ಕಪ್ಪು ಜಗದ ಬೆಳಕಿನ ಕಿರಣ

Share

ಕಪ್ಪು ಜಗದ ಬೆಳಕಿನ ಕಿರಣ

ಅದು ೨೦೧೬ ರ ಡಿಸೆಂಬರ್ ತಿಂಗಳಲ್ಲಿ ೬ರಂದು ಪತ್ರಕರ್ತ ಮತ್ತು ಸಂಘಟಕ ಮಹೇಶ್ ಊಗಿನಹಳ್ಳಿಯವರು ಏರ್ಪಡಿಸಿದ್ದ ಚಂದಾಪುರದ ಛತ್ರಖಾನೆ ಶಾಲೆಯಲ್ಲಿ ಜೇನುಗೂಡು ವೇದಿಕೆಯ ಕನ್ನಡದ ಕಾರ್ಯಕ್ರಮವಿತ್ತು. ಅಂದು ನಮ್ಮ ತಾಲ್ಲೂಕಿನವರೇ ಆದ ಸೂಕ್ಷ್ಮ ಸಂವೇದನೆಯ ಲೇಖPರಾದ ಶೂದ್ರ ಶ್ರೀನಿವಾಸರು ಮತ್ತು ದಲಿತಕವಿ ಎಂದೇ ಕರೆಯಲ್ಪಡುವ ಬಂಡಾಯ ಕವಿ ಸಿದ್ದಲಿಂಗಯ್ಯನವರು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯನವರು ಯಾವಾಗ ಮಾತನಾಡಿzರೂ ನವಿರಾದ ಹಾಸ್ಯ ಸುತ್ತಮುತ್ತಲಿನವರನ್ನು ಮಂದಸ್ಮಿತರನ್ನಾಗಿಸುತ್ತಿತ್ತು. ಅವರು ಮಾತನಾಡುವ ಸರದಿ ಬಂದಾಗ ಹೀಗೇ ಮಾತನಾಡುತ್ತಾ ಪ್ರಶಾಂತತೆಯ ಉದಾಹರಣೆಯಾಗಿ ಒಂದು ಪ್ರಸಂಗ ಹೇಳಿದರು –

‘ಒಮ್ಮೆನಾನು ಮನೆಯಲ್ಲಿರದ ಸಮಯದಲ್ಲಿ ನಮ್ಮ ಮನೆಗೆ ಸ್ನೇಹಿಸರು ನನ್ನನ್ನು ಹುಡುಕುತ್ತಾ ಮನೆಗೆ ಬಂದು ನನ್ನ ತಾಯಿಯವರಿಗೆ ‘ನನ್ನನ್ನು ಎಲ್ಲಿ? ಎಂದು ಕೇಳಿದರಂತೆ.. ಅಮ್ಮ ನಿಡುಸುಯ್ದು ‘ಅವನೆಲ್ಲಪ್ಪಾ ಮನೆಲಿದ್ದಾನೆ? ..ಮಶಾಣದಲ್ಲಿದ್ದಾನೆ.’ ಎಂದರಂತೆ ಆಗ ಸ್ನೇಹಿತ ಗಾಬರಿಯಾಗಿ ‘ಅಯ್ಯೋ ಅಮ್ಮ ಏನಾಯಿತು? ಎಂದಾಗ ಅಮ್ಮ ನಗುತ್ತಾ “ಅಯ್ಯೋ ಆ ತರ ಅಲ್ಲಾ.. ಹೋಗು ಅಲ್ಲಿ ಮಶಾಣದಲ್ಲಿ ಕೂತು ಕವಿತೆ ಬರೆಯುತ್ತಿರುತ್ತಾನೆ’ ಎಂದರಂತೆ. ಅದನ್ನು ಕೇಳಿದ ಸಭೇ ನಗೆಗಡಲಲ್ಲಿ ಮುಳುಗಿತ್ತು. ಅವರ ಮಾತು ಮುಂದುವರೆಸುತ್ತಾ ‘ಸ್ಮಶಾನದಲ್ಲಿ ದೆವ್ವ ಪಿಶಾಚಿ ಇರುತ್ತೆ ಎಂದು ಕೆಲವರು ನಂಬುತ್ತಾರೆ ಆದರೆ ಸ್ಮಶಾನದಲ್ಲಿರುವ ಪ್ರಶಾಂತ ವಾತಾವರಣ ಊರಲ್ಲಿರದು, ಮೇಲಾಗಿ ನಮ್ಮ ಮನದಲ್ಲಿರುವ ದೆವ್ವ, ಪಿಶಾಚಿ, ಭೂತಗಳು ಹೋಗಿ ಒಳ್ಳೆಯ ಸಾಹಿತ್ಯ ಮನಸ್ಸಿಗೆ ಹೊಳೆಯುತ್ತದೆ. ಎಂದು ಸ್ಮಶಾನದ ಪ್ರಶಾಂತತೆಯ ಗ್ಗೆ ಹೇಳಿದ್ದರು.


ಮತ್ತೊಂದು ಕಾರ್ಯಕ್ರಮ ಆನೇಕಲ್ ನ ರಾಮಕುಟೀರದಲ್ಲಿ ಪ್ರಜಾ ವಿಮೋಚನಾ ಚಳುವಳಿ ವೇದಿಕೆಯಲ್ಲಿ ಸ್ನೇಹಿತರಾದ ಕವಿ ಆದೂರು ಪ್ರಕಾಶ್ ಅವರ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಕವಿ ಸಿದ್ದಲಿಂಗಯ್ಯನವರು‘ನಡೆ-ನುಡಿ’ ಪ್ರಕಾಶನವನ್ನು ಉದ್ಘಾಟನೆಗೆ ಬಂದಿದ್ದರು. ಆಗ ಅವರು ಸಾಮಾಜಿಕವಾಗಿ ಮಾತನಾಡುತ್ತಾ ‘ನಮ್ಮ ಭಾರತದಲ್ಲಿ ಅನೇಕ ಜಾತಿಗಳು ನಮ್ಮ ಧರ್ಮದಲ್ಲಿವೆ. ಅವರಿಗೆ ಅವರರವದೇ ಆದ ಒಂದೊಂದು ರೀತಿಗಳಿವೆ. ಎಲ್ಲಾ ಜಾತಿಗಳಲ್ಲಿ ಒಂದಲ್ಲ ಒಂದು ವಿಷಯಕ್ಕೆ ಭಿನ್ನಾಭಿಪ್ರಾಯಗಳಿವೆ ಆದರೂ ಮದುವೆ ಮುಂತಾದ ಕೆಲವು ವಿಷಯಗಳಲ್ಲಿ ಕಟ್ಟುಬಿದ್ದು ಒಂದಾಗಿರುತ್ತಾರೆ. ಆದರೆ ನಮ್ಮ ದಲಿತ ಸಮುದಾಯದಲ್ಲಿಯೇ ಎಡ ಬಲಗಳೆಂಬ ಎರಡು ಭಾಗಗಳನ್ನು ಮಾಡಿಕೊಂಡಿದ್ದಾರೆ. ಅವರನ್ನು ಒಟ್ಟುಗೂಡಿಸುವುದೇ ಸವಾಲಾಗಿದೆ.’ ಎಂದು ಖೇದವನ್ನು ವ್ಯಕ್ತಪಡಿಸಿದ್ದರು.

 

ಮತ್ತೊಮ್ಮೆ ೨೦೧೯ ರಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಕವಿ, ಪ್ರಕಾಶಕ ಮತ್ತು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ವಿ ತ್ಯಾಗರಾಜ್‌ರವರು ತಮ್ಮ ಸಂಸ್ಥೆಯಿಂದ ಕೊಡಮಾಡುವ ‘ಕಾಯಕ ಯೋಗಿ’ ಪ್ರಶಸ್ತಿಯನ್ನು ಕವಿ ಸಿದ್ದಲಿಂಗಯ್ಯರವರಿಗೆ ನೀಡಲ್ಪಟ್ಟ ಸಂದರ್ಭದಲ್ಲಿ ಆ ಕಾರ್ಯಕ್ರಮದಲ್ಲಿ ನನಗೆ ಪ್ರೊ. ಸಿದ್ದಲಿಂಗಯ್ಯನವರ ಬಗ್ಗೆ ಪರಿಚಯ ಮಾಡಿಕೊಡುವ ಜವಾಬ್ಧಾರಿ ನನಗೆ ಒದಗಿ ಬಂದಿತ್ತು. ನಾಲ್ಕು ಪುಟಗಳ ಅವರ ಪರಿಚಯವನ್ನು ಓದುವಾಗ ಸಮಯಾಭಾವದಿಂದ ಮೊಟಕುಗೊಳಿಸಲು ಹೇಳಿದ್ದರು ಆಯೋಜಕರು. ಆದರೆ ನಾನು ಬಿಡದೆ ೭೫% ಓದಿಯೇ ಮುಗಿಸಿದೆ. ಓದಿದ ನಂತರ ಸಿದ್ದಲಿಂಗಯ್ಯನವರೆಡೆಗೆ ನೋಡಿದೆ. ಅವರು ಮೆಚ್ಚುಗೆಯಿಂದ ನನ್ನನ್ನು ಅಭಿನಂದಿಸಿದರು. ಕಾರ್ಯಕ್ರಮದ ನಂತರ ಮಾತನಾಡಿಸಿದೆ. ಚೆನ್ನಾಗಿ ಮಾಹಿತಿ ಕಲೆ ಹಾಕಿ ಪರಿಚಯ ಸೊಗಸಾಗಿ ಓದಿದಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ಮನಸ್ಸು ಸಾರ್ಥಕತೆಯಿಂದ ಸಂತಸಗೊಂಡಿತು.


ಅನೇಕ ಅತ್ಯುತ್ತಮ ಕೃತಿಗಳನ್ನು ನಾಡಿಗೆ ನೀಡಿ, ರಾಷ್ಟ್ರದ ಮತ್ತು ನಾಡಿನ ಅನೇಕ ಶ್ರೇಷ್ಠ ಪ್ರಶಸ್ತಿ ಬಹುಮಾನಗಳನ್ನು ಪಡೆದ ಕವಿ ಸಿದ್ದಲಿಂಗಯ್ಯವರು ಬಂಡಾಯ ಕವಿಯಾದರೂ ಸಹ ಅದರೊಡನೆ ಅವರ ಅನೇಕ ಕವಿತೆಗಳು ಮತ್ತು ನಡೆನುಡಿಯಿಂದ ಅವರು ಒಬ್ಬ ಸರಳ ಸಹೃದಯ ಕವಿ ಎಂದೇ ಹೇಳಬಹುದು.
ಮರೆಯಾದ ಕಪ್ಪು ಜಗದ ಬೆಳಕಿನ ಕಿರಣಕ್ಕೆ ಇದೇ ನನ್ನ ಬರಹದ ಭಾವಭಾಷ್ಪ. ಸಿದ್ದಲಿಂಗಯ್ಯನವರು ಭೌತಿಕವಾಗಿ ಮರೆಯಾಗಿರಬಹುದು ಆದರೆ ಯಾವುದೇ ಕವಿ ಮತ್ತು ಕಲಾವಿದರಿಗೆ ಎಂದೂ ಮರಣಬಾರದು. ಸದಾ ಅವರ ಮುಂದಿನ ಪೀಳಿಗೆಯ ಮನದಲ್ಲಿ ಜೀವಂತವಾಗಿದ್ದು ಅಮರರಾಗಿರುತ್ತಾರೆ.

Girl in a jacket
error: Content is protected !!