ಇಂಥವರು ಬದುಕು ಜೀವನಕ್ಕೊಂದು ಆದರ್ಶಪ್ರಾಯ

Share

ಇಂಥವರು ಬದುಕು ಜೀವನಕ್ಕೊಂದು ಆದರ್ಶಪ್ರಾಯ

ನನಗೆ ಬುದ್ಧಿ ಬಂದ ಲಾಗಾಯ್ತು ಸುಮಾರು ಹತ್ತುಹನ್ನೆರೆಡು ವರ್ಷ ವಯಸ್ಸಿನವನಾಗುವವರೆಗೂ ಒಂದು ದಿನಚರಿಯನ್ನು ತಪ್ಪದೇ ಪಾಲಿಸುತ್ತಿದ್ದೆ. ವರ್ಷದ ಯಾವುದೇ ಕಾಲವಾದರೂ ಸರಿ, ಬೆಳಗ್ಗಿನ ಆರು ಗಂಟೆ ಸುಮಾರಿಗೆ ಹಾಸಿಗೆ ಬಿಟ್ಟೇಳುತ್ತಿದ್ದವನು, ಪಿಸರುಗಟ್ಟಿದ ಕಣ್ಣುಗಳನ್ನು ಉಜ್ಜುತ್ತಲೇ, ದಂತ, ಮುಖಮಾರ್ಜನವನ್ನೂ ಮಾಡದೆ, ಬಹಿರ್ದೆಸೆಯ ಒತ್ತಡವನ್ನೂ ಮರೆತು, ಮನೆಯ ಮುಂಬಾಗಿಲಿಗೆ ಬಂದು ನನ್ನ ಮನೆಯ ಬಲಬದಿಯ ರಸ್ತೆಯನ್ನು ದಿಟ್ಟಿಸಿ ನೋಡುತ್ತಾ ನಿಲ್ಲುತ್ತಿದ್ದೆ. ಮುಂದಿನ ಹತ್ತು ಹದಿನೈದು ನಿಮಿಷಗಳಲ್ಲಿ, ನಮ್ಮ ಮನೆಯಿಂದ ಬಲಭಾಗಕ್ಕೆ ಇರುವ ಆರೆ ಸೀತಣ್ಣ, ಆರೆ ವಿರುಪಣ್ಣ ಮತ್ತು ಗೌಡ್ರ ಈಶಜ್ಜಿ ಅವರ ಮನೆಗಳ ನಂತರ ಬರುವ ಗೌಡರ ಥಳಾಸದಿಂದ ಹೊರ ಬಂದು ಮುಖ್ಯರಸ್ತೆಯನ್ನು ಸೇರುತ್ತಿದ್ದ ಮೂರು ಚಕ್ರಗಳ ಮರದ ಗಾಲಿ ಕಣ್ಣಿಗೆ ಬಿದ್ದಿತು ಎಂದರೆ ನನ್ನ ದಿನಚರಿಯ ಮೊದಲ ಮುಖ್ಯಘಟ್ಟವೊಂದರ ಅನಾವರಣ ಶುರುವಾಯಿತು ಎಂದೇ ಅರ್ಥ.

ಈ ಮರದ ಗಾಲಿಯಲ್ಲಿ ಒಬ್ಬ ಅಂಗವಿಕಲ ಚೇತನನನ್ನು ಕೂರಿಸಿಕೊಂಡು, ನಿಧಾನವಾಗಿ ಗಾಲಿಯನ್ನು ತಳ್ಳುತ್ತಾ ಬರುತ್ತಿದ್ದ ಪ್ರಾಯದ ಹೆಣ್ಣುಮಗಳು ಮುಂದಿನ ಸುಮಾರು ನಾಲ್ಕೈದು ನಿಮಿಷಗಳ ಅವಧಿಯಲ್ಲಿ ನಮ್ಮ ಮನೆ ಸಮೀಪಿಸಿದಳು ಎಂದ ತಕ್ಷಣ ನಾನು ಮನೆಯಿಂದ ನೆಗೆದು ರಸ್ತೆಗೆ ಸೇರಿದವನು ಆ ಹೆಂಗಸಿನ ಜೊತೆಗೂಡಿ ಗಾಲಿ ತಳ್ಳಲು ಮೊದಲು ಮಾಡುತ್ತಿದ್ದೆ. ಅಲ್ಲಿಂದ ಸುಮಾರು ಎರಡು ನಿಮಿಷಗಳ ಹಾದಿ ಸವೆಸಿ, ನಮ್ಮ ಮನೆಯನ್ನು ದಾಟಿದಂತೆ ಮುನ್ನೆಡೆದಲ್ಲಿ, ನಮ್ಮ ಮನೆಯ ಎಡಪಕ್ಕಕ್ಕೆ ಬರುತ್ತಿದ್ದದ್ದು, ರಸ್ತೆಯ ನಮ್ಮ ಮನೆಯ ಸಾಲಿನಲ್ಲಿಯೇ ಒಂಟಿಯಾಗಿ ನಿಂತ, ಮೊದಲ ನೋಟದಲ್ಲಿ ಹೆಚ್ಚು ವಿವರಣೆಯನ್ನು ಮತ್ತು ಗಮನವನ್ನು ಬೇಡದ, ಒಂದು ಸಾಧಾರಣ ರೂಪದ ಡಬ್ಬಾ ಅಂಗಡಿ.

 

ನಮ್ಮ ಮನೆ ಮತ್ತು ಡಬ್ಬಾ ಅಂಗಡಿಯನ್ನು ಬಸ್ ಸ್ಟ್ಯಾಂಡ್ ನ ಪ್ರಯಾಣಿಕರಿಗಾಗಿ ಹಾಕಿದ ಒಂದು ಸಣ್ಣ ಕಲ್ಲಿನಕಟ್ಟೆ ಬೇರ್ಪಡಿಸಿದ್ದರೆ, ನಮ್ಮ ಮನೆ ಮತ್ತು ಬಸ್ ಸ್ಟ್ಯಾಂಡ್ ನ್ನು ಈ ಡಬ್ಬಾ ಅಂಗಡಿ ಬೇರ್ಪಡಿಸುತ್ತಿತ್ತು. ಸುಮಾರು ಮೂರು ಅಡಿ ಅಳತೆಯ ಚೌಕಾಕಾರದ ಡಬ್ಬಾ ಅಂಗಡಿಯ ಮುಂದೆ ನಾಲ್ಕು ಅಡಿಗಳಷ್ಟು ಉದ್ದದ ತೆಂಗಿನ ಗರಿ ಹೊದಿಸಿದ ಒಂದು ಚಪ್ಪರವಿತ್ತು

 

. ಇದಾದ ನಂತರ ಬರುವ ಸುಮಾರು ಅರ್ಧ ಅಡಿಯಷ್ಟು ಎತ್ತರದ ಬೆಣಚುಕಲ್ಲು ಚಪ್ಪಡಿಯ ತಡೆಗೋಡೆ ಅಂಗಡಿ ಮತ್ತು ಮುಂದಿನ ಮುಖ್ಯರಸ್ತೆಯ ವಿಭಾಜಕದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ತಡೆಗೋಡೆಯಿಂದ ಅಂಗಡಿಯ ಮೆಟ್ಟಿಲವರೆಗೆ ಹಾಸಿದ್ದ ಬೆಣಚುಕಲ್ಲಿನ ಚಪ್ಪಡಿಕಲ್ಲುಗಳನ್ನು ನಿಧಾನಗತಿಯಿಂದ ತೆವಳುತ್ತಲೇ ಹಾಯಬೇಕಿದ್ದ ಗಾಲಿಯ ಮೇಲೆ ಕುಳಿತ ಆ ಅಂಗವಿಕಲ ವ್ಯಕ್ತಿ, ನೆಲದಿಂದ ಸುಮಾರು ಒಂದೂವರೆ ಅಡಿಗಳ ಎತ್ತರದಲ್ಲಿದ್ದ ಅಂಗಡಿಯ ತಳವನ್ನು, ಅಲ್ಲಿದ್ದ ಒಂದೇ ಒಂದು ಕಲ್ಲುಚಪ್ಪಡಿನ ಮೆಟ್ಟಿಲು ಹಾಸಿನ ಸಹಾಯದಿಂದ ಏರಿ ಸೇರಬೇಕಾಗಿತ್ತು. ಈ ಇಡೀ ಪ್ರಕ್ರಿಯೆ ಬಹಳ ನಿಖರತೆಯಿಂದ, ಕ್ಲುಪ್ತ ಸಮಯದಲ್ಲಿ ಜರುಗಿದಲ್ಲಿ,

 

 

ತಡೆಗೋಡೆಯನ್ನು ಹಾಯುವ ಒಂದು ಕೆಲಸ ಮಾತ್ರ ಆ ಅಂಗವಿಕಲ ಚೇತನಕ್ಕೆ ಪ್ರತಿನಿತ್ಯದ ಒಂದು ಸವಾಲಾಗಿ ಪರಿಣಮಿಸಿತ್ತು. ಗಾಲಿಯ ಮೇಲೇ ಕೂತು, ಸ್ವಲ್ಪ ಸ್ವಲ್ಪವೇ ಜರುಗುತ್ತಾ, ಗಾಲಿಯ ಮುಂಭಾಗದ ಅಂಚಿನಿಂದ ತಡೆಗೋಡೆಯ ಮತ್ತೊಂದು ಬದಿಗೆ ತನ್ನ ಎಡಕೈಯನ್ನು ಎತ್ತಿ ಬಲವಾಗಿ ಊರಿ ಇಟ್ಟು, ಎಡಕೈ ಮೇಲೆ ದೇಹದ ಸಂಪೂರ್ಣ ಭಾರವನ್ನು ಹಾಕಿ, ತನ್ನ ಪೂರ್ತಿ ಶರೀರವನ್ನು ತಡೆಗೋಡೆಯ ಆಚೆಗೆ ಸ್ಥಳಾಂತರಿಸುತ್ತಿದ್ದ ಸಾಹಸಮಯ ಮತ್ತು ಚಮತ್ಕಾರಿ ಕಾರ್ಯಕ್ಕೆ ಆ ವ್ಯಕ್ತಿಯ ತಂಗಿ, ಗಾಲಿಯನ್ನು ಮನೆಯಿಂದ ತಳ್ಳುತ್ತಾ ಬರುತ್ತಿದ್ದ, ಶಾರದಮ್ಮ ಸಹಾಯ ಮಾಡಿದರೂ ತಡೆಗೋಡೆ ದಾಟುವಿಕೆ ಮನೆಯಿಂದ ಅಂಗಡಿ ಸೇರುವ ಮಾರ್ಗದಲ್ಲಿ ಎದುರಾಗುವ ಅತ್ಯಂತ ಕಠಿಣ ಕೆಲಸವೇ ಆಗಿ ಸಾಬೀತಾಗಿತ್ತು. ಥಳಾಸದ ಮನೆಯಿಂದ ತಡೆಗೋಡೆಯವರೆಗಿನ ಪಯಣಕ್ಕೆ ಅಬ್ಬಬ್ಬಾ ಎಂದರೂ ಆರೇಳು ನಿಮಿಷಗಳ ಸಮಯ ಸಾಕಾಗಿತ್ತು. ಆದರೆ ಅಂಗವಿಕಲ ಚೇತನ ತಡೆಗೋಡೆ ದಾಟಲಿಕ್ಕೇ ಸುಮಾರು ಮೂರ್ನಾಲ್ಕು ನಿಮಿಷಗಳ ಕಾಲ ಬೇಕಾಗಿತ್ತು.

ವ್ಯಕ್ತಿ ಅಂಗಡಿಯನ್ನು ಸೇರಿ ತನ್ನ ಸ್ವಸ್ಥಾನದಲ್ಲಿ ವಿರಾಜಮಾನನಾದ ನಂತರದಲ್ಲಿ ಆತನಿಗೆ ಕುಡಿಯಲು ಬೇಕಾದ ನೀರು, ಬೆಳಗಿನ ಉಪಾಹಾರ ಮುಂತಾದವುಗಳನ್ನು ಇಟ್ಟ, ಗಾಲಿಯ ಬಲಬದಿಗೆ ನೇತು ಹಾಕುತ್ತಿದ್ದ ಬಟ್ಟೆಚೀಲವೊಂದನ್ನು ಸಾವಕಾಶವಾಗಿ ಎತ್ತಿ ಅಂಗಡಿಗೆ ತಲುಪಿಸುವುದು ನನ್ನ ಪಾಲಿನ ಹೆಚ್ಚುವರಿ ಕೆಲಸವಾಗಿತ್ತು. ತದನಂತರದಲ್ಲಿ ಖಾಲಿ ಗಾಲಿಯನ್ನು ತಳ್ಳುತ್ತಾ, ವೇಗವಾಗಿ ಓಡುತ್ತಾ, ಥಳಾಸದ ಬಾಗಿಲವರೆಗೂ ಅದನ್ನು ಬಿಟ್ಟುಬರುವ ಆ ಕೆಲವು ಕ್ಷಣಗಳ ಉತ್ಕಟ ಆನಂದದ ಸೀಮೆಯನ್ನು ಮುಟ್ಟಿ ಬರಲೆಂದೆ ನಾನು ದಿನದ ನನ್ನ ಈ ಮೊದಲ ದಿನಚರಿಯನ್ನು ಎದುರು ನೋಡುತ್ತಿದ್ದೆ ಎನ್ನುವ ಗುಟ್ಟನ್ನು ಇಂದು ನಿಮ್ಮ ಮುಂದೆ ರಟ್ಟು ಮಾಡುತ್ತಿದ್ದೇನೆ.

ಹೀಗೆ ಬೆಳ್ಳಂಬೆಳಿಗ್ಗೆ ತನ್ನ ಕಾಯಕದ ಸಲುವಾಗಿ ಡಬ್ಬಾ ಅಂಗಡಿ ಸೇರುತ್ತಿದ್ದ ಈ ವಿಕಲ ಚೇತನನೇ ಗೌಡರ ಐಯ್ಯಣ್ಣ. ಈತನ ಡಬ್ಬಾ ಅಂಗಡಿ “ಕುಂಟಯ್ಶಣ್ಣನ ಅಂಗಡಿ” ಎಂದೇ ಊರಿನಲ್ಲಿ ಚಿರಪರಿಚಿತವಾಗಿತ್ತು. ಊರ ಬಸ್ ಸ್ಟ್ಯಾಂಡ್ ಗೆ ಮುಕುಟಪ್ರಾಯವಾಗಿ ಕಂಗೊಳಿಸುತ್ತಿದ್ದ ಈ ಡಬ್ಬಾ ಅಂಗಡಿಯಿಲ್ಲದ ನನ್ನೂರಿನ ಬಸ್ ಸ್ಟ್ಯಾಂಡ್ ನ ಕಲ್ಪನೆ ಮಾತ್ರವೇ ಅಪೂರ್ಣ ಮತ್ತು ಅಭಾಸದಿಂದ ಕೂಡಿದ್ದು ಎಂದೇ ನಾನು ಭಾವಿಸಿದ್ದೇನೆ. ಬಸ್ ಸ್ಟ್ಯಾಂಡ್ ನ ಮಧ್ಯಭಾಗದಿಂದ ತುಸು ದೂರದಲ್ಲಿಯೇ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಒಂದರ ನೆನಪು ಹೇಗೆ ಬಸ್ ಸ್ಟ್ಯಾಂಡ್ ಕಲ್ಪನೆಯ ಅವಿಭಾಜ್ಯ ಅಂಗವಾಗಿದೆಯೋ ಅದೇ ರೀತಿ ಗೌಡರ ಐಯ್ಯಣ್ಣನ ಡಬ್ಬಾ ಅಂಗಡಿಯ ಉಪಸ್ಥಿತಿಯೂ ಸಹಾ ಬಸ್ ಸ್ತ್ಯಾಂಡ್ ನ ನೆನಪಿನ ಒಂದು ಹಾಸುಹೊಕ್ಕಾದ ಭಾಗವೇ ಆಗಿ ಉಳಿದಿದೆ. ಮುತ್ತೈದೆ ಹೆಣ್ಣು ಮಗಳ ತೇಜೋಮಯ ಮುಖದ ಒಟ್ಟಂದದ ಕಲ್ಪನೆಯಲ್ಲಿ ಆಕೆ ತಿಲಕದ ಮೇಲೆ ಧರಿಸಿರುವ ನಾಲ್ಕಾಣೆ ಅಗಲದ ಕುಂಕುಮ ಹೇಗೆ ಪ್ರಧಾನವಾಗಿ ತನ್ನ ಇರುವನ್ನು ಸಾರುತ್ತದೆಯೋ ಅದೇ ರೀತಿಯಲ್ಲಿ ಊರ ಬಸ್ ಸ್ಟ್ಯಾಂಡ್ ನ ಕಲ್ಪನೆಯ ಹಿನ್ನೆಲೆಯನ್ನು ಅರ್ಥಪೂರ್ಣವಾಗಿಸುವ ದಿಶೆಯ ನೇಪಥ್ಯದಲ್ಲಿ ಐಯ್ಯಣ್ಣನ ಡಬ್ಬಾ ಅಂಗಡಿಯ ಕಲ್ಪನೆಯೂ ಮೇಳೈಸಿದೆ ಎಂದು ನಾನು ನಂಬಿದ್ದೇನೆ.

ಐಯ್ಯಣ್ಣನನ್ನು ನಾನು ಮೊತ್ತಮೊದಲ ಬಾರಿ ನೋಡಿದಾಗ ಆತನಿಗೆ ಸುಮಾರು ಮೂವತ್ತರ ಪ್ರಾಯ ಇದ್ದಿರಬಹುದು. ನೋಡಿದ ತಕ್ಷಣ “ಸ್ಫುರದ್ರೂಪಿ” ಎಂದು ಹೇಳುವ ಮುಖಚರ್ಯೆಯ ಐಯ್ಯಣ್ಣ ತುಸು ಹೆಚ್ಚೇ ಅನ್ನಬಹುದಾದ ಗೌರವರ್ಣದಿಂದ ಕೂಡಿದವನು. ನೀಳನಾಸಿಕ ಮತ್ತು ಹೊಳೆಯುವ ಶ್ವೇತ ನೇತ್ರದ್ವಯಗಳ ಮಾಲೀಕನಾದ ಐಯ್ಯಣ್ಣ ತನ್ನ ದಟ್ಟ, ಸ್ವಲ್ಪ ಉದ್ದ ಎಂದೇ ಹೇಳಬಹುದಾದ ಕಪ್ಪುಕೂದಲ ರಾಶಿಯನ್ನು ತಲೆಯ ಹಿಂದಕ್ಕೆ ಹೋಗುವ ಹಾಗೆ, ನಿಖರವಾದ ಬೈತಲೆಯೊಂದು ತಲೆಯ ಮಧ್ಯಭಾಗದಲ್ಲಿ ಮೂಡುವ ರೀತಿಯಲ್ಲಿ ಬಾಚುತ್ತಿದ್ದ. ಸದಾ ಹಸನ್ಮುಖಿಯಾದ ಐಯ್ಯಣ್ಣ, ಅಂಗಿಯ ಎರಡೂ ತೋಳುಗಳನ್ನು ನೀಟಾಗಿ ಮೊಣಕೈಗಳ ಮೇಲೆ ಬರುವ ಹಾಗೆ, ನಾಲ್ಕು ಬೆಟ್ಟು ಅಗಲವಿರುವ ಪಟ್ಟಿ ಬರುವ ರೀತಿಯಲ್ಲಿ ಮಡಿಚಿರುತ್ತಿದ್ದ, ಹತ್ತಿಬಟ್ಟೆಯ ಶುಭ್ರ ಕಳಂಕರಹಿತ ಬಿಳಿಬಣ್ಣದ ತುಂಬುತೋಳಿನ ಶರ್ಟ್ ಧರಿಸುತ್ತಿದ್ದ. ಜೀವಂತ ಬಸ್ಟ್ (ಮಾನವನ ತಲೆ, ಭುಜ ಮತ್ತು ಎದೆಯುಳ್ಳ ಪ್ರತಿಮೆ)ನಂತೆ ಗೋಚರಿಸುತ್ತಿದ್ದ ಐಯ್ಯಣ್ಣನ ದೇಹದ ಇಷ್ಟು ಭಾಗವಷ್ಟೇ ನೋಡುಗರಿಗೆ ಗೋಚರವಾಗುತ್ತಿದ್ದದ್ದು. ಉಳಿದಂತೆ ಸೊಂಟದಿಂದ ಕೆಳಗೆ, ಪೋಲಿಯೋ ಕಾರಣದಿಂದ, ಪೂರ್ಣಸ್ವರೂಪದಲ್ಲಿ ನಿಷ್ಕ್ರಿಯವಾದ, ಸಣ್ಣನೆಯ ಕಡ್ಡಿಯಂತಹ ಸೊಂಟ, ಮಡಿಚಿ ಜೋಲು ಬಿದ್ದು ನೇತಾಡುತ್ತಿದ್ದ ಶಕ್ತಿಹೀನವಾದ ಕಾಲುಗಳು ಸಾಮಾನ್ಯ ನೋಡುಗರ ಅವಗಾಹನೆಗೆ ಸುಲಭದಲ್ಲಿ ನಿಲುಕುವಂತಹುಗಳಾಗಿರಲಿಲ್ಲ. ತಡೆಗೋಡೆ ದಾಟುವಾಗಲೋ, ಅಂಗಡಿಯ ಮೆಟ್ಟಿಲುಗಳನ್ನು ಏರುವಾಗಲೋ ಈ ಕಾಳುಗಳನ್ನು ಅತ್ತಿತ್ತ ಸರಿಸಿದ ಅನುಭವವಿರುವ ನಾನು ಚಲನೆಯ ದೃಷ್ಟಿಯಿಂದ ಕಟ್ಟಿಗೆಯ ಕೋಲುಗಳಿಗೂ, ಐಯ್ಯಣ್ಣನ ಕಾಲುಗಳಿಗೂ ಅಂತಹಾ ವ್ಯತ್ಯಾಸವನ್ನೇನನ್ನೂ ಕಂಡವನಲ್ಲ. ನಿರ್ಜೀವವೆಂದೇ ತೋರಿ ಬರುತ್ತಿದ್ದ ಈ ಕಾಳುಗಳಲ್ಲಿ ನೋವನ್ನು ಗ್ರಹಿಸುವ ಶಕ್ತಿ ಮಾತ್ರ ಸ್ವಲ್ಪವೂ ಮುಕ್ಕಾಗದೆ ಉಳಿದಿದ್ದು ನನ್ನ ಅಚ್ಚರಿಗೆ ಕಾರಣವಾಗಿತ್ತು. ತನ್ನ ಸೊಂಟದ ಕೆಳಭಾಗವನ್ನು ಉದ್ದನೆಯ, ಮೊಣಕಾಲು ಕೆಳಗೆ ಬರುವಂತಹ ದಪ್ಪ, ಶುದ್ಧಹತ್ತಿಯ, ಖಾಕಿ ಬಣ್ಣದ ಚಡ್ಡಿಯಿಂದ ಮುಚ್ಚಿರುತ್ತಿದ್ದ ಐಯ್ಯಣ್ಣ, ಅಚ್ಚ ಬಿಳಿಬಣ್ಣದ, ಮೊದಲ ನೋಟಕ್ಕೆ ಹೆದರಿಕೆ ಹುಟ್ಟಿಸುವಂತಿದ್ದ ತನ್ನ ಪಾದಗಳಿಗೆ ಪಾದರಕ್ಷೆಯ ಸ್ಪರ್ಶವನ್ನು ಮಾಡಿಸಿದವನೇ ಅಲ್ಲ. ಐಯ್ಯಣ್ಣನ ದಷ್ಟಪುಷ್ಟ ಸ್ನಾಯುಭರಿತ ಕೈತೋಳುಗಳನ್ನ ಕಂಡವರು ಆತನ ದೇಹದ ಕೆಳಭಾಗ ಹೀಗೆ ಸಂಪೂರ್ಣವಾಗಿ ನಿರ್ಜೀವ ಸ್ಥಿತಿಯಲ್ಲಿದೆ ಎನ್ನುವುದು ಊಹಿಸಲೂ ಅಸಾಧ್ಯವಾದ ಸಂಗತಿಯೇ ಆಗಿ ಉಳಿದಿತ್ತು

ನನಗೆ ಐಯ್ಯಣ್ಣ ಎಂದೂ ಒಬ್ಬ ಅಂಗವಿಕಲ ವ್ಯಕ್ತಿಯಂತೆ ತೋರಿಬರಲೇ ಇಲ್ಲ. ಕಾಲುಗಳಿಲ್ಲದ ಐಯ್ಯಣ್ಣನಿಗೆ ಅದೊಂದು “ಕೊರತೆ” ಎನ್ನುವ ಅಭಿಪ್ರಾಯವೇ ನನ್ನ ಮನದಲ್ಲಿ ಮೂಡಿದ್ದಿಲ್ಲ. ನಾನು ಮನೆಯಲ್ಲಿಯೇ ಆಗಲಿ, ಶಾಲೆಯಲ್ಲಿಯೇ ಆಗಲಿ, ವ್ಯವಹರಿಸುತ್ತಿದ್ದ ವ್ಯಕ್ತಿಗಳು ಮತ್ತು “ಕುಂಟ” ಎಂದು ಊರಜನ ಸಂಬೋಧಿಸುತ್ತಿದ್ದ ಐಯ್ಯಣ್ಣನ ಮಧ್ಯೆ ನನಗೆ ಯಾವ ರೀತಿಯ ವ್ಯತ್ಯಾಸಗಳೂ ಕಾಣಬರಲಿಲ್ಲ. ಐಯ್ಯಣ್ಣ ಬಹಳ ಸಹಜ ರೀತಿಯಲ್ಲಿ ನನ್ನೊಡನೆ ವ್ಯವಹರಿಸುತ್ತಿದ್ದ. ಸಂಜೆಯ ವೇಳೆ ಮಹಾಂತಾಚಾರಿ ಸಾಮೀಲಿನ ಹಿಂಭಾಗದ ಮರದ ದಿಮ್ಮಿಗಳ ಮೇಲೆ ಆಟ ಆಡುತ್ತಿದ್ದ ಗೆಳೆಯರ ಗುಂಪಿನ ಮತ್ತೋರ್ವ ಸದಸ್ಯನಂತೆಯೆ ಐಯ್ಯಣ್ಣ ನನಗೆ ತೋರಿಬರುತ್ತಿದ್ದ. ಐಯ್ಯಣ್ಣನ ಕುಗ್ಗಿದ, ಹಿಡಿಯಷ್ಟಾದ ದೇಹ ಆತ ವಯಸ್ಸಿನಲ್ಲಿ ನನಗಿಂತ ಬಹಳ ದೊಡ್ಡವನು ಎನ್ನುವ ತಥ್ಯವನ್ನು ನನ್ನ ಮನಸ್ಸಿನಲ್ಲಿ ಬೇರೂರಲು ಬಿಡಲೇ ಇಲ್ಲ. ಆತನ ವಾಮನಾಕೃತಿ, ಚಿಕ್ಕವನಾದ ನನ್ನಲ್ಲಿ ಎಂಥದ್ದೋ ಒಂದು ಸಲುಗೆಯ ಸೆಲೆಯನ್ನು ಹುಟ್ಟಿಹಾಕಿತ್ತು. ಸಮಯ ಸಿಕ್ಕಾಗಲೆಲ್ಲಾ ಐಯ್ಯಣ್ಣನ ಅಂಗಡಿಗೆ ಹೋಗಿ, ಆತನ ಸಮೀಪ ನಿಂತು, ತಾಸುಗಟ್ಟಲೆ, ನನ್ನ ಶಾಲೆಯ ಬಗ್ಗೆ, ಗುರುಗಳ ಬಗ್ಗೆ, ಗೆಳೆಯರ ಬಗ್ಗೆ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಹೇಳಿಬಿಡುತ್ತಿದ್ದೆ. ನನ್ನ ಈ ಬಾಲ್ಯಸಹಜ ಅಭಿವ್ಯಕ್ತಿಗೆ ಐಯ್ಯಣ್ಣ ಎಂದೂ ಅಡ್ಡಬಂದವನೇ ಅಲ್ಲ. ಬಹಳ ಶಾಂತ ಮತ್ತು ಏಕಾಗ್ರಚಿತ್ತದಿಂದ ನನ್ನ ಅಸಂಬದ್ಧ ಪ್ರವರಗಳಿಗೆ ಕಿವಿಯಾಗುತ್ತಿದ್ದ ಆತ, ಹರಟೆಯ ಕೊನೆಯ ಹಂತದಲ್ಲಿ ನನಗೆ ಅತಿಪ್ರಿಯವಾದ, ಹೃದಯದಾಕಾರದ, ಜೇನುತುಪ್ಪ ಬಣ್ಣದ ಕೊಬ್ಬರಿ ಪೆಪ್ಪರ್ ಮೆಂಟ್ ಒಂದನ್ನು ಕೊಡುತ್ತಿದ್ದ. ಪೆಪ್ಪರ್ ಮೇಂಟ್ ಸವಿಯುತ್ತಾ ಮನೆಯ ಕಡೆ ಹೆಜ್ಜೆ ಹಾಕಿದವನಿಗೆ ಹೃದಯದ ಭಾರ ಇಳಿದು ಹಗುರತೆಯ ಅನುಭೂತಿಯಾಗುತ್ತಿತ್ತು.

ಹುಟ್ಟಿದ ಕೇವಲ ಕೆಲವೇ ತಿಂಗಳುಗಳ ಅವಧಿಯಲ್ಲಿ ಉಂಟಾದ ಪೋಲಿಯೋ ಸಂಕ್ರಮಣ ಐಯ್ಯಣ್ಣನ ಪೂರಾ ಬದುಕನ್ನು ಮೂರಾಬಟ್ಟೆಯಾಗಿಸಿತ್ತು. ಆಗಿನ್ನೂ ಪೋಲಿಯೋ ಲಸಿಕೆಗಳು ಈಗಿನಷ್ಟು ವ್ಯಾಪಕವಾಗಿ ಉಪಲಬ್ಧವಿರಲಿಲ್ಲ. ಹುಟ್ಟಿದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವುದು ಕಡ್ಡಾಯ ಎನ್ನುವ ಅಂಶ ಪೋಷಕರ ಪ್ರಜ್ಞೆಗೂ ಬಾರದ ದಿನಗಳವು. ಇಂತಹ ದಿನಮಾನದಲ್ಲಿ ಪೋಲಿಯೋ ಎನ್ನುವ ಕರಾಳ ವೈರಸ್ ಅಸಂಖ್ಯಾತ ಎಳೆಜೀವಗಳನ್ನು “ಬೋನ್ಸಾಯ್” ಮಾಡುವ ತನ್ನ ವಿಕೃತ ಕಾಮನೆಯನ್ನು ಮನಸೋಇಚ್ಛೆ ಮೆರೆಯುತ್ತಿತ್ತು. ಸುಂದರವಾಗಿ ಅರಳಿ, ಕೆಂಗುಲಾಬಿಯಂತೆ ನಳನಳಿಸಬೇಕಾದ ಐಯ್ಯಣ್ಣನ ಜೀವನವನ್ನು ಮೊಗ್ಗಾಗಿದ್ದಾಗಲೇ ಹೊಸಕಿ ಹಾಕಿದ ಪೋಲಿಯೋ ರಾಕ್ಷಸನ ಬಗ್ಗೆ ನನ್ನ ಎದೆಯಲ್ಲಿ ಆ ಹೊತ್ತು ಹತ್ತಿ ಉರಿದ ಕೋಪತಾಪಗಳು ಸೂರ್ಯನನ್ನೂ ದಹಿಸುವಂತಹ ಭೀಷಣತೆಯನ್ನು ಹೊದ್ದಿದ್ದವು. ನಮ್ಮ ಮನೆಯಲ್ಲಿಯೇ ಇದ್ದ ಇನ್ನೋರ್ವ ಪೋಲಿಯೋ ಪೀಡಿತೆ, ನನ್ನ ಅತ್ತೆ, ಸರ್ವಮಂಗಳನ ಉಪಸ್ಥಿತಿ, ಪೋಲಿಯೋ ವಿರುದ್ಧದ ನನ್ನ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿತ್ತು. ಕಣ್ಣಿಗೆ ಕಾಣದ ವೈರಸ್ ವಿರುದ್ಧ ಏನೂ ಮಾಡಲಾಗದ ನನ್ನ ಅಸಹಾಯಕತೆ ದಿನನಿತ್ಯ ಐಯ್ಯಣ್ಣನ ದಾರಿಗೆ ಮುಳ್ಳಾಗಿದ್ದ ತಡೆಗೋಡೆಯ ಎರಡು ಅಡಿಯಷ್ಟು ಉದ್ದದ ಒಂದು ಕಲ್ಲನ್ನು ಸತತ ಮೂರು ರಾತ್ರಿಗಳ ಪ್ರಯತ್ನದ ನಂತರ ಕಿತ್ತೆಸೆದುದ್ದರಲ್ಲಿ ಪರ್ಯಸನವಾಗಿದ್ದು ಕೇವಲ ಕಾಕತಾಳೀಯ ಘಟನೆಯಾಗಿತ್ತು ಎಂದು ಒಕ್ಕಣಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ.

ನಾನು ಮೂರನೇ ತರಗತಿಗೆ ಹೋಗುವ ವೇಳೆಗೆ ಐಯ್ಯಣ್ಣನ ಗಾಡಿಯನ್ನು ತಳ್ಳುವ ಕೈಗಳು ತಂಗಿ ಶಾರದಮ್ಮನಿಂದ ಅಣ್ಣ ಮಾಸ್ತರು ಲೋಕಪ್ಪಗೌಡರ ಏಕೈಕ ಸುಪುತ್ರ ಸುರೇಶನಿಗೆ ಹಸ್ತಾಂತರಗೊಂಡವು. ಸುರೇಶ ನನಗಿಂತ ವಯಸ್ಸಿನಲ್ಲಿ ಸುಮಾರು ಮೂರು ವರ್ಷ ಚಿಕ್ಕವನು. ಚಿಕ್ಕಪ್ಪನ ದೈನಂದಿನ ರಥಯಾತ್ರೆಯಲ್ಲಿ ಇನ್ನಿಲ್ಲದ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದವನು. “ಐಯ್ಯಣ್ಣಪ್ಪ, ಐಯ್ಯಣ್ಣಪ್ಪ” ಎನ್ನುತ್ತಲೇ ಚಿಕ್ಕಪ್ಪನ ಮರದ ತಳ್ಳುಗಾಡಿಯನ್ನು ವರ್ಷಗಳ ಕಾಲ ತಪಸ್ಸಿನ ರೂಪದಲ್ಲಿ ತಳ್ಳಿಕೊಂಡು ಬಂದು, ಸುರಕ್ಷಿತವಾಗಿ ಕಕ್ಕನನ್ನು ಮನೆಯಿಂದ ಅಂಗಡಿಗೆ ಹಾಗೂ ಅಂಗಡಿಯಿಂದ ಮನೆಗೆ ತಲುಪಿಸುವ ಗುರುತರಕಾರ್ಯವನ್ನು ಒಂದೂ ದಿನ ತಪ್ಪದ ಹಾಗೆ, ವ್ರತದ ರೀತಿಯಲ್ಲಿ ಪಾಲಿಸಿಕೊಂಡು ಬಂದವನು. ಸುರೇಶ ಗಾಡಿ ತಳ್ಳುವುದಕ್ಕೆ ಮೊದಲಿಟ್ಟ ಮೇಲೆ ನಾನು “ಶಾರದಪರ್ವ” ದ ಹೊತ್ತಿನ ಹಾಗೆ ಮನೆಯ ಮುಖ್ಯದ್ವಾರದಲ್ಲಿ ನಿಂತು ಐಯ್ಯಣ್ಣನ ರಥದ ನಿರೀಕ್ಷೆಯನ್ನು ಮಾಡುವುದನ್ನು ಬಿಟ್ಟು ಥಳಾಸದ ಮುಂಬಾಗಿಲಿಗೇ ಹೋಗಿ ನಿಲ್ಲುತ್ತಿದ್ದೆ. ಸುರೇಶ ಗಾಲಿಯನ್ನು, ಐಯ್ಯಣ್ಣನ ಸಮೇತ, ಜತನದಿಂದ ಥಳಾಸದ ಬಾಗಿಲನ್ನು ದಾಟಿಸಿ ಹೊರತಂದ ಬಳಿಕ ಅವನ ಒಟ್ಟಿಗೇ, ಎರಡು ಕೈಗಳಿಗೆ ಬದಲು ನಾಲ್ಕು ಕೈಗಳಾಗಿ, ಐಯ್ಯಣ್ಣನನ್ನು ಸುರಕ್ಷಿತವಾಗಿ ಆತನ ಡಬ್ಬಾದ ಅಂಗಡಿಗೆ ತಲುಪಿಸುತ್ತಿದ್ದ ಸಂಭ್ರಮದ ಆ ಕ್ಷಣಗಳು, ಪುನೀತಭಾವೋತ್ಪನ್ನದ ದೃಷ್ಟಿಕೋನದಿಂದ ಮುಂದೆ ಸ್ವಲ್ಪ ದೊಡ್ಡವನಾದ ಬಳಿಕ ನಾನು ಮಿಣಿಹಗ್ಗಗಳಿಗೆ ಕೈಹಚ್ಚಿ ಎಳೆದ ಊರ ಹನುಮಂತದೇವರ, ಕಲ್ಲಪ್ಪಸ್ವಾಮಿಯ, ಕಲ್ಲೆದೇವಪುರದ ಕಲ್ಲೇಶ್ವರನ, ನಾಯಕನಹಟ್ಟಿಯ ಕುಲದೈವ ತಿಪ್ಪೇರುದ್ರಸ್ವಾಮಿಯ ಜಾತ್ರಾ ಮಹೋತ್ಸವದ ತೇರುಗಳಷ್ಟೇ ಮಟ್ಟದ ಭಾವುಕತೆಯನ್ನು ನನ್ನಲ್ಲಿ ಹುಟ್ಟು ಹಾಕುತ್ತಿದ್ದದ್ದು ಯಾವ ಕಾರಣಕ್ಕಾಗಿ ಎನ್ನುವ ಸ್ಪಷ್ಟತೆ ನನ್ನಲ್ಲಿ ಮೂಡಲೇ ಇಲ್ಲ. ವರ್ಷದ ಎಲ್ಲಾ ದಿನಗಳೂ ಎಳೆಯಲು ಸಿಗುತ್ತಿದ್ದ ಐಯ್ಯಣ್ಣನ ತೇರಿನ ಅಳಿಲು ಸೇವೆಯ ಭಾಗ್ಯ ಇಂದಿಗೂ ನನ್ನ ಮನದಲ್ಲಿ ವಿಕಲಚೇತನರನ್ನು ಕಂಡಾಗ ಸೆಲೆಯೊಡೆಯುವ ಅನುಕಂಪದ ಚಿಲುಮೆಯ ನಿರಂತರ ನೀರಿನ ಮೂಲವಾಗಿರುವುದು ದಿಟ. ಹೈಸ್ಕೂಲು ಮೆಟ್ಟಿಲು ಹತ್ತಿದ ಮೇಲೆ ನಾನು ಕಾರಣಾಂತರಗಳಿಂದ ನಿಲ್ಲಿಸಿದ ನಿತ್ಯದ ಐಯ್ಯಣ್ಣನ ರಥಸೇವೆಯನ್ನು ನಾನು ಊರು ಬಿಡುವವರೆಗೂ ತನ್ನ ಚಿಕ್ಕಪ್ಪ ಈಶಣ್ಣಗೌಡನ ಮಕ್ಕಳ ಒಡಗೂಡಿ “ಭೇಷ್” ಎನ್ನುವಂತೆ ನಿಭಾಯಿಸಿದ ಸುರೇಶ ತನ್ನ ಚಿಕ್ಕಪ್ಪನಿಗೆ ತೋರಿದ ಸೇವಾಭಾವ ಸರಿಸಾಟಿಯಿಲ್ಲದ್ದು. ಬಹುಶಃ ಇಂದಿನ ಪೀಳಿಗೆಯ ಮಕ್ಕಳಲ್ಲಿ ಗೋಚರವಾಗದೇ ಉಳಿದು ಹೋಗುವಂತಹುದು. ನಮ್ಮ ಗುರುಹಿರಿಯರಿಗೆ ಏಕಾಗ್ರಚಿತ್ತದಿಂದ ಒಡಗೂಡಿ ಮಾಡಿದ ಈ ರೀತಿಯ ಕೈಂಕರ್ಯಗಳು ನಮ್ಮನ್ನು ಮುಂದೆ ಸದಾ ಕಾಯುವ ಶ್ರೀರಕ್ಷೆಗಳಾಗಿ ಉಳಿಯುತ್ತವೆ ಎನ್ನುವುದನ್ನು ನಾನು ಸ್ವಾನುಭವದಿಂದ ಗ್ರಹಿಸಿದ್ದೇನೆ. ದಿನನಿತ್ಯ ನಾವು ಪೂಜಿಸುವ ದೇವರ ಅನುಗ್ರಹ ನಮಗೆ ದೊರಕೀತು ಎಂದು ಖಾತ್ರಿಯಾಗಿ ಹೇಳಲು ಅಸಾಧ್ಯವಾದ ಈ ಹೊತ್ತು ಗುರುಹಿರಿಯರಿಗೆ ಮಾಡಿದ ಭಕ್ತಿಪೂರ್ವಕ ಕೈಂಕರ್ಯಗಳು ನಮಗೆ ಒಂದು ಸುಖೀಜೀವನವನ್ನು ಪ್ರಾಪ್ತ ಮಾಡಬಲ್ಲವು ಎನ್ನುವುದನ್ನು ಇಂತಹ ಸೇವೆಯನ್ನು ತನ್ನ ಬಾಲ್ಯಕಾಲದಲ್ಲಿ ಅಪ್ರತಿಮ ರೀತಿಯಲ್ಲಿ ಮೆರೆದ ಸುರೇಶನ ಇಂದಿನ ಜೀವನಗಾಥೆ ಕಟ್ಟಿಕೊಡಬಲ್ಲದು. ಹೇಗೆ ನಾವು ಮಾಡಿದ ಕುಕೃತ್ಯಗಳು ನಮ್ಮನ್ನು ಬೆನ್ನುಬಿಡದೇ ಕಾಡುತ್ತವೆಯೋ ಅದೇ ರೀತಿಯಲ್ಲಿ ನಾವು ಮಾಡಿದ ಸತ್ಕಾರ್ಯಗಳು ನಮ್ಮ ಬೆಂಬಿಡದೆ ಹರ್ಷದ ವರ್ಷವನ್ನು ಸುರಿಸುತ್ತವೆ ಎನ್ನುವುದೂ ಧರೆಯ ಹಗಲನ್ನು ಬೆಳಗುವುದು ದಿನಕರನೇ ಎನ್ನುವ ಮಾತಿನಷ್ಟೆ ಸತ್ಯವಾದ ಸಂಗತಿ.

ಐಯ್ಯಣ್ಣನ ಡಬ್ಬಾ ಅಂಗಡಿ ಕೇವಲ ಆತನಿಗೆ ಸಮಯ ಕಳೆಯಲು ಇದ್ದ ಒಂದು ಸಾಧನಮಾತ್ರವಾಗಿರದೆ ನನ್ನೂರಿನ ನವಯುವಕರ ಜೀವನಾಡಿಯಾಗಿತ್ತು ಎನ್ನುವುದೂ ನಿಸ್ಸಂಶಯ. ಎರಡು ಮೂರು ತಲೆಮಾರುಗಳ ಕಾಲಘಟ್ಟದ ನನ್ನೂರಿನ ಯಾವ ಗಂಡಸಿನ ಜೀವನವೂ ಐಯ್ಯಣ್ಣನ ಅಂಗಡಿಗೆ, ಅವನ ನವತಾರುಣ್ಯದ ಹೊಸ್ತಿಲಲ್ಲಿ, ಒಮ್ಮೆಯೂ ಭೇಟಿ ಕೊಡದೆ ಪೂರ್ಣವಾಗಿದೆ ಎಂದು ಒಪ್ಪಿಕೊಳ್ಳಲು ನಾನು ತಯಾರಿಲ್ಲ. ಹೇಗೆ “ಊರಿಗೆ ಬಂದವಳು ನೀರಿಗೆ ಬಾರದೇ ಇರುವುದಿಲ್ಲವೋ” ಹಾಗೆಯೇ ಮೀಸೆ ಚಿಗುರಿದ ಹೊತ್ತು ಐಯ್ಯಣ್ಣನ ಡಬ್ಬಾ ಅಂಗಡಿಗೆ ಭೇಟಿಕೊಡದ ಯುವಕನೇ ನಮ್ಮೂರಿನಲ್ಲಿ ಇರಲಿಲ್ಲ ಎಂದು ಎದೆತಟ್ಟಿ ಧಾರಾಳವಾಗಿ ನುಡಿಯಬಹುದು. ಐಯ್ಯಣ್ಣ ಕುಳಿತು, ಮಗ್ಗಲು ಬದಲಾಯಿಸಲೂ ಹೆಣಗಾಡುತ್ತಿದ್ದ ಇಂತಹ ಪುಟ್ಟ ಅಂಗಡಿ ಅದು ಹೇಗೆ ಊರಿನ ನವಯುವಕರ ಆಸಕ್ತಿಯ ಕೇಂದ್ರವಾಗಿ ಮಾರ್ಪಟ್ಟಿತ್ತು ಎನ್ನುವುದು ಆಳವಾದ ಸಂಶೋಧನೆಯ ವ್ಯಾಪ್ತಿಗೆ ಬರುವ ವಿಷಯವೇ ಆದರೂ ನನ್ನ ತಿಳುವಳಿಕೆಗೆ ನಿಲುಕಿದ ಮಟ್ಟಿಗೆ ಐಯ್ಯಣ್ಣ ಒಬ್ಬ ಈಡುಜೋಡಿಲ್ಲದ ಮನಃಶಾಸ್ತ್ರಜ್ಞ, ನವಯುವಕರ ಮನದಾಳವನ್ನು ಹೊಕ್ಕು ಐಯ್ಯಣ್ಣ ಉಂಟುಮಾಡಿದಷ್ಟು ವಿಪ್ಲವವನ್ನು ಬೇರೆ ಯಾರಾದರೂ ಮಾಡುವ ವಿಷಯ ದೂರದ ಮಾತಷ್ಟೇ ಅಲ್ಲ, ಯೋಚಿಸಲೂ ದುಸ್ತರವಾದದ್ದು. ಅಂಗಡಿಯ ಸುತ್ತಲೂ, ಬೆಲ್ಲಕ್ಕೆ ಮುತ್ತುವ ನೊಣಗಳ ಹಾಗೆ, ಗುಂಪಾಗಿ ಸುತ್ತುವರೆದು ನೆರೆಯುತ್ತಿದ್ದ ಯಾವತ್ತೂ ಯುವಕರ ಗುಂಪು ಅಲ್ಲಿ ಭ್ರಮಾಧೀನ ಮಾಯಾಲೋಕವೊಂದನ್ನೇ ಅನಾಯಾಸವಾಗಿ ಸೃಜಿಸಿಬಿಡುತ್ತಿತ್ತು. ಐಯ್ಯಣ್ಣನ ಅಂಗಡಿಯ ಯುವಕರ ಗುಂಪಿನಲ್ಲಿ ಯಾರಾದರೂ ಹೊಸದಾಗಿ ಶಾಮೀಲಾದ ಎಂದರೆ ಆತ ತನ್ನ ಬಾಲ್ಯಘಟ್ಟವನ್ನು ದಾಟಿ ಯೌವನದ ಹೊಸ್ತಿಲನ್ನು ಮೆಟ್ಟಿದ್ದಾನೆ ಎಂದೇ ಅರ್ಥೈಸಬೇಕಿತ್ತು. ನನ್ನ ಸೋದರ ಸಂಬಂಧಿ ಮಹಾಂತೇಶ ಯೌವನಕ್ಕೆ ಕಾಲಿಟ್ಟ ವಿಷಯವನ್ನು ನಾನು ನನ್ನ ಅವ್ವನಿಗೆ ಅರುಹಿದ್ದು ಒಂದು ದಿನ ಮಹಾಂತೇಶನನ್ನು ಈ ಗುಂಪಿನ ಭಾಗವಾಗಿ ಕಂಡ ಬಳಿಕವೇ. ಮಗಳ ಮಗನಾದ ಮಹಾಂತೇಶನ ಈ ಕೃತ್ಯ ನನ್ನ ಅವ್ವನ ಕಳವಳಕ್ಕೆ ಕಾರಣವಾದರೂ ಊರ ಯಾವೊಬ್ಬ ಯುವಕನನ್ನೂ ಬಿಡದ ಐಯ್ಯಣ್ಣನ ಅಂಗಡಿಯ ಮಾಯಾಜಾಲಕ್ಕೆ ಮಹಾಂತೇಶ ಬೀಳದೇ ಹೋಗುವ ಪ್ರಮೇಯವೇ ಇಲ್ಲ ಎನ್ನುವುದು ಲೋಕಜ್ಞಾನವನ್ನು ಧಾರಾಳವಾಗಿ ಹೊಂದಿದ್ದ ಅವ್ವನಿಗೆ ಅನಿತರಲ್ಲಿಯೆ ಅರಿವಾಯಿತು. “ಇಪ್ಪತೈದು ವರ್ಷಗಳ ವಯಸ್ಸಿನವರೆಗೆ ಕಮ್ಯುನಿಸ್ಟ್ ಆಗದೇ ಉಳಿದ ಯುವಕ ಮತ್ತು ಇಪ್ಪತೈದು ವರ್ಷಗಳ ವಯಸ್ಸಿನ ಬಳಿಕವೂ ಕಮ್ಯುನಿಸ್ಟ್ ಆಗಿಯೇ ಉಳಿಯುವ ಯುವಕ ನಾರ್ಮಲ್ ಅಲ್ಲ” ಎನ್ನುವ ಒಂದು ಜನಪ್ರಿಯ ನುಡಿಗಟ್ಟಿನಂತೆ,

 

ಮಹಾಂತೇಶನೇನಾದರೂ ಒಂದು ವೇಳೆ ಐಯ್ಯಣ್ಣನ ಅಂಗಡಿಗೆ ಎಡತಾಕದೇ ಹೋಗಿದ್ದಲ್ಲಿ ಅವನು ನಾರ್ಮಲ್ ಇರಲಿಕ್ಕಿಲ್ಲ ಎನ್ನುವ ಭೀತಿಯ ಅರಿವೂ ಇದ್ದ ಅವ್ವ ಇದನ್ನು ನೋಡಿಯೂ ನೋಡದ ಹಾಗೆ ಸುಮ್ಮನಿದ್ದಳು. “ಏನೋ ಮಹಾಂತೇಶ, ಬಸ್ ಸ್ಟ್ಯಾಂಡ್ ಗೆ ಬಂದೂ ನಮ್ಮ ಮನೆಗೆ ಬರದೇ ಹೋಗುತ್ತೀಯಲ್ಲ” ಎಂದು ಮಹಾಂತೇಶನನ್ನು ಆಗಾಗ ಅಪ್ರತ್ಯಕ್ಷ ರೂಪದಲ್ಲಿ ಕಾಲು ಎಳೆಯುತ್ತಿದ್ದ ಅವ್ವನ ಬುದ್ಧಿವಂತಿಕೆಗೆ ನಾನು ತಲೆದೂಗಿದ್ದೂ ಉಂಟು.

ಚಿಗುರು ಮೀಸೆ ಮೂಡುವ ಹೊತ್ತು ನವಯುವಕರಲ್ಲಿ, ಅದರಲ್ಲೂ ಹಳ್ಳಿಗಾಡಿನ ಯುವಜನತೆಯಲ್ಲಿ ಚಟಗಳು ಕುಡಿವೊಡೆಯುವುದು ಸರ್ವೇಸಾಮಾನ್ಯವಾದ ಸಂಗತಿ. ನಮ್ಮೂರು ಇರುವುದೂ ಇದೇ ಭೂಮಿಯ ಮೇಲೆ ತಾನೇ? ಹಾಗಾಗಿ ನನ್ನೂರಿನ ಚಿಗುರುಮೀಸೆ ಹೊತ್ತ ಪೋರರಿಗೂ ಕೆಲ ಚಟ ಮತ್ತು ಕೆಟ್ಟ ಅಭ್ಯಾಸಗಳು ಅಂಟಿಕೊಳ್ಳುವ ಕಾಲಘಟ್ಟದಲ್ಲಿ ಆಪತ್ಭಾಂದವನಂತೆ ನೆನಪಾಗುತ್ತಿದ್ದದ್ದು ಮತ್ತು ನೆರವಿಗೆ ಬರುತ್ತಿದ್ದದ್ದೇ ಐಯ್ಯಣ್ಣನ ಡಬ್ಬಾ ಅಂಗಡಿ. ತಾರುಣ್ಯದ ಹೊಸ್ತಿಲಲ್ಲಿ ಕಾಡುವ ಎಲ್ಲಾ ಚಟಗಳಲ್ಲಿ ಸರ್ವಪ್ರಥಮ ಚಟವಾಗಿ ಹಳ್ಳಿಗಾಡಿನ ಯುವಕರನ್ನು ಬಿಡದೆ ಕಾಡುವ ಕುಖ್ಯಾತಿ ಇರುವದು ಬೀಡಿ, ಸಿಗರೇಟು ಸೇದುವ ಚಟಕ್ಕೇ. ಬೀಡಿ, ಸಿಗರೇಟುಗಳನ್ನ ಸೇದುತ್ತಾ ಬಾಯಿ, ಮೂಗು, ಕಿವಿಗಳ (?) ಮೂಲಕ ವಿಚಿತ್ರ ಆಕಾರದ ಹೊಗೆಯ ವೃತ್ತಾಕಾರದ ಉಂಗುರಗಳನ್ನು ಹಾರಿ ಬಿಡುವುದನ್ನು ಬಾಲ್ಯದಿಂದಲೆ ವೀಕ್ಷಿಸುತ್ತಾ ಬೆಳೆಯುವ ಊರ ಬಾಲಕರ ಮನದಲ್ಲಿ ಈ ಚಟ ಅದೆಂತಹುದ್ದೋ ಕಲ್ಪನೆಯ, ಲಂಗುಲಗಾಮಿಲ್ಲದ ಹುಚ್ಚು ಕುದುರೆಯನ್ನು ಓಡಿಸಿಬಿಡುತ್ತದೆ. ತಾವೂ, ಮುಂದೊಮ್ಮೆ, ಇದೇ ರೀತಿ ಬೀಡಿ, ಸಿಗರೇಟು ಸೇದುತ್ತಾ ದಟ್ಟ ಧೂಮ್ರವನ್ನು ಹೊರಹಾಕಬೇಕು ಎನ್ನುವ ಇಚ್ಚೆಯೊಂದು ಅವ್ಯಕ್ತವಾಗಿ ಮನದ ಮೂಲೆಯಲ್ಲಿ ಬೆಚ್ಚಗೆ ಹುದುಗಿ ಕುಳಿತಿರುತ್ತದೆ. ಹಾಗಾಗಿ ಬಾಲ್ಯವನ್ನು ದಾಟಿದ ವಯಸ್ಸು ಇಂತಹ ಚಟಗಳ ಮೂರ್ತರೂಪದ ದರ್ಶನಕ್ಕೆ ಮೊದಲಿಡುತ್ತದೆ. ಇಂತಹುದೇ ಚಟದಿಂದ ವ್ಯಾಧಿಗ್ರಸ್ತರಾದ ಯುವಜನ ಐಯ್ಯಣ್ಣನ ಡಬ್ಬಾ ಅಂಗಡಿಗೆ ಎಡತಾಕಿ ತಮ್ಮ ಅಂತರಂಗದ ಮಂಡಿಗೆಯಂತಹ ಚಟಗಳಿಗೆ ಅಭಿವ್ಯಕ್ತಿ ಕೊಡುವ ಮಾರ್ಗಗಳ ತೀವ್ರ ತಲಾಷೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಐಯ್ಯಣ್ಣ ಬಹಳ ಸೂಕ್ಷ್ಮಸ್ವಭಾವದ, ಯಾರಿಗೂ ಕೇಡನ್ನು ಬಯಸದ ನಿಷ್ಕಲ್ಮಶ, ನಿಷ್ಕಪಟ, ಮಿಡಿಯುವ ಹೃದಯವಂತ ಜೀವಿ. ಈ ಜನ್ಮದಲ್ಲಿ ತನಗೆ ಉಂಟಾಗಿರುವ ಅಂಗನ್ಯೂನ್ಯತೆಗಳು ಪೂರ್ವಜನ್ಮದ ತನ್ನ ಕುಕೃತ್ಯಗಳ ಕಾರಣವರ್ಷದಿಂದಲೇ ಸಂಭವಿಸಿವೆ ಎನ್ನುವುದನ್ನು ದೃಢವಾಗಿ ನಂಬಿದವನು. ಈ ಜನ್ಮವನ್ನಾದರೂ ಪರಶಕ್ತಿ ಮೆಚ್ಚುವ ಹಾಗೆ ವ್ಯಥಿಸಿ, ಮುಂಬರುವ ಜನ್ಮದಲ್ಲಿ ಸದೃಢವಾದ ಕಾಲುಗಳಿಂದ ಒಡಗೂಡಿ ಜನಸಾಮಾನ್ಯರಂತೆ ಜೀವಿಸಬೇಕು ಎನ್ನುವ ಕನಸನ್ನು ಅಂತಹ ಬ್ಯುಸಿ ಇರದ ಹಗಲುವೇಳೆಯಲ್ಲಿಯೂ ಕಂಡವನು. ಹೀಗಾಗಿ ಕಂಡವರ ಮನೆಯ ಮಕ್ಕಳು ತನ್ನ ಅಂಗಡಿಗೆ ಬಂದು ಬೀಡಿ, ಸಿಗರೇಟು ಖರೀದಿಸಿ ಧೂಮಪಾನದಂತಹ ಕೆಟ್ಟಚಟಗಳ ದಾಸರಾಗುವುದು ಐಯ್ಯಣ್ಣನಿಗೆ ಸ್ವಲ್ಪವೂ ರುಚಿಸದ ಸಂಗತಿಯಾಗಿತ್ತು. ಐಯ್ಯಣ್ಣ ಒಂದೇ ಸ್ಥಳದಲ್ಲಿ ದಿನಪೂರ್ತಿ ಕುಳಿತರೂ ಹೇರಳವಾದ ಲೋಕಜ್ಞಾನವನ್ನು ಸಂಪಾಸಿದಾತ. ಅದು ಹೇಗೆ ಇಂತಹ ಅಂಗವಿಕಲ ವ್ಯಕ್ತಿ, ಸರ್ವಾಂಗಸಂಪನ್ನರಾದ ಅನೇಕ ಊರ ಮಂದಿಯನ್ನು ನಿವಾಳಿಸಿ ತೆಗೆದು ಒಗೆಯುವ ಮಟ್ಟಿಗೆ ತನ್ನ ವ್ಯವಹಾರಜ್ಞಾನ ಮತ್ತು ಲೋಕಜ್ಞಾನವನ್ನು ವೃದ್ಧಿಸಿಕೊಂಡಿದ್ದ ಎನ್ನುವುದು ನನ್ನ ಅರಿವಿಗೆ ಯಾವತ್ತೂ ನಿಲುಕದ ಸಂಗತಿಯಾಗಿಯೇ ಉಳಿದಿದೆ. ಮನೆಯಲ್ಲಿ, ತಕ್ಕಮಟ್ಟಿಗೆ ಅಂದರೆ ಕನ್ನಡ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಹಾಗೂ ಅಂಕಗಣಿತವನ್ನು ತನ್ನ ವ್ಯವಹಾರ ನಡೆಸುವ ಮಟ್ಟಕ್ಕಷ್ಟೆ ಕಲಿತಿದ್ದ ಐಯ್ಯಣ್ಣ, “ಓದು ಒಕ್ಕಾಲು, ಬುದ್ದಿ ಮುಕ್ಕಾಲು” ಎನ್ನುವ ಗಾದೆಗೆ ಹೇಳಿಮಾಡಿಸಿದ ಹಾಗಿದ್ದ. ಬೀಡಿ, ಸಿಗರೇಟು ಕೇಳಿಕೊಂಡು ಬಂದ ಯುವಕ ಪಡೆಯನ್ನು ಅಟ್ಟಿ ಓಡಿಸಿದಲ್ಲಿ ಅವರು ಊರ ಬಾಕಿ ಅಂಗಡಿಗಳಿಗೆ ಹೋಗಿ ಅಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ತಂಬಾಕುಭರಿತ ಧೂಮ್ರ ಸೇವನೆಯ ವಸ್ತುಗಳನ್ನು ಖರೀದಿಸಿ ತಮ್ಮ ಚಟಗಳನ್ನು ಅವ್ಯಾಹತವಾಗಿ ಬೆಳೆಸಿಕೊಳ್ಳುತ್ತಾರೆ ಎನ್ನುವುದು ಐಯ್ಯಣ್ಣನಿಗೆ ತಿಳಿಯದ ವಿಷಯವೇನಲ್ಲ. ಇದೇ ಉದ್ದೇಶದಿಂದ ಬಂದ ತರುಣ ಗಿರಾಕಿಗಳಿಗೆ ಅವರನ್ನು ನಿರಾಸೆಗೊಳಿಸದ ರೀತಿಯಲ್ಲಿ, ಅವರ ಮೇಲೆ ಒಂದು ರೀತಿಯ ಹಿಡಿತ ಮತ್ತು ಸ್ವಯಂನಿಯಂತ್ರಣವನ್ನು ಹೇರುವ ತಂತ್ರಗಾರಿಕೆಯನ್ನು ಐಯ್ಯಣ್ಣ ಬಳಸುತ್ತಿದ್ದ. ಹೊಸದಾಗಿ ಬೀಡಿ, ಸಿಗರೇಟು ಸೇವಿಸಲು ಮೊದಲಿಡುವ ತರುಣರಿಗೆ ದಿನಕ್ಕೆ ಒಂದರಂತೆ ಮಾತ್ರ ಬೀಡಿ, ಸಿಗರೇಟು ನೀಡುತ್ತಿದ್ದ ಐಯ್ಯಣ್ಣ, ತಿಂಗಳುಗಳು ಉರುಳಿದ ಹಾಗೆ ನಿಧಾನಗತಿಯಲ್ಲಿ ಅವರ ದಿನವಹಿ ಕೋಟಾವನ್ನು ಹೆಚ್ಚಿಸುತ್ತಾ ಸಾಗುತ್ತಿದ್ದ. ಹಣದ ವಿಷಯದಲ್ಲಿ ಬಹಳ ಉದಾರಿತನವನ್ನು ಪ್ರದರ್ಶಿಸುತ್ತಿದ್ದ ಐಯ್ಯಣ್ಣ ಹಣವನ್ನು ನೀಡಿಯೇ ಬೀಡಿ, ಸಿಗರೇಟು ಪಡೆಯಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದರೆ ಎಲ್ಲಿ ಯುವಕರು ತಮ್ಮ ಹೊಲ, ಮನೆಗಳಲ್ಲಿ ಇರುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ತಮ್ಮ ಚಟಗಳನ್ನು ಪೋಷಿಸುವ ಮತ್ತೊಂದು ವಿನಾಶಕಾರಿ ಮತ್ತು ಆತ್ಮಘಾತುಕ ದುಶ್ಚಟಕ್ಕೆ ಬೀಳುತ್ತಾರೋ ಎನ್ನುವ ಕಾಳಜಿಯಿಂದ ದುಡ್ಡಿಲ್ಲದ ಹುಡುಗರಿಗೆ ಉದ್ರೆ ಕೊಡುವ ಮೂಲಕ ಅವರು ಆರ್ಥಿಕ ಹೊರೆಯಿಂದ ಕಂಗಾಲಾಗದ ಹಾಗೆ ನೋಡಿಕೊಳ್ಳುತ್ತಿದ್ದ. ತನ್ನ ಬಳಿ ಇದ್ದ, ಬಹಳ ಹಳೆಯ ಕಾಲದ್ದು ಎಂದು ತೋರುತ್ತಿದ್ದ, ಒಂದು ದಪ್ಪನೆಯ, ಇನ್ನೂರು ಹಾಳೆಗಳನ್ನೂ ಮೀರಿದಂತೆ ಇದ್ದ ನೋಟ್ ಬುಕ್ ನಲ್ಲಿ ಊರಿನ ಮೀಸೆ ಚಿಗುರಿದ ಯುವಪಡೆಯ ಜಾತಕಗಳನ್ನು ಪೇಜಿಗೊಂದರಂತೆ ಅಡಕವಾಗಿಸಿಟ್ಟಿದ್ದ ಐಯ್ಯಣ್ಣ. ಇದೆಲ್ಲವನ್ನೂ ಮೀರಿದಂತೆ ಯುವಕರನ್ನು ಐಯ್ಯಣ್ಣನ ಅದೊಂದು ರಾಜಧರ್ಮ ಮತ್ತೆ ಮತ್ತೆ ಕೈಬೀಸಿ ಕರೆಯುತ್ತಿತ್ತು. ಊರಿನ ಯುವಕರ ಪೂರ್ವಾಪರಗಳ ಅಷ್ಟೂ ವಿವರಗಳನ್ನು ತಲೆಯಲ್ಲಿ ಒತ್ತಿ ಒತ್ತಿ ತುಂಬಿಕೊಂಡಿದ್ದ ಐಯ್ಯಣ್ಣ ಎಂದೂ, ಯಾವ ಸಂದರ್ಭದಲ್ಲಿಯೂ, ಯಾವುದೇ ಒಬ್ಬ ಯುವಕನ ಚಟದ ಗುಟ್ಟನ್ನೂ ಮೂರನೇ ವ್ಯಕ್ತಿಯ ಮುಂದೆ ರಟ್ಟು ಮಾಡಿದವನೇ ಅಲ್ಲ. ತಮ್ಮ ಮಗ ಬೀಡಿ ಸೇದುತ್ತಾನೆ ಎನ್ನುವ ಗುಮಾನಿ ಅಥವಾ ಹಾರಿಕೆ ಸುದ್ದಿಯ ಶಿಕಾರಿಯಾದ ಪೋಷಕರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಐಯ್ಯಣ್ಣನನ್ನು ಭೇಟಿಯಾಗಿ ವಿಚಾರಿಸಿದಲ್ಲಿ, ಆತನಿಂದ ಯಾವತ್ತೂ ಖಡಾಖಂಡಿತವಾದ “ಇಲ್ಲ, ನಿಮ್ಮ ಮಗ ನನ್ನ ಬಳಿ ಯಾವತ್ತೂ ಬೀಡಿ, ಸಿಗರೇಟು ಕೇಳಿಕೊಂಡು ಬಂದವನೇ ಅಲ್ಲ” ಎನ್ನುವ ಸಮಜಾಯಿಷಿಯೇ ಹೊರಬೀಳುತ್ತಿದ್ದದ್ದು. ಇದರಿಂದ ಅಲ್ಪಸ್ವಲ್ಪ ಸಮಾಧಾನಗೊಂಡವರಾಗಿ ಕಂಡುಬರುತ್ತಿದ್ದ ಪೋಷಕರು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದರು. ಆದರೆ ಇಂತಹ ಗೊಂದಲಗಳಿಗೆ ಎಡೆಮಾಡಿಕೊಟ್ಟ ಯುವಕನಿಗೆ ಅಲ್ಲಿಂದ ಮುಂದೆ ಐಯ್ಯಣ್ಣನ ಅಂಗಡಿಯ ಭವಿಷ್ಯದ ಸೇವೆ ಶಾಶ್ವತರೂಪದಲ್ಲಿ ಬಂದಾಗುತ್ತಿತ್ತು. ಈ ಹೊತ್ತು ನನ್ನ ಈ ಲೇಖನವನ್ನು ಓದುತ್ತಿರುವ ಯಾರಾದರೂ ಆ ತಲೆಮಾರಿನ ಮಿತ್ರರಿಗೆ ತಾವು ಐಯ್ಯಣ್ಣನನ್ನು ಕಾಡಿ ಬೇಡಿ ಪಡೆದು ಸೇದಿದ ತಮ್ಮ ಜೀವನದ ಮೊದಲ ಗಣೇಶ ಬೀಡಿಯೋ, ಮೂವತ್ತು ನಂಬರು ಮಾರ್ಕಿನ ಬೀಡಿಯೋ, ಬರ್ಕ್ ಲಿ ಸಿಗರೇಟೋ ನೆನಪಾಗಿ ತಡೆಯಲಾರದ ರೀತಿಯ ಕೆಮ್ಮು ಒತ್ತರಿಸಿ ಬಂದಲ್ಲಿ ಅದಕ್ಕೆ ನಾನು ಜವಾಬ್ದಾರನಲ್ಲ.

 

ಐಯ್ಯಣ್ಣನ ಡಬ್ಬಾ ಅಂಗಡಿಗೆ ಮತ್ತೊಂದು ದುರ್ಲಭ ಆಯಾಮವೂ ಸಿದ್ಧಿಸಿತ್ತು. ಕೇವಲ ಪಡ್ಡೆಹುಡುಗರ ನಿಯಂತ್ರಣ ಮೀರದ ಹೊಗೆಸೇವನೆಯ “ಅಡ್ಡ” ಮಾತ್ರವಾಗದ ಈ ಡಬ್ಬಾ ಅಂಗಡಿ ಊರ ಹಲವಾರು ಸಂಭಾವಿತ ವ್ಯಕ್ತಿಗಳ ಹೊಗೆ ಸೇವನೆಯನ್ನೂ ಗುಟ್ಟಾಗಿ ಪೋಷಿಸುವ ಕೆಲಸವನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿತ್ತು. “ಚೆಂಬು” ತೆಗೆದುಕೊಂಡು ಹೋಗುವ ಬೆಳಗಿನ ಮತ್ತು ರಾತ್ರಿಯ ವೇಳೆಗಳಲ್ಲಿ ಅತ್ತಿತ್ತ ನೋಡುತ್ತಾ, ಯಾರೂ ತಮ್ಮನ್ನು ಗಮನಿಸುತ್ತಿಲ್ಲ ಎಂದು ಖಾತ್ರಿಯಾದ ಬಳಿಕ ಅವಸರವಸರವಾಗಿ ಐಯ್ಯಣ್ಣನ ಅಂಗಡಿಯ ಬಳಿ ಸಾರಿ ಬೀಡಿಕಟ್ಟನ್ನೋ, ಸಿಗರೇಟು ಪ್ಯಾಕನ್ನೋ, ಬೆಂಕಿಪಟ್ಟಣವನ್ನೋ ಖರೀದಿಸಿ ಕೊಂಡೊಯ್ಯುತ್ತಿದ್ದ ಊರ ಸಭ್ಯಜನತೆಯ ಸಂಖ್ಯೆಯೂ ಕಡಿಮೆಯದೇನಾಗಿರಲಿಲ್ಲ. “ಇವರೂ ಬೀಡಿ ಸೇದುತ್ತಾರೆಯೇ?” ಎನ್ನುವ ಆಶ್ಚರ್ಯಗಳನ್ನ ಅನೇಕ ವ್ಯಕ್ತಿಗಳು ಇಂತಹ ಸಂದರ್ಭದಲ್ಲಿ ಹುಟ್ಟು ಹಾಕುತ್ತಿದ್ದರೂ “ಆತನಿಗೆ ಬೀಡಿ ಸೇದದೆ ಮಲವಿಸರ್ಜನೆ ಆಗುವುದಿಲ್ಲ” ಎನ್ನುವ ಸಕಾರಣವನ್ನೂ ನೀಡುತ್ತಿದ್ದ ಐಯ್ಯಣ್ಣ, “ಆತ ಈ ಹೊತ್ತಿನಲ್ಲಷ್ಟೇ ಬೀಡಿ ಸೇದುತ್ತಾನೆ, ಬೇರೆ ಹೊತ್ತಿನಲ್ಲಿ ಬೀಡಿಯನ್ನು ಕೈಯಲ್ಲಿಯೂ ಮುಟ್ಟುವುದಿಲ್ಲ” ಎಂದು ಸಂಬಂಧಿಸಿದ ವ್ಯಕ್ತಿಯ ಸನ್ನಡತೆಯ ದೃಢೀಕರಣ ಪ್ರಮಾಣಪತ್ರವನ್ನೂ ಜೊತೆಗೇ ವಿತರಿಸಿಬಿಡುತ್ತಿದ್ದ. ಕೆಲವೊಮ್ಮೆ, ಬಹಳ ಅಪರೂಪವೆನ್ನುವಂತೆ ಅಪ್ಪ, ಮಗ ಇಬ್ಬರೂ ಐಯ್ಯಣ್ಣನ ಡಬ್ಬಾ ಅಂಗಡಿಯ ಖಾತೆದಾರಿಗಳಾಗಿದ್ದೂ ಉಂಟು. ಇದೇನೂ ಅಂತಹ ಘನವಿಷಯವಲ್ಲದೇ ಹೋದಂತೆ ಮೇಲು ನೋಟಕ್ಕೆ ತೋರಿ ಬಂದರೂ ಬಾಕಿ ಲೆಕ್ಕ ಹಚ್ಚುವ ಸಂದರ್ಭದಲ್ಲಿ ಐಯ್ಯಣ್ಣ ಮಾಡುತ್ತಿದ್ದ ಕೆಲ ಎಡವಟ್ಟುಗಳ ಕಾರಣ “ನಾನು ಇಷ್ಟು ಬೀಡಿ ತೆಗೆದುಕೊಂಡೇ ಇಲ್ಲ” ಎಂದು ಮಗ ದೊಡ್ಡರಂಪಾಟವನ್ನು ಮಾಡಿದರೆ ತನ್ನ ತಪ್ಪಿನ ಅರಿವಾದ ಐಯ್ಯಣ್ಣ ಮಗನಿಂದ ಬರಬೇಕಾದ ಹೆಚ್ಚುವರಿ ಹಣವನ್ನು ತಂದೆಯಿಂದ ಪೀಕಿದ್ದೂ ಉಂಟು. ಪುಡಿಗಾಸಿಗಾಗಿ ಹೆಚ್ಚಿನ ವಾಗ್ವಾದಗಳಿಗೆ ಇಳಿದು ತಮ್ಮ ಹೆಸರನ್ನು ಹಾಳುಗೆಡವಿಕೊಳ್ಳಲು ಇಚ್ಛಿಸದ ಅಪ್ಪಂದಿರು ಮಕ್ಕಳು ಮಾಡಿದ ಸಾಲದ ಹಣವನ್ನು ಈ ರೂಪದಲ್ಲಿಯೂ ತೀರಿಸಿದ್ದು ಮಾತ್ರ ನನ್ನಲ್ಲಿ ತಡೆಯಲಾರದ ನಗುವನ್ನು ಉಕ್ಕಿಸಿದ್ದೂ ಇದೆ. ನಮ್ಮ ಮನೆಯ ಮುಂದಿನ ಹಾಲಿನ ಎಡಭಾಗದ ಕಿಟಕಿಯಲ್ಲಿ, ರಜಾದಿನಗಳ ವೇಳೆ ಗಂಟೆಗಟ್ಟಲೆ ಕುಳಿತು, ತಂದೆಮಕ್ಕಳ ಇಂತಹ ವ್ಯವಹಾರಗಳಿಗೆ ಆಗೊಮ್ಮೆ, ಈಗೊಮ್ಮೆ ಸಾಕ್ಷಿಯಾಗುತ್ತಿದ್ದ ನಾನು ನನ್ನ ರಜಾದಿನಗಳನ್ನು ಹೇಗೆ ಕಳೆದೆ ಎನ್ನುವುದೇ ತಿಳಿಯುತ್ತಿರಲಿಲ್ಲ.

ಐಯ್ಯಣ್ಣನ ಡಬ್ಬಾ ಅಂಗಡಿ ಊರಿನ ಗಾಳಿಸುದ್ದಿಗಳ ಕೇಂದ್ರಬಿಂದುವಾಗಿಯೂ ಬಹಳ ಯಶಸ್ವಿ ಎನ್ನುವ ತರಹದ ಕಾರ್ಯ ನಿರ್ವಹಿಸಿದ್ದು ನನ್ನ ನೆನಪಿನಲ್ಲಿದೆ. ಗಿರಾಕಿಗಳ ಒಡನೆ ಅಗತ್ಯಕ್ಕಿಂತ ಹೆಚ್ಚಿನ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ ಐಯ್ಯಣ್ಣನ ಮುಂದೆ ತಮ್ಮ ಮನದಲ್ಲಿ ಗೋಪ್ಯವಾಗಿ ಉಳಿದಿದ್ದ ಎಷ್ಟೋ ಖಾಸಗಿ ವಿಷಯಗಳನ್ನು ಊರಮಂದಿ ಅರಿತೋ, ಅರಿಯದೆಯೋ ಕಾರುತ್ತಿದ್ದದ್ದೂ ನನಗೆ ಚೆನ್ನಾಗಿ ನೆನಪಿದೆ. ಈ ಎಲ್ಲಾ ವಿಷಯಗಳನ್ನೂ ತುಂಬಾ ಆಸಕ್ತಿಯಿಂದ ಕೇಳಿಸಿಕೊಳ್ಳುವಂತೆ ನಾಟಕವಾಡುತ್ತಿದ್ದ ಐಯ್ಯಣ್ಣ ಅಸಲಿಗೆ ಎಷ್ಟೋ ವಿಷಯಗಳನ್ನು ಎಡಕಿವಿಯಿಂದ ಕೇಳಿ, ಬಲಕಿವಿಯಿಂದ ಬಿಟ್ಟು ಬಿಡುತ್ತಿದ್ದ. ಈ ಪ್ರಸಂಗಗಳು ಆತನಿಗೆ ಸಮಯ ಕಳೆಯುವ ಸಾಧನಗಳು ಮಾತ್ರವಾಗಿದ್ದವೇ ಹೊರತಾಗಿ ಆ ಸುದ್ದಿಗಳ ಆಳಕ್ಕೆ ಇಳಿದು ಅವುಗಳನ್ನು ಪರಕಿಸುವ ಅಗತ್ಯ ಐಯ್ಯಣ್ಣನಿಗೆ ಸುತಾರಾಂ ಇರದೇ ಹೋದರೂ ಅಲ್ಲಿ ಉಪಸ್ಥಿತರಿದ್ದ ಉಳಿದ ಗಿರಾಕಿಗಳು, ಜನಸ್ತೋಮ ಈ ಸುದ್ದಿಗಳನ್ನು ತಮಗೆ ತೋಚಿದ ಹಾಗೆ ಅರ್ಥೈಸಿಕೊಂಡು, ಅವುಗಳನ್ನು ಪುಷ್ಕಳವಾದ ರೆಕ್ಕೆಪುಕ್ಕಗಳೊಂದಿಗೆ ಪೋಷಿಸಿ, ಹಾರಾಟಕ್ಕೆಂದು ತೇಲಿ ಬಿಡುತ್ತಿದ್ದರು. “ಈ ವಿಷಯವನ್ನು ನೀವು ಎಲ್ಲಿ ಕೇಳಿದಿರಿ?” ಎಂದು ಯಾರನ್ನಾದರೂ ಪ್ರಶ್ನೆ ಮಾಡಿದಲ್ಲಿ ಬರುವ ಉತ್ತರ “ಐಯ್ಯಣ್ಣನ ಡಬ್ಬಾ ಅಂಗಡಿ ಬಳಿ” ಎಂದಾದರೆ ಆ ಗಾಳಿಸುದ್ದಿಗೆ “ನಂಬಲರ್ಹವಾದದ್ದು” ಎನ್ನುವ ಗುಣಮಟ್ಟದ ಒಂದು ಮೊಹರು ಪ್ರಾಪ್ತವಾಗುತ್ತಿತ್ತು. ಊರ ಸಾಮಾಜಿಕವಲಯದಲ್ಲಿ ಈ ಮಟ್ಟಿಗಿನ ನಂಬಿಕೆಗೆ ಅರ್ಹವಾದ ಐಯ್ಯಣ್ಣನ ಡಬ್ಬಾ ಅಂಗಡಿಯ ಮುಂದಿನ ಚಪ್ಪರದ ಕೆಳಗೆ ಹುಟ್ಟಿ ಹರಿದಾಡುವ ಗಾಳಿಸುದ್ದಿಗಳು, ಊರ ಉದ್ದಗಲಕ್ಕೆ ಹಾರುತ್ತಾ ಹೋಗುವ ವಿದ್ಯಮಾನವೊಂದರ ಉಗಮದ ಗಂಗೋತ್ರಿಯಾಗಿತ್ತು.

ನಾನು ಕಂಡ ಹಾಗೆ, ಐಯ್ಯಣ್ಣ ಎಂದೂ ತನ್ನ ಸ್ಥಿತಿಗೆ ಮರುಕಪಟ್ಟವನಂತೆ ಕಂಡು ಬಂದವನೇ ಅಲ್ಲ. ಇಡೀ ಜೀವನದ ಚೈತ್ರಯಾತ್ರೆಯನ್ನು ತಾನು ಕುಳಿತ ಎರಡು ಚದರ ಆಡಿ ಜಾಗದಲ್ಲಿ ಸವೆಸಬೇಕಾಗಿ ಬಂದ ಐಯ್ಯಣ್ಣ ಅದಕ್ಕಾಗಿ ಎಂದೂ ತಾನು ನಂಬಿದ ದೈವಗಳನ್ನ ದೂಷಿಸಿದವನಲ್ಲ. ದಿನ ಬೆಳಿಗ್ಗೆ ಅಂಗಡಿ ತೆಗೆದಾಗ ಅಂಗಡಿಯ ಮೂಲೆಯಲ್ಲಿಟ್ಟಿದ್ದ ಶ್ರೀ ತಿಪ್ಪೇರುದ್ರಸ್ವಾಮಿ ಪಟಕ್ಕೆ ಭಕ್ತಿಯಿಂದ ಪೂಜಿಸಿ, ಊದುಬತ್ತಿ ಬೆಳಗುತ್ತಿದ್ದ ಐಯ್ಯಣ್ಣ, ಜೀವನದಲ್ಲಿ ಗಾಢ ಮತ್ತು ಅಗಾಧವಾದ ನಂಬಿಕೆ ಇಟ್ಟವನು. ತನ್ನ ಸುತ್ತಲೂ ಕವಿದ ನಿರಾಶೆಯ ಕಾರ್ಮೋಡಗಳ ಅಂಚಿನ ಕಂಡೂ ಕಾಣದಂತಿದ್ದ ಬೆಳ್ಳಿಗೆರೆಯನ್ನು ಸಾಕ್ಷೀಕರಿಸಿಕೊಂಡವನು. ಜೀವನವನ್ನು ಇನ್ನಿಲ್ಲದಂತೆ ಪ್ರೀತಿಸಿದವನು, ಅಪ್ಪಿಕೊಂಡವನು, ಒಪ್ಪಿಕೊಂಡವನು, ಅದು ಇದ್ದಂತೆಯೇ ಬಾಳಿ ಬದುಕಿದವನು, ಆರಾಧಿಸುತ್ತಾ ಬಂದವನು. ತನ್ನ ಈ ಜೀವನದ ನಂತರ ಒಂದು ಒಳ್ಳೆಯ ಜೀವನ ನನಗಾಗಿ ಕಾದಿದೆ ಎನ್ನುವ ನಂಬಿಕೆಯನ್ನು ನಾಳೆ ಹುಟ್ಟಲಿರುವ ಸೂರ್ಯನ ಮೇಲೆ ಇಟ್ಟಿರುವ ಅಚಲ ನಂಬಿಕೆಯ ರೀತಿಯಲ್ಲಿಯೇ ಪ್ರತಿಬಿಂಬಿಸಿದವನು. ಎಂದೂ ಬೇರೆ ಬೇರೆ ಸ್ಥಳಗಳನ್ನು ನೋಡಬೇಕು, ಸಿನೆಮಾ, ನಾಟಕಗಳನ್ನು ನೋಡಬೇಕು, ಸವಿಯಾದ, ರುಚಿಕಟ್ಟಾದ ಭೋಜನವನ್ನು ಮಾಡಬೇಕು ಎನ್ನುವ ಆಸೆಗಳನ್ನು ತನ್ನ ಮನದ ಮಾಳಿಗೆಗೂ ತಾರದವನು ನಮ್ಮ ಐಯ್ಯಣ್ಣ. ಪಾಲಿಗೆ ಬಂದ ಪಂಚಾಮೃತವನ್ನು ಅಮೃತಸಮಾನ ಎಂದು ಪ್ರಾಜ್ಞ ಮನಸ್ಸಿನಿಂದ ಸ್ವೀಕರಿಸಿದವನು ಆತ. ಕೀಳರಿಮೆಯನ್ನ ಎಂದೂ ತನ್ನ ಬಳಿ ಸುಳಿಯಗೊಡದವನು, ಮಿರಿಮಿರಿ ಮಿಂಚುವ ಆತ್ಮವಿಶ್ವಾಸದಿಂದ ಬೆಳಗಿ ಹೊಳೆದವನು ನಮ್ಮ ಐಯ್ಯಣ್ಣ. ತನ್ನ ನ್ಯೂನ್ಯತೆಗಳ ಲವಶೇಷವನ್ನೂ ಬಿಟ್ಟುಕೊಡದೆ ಅನ್ಯರ ಕಷ್ಟಸುಖಗಳಿಗೆ ಪ್ರಾಂಜಲ ಮನಸ್ಸಿನಿಂದ ಸ್ಪಂದಿಸಿದವನು, ಕೈಲಾದ ಮಟ್ಟದ ಸಹಾಯಹಸ್ತವನ್ನು ಚಾಚಿದವನು ನಮ್ಮ ಈ ಕಥಾನಾಯಕ. ಯಾರಾದರೂ ಅನುಕಂಪಭರಿತ ಸ್ವರದಿಂದ ಐಯ್ಯಣ್ಣನನ್ನು ಸಂಬೋಧಿಸಿದಲ್ಲಿ ಕೆಂಡಾಮಂಡಲವಾಗಿ ಏರುಧ್ವನಿಯಲ್ಲಿ ಅದನ್ನು ವಿರೋಧಿಸಿದವನು ಈತನೇ. ಅಪರಿಚಿತರ ಚಾಚಿದ ಸಹಾಯದ ಹಸ್ತಗಳನ್ನು ನಗುನಗುತ್ತಲೇ ದೂರೀಕರಿಸಿದವನು, ಶಕ್ತಿಮೀರಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಹವಣಿಸಿದವನು, ಬೇರೆಯವರ ಸಹಾಯವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಮಿತಿಗೊಳಿಸುವತ್ತ ಸದಾ ಗಮನಹರಿಸಿದವನು ಐಯ್ಯಣ್ಣ. ತನ್ನ ಅಣ್ಣತಮ್ಮಂದಿರ ಮಕ್ಕಳಿಗೆ ತೀರ್ಥರೂಪಸಮಾನವಾದ ಪ್ರೀತಿಪ್ರೇಮಗಳನ್ನು ಧಾರಾಳವಾಗಿ ಧಾರೆ ಎರೆದವನು ನೋಡುಗರಿಗಷ್ಟೇ ವಿಕಲಚೇತನನಾದ ಈ ಐಯ್ಯಣ್ಣ, ತನ್ನ ಸುತ್ತಮುತ್ತಲ ರಕ್ತಸಂಬಂಧಿಗಳಿಗೆ ಸರ್ವಚೇತನ ಎನಿಸಿದವನು. ತನ್ನ ಬಾಳನ್ನು ತನ್ನದೇ ಆದ ಷರತ್ತುಗಳ ಅನ್ವಯವೇ ಸವೆಸುತ್ತಾ ಸಾಗಿದವನು. ತನ್ನ ಕೆಲಸವನ್ನು ಕಾಯಕದ ಮಟ್ಟಕ್ಕೆ ಕೊಂಡೊಯ್ದವನು. ಇಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಗಳು ಬೊಗಳೆ ಬಿಡುವ ೨೪ x ೭ x ೩೬೫ ರ ಸಿದ್ಧಸೂತ್ರವನ್ನು ದಶಕಗಳ ಹಿಂದೆಯೇ ಕಾರ್ಯರೂಪಕ್ಕೆ ತಂದ ಕಾಯಕಯೋಗಿ ನಮ್ಮ ಐಯ್ಯಣ್ಣ. ಐಯ್ಯಣ್ಣ ಎಂದೂ ತನ್ನ ಅಂಗಡಿಯನ್ನು ಮುಚ್ಚಿದ್ದು ನನ್ನ ನೆನಪಿನಲ್ಲಿಯೇ ಇಲ್ಲ. ಬೆಳಿಗ್ಗೆ ಸುಮಾರು ಆರೂ ಕಾಲು ಗಂಟೆಗೆ ತನ್ನ ದೈನಂದಿನ ವ್ಯವಹಾರಗಳಿಗೆ ಮೈತೆರೆದುಕೊಳ್ಳುತ್ತಿದ್ದ ಐಯ್ಯಣ್ಣನ ಡಬ್ಬಾ ಅಂಗಡಿ ರಾತ್ರಿ ಎಂಟರವರೆಗೆ ಯಾವುದೇ ಅಡೆತಡೆಗಳಿಲ್ಲದೆ ವರ್ಷದ ಎಲ್ಲಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿತ್ತು. ಯಾರಿಗೂ ಮೋಸ, ದಗಾ, ವಂಚನೆಗಳನ್ನು ಮಾಡುವುದನ್ನು ಮನಸ್ಸಿನಲ್ಲಿಯೂ ಊಹಿಸದ ಐಯ್ಯಣ್ಣ ತನ್ನ ಸನ್ನಡತೆಯಿಂದ ಹುಟ್ಟಿಸಿದ ದೇವರನ್ನೂ “ಈ ಜೀವಕ್ಕೆ ನಾನು ಈ ಜನ್ಮದಲ್ಲಿ ಮಾಡಿದ್ದು ತರವಾ?” ಎನ್ನುವ ಉಭಯಸಂಕಟವನ್ನು ತಂದೊಡ್ಡಿದವನು. ಜೀವನದಲ್ಲಿ ಘಟಿಸಿದ ಸಣ್ಣಪುಟ್ಟ ಪ್ರಸಂಗಗಳಿಂದ, ಉಂಟಾದ ಸಾಮಾನ್ಯ ಹಿನ್ನೆಡೆಗಳಿಂದ ಬೇಸರ ಹೊಂದಿ ಆತ್ಮಹತ್ಯೆಯಂತಹ ಹೀನಾಯ, ಹೇಡಿತನದ ಕೃತ್ಯಗಳತ್ತ ಮುಖಮಾಡುವ ಇಂದಿನ ಯುವಜನತೆಗೆ ಐಯ್ಯಣ್ಣ ಯಾವತ್ತೂ ಸ್ಫೂರ್ತಿಯ ಸೆಲೆಯಾಗಬಲ್ಲವನು. ಒಂದು ಹೊಸ ಟ್ರೆಂಡ್ ಹುಟ್ಟುಹಾಕಿದವನು. ಮನುಷ್ಯ ತನ್ನನ್ನು ತಾನು ಆದಮ್ಯವಾಗಿ ಪ್ರೀತಿಸಿಕೊಳ್ಳಬೇಕು, ಪ್ರೇಮಿಸಿಕೊಳ್ಳಬೇಕು, ದೇವರು ಬಳುವಳಿಯಾಗಿ ಕೊಟ್ಟ ಈ ಜನ್ಮವನ್ನು ಅದರ ಹುಟ್ಟುಸ್ವರೂಪದಲ್ಲಿಯೇ ಆರಾಧಿಸಬೇಕು, ವಿಜೃಂಭಿಸುತ್ತಾ ಸಂಭ್ರಮಿಸಬೇಕು ಎನ್ನುವ ಇಂಗಿತವನ್ನು ತಾನು ಬದುಕಿದ ರೀತಿನೀತಿಯ ಮುಖೇನ ಸೂಚ್ಯವಾಗಿ ಜಗತ್ತಿಗೆ ಸಾರಿ ಸಾರಿ ಹೇಳಿದವನು ಈ ಐಯ್ಯಣ್ಣನೇ. ಹುಟ್ಟಿಸಿದ ದೇವರಿಗೇ ಸವಾಲು ಹಾಕುವ ರೀತಿ ಬದುಕುವ ಕಲೆಯನ್ನು ಕರಗತ ಮಾಡಿಕೊಂಡ ಐಯ್ಯಣ್ಣನ ಸಾಧನೆಯ ಮುಂದೆ ಸರ್ವಾಂಗಸಂಪನ್ನ ಜನಾಂಗದ ಬಹಳ ದೊಡ್ಡ ಸಾಧನೆಗಳೂ ಬಹಳ ಪೀಚಲೆನ್ನುವಂತೆ ತೋರುತ್ತವೆ. ತಾವು ಇರುವಷ್ಟೂ ದಿನ ಮಗನ ಅಂಗಡಿಗೆ ಬಂದು, ಗಂಟೆಗಟ್ಟಲೆ ಕುಳಿತು ಮಗನ ಮಾನಸಿಕ ಅವಸ್ಥೆಯಿಂದ ಖುಷಿಪಡುತ್ತಿದ್ದ ಐಯ್ಯಣ್ಣನವರ ತಂದೆ ಗೌಡರ ವೀರಣ್ಣನವರ ಮನದ ದುಗುಡವನ್ನು ಪ್ರಾರಂಭದ ದಿನಗಳಲ್ಲಿಯೇ ಚಿವುಟಿ ಹಾಕಿದ್ದ ಐಯ್ಯಣ್ಣ ನಾಲ್ಕು ಜನ ಮೆಚ್ಚುವ ಹಾಗೆ ಜೀವನ ನಡೆಸಿದವನು. ಈಗ ಸುಮಾರು ಎಂಟು ದಶಕಗಳನ್ನು ದಾಟಿ ಮುನ್ನುಗ್ಗುತ್ತಿರುವ ಐಯ್ಯಣ್ಣನವರ ಜೀವನಗಾಥೆ ತುರುವನೂರಿನಂತಹ ಶಾಶ್ವತ ಬರಗಾಲದ ಪ್ರದೇಶದ ಎದೆಯಲ್ಲಿ ಅರಳಿದ ಅಭೂತಪೂರ್ವ ಸಾಹಸೀಜೀವನದ ವಿಶಾಲವೃಕ್ಷವೊಂದರ ದಟ್ಟತಂಪು ನೆರಳಿನ ಕಲ್ಪನೆಯನ್ನು ನನ್ನ ಮನದಲ್ಲಿ ಯಾವತ್ತೂ ಹುಟ್ಟು ಹಾಕಿದೆ. ಐಯ್ಯಣ್ಣ ಡಬ್ಬಾ ಅಂಗಡಿಯ ಕಲ್ಪನೆರಹಿತ ನನ್ನ ಹುಟ್ಟೂರಿನ ನೆನಪು ನನ್ನ ಕನಸಿನಲ್ಲಿಯೂ ಮೂಡಲಿಕ್ಕೆ ಸಾಧ್ಯವೇ ಇಲ್ಲ. “ಬದುಕಿದರೆ ಐಯ್ಯಣ್ಣನ ಹಾಗೆ ಬದುಕಬೇಕು” ಎಂದು ನಾನು ವಿಕಲಚೇತನ ಬಂಧುಗಳಲ್ಲಿ ವಿನಂತಿಸಿಕೊಳ್ಳುವುದಿಲ್ಲ; ಬದಲಾಗಿ ಸರ್ವಾಂಗಸಂಪನ್ನರಾಗಿ ಆಯುರಾರೋಗ್ಯಭರಿತರಾಗಿ ಜೀವನರಥವನ್ನು ಅಮೂರ್ತವಾದ ಅವ್ಯಕ್ತ ನೋವಿನಿಂದಲೇ ಗೊಣಗುತ್ತಾ, ಹೆಣಗುತ್ತಾ, ಹೇಗೆಂದರೆ ಹಾಗೆ, ಮನಬಂದಂತೆ ಎಳೆಯುತ್ತಿರುವ, ಆಧುನೀಕರಣದ ಗಾಳಿಮೆಟ್ಟಿದ ಯುವಜನತೆಯಲ್ಲಿ ಈ ಮಾತನ್ನು ನಿವೇದಿಸಿಕೊಳ್ಳುತ್ತಿದ್ದೇನೆ.

 

Girl in a jacket
error: Content is protected !!