ಕಂಪನಿಯೊಳಗಿನ ಮನಸುಗಳ ಒಳತುಡಿತಗಳು

Share

ಕಂನಿಯೊಳಗಿನ ಮನಸುಗಳ ಒಳತುಡಿತಗಳು

ಬೆಳಿಗ್ಗೆ ಒಂಬತ್ತರ ಸುಮಾರಿಗೆ ಮುಂಬೈನಿಂದ ಬಂದ ನನ್ನ ಬಾಸ್ ಅಮರನಾಥ್ ಅವರ ಫೋನ್ , ಲೈನ್ ನ ಸಮಸ್ಯೆಯಿಂದಾಗಿ ಅಷ್ಟು ಸ್ಪುಟವಾಗಿ ಕೇಳುತ್ತಿರಲಿಲ್ಲ. ಸಂಭಾಷಣೆಯಿಂದ ನನಗೆ ಅರ್ಥವಾಗಿದ್ದು ಎಂದರೆ ಆ ದಿನ ರಾತ್ರಿ ಬಾಂಬೆ-ಜೋಧಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಅಹಮದಾಬಾದ್ ಗೆ ಡಿ. ಒ. ಟಿ. ((DOT) ಭದ್ರಾ ಎಕ್ಸ್ಚೇಂಜ್ ರಿಪೇರಿ ಕಾರ್ಯಕ್ಕಾಗಿ ಒಬ್ಬ ಸೀನಿಯರ್ ಎಂಜಿನಿಯರ್ ಬರಲಿದ್ದಾರೆ ಮತ್ತು ನಾನು ರೈಲ್ವೆ ಸ್ಟೇಷನ್ ಗೆ ಹೋಗಿ ಅವರನ್ನು ಭೇಟಿಯಾಗಿ ನಾಳಿನ ಅವರ ರಿಪೇರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಬೇಕು ಎನ್ನುವುದು. ಭದ್ರಾ ದೂರವಾಣಿ ವಿನಿಮಯ ಕೇಂದ್ರದಲ್ಲಿ ನಮ್ಮ ಕಂಪನಿವತಿಯಿಂದ ಕೇವಲ DOT ಮೇಲಧಿಕಾರಿಗಳಿಗಷ್ಟೆ ಸಂಪರ್ಕ ಕಲ್ಪಿಸುವ ಮೂರು ನಂಬರ್ ಗಳ ಇಂಟರ್ಕಾಮ್ ಎಕ್ಸ್ಚೇಂಜ್ ಒಂದನ್ನು ಒಂದು ವರ್ಷದ ಹಿಂದೆಯಷ್ಟೇ ಸ್ಥಾಪಿಸಲಾಗಿತ್ತು. ಕೆಲ ಎಕ್ಸಟೆನ್ಶನ್ ಗಳಲ್ಲಿ ತಾಂತ್ರಿಕ ತೊಂದರೆ ಇದ್ದ ಕಾರಣಕ್ಕೆ ಮತ್ತು ಮುಖ್ಯವಾಗಿ CGM ಮಂಗಳಾ ಅವರ ಎಕ್ಸಟೆನ್ಶನ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ, ಸ್ಥಳೀಯ ಇಂಜಿನಿಯರ್ ಗಳು ಇದನ್ನು ದುರಸ್ತಿ ಪಡಿಸಲು ಆಗದ ಕಾರಣ ಮುಖ್ಯಕಚೇರಿ ಬಾಂಬೆಯಿಂದ ಸದರಿ ಇಂಜಿನಿಯರ್ ಅಹಮದಾಬಾದ್ ಗೆ ಭೇಟಿ ನೀಡುವವರಿದ್ದರು.

ರಾತ್ರಿ ಹತ್ತರ ವೇಳೆಗೆ ಕಾಲೂಪೂರ್ ರೈಲ್ವೆ ನಿಲ್ದಾಣಕ್ಕೆ ನನ್ನ ಸಹಾಯಕ ಸಂಜಯ್ ತಿವಾರಿ ಮತ್ತು ಉಪಾಧ್ಯಾಯ ಅವರೊಟ್ಟಿಗೆ ಹೋದವನಿಗೆ ಬಾಂಬೆಯಿಂದ ಬಂದ ಸಾಧು ಸಿಂಗ್ ಧನೋವ (SSD) ಬೇಟಿಯಾಗಿದ್ದ. SSD ಪಂಜಾಬ್ ನ ಹೋಷಿಯಾರ್ ಪುರ್ ಮೂಲದವನು. ಬಾಂಬೆಯಲ್ಲಿ ಕಳೆದ ಆರು ವರ್ಷಗಳಿಂದ ನಮ್ಮ ಕಂಪನಿಯ ಮುಖ್ಯ ಕಚೇರಿಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಕೆಲಸಕ್ಕೆ ಸೇರಿದ ಮೂರೂವರೆ ವರ್ಷಕ್ಕೇ ದೊರೆಯುವ ಪ್ರಥಮಬಡ್ತಿಯಿಂದ ವಂಚಿತನಾದ SSD ತನ್ನನ್ನು ತಾನು ‘ಸೀನಿಯರ್ ಎಂಜಿನಿಯರ್’ ಎಂದು ಕರೆದುಕೊಳ್ಳುತ್ತಿದ್ದ. ಅಸಲಿಗೆ ಆ ತರಹದ ಹುದ್ದೆಯೇ ಕಂಪನಿಯಲ್ಲಿ ಇರಲಿಲ್ಲ. ಆದರೆ ಇದರಿಂದ ನಾವು ಕಳೆದುಕೊಳ್ಳುವುದು ಏನಿದೆ? ಎಂದು ಯೋಚಿಸಿದ ಮುಖ್ಯಾಧಿಕಾರಿಯ ಸಮೇತ ಎಲ್ಲರೂ SSDಯನ್ನ ಸೀನಿಯರ್ ಎಂಜಿನಿಯರ್ ಹೆಸರಿನಲ್ಲಿಯೇ ಕರೆಯುತ್ತಿದ್ದರು. SSD ಸುಮಾರು ಆರು ಅಡಿಗಳಿಗೂ ಮೀರಿದ ಎತ್ತರದ ಆಸಾಮಿ. ನೀವು ಒಬ್ಬ ಸರ್ದಾರ್ಜಿಯನ್ನು ಹೇಗೆ ಕಲ್ಪನೆ ಮಾಡಿಕೊಳ್ಳಬಲ್ಲಿರೋ ಅದರ ತದ್ರೂಪವಾಗಿಯೇ SSDಯ ಬಾಹ್ಯ ಲಕ್ಷಣಗಳಿದ್ದವು. ಆದರೆ SSD ಒಂದು ತರಹದ ಐಲು ಸ್ವಭಾವದ ವ್ಯಕ್ತಿ. ಸುಮಾರು ನಾಲ್ಕೈದು ತಿಂಗಳ ಹಿಂದೆ ಬಾಂಬೆಗೆ ಹೋಗಿದ್ದವನಿಗೆ ಸಿಕ್ಕು ಪರಿಚಯವಾಗಿದ್ದ ಈತನೊಟ್ಟಿಗೆ “ಜಾಸ್ತಿ ಮಾತಾಡಬಾರದು” ಎನ್ನುವ ಎಚ್ಚರಿಕೆಯನ್ನು SSDಯ ಹಿರಿಯ ಸಹೋದ್ಯೋಗಿ ಸಿದ್ದಕಿ ಕೊಟ್ಟಿದ್ದರು. ಇದರ ಬಗ್ಗೆ ನಾನು ಹೆಚ್ಚಿನ ವಿವರಗಳನ್ನು ಪಡೆಯಲು ಮುಂದಾದಾಗ ಹೆಚ್ಚು ವಿವರಿಸದ ಸಿದ್ದಕಿ “ಅವನ ತಂಟೆಯಿಂದ ದೂರವಿರಿ, ಸಾಕು” ಎನ್ನುವ ಖಡಕ್ ಎನ್ನಬಹುದಾದ ಎಚ್ಚರಿಕೆ ಒಂದಿಗೆ ಮಾತಿಗೆ ಮುಕ್ತಾಯ ಹಾಡಿದ್ದರು. ನಾನಿನ್ನೂ ಸಂಸ್ಥೆಗೆ ಹೊಸದಾಗಿ ಸೇರಿದ ಕಾರಣದಿಂದಲೋ ಅಥವಾ ನಾನು ಮುಖ್ಯ ಕಚೇರಿಗೆ ಸೇರಿದ ಸಿಬ್ಬಂದಿ ಅಲ್ಲ ಎನ್ನುವ ಕಾರಣಕ್ಕೋ ನನ್ನ ಬಳಿ ಈ ವಿಷಯದ ಹೆಚ್ಚಿನ ಪ್ರಸ್ತಾವನೆ ಉಚಿತವಲ್ಲ ಎಂದು ಸಿದ್ದಕಿಗೆ ಅನ್ನಿಸಿರಬಹುದು. ಮಧ್ಯಾಹ್ನ ಭೋಜನದ ಸಮಯದಲ್ಲಿ ಕನ್ನಡಿಗರೇ ಆದ, ಲೆಕ್ಕಾಧಿಕಾರಿ, ಬೆಂಗಳೂರಿನ ಹರಿಕೃಷ್ಣ ಅವರನ್ನು SSD ಬಗ್ಗೆ ಕೇಳಿದಾಗ ಅವರಿಂದ ಬಂದ ಉತ್ತರ ನನ್ನನ್ನು ಚಕಿತನಾಗಿಸಿತ್ತು. “ಮೊನ್ನೆ ಎಲೆಕ್ಟ್ರಾನಿಕ್ಸ್ ಲ್ಯಾಬ್ ನಲ್ಲಿ ಟೆಕ್ನಿಷಿಯನ್ ಪಾಟೀಲ್ ಗೆ ಇವನು ಕಪಾಳಮೋಕ್ಷ ಮಾಡಿದ್ದಾನೆ, ವಿಚಾರಣೆ ನಡೆಯುತ್ತಿದೆ. ನೀವು ಇವನಿಂದ ದೂರ ಇರುವುದು ಉತ್ತಮ, ಅವನ ಉಸಾಬರಿಗೆ ಹೋಗಬೇಡಿ. ಅವನೇ ಬಂದು ಮಾತನಾಡಿಸಿದರೆ ಹೂಂಗುಟ್ಟಿ ಸುಮ್ಮನಾಗಿ” ಎನ್ನುವ ಉಪದೇಶದ ಮಾತುಗಳು ಅವರಿಂದ ಹರಿದುಬಂದಿದ್ದವು. ಕೃಷ್ಣ ಅವರ ಮಾತುಗಳಿಗೆ ತಲೆದೂಗಿದ ನಾನು ಈ ಪ್ರಸಂಗವನ್ನು ಮರೆತೇಬಿಟ್ಟಿದ್ದೆ.

“ನಾಳೆ ಬೆಳಿಗ್ಗೆ ಒಂಬತ್ತಕ್ಕೆ ಸಿಗೋಣ” ಎಂದು SSDಯನ್ನು ಭದ್ರಾ ಎಕ್ಸ್ಚೇಂಜ್ ಕಟ್ಟಡದ ಸಮೀಪವಿದ್ದ ಗಾಂಧಿರಸ್ತೆಯ ಕಿಂಗ್ಸ್ ವೆ ಹೊಟೇಲಿನಲ್ಲಿ ಉಳಿಸಿ ಬೀಳ್ಕೊಡುವ ವೇಳೆಯಲ್ಲಿ “ಶಿವಪ್ರಕಾಶ್, ರಿಪೇರಿಗಾಗಿ ನಾನೇ ಬಾಂಬೆಯಿಂದ ಬರುವಂತಹ ಅವಶ್ಯಕತೆ ಏನಿತ್ತು? ನನಗೆ ಒಂದು ಟೆಲಿಫೋನ್ ಮಾಡಿದ್ದರೆ ಬಾಂಬೆಯಿಂದಲೆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೆ, ನನ್ನಂತಹ ಸೀನಿಯರ್ ಎಂಜಿನಿಯರ್ ತುಂಬಾ ಗಂಭೀರ ಸಮಸ್ಯೆಗಳು ಇದ್ದಲ್ಲಿ ಮಾತ್ರ ಎಕ್ಸ್ಚೇಂಜ್ ಗಳಿಗೆ ಭೇಟಿ ಕೊಡುವುದು, ಇಂತಹ ಸಣ್ಣಪುಟ್ಟ ರಿಪೇರಿ ಕಾರ್ಯಗಳನ್ನು ನಿಮ್ಮಂತಹ ಸ್ಥಳೀಯ ಎಂಜಿನಿಯರ್ ಗಳೇ ಮಾಡಬೇಕು” ಎಂದ SSDಯ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದ ಹಾಗೆ ಅವನ ರೂಮಿನಿಂದ ಹೊರನಡೆದಿದ್ದೆ. ಪೂರ್ವ ಮಣಿನಗರದ (ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಅವರ ಸ್ಮರಣಾರ್ಥ ಅಹಮದಾಬಾದ್ ನ ಹೊರವಲಯದ ಈ ಪ್ರದೇಶಕ್ಕೆ ‘ಮಣಿನಗರ’ ಎಂದು ನಾಮಕರಣ ಮಾಡಿದ್ದಾರೆ. ಕ್ರಿಶ್ಚಿಯನ್ ಜನಸಂಖ್ಯೆಯ ಬಾಹುಳ್ಯವಿರುವ ಪ್ರದೇಶವಿದು) ನನ್ನ ಒಂದು ರೂಮಿನ ವಸತಿಗೆ ತನ್ನ ಸ್ಕೂಟರ್ ನಲ್ಲಿ ರಾತ್ರಿ ಹನ್ನೊಂದರ ವೇಳೆಯಲ್ಲಿ ಬಿಟ್ಟು ಈಶಾನ್ ಪುರ್ ತನ್ನ ಮನೆಗೆ ತೆರಳಿದ ಉಪಾಧ್ಯಾಯ ದಾರಿಯುದ್ದಕ್ಕೂ SSD ಬಗ್ಗೆಯೇ ಮಾತನಾಡಿದ್ದ. “ಅಮರನಾಥ್ ಸಾಹೇಬರು ಇವನನ್ನು ಏತಕ್ಕಾಗಿ ಈ ರಿಪೇರಿ ಕೆಲಸಕ್ಕೆ ಕಳುಹಿಸಿದ್ದಾರೋ ಏನೋ, ಮತ್ತೊಬ್ಬ ಎಂಜಿನಿಯರ್ ಸುಬ್ಬಾರೆಡ್ಡಿಯವರು ಬಂದಿದ್ದರೆ ಚೆನ್ನಾಗಿತ್ತು, ಮೊದಲೇ DOT ನಮ್ಮ ಬಹಳ ಪ್ರಮುಖ ಗ್ರಾಹಕರು, SSD ರಿಪೇರಿ ಕೆಲಸದಲ್ಲಿ ಏನಾದರೂ ವ್ಯತ್ಯಯ ಮಾಡಿದರೆ ಏನು ಮಾಡುವುದು?” ಎಂದೆಲ್ಲಾ ಹಲುಬುತ್ತಲೆ ಇದ್ದ. SSDಯ ಬಗ್ಗೆ ತಾನು ಕೇಳಿದ್ದ ಕೆಲವು ಪ್ರಸಂಗಗಳ ಬಗ್ಗೆ ಮಾರ್ಗ ಮಧ್ಯೆ ರಾಯಪುರ್ ಗೇಟ್ ಬಳಿ ಆಧಾ ಟೀಗಾಗಿ ನಿಲ್ಲಿಸಿದಾಗ ಹೇಳಿದ್ದ. ಹೋದ ತಿಂಗಳಷ್ಟೇ ಜಬಲ್ಪುರ್ ಆರ್ಮಿ ಎಕ್ಸ್ಚೇಂಜ್ ಗೆ ಹೋದ SSD ಅಲ್ಲಿನ ದುರಸ್ತಿಕಾರ್ಯವನ್ನು ಎಷ್ಟರಮಟ್ಟಿಗೆ ಮಾಡಿಮುಗಿಸಿದ್ದ ಎಂದರೆ ಇವನ ರಿಪೇರಿ ತರುವಾಯ ದೆಹಲಿ ಆರ್ಮಿ ಹೆಡ್ ಕ್ವಾರ್ಟರ್ಸ್ ನಿಂದ ಬಂದ ತುರ್ತುಕರೆಯ ಮೇರೆಗೆ ಬೆಂಗಳೂರಿನಿಂದ ಆಗಮಿಸಿದ R&D ವಿಭಾಗದ ಪ್ರೊಡಕ್ಟ್ ಸಪೋರ್ಟ್ ಗ್ರೂಪ್ (PSG) ನ ಜೈನ್, ಗುರುರಾಜ್ ಕಟ್ಟಿ ಮತ್ತು ಇತರ ಎಂಜಿನಿಯರ್ ಗಳ ಹತ್ತು ಜನದ ತಂಡ ಸುಮಾರು ಒಂದು ವಾರಕಾಲ ಹಗಲೂ ರಾತ್ರಿ ಶ್ರಮಪಟ್ಟ ನಂತರವೇ ಎಕ್ಸ್ಚೇಂಜ್ ಸುಲಲಿತವಾಗಿ ಕಾರ್ಯ ನಿರ್ವಹಿಸತೊಡಗಿದ ಬಗ್ಗೆ ಉಪಾಧ್ಯಾಯನ ಬಾಯಲ್ಲಿ ಕೇಳಿದ ನನಗೆ ಅಹಮದಾಬಾದ್ ನ ಮೇ ತಿಂಗಳ ಬೇಸಗೆಯ ರಾತ್ರಿಯೂ ಮೈ ತಣ್ಣಗಾಗಿತ್ತು. ಹೇಳಿಕೇಳಿ ನಾನು ಅಹಮದಾಬಾದ್ ಕಚೇರಿಯ ಪರಭಾರಿ ಅಧಿಕಾರಿ. ಇಲ್ಲಿಯೂ ಈ ಸರ್ದಾರ್ಜಿ ತನ್ನ ರಣಪರಾಕ್ರಮವನ್ನು ಮೆರೆದರೆ ನನ್ನ ಗತಿ ಏನು? ಕೇವಲ ಒಂದು ವರ್ಷದ ಹಿಂದೆಯಷ್ಟೇ ಕಂಪನಿಯ ಸೇವೆಯಲ್ಲಿ ತೊಡಗಿಕೊಂಡು ನನ್ನ ಖಾಯಂ ಸೇವೆಯ ದೃಢೀಕರಣವನ್ನ ಎದುರು ನೋಡುತ್ತಿದ್ದ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಿದ ಅಮರನಾಥ್ ಬಗ್ಗೆ ಕೋಪ ಉಕ್ಕಿಬಂದಿತ್ತು. ಬೆಳಿಗ್ಗೆ ಈ ಬಗ್ಗೆ ಅವರೊಟ್ಟಿಗೆ ಮಾತನಾಡಿ SSD ಯನ್ನ ಹೇಗಾದರೂ ಮಾಡಿ ಭದ್ರಾ ಎಕ್ಸ್ಚೇಂಜ್ ನ್ನು ಪ್ರವೇಶಿಸಿದ ಹಾಗೆ ನೋಡಿಕೊಳ್ಳಬೇಕು ಎಂದುಕೊಂಡೆ. ರಾತ್ರಿಯಿಡೀ ನಿದ್ದೆ ಇಲ್ಲದೆ ಹಾಸಿಗೆ ಮೇಲೆ ಹೊರಳಾಡಿಯೆ ಕಳೆದ ನಾನು ಇದಕ್ಕೆ ಕಾರಣ ಬೇಸಿಗೆಯ ತಡೆಯಲಸಾಧ್ಯ ಸೆಖೆಯೆ ಅಥವಾ SSD ಆಗಮನವೋ ಅರಿಯದಾಗಿದ್ದೆ.

 

ಬೆಳಿಗ್ಗೆ ಸರಿಯಾಗಿ ಎಂಟರ ವೇಳೆಗೆ ಅಮರನಾಥ್ ಅವರಿಗೆ ಫೋನಾಯಿಸಿ SSD ಕುರಿತು ಅವಲತ್ತು ಪಟ್ಟುಕೊಂಡಿದ್ದೆ. ನನ್ನ ಮೇಲೆ ಸಿಟ್ಟಾದಂತೆ ಕಂಡ ಅಮರನಾಥ್ “ಯಾರ್ಯಾರೋ ಹೇಳಿದ್ದನ್ನು ಕೇಳುತ್ತೀರೇನ್ರಿ? SSD ನಮ್ಮ ಒಬ್ಬ ಉತ್ತಮ ಎಂಜಿನಿಯರ್. ಬೆಂಗಳೂರು R&D ವಿಭಾಗದಲ್ಲಿ ಆರು ತಿಂಗಳ ಕಾಲ ಎಕ್ಸ್ಚೇಂಜ್ ಕುರಿತು ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಸುಮ್ಮನೆ ಏನೇನೂ ಮಾತನಾಡಬೇಡಿ. ಅವರನ್ನು ಈ ಹೊತ್ತು ಭದ್ರಾ ಎಕ್ಸ್ಚೇಂಜ್ ಗೆ ಕರೆದೊಯ್ದು ರಿಪೇರಿ ಕೆಲ್ಸ ಮಾಡ್ಸಿ ರಾತ್ರಿ ಗುಜರಾತ್ ಎಕ್ಸ್ಪ್ರೆಸ್ ಗೆ ಅವರನ್ನು ಕಳುಹಿಸಿಕೊಡಿ. ಆ ಟ್ರೈನ್ ನಲ್ಲಿ ಅವರ ಟಿಕೆಟ್ ಮೀಸಲಾತಿಯಾಗಿದೆ. ನಾಳೆ ಸಾಯಂಕಾಲ ಅವರು ನಾಗಪುರ್ ಗೆ ಹೋಗಬೇಕು” ಎಂದೆಲ್ಲಾ ದಬಾಯಿಸಿದ್ದರು. ಬೇರೆ ಗತ್ಯಂತರವಿಲ್ಲದೆ ನನ್ನ ಸಹೋದ್ಯೋಗಿಗಳ ತಂಡದೊಂದಿಗೆ ತೆರಳಿ SSDಯನ್ನ ಭದ್ರಾ ಏರಿಯಾದ ವನರಾಜ್ ಹೊಟೇಲಿನ ಉಪಾಹಾರದ ನಂತರ ಎಕ್ಸ್ಚೇಂಜ್ ಕಟ್ಟಡಕ್ಕೆ ತಲುಪಿಸಿದೆ. ಬೆಳಗ್ಗಿನ ಉಪಹಾರವನ್ನು ಊಟದ ಮಾದರಿಯಲ್ಲಿಯೇ ಮುಗಿಸಿ ತೇಗಿದ ಸರ್ದಾರ್ ಜಿಗೆ ತುಸು ಹೆದರುತ್ತಲೇ ಒಂದು ಪ್ರಸ್ತಾವನೆಯನ್ನು ಮುಂದಿಟ್ಟೆ. “ನೀವು ಎಕ್ಸ್ಚೇಂಜ್ ಗೆ ಕೈ ಹಾಕಬೇಡಿ, ನೀವು ಮಾಡಬೇಕೆಂದಿರುವ ಕೆಲಸವನ್ನು ನಮ್ಮ ತಾಂತ್ರಿಕವರ್ಗಕ್ಕೆ ಹೇಳಿದರೆ ಸಾಕು, ನಮ್ಮವರೇ ಮಾಡಿ ಮುಗಿಸುತ್ತಾರೆ” ಎಂದ ನನ್ನ ಮಾತಿಗೆ ಸ್ವಲ್ಪ ಕೆರಳಿದಂತೆ ಕಂಡುಬಂದ SSD “ಏನು ನೀವು ಹೇಳುತ್ತಿರುವುದು? ಸೀನಿಯರ್ ಎಂಜಿನಿಯರ್ ಆದ ನಾನು ಕೈಗಳಿಂದ ಕೆಲಸ ಮಾಡುತ್ತೇನೆಂದು ಭಾವಿಸಿರುವಿರಾ? ನಾನು ಕೇವಲ ಎಕ್ಸ್ಚೇಂಜ್ ಮುಂದೆ ನಿಂತು ಒಮ್ಮೆ ವೀಕ್ಷಿಸಿದರೆ ಸಾಕು, ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ” ಎಂದುಬಿಡಬೇಕೆ? ಮುಂದೆ ಏನು ಮಾತನಾಡಲೂ ತೋಚದ ನಾನು ಮೌನಕ್ಕೆ ಶರಣಾಗಿದ್ದೆ.

ಭದ್ರಾ ಎಕ್ಸ್ಚೇಂಜ್ ಪರಭಾರಿಯಾಗಿದ್ಧ ಡಿವಿಷನಲ್ ಎಂಜಿನಿಯರ್ (DE) ಪ್ರಜಾಪತಿ ನನಗೆ ಬಹಳ ಚೆನ್ನಾಗಿ ಪರಿಚಯ ಇದ್ದವರು. ಹಿಂದಿನ ದಿನವೇ ರಿಪೇರಿ ಕೆಲಸಕ್ಕಾಗಿ ಬಾಂಬೆಯಿಂದ ಬರಲಿರುವ ಇಂಜಿನಿಯರ್ ಬಗ್ಗೆ ಅವರಿಗೆ ಹೇಳಿದ್ದೆ. ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ ತಮ್ಮ ಚೇಂಬರ್ ಗೆ ಕರೆದೊಯ್ದು ಡೋಕ್ಲ ಮತ್ತು ಮಸಾಲಾ ಟೀಗಳ ಸಮಾರಾಧನೆಯೊಂದಿಗೆ ಸತ್ಕರಿಸಿದ ಪ್ರಜಾಪತಿ ನಮ್ಮ ರಿಪೇರಿ ಕೆಲಸಕ್ಕೆ ಅನುವು ಮಾಡಿಕೊಡುವಂತೆ ತಮ್ಮ ಸಹಾಯಕ ತ್ರಿವೇದಿ ಅವರಿಗೆ ತಿಳಿಸಿ ಒಂದು ತುರ್ತು ಮೀಟಿಂಗ್ ಗಾಗಿ CGM ಮಂಗಳಾ ಅವರ ನಾರಾಯಣ್ ಪುರ್ ಆಫೀಸ್ ಗೆ ಹೊರಟರು. ತ್ರಿವೇದಿಯೊಂದಿಗೆ ಎಕ್ಸ್ಚೇಂಜ್ ರೂಂಗೆ ನಡೆದ ನಮ್ಮ ತಂಡ ಎಕ್ಸ್ಚೇಂಜ್ ಬಾಗಿಲುಗಳನ್ನು ತೆರೆದು ಸರ್ದಾರ್ಜಿಯ ರಿಪೇರಿಗೆ ಅನುವು ಮಾಡಿಕೊಟ್ಟಿತು.

“ಏನು ಸಮಸ್ಯೆ?” ಎಂದು ದೇವರ ಮುಂದೆ ನಿಂತು ದೇವರನ್ನೇ ಪ್ರಶ್ನಿಸುವ ಭಕ್ತನಂತೆ ಎಕ್ಸ್ಚೇಂಜ್ ಮುಂದೆ ನಿಂತು ಮೇಲಿಂದ ಕೆಳಗೆ ಕಣ್ಣಾಯಿಸುತ್ತಾ ಕೇಳಿದ SSD ಪ್ರಶ್ನೆಗೆ ಎಕ್ಸ್ಚೇಂಜ್ ನ ಸರ್ವಸಮಸ್ಯೆಗಳನ್ನೂ ಚುಟುಕದಲ್ಲಿ ವಿವರಿಸಿದೆ. ಸುಮಾರು ಐದು ನಿಮಿಷಗಳ ಕಾಲ ಎಕ್ಸ್ಚೇಂಜ್ ಯಂತ್ರದ ಹಿಂದೆ, ಮುಂದೆ, ಎಡ, ಬಲ, ಮೇಲೆ, ಕೆಳಗೆ ಹೀಗೆ ದಶದಿಕ್ಕುಗಳಿಂದಲೂ, ಸಾಧ್ಯವಾದ ಎಲ್ಲಾ ಪಾರ್ಶ್ವಗಳಿಂದಲೂ ಬಗ್ಗಿ, ಕುಳಿತು, ಎದ್ದು ಕಣ್ಣುಹರಿಸಿದ SSD “ಆಯ್ತು, ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿವೆ, ಇನ್ನು ನಾವು ಇಲ್ಲಿಂದ ಹೊರಡಬಹುದು” ಎನ್ನುವ ಅಪ್ಪಣೆಯನ್ನು ತಿರುಪತಿ ತಿಮ್ಮಪ್ಪನ ವರದ ಹಸ್ತಕೊಡುವ ಅಭಯಕ್ಕಿಂತ ದೊಡ್ಡದಾದ ಮಟ್ಟದ ಆತ್ಮವಿಶ್ವಾಸದಿಂದ ಕೊಟ್ಟ. ನಮ್ಮ ತಂಡದ ಪ್ರತಿಯೊಬ್ಬರೂ ಬಿಟ್ಟ ಕಣ್ಣುಗಳನ್ನು ಬಿಟ್ಟ ಹಾಗೆಯೆ ನೋಡುತ್ತಾ ಸರ್ದಾರ್ಜಿಯ ಪವಾಡಸದೃಶ್ಯ ರಿಪೇರಿಗೆ ಸಾಕ್ಷಿಯಾದೆವು. ಒಂದರೆ ಕ್ಷಣ “ಛೇ, ಇಷ್ಟು ಸಣ್ಣ ವಿಷಯಕ್ಕಾಗಿ ಬಾಂಬೆಯಿಂದ ಇಷ್ಟೊಂದು ಪುಸಲಾಯಿಸಿ ನಾನು SSDಯನ್ನ ಕರೆಸಬೇಕಾಯಿತಲ್ಲ, ನಮ್ಮವರೇ ಯಾರಾದರೂ ಒಬ್ಬರು ಈ ರೀತಿ ಎಕ್ಸ್ಚೇಂಜ್ ನ ನಿರೀಕ್ಷಣೆಯನ್ನು ಮಾಡಿ ಸ್ಥಳೀಯವಾಗಿಯೇ ರಿಪೇರಿ ಮಾಡಿಕೊಳ್ಳಬೇಕಿತ್ತು” ಎನಿಸಿತು. ಆದರೆ ಮರುಘಳಿಗೆಯೆ ನನ್ನ ಬುದ್ದಿ ಹೃದಯದ ಮೇಲೆ ಹಿಡಿತ ಸಾಧಿಸಿತು. ನಮ್ಮ ಎಕ್ಸ್ಪರ್ಟ್ ತಂತ್ರಜ್ಞನಾದ ಖತ್ರಿಯನ್ನು SSD ರಿಪೇರಿ ಮಾಡಿದ್ದೇನೆಂದು ಹೇಳುತ್ತಿದ್ದ ಎಕ್ಸಟೆನ್ಶನ್ ಗಳನ್ನು ಪರೀಕ್ಷಿಸಲು ಕೇಳಿಕೊಂಡೆ. ಈ ಹೊತ್ತಿಗಾಗಲೇ “ನನ್ನ ಕೆಲಸ ಪೂರೈಸಿದೆ, ನಾನು ಹೋಟೆಲ್ ರೂಮ್ ಗೆ ತೆರಳಿ ರಾತ್ರಿ ನಿದ್ದೆ ಇಲ್ಲದ ಕಾರಣ ವಿಶ್ರಾಂತಿ ಪಡೆಯುತ್ತೇನೆ” ಎಂದು ಹೊರಡುವ ಸಿದ್ಧತೆ ನಡೆಸಿದ SSDಯನ್ನ ಸ್ವಲ್ಪ ಕಾಲ ಉಳಿಯುವಂತೆ ಬಿನ್ನವಿಸಿದೆ. ಖತ್ರಿ ಮತ್ತು ವಿಜಯ್ ತಂಡ ಎಕ್ಸಟೆನ್ಶನ್ ಗಳ ಪರೀಕ್ಷಣೆ ನಿಮಿತ್ತ ಮೊದಲನೇ ಮಹಡಿಗೆ ತೆರಳಿದರೆ, ಉಪಾಧ್ಯಾಯ ಮತ್ತು ತಿವಾರಿಯ ತಂಡ ಎರಡನೇ ಮಹಡಿಗೆ ತೆರಳಿತು. ಜಾಧವ್ ಮತ್ತು ಶಾ ಅವರ ತಂಡ ಮೂರನೇ ಮಹಡಿಯಲ್ಲಿದ್ದ ಕಮರ್ಷಿಯಲ್ ಮ್ಯಾನೇಜರ್ ಜೋಷಿಯವರ ಚೇಂಬರ್ ಗೆ ತೆರಳಿತು. ನನ್ನ ಒಟ್ಟಿಗೆ ಉಳಿದ ಒಬ್ಬನೇ ತಾಂತ್ರಿಕ ಸಹಾಯಕ ಅಮೃತ್ ಭಾಯ್ ಎಕ್ಸ್ಚೇಂಜ್ ರೂಂನಲ್ಲಿಯೇ ಇದ್ದ ಸಮಸ್ಯೆಗಳಿಂದ ಕೂಡಿದ್ದ ಲೈನ್ ಚೆಕ್ ಗಾಗಿ ತೆರಳಿದ. ನಾನು ಈ ರೀತಿಯಾಗಿ ತನ್ನ ರಿಪೇರಿಕಾರ್ಯವನ್ನು ಪರೀಕ್ಷಿಸಿ ದೃಢೀಕರಿಸಿಕೊಳ್ಳುವುದು ಸರ್ದಾರ್ಜಿಗೆ ಸ್ವಲ್ಪವೂ ಇಷ್ಟವಾದಂತೆ ಕಾಣಲಿಲ್ಲ. “ಶಿವಪ್ರಕಾಶ್, ನೀನು ನನಗೆ ಅವಮಾನ ಮಾಡುತ್ತಿದ್ದೀಯೆ, ನಾನು ಒಮ್ಮೆ ರಿಪೇರಿ ಮಾಡಿದೆನೆಂದರೆ ಮುಗಿದ ಹಾಗೆ. ನಾನು ಮಾಡಿದ ರಿಪೇರಿಕಾರ್ಯಗಳನ್ನು ಪೂನಾದ ಪರಭಾರಿಯಾದ ಚಿನ್ನದೊರೈ ಆಗಲೀ, ನಾಗಪುರದ ಪರಭಾರಿ ಸ್ವಾಮಿನಾಥನ್ ಆಗಲೀ, ಇಂದೋರ್ ಪರಭಾರಿ ರಾಮ್ ಸಾಹ್ನೆಯಾಗಲೀ, ಬರೋಡಾದ ಪರಭಾರಿ ಮುಖರ್ಜಿಯಾಗಲೀ, ರಾಜಕೋಟ್ ಪರಭಾರಿ ನಾನಾವತಿಯಾಗಲಿ, ಸೂರತ್ ಪರಭಾರಿ ಜಯೇಶ್ ಪಾಠಕ್ ಆಗಲೀ, ಜಬಲ್ಪುರ್ ಪರಭಾರಿ ಅತುಲ್ ಕಾರ್ಗುಟುಂಕರ್ ಆಗಲೀ, ಗೋವಾ ಪರಭಾರಿ ನಾಯರ್ ಆಗಲೀ ಮಾಡುವುದಿಲ್ಲ. ಆದರೆ ನೀನು ಹೊಸದಾಗಿ ಅಹಮದಾಬಾದ್ ಪರಭಾರಿಯಾಗಿದ್ದೀಯ, ನಿನಗೆ ನನ್ನ ಕೆಲಸದ ಬಗ್ಗೆ ವಿಶ್ವಾಸ ಇಲ್ಲ ಎಂದು ತೋರುತ್ತದೆ. ಸರಿ, ನಿಮ್ಮ ತಂಡಗಳು ಎಲ್ಲಾ ಪರೀಕ್ಷಣೆಗಳನ್ನೂ ಮುಗಿಸಿ ಬರಲಿ, ಅಲ್ಲಿಯವರೆಗೂ ಇಲ್ಲಿಯೇ ಕುಳಿತು ಕಾಯುತ್ತೇನೆ” ಎಂದು ಅಲ್ಲಿಯೇ ಇದ್ದ ಖುರ್ಚಿಯೊಂದರಲ್ಲಿ ಅಸೀನನಾದ. ಸರ್ದಾರ್ಜಿ ಕುಳಿತ ರಭಸಕ್ಕೆ ಮರದ ಹಳೆಯದಾದ ಆ ಖುರ್ಚಿ ಮಾಡಿದ ಸದ್ದಿಗೆ ರೂಂ ಹೊರಗೇ ಇದ್ದ ತ್ರಿವೇದಿ ಓಡಿ ಬಂದು “ಏನಾಯ್ತು?” ಎಂದು ನನ್ನನ್ನು ಪ್ರಶ್ನಿಸಿದ. ನಾನು “ಏನೂ ಇಲ್ಲ” ಎಂದು ಅವನನ್ನು ಸಾಗು ಹಾಕಿದೆ.

ಪರೀಕ್ಷಣೆಗೆಂದು ತೆರಳಿದ್ದ ತಂಡದ ಸದಸ್ಯರು ಒಬ್ಬೊಬ್ಬರಾಗಿ ಮರಳತೊಡಗಿದರು. ಅವರ ಕಪ್ಪಿಟ್ಟ ಮುಖಗಳೇ ಅವರು ಹೇಳುವ ವರದಿಯನ್ನು ನನ್ನ ಮುಂದೆ ತೆರದಿಟ್ಟವು. ಎಲ್ಲರಿಗಿಂತ ಮೊದಲು ಮರಳಿದ ಅಮೃತ್ ಭಾಯಿ ಡಯಲ್ ಟೋನ್ ಬರದ ಲೈನ್ ನ ಸಮಸ್ಯೆ ಹಾಗೆಯೇ ಇರುವುದಾಗಿ ಹೇಳಿದರೆ ಆನಂತರ ಬಂದ ಎಲ್ಲಾ ತಾಂತ್ರಿಕವರ್ಗದ ವರದಿಗಳೂ ಇದೇ ಮಾತನ್ನು ದೃಢಪಡಿಸಿದವು. ಯಾವ ಎಕ್ಸಟೆನ್ಶನ್ ಕೂಡ ಸರ್ದಾರ್ಜಿಯ ಕಣ್ಣಿನ ತೀಕ್ಷ್ಣದೃಷ್ಟಿಗೆ ಕಿಮ್ಮತ್ತು ನೀಡಿದ ಹಾಗೆ ತೋರಲಿಲ್ಲ. ಎಲ್ಲಾ ವರದಿಗಳನ್ನೂ ಖುದ್ದಾಗಿ ಕೇಳಿದ SSD ಕುದ್ದು ಹೋದ. “ಇದು ಹೇಗೆ ಸಾಧ್ಯ? ನಾನು ರಿಪೇರಿ ಮಾಡಿದ ನಂತರವೂ ಸಮಸ್ಯೆ ಹಾಗೆಯೇ ಉಳಿದಿದೆ ಎಂದರೆ ಏನರ್ಥ?” ಎಂದು ಬಡಬಡಾಯಿಸತೊಡಗಿದ. ನನ್ನ ಕಣ್ಸನ್ನೆಯನ್ನ ಗ್ರಹಿಸಿದ ಖತ್ರಿ ಸರ್ದಾರ್ಜಿಯನ್ನ ಸಮಸ್ಯೆಯಿದ್ದ ಎಕ್ಸ್ಚೇಂಜ್ ರೂಂ ನ ಎಕ್ಸಟೆನ್ಶನ್ ಬಳಿ ಕರೆದೊಯ್ದು ತಾನೇ ಸ್ವತಃ ಪರೀಕ್ಷಿಸಲು ಕೇಳಿದ. ಹಿಂಜರಿಕೆಯಿಂದಲೇ ಫೋನನ್ನು ಪರೀಕ್ಷಿಸಿದ SSD ತನ್ನ ಕಿವಿಗಳನ್ನೇ ನಂಬದಾದ. “ಇದು ಹೇಗೆ ಸಾಧ್ಯ? ನನ್ನ ರಿಪೇರಿಯ ನಂತರವೂ ಫೋನ್ ಸರಿ ಹೋಗಿಲ್ಲ ಎಂದರೆ ಏನರ್ಥ?” ಎನ್ನುತ್ತಾ ರಿಸೀವರ್ ನ್ನು ಜೋರಾಗಿ ಫೋನಿನ ಮೇಲೆ ಕುಕ್ಕಿದ. “ನಿಮ್ಮ ಆಫೀಸ್ ಈಗ ಒಂದು ವರ್ಷದ ಹಿಂದೆಯಷ್ಟೇ ಬಾಂಬೆ ಮುಖ್ಯಕಚೇರಿಯ ಅಧೀನಕ್ಕೆ ಬಂದಿದೆ, ಹಾಗಾಗಿ ನಿಮ್ಮಲ್ಲಿಯ ಉಪಕರಣಗಳಿಗೆ ನನ್ನ ಬಗ್ಗೆ ತಿಳಿದಿಲ್ಲ. ಹಾಗಾಗಿ ನನ್ನ ಪ್ರಭಾವಕ್ಕೆ ಇನ್ನೂ ಒಳಗಾಗಿಲ್ಲ. ಪರವಾಗಿಲ್ಲ, ಈ ಸಮಸ್ಯೆಗಳನ್ನು ನಾನು ಸಂಪೂರ್ಣ ನಿವಾರಿಸಿಯೆ ಇಲ್ಲಿಂದ ಹೊರಡುತ್ತೇನೆ” ಎಂದು ತನ್ನ ನೀಳಗಡ್ಡವನ್ನು ದೀರ್ಘಕಾಲ ನೇವರಿಸುತ್ತಾ ಋಷಿಪುಂಗವನಂತೆ ನುಡಿದ.

“ಶಿವಪ್ರಕಾಶ್, ನಿಮ್ಮಲ್ಲಿ ಯಾರು ಉತ್ತಮ ಟೆಕ್ನಿಷಿಯನ್?” ಎನ್ನುವ SSD ಪ್ರಶ್ನೆಗೆ ನಾನು ಖತ್ರಿಯನ್ನು ಮುಂದುಮಾಡಿದೆ. “ಸರಿ, ಖತ್ರೀಜಿ, ನಾನು ಹೇಳುವ ಹಾಗೆ ಮಾಡಿ, ಐದು ನಿಮಿಷದಲ್ಲಿ ಎಕ್ಸ್ಚೇಂಜ್ ಸರಿಹೋಗುತ್ತದೆ” ಎಂದವನು ಖತ್ರಿಯನ್ನ ಎಕ್ಸ್ಚೇಂಜ್ ಉಪಕರಣದ ತಳಭಾಗದ ಸಬ್ ರಾಕ್ ನಲ್ಲಿ ಇದ್ದ ಒಂದೆರಡು ತಂತಿಗಳನ್ನು ಕಿತ್ತು ಹಾಕಲು ಹೇಳಿದ. SSD ತೆಗೆಯಲು ಹೇಳಿದ್ದು ಅರ್ಥ್ ವೈರ್ ಗಳಾದ ಕಾರಣ ಖತ್ರಿ ನನ್ನ ಮುಖವನ್ನು ನೋಡತೊಡಗಿದ. ವಿಷಯವನ್ನು ಶೀಘ್ರವಾಗಿ ಗ್ರಹಿಸಿದ ನಾನು, “SSD ಅವರೇ, ನಿಮ್ಮ ಬಳಿ ಸರ್ಕ್ಯೂಟ್ ಡಯಾಗ್ರಂ ಏನಾದ್ರೂ ಇವೆಯೇ? ಅಥವಾ R&Dಯವರು ಕೊಟ್ಟಿರುವ ಟ್ರಬಲ್ ಶೂಟಿಂಗ್ ಗೈಡ್ ಲೈನ್ಸ್ ಗಳು ಏನಾದರೂ ಇವೆಯಾ?” ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆಯಿಂದ ನಖಶಿಖಾಂತ ಉರಿದು ಹೋದ SSD “ಏನು ನೀವು ಮಾತನಾಡುತ್ತಿರುವುದು? ಹೋದ ತಿಂಗಳು ನಾನು ಬರೋಡಾದ ಪ್ರತಾಪ್ ನಗರದ ರೈಲ್ವೆ ಎಕ್ಸ್ಚೇಂಜ್ ನ್ನು ರಿಪೇರಿ ಮಾಡಿದ ರೀತಿಯನ್ನು R&D ಗೆ ಅವರ ಕೋರಿಕೆಯ ಮೇರೆಗೆ ಕಳುಹಿಸಿರುತ್ತೀನೆ. ಈ ಹಿಂದೆಯೂ ನಾನು ಎಲ್ಲೆಲ್ಲಿ, ಏನೇನು ರಿಪೇರಿ ಮಾಡಿದ್ದೇನೆ, ಆ ವರದಿಗಳನ್ನು R&Dಯವರು ನಿಯಮಿತವಾಗಿ ಪಡೆದುಕೊಳ್ಳುತ್ತಲೇ ಇರುತ್ತಾರೆ. R&Dಯವರೇ ತಮ್ಮ ಸಂಶೋಧನೆಗಾಗಿ ನನ್ನ ರಿಪೇರಿ ಕೆಲಸಗಳನ್ನು ಅವಲಂಬಿಸಿರುವ ಹೊತ್ತು ನೀನೇನು ನನ್ನನ್ನು ವಿವರಗಳ ಬಗ್ಗೆ ಕೇಳುವುದು?” ಎಂದು ನನ್ನನ್ನು ಯದ್ವಾತದ್ವ ದಬಾಯಿಸತೊಡಗಿದ. ಹೀಗೆ SSD ಬಾಯಿಗೆ ಬಂದ ಹಾಗೆ ನನ್ನನ್ನು ಬೈಯುತ್ತಿದ್ದರೆ, ನನ್ನ ತಾಂತ್ರಿಕ ವರ್ಗದ ಸಂಜಯ್ ತಿವಾರಿಯ ಯು.ಪಿ. ರಕ್ತ ಕುದಿಯತೊಡಗಿತು. “ಸರ್ದಾರ್ಜಿ, ನಾವು ಯಾರೂ ನೀವು ಹೇಳಿದ ರಿಪೇರಿ ಕೆಲಸಗಳನ್ನು ಮಾಡುವುದಿಲ್ಲ. ವಿವರಗಳ ವಿನಾಃ ರಿಪೇರಿ ಕೆಲಸಕ್ಕೆ ಕೈ ಹಾಕುವುದಿಲ್ಲ. ನೀವೇನು ಮಾಡಬೇಕು ಎಂದಿದ್ದೀರೋ ಅದನ್ನು ಮೊದಲು ವಿವರಿಸಿರಿ, ನಂತರ ನಾವು ಅದನ್ನು ಕಾರ್ಯಗತಗೊಳಿಸುತ್ತೇಯೋ ಇಲ್ಲವೋ ನಿಮಗೆ ತಿಳಿಸುತ್ತೇವೆ” ಎಂದು ಬಿಟ್ಟ. “ಬತ್ತಮೀಜ್, ನಿನಗೆ ನಾಚಿಕೆ, ಮಾನ, ಮರ್ಯಾದೆ ಏನೂ ಇಲ್ವಾ? ಕಂಪನಿಯ ಚಿಕ್ಕ ತಾಂತ್ರಿಕ ಸಹಾಯಕನಾಗಿ ಸೀನಿಯರ್ ಎಂಜಿನಿಯರ್ ಎದುರು ವಾದಿಸುತ್ತಿದ್ದೀಯ? ನೋಡು ನಿನ್ನನ್ನು ಏನು ಮಾಡುತ್ತೇನೆ” ಎಂದು ತಿವಾರಿಯ ಕಡೆಗೆ ಮುಷ್ಟಿಗಳನ್ನು ಗಟ್ಟಿ ಮಾಡಿಕೊಂಡು ನುಗ್ಗತೊಡಗಿದ SSD. ಮುಂದೆ ಆಗಲಿರುವ ಅನಾಹುತಗಳನ್ನು ಊಹಿಸಿದ ನಾನು ಮತ್ತು ನಮ್ಮ ತಂಡ ಸರ್ದಾರ್ಜಿಯನ್ನ ಹಿಡಿದು ಸಂಜಯನ ಮೇಲೆ ಆತ ಎರಗದಂತೆ ನೋಡಿಕೊಂಡು ಮತ್ತೆ ಅವನನ್ನು ಖುರ್ಚಿಯಲ್ಲಿ ಪ್ರತಿಷ್ಠಾಪಿಸುವ ಹೊತ್ತಿಗೆ ಸಾಕು ಸಾಕಾಗಿ ಹೋಯಿತು.

ತಂಡದ ಯಾರೊಬ್ಬರೂ ತಾನು ಹೇಳಿದ ಹಾಗೆ ರಿಪೇರಿ ಕಾರ್ಯ ಮಾಡಲು ಮುಂದಾಗದೇ ಇದ್ದಾಗ ತೀವ್ರ ಮುಖಭಂಗಕ್ಕೆ ಒಳಗಾದಂತೆ ಕಂಡ ಸರ್ದಾರ್ಜಿಯ ಮುಖ ಮತ್ತಷ್ಟು ಕೆಂಪಗಾಯಿತು. “ಶಿವಪ್ರಕಾಶ್, ಅಮರನಾಥ್ ಅವರಿಗೆ ನಿನ್ನ ಬಗ್ಗೆ ದೂರು ನೀಡುತ್ತೇನೆ. ರಿಪೇರಿ ಕೆಲಸಕ್ಕಾಗಿ ಬಾಂಬೆಯಿಂದ ಕರೆಸಿಕೊಂಡು ಸಹಕಾರವನ್ನು ಕೊಡುತ್ತಿಲ್ಲ ಎಂದರೆ ಏನರ್ಥ?” ಎಂದು ನನ್ನ ಮೇಲೆ ಗುಟುರು ಹಾಕತೊಡಗಿದ. “ದಯವಿಟ್ಟು ರಿಪೇರಿ ಕೈಗೊಳ್ಳುವ ಮೊದಲು ಅಮರನಾಥ್ ಅವರ ಜೊತೆ ಮಾತನಾಡಿ” ಎನ್ನುವ ನನ್ನ ವಿನಂತಿಯನ್ನು ಪರಿಗಣಿಸಿ ಅಲ್ಲಿಯೇ ಎಕ್ಸ್ಚೇಂಜ್ ರೂಂನಲ್ಲಿದ್ದ STD ಟೆಲಿಫೋನ್ ನಿಂದ ಅಮರನಾಥ್ ಅವರಿಗೆ ಫೋನಾಯಿಸಿ ನನ್ನ ಮತ್ತು ತಂಡದ ಬಗ್ಗೆ ಸವಿವರವಾದ ದೂರನ್ನು ನೀಡಿದ. ಆತನ ಮಾತುಗಳನ್ನು ಕೇಳಿಸಿಕೊಂಡ ಅಮರನಾಥ್ ನನಗೆ ಫೋನು ನೀಡುವಂತೆ SSD ಗೆ ಹೇಳಲಾಗಿ, ಅಮರನಾಥ್ ಅವರ ಮಾತಿಗೆ ಇಷ್ಟವಿಲ್ಲದಿದ್ದರೂ ನಾನು ಕಿವಿಯಾಗಬೇಕಾಯಿತು. “ಏನು ಶಿವಪ್ರಕಾಶ್ ನಿಮ್ಮ ಸಮಸ್ಯೆ? ಯಾಕೆ SSD ಯನ್ನ ಎಕ್ಸ್ಚೇಂಜ್ ರಿಪೇರಿಗೆ ಬಿಡುತ್ತಿಲ್ಲ? ಹಾಗಿದ್ದರೆ ನೀವು ಅವರನ್ನು ಅಹಮದಾಬಾದ್ ಗೆ ಏಕೆ ಕರೆಸಿಕೊಂಡಿರಿ? ನಿಮ್ಮ ಅಧಿಕಪ್ರಸಂಗತನ ಜಾಸ್ತಿಯಾಗುತ್ತಿದೆ, ನಾನೂ ನೋಡುತ್ತಲೇ ಇದ್ದೇನೆ, ನೀವು ಎಲ್ಲದರಲ್ಲಿಯೂ ಮೂಗು ತೂರಿಸುವುದನ್ನು ನಿಲ್ಲಿಸಿ, ಪರಿಣಾಮ ಒಳ್ಳೆಯದಾಗುವುದಿಲ್ಲ” ಎನ್ನುವ ಖಡಕ್ ಎಚ್ಚರಿಕೆ ನೀಡಿದರು. ಸಮಜಾಯಿಷಿ ಕೊಡಲು ಹೊರಟ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ. ತಾವು ಹೇಳಬೇಕಾದ್ದನ್ನು ಹೇಳಿ ಫೋನ್ ಕಟ್ ಮಾಡಿದ ಅಮರನಾಥ್ ವರ್ತನೆ ನನಗೆ ಅರ್ಥವಾಗಲಿಲ್ಲ. ಸಂಭಾಷಣೆಯ ನಂತರ ನನ್ನ ಕಡೆ ಕುಹಕ ದೃಷ್ಟಿ ಬೀರಿ, ವಿಜಯದ ನಗೆಯನ್ನು ತನ್ನ ಗಡ್ಡಾವೃತ ಮುಖದಲ್ಲಿ ಕಷ್ಟಪಟ್ಟು ಮರೆಮಾಚುತ್ತಾ ಎಕ್ಸ್ಚೇಂಜ್ ಬಳಿಸಾರಿದ ಸರ್ದಾರ್ಜಿ ಕುಕ್ಕರಗಾಲಿನಲ್ಲಿ ಎಕ್ಸ್ಚೇಂಜ್ ಹಿಂಬದಿ ಕುಳಿತು ಹಿಂದೆ ಮುಂದೆ ನೋಡದೆ ತನಗೆ ತೋಚಿದ ಹತ್ತಾರು ವೈರ್ ಗಳನ್ನ ಆತುರಾತುರವಾಗಿ ಕಿತ್ತು ಹಾಕಿದ. ಅವನನ್ನು ಕಡೆಯ ಕ್ಷಣದಲ್ಲೂ ರಿಪೇರಿ ಮಾಡದಂತೆ ತಡೆಯಲು ನುಗ್ಗಿದ ವಿಜಯ್ ಮತ್ತು ಜಾಧವ್ ಅವರನ್ನು ದೂರ ತಳ್ಳಿ SSD ತನ್ನ ಈ ವಿಕ್ರಮ ಮೆರೆದಿದ್ದ. ತನ್ನ ಘನಕಾರ್ಯದ ನಂತರ ನನ್ನ ಬಳಿಗೆ ಬಂದು ಮೀಸೆ ಮೇಲೆ ಕೈಯಾಡಿಸುತ್ತಾ “ಶಿವಪ್ರಕಾಶ್, ಈಗ ನಿಮ್ಮ ತಂಡ ಅದೇನು ಪರೀಕ್ಷೆಗಳನ್ನು ಮಾಡುತ್ತದೆಯೋ ಮಾಡಲಿ” ಎನ್ನುತ್ತಾ ಮತ್ತೊಮ್ಮೆ ಮೊದಲಿನ ತೀವ್ರತೆಯಲ್ಲಿ ಮರದ ಖುರ್ಚಿಯಲ್ಲಿ ದೊಪ್ಪೆಂದು ಕುಳಿತ.

ಅಲ್ಲಿಯೇ ಎಕ್ಸ್ಚೇಂಜ್ ರೂಂನಲ್ಲಿ ಇದ್ದ ಫೋನ್ ಬಳಿ ತೆರಳಿದ ಖತ್ರಿ “ಸರ್, ಬೇಗ ಇಲ್ಲಿ ಬನ್ನಿ” ಎಂದು ನನ್ನನ್ನು ಕೂಗಲು ತಂಡದ ಎಲ್ಲರೂ ಅಲ್ಲಿಗೆ ಓಡಿದೆವು. ಅಲ್ಲಿನ ಫೋನ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಫೋನ್ ಇಟ್ಟ ತಕ್ಷಣ ರಿಂಗ್ ಆಗಲಿಕ್ಕೆ ಶುರುವಾದರೆ ನಿಲ್ಲುತ್ತಲೆ ಇರಲಿಲ್ಲ. “ಅಯ್ಯೋ ದೇವರೇ, ಇದೇನಾಯಿತು?” ಎಂದು ಕೂಗಿಕೊಳ್ಳುತ್ತಾ ಎಕ್ಸ್ಚೇಂಜ್ ಬಳಿ ಓಡಿಹೋಗಿ ಅಲ್ಲಿದ್ದ ಸರ್ದಾರ್ಜಿಯನ್ನ ಕರೆದುಕೊಂಡು ಬಂದು ಆತನ ರಿಪೇರಿಯಿಂದ ಉಂಟಾದ ಹೊಸ ಸಮಸ್ಯೆಯನ್ನು ವಿವರಿಸಿದೆ. “ಮೊದಲು ಈ ಫೋನ್ ನಲ್ಲಿ ಡಯಲ್ ಟೋನ್ ಇರಲಿಲ್ಲ, ಈಗ ನೋಡಿದರೆ ಸತತವಾಗಿ ರಿಂಗ್ ಬರುತ್ತಿದೆ” ಎನ್ನುವ ನನ್ನ ಮಾತಿಗೆ ಗಹಗಹಿಸಿ ನಕ್ಕ SSD, “ಶಿವಪ್ರಕಾಶ್, ನೀವು ಎಂತಹ ಎಂಜಿನಿಯರ್? ಕಾಲೇಜಿನಲ್ಲಿ ನೀವು ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯಾವಾಗಲೂ ಸಮಸ್ಯೆಗಳನ್ನು ಹಂತಹಂತವಾಗಿ ನಿವಾರಿಸಬೇಕು. ಈಗ ನೋಡಿ ಎಕ್ಸ್ಚೇಂಜ್ ನಲ್ಲಿ ಮೊದಲಿಗಿಂತ ಸುಧಾರಣೆ ಕಾಣುತ್ತಿದೆ. ಡಯಲ್ ಟೋನ್ ಇಲ್ಲದ ಕಡೆ ರಿಂಗ್ ಟೋನ್ ಬರುತ್ತಿದೆ ಅಲ್ಲವಾ? ನನಗೆ ಸ್ವಲ್ಪ ಸಮಯ ಕೊಡಿ, ನಿಮ್ಮ ಸಮಸ್ಯೆಗಳನ್ನು ಪೂರ್ತಿ ನಿವಾರಿಸುತ್ತೇನೆ” ಎಂದವನು ಮತ್ತೆ ಎಕ್ಸ್ಚೇಂಜ್ ಬಳಿ ಹೋಗಿ ಈ ಬಾರಿ ಮೇಲಿನಿಂದ ಮೊದಲು ಬರುವ ಸಬ್ ರಾಕ್ ನ ನಾಲ್ಕಾರು ವೈರ್ ಗಳನ್ನು ಮತ್ತೆ ಅದೇ ಮೊದಲಿನ ಆತುರ ಮತ್ತು ಬೇಜವಾಬ್ದಾರಿಯಿಂದ ಕಿತ್ತು ಹಾಕಿ “ನೀವು ಈಗ ಬೇಕಿದ್ದರೆ ಪರೀಕ್ಷೆ ಮಾಡಿಕೊಳ್ಳಿ, ಎಕ್ಸ್ಚೇಂಜ್ ನೂರಕ್ಕೆ ನೂರು ಭಾಗ ಸರಿಯಾಗಿದೆ” ಎಂದು ತಂಡದ ಸದಸ್ಯರಿಗೆ ಕೂಗಿ ಹೇಳಿದ.

ಇದೇ ಸಮಯಕ್ಕೆ ಎಕ್ಸ್ಚೇಂಜ್ ರೂಂ ಒಳಗೆ ಓಡಿಬಂದ ತ್ರಿವೇದಿ “ಮೀಟಿಂಗ್ ನಿಂದ ಮರಳಿದ ಪ್ರಜಾಪತಿ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ, ಅರ್ಜೆಂಟ್ ಆಗಿ ಬರಹೇಳಿದ್ದಾರೆ” ಎಂದು ಬಡಬಡಿಸಿದ. ಆತುರಾತುರವಾಗಿ ಉಪಾಧ್ಯಾಯನ ಒಟ್ಟಿಗೆ ಪ್ರಜಾಪತಿ ಚೇಂಬರ್ ಹೊಕ್ಕ ನನ್ನ ಮೇಲೆ ಪ್ರಜಾಪತಿ ಅಕ್ಷರಶಃ ಎರಗಿಬಿದ್ದರು. “ಏನ್ರೀ ಇದು? ಎಕ್ಸ್ಚೇಂಜ್ ರಿಪೇರಿ ಮಾಡುತ್ತೇವೆ ಎಂದು ಬಂದವರು ಎಕ್ಸ್ಚೇಂಜ್ ನ ಸತ್ಯನಾಶ ಮಾಡಿದ್ದೀರಲ್ಲಾ? ನೋಡಿ ನನ್ನ ಫೋನ್ ಹೇಗೆ ಹೊಡೆದುಕೊಳ್ಳುತ್ತಿದೆ” ಎಂದು ತಮ್ಮ ಮುಂದಿನ, ಒಂದೇ ಸಮನೆ ರಿಂಗಿಸಿತ್ತಿದ್ದ ಫೋನ್ ನ್ನು ನನ್ನೆಡೆಗೆ ತಳ್ಳಿದರು. ನನಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು. “ಸರ್, ಇದು ನಾವು ರಿಪೇರಿ ಮಾಡಿದ್ದಲ್ಲ, ಬಾಂಬೆಯಿಂದ ಬಂದ ಎಂಜಿನಿಯರ್ ರಿಪೇರಿ ಮಾಡಿದ್ದಾರೆ, ತಾಳಿ ಸರ್ ಅವರನ್ನೇ ಕರೆಯುತ್ತೇನೆ” ಎಂದು SSD ಕರೆತರಲು ಉಪಾಧ್ಯಾಯನನ್ನು ದೌಡಾಯಿಸಿದೆ. ತಾನು ಮಾಡಿದ ರಿಪೇರಿ ಕಾರ್ಯಕ್ಕೆ ಮೆಚ್ಚುಗೆಯ ಮಾತುಗಳನ್ನು ಆಡಲು ಪ್ರಜಾಪತಿ ಸಾಹೇಬರು ನನ್ನನ್ನು ತಮ್ಮ ಚೇಂಬರ್ ಗೆ ಆಹ್ವಾನಿಸಿರಬೇಕೆಂದು ಪರಿಭಾವಿಸಿ ರಾಜಗಾಂಭೀರ್ಯದೊಂದಿಗೆ ಚೇಂಬರ್ ಒಳಹೊಕ್ಕ ಸರ್ದಾರ್ಜಿ ಪುಂಖಾನುಪುಂಖವಾಗಿ ಹೊರಬರುತ್ತಿದ್ದ ಪ್ರಜಾಪತಿಯ ಕೆಂಡದುಂಡೆಗಳಂತಹ ಮಾತುಗಳ ಸಿಡಿಗುಂಡುಗಳಿಗೆ ಎದೆ ಒಡ್ಡಬೇಕಾಯಿತು. ಎಷ್ಟಾದರೂ ಸರ್ದಾರ್ಜಿ ಅಲ್ಲವೇ? ರಣರಂಗದಂತಹ ಸನ್ನಿವೇಶಕ್ಕೆ ಕಿಂಚಿತ್ತೂ ಹೆದರದ SSD, “ಪ್ರಜಾಪತಿಯವರೆ ಕೂಗಾಡಬೇಡಿ. ಈಗ ತಾನೇ ಎಕ್ಸ್ಚೇಂಜ್ ರಿಪೇರಿಯಾಗಿದೆ. ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಇಪ್ಪತ್ತನಾಲ್ಕು ಗಂಟೆಗಳಾದರೂ ಬೇಕಲ್ಲವೇ? ನೋಡಿ ಮಿಸ್ಟರ್, ಇದು ಮಾಡ್ರನ್ ಎಲೆಕ್ಟ್ರಾನಿಕ್ಸ್ ಎಕ್ಸ್ಚೇಂಜ್. ಇದು ಒಂದು ಮಾಸ್ಟರ್ ಕ್ಲಾಕ್ ಒಳಗೊಂಡಿರುತ್ತದೆ ಮತ್ತು ಆ ಕ್ಲಾಕ್ ಇಪ್ಪತ್ನಾಲ್ಕು ಗಂಟೆಗಳ ನಂತರವೇ ಸಿಸ್ಟಂನ್ನು ಮತ್ತೆ ಸರಿಯಾಗಿ ಕಾರ್ಯ ನಿರತವಾಗುವಂತೆ ಮಾಡುತ್ತದೆ…… ”

ಹೀಗೆಯೇ ಎರಾಬಿರ್ರಿಯಾಗಿ ಮಾತನಾಡುತ್ತಲೇ ಹೋಗುತ್ತಿದ್ದ SDD ಮಾತುಗಳಿಗೆ ಪ್ರಜಾಪತಿಯವರ ಆರು ಅಂಕಿಗಳ ಫೋನ್ ಗೆ ಬಂದ ಕರೆ ತಾತ್ಕಾಲಿಕ ವಿರಾಮ ನೀಡಿತು. ಫೋನ್ ಬಂದಿದ್ದು CGM ಮಂಗಳಾ ಅವರ ಆಫೀಸ್ ನಿಂದ. ಮಂಗಳಾ ಅವರ ಆಪ್ತಸಹಾಯಕಿ ಸಾಧನಾಭಟ್ ಪ್ರಜಾಪತಿಯವರನ್ನು ಮಂಗಳಾ ಅವರಿಗೆ ಸಂಪರ್ಕಿಸಿದ ನಂತರ CGM ಮಾತುಗಳನ್ನು ಎಸಿ ರೂಂನಲ್ಲಿ ಇದ್ದೂ ಬೆವರುತ್ತಿದ್ದ ಹಣೆಯನ್ನು ಒರಸಿಕೊಳ್ಳುತ್ತಲೇ ಕೇಳಿದ ಪ್ರಜಾಪತಿ ಬಾಯಿಂದ “ಆಯ್ತು ಸರ್, ಹಾಗೇ ಆಗಲಿ ಸರ್” ಹೊರತಾಗಿ ಬೇರೆ ಶಬ್ದಗಳು ಹೊರಡಲಿಲ್ಲ. ಮಾತು ಮುಗಿಸಿದ ಪ್ರಜಾಪತಿಯವರ ಕಣ್ಣುಗಳು ಕೆಂಡದ ಉಂಡೆಗಳಂತಾಗಿದ್ದವು. ನನ್ನನ್ನು ಉದ್ದೇಶಿಸಿ “ನೋಡಿ ಶಿವಪ್ರಕಾಶ್, ನಿಮ್ಮ ಎಕ್ಸ್ಚೇಂಜ್ ನ ಎಲ್ಲಾ ಎಕ್ಸಟೆನ್ಶನ್ ಗಳಲ್ಲೂ ಸತತವಾಗಿ ಗಂಟೆ ಬಾರಿಸುತ್ತಿದ್ದೆ. ದಯವಿಟ್ಟು ಮೊದಲು ಹೋಗಿ ನಿಮ್ಮ ಎಕ್ಸ್ಚೇಂಜ್ ಪವರ್ ಆಫ್ ಮಾಡಿ” ಎಂದು ಅಕ್ಷರಶಃ ಗದರಿದರು. ಈ ಕೆಲಸಕ್ಕಾಗಿ ಖತ್ರಿ ಹೊರನಡೆಯುತ್ತಿದ್ದಂತೆಯೇ, “ಎಕ್ಸ್ಚೇಂಜ್ ಎಕ್ಸಟೆನ್ಶನ್ ಇರುವ ಅಧಿಕಾರಿಗಳಲ್ಲಿ ಕೆಲವು ಜನ CGM ಆಫೀಸ್ ಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಇದರಿಂದ CGM ಬಹಳ ಕೋಪಗೊಂಡಿದ್ದಾರೆ ಮತ್ತು ಎಕ್ಸ್ಚೇಂಜ್ ನ್ನು ತ್ವರಿತವಾಗಿ ಸ್ವಸ್ಥಿತಿಗೆ ತರಲು ನಿಮಗೆ ತಿಳಿಸಲಿಕ್ಕೆ ಹೇಳಿದ್ದಾರೆ” ಎಂದರು. ನಂತರ ಪ್ರಜಾಪತಿಯವರು ಮುಂದುವರೆದು “ಎಕ್ಸ್ಚೇಂಜ್ ಮೊದಲ ತರಹ ಕಾರ್ಯ ನಿರ್ವಹಿಸುವವರೆಗೆ ಬಾಂಬೆಯಿಂದ ಬಂದಿರುವ ನಿಮ್ಮ ಎಂಜಿನಿಯರ್ ನ್ನು ಭದ್ರಾ ಎಕ್ಸ್ಚೇಂಜ್ ಕಟ್ಟಡದಿಂದ ಹೊರಗಡೆ ಬಿಡದಂತೆಯೂ ನನಗೆ ಆದೇಶಿಸಿದ್ದಾರೆ” ಎಂದೂ ಸೇರಿಸಿದರು. ಈ ಮಾತುಗಳನ್ನು ಕೇಳಿದ SSD ದೊಡ್ಡ ಸ್ವರದಲ್ಲಿ ರೇಗಾಡಲು ಶುರುವಿಟ್ಟುಕೊಂಡ. “ಹಾಗೆಂದರೆ ಹೇಗೆ? ನಾಳೆ ರಾತ್ರಿ ನಾನು ಬೇರೆ ಸ್ಥಳಕ್ಕೆ ಕೆಲಸದ ನಿಮಿತ್ತ ಹೋಗಬೇಕಾಗಿದೆ. ಯಾವುದೇ ಕಾರಣಕ್ಕೂ ಇಂದಿನ ಟ್ರೈನ್ ನಲ್ಲಿ ನಾನು ಬಾಂಬೆಗೆ ಹಿಂತಿರುಗಲೇಬೇಕು” ಎಂದು ಹಠದ ಧ್ವನಿಯಲ್ಲಿ ಹೇಳಿದ. ಈ ಮಾತುಗಳನ್ನು ಆಲಿಸಿದ ಪ್ರಜಾಪತಿ ಅವರ ಮುಖ ಮತ್ತಷ್ಟು ಗಡುಸಾಯಿತು. “ನೋಡಿ ಮಿಸ್ಟರ್, ನೀವು ಎಲ್ಲಿಗೆ ಹೋಗುತ್ತೀರೋ, ಬಿಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ಆದರೆ ನನಗೆ CGM ಆದೇಶವಾಗಿದೆ. ನಮ್ಮ ಎಕ್ಸ್ಚೇಂಜ್ ಸರಿ ಹೋಗುವವರೆಗೂ ನಾನು ನಿಮ್ಮನ್ನು ಇಲ್ಲಿಂದ ಹೋಗುವುದಕ್ಕೆ ಬಿಡಲಾರೆ” ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಬಿಟ್ಟರು. ಕಾವೇರಿದ ವಾತಾವರಣವೊಂದು ಉದ್ಭವವಾದ ಈ ಸಮಯದಲ್ಲಿ ನಾನು ಪ್ರಜಾಪತಿ ಸಾಹೇಬರನ್ನು ಸಂತೈಸುವ ಕೆಲಸ ಮಾಡತೊಡಗಿದೆ. “ನೋಡಿ ಶಿವಪ್ರಕಾಶ್ ಅವರೇ, ನಿಮ್ಮ ಬಗ್ಗೆ ನನಗೆ ಗೌರವ ಇದೆ. ಅನಾವಶ್ಯಕವಾಗಿ ನೀವು ಈ ವಿಷಯದಲ್ಲಿ ಮೂಗು ತೂರಿಸಬೇಡಿ” ಎಂದು ಖಡಾಖಂಡಿತವಾಗಿ ನುಡಿದರು.ಈ ವೇಳೆಗೆ ಸ್ವಲ್ಪ ಮೆತ್ತಗಾದಂತೆ ಕಂಡುಬಂದ ಸರ್ದಾರ್ಜಿ “ಪ್ರಜಾಪತಿಯವರೆ, ನಿಮಗೆ ಎಕ್ಸ್ಚೇಂಜ್ ಸರಿಯಾಗಬೇಕಲ್ಲವೆ? ಹತ್ತು ನಿಮಿಷಗಳ ಸಮಯ ಕೊಡಿ, ನಾನು ರಿಪೇರಿ ಮಾಡಿಕೊಡುತ್ತೇನೆ” ಎಂದು ತನ್ನ ಸೀಟಿನಿಂದ ಎದ್ದು ಹೊರಡಲು ಅನುವಾದ. ಕೂಡಲೇ ತ್ರಿವೇದಿಗೆ ತಮ್ಮ ಚೇಂಬರ್ ನ ಬಾಗಿಲನ್ನು ಹಾಕಲು ಆಜ್ಞಾಪಿಸಿದ ಪ್ರಜಾಪತಿ, ಸರ್ದಾರ್ಜಿಯವರೇ, “ನೀವು ಬೆಳಗಿನಿಂದ ಇಲ್ಲಿಯವರೆಗೆ ಮಾಡಿರುವ ರಿಪೇರಿಯೇ ಸಾಕಷ್ಟಾಯಿತು. ಇನ್ನು ಎಕ್ಸ್ಚೇಂಜ್ ನ ಉಸಾಬರಿಗೆ ನೀವು ಹೋಗುವುದು ಬೇಡ” ಎಂದರು. “ಅದು ಹೇಗೆ ಸಾಧ್ಯ ಪ್ರಜಾಪತಿ? ಇದು ನಮ್ಮ ಎಕ್ಸ್ಚೇಂಜ್, ನಾನು ಸಂಸ್ಥೆಯ ಅಧಿಕೃತ ಸೀನಿಯರ್ ಎಂಜಿನಿಯರ್, ನನ್ನನ್ನು ನೀವು ರಿಪೇರಿ ಮಾಡುವುದರಿಂದ ಹೇಗೆ ತಡೆಯಬಲ್ಲಿರಿ?” ಎನ್ನುತ್ತಾ ಮುಚ್ಚಿದ ಬಾಗಿಲಿನತ್ತ ದಾಪುಗಾಲು ಹಾಕತೊಡಗಿದ SSD ಯನ್ನು ಕಂಡು ಸಾಹೇಬರ ಕೋಪ ಉಕ್ಕಿಬಂತು. “ಶಿವಪ್ರಕಾಶ್, ಸರ್ದಾರ್ಜಿಯನ್ನು ತಡೆಯಿರಿ, ಅವನೇನಾದರೂ ಮತ್ತೊಮ್ಮೆ ಎಕ್ಸ್ಚೇಂಜ್ ಮುಟ್ಟಿದರೆ ಅನಾಹುತವಾಗಿ ಹೋದೀತು. ನಾನು ಈಗಲೇ ಪೊಲೀಸರನ್ನು ಕರೆಸಿ ಈ ವ್ಯಕ್ತಿಯನ್ನು ಬಂಧಿಸುತ್ತೇನೆ” ಎಂದು ಪ್ರಜಾಪತಿ ಕೂಗಾಡತೊಡಗಿದರು. “ನಾನು ಭಾರತ ಸರ್ಕಾರದ ಅಧಿಕಾರಿ, ನನ್ನನ್ನು ರಾಷ್ಟ್ರಪತಿಯವರ ಆದೇಶ ಇಲ್ಲದೆ ಯಾರೂ ಬಂಧಿಸುವ ಹಾಗಿಲ್ಲ” ಎಂದು ಏರಿದ ಧ್ವನಿಯಲ್ಲಿ ಸರ್ದಾರ್ಜಿ ಉತ್ತರಿಸಿದ. ಇದರಿಂದ ಕೋಪ ಮತ್ತಷ್ಟು ನೆತ್ತಿಗೆ ಏರಿದಂತೆ ಕಂಡ ಪ್ರಜಾಪತಿಯವರು ಶಹೀನ್ ಬಾಗ್ ನ ಪೊಲೀಸ್ ಕಮೀಷನರ್ ಆಫೀಸ್ ಗೆ ಫೋನನ್ನು ತಿರುಗಿಸತೊಡಗಿದರು. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ನಾನು ಪ್ರಜಾಪ್ರತಿ ಸಾಹೇಬರನ್ನು ವಿಧವಿಧದಲ್ಲಿ ಬೇಡಿ ಅವರನ್ನು ಪೊಲೀಸರಿಗೆ ಫೋನ್ ಮಾಡದಂತೆ ತಡೆಯುವಲ್ಲಿ ಯಶಸ್ವಿಯಾದೆ. “ಸರ್, ನೀವು ನಮ್ಮ ಬಾಂಬೆ ಮುಖ್ಯಾಧಿಕಾರಿ ಅಮರನಾಥ್ ಅವರೊಂದಿಗೆ ಮಾತನಾಡಿ, ಅವರು ಈ ಸಮಸ್ಯೆಗೆ ಪರಿಹಾರವನ್ನ ಖಂಡಿತ ದೊರಕಿಸಿ ಕೊಡುತ್ತಾರೆ” ಎಂದವನು ಅವರ ಸಮ್ಮತಿಗೂ ಕಾಯದೆ ಅಮರನಾಥ್ ಅವರಿಗೆ ಫೋನಾಯಿಸಿದೆ. ಅಮರನಾಥ್ ಅವರಿಗೆ ಎಲ್ಲಾ ವಿವರಗಳನ್ನೂ ಕನ್ನಡದಲ್ಲಿಯೆ ಹೇಳಿ ದಯವಿಟ್ಟು ಪ್ರಜಾಪತಿಯವರನ್ನು ಹೇಗಾದರೂ ಮಾಡಿ ಸಮಾಧಾನಗೊಳಿಸಿ, ಇಲ್ಲವಾದರೆ SSD ಜೈಲು ಸೇರುವುದು ಗ್ಯಾರಂಟಿ ಎಂದು ಕೇಳಿಕೊಂಡೆ. ಪ್ರಜಾಪತಿಯವರೊಂದಿಗೆ ನಡೆದ ಸುಮಾರು ಅರ್ಧಗಂಟೆಯ ಮಾತುಕತೆಗಳ ನಂತರ ಸ್ವಲ್ಪ ಸಮಾಧಾನಗೊಂಡವರಂತೆ ತೋರಿದ ಪ್ರಜಾಪ್ರತಿ, “ಶಿವಪ್ರಕಾಶ್, ಇಂದು ಸಂಜೆ ಬಾಂಬೆಯಿಂದ ನಿಮ್ಮ ಇನ್ನೊಬ್ಬ ಎಂಜಿನಿಯರ್ ಸುಬ್ಬಾರೆಡ್ಡಿ ಎನ್ನುವವರು ಹೊರಟು ನಾಳೆ ಬೆಳಿಗ್ಗೆ ಅಹಮದಾಬಾದ್ ಸೇರುತ್ತಾರಂತೆ. ಸುಬ್ಬಾರೆಡ್ಡಿ ಅವರು ಎಕ್ಸ್ಚೇಂಜ್ ರಿಪೇರಿ ಮಾಡಿದ ನಂತರವೇ SSDಯನ್ನ ಎಕ್ಸ್ಚೇಂಜ್ ಕಟ್ಟಡದಿಂದ ಹೊರಗಡೆ ಕಳುಹಿಸುವುದಕ್ಕೆ ಅಮರನಾಥ್ ಅವರ ಅಭ್ಯಂತರ ಏನೂ ಇಲ್ಲವಂತೆ” ಎಂದರು. ಮರುಕ್ಷಣವೇ PRO ಆಫೀಸ್ ಗೆ ಫೋನಾಯಿಸಿದವರು ಮೂರನೇ ಮಹಡಿಯಲ್ಲಿ ಇದ್ದ ಒಂದು ಗೆಸ್ಟ್ ರೂಂ ನ್ನು ರಾತ್ರಿ SSD ಯ ತಂಗುವಿಕೆಗೆ ತಯಾರು ಮಾಡುವ ಕೋರಿಕೆಯನ್ನು ಇಟ್ಟರು. “ಶಿವಪ್ರಕಾಶ್ ಇನ್ನು ನೀವುಗಳು ಇಲ್ಲಿಂದ ಹೊರಡಿ, ಸರ್ದಾರ್ಜಿ ಇಂದು ರಾತ್ರಿ ನಮ್ಮ ಅತಿಥಿಯಾಗಿರುತ್ತಾರೆ. ನಾಳೆ ಬೆಳಿಗ್ಗೆ ಆದಷ್ಟು ಬೇಗ ರೆಡ್ಡಿಯವರೊಂದಿಗೆ ಬಂದು ಎಕ್ಸ್ಚೇಂಜ್ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ SSDಯನ್ನ ಬಿಡಿಸಿಕೊಂಡು ಹೋಗಿ” ಎಂದರು. ಈ ಎಲ್ಲಾ ಮಾತುಕತೆಗಳನ್ನೂ ಮೌನವಾಗಿಯೇ ಆಲಿಸುತ್ತಿದ್ದ SSD ಮಾನಸಿಕವಾಗಿ ಒಂದು ರಾತ್ರಿಯ ಮಟ್ಟಿಗೆ ಭದ್ರಾ ಎಕ್ಸ್ಚೇಂಜ್ ಕಟ್ಟಡದಲ್ಲಿ ಉಳಿಯಲಿಕ್ಕೆ ಸಿದ್ದವಾದಂತೆ ಕಂಡು ಬಂದ. “ದಯವಿಟ್ಟು SSDಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಿ” ಎನ್ನುವ ಸವಿನಯ ಪ್ರಾರ್ಥನೆಯೊಂದಿಗೆ ನಾನು ನನ್ನ ತಂಡದ ಜೊತೆಗೆ ಕಟ್ಟಡದಿಂದ ಹೊರಬಂದೆ.

ಮಾರನೇ ದಿನ ಬೆಳಿಗ್ಗೆ ರೆಡ್ಡಿಯವರನ್ನು ರೈಲ್ವೇ ಸ್ಟೇಷನ್ ನಲ್ಲಿ ಬರಗೊಂಡು ನೇರವಾಗಿ ಭದ್ರಾಕಟ್ಟಡಕ್ಕೆ ಕರೆದುಕೊಂಡು ಹೋಗಿ, ನಮ್ಮ ಎಲ್ಲಾ ತಂಡದ ಸದಸ್ಯರನ್ನೂ ರೆಡ್ಡಿಯವರ ಜೊತೆ ದುರಸ್ತಿ ಕಾರ್ಯದಲ್ಲಿ ತೊಡಗಿಸಿ, ಸಾಯಂಕಾಲ ನಾಲ್ಕರ ಹೊತ್ತಿಗೆ ಎಕ್ಸ್ಚೇಂಜ್ ನ್ನು ಸ್ವಸ್ಥಿತಿಗೆ ತರುವ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದೆವು. ಕೆಲಸ ಮುಗಿದ ತಕ್ಷಣ ಪ್ರಜಾಪತಿಯವರ ಕೊಠಡಿಗೆ ತೆರಳಿ ಸರ್ದಾರ್ಜಿಯನ್ನ ಬಿಡುಗಡೆ ಮಾಡುವಂತೆ ಕೇಳಿಕೊಂಡೆ. ತಕ್ಷಣವೇ CGM ಆಫೀಸ್ ಸೇರಿದಂತೆ ನಾಲ್ಕಾರು ಕಡೆಗೆ ಫೋನ್ ಮಾಡಿ, ಎಕ್ಸ್ಚೇಂಜ್ ಸ್ವಾಸ್ಥ್ಯದ ಬಗ್ಗೆ ಖಾತ್ರಿಪಡಿಸಿಕೊಂಡ ಪ್ರಜಾಪತಿಯವರು, ತಮ್ಮ ಸಹಾಯಕರಿಗೆ ಹೇಳಿ SSDಯನ್ನ ಕರೆತರಲು ಹೇಳಿದರು. ಮೂರನೇ ಮಹಡಿಯ ಗೆಸ್ಟ್ ರೂಂ ಬೇರೆಯವರಿಗೆ ಮೀಸಲಾದ ಕಾರಣ, ಎಕ್ಸ್ಚೇಂಜ್ ರೂಂಗೆ ತಾಗಿಕೊಂಡಂತೆ ಇದ್ದ ಒಂದು ಸಣ್ಣರೂಮಿನಲ್ಲಿ SSD ಯನ್ನ ಅನಿವಾರ್ಯವಾಗಿ ರಾತ್ರಿ ಉಳಿಸಿದ್ದಾಗಿ ಮತ್ತು ಅದರ ಬಗ್ಗೆ ನಾನು ಕ್ಷಮೆ ಬೇಡುತ್ತೇನೆ ಎನ್ನುವ ಕಳಕಳಿಯ ಮಾತುಗಳನ್ನು ಪ್ರಜಾಪತಿಯವರು ನುಡಿದರು. ಆ ಹೊತ್ತಿಗೆ ಸರಿಯಾಗಿ ರೂಂನಿಂದ ಹೊರಬಂದ ಸರ್ದಾರ್ಜಿ, ರೆಡ್ಡಿಯವರನ್ನು ಕಂಡು “ಏನು ನೀವಿಲ್ಲಿ? ಬಹಳ ಸಣ್ಣ ದುರಸ್ತಿ ಕಾರ್ಯ ಇದು. ನನಗೆ ಪ್ರಜಾಪ್ರತಿ ಅನುವು ಮಾಡಿಕೊಡದ ಕಾರಣ ನೀವು ಬರಬೇಕಾಯಿತೇನೋ” ಎಂದು ಶಂಕೆಯನ್ನು ವ್ಯಕ್ತಪಡಿಸಿದ. ಎಕ್ಸ್ಚೇಂಜ್ ಗೆ ಹೋಗಿ ನಾವು ಮಾಡಿರುವ ದುರಸ್ತಿ ಸರಿಯಾಗಿ ಇದೆಯೇ ಇಲ್ಲವೇ ಎಂದು ಖಾತ್ರಿ ಪಡಿಸಿಕೊಳ್ಳವ ತನ್ನ ಇಂಗಿತವನ್ನೂ ಹೊರಹಾಕಿದ. ನಾನು ಇದಕ್ಕೆ ಅವಕಾಶವನ್ನು ಕೊಡಲಿಲ್ಲ. “ಸರ್ದಾರ್ಜಿ ನೀನು ಎಕ್ಸ್ಚೇಂಜ್ ರೂಂಗೆ ಯಾವುದೇ ಕಾರಣಕ್ಕೂ ಕಾಲಿಡುವ ಹಾಗಿಲ್ಲ. ನೀನು ಕಾಲಿಟ್ಟಿದ್ದೇ ಆದಲ್ಲಿ ಬಾಂಬೆ ನಗರವನ್ನು ಮತ್ತೆ ನೋಡಲಾರೆ” ಎಂದು ಕಠಿಣವಾದ ಧ್ವನಿಯಲ್ಲಿ ನುಡಿದೆನು. SSDಗೆ ಎನೆನಿಸಿತೋ ಏನೋ, “ಸರಿ ಹಾಗಿದ್ದರೆ ನಾನು ಇಂದು ರಾತ್ರಿ ಬಸ್ ನಲ್ಲಿ ಬಾಂಬೆಗೆ ಮರಳುತ್ತೇನೆ” ಎನ್ನುವ ಮಾತುಗಳ ಒಟ್ಟಿಗೆ ಕಟ್ಟಡದಿಂದ ಹೊರ ನಡೆದ. ಈ ಸಮಯದಲ್ಲಿ ನಾನು ಮತ್ತು ನನ್ನ ತಂಡದವರಿಂದ ಬಂದ ದೊಡ್ಡ ನಿಟ್ಟುಸಿರು ಈಗಾಗಲೇ ನಮ್ಮಿಂದ ಕೆಲಮಾರುಗಳ ದೂರ ನಡೆದಿದ್ದ ಸರ್ದಾರ್ಜಿಯನ್ನು ಒಮ್ಮೆ ಪ್ರಶ್ನಾರ್ಥಕವಾಗಿ ನಮ್ಮೆಡೆಗೆ ನೋಡುವಂತೆ ಮಾಡುವಷ್ಟು ಸಶಕ್ತವಾಗಿತ್ತು.

  1. ಇದೇ ಸರ್ದಾರ್ಜಿ, ಸುಮಾರು ಹದಿನೆಂಟು ವರ್ಷಗಳ ಕಾಲ ಕಂಪನಿಯಲ್ಲಿ ‘ದುಡಿದರೂ’ ಒಂದೇ ಒಂದು ಬಡ್ತಿಯೂ ಇಲ್ಲದೇ ಬಾಂಬೆಯಿಂದ ಬೆಂಗಳೂರಿನ ನನ್ನ ಆಫೀಸ್ ಗೆ ನನ್ನ ಕೈಕೆಳಗಿನ ಅಧಿಕಾರಿಯಾಗಿ ಮುಂದಿನ ಹತ್ತು ವರ್ಷಗಳ ನಂತರ ಬರುತ್ತಾನೆ. SSD ಆಗಮನ ಮತ್ತೊಮ್ಮೆ ನನ್ನ ಆಫೀಸ್ ನಲ್ಲಿ ದೊಡ್ಡದಾದ ಒಂದು ಬಿರುಗಾಳಿಯನ್ನೇ ಎಬ್ಬಿಸುತ್ತದೆ. ಮುಂದೆ ಸಮಯವಾದಾಗ ಅದರ ಬಗ್ಗೆ ಬರೆಯುತ್ತೇನೆ.
Girl in a jacket
error: Content is protected !!