ಆಂಧ್ರ ಬಿಜೆಪಿಯಲ್ಲೀಗ ಹೆಂಡದ್ದೆ ಮಾತು

Share

ಕುಡಿತದ ವಿರುದ್ಧ ಮಹಾತ್ಮ ಗಾಂಧೀಜಿ ಸಮರವನ್ನೇ ಸಾರಿದ್ದರು. ಸ್ವಾತಂತ್ರ್ಯಾನಂತರ ಭಾರತವನ್ನು ಆಳಿದ ಯಾವ ಪಕ್ಷವೂ ಗಾಂಧಿ ಶುರುಮಾಡಿದ್ದ ಸಮರವನ್ನು ಮುಂದುವರಿಸಲಿಲ್ಲ. ಈಗ ಆಡಳಿತದ ಭಾರ ಹೊತ್ತಿರುವ ಬಿಜೆಪಿಯೂ ಈ ವಿಚಾರದಲ್ಲಿ ಸಂಬಂಧವೇ ಇಲ್ಲ ಎಂಬಂತೆ ಕೂತಿದೆ. ಏತನ್ಮಧ್ಯೆ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು, ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯದ ದರವನ್ನು ಗಣನೀಯವಾಗಿ ಇಳಿಸುವ ಮಾತಾಡಿದ್ದಾರೆ. ಖಾದ್ಯತೈಲ, ಪೆಟ್ರೋಲು ದರ ಅವರ ನಜರಿನಲ್ಲಿ ಇಲ್ಲ.

 


ಆಂಧ್ರ ಬಿಜೆಪಿಯಲ್ಲೀಗ ಹೆಂಡದ್ದೆ ಮಾತು

ಭಾರತೀಯ ಜನತಾ ಪಕ್ಷದ ಮೂಲ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘ ಪರಿವಾರದ ರಾಜಕೀಯ ಕವಲಾಗಿ ಹುಟ್ಟಿಕೊಂಡ ಭಾರತೀಯ ಜನಸಂಘ, ಈಗ ದೇಶವನ್ನು ಆಳುತ್ತಿರುವ ಬಿಜೆಪಿಯ ಪೂರ್ವಾಶ್ರಮದ ಹೆಸರು. ಶಿಸ್ತು, ಸಂಯಮ, ಸನ್ನಡತೆ, ಸದಾಶಯ, ಪ್ರಾಮಾಣಿಕತೆ, ಸ್ವಚ್ಛ ಸಂಸ್ಕಾರವೇ ಮುಂತಾದವು ಆರ್‌ಎಸ್‌ಎಸ್‌ನ ಸ್ವಯಂ ಆರೋಪಿತ ಗುಣ ವಿಶೇಷಗಳು. ಆ ಸಂಘಟನೆಯ ಭಾಗವಾಗಿ ಐವತ್ತು ವರ್ಷದ ಹಿಂದೆ ಜನಸಂಘ ಜನ್ಮ ತಳೆದಾಗ “ನಮ್ಮದು ಹೊಸ ರಾಜಕೀಯ ಸಂಸ್ಕೃತಿ” ಎನ್ನುವುದು ಅದರ ಘೋಷಾ ವಾಕ್ಯವಾಗಿತ್ತು. ಈಗ ಆ ಘೋಷಣೆ ಮುಕ್ಕಾಗಿದೆ. ಈ ಐದು ದಶಕಾವಧಿಯಲ್ಲಿ ಅದು ಹೇಳುತ್ತಿದ್ದ ಆಚಾರ, ಮಂಡಿಸುತ್ತಿದ್ದ ವಿಚಾರಗಳೆಲ್ಲವೂ ಕಿತ್ತು ಕಿಲುಬೆದ್ದು ಹೋಗಿವೆ. ಆರ್‌ಎಸ್ಸೆಸ್ ಆಗಲಿ, ಬಿಜೆಪಿಯಾಗಲಿ ಅಥವಾ ಸಂಘ ಪರಿವಾರದ ಮತ್ಯಾವುದೆ ಶಾಖೆಯಾಗಿರಲಿ ಆ ಆದರ್ಶದ ಮಾತುಗಳನ್ನು ಆಡುವುದಿಲ್ಲ.

 

ರಾಜಕೀಯದಲ್ಲಿ ಗುರಿ ಮುಟ್ಟುವುದಕ್ಕೆ ಹತ್ತಾರು ದಾರಿಗಳನ್ನು ರಾಜಕಾರಣ ಹುಡುಕುತ್ತಲೆ ಇರುತ್ತದೆ. ಅಂಥ ಒಂದು ಹುಡುಕಾಟದ ಭಾಗ “ನಮ್ಮದು ಹೊಸ ರಾಜಕೀಯ ಸಂಸ್ಕೃತಿ” ಎನ್ನುವುದಾಗಿತ್ತು. ಜನ ಅದನ್ನು ನಂಬಿದರು ಅದರ ಫಲ ಕೇಂದ್ರವಲ್ಲದೆ ೨೬ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇರುವುದು.
ಜಗತ್ತಿನಲ್ಲಿ ಅತ್ಯಧಿಕ ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ ಎನ್ನುತ್ತಾರೆ. ಅದರ ಪ್ರಕಾರ ಅದರ ಸದಸ್ಯರ ಸಂಖ್ಯೆ ಹತ್ತು ಕೋಟಿಯನ್ನು ದಾಟಿದೆ. ಸದಸ್ಯತ್ವ ನೋಂದಣಿ ಕಾರ್ಯ ಸತತ ನಡೆದಿರುವುದರಿಂದ ಸಂಖ್ಯೆ ಇನ್ನೂ ಹೆಚ್ಚಿನದು ಎನ್ನಬಹುದು. ಸಂಖ್ಯಾಬಲ ಹೆಚ್ಚುವುದರೊಂದಿಗೆ ಘೋಷಿತ ಆದರ್ಶಗಳು, ಗುಣವಿಶೇಷಗಳು ಹಳ್ಳ ಹಿಡಿಯುವುದು ಜಗನ್ನಿಯಮ. ಸಂಖ್ಯೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುವಂತೆ ಬಲ ಅಲ್ಲ. ಅದು ಅಕ್ಷರಶಃ ದುರ್ಬಲ. ಬಿಜೆಪಿಗೆ ತಾನು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಆಡುತ್ತಿದ್ದ ಮಾತೆಲ್ಲವೂ ಈಗ ಮರೆತು ಹೋಗಿದೆ. ಹೊಸ ಹೊಸ ಘೋಷಣೆಗಳು ಬಂದು ಹಳೆಯ ಘೋಷಣೆಗಳು ಮರೆತು ಹೋಗುವಂತಾಗುತ್ತದೆ. ಬಿಜೆಪಿಯಲ್ಲಿ ಈಗ ಆಗುತ್ತಿರುವುದು ಇದಲ್ಲದೆ ಮತ್ತೇನೂ ಅಲ್ಲ.
ದೇಶವನ್ನು ದೇಶ ಎಂದು ಕರೆಯದೆ ಭಾರತ ಮಾತಾ ಎನ್ನುವುದು ಬಿಜೆಪಿಯ ಆದರ್ಶಗಳಲ್ಲಿ ಒಂದು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ದೇಶದ ಭೂಪಟವನ್ನು ಮತ್ತೆ ಸಾಕಾರಗೊಳಿಸುವುದು ತನ್ನ ಮುಂದೆ ಅದು ಇಟ್ಟುಕೊಂಡಿರುವ ಹಲವು ಗುರಿಗಳಲ್ಲಿ ಒಂದಷ್ಟೆ ಅಲ್ಲ ಭಾರೀ ಮಹತ್ವಾಕಾಂಕ್ಷೆಯದು. ಆ ಭೂಪಟವನ್ನು ಮರಳಿ ಸ್ಥಾಪಿಸುವುದೆಂದರೆ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶವನ್ನು ಪುನಃ ಭಾರತದಲ್ಲಿ ವಿಲೀನಗೊಳಿಸುವುದು! ಘೋಷಣೆ ಕೇಳಲು ಚಂದ. ಎಷ್ಟರಮಟ್ಟಿಗೆ ಇದನ್ನು ನಂಬಬಹುದು ಎನ್ನುವುದು ಜನರ ವಿವೇಚನೆಗೆ ಬಿಟ್ಟಿದ್ದು. ಇದು ಕಾರ್ಯ ಸಾಧ್ಯವೆ…? ಆದರೆ ಇಂಥ ಘೋಷಣೆಯನ್ನೂ ನಂಬುವ ಕೋಟಿ ಕೋಟಿ ಜನರಿದ್ದಾರೆ ಎನ್ನುವುದೇ ಬಿಜೆಪಿ ಬಲ!


ಇದುವರೆಗೆ ಮೌಲ್ಯದ ವಿಚಾರದಲ್ಲಿ ತುಟಿ ಅಂಚಿನ ಮಾತನ್ನಾದರೂ ಆಡುತ್ತಿದ್ದ ಬಿಜೆಪಿ ಈಗ ಅದಕ್ಕೂ ಎಳ್ಳುನೀರನ್ನು ಬಿಟ್ಟಿರುವುದು ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ ವಾರದ ಪತ್ರಿಕೆಗಳಲ್ಲಿ ಅಂಥ ಮಹತ್ವ ಪಡೆಯದೆ ಸಣ್ಣದಾಗಿ ಪ್ರಕಟವಾದ ಸುದ್ದಿಯೊಂದರತ್ತ ಗಮನ ಹರಿಸುವುದು ಬಿಜೆಪಿ ಆಡುತ್ತಿರುವ ನೀತಿ ನಿಯತ್ತು ಮೌಲ್ಯಗಳ ಓತಪ್ರೋತ ಹೇಳಿಕೆಗಳ ದೃಷ್ಟಿಯಿಂದ ಮುಖ್ಯವಾದುದು ಎನಿಸುತ್ತಿದೆ. ಈ ಮಾತು ಹೆಂಡಕ್ಕೆ ಸಂಬಂಧಿಸಿದ್ದು ಎನ್ನುವುದು ಗಮನ ಸೆಳೆಯುವುದಕ್ಕೆ ಕಾರಣವಾಗಿರುವ ಬೆಳವಣಿಗೆ. ಹೆಂಡಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದೇನೂ ಅಲ್ಲ. ಹೆಂಡದ ವಿಚಾರದಲ್ಲಿ ಅದು ತೀರಾ ಮಡಿಯನ್ನು ಬೆಳೆಸಿಕೊಂಡಿಲ್ಲ. ಪಕ್ಷದ ಬೇಕು ಬೇಡಗಳ ಪಟ್ಟಿಯಲ್ಲಿ ಹೆಂಡದ ನಿಷೇಧವೇನೂ ಇಲ್ಲ. ಇಷ್ಟಕ್ಕೂ ಬಿಜೆಪಿ ಗೌರವಿಸುವ ದೇವಾನುದೇವತೆಗಳೇ ಹೆಂಡದ ದಾಸಾನುದಾಸರೂ ಆಗಿದ್ದಾರೆ. ಸುರಾಪಾನ ಎಂದು ಪವಿತ್ರ ನಾಮದಲ್ಲಿ ಅದನ್ನು ಗೌರವಿಸುವುದು ನಮ್ಮ ಆರ್ಷೇಯ ಪರಂಪರೆ. ಹೆಂಡ, ಸಾರಾಯಿ,ಶೇಂದಿ, ವ್ಹಿಸ್ಕಿ, ಬ್ರಾಂದಿ, ಬಿಯರು ಮುಂತಾದವುಗಳ ಪ್ರಸ್ತಾಪ ಬಂದಾಗ ದೇಶದ ಅಗ್ರಗಣ್ಯ ಸಮಾಜವಾದಿ ನಾಯಕರಲ್ಲಿ ಒಬ್ಬರಾಗಿದ್ದ ರಾಮ ಮನೋಹರ ಲೋಹಿಯಾ ನೆನಪಾಗುತ್ತಾರೆ. ಈ ನೆನಪಿಗೆ ಕಾರಣ ಪುಟ್ಟದೊಂದು ಕಥೆ. ಆ ಕಥೆಯನ್ನೊಮ್ಮೆ ಅವಲೋಕಿಸಿ ಬಿಜೆಪಿಯ ಹೆಂಡದ ಪುರಾಣಕ್ಕೆ ಹೊರಳೋಣ.

ಲೋಹಿಯಾ ನೇತೃತ್ವದ ಸಮಾಜವಾದಿ ಪಕ್ಷದ ಸಭೆ ದೆಹಲಿಯಲ್ಲಿ ನಡೆದಿತ್ತು. ಅದರಲ್ಲಿ ನಮ್ಮ ರಾಜ್ಯದ ಸಮಾಜವಾದಿ ಪಕ್ಷದ ಕೆಲವು ನಾಯಕರು ಭಾಗವಹಿಸಿದ್ದರು. ಕರ್ನಾಟಕದ ತಂಡದಲ್ಲಿ ಶಾಂತವೇರಿ ಗೋಪಾಲಗೌಡ, ಜೆ.ಎಚ್. ಪಟೇಲ, ಕೆ.ಜಿ. ಮಹೇಶ್ವರಪ್ಪ ಕೂಡಾ ಇದ್ದರು. ಸಭೆ ಅನೇಕ ಸಂಗತಿಗಳನ್ನು ಚರ್ಚಿಸಿತು, ದೇಶವನ್ನು ಕಾಡುತ್ತಿರುವ ಹತ್ತಾರು ರೀತಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಹಕ್ಕೊತ್ತಾಯದ ನಿರ್ಣಯಗಳನ್ನು ಅಂಗೀಕರಿಸಿತು. ಮತ್ತೆ ನಡೆದ ಪಕ್ಷದ ಆಂತರಿಕ ಆತ್ಮಾವಲೋಕನ ಸಭೆಯಲ್ಲಿ ಸಮಾಜವಾದಿಗಳ ಕುಡಿತದ ಚಟದ ಬಗೆಗೂ ಒಂದಿಷ್ಟು ಕಾವೇರಿದ ಚರ್ಚೆ ನಡೆಯಿತು. ಸಾರ್ವಜನಿಕ ಬದುಕಿನಲ್ಲಿ ಕುಡಿತದಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಅದನ್ನು ಯಾರೆಲ್ಲ ಅಭ್ಯಾಸ ಮಾಡಿಕೊಂಡಿದ್ದೀರೊ ಅವರೆಲ್ಲರೂ ಅದನ್ನು ಬಿಡಬೇಕೆಂಬ ಠರಾವನ್ನು ಮಂಡಿಸುವ ಹಂತಕ್ಕೂ ಸಭೆ ಹೋಯಿತು. ಅವಸರದಲ್ಲಿ ನಿರ್ಣಯ ಬೇಡ ಎಂಬುದು ಕೆಲವರ ಸಲಹೆಯಾಗಿತ್ತು. ಅಂಥ ಸಲಹೆಯನ್ನು ಮಂಡಿಸಿದವರಲ್ಲಿ ನಮ್ಮ ಪಟೇಲರು ಒಬ್ಬರು.
ಪಟೇಲರಂತೆಯೆ ಕುಡಿತದ ಸಹವಾಸವಿದ್ದ ಅನೇಕರು ಸಭೆಯಲ್ಲಿದ್ದರಾದರೂ ಅವರಲ್ಲಿ ಯಾರೊಬ್ಬರಿಗೂ ಪಟೇಲರಿಗೆ ಇರುವ ಧೈರ್ಯವಿರಲಿಲ್ಲ. ಹಾಗಾಗಿ ಅವರೆಲ್ಲ ಮೌನಕ್ಕೆ ಶರಣಾದರು. ಆ ಪೈಕಿ ಮತ್ತೆ ಕೆಲವರು ತಮ್ಮ ಕೆಲಸವನ್ನು ಪಟೇಲರು ಮಾಡಿಕೊಡುತ್ತಾರೆಂಬ ವಿಶ್ವಾಸದಲ್ಲಿ ಮೌನಕ್ಕೆ ಜೋತುಬಿದ್ದರು. ಕುಡಿತ ಬಿಡುತ್ತೇನೆಂದು ಇಲ್ಲಿ ಮಾತು ಕೊಟ್ಟು ತಮ್ಮತಮ್ಮ ರಾಜ್ಯಗಳಿಗೆ ಹೋಗುವವರಲ್ಲಿ ಬಹುತೇಕರು ವಚನಭ್ರಷ್ಟರಾಗುತ್ತಾರೆ. ಹಾಗಾಗಿ ಅಂಥ ಒತ್ತಡದ ಹೇರಿಕೆ ಸಲ್ಲದೆಂದು ಪಟೇಲರು ಧೈರ್ಯವಾಗೆ ಹೇಳಿ ಕುಳಿತರು. ಲೋಹಿಯಾರಿಗೆ ಪಟೇಲರ ಮಾತಿನಲ್ಲಿ ತಥ್ಯವಿದೆ ಎನ್ನಿಸಿ ಆ ವಿಚಾರದಲ್ಲಿ ಸಂಯಮದ ಉಸಾಬರಿಯನ್ನು ಸದಸ್ಯರಿಗೇ ಬಿಟ್ಟು ವಿಷಯಕ್ಕೆ ಮಂಗಳ ಹಾಡಿದರೆನ್ನುವುದು ಕಥೆ.
ಈಗ ಮತ್ತೆ ಬಿಜೆಪಿ ಹೆಂಡದ ಪುರಾಣದತ್ತ ನಮ್ಮ ಪ್ರಯಾಣ. ಪ್ರಕಟಿತ ಸುದ್ದಿಯ ರೀತ್ಯ ಇದು ವರದಿಯಾಗಿರುವುದು ವಿಜಯವಾಡಾದಿಂದ. ಆಂಧ್ರಪ್ರದೇಶದಲ್ಲಿ ಒಂದಿಷ್ಟು ಸೀಟನ್ನಾದರೂ ಗೆಲ್ಲಲೇಬೇಕೆಂದು ಹೊರಟಿರುವ ಬಿಜೆಪಿ ಅದಕ್ಕಾಗಿ ಇನ್ನಿಲ್ಲದಂಥ ಕಸರತ್ತನ್ನು ನಡೆಸಿದೆ. ಆಂಧ್ರದಲ್ಲೀಗ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‌ಮೋಹನ್ ರೆಡ್ಡಿ ಸರ್ಕಾರ ಆಡಳಿತ ನಡೆಸುತ್ತಿದೆ. ಸರ್ಕಾರದ ಬುಡವನ್ನು ಅಭದ್ರಗೊಳಿಸಿ ಆಡಳಿತ ಸೂತ್ರವನ್ನು ಕೈಗೆ ತೆಗೆದುಕೊಳ್ಳುವ ಧಾವಂತದಲ್ಲಿ ತೆಲುಗುದೇಶಂ ಪಕ್ಷವಿದೆ. ಅದರ ಮುಖಂಡ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೈತಪ್ಪಿ ಹೋಗಿರುವ ಅಧಿಕಾರವನ್ನು ಮರು ವಶಪಡಿಸಿಕೊಳ್ಳುವುದಕ್ಕಾಗಿ ಮೈಕೈಯನ್ನೆಲ್ಲ ಪರಪರ ಕೆರೆದುಕೊಳ್ಳುತ್ತಿದ್ದಾರೆ. ಆಳುವ ಪಕ್ಷ ಹಾಗೂ ಅಧಿಕಾರ ಇಲ್ಲದೆ ಅಳುವ ಪಕ್ಷಗಳ ನಡುವೆ ಬೇಳೆ ಬೇಯಿಸಿಕೊಳ್ಳುವ ತರಾತುರಿಯಲ್ಲಿರುವ ಭಾರತೀಯ ಜನತಾ ಪಕ್ಷ ಇದೀಗ ಹೆಂಡವನ್ನು ಮುಂದಿಟ್ಟುಕೊಂಡು ಓಟು ಕೇಳುವಷ್ಟರ ಮಟ್ಟಕ್ಕೆ ಕುಸಿದಿದೆ. ಹೇಳುವುದು ಆಚಾರ ತಿನ್ನೋದು ಬದನೆಕಾಯಿ ಎಂಬಂತಿದೆ ಅದರ ನೈತಿಕ ದಿವಾಳಿತನ. ಈ ಪ್ರಕರಣದ ಬೆಳವಣಿಗೆ ಹೀಗಿದೆ ಓದಿ:


ವಿಜಯವಾಡಾದಲ್ಲಿ ಆಂಧ್ರ ಪ್ರದೇಶ ಬಿಜೆಪಿ ಆಶ್ರಯದಲ್ಲಿ ಪ್ರಜಾ ಆಗ್ರಹ ಸಭಾ ಎಂಬ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮುಖ್ಯ ಆಕರ್ಷಣೆಯಾಗಿ ಪಾಲ್ಗೊಂಡಿದ್ದವರು ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು. ಹಾಲಿ ಸರ್ಕಾರ ಅದನ್ನು ಮಾಡಿಲ್ಲ ಇದನ್ನು ಮಾಡಿಲ್ಲ ಎಂದು ಟೀಕಿಸುವ, ಅದನ್ನು ಮಾಡಬೇಕು ಇದನ್ನು ಮಾಡಬೇಕೆಂದು ಒತ್ತಾಯ ಮಾಡುವುದು ಇಂಥ ಆಗ್ರಹ ಸಭೆಗಳ ಉದ್ದೇಶ. ಅದರಲ್ಲಿ ತಪ್ಪೇನೂ ಇಲ್ಲ. ವಿರೋಧ ಪಕ್ಷಗಳು ಮಾಡುವ ಮತ್ತು ಮಾಡಲೇಬೇಕಾದ ಕೆಲಸ ಅದು. ಪ್ರಜಾಪ್ರಭುತ್ವದಲ್ಲಿ ಆಳುವ ಪಕ್ಷದ ಕಣ್ಣುಕಿವಿ ತೆರೆಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕು ಇದರಲ್ಲಿ ರಾಜೀಭಾವ ಸಲ್ಲದು. ಆ ದೃಷ್ಟಿಯಿಂದ ವಿಜಯವಾಡಾದಲ್ಲಿ ನಡೆದ ಪ್ರಜಾ ಆಗ್ರಹ ಸಮಾವೇಶ ಮೆಚ್ಚುವ ಕೆಲಸ. ಚಿತ್ರವನ್ನು ಮಸಿ ನುಂಗಿತು ಎನ್ನುತ್ತಾರಲ್ಲ ಹಾಗಾಯಿತು ಸಭೆ ಅಂತಿಮ ಫಲಶ್ರುತಿ.
ಹಾಲಿ ಸರ್ಕಾರಕ್ಕೆ ಐದು ವರ್ಷ ಭರ್ತಿಯಾಗುತ್ತಿದ್ದಂತೆ ಅಂದರೆ ೨೦೨೪ರ ಜೂನ್ ತಿಂಗಳಿಗೆ ಮುನ್ನ ಆಂಧ್ರ ವಿಧಾನ ಸಭಾ ಚುನಾವಣೆ ನಡೆಯಲಿದೆ. ಸಭೆಯ ಸದಸ್ಯ ಬಲ ೧೭೫. ಇದರಲ್ಲಿ ೧೫೧ ಸ್ಥಾನ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಕೈಲಿದೆ. ಮೂರನೇ ಎರಡಕ್ಕಿಂತ ಹೆಚ್ಚಿನ ಬಲ ಜಗನ್ ಸರ್ಕಾರಕ್ಕೆ ಇದೆ. ಮುಖ್ಯ ವಿರೋಧ ಪಕ್ಷ ತೆಲುಗು ದೇಶಂ ೨೩ ಶಾಸಕರನ್ನು ಹೊಂದಿದೆ. ಎನ್‌ಡಿಎದ ಅಂಗಪಕ್ಷವಾಗಿರುವ ಜನಸೇವಾ ಪಾರ್ಟಿ ಒಂದು ಸೀಟನ್ನು ಗೆದ್ದು ಮರ್ಯಾದೆ ಉಳಿಸಿಕೊಂಡಿದೆ. ಸೂಪರ್ ಸ್ಟಾರ್ ಎಂದು ಕರೆಯುವ ಚಿತ್ರನಟ ಪವನ್‌ಕಲ್ಯಾಣ್ ಮುಖಂಡತ್ವದ ಪಕ್ಷ ಇದು. ಕಳೆದ ಚುನಾವಣೆಯಲ್ಲಿ ಬಿಜೆಪಿ,ಕಾಂಗ್ರೆಸ್, ಸಿಪಿಐ, ಸಿಪಿಎಂನದು ಸೊನ್ನೆಸಾಧನೆ. ಆ ರಾಜ್ಯದಲ್ಲಿ ತಥಾಕಥಿತ ರಾಷ್ಟ್ರೀಯ ಪಕ್ಷಗಳನ್ನು ಎಲ್ಲಿಡಬೇಕೊ ಅಲ್ಲೇ ಇಟ್ಟಿದ್ದಾರೆ ಮತದಾರರು. ಇದೇನೇ ಇದ್ದರೂ ರಾಜಕೀಯ ಯಾವಾಗ ಯಾವೆಲ್ಲ ಬಗೆಯ ತಿರುವು ಪಡೆಯುತ್ತದೊ ಭವಿಷ್ಯ ನುಡಿಯಲಾಗದು. ಹೀಗೆ ನೋಡಿದಾಗ ಅಧಿಕಾರಕ್ಕೆ ಬರುವ ಕನಸಿನ ದಾರಿಯಲ್ಲಿ ಬಿಜೆಪಿ ನಡೆಸಿರುವ ಯತ್ನ ಆಕ್ಷೇಪಾರ್ಹವೇನಲ್ಲ. ಆದರೆ ಅದಕ್ಕಾಗಿ ವಾಮ ಮಾರ್ಗ ಹಿಡಿಯುವ ನಡವಳಿಕೆ ಮಾತ್ರ ಖಂಡಿತಕ್ಕೂ ಆಕ್ಷೇಪಾರ್ಹ, ಖಂಡನೀಯ.


ವಿಜಯವಾಡಾದ ಪ್ರಜಾ ಆಗ್ರಹ ಸಭೆಯಲ್ಲಿ ಮಾತಾಡುತ್ತ ಪಕ್ಷದ ಅಧ್ಯಕ್ಷ ಸೋಮು ವೀರರಾಜು ರಾಜ್ಯದ ಜನ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮದ್ಯದ (ಹೆಂಡ ಇತ್ಯಾದಿ) ದರವನ್ನು ಗಣನೀಯವಾಗಿ ಇಳಿಸುವುದಾಗಿ ಭರವಸೆ ನೀಡಿ ಸಭೆಯನ್ನು ಚಕಿತಗೊಳಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಒಂದು ಕೋಟಿ ಓಟು ಬಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮದ್ಯದ ಬೆಲೆಯನ್ನು ಈಗ ಇರುವ ಯರ್ರಾಬಿರ್ರಿ ದರದ ಬದಲಿಗೆ ೭೫ ರೂಪಾಯಿಗೆ ಇಳಿಸಲಿದೆ ಎಂದು ಅವರು ಘೋಷಿಸಿದ್ದಾರೆ. ಪಕ್ಷಕ್ಕೆ ಇನ್ನೂ ಹೆಚ್ಚಿನ ಬಹುಮತ ದೊರೆತಲ್ಲಿ ಆದಾಯ ಸಂಪನ್ಮೂಲ ನೋಡಿಕೊಂಡು ಮದ್ಯದ ದರವನ್ನು ೫೦ ರೂಪಾಯಿಗೇ ಇಳಿಸುವುದನ್ನೂ ಪಕ್ಷ/ ಸರ್ಕಾರ ಪರಿಶೀಲಿಸಲಿದೆ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಸ್ವರೂಪದ ಟೀಕಾತ್ಮಕ ಪ್ರತಿಕ್ರಿಯೆ ಬಂದಿದೆ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಹೇಯ ರಾಜಕೀಯಕ್ಕೆ ಬಿಜೆಪಿ ಮುಂದಾಗಿದೆ ಎನ್ನುವುದು ಅದರ ವಿರುದ್ಧ ಮುಖ್ಯವಾಗಿ ಕೇಳಿಬರುತ್ತಿರುವ ಆರೋಪ.


ಕನಿಷ್ಟ ಪ್ರಮಾಣದಲ್ಲಾದರೂ ಸಾಮಾನ್ಯ ಪ್ರಜ್ಞೆ ರಾಜಕೀಯ ಪಕ್ಷಗಳಲ್ಲಿ ಇರಬೇಕೆಂದು ಜನ ಬಯಸುತ್ತಾರೆ. ಹಣ, ಹೆಂಡದ ಆಮಿಷವನ್ನೊಡ್ಡಿ ಓಟು ಗಳಿಸುವ ಪ್ರವೃತ್ತಿಗೆ ದೇಶದ ಯಾವ ಪಕ್ಷವೂ ಹೊರತಾಗಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ಸನ್ನು ಮಾತ್ರವೇ ಈ ಕಾರಣಕ್ಕಾಗಿ ಪ್ರತ್ಯೇಕಿಸಿ ಟೀಕಿಸುವುದರಲ್ಲೂ ಅರ್ಥವಿಲ್ಲ. ಅದೇನೇ ಇರಲಿ, ಸಾಮಾಜಿಕ, ಕೌಟುಂಬಿಕ ಬದುಕಿಗೆ ಮದ್ಯ ವ್ಯಸನ ಮಾಡಿರುವ ಮಾಡುತ್ತಿರುವ ಹಾನಿಗೆ, ಹಾವಳಿಗೆ ಪುಂಖಾನುಪುಂಖ ನಿದರ್ಶನಗಳಿವೆ. ಸ್ತ್ರೀ ಸಮುದಾಯದ ಬಹುದೊಡ್ಡ ಕವಲು ಮದ್ಯ ಮಾರಾಟ, ಸೇವನೆ ವಿರುದ್ಧ ಸಿಡಿದು ನಿಂತಿದೆ. “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಎನ್ನುವುದು ಸಂಘ ಪರಿವಾರ ಮುಖ್ಯವಾಗಿ ಬಳಸುವ ಬೀಜ ಮಂತ್ರಗಳಲ್ಲಿ ಒಂದು. ಆದರೆ ಸ್ತ್ರೀ ಕುಲಕ್ಕೆ ಬೇಡವಾಗಿರುವ ಚಟವೊಂದನ್ನು ರಾಜಕೀಯಕ್ಕೆ ನಿರ್ಲಜ್ಜ ರೀತಿಯಲ್ಲಿ ಬಳಸಿಕೊಳ್ಳಲು ಹೊರಟಿರುವ ಬಿಜೆಪಿ ಮುಖಂಡ ಸೋಮು ವೀರರಾಜು ಯಾವ ರೀತಿಯ ಸಂದೇಶವನ್ನು ರವಾನಿಸುವುದಕ್ಕೆ ಮುಂದಾಗಿದ್ದಾರೋ…?

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ೨೦೧೪ರಲ್ಲಿ ಖಾದ್ಯ ತೈಲದ ಬೆಲೆ ಕೆಜಿಗೆ ೯೦ ರೂಪಾಯಿ ಇದ್ದುದು ಈಗ ೩೦೦ಕ್ಕೆ ಏರಿದೆ. ಪೆಟ್ರೋಲ್, ಡೀಸೆಲ್ ಬೆಲೆಯಂತೂ ಆಕಾಶದತ್ತ ನೆಗೆಯುತ್ತಲೇ ಇದೆ. ಜನರ ಬದುಕನ್ನು ದಿನೇದಿನೇ ದುರ್ಭರಗಳಿಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾತನ್ನಾದರೂ ಆಡಬೇಕಿದ್ದ ಆಡಳಿತ ಅಧ್ಯಕ್ಷರಾದವರು ಜನರ ದುಃಖ ದುಮ್ಮಾನಕ್ಕೂ ಕಷ್ಟಕೋಟಲೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇರುವುದು ನಮ್ಮ ದೇಶದ ವಿಪರೀತಗಳಲ್ಲಿ ಒಂದು.

 

Girl in a jacket
error: Content is protected !!