ಕರ್ನಾಟಕ ಇತಿಹಾಸದ ಕಿರೀಟ ಬೀದರ್

Share

ಕರ್ನಾಟಕ ಇತಿಹಾಸದ ಕಿರೀಟ ಬೀದರ್

ಬೀದರ್ ಜಿಲ್ಲೆಯು ಭೌಗೋಳಿಕ ಮತ್ತು ಚಾರಿತ್ರಿಕವಾಗಿ ಕರ್ನಾಟಕಕ್ಕೆ ಶಿಖರಪ್ರಾಯವೇ ಆಗಿದೆ. ಈ ಜಿಲ್ಲೆಯು ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ಚಾಲುಕ್ಯರ ಕಾಲದಿಂದಲೂ ಪ್ರಸಿದ್ಧವಾಗಿದ್ದಿತು. ಬಸವಕಲ್ಯಾಣವು ಕಲ್ಯಾಣ ಚಾಲುಕ್ಯರು ಮತ್ತು ಕಲಚುರಿಗಳ ರಾಜಧಾನಿ ಪಟ್ಟಣ. ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಧಾರ್ಮಿಕ ಕ್ರಾಂತಿಯ ಭೂಮಿಕೆಯಾಗಿ, ಸಮಸಮಾಜದ ಕನಸನ್ನು ಹೊತ್ತ ಜನತಾ ಚಳವಳಿಯಿಂದ ಸಾಮಾಜಿಕ ಸಂಚಲನವನ್ನು ಮೂಡಿಸಿದ ಸುಧಾರಣೆಯ ನೆಲೆವೀಡು. ವಚನಗಳ ಮೂಲಕ ಕನ್ನಡಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದ ಶ್ರೇಯ ಈ ಜಿಲ್ಲೆಯದು. ಸಮಾಜದ ಎಲ್ಲ ಸ್ತರದ ಜನರಿಗೆ ಮಾತು ಕಲಿಸಿ, ದೇಸೀ ಸಾಹಿತ್ಯವನ್ನು ಬೆಳಗಿಸಿದ ತವರೂರಿದು. ಜಲಸಂಗ್ವಿಯ ಮಹಾದೇವ ದೇಗುಲದ ಲಿಪಿಕಾರ್ತಿಯ ಶಿಲ್ಪಶಾಸನವು ಪ್ರಾಚೀನ ಕಾಲದ ಮಹಿಳೆಯರ ಅಕ್ಷರ ಸಂಸ್ಕೃತಿಯ ಪ್ರತೀಕವಾಗಿರುವುದು ಶ್ಲಾಘನಾರ್ಹ.

 

ಬೀದರ್ ಪ್ರಸಿದ್ಧ ಐತಿಹಾಸಿಕ ಹಾಗೂ ಪ್ರಾಚೀನವಾದ ಸುಂದರ ನಗರ. ಬೀದರ್ ಮಧ್ಯಕಾಲದಲ್ಲಿ ಬಹಮನಿ ಮತ್ತು ಶಾಹಿ ಸುಲ್ತಾನರ ಪ್ರಸಿದ್ಧ ರಾಜಧಾನಿಯಾಗಿ ಮೆರೆದ ಸ್ಥಳವಿದು. ಮುಂದೆ ಬಿಜಾಪುರ ಹಾಗೂ ಮೊಘಲ್ ಸುಲ್ತಾನರ ಆಳ್ವಿಕೆಯ ಪ್ರದೇಶವೂ ಆಗಿದ್ದಿತು. ದಖನ್ ಪ್ರಸ್ಥಭೂಮಿಯಲ್ಲಿರುವ ಇದು ಸಮುದ್ರ ಮಟ್ಟದಿಂದ ಸುಮಾರು ೨೩೦೦ ಅಡಿಗಳಷ್ಟು ಎತ್ತರವಿದ್ದು, ಉತ್ತಮ ಹವಾಮಾನವನ್ನು ಹೊಂದಿರುವ ಕರ್ನಾಟಕದ ಪ್ರಮುಖ ಸ್ಥಳಗಳಲ್ಲೊಂದಾಗಿದೆ. ಕರಾವಳಿಯಲ್ಲಿ ಕಂಡುಬರುವ ಜಂಬಿಟ್ಟಿಗೆ ಇಲ್ಲಿಯೂ ಕಂಡುಬರುವುದು ವಿಶೇಷ. ಬಹಮನಿ ಮತ್ತು ಬರೀದ್ ಶಾಹಿಗಳ ಸುಲ್ತಾನರ ಕಾಲದ ರಾಜಧಾನಿಯಾದ ಇಲ್ಲಿ ಅನೇಕ ಸ್ಮಾರಕ, ಕೋಟೆಕೊತ್ತಲಗಳಿವೆ. ಸಿಖ್ಖರ ಗುರು ಗುರುನಾನಕರು ಭೇಟಿನೀಡಿದ ಸ್ಥಳವಾಗಿದ್ದು, ಸಿಖ್ಖರ ಪ್ರಮುಖ ಯಾತ್ರಾಸ್ಥಳವೂ ಆಗಿದೆ. ಬೀದರ್‌ನಲ್ಲಿ ಅನೇಕ ಚಾರಿತ್ರಿಕ ಕುರುಹುಗಳಿವೆ. ಅವುಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಮೀರಿಸುವಂತೆ ಇಂದಿಗೂ ಅಚ್ಚಳಿಯದೆ ನಿಂತಿರುವ ಕೋಟೆ ಕೊತ್ತಲಗಳಿವೆ. ಅರಮನೆ, ಮಸೀದಿ, ಆಡಳಿತ ನಡೆಸಿದ ವಿಶಿಷ್ಟ ಕಟ್ಟಡಗಳಿವೆ. ಮಹಮದ್ ಗವಾನನು ನಿರ್ಮಿಸಿದ ಮಧ್ಯಕಾಲದ ಪ್ರಸಿದ್ಧ ವಿಶ್ವವಿದ್ಯಾಲಯ ಮದರಸಾ ಇಲ್ಲಿದೆ. ಬೀದರ್‌ಗೆ ಬಿದರೆ, ಬಿದರೂರುಪುರ ಎಂಬ ಹೆಸರುಗಳಿವೆ. ಬಹಮನಿ ಮತ್ತು ಬರೀದ್‌ಶಾಹಿಗಳ ಅವಧಿಯಲ್ಲಿ ಮಹಮ್ಮದಾಬಾದ್ ಎಂದೂ, ಔರಂಗಜೇಬನ ಕಾಲಕ್ಕೆ ಜಾಫರಾಬಾದ್ ಎಂಬುದಾಗಿಯೂ ಇದು ಕರೆಸಿಕೊಂಡಿದೆ. ಕರ್ನಾಟಕದ ಅಪರೂಪದ ಬಿದರಿ ಕಲೆಗೆ ಪ್ರಸಿದ್ಧಿಯಾದ ನಗರ ಬೀದರ್ ಆಗಿದೆ. ಬಿದರಿಯು ಲೋಹದ ಅಲಂಕಾರಿಕ ಸಾಮಗ್ರಿಗಳ ಮೇಲೆ ಮಾಡಲಾದ ವಿಶಿಷ್ಟವಾದ ಕಲೆ. ಸತು, ತವರ, ಸೀಸ ಮತ್ತು ತಾಮ್ರದ ಕಪ್ಪುಮಿಶ್ರಿತ ಲೋಹದ ವಸ್ತುವಿನ ಮೇಲೆ ಬೆಳ್ಳಿಯ ತೆಳುವಾದ ತಂತಿಯನ್ನು ಕೈಯಿಂದ ಹೊಂದಿಸುವ ವಿಶಿಷ್ಟ ಕರಕುಶಲಕಲೆಯಾಗಿದೆ.


ಬೀದರ್ ಕೋಟೆಯು ಕರ್ನಾಟಕದ ಪ್ರಸಿದ್ಧ ಕೋಟೆಗಳಲ್ಲೊಂದು. ಈ ಕೋಟೆಯನ್ನು ಬಹಮನಿ ಸುಲ್ತಾನ ಅಹಮದ್ ಷಾ ವಲಿ ಕ್ರಿ.ಶ. ೧೪೨೯ ರಲ್ಲಿ ಆರಂಬಿsಸಿ ೧೪೩೨ ರಲ್ಲಿ ಪೂರ್ಣಗೊಳಿಸಿದ್ದನು. ಇವನು ಬಹಮನಿ ಸಾಮ್ರಾಜ್ಯದ ರಾಜಧಾನಿಯನ್ನು ರಾಜಕೀಯ ಕಾರಣಗಳಿಂದ ಗುಲ್ಬರ್ಗಾದಿಂದ ಬೀದರ್‌ಗೆ ಸ್ಥಳಾಂತರಿಸಿದ ಬಳಿಕ ಈ ಕೋಟೆಯು ಅತ್ಯಂತ ವ್ಯವಸ್ಥಿತ ತಂತ್ರeನಗಳನ್ನು ಒಳಗೊಂಡಿತು. ಆಳವಾದ ಕಂದಕ, ಬುರುಜು-ಬತೇರಿ, ಅಲಂಕೃತ ತೆನೆ, ತೋಪುಗಿಂಡಿ, ಕಾವಲುಗೋಪುರ, ಮುಳ್ಳಗಸಿಯ ಮಹಾದ್ವಾರಗಳಿಂದ ಶೋಭಿತವಾಗಿದೆ. ಕೋಟೆಯ ಒಳಗಿರುವ ಫಿರಂಗಿಗಳು ಅಂದಿನ ಯುದ್ಧತಂತ್ರಜ್ಞಾನದ ಪ್ರತೀಕಗಳೇ ಆಗಿವೆ. ಸುಲ್ತಾನರ ಅರಮನೆ ಮತ್ತು ಸೈನಿಕರ ವಸತಿಗೃಹ, ಮಸೀದಿ-ಗೋರಿ ಮೊದಲಾದ ಸ್ಮಾರಕಾವಶೇಷಗಳು ಇಂದಿಗೂ ಬೀದರ್‌ನ ಪ್ರಾಚೀನತೆಯನ್ನು ಸಾರುತ್ತಿವೆ. ಅವುಗಳಲ್ಲಿ ತಖ್ತ್‌ಮಹಲ್ ಅಹಮದ್ ಷಾ ಕಟ್ಟಿಸಿದ ಪ್ರಸಿದ್ಧ ಅರಮನೆ. ಇಲ್ಲಿ ಬರೀದ್ ಶಾಹಿ ಸುಲ್ತಾನರ ಪಟ್ಟಾಭಿಷೇಕ ನಡೆದ ಸ್ಥಳ ರಂಗೀನ್ ಮಹಲ್, ತರ್ಖಿಷ್ ಮಹಲ್(ಸುಲ್ರಾನನ ಟರ್ಕಿಶ್ ರಾಣಿಯ ನಿವಾಸ), ಗಗನ್ ಮಹಲ್, ದಿವಾನ್ ಇ ಆಮ್‌ಗಳು ಅಂದಿನ ಇತರೆ ಅರಮನೆಗಳಾಗಿವೆ. ರಂಗೀನ್ ಮಹಲ್ ಅಂದಿನ ಕರಕುಶಲಕಲೆಯ ಆಗರವೇ ಆಗಿದೆ. ಇಲ್ಲಿ ಸುಂದರವಾದ ಮರದ ಕೆತ್ತನೆಗಳಿವೆ. ವಿವಿಧ ಬಗೆಯ ಬಣ್ಣದ ಬಿಲ್ಲೆ, ಚಿಪ್ಪುಗಳಿಂದ ಅಲಂಕರಿಸಿದ ಈ ಅರಮನೆಯ ಗೋಡೆಗಳು ರಂಗುರಂಗಿನಿಂದ ಹೊಳೆಯುತ್ತಿವೆ. ಕೋಟೆಯ ಒಳಭಾಗದ ಸುಂದರ ಮತ್ತು ಪ್ರಸಿದ್ಧ ಸ್ಮಾರಕUಳಲ್ಲಿ ಸೋಲಾಕಂಬ ಮಸೀದಿಯೂ ಒಂದು. ಇದನ್ನು ಜನಾನಾ ಮಸೀದಿಯೆಂದೂ ಕರೆಯುವರು.

 

ಈ ಮಸೀದಿಯು ಅನೇಕ ಗುಮ್ಮಟಗಳಿಂದ ನಿರ್ಮಾಣವಾದ ವಿಸ್ತಾರ ಕಟ್ಟಡ. ನೂರಾರು ಜನ ಕುಳಿತು ಧ್ಯಾನಿಸಬಹುದಾದ ವಿಶಾಲ ಮಂದಿರವಿದು. ಈ ಮಸೀದಿಯ ಮುಂಭಾಗದ ಉದ್ಯಾನವನವು ಮಧ್ಯಯುಗೀನ ಕಾಲದ ಪ್ರೌಢಿಮೆಯನ್ನು ನೆನಪಿಸುತ್ತದೆ. ಉದ್ಯಾನವನವನ್ನು ರೂಪಿಸಿದ ಬಗೆ, ಪರಿಸರ ಕಾಳಜಿ, ಸೌಂದರ್ಯ ಪ್ರಜ್ಞೆ, ಸಜ್ಜುಗೊಳಿಸಿದ ಅವರ ಕಾರ್ಯಕ್ಷಮತೆ ಅವಿಸ್ಮರಣೀಯವಾದವು. ಉದ್ಯಾವನಕ್ಕೆ ಅಗತ್ಯವಾದ ನೀರು, ನೀರಿಗೆ ಬೇಕಾದ ಕಾಲುವೆ, ಕಾಲುವೆಯಿಂದ ಹೊರಟ ನೀರಿಗೆ ವೈವಿಧ್ಯಮಯವಾದ ಅಲಂಕರಣೆಗಳಿಂದ ಕೂಡಿದ ಕಾರಂಜಿ, ಬುಗ್ಗೆ, ಕೊಳಗಳು ಅಂದಿನವರ ಸೌಂದರ್ಯಪ್ರಜ್ಞೆಯ ಪ್ರತೀಕಗಳೇ ಆಗಿವೆ. ನೀರನ್ನು ಹೂದೋಟಕ್ಕೆ ಹರಿಸಲು ಅಳವಡಿಸಿದ ವೈವಿಧ್ಯಮಯ ರಚನೆಗಳು ಇಂದಿನ ಆಧುನಿಕ ತಂತ್ರಜ್ಞಾನವನ್ನು ಮೀರಿಸುವಂತಿವೆ.

 

ಹಾಗೆಯೇ ಬೀದರಿನಲ್ಲಿ ಕೋಟೆ ಮತ್ತು ವಸತಿ ಪ್ರದೇಶಗಳಿಗೆ ನೀರನ್ನು ಒದಗಿಸಲು ಅತ್ಯಂತ ವ್ಯವಸ್ಥಿತ ಸುರಂಗ ಕಾಲುವೆ, ಕೊಳ, ಬಾವಿಗಳಿಗೆ ಅಳವಡಿಸಿರುವ ತಂತ್ರಜ್ಞಾನ ಗಮನಾರ್ಹವಾಗಿದೆ.
ಮಹಮದ್ ಗವಾನ್ ಕ್ರಿ.ಶ ೧೪೭೨-೮೧ರ ಹೊತ್ತಿಗೆ ನಿರ್ಮಿಸಿದ ಮದರಸಾವು ಬೀದರಿನಲ್ಲಿರುವ ಅತ್ಯಂತ ವಿಶಿಷ್ಠ ಕಟ್ಟಡವಾಗಿದೆ. ಮದರಸಾವು ಕರ್ನಾಟಕದ ಅತ್ಯಂತ ಸುಂದರವಾದ ಕಟ್ಟಡಗಳಲ್ಲೊಂದು. ಪರ್ಶಿಯಾದ ಮದರಸಾಗಳ ಮಾದರಿಯ ಕಟ್ಟಡವಿದು. ವಿಶಾಲವಾದ ಪ್ರಾಂಗಣ ಮತ್ತು ಸಭಾಂಗಣವುಳ್ಳ ಇದು ಸುತ್ತಲೂ ಉಪನ್ಯಾಸ ಕೊಠಡಿಗಳು, ವಿದ್ಯಾರ್ಥಿ ಮತ್ತು ಅಧ್ಯಾಪಕರ ಕೋಣೆಗಳು, ಪುಸ್ತಕ ಭಂಡಾರ, ಪ್ರಾರ್ಥನಾ ಮಂದಿರ ಮೊದಲಾದುವನ್ನು ಒಳಗೊಂಡ ವಿಶ್ವವಿದ್ಯಾನಿಲಯವೇ ಆಗಿದೆ. ಮುಂಭಾಗದ ಎರಡು ಎತ್ತರದ ಮಿನಾರುಗಳಲ್ಲಿ ಒಂದು ಕಾಲನ ದವಡೆಗೆ ಸಿಕ್ಕು ಬಿದ್ದುಹೋಗಿದೆ. ಈಗ ಉಳಿದಿರುವ ಎತ್ತರದ ಮಿನಾರು ಅತ್ಯಂತ ಸುಂದರವಾಗಿ ಅಲಂಕೃತಗೊಂಡಿರುವುದನ್ನು ಕಾಣಬಹುದು. ಗೋಡೆಗಳ ಮೇಲೆ ಪವಿತ್ರ ಖುರಾನಿನ ಸಾಲುಗಳನ್ನು ಹಾಕಲಾಗಿದೆ. ಇಂದಿಗೂ ಅದರ ರಚನಾಶೈಲಿಯನ್ನು ಗಮನಿಸಿದರೆ ಐದುನೂರು ವರ್ಷಗಳ ಹಿಂದೆ ಇದರ ವೈಭವ ಹೇಗಿತ್ತೆಂಬುದರ ಅರಿವಾಗುತ್ತದೆ.

ಈ ನಗರದಲ್ಲಿರುವ ಸ್ಮಾರಕಗಳು ಒಂದೇ ಎರಡೇ ನೂರಾರು ಹರಡಿವೆ. ಅವುಗಳಲ್ಲಿ ಅಹ್ಮದ್ ಷಹನ ಗೋರಿಯನ್ನೊಳಗೊಂಡ ಸಉಮಾರು ೧೨ಕ್ಕೂ ಹೆಚ್ಚು ಗೋರಿಗಳು ಅಷ್ಟೂರಿನಲ್ಲಿವೆ. ಅಲ್ಲಾವುದ್ದೀನ ಮತ್ತು ಹಜರತ್ ಖಲೀವುಲ್ಲಾನ ಗೋರಿಗಳು ಚೌಖಂಡಿಯಲ್ಲಿವೆ. ಮಹಮದ್ ಷಾನ ಕೊಲೆ ಸಂಚಿನಿಂದ ಪಾರಾದ ನೆನಪಿಗೆ ಕಟ್ಟಲಾದ ಷಾ ಬುರುಜು ಇರುವುದು ಇಲ್ಲಿಯೇ. ಇವುಗಳಲ್ಲದೆ ನರಸಿಂಹ ಝರಣಿ, ಪಾಪನಾಶಿನಿ ಇಲ್ಲಿನ ಪವಿತ್ರ ಕ್ಷೇತ್ರಗಳಾಗಿವೆ. ಅಲ್ಲದೆ ಭಾರತೀಯ ವಾಯುಪಡೆ ತರಬೇತಿ ಸಂಸ್ಥೆ ಬೀದರಿನಲ್ಲಿದೆ. ಇದು ಭಾರತದ ಎರಡನೇ ಅತಿದೊಡ್ಡ ತರಬೇತಿ ಕೇಂದ್ರವಾಗಿರುವುದು ಗಮನಾರ್ಹ.

 

Girl in a jacket
error: Content is protected !!