ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ
ಆ ಸಣ್ಣ ಊರಿನಲ್ಲಿ ಮೂರು ದೇವಸ್ಥಾನಗಳಿದ್ದವು. ರಾಮ ಮಂದಿರ, ಆಂಜನೇಯ ಗುಡಿ, ಈಶ್ವರ ದೇವಾಲಯ, ಮತ್ತು ಇನ್ನೊಂದೆಡೆ ನಾಗರಕಟ್ಟೆ ದೇವಸ್ಥಾನ. ವರ್ಷದ ಬಹುಶಃ ಶ್ರಾವಣ ಅಥವ ಕಾರ್ತೀಕ ಮಾಸದಲ್ಲಿ ಈಶ್ವರ ದೇವಾಲಯದಲ್ಲಿ ಸಪ್ತಾಹ ನಡೆಸುತ್ತಿದ್ದರು. ಅದು ಯಾವ ಮಾಸವೆಂದು ಸರಿಯಾಗಿ ನೆನಪಿಲ್ಲ. ಏಳು ದಿನಗಳ ಕಾಲ ಊರಿನ ಎಲ್ಲಾ ಜನರು ಜಾತಿ, ಧರ್ಮ ಬೇಧ ಮರೆತು ಪಾಲ್ಗೊಂಡು ಹಾಡಿ ಕುಣಿದು ಭಕ್ತಿಯಿಂದ ಆಚರಿಸುತ್ತರು. ಕೋಲಾಟ, ದೇವರ ಕುಣಿತ, ಡೋಲು ಮುಂತಾಡವು ಇರುತ್ತಿದ್ದವು.
ನಾವು ಮಕ್ಕಳೆಲ್ಲಾ ಆಟಗಳನ್ನು ಆಡುವುದರಲ್ಲಿ ಮುಂದಿದ್ದೆವು. ಈಗಿನ ಮಕ್ಕಳಂತೆ ಮೊಬೈಲ್ ನಲ್ಲಿಯೇ ಮುಖ ಹುದುಗಿಸಿಕೊಂಡು ಮಕ್ಕಳ ಯುಟ್ಯೂಬ್ ನಲ್ಲಿ ಕಾರ್ಟೂನ್ ಚಿತ್ರಗಳನ್ನು ನೋಡುತ್ತಾ ಒಂದೆಡೆ ಕೂರುವಂತೆ ಕೂರುತ್ತಿರಲಿಲ್ಲ.
ಈಗಿನ ಮಕ್ಕಳಿಗೆ ಶರೀರವೇ ಬಾರ ಏಕೆಂದರೆ ಮೊಬೈಲ್ ಅವರನ್ನು ಆ ಸ್ಥಿತಿಗೆ ತಂದಿಟ್ಟಿದೆ. ನಾವು ಚಿಕ್ಕವರಿದ್ದಾಗ ಯಾರಾದರೂ ಅಂಗಡಿಗೆ ಹೋಗಿಬನ್ನಿ ಎಂದು ಸಹಾಯ ಕೇಳಿದರೆ ಪ್ರ್.॒ಪ್ರೂ.॒. ಎಂದು ಬೈಕ್ ಏರಿದಂತೆ ಓಡಿ ಹೋಗಿ ತಂದು ಕೊಡುತ್ತಿದ್ದೆವು. ಈಗ ಮನೆಯವರೇ ಕೇಳಿಕೊಂಡರು ಮಕ್ಕಳು ಕೂತ ಜಾಗದಿಂದ ಮೇಲೇಳುವುದೇ ಕರಕಷ್ಟವಾಗಿದೆ. ನಮಗೆ ಆಗ ಆಟಿಕೆಗಳ ಸವಲತ್ತುಗಳೂ ಸಹ ಇರುತ್ತಿರಲಿಲ್ಲ. ಶಾಲೆಯಲ್ಲಿ ಒಂದೋ ಎರಡೋ ಕೇರಂ ಬೋರ್ಡ ಇತ್ತು. ಅವು ನಮಗೆ ಕೊಡುತ್ತಿರಲಿಲ್ಲ. ಹೈಯರ್ ಪ್ರೈಮರಿಯವರಿಗೆ ಮಾತ್ರ ಅವು.
ನಾವು ಅವರು ಕೇರಂ ಆಡುತ್ತಿದ್ದರೆ ಅವರ ಸುತ್ತಲೂ ಕೂತು ಮಿಕ ಮಿಕ ನೋಡುತ್ತಾ ಇರುತ್ತಿದ್ದೆವು.
ನಾವು ಮೊದಲೇ ಏನಾದರೂ ಹೊಸತು ಕಂಡುಹಿಡಿಯುವಲ್ಲಿ ಪಂಟರಿದ್ದೆವು. ಅವರು ಕೇರಂ ಕೊಡದಿದ್ದರೆ ಏನಾಯಿತು. ನಾವೇ ಒಂದು ತಯಾರು ಮಾಡಿಕೊಂಡಿದ್ದೆವು. ಅದೇನೆಂದರೆ ಒಂಬತ್ತು ಕಪ್ಪು ಬಣ್ಣದ ಕಲ್ಲುಗಳು, ಒಂಬತ್ತು ಬಿಳಿಯ ಬಣ್ಣದ ಕಲ್ಲುಗಳು, ಒಂದು ಕೆಂಪು ಬಣ್ಣ ಹಚ್ಚಿದ ಕಲ್ಲು, ಒಂದು ದೊಡ್ಡ ಕಲ್ಲು. ಸ್ಟ್ರೈಕರ. ಅವನ್ನು ಒಂದು ಸಮ ಗಾರೆ ನೆಲದ ಮೇಲೆ ಕೇರಂ ರೀತಿಯೇ ಸೀಮೆಸುಣ್ಣದಲ್ಲಿ ಬರೆದು ಗೆರೆ ಕೂಡಿಸಿ ಆಟವಾಡುತ್ತಿದ್ದೆವು. ಆ ಆಟ ಬೇಜಾರಾದರೆ ಗೋಲಿ, ಬಗರಿ ಆಟಗಳನ್ನು ಆಡುತ್ತಿದ್ದೆವು.
ನಾನು ಮೇಲೆ ಹೇಳಿದಂತೆ ಎಲ್ಲರೂ ಒಗ್ಗಟ್ಟಾಗಿ ಇದ್ದ ನಮ್ಮೂರಲ್ಲಿ ಮಕ್ಕಳು ಆಟ ಆಡುತ್ತಿದ್ದ ಇದ್ದರೆ ಎಲ್ಲವೂ ಸರಿಯೇ ಇರುತ್ತಿತ್ತು. ನಮ್ಮಗಳ ಮಧ್ಯೆ ಜಗಳ ಬಂದರೆ ಮೂದಲಿಕೆ ಶುರುವಾಗುತ್ತಿತ್ತು. ನಮ್ಮ ಪಕ್ಕದ ಮನೆಯ ಮೂರು ಮನೆಗಳೂ ಮುಸ್ಲಿಂ ಕುಟುಂಬದವರಿದ್ದರು. ಜಗಳ ಬಂದಾಗ ನಾವು ಮಕ್ಕಳು ಆಸೀಫ್ ಮತ್ತು ನೂರ್ ಜಹಾನ್ ಅವರನ್ನು ಮಸೀದಿಯಲ್ಲಿ ಆಜಾನ್ ಕರೆಯುವುದನ್ನು “ ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ” ಎಂದು ಹೇಳಿ ನಗುತ್ತಿದ್ದೆವು. ಅವರು ಸಪ್ತಾಹದಲ್ಲಿ ಭಾಗವಹಿಸುತ್ತಿದ್ದ ಕಾರಣ ಅವರೂ ‘ಓಂ ನಮಃ ಶಿವಾಯ’ ಅನ್ನುವ ಬದಲು “ ನಮಕ್ ಚುರಾಯ’ ಎಂದು ಹೇಳು ಗೇಲಿ ಮಾಡುತ್ತಿದ್ದರು. ನಂತರ ನಮ್ಮ ಮತ್ತು ಅವರ ಮನೆಯ ಹಿರಿಯರು ಗದರಿಸಿದರೆ ಬೈದರೆ ಸುಮ್ಮನಾಗುತ್ತಿದ್ದೆವು.
ಅವರ ಮಕ್ಕಳು ಅಂದದ್ದಕ್ಕೆ ನಾವು ಅವರನ್ನು ಅಂದದ್ದಕ್ಕೆ ಯಾವುದೇ ಬೇಸರ ನಮ್ಮ ಅಥವಾ ಅವರ ಮನೆಯ ಹಿರಿಯರ ಮನದಲ್ಲಿ ಬೇಸರವಿರುತ್ತಿರಲಿಲ್ಲ. ಬದಲಾಗಿ ಪರಸ್ಪರ ನಗುತ್ತಾ ನಮ್ಮನ್ನು ಗದರಿಸಿ ಹಾಗೆಲ್ಲಾ ಹೇಳಬಾರದು. ಎಲ್ಲರನ್ನೂ ಎಲ್ಲವನ್ನೂ ಗೌರವಿಸುವುದು ಕಲಿಯಬೇಕೆಂದು ಬುದ್ಧಿ ಹೇಳುತ್ತಿದ್ದರು.
ಈಗಿನ ಕಾಲದಲ್ಲಿ ಇದೇನಾದರೂ ಮಕ್ಕಳ ಮಧ್ಯೆ ಆಗಿದ್ದಿದ್ದರೆ ‘ಎಲ್ಲಾ ಚಾನಲ್ಗಳಲ್ಲೂ ಮಹಾ ಸುದ್ದಿಯಾಗಿ’ ಅದನ್ನೇ ಒಂದು ವಾರ ಪ್ರಸಾರ ಮಾಡುತ್ತಿದ್ದುವೇನೋ! ಆದರೆ ಆ ದಿನಗಳು ಈ ರೀತಿಯಿರಲಿಲ್ಲ. ಈ ದಿನಗಳು ಆ ರೀತಿಯಿರಲಾಗದೇನೋ. ಆದರೆ ಆ ನೆನಪುಗಳು ಮಾತ್ರ ಸುಂದರ.