ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.!

Share

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.!

ನಿನಗೇನು ಹುಚ್ಚಾ!?
ಆಸೆಗೂ ಒಂದು ಮಿತಿ ಇರಬೇಕು
ಏ…ಹುಡುಗಿ ಈ ಸ್ಥಿತಿಯಲ್ಲಿ ಅದು ಸಾಧ್ಯವಾ!? ಕನಸಿಗೆ ಒಂದು ಮಿತಿ ಇದೆ.
ಅತಿಯ ಪರಮಾವಧಿ ಇದು.
ಸುಮ್ನೆ ಇರು.ಅಂದವರೆದಷ್ಟೋ!?
ಮಾತು ಕೇಳಿ ನಕ್ಕವರೆಷ್ಟೋ!?
ಪಾಪ ಏನೋ ಆಗಿದೆ ಎಂದು ಮರುಗಿದವರೆಷ್ಟೋ!?
ಆದರೆ ತನ್ನದೇ ಛಲ ಮತ್ತು ಎಡೆ ಬಿಡದ ಪರಿಶ್ರಮದಿಂದ 2011 ರ ಬೆಳಿಗ್ಗೆ 10-55 ಕ್ಕೆ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊಟ್ಟ ಮೊದಲ ಅಂಗ ಚ್ಛೇದಿತ ಮಹಿಳೆ ಎಂಬ ಗೌರವಕ್ಕೆ ಪಾತ್ರಳಾದಳು.

ನಿಜ! ಆಕೆಯ ಒಂದು ಕಾಲು ಕೃತಕವಾದದ್ದು ಇನ್ನೊಂದು ಕಾಲಿನ ಒಳಗೆ ರಾಡ್ ಹಾಕಲಾಗಿತ್ತು. ಅವಳಿಗೆ ಟ್ರಿಟ್ ಮೆಂಟ್ ನೀಡಿದ ಡಾಕ್ಟರ್‍ಗಳೇ ಆಕೆಗೆ ನೀನು ಸಹಜ ಸ್ಥಿತಿಗೆ ಮುಟ್ಟಲು ಕನಿಷ್ಟ ನಾಲ್ಕರಿಂದ ಐದು ವರ್ಷಗಳಾದರೂ ಬೇಕು ಎಂದು ಹೇಳಿದ ಮೇಲೂ ಜಗ್ಗದೇ ಡಿಸ್ಚಾರ್ಜ ಆದೊಡನೆ ಭಾರತದ ಮೊದಲ ಮಹಿಳಾ ಶಿಖಾರಾಗ್ರಹಿಣಿ ಬಂಚೇಂದ್ರಿ ಪಾಲ್ ಅವರನ್ನ ಕಂಡಳು.

” ಮೇಡಂ ನಾನು ಮೌಂಟ್ ಎವರೆಸ್ಟ ಏರಬೇಕು”
ಎಂದಾಗ ಆ ಗುರು ಸಮಾಜದವರಂತೆ ಆಗದ ಕೆಲಸ ಎಂದು ತಲೆ ಕೊಡವಲಿಲ್ಲ.ನಿನ್ನಿಂದ ಸಾಧ್ಯವಿಲ್ಲ ಎಂದು ಎಂದು ಹೇಳಲಿಲ್ಲ.ಒಂದೇ ಮಾತು ಹೇಳಿದಳಾಕೆ ” ಅರುಣಿಮಾ ನೀನಾಗಲೇ ನಿನ್ನ ಈ ನಿರ್ಧಾರದಿಂದ ಆ ಶಿಖರ ಏರಿರುವೆ! ಒಳ ಮನಸಿನ ಆ ನಿರ್ಧಾರವನ್ನ ಇನ್ನ ಸಾಕಾರ ಗೊಳಿಸುವುದೊಂದೇ ಬಾಕಿ ಎಂದು ಬಿಟ್ಟರು!! ”
ಅರುಣಿಮಾ ಕನಸನ್ನ ತಾನೂ ಅಪ್ಪಿಕೊಂಡು ಆಕೆಗೆ ಟ್ರೈನಿಂಗ್ ಕೊಡಲು ಶುರು ಮಾಡಿದರು.
ಎಂಟು ತಿಂಗಳ ಆ ಸಾಹಸವೇ ರೋಚಕವಾದದ್ದು.ಜೊತೆಯವರು ಪ್ರಕ್ಟೀಸ್ ನಲ್ಲಿ ಒಂದು ಪರ್ವತವನ್ನ ಹತ್ತು ನಿಮಿಷಗಳಲ್ಲಿ ಏರಿದರೆ ಈಕೆಗೆ ಅದು ಮೂರು ಗಂಟೆ ತೆಗೆದು ಕೊಳ್ಳುತಿತ್ತು.ಅವರೆಲ್ಲಾ ಮುಂದೆ ಹೋದರೆಂದು ಜೋರಾಗಿ ಹಜ್ಜೆ ಇಟ್ಟರೆ ಕೃತಕ ಕಾಲಿನಿಂದ ರಕ್ತ ವಸರಿ ಬಿಡುತಿತ್ತು!.ನೋವನ್ನ ಸಹಜವಾಗಿಯೇ ಭರಿಸಲು ಕಲಿತ ಈ ಸಾಧಕಿ ಪ್ರತಿ ನೋವಿಂದಲೂ ಗೆಲುವುದನ್ನೇ ನಿರ್ಧರಿಸಿದಳು.

ಕೀಳಿರಿಮೆಯ ಮಾತುಗಳಿಗೆ ಹೆದರಿ ನಾವೆಂದಿಗೂ ಎಂದಿಗೂ ನಮ್ಮ ಗುರಿಯನ್ನ ಗಿವಪ್ ಮಾಡಬಾರದು.
ಜೀವದ ಕೊನೆ ಕೊನೆಯ ಕ್ಷಣವನ್ನೂ ಬಿಡದೇ ಗೆಲ್ಲಲು ಪ್ರಯತ್ನಿಸಲೇ ಬೇಕು.
ಕಾಲೆಳೆವವರನ್ನ …
ನಕ್ಕವರನ್ನ ..
ನಿನ್ನಿಂದ ಆಗದು ಎಂದು ಅಸಡ್ಡೆ ತೋರಿದವರನ್ನ ..
ನಮ್ಮ ಗೆಲುವಿನಿಂದಲೇ ಎದರು ಗೊಳ್ಳಬೇಕು!!! ಎಂದು ಗೆದ್ದು ತೋರಿಸಿಕೊಟ್ಟವಳು ಅರುಣಿಮಾ.

ಹೌದು ಭೀಕರ ರೈಲು ದುರಂತಕ್ಕೂ ಮೊದಲು ಅರುಣಿಮಾ ಏಳು ಬಾರಿ ಅಂತರ್ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ.ತಪ್ಪಾದ ತನ್ನ ಡೇಟ್ ಆಫ್ ಬರ್ತ ಸರ್ಟಿಫಿಕೇಟ್ ಸರಿ ಪಡಿಸಲೆಂದು ಅಂದು ಲಕ್ನೋದಿಂದ ದೆಹಲಿಗೆ ಆಗಮಿಸುತಿದ್ದಾಗ ಪದ್ಮಾವತಿ ಎಕ್ಸ ಪ್ರೆಸ್ ರೈಲಿನ ದಾರಿ ಮಧ್ಯದಲ್ಲಿ ನುಸುಳಿದ ದರೋಡೆ ಕೋರರು ಈಕೆಯ ಕೊರಳೊಳಗಿದ್ದ ಚಿನ್ನದ ಸರಕ್ಕೆ ಕೈ ಹಾಕಿದರು. ಜನರ ನೂಕು ನುಗ್ಗಲಿನಲ್ಲಿ ಅಮ್ಮನ ಪ್ರೀತಿಯ ಆ ಸರವನ್ನ ಆಕೆ ಕೊಡಲೊಪ್ಪದೇ ಹಿಂದೆ ಸರಿದಾಗ ತಳ್ಳಾಟದಲ್ಲಿ ಆಕೆ ರೈಲಿನಿಂದ ಕೆಳಗೆ ನೂಕಲ್ಪಟ್ಟಳು!

ಕೆಳಗೆ ಬಿದ್ದ ರಭಸಕ್ಕೆ ಒಂದು ಕಾಲಿನ ಒಳಗೆ ಮೂಳೆ ಮುರಿದಿತ್ತು.ಎಲ್ಲಿದ್ದೇನೆ ಎಂದು ಭಾವಿಸುವುದರೊಳಗೇ ಮತ್ತೊಂದು ಟ್ರಾಕ್ ನಿಂದ ಬಂದ ರೈಲು ಹಳಿಯ ಮೇಲಿದ್ದ ಆಕೆಯ ಮತ್ತೊಂದು ಕಾಲನ್ನೇ ತುಂಡರಿಸಿ ಬಿಟ್ಟಿತು. ಪ್ರಯಾಣಿಕರ್ಯಾರೂ ರೈಲಿನ ಚೈನ್ ಎಳೆದು ನಿಲ್ಲಿಸಲಿಲ್ಲ.ಎಷ್ಟು ಅರಚಿಕೊಂಡರೂ ಕಣ್ಣೀರಿಟ್ಟರೂ ಆಕೆಯ ಆರ್ತನಾದವನ್ನ ಯಾರೂ ಕೇಳಿಸಿಕೊಳ್ಳಲಿಲ್ಲ.ಕಡು ಕತ್ತಲೊಳಗೆ ರಕ್ತ ಹರಿಯುತಿತ್ತು! ಕಣ್ಣು ಮಂಜಾಗುತಿತ್ತು. ಹಳಿಗಳ ನಡುವೆ ಸುಳಿದ ಇಲಿಗಳು ತುಂಡಾದ ಕಾಲನ್ನ ತಿನ್ನುತಿದ್ದರೂ ಅಲ್ಲಾಡಲಾಗದಷ್ಟು ನಿಸ್ತೇಜವಾಗಿ ಬಿದ್ದಿದ್ದಳಾಕೆ.

ಮರುದಿನ ಬೆಳಿಗ್ಗೆ ಬಹಿರ್ದೆಸೆಗೆಂದು ಬಂದ ರೈತರು ಆಕೆಯನ್ನ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಹಠಮಾರಿ ಗಟ್ಟಿ ಜೀವ ಇನ್ನೂ ಉಳಿದಿತ್ತು. ಕೋಮಾ ಸ್ಟೇಜ್ ತಲುಪಿದ್ದಳು. ಡಾಕ್ಟರ್ ಗಳು ಮತ್ತು ನರ್ಸಗಳು ತಮ್ಮ ರಕ್ತ ದಾನ ಮಾಡುವುದರ ಮೂಲಕ ಆಕೆಯ ಪರಿಸ್ಥಿತಿ ಸುಧಾರಿಸಲು ನೆರವಾದರು.ಅಲ್ಲಿ ಸೌಲಭ್ಯಗಳ ಕೊರತೆ ಇತ್ತು. ಕೀವು ತುಂಬುವ ಹಂತದಲ್ಲಿದ್ದ ಕಾಲು ನೋಡಿದ ಡಾಕ್ಟರ್ ಗಳು ಮೊಣಕಾಲಿನ ಕೆಳಗೆ ಕತ್ತರಿಸದೇ ವಿಧಿ ಇಲ್ಲ ಎಂದರು!!.ಆದರೆ ಅಲ್ಲಿ ಕತ್ತರಿಸಲು ನೀಡುವ ಅನಸ್ಥೇಶಿಯಾ ಇರಲಿಲ್ಲ. ರಾತ್ರಿ ಇಡೀ ತನ್ನ ಪಾದಗಳ ಮೇಲೆ ನಲವತ್ತೊಂಭತ್ತು ರೈಲುಗಳು ಹೋದದ್ದನ್ನೇ ಸಹಿಸಿಕೊಂಡ ಆಕೆಗೆ ಇದೊಂದು ನೋವು ದೊಡ್ಡದೆನಿಸದೇ ಕತ್ತರಿಸಲು ಒಪ್ಪಿಗೆ ನೀಡಿದಳು.ಮುಂದೆ ಈಕೆಯನ್ನ ಉತ್ತರ ಪ್ರದೇಶದ ಮುಖ್ಯ ಆಸ್ಪತ್ರೆಗೆ ಸಾಗಿಸಲಾಯಿತು.ರಾಷ್ಟ್ರ ಪತಿನಿಧಿಸಿದ ಆಟಗಾರ್ತಿಯಾದ್ದರಿಂದ ಉನ್ನತ ಮಟ್ಟದ ಟ್ರೀಟ್ ಮೆಂಟ್ ಕೂಡಾ ಸಿಕ್ಕಿತು.

ಮಾಧ್ಯಮಗಳು ಈಕೆ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದಳು ಟಿ.ಸಿ. ಬಂದಾಗ ತಪ್ಪಿಸಿಕೊಳ್ಳು ಪ್ರಯತ್ನಿಸಿ ಅಪಘಾತಕ್ಕೆ ಈಡಾದಳು ಎಂದು ಅಪಪ್ರಚಾರ ಮಾಡತೊಡಗಿದವು.ಸರ್ಕಾರ ಕೂಡಾ ಸಾವಿರಾರು ರೂಪಾಯಿಗಳು ಧನ ಸಹಾಯ ನೀಡಿ ಕೈತೊಳೆದುಕೊಳ್ಳಲು ನೋಡಿದವು. ಆದರೆ ಕ್ರೀಡಾಳುಗಳು ಹಾಗೂ ಅರುಣಿಮಾ ಸಿನ್ಹಾಳ ಕ್ರೀಡಾ ಪ್ರೇಮಿಗಳ ಪ್ರತಿಭಟನೆಯಿಂದ ಆಕೆಯ ಜೀವನಾಧಾರಕ್ಕೆ ಸಹಾಯಧನದ ಘೋಷಣೆ ಮಾಡಲಾಯ್ತು.ರೈಲ್ವೇ ಇಲಾಖೆ ನೌಕರಿ ನೀಡಲು ಪ್ರಕಟಿಸಿತು. ಖಾಸಗೀ ಕಂಪನಿಯೊಂದು ಆಕೆಗೆ ಕೃತಕ ಕಾಲನ್ನ ಹಾಕಿಸಿತು.ಹಾಸಿಗೆ ಮೇಲಿದ್ದ ಅರುಣಿಮಾ ಸಿನ್ಹ ಬಂದು ಹೋಗುವವರ ಮಾತುಗಳನ್ನ,
ಮನೆಯವರ ಕಣ್ಣೀರನ್ನ ..
ಅಭಿಮಾನಿಗಳ ಕರುಣೆಯನ್ನ ಕಂಡು ಬೆಂದು ಹೋದಳು.
ನನ್ನ ಉತ್ಸಾಹ ಮುಗಿದಿಲ್ಲ…
ನಾನಿನ್ನೂ ಜೀವನದ ಕೊನೆ ಮುಟ್ಟಿಲ್ಲ…
ಅಚ್ಚರಿಯನ್ನ ಸಾಧಿಸಲೇ ಬೇಕು ಎಂದು ನಿರ್ಧರಿಸಿದಳು!!.
ತಮ್ಮ ತಂದು ನೀಡುತಿದ್ದ ಪುಸ್ತಕಗಳ ನಡುವೆ ಆಕೆಯನ್ನ ಸೆಳೆದ್ದದ್ದು ಬಂಚೇಂದ್ರಿ ಪಾಲ್!
‘ಹೌದು ಮೌಂಟ್ ಎವರೆಸ್ಟ ನಾನೂ ಏರಬೇಕು!!!’ ಎಂದು ನಿರ್ಧರಿಸಿದಳು.
ಆಸ್ಪತ್ರೆಯಿಂದಲೇ ಬಂಚೇಂದ್ರಿ ಪಾಲ್ ಗೆ ಪೋನ್ ಮಾಡಿದಳು.
” ಹೆಣ್ಣು ಮಕ್ಕಳು ಕಠಿಣವಾಗಬೇಕು ಆಕೆ ಗೆದ್ದರೆ ಸಮಾಜವೇ ಬದಲಾದಂತೆ ನೀನು ಮನಸ್ಸು ಮಾಡಿದ್ದೀಯ ಆಸ್ಪತ್ರೆಯಿಂದ ಹೊರಬಂದ ಮೇಲೆ ಬಾ ” ಎಂದು ಆಕೆ ಪೋನ್ ಇಟ್ಟರು.ಅರುಣಿಮಾ ಬದುಕಿನೊಳಗೊಂದು ಹೊಸ ಕಿಡಿ ಹೊತ್ತಿ ಕೊಂಡಿತು.ದೊಡ್ಡ ಗುರಿ ಖಚಿತವಾಯಿತು.ದೊಡ್ಡ ಗುರುವಿನ ಹಣತಿಯ ಚೇತನವೂ ಜೊತೆಯಾಯಿತು.
ನಿಜ ಹೆಣ್ಣು ಮಕ್ಕಳನ್ನ ಕರುಣೆಯ ತೊಡೆಯ ಮೇಲೆಯೇ ಕಾಣಬಯಸುವ ಸಮಾಜಕ್ಕೆ ಸವಾಲಂತೆ ಸೆಟೆದು ನಿಂತು ಅಲ್ಪ ಕರುಣೆಯನ್ನ ದಿಕ್ಕರಿಸಿ ತನ್ನ ಹೊಸ ಗುರಿಯನ್ನೇ ಬೆನ್ನಟ್ಟಿ ಹೊರ ಹೊರಟವಳು ಅರುಣಿಮಾ ಸಿನ್ಹ!


ಸೋಲಿನ ಒಂದು ಅಲೆ ಬಡಿದರೆ ಸಾಕು ಡಿಪ್ರಷನ್ಗೆ ಒಳಗಾಗುವ, ಆಕಾಶವೇ ಕಡಿದು ಬಿದ್ದಂತೆ ಕುಸಿದು ಆತ್ಮ ಹತ್ಯೆಯಂತಹ ಹೇಡಿ ನಿರ್ಧಾರಕ್ಕೆ ಬಂದು ಬಿಡುವ ನೂರಾರು ಜನರ ನಡುವೆ ನಿಂತು ಗೆದ್ದವಳು ಅರುಣಿಮಾ.
ಛಲವೊಂದಿದ್ದರೆ ಅನವರತ ಪರಿಶ್ರಮವಿದ್ದರೆ ಅಸಾಧ್ಯವನ್ನ ಸಾಧಿಸಿ ತೋರಿಸ ಬಹುದು ಎಂದು ಸಾಧಿಸಿ ನಕ್ಕವಳು ಅರುಣಿಮಾ .
ಅರುಣಿಮಾ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.ಕಠಿಣ ಪರಿಶ್ರಮ ಖಚಿತ ಗುರಿಯಿಂದ ಸತತ ಎಂಟು ತಿಂಗಳ ನಿರಂತರ ಕಡು ಕಷ್ಟದ ತರಬೇತಿಯಿಂದ.
ನಕ್ಕವರನ್ನ…
ಮೂದಲಿಸಿದವರನ್ನ…
ಬೇಡ ಹೋಗಮ್ಮಾ ಎಂದವರನ್ನ ..,
ಯಾಕೆ ಇದೆಲ್ಲಾ ಸರ್ಕಾರ ಧನ ಸಹಾಯ ನೀಡಿದೆ.ಇಲಾಖೆ ನೌಕರಿ ನೀಡಿದೆ ನೆಮ್ಮದಿಯಾಗಿ ಮನೆಯೊಳಗೆ ಇರ ಬಹುದಲ್ಲಾ ಎಂದವರ ಮಾತುಗಳಿಗೆ ಎದುರಾಗಿ ಕೇವಲ ಎರಡೇ ವರ್ಷದಲ್ಲಿ ಯಾವ ಪ್ರಪಂಚ ತನ್ನನ್ನ ತಲೆ ಕಳಗೆ ಮಾಡಿತ್ತೋ ಆ ಪ್ರಪಂಚವೇ ತನ್ನ ಕಾಲಡಿಗೆ ನಿಲ್ಲುವಂತೆ ಎವರೆಸ್ಟ ಏರಿ ನಿಂತಳು!!!.29029 ಅಡಿಗಳ ಆ ಎತ್ತರ ಏರಿದಾಗ ಆಕೆಯ ವಯಸ್ಸು ಕೇವಲ ಇಪ್ಪತೈದು.ಈ ಶಿಖರ ಏರಿದ ವಿಶ್ವದ ಮೊದಲ ಅಂಗವಿಚ್ಚೇದಿತ ಮಹಿಳೆ ಎಂಬ ಗೌರವಕ್ಕೆ ಪಾತ್ರಳಾದಳು.
ಅರಣಿಮಾ ಪಯಣ ಸುಲಭವಾಗಿರಲಿಲ್ಲ.
ಐವತ್ತೆರಡು ದಿನಗಳ ಸೋಲು ಗೆಲುವುಗಳ ತೂಗುಯ್ಯಾಲೆಯೊಳಗೆ ಆಕೆ ಹಿಲೇರಿ ಸ್ಟೆಪ್ ಗೆ ಹತ್ತಿರವಾದಾಗ ಆಕೆಯ ಜೊತೆಯ ಶೆರ್ಪಾ ಆಕೆಯನ್ನ ವಾತಾವರಣ ಸರಿಯಿಲ್ಲ ವಾಪಾಸು ಬಂದು ಬಿಡು ಜೀವ ವಿದ್ದರೆ ಮತ್ತೊಮ್ಮೆ ಏರಬಹುದು ಎಂದಾಗ.” ಅವಕಾಶಗಳು ಮತ್ತೊಮ್ಮೆ ಬರಲಾರವು.ಬಂದಾಗ ಹಿಂದಿರುಗಬಾರದು ಏನೇ ಆಗಲಿ ಮುನ್ನುಗ್ಗೋಣ ಎಂದಳು” ಅಷ್ಟರಲ್ಲಾಗಲೇ ಕೆಲವರು ಸಾವಿನ ತೆಕ್ಕೆಗೆ ಬಿದ್ದಿದ್ದರು. ಎದುರಲ್ಲೇ ಬಾಂಗ್ಲಾದ ಶಿಖಾರಾಗ್ರಹಿ ಕೊನೆ ಉಸಿರು ಎಳೆಯುತಿದ್ದ.ಕಣ್ಣೆತ್ತಿ ನೋಡಿದತ್ತಲೆಲ್ಲಾ ಬಿದ್ದ ಹೆಣಗಳು.ಕೈ ಕೊಡುತಿದ್ದ ವಾತಾವರಣ,ಆಕೆ ಮುನ್ನೆಜ್ಜೆ ಇಟ್ಟಾಗ ಒಳಗೊಳಗೇ ಆಕೆಯನ್ನ ಅಧೀರ ಗೊಳಿಸಲು ಹೆಣಗಿದವಾದರೂ ಇಷ್ಟೆತ್ತರ ಬಂದಮೇಲೆ ಸಾವಿನ ಕೊನೆತನಕವೂ ಪ್ರಯತ್ನ ಬಿಡಬಾರದು ಎಂಬ ತನ್ನ ಮೊದಲ ನಿರ್ಧಾರವನ್ನೇ ಆಕೆ ಬೆನ್ನತ್ತಿದಳು.
ಕಣ್ಣನ್ನೇ ಕುರುಡು ಮಾಡಬಲ್ಲ ಎತ್ತರದ ಹಿಮಾಲಯದ ನೀಲಿಕಿರಣಗಳ ಎದರು ಸಾವನ್ನೂ ತುಳಿದು ತನ್ನ ತೋಳೇರಿಸಿ 8848 ಮೀಟರ್ ಗಳ ಎತ್ತರದಲ್ಲಿ ಭಾರತದ ಧ್ವಜ ನೆಟ್ಟು ಯುವಕರಿಗೆ ಸ್ಫೂರ್ತಿಯಾದಳು.
ಹಾಸಿಗೆಯ ಮೇಲೆ ನಲುಗುತ್ತಾ ಬಿದ್ದ ತನ್ನ ಮೇಲೆ ಭರವಸೆ ಇಟ್ಟ ಶರ್ಪಾಗಳಿಗೆ ವಿಸ್ವಾಸ ಮೂಡಿಸಿ ಕಂಪನಿಗಳ ಧನ ಸಹಾಯ ಹೊಂದಿಸಿ ಇಲ್ಲಿಯ ತನಕ ಮುಟ್ಟುವಂತೆ ಮಾಡಿದ ತನ್ನ ಗುರು ಬಂಚೇಂದ್ರಿ ಪಾಲ್ ಗೆ ಅಲ್ಲಿಂದಲೇ ವಂದಿಸಿದಳು.
ಯುವಕರು ಮನಸ್ಸು ಮಾಡಿದರೆ ಎಂಥಹ ಕಠಿಣ ಪರಿಸ್ಥಿಯಲ್ಲೂ ಗೆದ್ದು ಬರಬಹುದು ಎಂಬುದಕ್ಕೆ ಈಕೆ ಸಾಕ್ಷಿಯಂತಿದ್ದಳು.
ಹೌದು ಆಕೆಗೆ ಕಾಲು ಕಳೆದು ಕೊಂಡಾಗ ಕೇವಲ ಇಪ್ಪತ್ಮೂರು ವರ್ಷ.ಆಫ್ರಿಕಾದ ಕಿಲಿಮಂಜಾರೋ,ಯುರೋಪಿನ ಎಲ್ಟ್ರಸ್,ಅರ್ಜೆಂಟೈನಾದ ಅಕೊಂಕಾಗುವಾ ಪರ್ವತಗಳನ್ನೆಲ್ಲಾ ಏರಿ ನಿಂತಗ ಆಕೆಗೆ ಕೇವಲ ಮುವ್ವತ್ತು ವರ್ಷಗಳು.ಡಾಕ್ಟರ್ ಗಳು ಈಕೆ ಸಹಜ ಸ್ಥಿತಿಗೆ ಬರಲು ನಾಲ್ಕರಿಂದ ಐದು ವರ್ಷವಾದರೂ ಬೇಕು ಎಂದರೆ ಈಕೆ ಅದೇ ಐದು ವರ್ಷಗಳಲ್ಲಿ ಮೌಂಟ್ ಎವರೆಸ್ಟ ಸೇರಿದಂತೆ ವಿಶ್ವದ ಐದು ಪರ್ವತಗಳನ್ನ ಏರಿ ದಾಖಲೆ ಬರೆದಳು.
ಪರ್ವತ ಏರಿದಷ್ಟೇ ಕಠಿಣ ಪರ್ವತ ಇಳಿವುದೂ ಕೂಡ ಎಂಬುದನ್ನ ಈಕೆಯ ಕಥನದಿಂದಲೇ ಕಾಣ ಬಹುದು.ತುದಿ ಮುಟ್ಟುವ ಮೊದಲೇ ಆಕೆಯ ಆಕ್ಸಿಜನ್ ಸಿಲೆಂಡರ್ ಖಾಲಿಯಾಗುತ್ತಾ ಬಂದಿತ್ತು ಮೂರನೇ ಬೇಸ್ ಕ್ಯಾಂಪ್ಗೆ ಬರುವ ಮೊದಲೇ ಆಕೆಯ ಸಿಲೆಂಡರ್ ಸಂಪೂರ್ಣ ಖಾಲಿಯಾಗಿತ್ತು. ಜೊತೆಗಿದ್ದ ಶರ್ಫಾ ಕೂಡಾ ಹೊರಟು ಹೋಗಿದ್ದ ಜೊತೆಗಿದ್ದವರ್ಯಾರೂ ಇರಲಿಲ್ಲ. ಜೋಡಿಸಿಕೊಂಡಿದ್ದ ಕೃತಕ ಕಾಲು ಕಳಚ ತೊಡಗಿತ್ತು.
ನಮ್ಮ ಪ್ರಯತ್ನ ನಿಜವಾದ್ದಾದರೆ ದೈವದ ಸಹಕಾರವೂ ಇರುತ್ತದೆ ಎಂಬಂತೆ ಆಕೆಯ ಜೀವ ಕೊನೆಯೇ ಆಯಿತು ಎನ್ನುವಾಗ ಆಕೆಯ ಎದುರಲ್ಲಿ ಶಿಖರ ಏರಿ ವಾಪಾಸಾಗುತಿದ್ದ ಬ್ರಿಟೀಷ್ ಶಿಖರಾಗ್ರಹಿಯ ಬಳಿ ಎರಡು ಆಕ್ಸಿಜನ್ ಸಿಲೆಂಡರ್ ಗಳು ಕಂಡವು.ಆತ ಈಕೆಗೆ ಒಂದು ಸಿಲೆಂಡರ್ ನೀಡಿದ.ತೆವಳುತ್ತ ಬಂಡೆಯೊಂದರ ಮೇಲೆ ಕುಳಿತು ಕಾಲು ಸರಿಪಡಿಸಿಕೊಂಡು ಬೇಸ್ ಕ್ಯಾಂಪ್ ಗೆ ಬಂದಾಗ ಆಕೆ ಬದುಕಿದ್ದೇ ಅಚ್ಚರಿ! ಎಂದು ಎಲ್ಲರಿಗೂ ಅನಿಸಿತ್ತು.ನಿಜ ರೈಲು ಹಳಿಗಳ ಮೇಲಿಂದ ಆಕೆಯನ್ನ ಆಸ್ಪತ್ರೆಗೆ ತಂದಾಗ ಡಾಕ್ಟರ್ ಗಳಿಗೂ ಹೀಗೇ ಅನಿಸಿತು. ಅಲ್ಲಿ ದೊರೆತ ಜೀವದಾನ ಆಕೆಯನ್ನ ಗೌರೀಶಂಕರದ ತನಕ ತಂದರೆ ಇಲ್ಲಿ ದೊರೆತ ಮತ್ತೊಂದು ಜೀವದಾನ ಆಕೆಯನ್ನ ಮತ್ತೆ ವಿಶ್ವದ ಐದು ಎತ್ತರ ಪರ್ವತಗಳತ್ತ ಕೊಂಡಯ್ದವು.!

Girl in a jacket
error: Content is protected !!