ಕಾಯಕ ಮತ್ತು ಸತ್ಯದ ಹಾದಿ…
ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲನೇ ಅಥವಾ ಎರಡನೇ ವಾರದಲ್ಲಿ ನಾನು ಕಳೆದ ಹಲವಾರು ವರ್ಷಗಳಿಂದ ದುಬೈಗೆ ಭೇಟಿ ನೀಡುವ ಒಂದು ಸಂಪ್ರದಾಯವನ್ನು ವ್ರತದ ಹಾಗೆ ಪಾಲಿಸಿಕೊಂಡು ಬಂದಿದ್ದೇನೆ. ದುಬೈ ನಾನಿರುವ ಒಮಾನ್ ದೇಶದ ಪಕ್ಕದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ನ ಒಂದು ಎಮಿರೇಟ್ ನಗರ. ಒಮಾನ್ ರಾಜಧಾನಿ ಮಸ್ಕತ್ ನಗರದಿಂದ ಸುಮಾರು ನಾಲ್ಕು ನೂರಾ ಐವತ್ತು ಕಿಲೋಮೀಟರ್ ದೂರವಿರುವ ದುಬೈ ನಗರವನ್ನು ತಲುಪಲು ಕಾರಿನಲ್ಲಿ ಹೋದರೆ ಸುಮಾರು ಐದು ತಾಸುಗಳ ಕಾಲ ಬೇಕಾದಲ್ಲಿ ವಿಮಾನದಲ್ಲಿ ಕೇವಲ ನಲ್ವತ್ತೈದು ನಿಮಿಷಗಳಲ್ಲಿ ಸೇರಬಹುದು.
ಅಕ್ಟೋಬರ್ ತಿಂಗಳಲ್ಲಿ ಮೊದಲ ಅಥವಾ ಎರಡನೇ ವಾರದಲ್ಲಿ ದುಬೈ ನಗರದ ವರ್ಲ್ಡ್ ಟ್ರೇಡ್ ಸೆಂಟರ್ (WTC) ಎನ್ನುವ ಒಂದು ಕಟ್ಟಡದಲ್ಲಿ GITEX ಎನ್ನುವ ಒಂದು ಜಾಗತಿಕ ಮಟ್ಟದ ಎಕ್ಸ್ಹಿಬಿಷನ್ ನಡೆಯುತ್ತದೆ. ಐದು ದಿನಗಳ ಕಾಲದ ಈ ಉತ್ಸವ IT ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಹೊಸ ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ತೆರೆದಿಡುವ ಉದ್ದೇಶದಿಂದ ತೊಂಬತ್ತನೆ ದಶಕದಿಂದ ಪ್ರಾರಂಭವಾದದ್ದು. GITEX ಕೇವಲ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಜಾಗತಿಕ ಎಕ್ಸ್ಹಿಬಿಷನ್ ಗಳ ಭೂಪಟದಲ್ಲಿ ತನ್ನ ಇರುವನ್ನು ಸಾಬೀತುಪಡಿಸಿದೆ ಮತ್ತು ಕಳೆದ ಎರಡೇ ದಶಕಗಳಲ್ಲಿ ಈ ಕ್ಷೇತ್ರದ ದೈತ್ಯನಾಗಿ ಬೆಳೆದುನಿಂತಿದೆ. ಹೀಗಾಗಿ ಯೂರೋಪ್ ರಾಷ್ಟ್ರಗಳೂ ಸೇರಿದಂತೆ ಏಷ್ಯಾ ಖಂಡದ ಅನೇಕ ರಾಷ್ಟ್ರಗಳ IT ಮತ್ತು ಎಲೆಕ್ಟ್ರಾನಿಕ್ಸ್ ಉದ್ದಿಮೆದಾರ ಕಂಪನಿಗಳು ತಮ್ಮ ವರ್ಷದ ಹೊಸ ಹೊಸ ಆವಿಷ್ಕಾರ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು GITEX ಬರುವನ್ನು ನಿರೀಕ್ಷಿಸುತ್ತಿರುತ್ತವೆ. ಬಹಳ ದೊಡ್ಡದಾದ ಜಾಗತಿಕ ಮಾರುಕಟ್ಟೆಯನ್ನು ತಮ್ಮ ಸರಕುಗಳಿಗೆ GITEX ತಂದುಕೊಡಲಿದೆ ಎಂದು ಬಲವಾಗಿ ನಂಬಿರುವ ಕಂಪನಿಗಳು ಬಹಳ ದೊಡ್ಡ ಮಟ್ಟದಲ್ಲಿ ತಮ್ಮ ಉತ್ಪನ್ನಗಳನ್ನು ಈ ಉತ್ಸವದ ವೇಳೆ ಜಗತ್ತಿಗೆ ಪರಿಚಯ ಮಾಡಿಕೊಡುವ ಸಂಪ್ರದಾಯವಿದೆ.
೨೦೧೯ರ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮಸ್ಕತ್ ನಿಂದ ದುಬೈಗೆ GITEX ಸಲುವಾಗಿ ಹೋದವನಿಗೆ ಅಚಾನಕ್ ಆಗಿ ಜುಬೇದ್ ಎನ್ನುವ ಟ್ಯಾಕ್ಸಿವಾಲಾನ ಬೆಟ್ಟಿಯಾಗುತ್ತದೆ.
ನಾನು ಉಳಿದುಕೊಂಡ ಬರ್ ದುಬೈ ಏರಿಯಾದಿಂದ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಹೋಗಲಿಕ್ಕೆ ಟ್ಯಾಕ್ಸಿ ಹಿಡಿಯಲು ನನ್ನ ಹೋಟೆಲ್ ಅಸ್ಟೋಡಿಯ ಮುಂದೆ ಸುಮಾರು ಅರ್ಧ ಗಂಟೆ ಕಾಲ ನಿಂತವನಿಗೆ ಯಾವ ಟ್ಯಾಕ್ಸಿಗಳೂ ನಿಲ್ಲಿಸುವ ಲಕ್ಷಣ ಕಾಣಿಸಲಿಲ್ಲ. ದುಬೈನಲ್ಲಿ ಹಾಗೆಯೇ, ಬೇಕೆಂದಾಗ ಟ್ಯಾಕ್ಸಿ ದೊರಕುವುದು ಕಷ್ಟ. ನನಗೆ ಸಮಯವಾಗುತ್ತಿದ್ದುದರಿಂದ ತೀವ್ರ ಚಡಪಡಿಕೆಯಲ್ಲಿದ್ದೆ.
ಈ ಸಮಯದಲ್ಲಿ ಒಂದು ಟ್ಯಾಕ್ಸಿ ನಾನಿರುವ ಸ್ಥಳದ ಮುಂದೆ ಬಂದು ನಿಂತಿತು. ಹಿಂದೆ ಮುಂದೆ ನೋಡದೆ ಟ್ಯಾಕ್ಸಿ ಒಳಗೆ ಹೊಕ್ಕ ನಾನು ಚಾಲಕನಿಗೆ ವರ್ಲ್ಡ್ ಟ್ರೇಡ್ ಸೆಂಟರ್ ಕಡೆ ಹೋಗಲು ಹೇಳಿದೆ.
ಮರುಮಾತಿಲ್ಲದೆ ಚಾಲಕ ಕಾರ್ ಅನ್ನು WTC ಕಡೆ ಚಲಿಸತೊಡಗಿದ. ಕೆಲವೊಮ್ಮೆ ನಾವು ಕರೆದ ಸ್ಥಳಕ್ಕೆ ಬರದೇ ಇರುವಂತಹ ಬೆಂಗಳೂರು ಆಟೋ ಚಾಲಕರ ಸದ್ಗುಣಗಳು ದುಬೈ ಟ್ಯಾಕ್ಸಿವಾಲಾರಲ್ಲಿಯೂ ಕಂಡುಬರುತ್ತವೆ. ಬರ್ ದುಬೈ ಅಂತಹಾ ಸ್ಥಳಗಳಲ್ಲಿ ಇಂತಹ ಸಾಕಷ್ಟು ನಖರಾಗಳನ್ನು ನಾನು ಈ ಮೊದಲು ಅನುಭವಿಸಿದ್ದೇನೆ. ಹಾಗಾಗಿ ಬೇರೆ ಟ್ಯಾಕ್ಸಿ ವಾಲಾರಿಗಿಂತಹ ಸ್ವಲ್ಪ ವಿಭಿನ್ನವಾಗಿ ಕಂಡ ಚಾಲಕನೊಟ್ಟಿಗೆ ಮಾತನಾಡಬೇಕು ಅನಿಸಿತು. ಸಾಮಾನ್ಯವಾಗಿ ನಾನು ಒತ್ತಡದ ಸನ್ನಿವೇಶಗಳಲ್ಲಿ ಈ ತಂತ್ರದ ಮೊರೆ ಹೋಗುತ್ತೇನೆ, ಮಾತನಾಡುತ್ತಾ ಇದ್ದರೆ ನನಗೆ ಸ್ವಲ್ಪ ನೆಮ್ಮದಿಯ ಅನುಭೂತಿಯಾಗುತ್ತದೆ.
ನಾನು ನಂತರದ ಸುಮಾರು ಇಪ್ಪತ್ತು ನಿಮಿಷಗಳ ಪ್ರಯಾಣದಲ್ಲಿ ಜುಬೇದ್ ಬಗ್ಗೆ ಸಂಗ್ರಹಿಸಿದ ವಿಚಾರಗಳು ನನ್ನನ್ನು ಆಳವಾದ ಸತ್ಯ ಶೋಧನೆಯ ದಾರಿಯಲ್ಲಿ ನಡೆಯುವಂತೆ ಮಾಡಿದವು.
ಜುಬೇದ್ ಇರಾನ್ ಮೂಲದವನು. ಟೆಹ್ರಾನ್ ಬಳಿಯ ಚಿಕ್ಕಹಳ್ಳಿಯೊಂದು ಅವನ ಹುಟ್ಟೂರು. ಮನೆಯಲ್ಲಿದ್ದ ಪೋಷಕರು, ಎರಡು ತಮ್ಮಂದಿರು ಹಾಗೂ ನಾಲ್ಕು ಅಕ್ಕ ತಂಗಿಯಂದಿರ ಉದರಪೋಷಣೆಗಾಗಿ ಹದಿನಾರನೇ ವಯ್ಯಸ್ಸಿನಲ್ಲಿಯೇ ಜುಬೇದ್ ಇರಾನ್ ಬಿಟ್ಟು ದುಬೈ ಸೇರಿದ್ದ. ಈಗ ಆತನ ವಯಸ್ಸು ಇಪ್ಪತ್ತೈದು ಇಪ್ಪತ್ತಾರು ಇರಬೇಕು. ಇನ್ನೂ ಮದುವೆಯಾಗಿರಲಿಲ್ಲ. ಜುಬೇದ್ ನಿರರ್ಗಳವಾಗಿ ಹಿಂದಿ ಮಾತನಾಡುತ್ತಿದ್ದುದರಿಂದ ಅವನೊಟ್ಟಿಗೆ ಸಂಭಾಷಿಸುವುದು ನನಗೆ ಕಷ್ಟಸಾಧ್ಯವೆನಿಸಲಿಲ್ಲ.
ಹೀಗೇ ನಡೆದ ಮಾತುಕತೆಯಲ್ಲಿ ಜುಬೇದ್ ತಾನು ಗಳಿಸುತ್ತಿದ್ದರ ಬಹುಪಾಲು ಆದಾಯವನ್ನು ತಂದೆಗೆ ಕಳಿಸುತ್ತಿರುವುದಾಗಿ ಹೇಳಿದ. ಉಳಿದ ಹಣದಲ್ಲಿ ತನ್ನ ಖರ್ಚುವೆಚ್ಚ ಕಳೆದು ಉಳಿದ ನಾಲ್ಕು ನೂರು ದಿರಾಂ ಅಂದರೆ ಸುಮಾರು ಏಳು ಸಾವಿರದಷ್ಟು ಹಣವನ್ನು ಪ್ರತಿದಿನ ಇಬ್ಬರಂತೆ ನಿರ್ಗತಿಕರಿಗೆ ಊಟ ಕೊಡುವುದಕ್ಕೆ ಬಳಸುವುದಾಗಿ ಹೇಳಿದ. ನಾನು ಒಳ್ಳೆಯ ಆರೋಗ್ಯ ಹೊಂದಿದ್ದೇನೆ, ಗಟ್ಟು ಮುಟ್ಟಾಗಿದ್ದೇನೆ. ನನ್ನ ಅನ್ನವನ್ನು ನಾನು ದುಡಿದು ತಿನ್ನಬಲ್ಲೆ, ಆದರೆ ಅಲ್ಲಾಹು ಜಗತ್ತಿನ ಎಲ್ಲರನ್ನೂ ಹಾಗೆಯೇ ಇಟ್ಟಿರುವುದಿಲ್ಲ. ಅನೇಕರು ರೋಗರುಜಿನಗಳಿಂದ ಬಾಧೆಗೊಳಗಾಗಿ ತಮ್ಮ ರೊಟ್ಟಿಯನ್ನು ತಾವು ಗಳಿಸದೇ ಇರುವ ಸ್ಥಿತಿಯಲ್ಲಿ ಇರುತ್ತಾರೆ. ಅಂತಹವರಿಗೆ ನಮ್ಮಂತಹವರು ಸಹಾಯ ಮಾಡಲೇಬೇಕು. ಇದೇ ಅಲ್ಲಾಹುವಿನ ಇಚ್ಛೆ ಎಂದ. ಇಂತಹ ನಿರ್ಗತಿಕರಿಗೆ ಸಹಾಯ ಮಾಡಲು ಸಾಧ್ಯವಾಗಲಿ ಎಂದೇ ತಾನು ದಿನದ ಹದಿನಾಲ್ಕು ಘಂಟೆಗಳ ಕಾಲ ಕೆಲಸ ಮಾಡುತ್ತೇನೆ, ಗಿರಾಕಿಗಳು ಕರೆದ ಕಡೆ ದೂಸರಾ ಮಾತನಾಡದೆ ಟ್ಯಾಕ್ಸಿ ಚಲಾಯಿಸುತ್ತೇನೆ ಎಂದ.
ಆ ಕ್ಷಣ ಬಸವಣ್ಣನವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳು ನನ್ನ ಮುಂದೆ ಗರಿಗೆದರಿ ನಿಂತಿದ್ದವು. ಸಾರ್ವಕಾಲಿಕ ಸತ್ಯದೆಡೆಗೆ ಕಲ್ಯಾಣದ ಶರಣರು ನಡೆದ ಹಾದಿಯ ದರ್ಶನ ತುಸು ಸ್ಪಷ್ಟವಾಗತೊಡಗಿತು.
WTC ನಲ್ಲಿ ಇಳಿದವನು ಜುಬೇದ್ ಗೆ ಮೂವತ್ತು ದಿರಾಮ್ ಗಳನ್ನ ಕೊಟ್ಟು ಮುನ್ನಡೆಯತೊಡಗಿದೆ. ಒಂದು ದಿರಾಮ್ ಸುಮಾರು ನಮ್ಮ ಇಪ್ಪತ್ತು ರೂಪಾಯಿಗಳಿಗೆ ಸಮ. ಹಿಂದಿನಿಂದ ಜುಬೇದ್ ಕಾರ್ ಹಾರ್ನ್ ಹಾಕತೊಡಗಿದ. ಏನೆಂದು ಹಿಂದೆ ತಿರುಗಿದವನಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಮೀಟರ್ ಪ್ರಕಾರ ಆಗಿದ್ದು ಇಪ್ಪತ್ತೆಂಟು ದಿರಾಮ್ ಮಾತ್ರ, ಉಳಿದ ಎರಡು ದಿರಾಮ್ ಚಿಲ್ಲರೆ ತೆಗೆದುಕೊಳ್ಳಿ ಎಂದು ಚಿಲ್ಲರೆ ಹಿಂದೆ ಕೊಡಲು ಬಂದ. ಪರವಾಗಿಲ್ಲ, ಚಿಲ್ಲರೆ ಹಣ ನೀನಿಟ್ಟುಕೋ ಎಂದವನಿಗೆ ಜುಬೇದ್ ಕಡುಕಾದ ಉತ್ತರವನ್ನೇ ಕೊಟ್ಟಿದ್ದ. “ಹರಾಮಿ ಹಣವನ್ನು ನಾನು ಮುಟ್ಟಲಾರೆ, ಅದು ನನ್ನ ವಸೂಲ್ ಗೆ ವಿರುದ್ಧ” ಎಂದ.
ನಾನು ತ್ವರಿತವಾಗಿ ಮಾಡಬೇಕಿದ್ದ ಕೆಲಸವನ್ನು ಬದಿಗಿಟ್ಟು ಬಸವಣ್ಣನವರ ಬಗ್ಗೆ ಜುಬೇದ್ ಗೆ ಹೇಳಬೇಕೆಂದುಕೊಂಡವನು ಹಾಗೆಯೇ ಸುಮ್ಮನಾಗಿ ಆತನಿಗೊಂದು ದೊಡ್ಡ ಸಲಾಂ ಹೊಡೆದು WTC ಯ ಒಳಗೆ ನಡೆದೆ.
ಬಸವಣ್ಣನವರ ಬಗ್ಗೆ ತಿಳಿಯದವರಿಗೆ ಹೇಳಬಹುದು, ಆದರೆ ಬಸವಣ್ಣನವರನ್ನು ಪ್ರತಿಕ್ಷಣ, ಪ್ರತಿದಿನ ಜೀವಿಸುತ್ತಿರುವ ಜುಬೇದ್ ಅಂತಹವರಿಗೆ ಅಣ್ಣನವರ ಬಗ್ಗೆ ತಿಳಿಹೇಳುವುದಕ್ಕೆ ಏನಾದರೂ ಉಳಿದಿದೆಯೇ?