ಕಾಯಕಯೋಗಿಯ ಬದುಕಿನ ತುಡಿತಗಳು

Share

ಕಾಯಕ ಯೋಗಿಯ ಬದುಕಿನ ತುಡಿತಗಳು

“ಏನಪ್ಪಾ, ಕುರುಗೋಡಪ್ಪ, ಇನ್ನೂ ಎಷ್ಟು ದಿನ ಅಂತ ನನ್ನ ಮೊಮ್ಮಗನನ್ನು ಅಲೆಸಬೇಕು ಎಂದಿದ್ದೀಯ? ಇವತ್ತು, ನಾಳೆ ಅನ್ನುತ್ತಲೇ ಎರಡು ವಾರಗಳಿಂದ ಬಟ್ಟೆಕೊಡದೆ ಏಕೆ ಸತಾಯಿಸುತ್ತಿದ್ದೀಯ?” ಎಂದು ಏರಿದ ಧ್ವನಿಯಲ್ಲಿ ನನ್ನ ಅವ್ವ ದರ್ಜಿ ಕುಂಬಾರರ ಕುರುಗೋಡಪ್ಪನನ್ನು ಬಸ್ ಸ್ಟ್ಯಾಂಡ್ ನಲ್ಲಿ ದುರ್ಗಕ್ಕೆ ಹೋಗುವ ಮಹಾದೇವಿ ಬಸ್ಸಿಗಾಗಿ ಕಾಯುತ್ತಿದ್ದ ಹತ್ತಾರು ಪ್ರಯಾಣಿಕರು ಜಮಾಯಿಸುವ ರೀತಿಯಲ್ಲಿ ಬಸ್ ಸ್ಟ್ಯಾಂಡ್ ಬದಿಯಲ್ಲೇ ಇದ್ದ ಆತನ ಅಂಗಡಿ ಕಮ್ ಮನೆಯ ಹಜಾರದಲ್ಲಿ ವಿಚಾರಣೆ ನಡೆಸುವುದಕ್ಕೆ ಮೊದಲಿಟ್ಟ ಹೊತ್ತು ಸುಮಾರು ಹತ್ತು ವರ್ಷದವನಾದ ನಾನು ಅವಳ ಸೀರೆಯ ಸೆರಗಿನ ಮರೆಯಲ್ಲಿ ಮುಖ ಹುದುಗಿಸಿಕೊಂಡು, ಪಿಳಿಪಿಳಿ ಕಣ್ಣುಗಳಿಂದ ನನ್ನ ಅವ್ವನ ಮಾತಿನ ಬಾಣಗಳಿಗೆ ಇನ್ನಿಲ್ಲದಂತೆ ಘಾಸಿಗೊಳ್ಳುತ್ತಾ, ನಿಧಾನಗತಿಯಲ್ಲಿ ಚಡಪಡಿಕೆಯ ಉತ್ತುಂಗಕ್ಕೆ ಏರುತ್ತಿದ್ದ ಕುರುಗೋಡಪ್ಪನನ್ನು ನೋಡುತ್ತಿದ್ದರೆ ತನ್ನ ಹೊಲಿಗೆಯಂತ್ರದ ಎದುರಿನಲ್ಲಿ ಕುರುಕ್ಷೇತ್ರದ ತನ್ನ ಹೂತುಹೋದ ರಥದ ಸಮಕ್ಷಮ ಅಸಹಾಯಕನಂತೆ ನಿಂತ ಕಲಿಕರ್ಣನ ನೆನಪನ್ನು ಆತ ನನ್ನಲ್ಲಿ ಉಜಾಗರಗೊಳಿಸಿದ್ದ. ಕಳೆದ ಎರಡು ವಾರಗಳಿಂದ ಬೆಳಗು ಬೈಗುಗಳಲ್ಲಿ ನನ್ನ ಮನೆಯಿಂದ ಹತ್ತುಹನ್ನೆರಡು ಹೆಜ್ಜೆ ದೂರವಿರುವ ಕುರುಗೋಡಪ್ಪನ ಮನೆಗೆ ಎಡತಾಕಿ ಸುಸ್ತಾಗಿದ್ದ ನನಗೆ ನನ್ನ ಅವ್ವ ಕುರುಗೋಡಪ್ಪನ ಮೇಲೆ ಪ್ರೋಕ್ಷಿಸುತ್ತಿದ್ದ ಬೈಗುಳಗಳ ವರ್ಷಧಾರೆ ಯುಗಾದಿ ಹಬ್ಬದ ಒಂದು ತಿಂಗಳ ಮೊದಲು ಬಟ್ಟೆ ಹೊಲಿಯಲು ಹಾಕಿದರೂ ಹಬ್ಬದ ದಿನವಾದ ಇಂದಿನವರೆಗೂ ಹೊಲಿದ ಬಟ್ಟೆಯನ್ನು ಹಿಂದಿರುಗಿಸಲು ವಿಫಲನಾದ ಕುರುಗೋಡಪ್ಪನನ್ನು ಕುರಿತಾದ ನನ್ನ ಮನದ ಮೂಲೆಯಲ್ಲಿದ್ದ ಉದ್ವಿಗ್ನವನ್ನು ಸಾಕಷ್ಟು ಶಮನ ಮಾಡಿತ್ತು.

“ನೋಡು, ಹಬ್ಬದ ದಿನ ಹುಡುಗನಿಗೆ ಎಣ್ಣೆ ಹಚ್ಚಿ ಕರೆದುಕೊಂಡು ಬಂದಿದ್ದೇನೆ, ಇವನು ಸ್ನಾನ ಮಾಡಿ ಹೊಸಬಟ್ಟೆ ಹಾಕಿಕೊಳ್ಳುವುದಿದೆ, ನಾವು ಯುಗಾದಿಗೆ ಹಿರಿಯರ ಹಬ್ಬವನ್ನು ಬೇರೆ ಮಾಡುತ್ತೇವೆ, ನೀನು ಏನು ಮಾಡುತ್ತೀಯೋ ಗೊತ್ತಿಲ್ಲ, ಸ್ನಾನದ ನಂತರ ಇವನ ಮೈಮೇಲೆ ಹೊಸಬಟ್ಟೆಗಳು ಇರಬೇಕು ಅಷ್ಟೆ” ಎನ್ನುವ ಖಡಕ್ಕಾದ ಫರ್ಮಾನು ಹೊರಡಿಸಿದ ಅಜ್ಜಿಯ ಮಾತುಗಳನ್ನು ಕೇಳಿ ತಾನು ಕುಳಿತ ಇಕ್ಕಟ್ಟಾದ ಸ್ಟೂಲಿನ ಮೇಲೇ ಪೇಚಿಗೆ ಸಿಕ್ಕಂತೆ ಆಚೀಚೆ ಒದ್ದಾಡಿದ ಕುರುಗೋಡಪ್ಪನ ವಾಮನಾಕೃತಿ ಮತ್ತಷ್ಟು ಕುಗ್ಗಿದಂತೆ ತೋರಿಬಂತು. ಪಡಸಾಲೆಯ ಮೆಟ್ಟಿಲ ಮೇಲೆ ಕುಳಿತು ಗವಾಕ್ಷಿಯ ಬೆಳಕಿನಲ್ಲಿ ಬೆರಳಿಗೆ ಲೋಹದ ರಕ್ಷಣಾಕವಚವನ್ನು ತೊಟ್ಟು ಅಪ್ಪ ಹೊಲಿದ ವಸ್ತ್ರಗಳಿಗೆ ಖಾಜಿ ಮತ್ತು ಗುಂಡಿಗಳ ಫೈನಲ್ ಟಚ್ ಕೊಡುತ್ತಿದ್ದ ವಸಂತನ ಕಡೆಗೆ ತಿರುಗಿ ನೋಡಿದ ನನ್ನ ಅವ್ವನ ಕೋಪ ಮತ್ತಷ್ಟು ಧಗ್ಗೆಂದಿತು. “ಏನು ಅನ್ಯಾಯ ಇದು ಕುರುಗೋಡಿ? ನಿನ್ನ ಮಗ ಹಬ್ಬಕ್ಕೆ ಹೊಸ ದಿರಿಸನ್ನು ಹೊದ್ದು ಕುಳಿತಿದ್ದಾನೆ, ನನ್ನ ಮೊಮ್ಮಗ ನಿನ್ನ ಮಗನಿಗಿಂತ ಬೇರೆಯೇ? ನಿನ್ನ ಮಗನಿಗೆ ಪೋಷಾಕು ಸಿದ್ಧಪಡಿಸುವ ಹೊತ್ತು ನನ್ನ ಮೊಮ್ಮಗ ನೆನಪಿಗೆ ಬರಲಿಲ್ಲವೇ?” ಎನ್ನುವ ನನ್ನ ಅಜ್ಜಿಯ ತೀಕ್ಷ್ಣವಾದ ವಾಗ್ಝರಿ ಅಭಾಧಿತವಾಗಿ ಪ್ರವಹಿಸುವ ವೇಳೆಯಲ್ಲಿಯೇ ಹೊರಬಾಗಿಲಿನಿಂದ ಜೋರಾಗಿ ಓಡುತ್ತಾ ಮನೆಯೊಳಗೆ ಜಂಪಿಸಿದ ವಸಂತನ ತಮ್ಮ ಶಿವು ತೊಟ್ಟಿದ್ದ ಹೊಸಾ ಜುಬ್ಬಾ, ಪೈಜಾಮಗಳು ಅವ್ವನ ಕೋಪವನ್ನು ಸೀದಾ ನೆತ್ತಿಯ ರಂಧ್ರಕ್ಕೇ ಏರಿಸಿದ್ದವು. “ಇಬ್ಬಿಬ್ಬರು ಮಕ್ಕಳಿಗೆ ಹಬ್ಬದ ಬಟ್ಟೆ ಹೊಲಿದು ರೆಡಿಮಾಡಿದ್ದೀಯ, ನನ್ನ ಮೊಮ್ಮಗ ಒಬ್ಬ ನಿನಗೆ ಭಾರವಾಗಿದ್ದನೇನು?” ಎನ್ನುವ ಅವ್ವನ ಮುಂದುವರೆದ ವಾಗ್ಪ್ರಹಾರಕ್ಕೆ ಕುರುಗೋಡಪ್ಪ ಇನ್ನೂ ಎಂಟರ ಎಳೆಬಿಸಿಲಿನಲ್ಲಿಯೇ ಮೈಯಲ್ಲಿನ ಸಕಲ ರಂಧ್ರಗಳನ್ನೂ ಸೀಳಿ ಹೊರನುಗ್ಗುತ್ತಿದ್ದ ಬೆವರಿನಲ್ಲಿ ತೊಪ್ಪೆಯಾಗುವಷ್ಟು ಒದ್ದೆಯಾಗಿ ಹೋಗಿದ್ದ. ಸ್ವಭಾವತಃ ಸಜ್ಜನ, ಮೃದುಸ್ವಭಾವದ ಕುರುಗೋಡಪ್ಪನ ಗಂಟಲು ಕಟ್ಟಿಹೋಗಿ ಧ್ವನಿಪೆಟ್ಟಿಗೆ ಸ್ವರ ಹೊರಡಿಸದಷ್ಟು ಹೈರಾಣಾಗಿತ್ತು. “ನೀನು ನಾಳೆ ಬಟ್ಟೆಕೊಡದೇ ಇದ್ದರೆ ನನ್ನ ಅವ್ವನನ್ನು ಕರೆತರುತ್ತೇನೆ” ಎಂದು ಮೊನ್ನೆ ಸಾಯಂಕಾಲದ ನನ್ನ ಯಥಾವತ್ ಭೇಟಿಯ ವೇಳೆ ಹೇಳಿದಾಗಲೂ ಅದನ್ನು ನಿರ್ಲಕ್ಷಿಸಿ ನನ್ನೆಡೆ ಕಣ್ಣೆತ್ತಿಯೂ ನೋಡದೆ ಒಂದು ಬಗೆಯ ವಿಕಟನಗೆಯನ್ನು ಮಾತ್ರ ಮುಖದ ಮೇಲೆ ಪ್ರದರ್ಶಿಸಿದ್ದ ದರ್ಜಿಗೆ ಆಗಬೇಕಾದ ಶಾಸ್ತಿ ಆಗುತ್ತಿದೆ ಎಂದು ಹಬ್ಬದ ಹೊಸಬಟ್ಟೆ ತೊಟ್ಟಷ್ಟೇ ಖುಷಿಯಲ್ಲಿ ನಾನು ನಡೆಯುತ್ತಿದ್ದ ಘಟನಾವಳಿಗಳ ಗಮ್ಮತ್ತನ್ನು ಸವಿಯುತ್ತಿದ್ದರೆ ಹಬ್ಬದ ಅಡುಗೆಯ ತಯಾರಿಯಲ್ಲಿ ನಿರತರಾಗಿದ್ದ ಕುರುಗೋಡಪ್ಪ ಅವರ ಧರ್ಮಪತ್ನಿ ಲಲಿತಮ್ಮ ಹೊರಗಡೆ ನಡೆಯುತ್ತಿದ್ದ ಗಲಾಟೆಗೆ ಅಡುಗೆಕೋಣೆಯಿಂದ ಕೈಯಲ್ಲಿ ಮರದಸೌಟು ಹಿಡಿದೇ ಹೊರಬಂದವಳು, ಪಡಸಾಲೆಯ, ಪತಿ ಕುಳಿತ ಸ್ಥಾನಕ್ಕೆ ಹತ್ತಿರವಾದ, ಬಲಭಾಗದ ಕಂಬಕ್ಕೆ ಒರಗಿ ನಿಂತು ಅಲ್ಲಿ ನಡೆಯುತ್ತಿದ್ದ ಪ್ರಕರಣದ ಆಂತರ್ಯವನ್ನು ಕ್ಷಣಾರ್ಧದಲ್ಲಿ ಗ್ರಹಿಸುವಲ್ಲಿ ಶಕ್ತಳಾದಳು.

“ಅಮ್ಮಾ, ಹುಡುಗ ಮೈ ತೊಳೆದುಕೊಳ್ಳಲಿ, ಇನ್ನೊಂದು ಘಂಟೆಯಲ್ಲಿ ನಾನು ಪ್ರಕಾಶನ ಬಟ್ಟೆಗಳನ್ನು ಶಿವು ಕೈಯಲ್ಲಿ ಕಳುಹಿಸುತ್ತೇನೆ. ಬನ್ನಿ, ಕುಳಿತುಕೊಳ್ಳಿ, ಟೀ ಕುಡಿದು ಹೋಗುವಿರಂತೆ” ಎಂದು ವಸಂತ ಕುಳಿತ ಪಡಸಾಲೆ ಕಟ್ಟೆಯ ಎದುರಿಗಿನ ಚಾಪೆ ಹಾಸಿದ ಕಟ್ಟೆಯ ಕಡೆಗೆ ನನ್ನ ಅಜ್ಜಿಯನ್ನು ಲಲಿತಮ್ಮ ನಿರ್ದೇಶಿಸತೊಡಗಿದಳು. “ಬೇಡ ಲಲಿತಾ, ಹಬ್ಬದ ಕೆಲಸಗಳು ಇನ್ನೂ ಸುಮಾರು ಬಾಕಿ ಇವೆ, ಇಂದಿರಮ್ಮ ಒಬ್ಬಳೇ ಬೆಳಗಿನಿಂದ ಅಡುಗೆಮನೆಯಲ್ಲಿ ಹೆಣಗುತ್ತಿದ್ದಾಳೆ, ಇವನು ಬೆಳಗಿನಿಂದ ಒಂದೇ ಸಮನೆ ಹೊಸಬಟ್ಟೆಗಾಗಿ ಅಳುತ್ತಿದ್ದ, ಹಾಗಾಗಿ ನಾನೇ ಬಂದೆ, ಬಟ್ಟೆಯನ್ನು ಕಳುಹಿಸುವುದನ್ನು ಮಾತ್ರ ಮರೆಯಬೇಡ” ಎನ್ನುತ್ತಾ ಲಲಿತಮ್ಮನ ಉತ್ತರಕ್ಕೂ ಕಾಯದೆ ನಿರ್ಗಮಿಸಿದ ನನ್ನ ಅವ್ವನ ಒಟ್ಟಿಗೆ ಮನೆಗೆ ಹೋಗದೆ ಅಲ್ಲಿ ನಡೆಯಬಹುದಾದ ಭವಿಷ್ಯತ್ ನ ಘಟನೆಗಳಿಗೆ ಸಾಕ್ಷಿಯಾಗಲೆಂದೆ ಹೊರಬಾಗಿಲಿನ ಎಡಬದಿಯ, ಕುರುಗೋಡಪ್ಪನ ಎದುರಿನ ಕಿಟಿಕಿಯ ಒಂದು ಪಕ್ಕಕ್ಕೆ ಸರಿದು ನಿಂತೆ.

“ನಿನಗೆ ಯಾರನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನುವುದು ಗೊತ್ತಿಲ್ಲ, ಹದಿನೈದು ವರ್ಷಗಳಿಂದ ರಾಟೆ ಕುಟ್ಟುತ್ತಿದ್ದೀಯ ಅಷ್ಟೇ. ಗೌರಜ್ಜಿ ಎಂತಹವಳು ಎನ್ನುವುದು ನಿನಗೆ ತಿಳಿದಿದೆ, ಮೊನ್ನೆ ಬೆಳಿಗ್ಗೆ ಗೇಟಿನವರ ಹುಡುಗ ಬಟ್ಟೆ ಕೇಳುತ್ತಾ ಬಂದಾಗಲೇ ನಿನಗೆ ಎಚ್ಚರಿಸಿದ್ದೆ, ಪ್ರಕಾಶನ ಬಟ್ಟೆಗಳು ಎಲ್ಲಿ? ನಿನ್ನೆ ರಾತ್ರಿ ನೀವು ಅವನ ಮತ್ತು ಅವನ ತಮ್ಮನ ಬಟ್ಟೆಗಳನ್ನು ಕಟ್ ಮಾಡುತ್ತಿದ್ದ ಹಾಗಿತ್ತು” ಎನ್ನುವ ತನ್ನ ಕುರಿತಾದ ಹೆಂಡತಿಯ ಬಿರುಸು ಮಾತುಗಳಿಗೆ ಬೀಸುವ ದೊಣ್ಣೆಯಿಂದ ಆಗತಾನೆ ತಪ್ಪಿಸಿಕೊಂಡು ತುಸು ನಿರಾಳನಾದಂತೆ ಕಂಡುಬಂದ ಕುರುಗೋಡಪ್ಪ “ಏನು ಮಾಡುವುದು? ಈ ಹೊತ್ತು ಬೆಳಿಗ್ಗೆಯೇ ಗೇಟಿನ ಹುಡುಗರ ಬಟ್ಟೆಗಳನ್ನು ಹೊಲಿದು ಮುಗಿಸಬೇಕು ಅಂತಿದ್ದೆ, ಆದರೆ ಬೆಳ್ಳಂಬೆಳಿಗ್ಗೆ ಬಂದು ತನ್ನ ಮೊಮ್ಮಕ್ಕಳ ಬಟ್ಟೆಗಳಿಗಾಗಿ ರಾದ್ದಾಂತ ಮಾಡಿ ಹೋದ ರಾಯ್ನಲ್ಲಿ ತಿಪ್ಪಮ್ಮನ ಬಟ್ಟೆಗಳನ್ನು ಸದ್ಯ ತಯಾರು ಮಾಡುತ್ತಿದ್ದೇನೆ” ಎನ್ನುವ ಸಮಜಾಯಿಷಿ ನೀಡತೊಡಗಿದ. “ಗೇಟಿನ ಗೌರಜ್ಜಿ ಮುಖ್ಯವೋ? ರಾಯ್ನಲ್ಲಿ ತಿಪ್ಪಮ್ಮ ಮುಖ್ಯವೋ? ನಿನಗೆ ಏನಂದರೂ ವ್ಯವಹಾರಜ್ಞಾನ ಕಮ್ಮಿ. ದಿನಬೆಳಗಾದರೆ ಗೌರಜ್ಜಿ ಅಂಗಡಿಗೆ ಮನೆಸಾಮಾನುಗಳಿಗೆ ಎಡತಾಕುತ್ತೇವೆ, ಒಂದು ದಿನವೂ, ಎಷ್ಟೇ ಹಳೆಯ ಬಾಕಿ ಇದ್ದರೂ, ಗೌರಜ್ಜಿ ನಮಗೆ ದಿನಸಿ ಕೊಡುವುದನ್ನು ನಿಲ್ಲಿಸಿಲ್ಲ. ಆಕೆಯ ಮೊಮ್ಮಕ್ಕಳಿಗೆ ಹಬ್ಬಕ್ಕೆ ಸರಿಯಾಗಿ ಬಟ್ಟೆಗಳನ್ನ ಹೊಲಿದುಕೊಡಲಿಲ್ಲ ಎಂದರೆ ಏನು ಚೆನ್ನ? ಮೊದಲು ಪ್ರಕಾಶನ ಬಟ್ಟೆ ಹೊಲಿ, ತಿಪ್ಪಜ್ಜಿ ಬಂದರೆ ನಾನು ಸಂಭಾಳಿಸುತ್ತೇನೆ” ಎನ್ನುತ್ತಾ ನನ್ನ ಅವ್ವನ ಚಿಲ್ಲರೆ ದಿನಸಿ ಮತ್ತು ತಿಂಡಿ ಅಂಗಡಿಯ ಖಾಯಂ ಗಿರಾಕಿಯಾದ ಲಲಿತಮ್ಮ ಪಡಸಾಲೆಯಿಂದ ಸರಸರನೆ ಇಳಿದು ಹೊಲಿಗೆಯಂತ್ರದ ಮೇಲಿದ್ದ, ಗಂಡ ಹೊಲಿಯುತ್ತಿದ್ದ ಬಟ್ಟೆಗಳನ್ನು, ಅಚಾನಕ್ ಆಗಿ ಎತ್ತಿ ವಸಂತನ ಪಕ್ಕ ಗುಡ್ಡೆಹಾಕಿ ಒಲೆಯ ಮೇಲೆ ಕುದಿಯಲು ಇಟ್ಟ ಹೋಳಿಗೆಸಾರಿನ ನೆನಪಾಗಲು ಅಡುಗೆ ಮನೆಗೆ ಓಡಿದಳು. ಬೇರೆ ಗತ್ಯಂತರ ಇಲ್ಲದೆ ತನ್ನ ಸ್ವಸ್ಥಳದಿಂದ ಎದ್ದ ಕುರುಗೋಡಪ್ಪ ಪಕ್ಕದಲ್ಲಿದ್ದ ಮರದ ಬೀರನ್ನು ಕೀರ್ ಎನ್ನುವ ಕರ್ಕಶ ಸದ್ದಿನೊಂದಿಗೆ ತೆರೆದು ಕೆಳಗಿನ ಖಾನೆಯಲ್ಲಿದ್ದ ನನ್ನ ಬಟ್ಟೆಗಳನ್ನು ಅನಾಮತ್ತಾಗಿ ಎತ್ತಿ ತನ್ನ ಹೊಲಿಗೆಯಂತ್ರದ ಮೇಲೆ ಇಟ್ಟಾಗ ಅತೃಪ್ತ ಆತ್ಮವೊಂದಕ್ಕೆ ಶಾಸ್ತ್ರಬದ್ದ ಶ್ರಾದ್ಧದ ನಂತರ ದೊರೆಯುವ ಮುಕ್ತಿಯಷ್ಟೇ ದೊಡ್ಡಮಟ್ಟದ ಶಾಂತಿ ನನಗೆ ಸಿಕ್ಕಿತು. ಕಿಟಕಿಯಿಂದ ಹೊಲಿಗೆಯಂತ್ರದ ಮೇಲೆ ಬೀಳುತ್ತಿದ್ದ ಬೆಳಕಿಗೆ ಅಡ್ಡಲಾಗಿ ನಿಂತ ನನ್ನನ್ನು ಬಿರುಗಣ್ಣುಗಳಿಂದ ನೋಡಿದ ದರ್ಜಿ “ಇನ್ನು ನೀನು ಮನೆಗೆ ರೈಟ್ ಹೇಳಬಹುದು” ಎಂದು ತುಸು ಕಠಿಣವಾದ ಸ್ವರದಲ್ಲಿ ಹೇಳಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ನನಗಿಂತ ಒಂದು ವರ್ಷ ಕಿರಿಯನಾದ ವಸಂತನ ಮುಖದ ಮೇಲೆ ಮೂಡಿದ್ದ ವ್ಯಂಗ್ಯಭರಿತ ನಗೆಯನ್ನು ಗಮನಿಸುತ್ತಲೇ ಹೊರಬಾಗಿಲನ್ನು ದಾಟಿದವನು ಒಂದೇ ನೆಗೆತದಲ್ಲಿ ಬಾಗಿಲ ಮುಂದಿನ ಕಾಂಪೌಂಡ್ ನ ಎರಡು ಮೆಟ್ಟಿಲುಗಳನ್ನ ಹಾರಿ ರಸ್ತೆಯ ಮೇಲಿದ್ದೆ.

 

ಈ ಘಟನೆಯ ವೇಳೆಗೆ ಸುಮಾರು ನಲ್ವತ್ತು ವರ್ಷಗಳ ಆಸುಪಾಸಿನವನಾದ ಕುರುಗೋಡಪ್ಪ ಪಾಪದ ಪ್ರಾಣಿ. ಬದುಕಿನಲ್ಲಿ ಮೊದಲಿಂದಲೂ ಹೆಚ್ಚು ದೇಹಶ್ರಮ ವಹಿಸದ ಕಾರಣದಿಂದಲೋ ಏನೋ ಮೇಲ್ತೋರಿಕೆಗೇ ಮೃದು ಎಂದು ತೋರುತ್ತಿದ್ದ ಕೃಶದೇಹದ ಧಣಿಯಾದ ಕುರುಗೋಡಪ್ಪ ತಟ್ಟನೆ ನೋಡಿದರೆ ಥೇಟ್ ಆತನು ಕುಳಿತ ಸ್ಟೂಲಿನ ಮೇಲಿನ ಗೋಡೆಗೆ ನೇತು ಹಾಕಿದ್ದ ಜಗಜ್ಜೋತಿ ಬಸವೇಶ್ವರರ ಫೋಟೋದಲ್ಲಿನ ಸಿಂಹಾಸನಾರೂಢ ಬಸವಣ್ಣನವರ ಹಾಗೆಯೇ ಕಾಣುತ್ತಿದ್ದ. ಇದು ಕೇವಲ ಕಾಕತಾಳೀಯ ಎಂದು ಈಗ ನನಗೆ ಅನಿಸುತ್ತಿಲ್ಲ, ಪ್ರತಿಯೊಬ್ಬ ಕಾಯಕಯೋಗಿ ಬಸವಣ್ಣನವರನ್ನ ಹೋಲುತ್ತಾನೆ ಮತ್ತು ಪ್ರತೀ ಕಾಯಕಯೋಗಿಯ ಹೃದಯದ ಬಹುದೊಡ್ಡ ಭಾಗವಾಗಿಯೇ ಬಸವಣ್ಣ ನೆಲೆಸಿರುತ್ತಾನೆ ಎಂದು ನಾನು ಈಗ ಬಲವಾಗಿ ನಂಬಿರುತ್ತೇನೆ. ಕುರುಗೋಡಪ್ಪ ಯಾವಾಗಲೂ ಧರಿಸುತ್ತಿದ್ದದ್ದು ಶುಭ್ರವಾದ ಮತ್ತು ಗರಿಗರಿ ಇಸ್ತ್ರಿಯಿಂದ ಕೂಡಿದ ಬಿಳಿಖಾದಿ ಜುಬ್ಬಾ ಮತ್ತು ಬಿಳಿಖಾದಿ ಪಂಚೆ. ಕೆಂಪು ಬಣ್ಣದ, ಸಾಧಾರಣ ಮೈಕಟ್ಟಿನ ಕುರುಗೋಡಪ್ಪ ಯಾವಾಗಲೂ ತನ್ನ ವಿಶಾಲಹಣೆಯನ್ನು ವಿಭೂತಿಯ ತ್ರಿವಳಿಗೆರೆಗಳಿಂದ ಸಾಲಂಕೃತಗೊಳಿಸಿರುತ್ತಿದ್ದ. ಅನ್ಯರ ಬಗ್ಗೆ ಅಪಾರ ಅಂತಃಕರಣ ಮತ್ತು ಕಾಳಜಿಯನ್ನು ಧಾರಾಳವಾಗಿ ಪ್ರದರ್ಶಿಸುತ್ತಿದ್ದ ಕುರುಗೋಡಪ್ಪ ಮಟಮಟ ಮಧ್ಯಾಹ್ನದ ಬೇಸಗೆಯ ಒಂದು ದಿನ ದುರ್ಗದಿಂದ ಆಂಬುಲೆನ್ಸ್ ನಲ್ಲಿ ಊರಿಗೆ ಬಂದ ದೊಡ್ಡಮನೆ ಬಸಪ್ಪನವರ ಕಳೇಬರದ ಹಿಂದೆ ತಮ್ಮ ಮನೆಯಿಂದ ಅರ್ಧ ಕಿ.ಮೀ. ದೂರದ ಮೃತರ ಮನೆಯವರೆಗೆ ಚಪ್ಪಲಿ ಇಲ್ಲದ ಕಾಲಿನಲ್ಲಿ ಟಾರ್ ರಸ್ತೆಯ ಮೇಲೆ ಒಂದೇ ಉಸಿರಿನಲ್ಲಿ ಓಟಕಿತ್ತ ದೃಶ್ಯ ಮಾತ್ರ ನನ್ನ ನೆನಪಿನ ಅಂಗಳದಲ್ಲಿ ಮಾಸದ ಹಾಗೆ ಮೂಡಿದೆ. ಅನ್ಯರ ಕಷ್ಟಗಳಿಗೆ ಈ ಮಟ್ಟದ ಸ್ಪಂದನೆ ಕುರುಗೋಡಪ್ಪನಿಂದ ಸದಾ ಬರುತ್ತಿತ್ತು. ಕುರುಗೋಡಪ್ಪನ ಮಾತಾದರೂ ಅಷ್ಟೇ, ಬೆಣ್ಣೆಯಲ್ಲಿ ಕೂದಲು ತಗೆದ ಹಾಗೆ. ಅಷ್ಟು ನೈಸು. ಯಾರೊಡನೆಯೂ ವೈರತ್ವವನ್ನು ಕಟ್ಟಿಕೊಳ್ಳದ ಕುರುಗೋಡಪ್ಪ ನಸುನಗುತ್ತಲೆ ತನ್ನ ವ್ಯವಹಾರದ ಅನೇಕ ಕಠಿಣ ಸನ್ನಿವೇಶಗಳಿಂದ ಪಾರಾಗಿದ್ದು ವಸಂತನ ಒಂದಿಗೆ ಚಿಕ್ಕಂದಿನಲ್ಲಿ ಆತನ ಮನೆಯಲ್ಲಿ ಆಟ ಆಡುತ್ತಿದ್ದ ವೇಳೆಯಲ್ಲಿಯೇ ನಾನು ಗಮನಿಸಿದ್ದಿದೆ.

ಮನೆಯ ಹಿಂದಿನ ಹಿತ್ತಲಿನ ನುಗ್ಗೆಮರದ ಕೆಳಗೆ ನಿಂತು ಹಬೆಯಾಡುತ್ತಿದ್ದ ಬಿಸಿನೀರಿನಲ್ಲಿ ಎಣ್ಣೆಸ್ನಾನವನ್ನು ಮುಗಿಸಿ, ಕೆಂಪುವಸ್ತ್ರದಿಂದ ಮೈ ಒರೆಸುತ್ತಾ ಶಿವುನ ನಿರೀಕ್ಷೆಯಲ್ಲಿ ಮುಂಬಾಗಿಲಿನ ಹೊಸ್ತಿಲ ಕಡೆಗೆ ಮುಖಮಾಡಿ ಪಡಸಾಲೆಯಲ್ಲಿ ನಿಂತವನಿಗೆ ಅನಿತರಲ್ಲಿಯೇ ಹೊಸಬಟ್ಟೆ ಹಿಡಿದು ಓಡೋಡಿ ಒಳಬಂದ ಶಿವುವಿನ ದರ್ಶನವಾಗಿ ಪುಳಕಿತಗೊಂಡೆ. ಆದರೆ ಹೊಸ ಅಂಗಿ ಮತ್ತು ನಿಕ್ಕರ್ ನ್ನು ಆತುರಾತುರದಲ್ಲಿ ಮೈಗೆರಿಸಿಕೊಂಡವನ ರಣೋತ್ಸಾಹ ಜರ್ರೆಂದು ಕೆಳಗಿಳಿಯಿತು. ನನ್ನ ಮೊಣಕೈಗಳ ಕೆಳಗೆ ಬರುವಂತೆ ದೊಗಲುದೊಗಲಾಗಿ ಹೊಲಿದಿದ್ದ ಅಂಗಿ ಮತ್ತು ಅಷ್ಟೇ ಜಾಳುಜಾಳಾಗಿ ನನ್ನ ಸೊಂಟದ ಮೇಲೆ ನಿಲ್ಲದೇ ಜಾರುತ್ತಿದ್ದ ನಿಕ್ಕರ್ ನೋಡಿ ನನ್ನ ಕಣ್ಣುಗಳಲ್ಲಿ ಫಳಕ್ಕನೆ ಗಂಗೆ ಧುಮ್ಮಿಕ್ಕಿದ್ದಳು. “ಅವ್ವಾ, ಜಲ್ದಿ ಬಾ, ಇಲ್ಲಿ ನೋಡು, ನನ್ನ ಬಟ್ಟೆ ಕುರುಗೋಡಪ್ಪ ಎಷ್ಟು ಸಡಿಲಾಗಿ ಹೊಲೆದಿದ್ದಾನೆ” ಎಂದು ಸಿಂಬಳ ಸೋರುತ್ತಿದ್ದ ಮೂಗನ್ನು ಹೊಸ ಅಂಗಿನ ತೋಳುಗಳಿಂದಲೆ ಒರೆಸುತ್ತಾ ಮತ್ತೆ ಅಜ್ಜಿ ಬರುವಿಕೆಗಾಗಿ ಆರ್ತನಾದವನ್ನ ಮಾಡತೊಡಗಿದ ನನ್ನ ಮುಂದೆ ಅದ್ಯಾವ ಮಾಯೆಯಲ್ಲೋ ಶಿವು ಮತ್ತೆ ಧುತ್ತೆಂದು ಪ್ರತ್ಯಕ್ಷನಾಗಿದ್ದ. “ಪ್ರಕಾಶ, ನಾನು ನಿನಗೆ ಈ ಮೊದಲು ಕೊಟ್ಟು ಹೋಗಿದ್ದು ನಿನ್ನ ಬಟ್ಟೆಗಳಲ್ಲ. ಅವು ಶಂಭಣ್ಣನವರ ಲೋಕಪ್ಪಗೌಡ್ರ ಮಗ ಸಿದ್ದರಾಮನ ಬಟ್ಟೆ, ನಿನ್ನ ಬಟ್ಟೆ ಇಲ್ಲಿವೆ, ತಗೋ, ನಿನ್ನ ಮತ್ತು ಸಿದ್ಧರಾಮನ ಬಟ್ಟೆ ಅದಲುಬದಲಾಗಿದ್ದವು” ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೆ ತಾನು ತಂದ ಬಟ್ಟೆಗಳನ್ನು ನನ್ನ ಕೈಯಲ್ಲಿ ತುರುಕಿ ತಾನೇ ನಾನು ತೊಟ್ಟ ಅಂಗಿ ಮತ್ತು ನಿಕ್ಕರ್ ಗಳ ಗುಂಡಿ ಬಿಚ್ಚಲಿಕ್ಕೆ ಮೊದಲಾದ. “ಶಿವೂ, ಏನು ಮಾಡುತ್ತಿದ್ದೀಯ? ಒಂದು ನಿಮಿಷ ನಿಲ್ಲು” ಎನ್ನುತ್ತಾ ಅವನನ್ನು ತಡೆದು ಆತುರಾತುರವಾಗಿ ನಾನು ತೊಟ್ಟ ಬಟ್ಟೆಗಳನ್ನ ಬಿಚ್ಚಿ ಶಿವುವಿನ ಕೈಗಿಟ್ಟೆ. ನನ್ನ ಅರ್ತನಾದಕ್ಕೆ ಅಡುಗೆ ಮನೆಯಲ್ಲಿ ಕರಿಗೆಡುಬು ಕರಿಯುತ್ತಿದ್ದ ಅಜ್ಜಿ ಪಡಸಾಲೆಗೆ ಆಗಮಿಸಿ “ಏನಾಯ್ತೋ? ಬಟ್ಟೆ ಬಂದಿವೆಯಲ್ಲ, ತರಲೆ ಮಾಡದೆ ಸುಮ್ಮನೆ ಹಾಕಿಕೋ” ಎಂದವಳು ಮತ್ತೆ ತನ್ನ ಕೆಲಸ ನಿಮಿತ್ತ ಅಡುಗೆಮನೆಗೆ ಜಾರಿದಳು. ಆಶ್ಚರ್ಯ ಎನ್ನುವಂತೆ ಈ ಸಲದ ನನ್ನ ವಸ್ತ್ರಗಳು ನನಗೆ ಪರ್ಫೆಕ್ಟ್ ಎನ್ನುವಂತೆ ಫಿಟ್ ಆಗಲಾಗಿ ಬಟ್ಟೆಗಳನ್ನ ಅವ್ವನಿಗೆ ತೋರಿಸುವ ಖುಷಿಯಲ್ಲಿ ನಾನೂ ಅಡುಗೆಕೋಣೆಗೆ ಜಿಗಿದೆ.

ಈ ಯುಗಾದಿಯಲ್ಲಿ ಹೊಸ ಬಟ್ಟೆಗಳ ಸಂಗ್ರಹಣೆ ಕುರಿತು ನನಗಾದ ಅನುಭವ ನನ್ನ ಮಟ್ಟಿಗೆ ಮೊದಲನೆಯದೂ ಅಲ್ಲ, ಕೊನೆಯದೂ ಆಗಿ ಉಳಿಯಲಿಲ್ಲ. ಹೊಸಬಟ್ಟೆ ಹೊಲೆಯಲು ಹಾಕುತ್ತಿದ್ದ ವರ್ಷದ ದೀಪಾವಳಿ ಮತ್ತು ಯುಗಾದಿ ಹಬ್ಬಗಳ ಸಂದರ್ಭದಲ್ಲಿ ನಾನು ಕುರುಗೋಡಪ್ಪನಿಂದ ಕ್ಲುಪ್ತಸಮಯದಲ್ಲಿ ಬಟ್ಟೆಗಳನ್ನು ಪಡೆಯಲು ಇದೇ ರೀತಿ ಪ್ರತಿಬಾರಿಯೂ ಪಡಿಪಾಟಲು ಪಟ್ಟಿದ್ದಿದೆ. ಇದು ನನ್ನ ವೈಯಕ್ತಿಕ ಮುಜುಗರವಾಗಿ ಉಳಿಯದೆ ನನ್ನ ತಲೆಮಾರಿನ ಎಲ್ಲಾ ಲಿಂಗಾಯಿತಮಕ್ಕಳ ಸಮಷ್ಟಿಗೋಳಾಗಿ ಪರಿವರ್ತಿತವಾಗಿದ್ದು ಕುರುಗೋಡಪ್ಪನ ಮನೆಗೆ ಹೋದ ಬಟ್ಟೆಗಳು ಸಕಾಲದಲ್ಲಿ ಕೈಗೆ ಸಿಗದ ನನ್ನ ಖಾಸಗಿ ಸಂಗತಿಗಳ ದುಃಖಭರಿತ ಕಪ್ಪುಮೋಡಗಳ ಅಂಚಿನ ಬೆಳ್ಳಿಗೆರೆಗಳಾಗಿ ಹೃದ್ಗೋಚರವಾಗುತ್ತಿದೆ. ಒಂದೆರೆಡು ತಲೆಮಾರುಗಳನ್ನು ಸದಾ ನಿರೀಕ್ಷೆಯ ಹೊಸ್ತಿಲಲ್ಲೇ ನಿಲ್ಲುವಂತೆ ಮಾಡಿದ್ದ ಕುರುಗೋಡಪ್ಪ ನಮ್ಮ ಊರಿನ ಹೆಚ್ಚಿನಂಶದ ಗಂಡುಮಕ್ಕಳ ನಾಗರೀಕತೆಯನ್ನು ಉಳಿಸಿ ಸಲಹುವುದರಲ್ಲಿ ಕಳೆದುಹೋದ ಕಾಲಘಟ್ಟದಲ್ಲಿ ಅತಿ ಪ್ರಾಮುಖ್ಯವಾದ ಪಾತ್ರವನ್ನು ನಿಭಾಯಿಸಿದ್ದ ಎನ್ನುವ ಅಂಶವನ್ನು ಓದುಗರು ಗಮನಿಸಲೇಬೇಕು. ದುರ್ಗದಲ್ಲಿ ಚಾಲ್ತಿಯಲ್ಲಿ ಇದ್ದ ನವೀನ ಬಗೆಯ ಫ್ಯಾಷನ್ ತುರುವನೂರಿಗೆ ತಡವಾಗಿ ತಲುಪುತ್ತಿತ್ತಾದರೂ ಅದು ತನ್ನ ಇರುವನ್ನು ತೋರುತ್ತಿದ್ದು ಮಾತ್ರ ದಿನದ ಹದಿನಾಲ್ಕು ಗಂಟೆಗಳಿಗೂ ಮೀರಿದ ಅವಧಿಯಲ್ಲಿ ವಾರದ ಏಳೂ ದಿನಗಳು ಬಿಡುವಿಲ್ಲದೆ, ಹೊಟ್ಟೆಪಾಡಿಗಾಗಿ ಆಗೀಗ ಕುರುಗೋಡಪ್ಪ ಕುಡಿಸುತ್ತಿದ್ದ ಕೇವಲ ಎಣ್ಣೆಯನ್ನು ನೆಚ್ಚಿಕೊಂಡೆ ವಿಶ್ರಾಂತಿಯಿಲ್ಲದೆ ದುಡಿದ ಆತನ ಹೊಲಿಗೆಯಂತ್ರದ ಮೂಲಕವೇ ಎನ್ನುವುದು ಅಷ್ಟೇ ದಿಟವಾದದ್ದು.

ಕುಂಬಾರರ ವಂಶದ ಕುಡಿಯಾಗಿ ಉದಯಿಸಿದ ಕುರುಗೋಡಪ್ಪ ತನ್ನ ಯೌವನಕ್ಕೆ ಪಾದಾರ್ಪಣೆ ಮಾಡುವ ಹೊತ್ತಿಗೆ ಊರಲ್ಲಿ ಮಣ್ಣಿನಲ್ಲಿ ಮಾಡಿದ ಮಡಿಕೆ, ಕುಡಿಕೆ, ಕ್ವಾರಚಿಪ್ಪುಗಳು, ಅಡಕಲಿ ಯಾ ಕಾರಬಾನ ಗೂಡು, ನೆಲವು ಮುಂತಾದ ನಿತ್ಯ ಮನೆಬಳಕೆಯ ವಸ್ತುಗಳು ತಮ್ಮ ಅಸ್ತಿತ್ವವನ್ನು ಸ್ಟೀಲ್ ಮತ್ತು ಸಿಲ್ವರ್ ನಲ್ಲಿ ಮಾಡಿದ ಗೃಹಉಪಯೋಗಿ ವಸ್ತುಗಳಿಗೆ ಬಿಟ್ಟುಕೊಡುತ್ತಿದ್ದ ಹೊಸ ಮನ್ವಂತರವೊಂದು ದಾಂಗುಡಿಯಿಟ್ಟಿತ್ತು. ತನ್ನ ಕುಲಕಸಬಿನಲ್ಲಿ ಮೊದಲಿಂದಲೂ ಅಷ್ಟೇನೂ ಆಸಕ್ತಿಯಿಲ್ಲದ ಕುರುಗೋಡಪ್ಪ, ಕುಂಬಾರಿಕೆಯನ್ನು ತನ್ನ ತಮ್ಮಂದಿರಾದ ರುದ್ರಣ್ಣ ಮತ್ತು ಬಸವರಾಜಪ್ಪನಿಗೆ ಬಿಟ್ಟುಕೊಟ್ಟು ದರ್ಜಿ ಕಸುಬಿನ ಎಡೆಗೆ ಆಕರ್ಷಿತನಾಗಿ, ಆ ಹೊತ್ತಿನಲ್ಲಿ ಊರಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದ ಸಿದ್ದಣ್ಣ ಎನ್ನುವ ದರ್ಜಿಯೋರ್ವರ ಸಹಾಯಕನಾಗಿ ವರುಷಗಳ ಕಾಲ ದುಡಿದು, ಅವರಿಂದ ಬಟ್ಟೆ ಹೊಲಿಯುವ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು, ಲಲಿತಮ್ಮನನ್ನು ಕೈಹಿಡಿಯುವ ಒಂದು ವರ್ಷದ ಮೊದಲೇ ಬಸ್ ಸ್ಟ್ಯಾಂಡ್ ನಲ್ಲಿದ್ದ ಕುಟುಂಬದ ಮತ್ತೊಂದು ಮನೆಗೆ ಹೊಲಿಗೆ ಯಂತ್ರದೊಂದಿಗೆ ಸ್ಥಾನಪಲ್ಲಟ ಮಾಡಿದ್ದ.

ಪರಂಪರಾನುಗತ ಕಸುಬುಗಳು ತಮ್ಮ ಬೇಡಿಕೆ ಕಳೆದುಕೊಂಡಾಗ, ಅವುಗಳು ತಯಾರುಮಾಡುವ ಸರಕುಗಳಿಗೆ ಸಿದ್ದಮಾರುಕಟ್ಟೆಯ ಅಭಾವ ತಲೆದೋರಿದಾಗ ಇಂತಹ ಮೇಲ್ನೋಟಕ್ಕೆ ಅಸಂಬದ್ಧ ಎನ್ನಬಹುದಾದ ಕಸುಬುಗಳ ಸ್ಥಾನಪಲ್ಲಟ ಪ್ರಸಂಗಗಳು ಉದ್ಭವಿಸುತ್ತವೆ. ಏಳೆಂಟು ದಶಕಗಳ ಹಿಂದೆ ಕುಂಬಾರ ಕುಶಲಕರ್ಮಿಗಳಿಗೆ ಕಾಡಿದ ಈ ದುಸ್ವಪ್ನ ಊರ ಹಲವಷ್ಟು ಕುಶಲಕರ್ಮಿ ಕುಟುಂಬಗಳಿಗೂ ಆನಂತರದ ದಿನಮಾನದಲ್ಲಿ ಕಾಡಿದ್ದು ನನಗೆ ನೆನಪಿದೆ. ಬಳೆಗಾರರು, ಬಡಗಿಗಳು, ಕಮ್ಮಾರರು, ವಾಲಗದವರು, ತೋಟಿಗಳು, ದನಗಾಹಿಗಳು, ಕುರುಬರು, ಹಡಪದವರು, ಒಡ್ಡರು, ಗೊಲ್ಲರು, ಪೌರೋಹಿತ್ಯದವರು, ನೇಕಾರರು ಮತ್ತಿತರ ಕಸುಬುಗಳು ತಮ್ಮ ಎಂದಿನ ಬೇಡಿಕೆ ಕಳೆದುಕೊಂಡು ಕಂಗಾಲಾದ ಹೊತ್ತು ಅವರ ಮುಂದಿನ ತಲೆಮಾರಿನ ಯುವಕರು ಹೊಟ್ಟೆಪಾಡಿಗೆ ತಮ್ಮ ಕುಲಕಸುಬಿಗೆ ತಿಲಾಂಜಲಿ ಕೊಟ್ಟು ಹೊಸ ಹೊಸಕೌಶಲ್ಯಗಳ ಅವಿರತ ಹುಡುಕಾಟದಲ್ಲಿ ತೊಡಗಿದ್ದು ಕಾಲದ ಮಣ್ಣಿನ ಆಳದಲ್ಲಿನ ಪದರಗಳ ಅಳಿಯದ ಪಳಯುಳಿಕೆಗಳಾಗಿ ಉಳಿದಿರುವುದು ಸತ್ಯ ಸಂಗತಿ. ತಮ್ಮ ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ಆಯಾಯ ಕಾಲಘಟ್ಟದಲ್ಲಿ ‘ಹೊಸ ಉದ್ಯೋಗಗಳು’ ಎಂದು ಪರಿಗಣಿತವಾದ ನವೀನ ಉದ್ಯಮಗಳೆಡೆ, ಕೌಶಲ್ಯಗಳೆಡೆ ಯುಗಮನೋಧರ್ಮದ ಸ್ಥಿತ್ಯಂತರದಿಂದ ತಬ್ಬಿಬ್ಬಾದ ಯುವಜನಾಂಗ ಮುಖಮಾಡಿದ ಪರಿಣಾಮದ ಒಂದು ಸುಲಭ ಅಂದಾಜು ನನ್ನೂರಿನ ಹೋಟೆಲ್ ಗಳ ಪರ್ವಕ್ಕೆ ನಾಂದಿ ಹಾಡಿದ ಮತ್ತೊಂದು ಕುಂಬಾರ ಕುಟುಂಬದ ಉಲ್ಲೇಖದಿಂದ ಸ್ಪಷ್ಟವಾದೀತು. ಮಣ್ಣನ್ನು ಹದಗೊಳಿಸಿ ಮಡಿಕೆ, ಕುಡಿಕೆಗಳನ್ನ ನೇವರಿಸುತ್ತಿದ್ದ ಕುಶಲಕೈಗಳ ಕುಂಬಾರ ತಿಪ್ಪಣ್ಣನ ಮಕ್ಕಳು ಊರಿನಲ್ಲಿ ಹೋಟೆಲ್ ಉದ್ಯಮದ ಉಗಮಕ್ಕೆ ನಾಂದಿ ಹಾಡಿದ್ದು ಈ ಮನ್ವಂತರದ ಒಂದು ಫಲಶ್ರುತಿಯೆ ಹೌದು. ಕುಂಬಾರ ರಾಮಲಿಂಗಪ್ಪನ ಮಗ ಮುನಿಯ ರೇಡಿಯೋ ರಿಪೇರಿಶಾಪ್ ನ ಚಾಲ್ತಿಯನ್ನೂ, ಮುನಿಯ ಅಣ್ಣನ ಬಸ್ ಸ್ಟ್ಯಾಂಡ್ ನಲ್ಲಿನ ಮತ್ತೊಂದು ಹೋಟೆಲ್ ನ್ನೂ, ಮತ್ತೋರ್ವ ಕುಂಬಾರ ಕುಟುಂಬದ ಕುಡಿ ಕುಂಬಾರ ಏಕಾಂತಪ್ಪನ ಮಗ, ತಿಪ್ಪೇಸ್ವಾಮಿಯ ಚಿಲ್ಲರೆ ಅಂಗಡಿಯ ಅಸ್ತಿತ್ವವನ್ನೂ ಇದೇ ಬೆಳಕಿನಲ್ಲಿ ನೋಡಿ ಅರ್ಥೈಸತಕ್ಕದ್ದು. ಇದೇ ರೀತಿ ಹಳ್ಳಿಗಾಡಿನ ಕುಶಲಕರ್ಮಿಗಳು ಮನುಷ್ಯಕುಲಕ್ಕೆ ಅಭಿಶಾಪದ ರೂಪದಲ್ಲಿರುವ ಹೊಟ್ಟೆಯ ಕಾರಣವರ್ಷದಿಂದ ಸಮೀಪದ ನಗರಪಟ್ಟಣಗಳಿಗೆ ಬಹಳ ದೊಡ್ಡದಾದ ಸಂಖ್ಯೆಯಲ್ಲಿ ವಲಸೆ ಹೋಗಿ ಕೂಲಿಕಾರ್ಮಿಕರಾಗಿ ಬಾಳರಥವನ್ನು ಎಳೆಯಲು ಹೆಣಗುತ್ತಿರುವುದು ಗುಟ್ಟೇನಲ್ಲ.

ಕಾಲನ ಸಮಯದ ತಿರುವೊಂದರಲ್ಲಿ ತನ್ನೆಲ್ಲಾ ಅವಶ್ಯಕತೆಗಳನ್ನು ತಾನೇ ಪೂರೈಸುವ ತಾಕತ್ತು ಹೊಂದಿದ್ದ ಸ್ವಯಂಭೂ ಗ್ರಾಮೀಣಪರಿಸರ ಇಂದು ತನ್ನ ಸಣ್ಣಸಣ್ಣ ಅವಶ್ಯಕತೆಗಳಿಗೆ ಪಟ್ಟಣಪ್ರದೇಶಗಳನ್ನ ಅವಲಂಬಿಸಿರುವ ವಿಡಂಬನೆ ಸುಲಭದಲ್ಲಿ ಅರ್ಥವಾಗದಂತದ್ದು. ಸ್ಥಳೀಯ ಕುಶಲಕರ್ಮಿಗಳನ್ನು ಅಲಕ್ಷಿಸಿ ಪಟ್ಟಣದ ಥಳಕು, ಬಳುಕುಗಳಿಗೆ ಮೈಮನ ಮಾರಿಕೊಂಡು ಇಂದು ಮಿಸುಗಾಡಿದರೆ ಪಟ್ಟಣವನ್ನ ಸೇರಿ ತಮ್ಮ ದೈನಂದಿನ ಅವಶ್ಯಕತೆಗಳಿಗೆ ಹೊಲ ಜಮೀನುಗಳಲ್ಲಿ ಬೆವರುಹರಿಸಿ ಗಳಿಸುವ ಹಣವನ್ನು ವ್ಯಯ ಮಾಡುತ್ತಿರುವ ರೈತಸಮೂಹ ಕೇವಲ ಕೆಲವೇ ದಶಕಗಳಷ್ಟು ಹಿಂದೆ ತಮ್ಮ ಪರಿಸರದಲ್ಲಿ, ಹಣದ ಅತೀ ಕಡಿಮೆ ಪ್ರಭಾವವಲಯದಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿತ್ತು ಎನ್ನುವುದು ಆರ್ಥಿಕತಜ್ಞರು ಗಮನಿಸಬೇಕಾದ ವಿಶೇಷ ಅಂಶವಾಗಿ ಉಳಿಯುತ್ತದೆ.

ಹೊಸ ಬದುಕನ್ನು, ಉದ್ಯೋಗಾವಕಾಶವನ್ನು ಅಪ್ಪಿಕೊಂಡು ಹೊಸ ಯುಗಧರ್ಮದ ಭಾಗವಾದ ಕುರುಗೋಡಪ್ಪ ತನ್ನ ಹೊಸ ಕಸುಬಿನಲ್ಲಿ ನೆಮ್ಮದಿಯನ್ನು ಕಂಡುಕೊಂಡನೆ? ಸುಲಭದಲ್ಲಿ ಉತ್ತರಿಸಲಾರದ ಕ್ಲಿಷ್ಟ ಪ್ರಶ್ನೆಯಿದು. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎನ್ನುವಂತೆ ಒಂದು ಕ್ಷೇತ್ರದ ಹೊರಗಿದ್ದು ವೀಕ್ಷಿಸುವಾಗ ಆ ಕ್ಷೇತ್ರ ಕುರಿತಾಗಿ ಕಂಡುಬರುವ ಧನಾತ್ಮಕ ಅಂಶಗಳು ಆ ಕ್ಷೇತ್ರವನ್ನು ಹೊಕ್ಕಾಗ ಕಾಣದೇ ಹೋಗಬಹುದು. ಕುಂಬಾರಿಕೆಯನ್ನೇ ಮುಂದುವರೆಸಿಕೊಂಡು ಮಾರುಕಟ್ಟೆಯ ಅವಶ್ಯಕತೆಗಳಿಗೆ ಸೂಕ್ತವಾಗಿ ಸ್ಪಂದಿಸಿದ ಅನೇಕ ಕುಶಲಕರ್ಮಿಗಳು ಅಗಾಧ ಎನ್ನುವ ಸಾಧನೆಯನ್ನು ಈ ಕ್ಷೇತ್ರದಲ್ಲಿಯೆ ಮಾಡಿದ ಉದಾಹರಣೆಗಳು ಹೇರಳವಾಗಿ ನೋಡಲು ಸಿಗುತ್ತವೆ. ಇದು ಕುಂಬಾರಿಕೆಯ ಕ್ಷೇತ್ರಕ್ಕೆ ಅನ್ವಯಿಸುವ ಹಾಗೇ ಉಳಿದ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. “ಕಳೆದುಹೋದ ವಸ್ತುವನ್ನು ಕಳೆದುಕೊಂಡಲ್ಲೆ ಹುಡುಕಬೇಕು” ಎನ್ನುವ ಹಿರಿಯರ ನುಡಿಯಂತೆ ಬೇಡಿಕೆ ಕಡಿಮೆಯಾದ ತಮ್ಮ ಕಸುಬುಗಳಿಗೆ ಹೊಸ ಆವಿಷ್ಕಾರಗಳ, ಉದ್ಯಮಶೀಲತೆಯ ಮುಖಾಂತರ ಹೊಸ ರಕ್ತಸಂಚಲನೆ ಮೂಡಿಸಿ ತನ್ಮೂಲಕ ಸೂಕ್ತ ಉತ್ತರಗಳನ್ನು ಪಡೆದುಕೊಂಡ ಹೊಸ ತಲೆಮಾರುಗಳು ಅಪ್ಪ ಹಾಕಿದ ಆಲದಮರಕ್ಕೆ ನೇತು ಹಾಕಿಕೊಳ್ಳದೆ ತಾವೇ ಘನನೆರಳಿನ ಆಲದಮರವನ್ನ ಸೃಷ್ಟಿಮಾಡತೊಡಗಿರುವುದು ಸರ್ವವೇದ್ಯವಾದ ಸಂಗತಿ.

ಯಾರನ್ನಾದರೂ ಸುಲಭದಲ್ಲಿ ನಂಬುತ್ತಿದ್ದ ಅಮಾಯಕ ಮನಸ್ಸಿನ ಕುರುಗೋಡಪ್ಪ ತನ್ನ ವೃತ್ತಿಗೆ ತಾನೇ ಎರವಾದ ಹಲವು ಘಟನೆಗಳೂ ಇವೆ. ಕುರುಗೋಡಪ್ಪನ ಬಳಿ ದರ್ಜಿ ಕೆಲಸವನ್ನು ಕಲಿತು ಆತನ ಮನೆಯ ಎಡಭಾಗದ ಎರಡು ಮನೆಗಳನ್ನು ಬಿಟ್ಟ ಹಾಗೆ ಬರುವ ಬರುವ ಮೂರನೇ ಮನೆಯಲ್ಲಿ ಹೊಲಿಗೆಯಂತ್ರವನ್ನು ಸ್ಥಾಪಿಸಿ ತನ್ಮೂಲಕ ಕುರುಗೋಡಪ್ಪನ ಆದಾಯಮೂಲಕ್ಕೆ ಮಾರಕವಾಗಿ ಪರಿಣಮಿಸಿದ ತಿಪ್ಪೇಸ್ವಾಮಿ ಮೇಷ್ಟ್ರ ಮಗ ಮಲ್ಲಿಕಾರ್ಜುನನ ಹೆಸರಿನ ಉಲ್ಲೇಖ ಇಲ್ಲಿ ಮಾಡಲೇಬೇಕು. ಇದೆಲ್ಲಾ ಪ್ರತಿಯೊಂದು ಕಸಬುಗಳಲ್ಲಿ, ವೃತ್ತಿಗಳಲ್ಲಿ ತೀರಾ ಸರ್ವೇಸಾಮಾನ್ಯವಾಗಿರುವ ಹೊತ್ತೂ ತನಗಾದ ಘಾತುಕವನ್ನು ಮರೆಯಲಿಕ್ಕೆ ಕುರುಗೋಡಪ್ಪನಿಗೆ ವರ್ಷಗಳೇ ಬೇಕಾದವು.

ಕುರುಗೋಡಪ್ಪನ ಸಂತತಿಯಲ್ಲಿ ಯಾರೂ ಅಪ್ಪನ ವೃತ್ತಿಜಾಡನ್ನು ಅನುಸರಿಸದೆ ತಮ್ಮದೇ ಆದ ಉದ್ಯೋಗಗಳನ್ನು ಅರಸುತ್ತಾ ಹೋದದ್ದು ಮತ್ತು ಆತನ ಕಿರಿಯ ಮಗ ಶಿವೂ ಮತ್ತೆ ಹೋಟೆಲ್ ಉದ್ಯಮಕ್ಕೆ ಶರಣಾದದ್ದು ನಾನು ಮೇಲೆ ಹೇಳಿದ ಮನ್ವಂತರದ ಮುಂದುವರಿದ ಭಾಗವಾಗಿ ಮಾತ್ರ ನನ್ನನ್ನು ಈ ಹೊತ್ತು ಕಾಡುತ್ತಿದೆ.

Girl in a jacket
error: Content is protected !!