್ಲ! ಅವನನ್ನು ಕೃತಜ್ಞತೆಯಿಂದ ನೆನೆಯಲಿಲ್ಲ! ಪರಮಾತ್ಮನನ್ನು ಮರೆತಿರಿ! ನಿಮ್ಮನ್ನು ಇಲ್ಲಿಗೆ ಕರೆತಂದ ನನ್ನನ್ನೂ ಮರೆತಿರಿ! ಎಲ್ಲವನ್ನೂ ಮರೆತು, ನಿಮ್ಮಷ್ಟಕ್ಕೆ ನೀವೇ ಸ್ವಾರ್ಥಿಗಳಾಗಿ ಹಣ್ಣುಗಳನ್ನು ಆರಿಸಿಕೊಂಡು ತಿನ್ನಲಾರಂಭಿಸಿದಿರಿ! ನಿಮ್ಮನ್ನು ಎಚ್ಚರಿಸಲೆಂದೇ ಆ ಭಗವಂತನು ನನ್ನ ಮೂಲಕ ಇಲ್ಲಿ ನೇರಳೆ ಹಣ್ಣಿನ ರಾಶಿಯನ್ನೇ ಸೃಷ್ಟಿಸಿದ! ಎಂದ.ನಾವೆಲ್ಲ ಈ ಪರಮಾತ್ಮನನ್ನು ಅರಿತು ಧನ್ಯರಾಗೋಣ!!

Girl in a jacket
error: Content is protected !!