ಕರ್ನಾಟಕದಲ್ಲೀಗ ಮೊಟ್ಟೆ ರಾಜಕೀಯ

Share

ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದು ಅದರ ನಿವಾರಣೆಗೆ ಬೇಯಿಸಿದ ಮೊಟ್ಟೆಯನ್ನು ಕೊಡುವ ಸರ್ಕಾರದ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಯತ್ನಕ್ಕೆ ಕೆಲವರು ಮುಂದಾಗಿದ್ದಾರೆ. ಆಹಾರ ಸಂಸ್ಕೃತಿ ವಿಚಾರದಲ್ಲಿ ಧಾರಾಳ ಸ್ವಾತಂತ್ರ್ಯ ಕೊಡಬೇಕಾಗಿರುವ ಜಾಗದಲ್ಲಿ ಈ ಬಗೆಯ ವರ್ತನೆ ಅಸಹ್ಯಕರದ್ದಾಗಿದೆ. ಇದನ್ನು ಸರ್ಕಾರ ಮುಲಾಜಿಲ್ಲದೆ ನಿವಾರಿಸಿ ದಿಟ್ಟ ಹೆಜ್ಜೆಯನ್ನಿಡುವುದು ಅಗತ್ಯ.

ಕರ್ನಾಟಕದಲ್ಲೀಗ ಮೊಟ್ಟೆ ರಾಜಕೀಯ

ಹೊರಗಿನಿಂದ ಒಡೆದರೆ ಜೀವ ಹಾನಿ; ಒಳಗಿನಿಂದ ಒಡೆದರೆ ಜೀವ ವಿಕಾಸ. ಇದು ಮೊಟ್ಟೆಯ ಕಥೆ. ಹಾಗಂತ ಇದು ಒಂದು ಮೊಟ್ಟಯ ಕಥೆಯಲ್ಲ! ಯಾವುದೇ ಮೊಟ್ಟೆಯಾಗಿರಲಿ ಅದು ಹೊರಗಿನಿಂದ ಒಡೆಯಲಿ, ಒಳಗಿನಿಂದ ಒಡೆಯಲಿ ಸದ್ದುಗದ್ದಲ ಮಾಡದ ಗುಣ ಅದರದು. ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುವ ಪ್ರಾಣಿ ಸಂಕುಲದಲ್ಲಿ ಇದು ಸಾಮಾನ್ಯ ಗುಣ. ಆದರೆ ಕರ್ನಾಟಕದಲ್ಲಿ ಇದೀಗ ಕೋಳಿ ಮೊಟ್ಟೆ ಇನ್ನಿಲ್ಲದಂತೆ ಸದ್ದು ಗದ್ದಲ ಮಾಡುತ್ತಿದೆ. ಮೊಟ್ಟೆಯನ್ನು ಅತ್ಯಧಿಕ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎನ್ನುವುದಕ್ಕಾಗಿ ಆಹಾರದ ಭಾಗವಾಗಿ ಸ್ವೀಕರಿಸುವ ಕೋಟ್ಯಂತರ ಜನ ಜಗತ್ತಿಲ್ಲಿದ್ದಾರೆ. ನಮ್ಮ ರಾಜ್ಯದಲ್ಲೂ ಲೆಕ್ಕಕ್ಕೆ ಸಿಗದಷ್ಟು ಜನ ಅದನ್ನು ನಿತ್ಯಾಹಾರವಾಗಿ ಸೇವಿಸುತ್ತಿದ್ದಾರೆ. ಅಂಥ ಆಹಾರ ಪದಾರ್ಥಕ್ಕೆ ಕೆಸರನ್ನು ಎರಚುವ ಕೆಲಸವನ್ನು ಇದೀಗ ಹಲವರು ಶುರುಮಾಡಿಕೊಂಡಿದ್ದಾರೆ. ಅದರಲ್ಲಿ ಕೆಲವರು ತಥಾಕಥಿತ ಮಠ ಕರ್ಮಠರು ಎನ್ನುವುದು ವಿಪರ್ಯಾಸ.
ಇಮಾಂ ಸಾಬಿಗೂ ಕೃಷ್ಣಾಷ್ಟಮಿಗೂ ಏನು ಸಂಬಂಧ ಎನ್ನುವುದು ಚಾಲ್ತಿಯಲ್ಲಿರುವ ಗಾದೆ. ಯಾರದೂ ತಕರಾರು ಇಲ್ಲವಾದರೆ ಮಠಗಳಿಗೂ ಧರ್ಮಕ್ಕೂ ಹಾಗೂ ಮೊಟ್ಟೆಗೂ ಏನು ಸಂಬಂಧ ಎಂದು ಹೊಸದಾಗಿಯೇ ಗಾದೆ ಸೃಷ್ಟಿಸೋಣ. ಇವರಿಗೇಕೆ ತಮಗೆ ಸಂಬಂಧವೇ ಇಲ್ಲದ ಮೊಟ್ಟೆಯ ಉಸಾಬರಿ ಎಂದೂ ಕೇಳೋಣ. ಧರ್ಮ ಕೈಂಕರ್ಯದಲ್ಲಿರುವ ಎಲ್ಲರೂ ಆಹಾರವಾಗಿ ಮೊಟ್ಟೆ ಬಳಕೆಗೆ ವಿರೋಧವಾಗಿದ್ದಾರೆ ಎಂದಲ್ಲ. ಆದರೆ ಆ ವರ್ಗಕ್ಕೆ ಸೇರಿದವರು ಮೌನಕ್ಕೆ ಮುಸುಕು ಹಾಕಿಕೊಂಡಿದ್ದಾರೆ. ಮೊಟ್ಟೆ ಮಕ್ಕಳಿಗೆ ಬೇಡ ಎನ್ನುವ ಕೆಲವೆ ಕೆಲವರು ಟಿವಿ ಕ್ಯಾಮೆರಾಗಳ ಮುಂದೆ ಬೊಬ್ಬಿರಿಯುತ್ತಿದ್ದಾರೆ. ಕಲ್ಯಾಣ ಕ್ರಾಂತಿಯ ಭಾಗವಾಗಿ ಅಸ್ತಿತ್ವಕ್ಕೆ ಬಂದಿರುವ ಮಠ ಪರಂಪರೆಗಳಲ್ಲಿರುವ ಕೆಲವರು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸರ್ಕಾರದ ಕ್ರಮಕ್ಕೆ ವಿರೋಧ ಸೂಚಿಸಿದ್ದಾರೆ. ಅವರ ವಿರೋಧಕ್ಕೆ ಆಧಾರವಾಗಿರುವ ಕೆಲವಾದರೂ ಕಾರಣ ಉಂಟೆ…? ಅಂಥದ್ದೇನೂ ಇಲ್ಲ. ವಿರೋಧಕ್ಕಾಗಿ ಈ ವಿರೋಧ ಎನ್ನುವುದಕ್ಕಿಂತಲೂ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಿಕೊಳ್ಳುವುದು ಅಂಥವರಿಗೆ ತುರ್ತು ಅಗತ್ಯವಾಗಿದೆ ಎನಿಸುತ್ತದೆ.

 


ಮೊಟ್ಟೆಯನ್ನು ಶಾಲಾ ಮಕ್ಕಳಿಗೆ ಯಾಕಾಗಿ ಕೊಡಬೇಕು…? ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೆ ತರುವ ಸಂದರ್ಭದಲ್ಲಿ ಕೊಟ್ಟ ವಿವರಣೆಯಂತೆ ಮಕ್ಕಳಲ್ಲಿರುವ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಒಂದು ಸಣ್ಣ ಯತ್ನವಾಗಿ ಈ ಪ್ರಯೋಗ. ಆಗಲೂ ತಕರಾರು ಇತ್ತು. ಯಾವುದೇ ಒಳ್ಳೆಯ ಯೋಚನೆಗೆ ಯೋಜನೆಗೆ ವಿರೋಧ ಇದ್ದೇ ಇರುತ್ತದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದಾಗ ಇದ್ದ ಉದ್ದೇಶಗಳೆರಡು. ಮೊದಲನೆಯದು ಬಡ ಮಕ್ಕಳ ಹಸಿವನ್ನು ನಿವಾರಿಸುವುದು ಮತ್ತು ಎರಡನೆಯದಾಗಿ ಶಾಲೆಗೆ ಮಕ್ಕಳನ್ನು ಕಳಿಸುವುದಕ್ಕೆ ಪೋಷಕರಲ್ಲಿ ಆಸಕ್ತಿಯನ್ನು ಕೆರಳಿಸುವುದು.
ಇವೆರಡು ಸಾಮಾನ್ಯ ಯೋಚನೆಗಳಾಗಿರಲಿಲ್ಲ. ಅನೇಕ ಬಡ ಮಕ್ಕಳು ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಐದೋ ಹತ್ತೋ ರೂಪಾಯಿ ಸಂಪಾದಿಸಿ ಮನೆಗೆ ಸಂಜೆ ಬರುತ್ತಿದ್ದರು. ಅದು ಆ ಮಕ್ಕಳ ಹೊಟ್ಟೆ ತುಂಬುವ ಗಂಜಿಗೆ ಒಂದಿಷ್ಟು ಪ್ರಮಾಣದಲ್ಲಿ ಸಾಕಾಗುತ್ತಿತ್ತು. ಮಕ್ಕಳನ್ನು ಶಾಲೆಗೆ ಕಳಿಸದೆ ಇರುವುದಕ್ಕೆ ಬಡ ಪೋಷಕರಲ್ಲಿರುವ ಕಾರಣ ಈ ಆರ್ಥಿಕ ಸಂಕಷ್ಟ. ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಹೊಟ್ಟೆ ತುಂಬಾ ಊಟ ಸಿಗುತ್ತದೆ ಎಂದಾದರೆ ಅದಕ್ಕಿಂತ ಬೇರೇನಿದೆ ಎಂದು ಬಡತನವನ್ನೇ ಹಾಸು ಹೊದ್ದಿದ್ದ ಪೋಷಕರು ಭಾವಿಸಿದರು. ಶಾಲೆಗೆ ಮಕ್ಕಳನ್ನು ಕಳಿಸುವುದರಿಂದ ತಮಗೆ ಪ್ರವೇಶಿಸಲಾಗದ ಅಕ್ಷರ ಲೋಕಕ್ಕೆ ತಮ್ಮ ಮಕ್ಕಳಾದರೂ ಹೋಗುತ್ತಾರಲ್ಲ ಎಂಬ ಸಂತಸವೂ ಮಕ್ಕಳನ್ನು ಬೆಳಗಾಗೆದ್ದು ಶಾಲೆಗೆ ಕಳಿಸುವ ಪರಿಪಾಠಕ್ಕೆ ಕಾರಣವಾಯಿತು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆಯನ್ನೂ ಕೊಡುವ ಸಂಪ್ರದಾಯ ೨೦೦೭ರಲ್ಲಿ ಕರ್ನಾಟಕದಲ್ಲಿ ಚಾಲ್ತಿಗೆ ಬಂತು. ಆಗ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿ. ಏನೇನೋ ತೊಳಸಂಬಟ್ಟೆಯಾಗಿ ಯೋಜನೆ ನೆನೆಗುದಿಗೆ ಬಿತ್ತು. ಆದರೀಗ ಕಲ್ಯಾಣ ಕಾರ್ಯಕ್ರಮವೊಂದಕ್ಕೆ ಪುನಃ ಜೀವ ಬಂದಿದ್ದು ಅದರ ಬೆನ್ನ ಹಿಂದೆಯೇ ಅಪಸ್ವರವೂ ಜೋರಾಗಿ ಕೇಳಿಸಲಾರಂಭವಾಗಿದೆ. ವರ್ಗರಹಿತ, ಜಾತಿ ರಹಿತ ಸಮಾಜದ ಕನಸು ಕಂಡ ಬಸವಾದಿ ಶರಣರು ವಿಭಿನ್ನ ಆಹಾರ ಸಂಸ್ಕೃತಿಯ ಜನರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಅವರೆಲ್ಲರೂ ಲಿಂಗ ಧರಿಸಿ ಲಿಂಗಾಯತರೆನಿಸಿದರು. ಅಂಥ ಶರಣರಿಂದ ಬಂದ ವಚನಗಳಲ್ಲಿ ಮನುಷ್ಯರು ಬದುಕಬೇಕಾದ ರೀತಿಯನ್ನು ವಿವರಿಸಲಾಗಿದೆಯೆ ಹೊರತೂ ಆಹಾರ ಸಂಸ್ಕೃತಿಯ ಬಗ್ಗೆ ಎಲ್ಲೂ ಉಲ್ಲೇಖ ಇದ್ದಂತಿಲ್ಲ. ಅವರವರ ಭಾವಕ್ಕೆ ಬೇಕಾದ ಆಹಾರ ಸ್ವೀಕರಿಸುವ ಸ್ವಾತಂತ್ರ್ಯ ಅಂದಿನ ಶರಣ ಸಮಾಜದ ಭಾಗವಾಗಿತ್ತು.


ಅದೇ ಬಸವ ಪರಂಪರೆಯ ಮಠಮಾನ್ಯಗಳು, ಸ್ವಾಮೀಜಿಗಳು ಇದೀಗ ಆಹಾರ ಸ್ವಾತಂತ್ರ್ಯ ಮತ್ತು ಆಹಾರ ಸಂಸ್ಕೃತಿಯ ವಿರುದ್ಧ ತಮ್ಮ ಶಕ್ತಿಯನ್ನೆಲ್ಲ ವಿನಿಯೋಗ ಮಾಡುತ್ತಿರುವುದು ಪರಮಾಶ್ಚರ್ಯ. ವೈದಿಕ ಸಂಸ್ಕೃತಿ ಇಂಥ ಆಹಾರವೆ ಇರಬೇಕೆಂದು ಕಡ್ಡಾಯ ವಿಧಿಸುತ್ತದೆ. (ಅದನ್ನು ಕಿವಿ ಮೇಲೆ ಹಾಕಿಕೊಳ್ಳುವವರು ಎಷ್ಟು ಮಂದಿ ಎನ್ನುವುದು ಪ್ರತ್ಯೇಕ ಪ್ರಶ್ನೆ) ಜೈನ ಸಂಸ್ಕೃತಿಯೂ ಆಹಾರ ಪದ್ಧತಿ ಹೀಗೇ ಇರಬೇಕೆಂದು ತಾಕೀತು ಮಾಡುತ್ತದೆ. ಆದರೆ ಬಸವ ಪ್ರಣೀತ ಲಿಂಗಾಯತ ಧರ್ಮ ಅದನ್ನು ಹೇರುವುದಿಲ್ಲ. ಆದರೆ ಕೆಲವು ಲಿಂಗಾಯತ ಮಠಗಳು, ಕೆಲವು ಸ್ವಾಮೀಜಿಗಳು ಮೊಟ್ಟೆ ಬಳಕೆಗೂ ವಿರುದ್ಧವಾಗಿರುವುದು ಅಲ್ಲಿ ಬೆಳೆಯುತ್ತಿರುವ ವೈದಿಕ ಶಾಹಿಗೆ ಉದಾಹರಣೆ ಎನ್ನಬಹುದು.
ಆರರಿಂದ ಹದಿನೈದು ವರ್ಷ ವಯಸ್ಸಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆ ಒಂದು ಬೇಯಿಸಿದ ಮೊಟ್ಟೆ ಕೊಡುವುದು; ಮೊಟ್ಟೆ ತಿನ್ನದ ಸಹಪಾಠಿ ಮಕ್ಕಳಿಗೆ ತಲಾ ಎರಡು ಬಾಳೆ ಹಣ್ಣು ನೀಡುವುದು ಕಾರ್ಯಕ್ರಮ. ಇದಕ್ಕೆ ಕಾರಣವಿದೆ. ಪ್ರಸ್ತುತ ಈ ಯೋಜನೆ ಜಾರಿಗೆ ಬಂದಿರುವ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಅನಿಯಂತ್ರಿತವಾಗಿದೆ ಎನ್ನುವುದು ರಾಷ್ಟ್ರೀಯ ಕುಟುಂಬ ಆರೋಗ್ಯ(೨೦೧೯) ಸಮೀಕ್ಷಾ ವರದಿಯ ಹೇಳಿಕೆ. ಇದರ ಪ್ರಕಾರ ಈ ಏಳೂ ಜಿಲ್ಲೆಗಳಲ್ಲಿ ಆರರಿಂದ ಹದಿನೈದು ವಯೋಮಾನದ ೧೪ ಲಕ್ಷದ ೪೪ ಸಾವಿರಕ್ಕೂ ಅಧಿಕ ಮಕ್ಕಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.
ಆ ಪೈಕಿ ಯಾದಗೀರ್ ಜಿಲ್ಲೆಯ ಮಕ್ಕಳಲ್ಲಿ ಶೇಕಡಾ ೭೪ ರಷ್ಟು ಮಕ್ಕಳು ಪೌಷ್ಟಿಕಾಂಶದಿಂದ ನರಳುತ್ತಿದ್ದಾರೆ. ಅದರ ಜೊತೆಗೆ ಅನೀಮಿಯಾದಂಥ ಸಮಸ್ಯೆ ವಿಪರೀತವಾಗಿದೆ. ಅದೇ ಪ್ರದೇಶದ ಕಲಬುರ್ಗಿಯಲ್ಲಿ (ಶೇಕಡಾ ೭೨.೪); ಬಳ್ಳಾರಿ (ಶೇಕಡಾ ೭೨.೩); ಕೊಪ್ಪಳ (ಶೇಕಡಾ ೭೦.೭); ರಾಯಚೂರು (ಶೇಕಡಾ ೭೦.೦೬); ಬೀದರ್ (ಶೇಕಡಾ ೬೯.೧) ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಶೇಕಡಾ ೬೮ರಷ್ಟು ಚಿಕ್ಕ ಮಕ್ಕಳು ಪೌಷ್ಟಿಕಾಂಶದ ಕೊರತೆಯಲ್ಲಿ ನರಳುತ್ತಿದ್ದಾರೆ. ಪೌಷ್ಟಿಕಾಂಶದ ಕೊರತೆ ನೀಗುವುದಕ್ಕೆ ಬೇರೆ ಬೇರೆ ಆಹಾರ ಪದಾರ್ಥಗಳು ಇರುವುದು ಹೌದಾದರೂ ಮೊಟ್ಟೆಯಷ್ಟು ಪರಿಣಾಮಕಾರಿಯಾದ ಆಹಾರ ಈ ವರ್ಗದಲ್ಲಿ ಇನ್ನೊಂದಿಲ್ಲ ಎನ್ನುವುದು ಒಪ್ಪಬೇಕಾದ ಸಂಗತಿ.
ಮೊಟ್ಟೆ ಕೊಡುವುದಕ್ಕೆ ತಯಾರಾಗಿರುವ ಶಾಲೆಗಳಲ್ಲಿ ಸಮವಸ್ತ್ರ, ಪಠ್ಯಕ್ರಮ ಒಂದೇ ಬಗೆಯದಾಗಿರುತ್ತದೆ. ಹೀಗಿರುವಾಗ ಮಕ್ಕಳಿಗೆ ಪೂರೈಸುವ ಆಹಾರದಲ್ಲಿ ಮಾತ್ರವೇ ಏಕೆ ತಾರತಮ್ಯ ಎನ್ನುವುದು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮದ ವಿರುದ್ಧ ತೋಳೇರಿಸಿರುವವರ ಪ್ರಶ್ನೆ. ಆಹಾರಕ್ಕೂ ಪಠ್ಯಕ್ರಮ ಅಥವಾ ಸಮವಸ್ತ್ರಕ್ಕೂ ಎಲ್ಲಿಂದ ಎಲ್ಲಿಗೆ ಸಂಬಂಧ ಎನ್ನುವುದು ಅರ್ಥವಾಗದ ವಿಚಾರ. ವಾದಕ್ಕೆ ಒಂದಿಷ್ಟು ಶಬ್ದಗಳು ಉದುರುತ್ತವೆ. ಆ ಶಬ್ದಗಳು ಅರ್ಥವನ್ನು ಒಳಗೊಂಡಿರಬೇಕೆಂದೇನೂ ಇಲ್ಲ. ಈ ವಾದ ಮಂಡಿಸಿರುವ ರಾಷ್ಟ್ರೀಯ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳುವ ಪ್ರಕಾರ ಶಾಲೆಗಳಲ್ಲಿ ಮೊಟ್ಟೆ ಪೂರೈಸುವುದು ಯಾವುದೇ ಕಾರಣಕ್ಕೂ ಸಲ್ಲದ ಕ್ರಮ. ಮೊಟ್ಟೆ ಪೂರೈಕೆ ವಿರೋಧಿಸಿ ಹದಿನೈದು ಜನ ಸ್ವಾಮಿಗಳು ಒಂದೆಡೆ ಕೂತು ಚರ್ಚೆ ಮಾಡಿದ್ದಾರಂತೆ. ಅವರ ಒತ್ತಡ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೋ ಸರ್ಕಾರ ಅದನ್ನು ಹೇಗೆ ನಿಭಾಯಿಸುತ್ತದೋ ಗೊತ್ತಿಲ್ಲ.


ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುವ ವಿವರ ಗಮನಿಸಿದರೆ ಮನಸ್ಸು ಬೆಚ್ಚಿ ಬೀಳುತ್ತದೆ. ಕರ್ನಾಟಕದ ಮಕ್ಕಳು ಅಗತ್ಯ ಪ್ರಮಾಣದಲ್ಲಿ ಎತ್ತರ ಬೆಳೆಯುತ್ತಿಲ್ಲ; ಅವರ ತೂಕದಲ್ಲೂ ಏರಿಕೆಯಾಗುತ್ತಿಲ್ಲ. ನಮ್ಮ ಮಕ್ಕಳಲ್ಲಿ ಶೇಕಡಾ ೩೫.೪ ರಷ್ಟು ಮಕ್ಕಳಿಗೆ ಅಗತ್ಯದ ಎತ್ತರವಿಲ್ಲ. ಶೇಕಡಾ ೩೨.೯ ರಷ್ಟು ಮಕ್ಕಳಿಗೆ ವಯೋ ಸಹಜ ತೂಕವಿಲ್ಲ. ಮೊಟ್ಟೆ ಪೂರೈಸುತ್ತ ಬಂದ ನಂತರದಲ್ಲಿ ಇಂಥ ಮಕ್ಕಳ ಸಾಮಾನ್ಯ ಆರೋಗ್ಯದಲ್ಲಿ, ಎತ್ತರ ತೂಕದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಹೀಗಿರುವಾಗ ಧಾರ್ಮಿಕ ಒತ್ತಡಕ್ಕೆ ಮಣಿದು ಸರ್ಕಾರ ತನ್ನ ಕಾರ್ಯಕ್ರಮವನ್ನು ಕೈಬಿಡಬಾರದೆಂಬ ಒತ್ತಾಯ ಕೂಡಾ ಬಲವಾಗಿದೆ.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲೆಂಗಾಣಾ ರಾಜ್ಯಗಳಲ್ಲಿ ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆ (ಅದನ್ನು ಸಂತೋಷದಿಂದ ತಿನ್ನುವ) ಮಕ್ಕಳಿಗೆ ಬೇಯಿಸಿದ ಮೊಟ್ಟೆ ಕೊಡುವ ಪದ್ಧತಿ ಜಾರಿಯಲ್ಲಿದೆ. ತಮಿಳುನಾಡಿನಲ್ಲಂತೂ ಈ ಕಾರ್ಯಕ್ರಮ ಐವತ್ತು ವರ್ಷದಿಂದ ಜಾರಿಯಲ್ಲಿದ್ದು ಎಂ.ಜಿ. ರಾಮಚಂದ್ರನ್ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಮೊಟ್ಟೆ ಕೊಡುವ ಪದ್ಧತಿ ಶುರುವಾಯಿತು. ಈ ರಾಜ್ಯಗಳಲ್ಲಿಲ್ಲದ ಧರ್ಮಿಕ ಕಾರಣವೊಂದು ಕರ್ನಾಟಕದಲ್ಲಿ ಮಕ್ಕಳ ಆರೋಗ್ಯದ ವಿಚಾರದಲ್ಲೂ ಧರ್ಮ ರಾಜಕೀಯ ಮಾಡುತ್ತಿರುವುದು ವಿವೇಕದ ವರ್ತನೆಯಲ್ಲ.

 

Girl in a jacket
error: Content is protected !!