ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ!

Share

೨೦೧೨ ಛತ್ತೀಸಗಢದ ಬಿಜಪುರ ಜಿಲ್ಲೆ ಸರ್ಕೇಗುಡದಲ್ಲಿ ನಡೆದ ಹುಸಿಬಾಂಬ್ ಎನೌಂಟರ್ ನಡೆದು ಒಂಬತ್ತು ವರ್ಷಗಳಾಗಿವೆ ಈ ಕುರಿತು ವರದಿ ನೀಡಿದ ಆಯೋಗ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ೧೭ ಮಂದಿಯ ಪೈಕಿ ಯಾರೂ ಮೌವೋವಾದಿಗಳಾಗಿರಲಿಲ್ಲ ಎಂದು ಹೇಳಿದೆ ಆದರೂ ಈ ಬಗ್ಗೆ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಇದೇ ಈ ದೇಶದ ದುರಂತ

ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ!

ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು.

ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ ೨೦೧೨ರಲ್ಲಿ ನಡೆದ ಹುಸಿ ಎನ್ಕೌಂಟರೊಂದು ನಡೆಯಿತು. ಆರು ಮಂದಿ ಅಪ್ರಾಪ್ತ ವಯಸ್ಕರೂ ಸೇರಿದಂತೆ ೧೭ ಮಂದಿ ಆದಿವಾಸಿಗಳನ್ನು ಈ ಎನ್ಕೌಂಟರಿನಲ್ಲಿ ಕೊಲ್ಲಲಾಗಿತ್ತು. ಈ ಹತ್ಯಾಕಾಂಡದಲ್ಲಿ ಹತರಾದವರಿಗೆ ಮಾವೋವಾದಿಗಳ ಹಣೆಪಟ್ಟಿ ಹಚ್ಚಿತ್ತು ಅಂದಿನ ರಮಣಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ. ಭಾರೀ ಪ್ರತಿಭಟನೆ ವಿವಾದದ ನಂತರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು.
ಮಧ್ಯಪ್ರದೇಶ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಕೆ. ಅಗರವಾಲ ಆಯೋಗ ಸಲ್ಲಿಸಿದ ವರದಿಯನ್ನು ೨೦೧೯ರ ಡಿಸೆಂಬರಿನಲ್ಲಿ ಛತ್ತೀಸಗಢ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಭದ್ರತಾ ಪಡೆಗಳಿಂದ ಹತರಾದ ೧೭ ಮಂದಿಯ ಪೈಕಿ ಯಾರೂ ಮಾವೋವಾದಿಗಳಾಗಿರಲಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಗ್ರಾಮಸ್ತರನ್ನು ಬಹಳ ಸಮೀಪದಿಂದ ಗುಂಡು ಹಾರಿಸಿ ಕೊಲ್ಲಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರಿದ್ದ ಭದ್ರತಾ ಪಡೆಯು ಗಾಬರಿಯಲ್ಲಿ ಗುಂಡು ಹಾರಿಸಿರಬೇಕು.ಎನ್ಕೌಂಟರ್ ಜರುಗಿದ್ದು ರಾತ್ರಿಯ ಹೊತ್ತು. ಆದರೆ ಈ ೧೭ ಮಂದಿಯ ಪೈಕಿ ಒಬ್ಬ ಯುವಕನನ್ನು ಬೆಳಿಗ್ಗೆ ಹಿಡಿದು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದೂ ಆಯೋಗ ಹೇಳಿತ್ತು.


ಭದ್ರತಾ ಪಡೆಯ ಕೆಲವರಿಗೆ ಆಗಿರುವ ಗಾಯಗಳಿಗೆ ತಮ್ಮದೇ ಸಂಗಾತಿಗಳ ಮತ್ತೊಂದು ತಂಡ ಕತ್ತಲಲ್ಲಿ ಗೊತ್ತಿಲ್ಲದೆ ಹಾರಿಸಿರುವ ಗುಂಡುಗಳೇ ಕಾರಣ. ಆದರೆ ಅಷ್ಟು ಮಂದಿ ಗ್ರಾಮಸ್ತರು ಹಬ್ಬದ ಆಚರಣೆಯ ಯೋಜನೆಯನ್ನು ಚರ್ಚಿಸಲು ಸೇರಿದ್ದರು ಎಂಬ ಕಾರಣವನ್ನು ನಂಬಲಾಗದು ಎಂದೂ ವರದಿಯಲ್ಲಿ ಸಂದೇಹ ಪ್ರಕಟಿಸಲಾಗಿತ್ತು.
ಭದ್ರತಾ ಪಡೆಗಳು ಹೇಳಿದಂತೆ ಬಸಗುಡಾದಿಂದ ಹೊರಟ ಎರಡು ತಂಡಗಳು ಮೂರು ಕಿ.ಮೀ.ದೂರದ ಸರ್ಕೇಗುಡದಲ್ಲಿ ’ಮಾವೋವಾದಿಗಳ ಸಭೆ’ ನಡೆಯುತ್ತಿದ್ದುದನ್ನು ಕಂಡವು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ತರು ಭದ್ರತಾ ಪಡೆಯ ತಂಡಗಳ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ವಾಪಸು ಗುಂಡು ಹಾರಿಸಿದರು ಎಂಬುದು ಭದ್ರತಾ ಪಡೆಗಳ ಹೇಳಿಕೆಯಾಗಿತ್ತು.


ಆದರೆ ಗ್ರಾಮಸ್ತರ ಪ್ರಕಾರ ತಾವು ಬೀಜ ಪಂಡುಮ್ ಹಬ್ಬದ ಸಿದ್ಧತೆಗಾಗಿ ಸಭೆ ಸೇರಿದ್ದರು. ಭದ್ರತಾ ಪಡೆಗಳು ಅವರನ್ನು ಸುತ್ತುವರೆದು ಗುಂಡು ಹಾರಿಸಿದವು. ಪಡೆಗಳಿಂದ ಹತ್ಯೆಗೀಡಾದ ಮತ್ತು ಗಾಯಗೊಂಡ ಗ್ರಾಮಸ್ತರು ನಕ್ಸಲೀಯರು ಎನ್ನಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ದೂರದಲ್ಲಿ ಅನುಮಾನಾಸ್ಪದ ಸದ್ದು ಕೇಳಿಬರುತ್ತಿದೆ ಎಂಬುದಾಗಿ ತಮ್ಮ ’ಮಾರ್ಗದರ್ಶಿ’ಯ ಮಾತಿನಿಂದ ಪ್ರಭಾವಿತರಾದಂತಿರುವ ಪೊಲೀಸರು ಗಾಬರಿಯಾಗಿ ನಕ್ಸಲೀಯರಿದ್ದಾರೆಂದು ಭಾವಿಸಿ ಗುಂಡು ಹಾರಿಸಿ ಗ್ರಾಮಸ್ತರ ಸಾವು ನೋವುಗಳಿಗೆ ಕಾರಣರಾಗಿದ್ದಾರೆ. ಗ್ರಾಮಸ್ತರು ಗುಂಡು ಹಾರಿಸಿಲ್ಲವೆಂಬ ಅಂಶವು ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್.ಇಳಂಗೋ ಮತ್ತು ಮನೀಶ್ ಬರ್ಮೋಲ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಸಾಕ್ಷ್ಯಾಧಾರಗಳ ಪ್ರಕಾರ ೧೭ ರಲ್ಲಿ ಹತ್ತು ಮಂದಿ ಬೆನ್ನಿಗೆ ಗುಂಡು ಬಿದ್ದು ಸತ್ತಿದ್ದಾರೆ. ಅರ್ಥಾತ್ ಪರಾರಿಯಾಗುತ್ತಿದ್ದಾಗ ಕೊಲ್ಲಲಾಗಿದೆ. ಕೆಲವರು ತಲೆಗೆ ಗುಂಡು ಬಿದ್ದು ಸತ್ತಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ ಗುಂಡು ಹಾರಿಸಿದ್ದು ಬಲು ಸಮೀಪದಿಂದಲೇ ವಿನಾ ಪೊಲೀಸರು ಹೇಳುವಂತೆ ದೂರದಿಂದ ಅಲ್ಲ. ಗಾಯಗೊಂಡವರ ಮೈ ಮೇಲಿನ ಗಾಯಗಳು ಕೂಡ ಬಂದೂಕದ ಹಿಡಿಯಿಂದ ಮತ್ತು ಹರಿತ ಅಂಚಿನ ಮತ್ತು ಮೊಂಡು ವಸ್ತುವಿನಿಂದ ಆದಂತಹವು. ಈ ಗಾಯಗಳು ಆದದ್ದು ಹೇಗೆ ಎಂಬುದಕ್ಕೆ ಭದ್ರತಾ ಪಡೆಗಳಿಂದ ಉತ್ತರ ಬರಲಿಲ್ಲ ಎಂದು ನ್ಯಾಯಾಂಗ ವರದಿ ಹೇಳಿತ್ತು.


ಹತ್ಯೆಗೀಡಾದವರ ಪೈಕಿ ಕಾಕಾ ಸರಸ್ವತಿ ಮತ್ತು ಕಾಕಾ ನಾಗೇಶ್ (ಇಬ್ಬರೂ ೧೨ ವರ್ಷ ವಯಸ್ಸಿನವರು), ಇರ್ಪಾ ಸುರೇಶ್ ವಯಸ್ಸು ಹದಿನೈದು. ಹಾಪ್ಕಾ ಮಿಟ್ಟೂಗೆ ೧೭ ವರ್ಷ. ಹದಿನೇಳು ವರ್ಷದ ಕುಂಜಮ್ ಮಲ್ಲಾ, ಹದಿನಾರು ವಯಸ್ಸಿನ ಕೊರ್ಸಾ ಬಿಚೆಮ್ ಅವರಂತಹ ಸಣ್ಣ ವಯಸ್ಸಿನವರೂ ಇದ್ದರು. ಇವರನ್ನು ’ಹಾರ್ಡ್ ಕೋರ್’ ನಕ್ಸಲೀಯರು ಎಂದು ಬಣ್ಣಿಸಲಾಗಿತ್ತು. ಅಂದಿನ ಕೇಂದ್ರ ಗೃಹಮಂತ್ರಿ ಪಿ.ಚಿದಂಬರಂ ಅವರಂತೂ ಮೂವರು ಬಹುಮುಖ್ಯ ನಕ್ಸಲೀಯ ನಾಯಕರನ್ನು ಕೊಲ್ಲಲಾಯಿತು ಎಂದು ಎದೆ ಉಬ್ಬಿಸಿದ್ದರು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಈ ಎನ್ಕೌಂಟರನ್ನು ಬಹುದೊಡ್ಡ ಮಾವೋವಾದಿ ಎನ್ಕೌಂಟರ್ ಎಂದು ಬಣ್ಣಿಸಿದ್ದವು. ವರದಿ ಬಂದ ನಂತರ ಚಿದಂಬರಂ ಅವರು ಕ್ಷಮಾಪಣೆ ಕೇಳಬೇಕಾಯಿತು.

ಬಂಡುಕೋರರನ್ನು ಹತ್ತಿಕ್ಕುವ ಯಶಸ್ವೀ ಕಾರ್ಯಾಚರಣೆ ಎಂದು ಈ ನರಮೇಧವನ್ನು ಸರ್ಕಾರ ಬಣ್ಣಿಸಿತ್ತು. ಮುಖ್ಯವಾಹಿನಿಯ ಸಮೂಹ ಮಾಧ್ಯಮಗಳು ಈ ಸುಳ್ಳನ್ನು ಧ್ವನಿವರ್ಧಕ ಹಿಡಿದು ಕೂಗಿ ಹೇಳಿದ್ದವು. ಆದರೆ ಹತ್ಯೆಗೀಡಾದವರು ಅಮಾಯಕ ಗ್ರಾಮಸ್ತರಷ್ಟೇ ಅಲ್ಲ, ಈ ಎನ್ಕೌಂಟರ್ ಸ್ಥಳದ ಸುತ್ತಮುತ್ತ ಎಲ್ಲಿಯೂ ಮಾವೋವಾದಿಗಳು ಇದ್ದ ಕುರಿತು ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಎನ್ಕೌಂಟರ್ ನಡೆದ ನಂತರ ಈ ನಿರಪರಾಧಿ ಗ್ರಾಮಸ್ತರ ನರಮೇಧವನ್ನು ಸಮರ್ಥಿಸಲು ಸುಳ್ಳಿನ ಜಾಲವನ್ನೇ ಹೆಣೆಯಲಾಯಿತು ಎಂದು ವರದಿ ಹೇಳಿತ್ತು.
ಎಡಪಂಥೀಯ ಉಗ್ರವಾದದ ನೆಲೆಯೆಂದು ಹೆಸರಾಗಿದ್ದ ಬಿಜಾಪುರದ ಸರ್ಕೇಗುಡ ಅದೇ ಕಾರಣಕ್ಕಾಗಿ ಕೆಂಡದ ಹೊಂಡದ ಮೇಲೆ ಜೀವಿಸಿದ ಗ್ರಾಮ. ಆದಿವಾಸಿಗಳಿಂದಲೇ ಆದಿವಾಸಿಗಳನ್ನು ಬೇಟೆಯಾಡಲು ಛತ್ತೀಸಗಢ ಸರ್ಕಾರ ಕಟ್ಟಿದ ಖಾಸಗಿ ಆದಿವಾಸಿ ಸೇನೆ ಸಾಲ್ವಾ ಜುದುಮ್ ಈ ಗ್ರಾಮವನ್ನು ೨೦೦೫ರಲ್ಲಿ ಸುಟ್ಟು ಹಾಕಿತ್ತು. ೨೦೦೯ರಲ್ಲಿ ಗ್ರಾಮಸ್ತರು ಈ ಹಳ್ಳಿಗೆ ವಾಪಸು ಬರಲು ಆರಂಭಿಸಿದ್ದರು. ಬೂದಿಯಾಗಿದ್ದ ತಮ್ಮ ಬದುಕುಗಳನ್ನು ಪುನಃ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರು. ನರಮೇಧ ನಡೆದ ರಾತ್ರಿ ನಡೆದ ಗ್ರಾಮಸ್ತರ ಸಭೆಯಲ್ಲಿ ಬೀಜ ಪಂಡುಮ್ ಉತ್ಸವ ಆಚರಣೆಯ ಜೊತೆಗೆ ಜಾನುವಾರು ಇಲ್ಲದ ಕುಟುಂಬಗಳು ಮತ್ತು ಏಕಮಹಿಳೆಯ ಕುಟುಂಬಗಳಿಗೆ ನೆರವಾಗುವ ಬಗೆ ಎಂತು ಎಂದು ಚರ್ಚಿಸಲಾಗುತ್ತಿತ್ತು. ಆದಿವಾಸಿ ರೂಢಿ ರಿವಾಜುಗಳ ಪ್ರಕಾರ ಉತ್ಸವದ ಸಿದ್ಧತೆಗಳು ರಾತ್ರಿ ನಡೆಯುತ್ತವೆ. ಮರುದಿನ ಮುಂಜಾನೆ ಉತ್ಸವ ಆರಂಭ ಆಗುತ್ತದೆ.

ನ್ಯಾಯಾಂಗ ವರದಿ ಬಂದ ನಂತರ ಈ ನರಮೇಧಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಬಿಗಿ ಕ್ರಮವನ್ನು ಜರುಗಿಸಲಾಗುವುದು ಎಂದು ಛತ್ತೀಸಗಢದ ಹಾಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಾರಿದ್ದುಂಟು. ಆದರೆ ಎರಡು ವರ್ಷ ಉರುಳಿದರೂ ಹಂತಕರ ವಿರುದ್ಧ ಎಫ್.ಐ.ಆರ್. ಕೂಡ ದಾಖಲಾಗಿಲ್ಲ. ಸರ್ಕೇಗುಡದಲ್ಲಿ ಒಂಬತ್ತು ವರ್ಷಗಳ ಹಿಂದೆ ಜರುಗಿದ ಸರ್ಕಾರಿ ನರಮೇಧದಲ್ಲಿ ಹತರಾದ ೧೭ ಮಂದಿಗೆ ಶ್ರದ್ಧಾಂಜಲಿ ಮೇಳವನ್ನು ಮೊನ್ನೆ ನಡೆಸಲಾಯಿತು. ಸಾವಿರಾರು ಆದಿವಾಸಿಗಳು ಸೇರಿದ್ದರು. ಭಾರೀ ಸಂಖೆಯ ಅರೆಸೇನಾ ಪಡೆಗಳು ಈ ಮೇಳವನ್ನು ಸುತ್ತುವರೆದು ನಿಗಾ ಇಟ್ಟಿದ್ದವು.

ಬಿಗಿ ಕ್ರಮ ಕೈಗೊಳ್ಳುವ ಬಾಘೇಲ್ ಸರ್ಕಾರ ತುಟಿ ಹೊಲಿದುಕೊಂಡಿದೆ. ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು.

Girl in a jacket
error: Content is protected !!