ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . . .

Share

ಅಣ್ಣಿಗೇರಿಯ ಆಕಸ್ಮಿಕ ತಲೆಬುರುಡೆಗಳತ್ತ . . . .

ಅಣ್ಣಿಗೇರಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪ್ರಾಚೀನ ಗ್ರಾಮ. ಇದು ಪ್ರಸಿದ್ಧವಾಗಿರುವುದು ಹೊಯ್ಸಳ ಕಾಲದ ಅಮೃತೇಶ್ವರ ದೇವಾಲಯದಿಂದ. ಕ್ರಿ.ಶ.೧೦೫೦ರಲ್ಲಿ ನಿರ್ಮಾಣವಾದ ಈ ದೇವಾಲಯವಲ್ಲದೆ, ಈ ಗ್ರಾಮವು ಬೆಳವೊಲ-೩೦೦ ನಾಡಿನ ಪ್ರಸಿದ್ಧ ರಾಜಧಾನಿಯಾಗಿದ್ದುದು ಗಮನಾರ್ಹ. ಇಲ್ಲಿ ಹನ್ನೆರಡಕ್ಕೂ ಹೆಚ್ಚು ಪ್ರಾಚೀನ ದೇವಾಲಯ ಮತ್ತು ಜಿನಾಲಯಗಳು ಹಾಗೂ ಇಪ್ಪತ್ತೆಂಟಕ್ಕೂ ಹೆಚ್ಚು ಶಾಸನಗಳನ್ನು ಕಾಣಬಹುದು. ಅವುಗಳಲ್ಲಿ ರಾಮಲಿಂಗೇಶ್ವರ, ಬನಶಂಕರಿ, ಕಲ್ಮಠ(ತ್ರಿಕೂಟ), ಪುರದ ವೀರಭದ್ರೇಶ್ವರ, ಪಾರ್ಶ್ವನಾಥ ಬಸದಿ ಮುಖ್ಯವಾಗಿವೆ. ಇವು ಅಣ್ಣಿಗೇರಿಯ ಪ್ರಾಚೀನ ಚರಿತ್ರೆಯನ್ನು ಸಾರಿದರೆ, ಇತ್ತೀಚೆಗೆ ಕಂಡುಬಂದ ಚರಂಡಿ ಕಾಮಗಾರಿಯ ಅವಶೇಷಗಳದ್ದು ಮತ್ತೊಂದು ಇತಿಹಾಸ.
೨೦೧೦ರಿಂದ ಈಚೆಗೆ ಈ ಗ್ರಾಮವು ದೇಶದಲ್ಲೇ ಸುದ್ದಿಯ ಪ್ರಮುಖ ಕೇಂದ್ರವಾಯಿತು. ಅದಕ್ಕೆ ಕಾರಣ ಈ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಆಕಸ್ಮಿಕವಾಗಿ ಕಂಡುಬಂದ ಮುನ್ನೂರಕ್ಕೂ ಹೆಚ್ಚು ಮಾನವ ತಲೆಬುರುಡೆ ಮತ್ತು ಇತರೆ ಮೂಳೆಯ ಅವಶೇಷಗಳು. ಅದೂ ಜೆಸಿಬಿಯಿಂದ ಚರಂಡಿಯನ್ನು ಅಗೆಯುತ್ತಿದ್ದ ಸಂದರ್ಭದಲ್ಲಿ ಕಂಡುಬಂದ ಭಯಾನಕ ಚಿತ್ರಣವಿದು. ಅಷ್ಟೊಂದು ಸಂಖ್ಯೆಯಲ್ಲಿ ಕಂಡುಬಂದ ಮನುಷ್ಯರ ತಲೆಬುರುಡೆಗಳು ಒಂದು ಕಾಲದ ಕರಾಳಮುಖದ ಪ್ರತೀಕವೇ ಆಗಿದ್ದಿರಬೇಕು. ಆದರೆ ಯಾವ ಕಾಲದಲ್ಲಿ, ಯಾರು, ಏಕೆ ಮತ್ತು ಹೇಗೆ ? ಈ ಕೃತ್ಯವನ್ನು ಎಸಗಿದರೆಂಬುದರತ್ತ ದಿನಪತ್ರಿಕೆ, ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳಲ್ಲಿ ಸುದ್ದಿಯೋ ಸುದ್ದಿ. ಒಬ್ಬೊಬ್ಬರು ಒಂದೊಂದು ಬಗೆಯ ವಿವರಣೆ, ಹೇಳಿಕೆ, ವಿಶ್ಲೇಷಣೆಗಳನ್ನು ನೀಡಲೆತ್ನಿಸಿದ್ದರು. ಕೆಲವರು ಯುದ್ಧವೊಂದರಲ್ಲಿ ನಡೆದ ಭಯಾನಕ ನರಹಂತಕ ಕೃತ್ಯವೆಂದು ಹೇಳಿದರೆ, ಇನ್ನು ಕೆಲವರು ಧರ್ಮಾಧಾರಿತ ತಾಂತ್ರಿಕ ಆಚರಣೆಗಳ ಭಾಗವಾಗಿ ನಡೆದುದೆಂದೂ, ಕೆಲವರು ಸಾಮೂಹಿಕ ಆತ್ಮ ಬಲಿದಾನದ ಕುರುಹುಗಳೆಂದೂ, ಮತ್ತೆ ಕೆಲವರು ಪ್ರಾಚೀನ ಶೈವ ಧರ್ಮದಲ್ಲಿ ಬರುವ ಆತ್ಮಾರ್ಪಣೆಯಿಂದ ಆದ ಪ್ರಕರಣ ಎಂದು ಒಂದೊಂದು ಬಗೆಯಲ್ಲಿ ಹೇಳುತ್ತಿದ್ದ ಸುದ್ದಿಗಳು ರಾಜ್ಯವಲ್ಲದೆ ದೇಶದ ಅನೇಕ ಪತ್ರಿಕೆಗಳಲ್ಲಿ ಬಿತ್ತರಗೊಳ್ಳುತ್ತಿದ್ದವು. ಈ ಸುದ್ದಿಗಳನ್ನು ನೋಡಿ, ಕೇಳಿದ ನಮಗೆ ಅವುಗಳನ್ನು ನೋಡುವ ತವಕ ಮತ್ತು ಕುತೂಹಲ ಹೆಚ್ಚಾಯಿತು.

ಸ್ನೇಹಿತರೊಂದಿಗೆ ಹೊರಟ ನಾವು ಬಸ್ಸನ್ನು ಹಿಡಿದು, ಅಣ್ಣಿಗೇರಿಯನ್ನು ತಲುಪಿ, ಅಲ್ಲಿನ ಸಂದಿಗೊಂದಿಗಳನ್ನು ದಾಟಿ ತಲೆಬುರುಡೆಗಳಿರುವ ಸ್ಥಳವನ್ನು ತಲುಪಿದ್ದೆವು. ಅವುಗಳನ್ನು ನೋಡಿದ ತಕ್ಷಣ ನಮಗೆ ಭಯ, ದುಗುಡ, ಆತಂಕಗಳು ಮನೆಮಾಡಿದವು. ನಾವು ಎಂದೂ ಕಂಡರಿಯದ, ಕೇಳಿರದ ಭಯಾನಕ ಚಿತ್ರಣವಿದು. ಪುರಾತತ್ವಜ್ಞರು ನಡೆಸಿದ್ದ ಅದುವರೆಗಿನ ಉತ್ಖನನಗಳಲ್ಲಿ ಸಾಮಾನ್ಯವಾಗಿ ಒಂದು ಶವ ಮತ್ತು ಅದರ ಮೂಳೆಯ ಅವಶೇಷಗಳು ಕಂಡುಬಂದದ್ದು ಇತಿಹಾಸ. ಆದೂ ಬೃಹತ್ ಶಿಲಾಯುಗದಲ್ಲಿ ಮಾನವ ನಿರ್ಮಿಸಿದ ದೊಡ್ಡದೊಡ್ಡ ಬಂಡೆಗಲ್ಲುಗಳನ್ನು ಒಳಗೊಂಡ ಶಿಲಾಸಮಾಧಿಗಳಲ್ಲೂ ಒಂದು, ಅಪರೂಪವೆನ್ನುವಂತೆ ಎರಡು ಶವಗಳ ಪಳಿಯುಳಿಕೆಗಳು ಕಂಡುಬಂದಿವೆ. ಆದರೆ ಅಣ್ಣಿಗೇರಿಯಲ್ಲಿ ಕಂಡುಬಂದ ಮನುಷ್ಯರ ತಲೆಬುರುಡೆಗಳು ಎಣಿಕೆಗೂ ನಿಲುಕದಷ್ಟಿದ್ದುದನ್ನು ಕಂಡ ನಮಗೆ ಇದಾವ ಭಯಾನಕ ಹತ್ಯಾಕಾಂಡ, ಅದೆಂತಹ ಘನಘೋರ ಹಾಗೂ ಕಂಡುಕೇಳರಿಯದ ಕೃತ್ಯವು ಜರುಗಿರಬಹುದೆಂಬ ನೂರಾರು ಪ್ರಶ್ನೆಗಳು ಎಲ್ಲರಂತೆ ನಮ್ಮಲ್ಲೂ ಮೂಡಿದ್ದುದು ಸಹಜವೇ? ವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿಯಲ್ಲಿ ಪಿಎಚ್.ಡಿ. ಅಧ್ಯಯನ ಮಾಡಿದ ನನಗೆ ವಿಜಯನಗರ ಕಾಲ ಮತ್ತು ವಿಜಯನಗರಪೂರ್ವ ಮತ್ತು ನಂತರ ಕಾಲದಲ್ಲಿ ನಡೆದ ಅನೇಕ ಘನಘೋರ ಯುದ್ಧಗಳನ್ನು ಓದಿದ್ದಿದೆ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣವಾದ ರಕ್ಕಸಗಿ-ತಂಗಡಗಿ ಯುದ್ಧದ ಚಿತ್ರಣಗಳನ್ನು ಅನೇಕ ಆಕರಗಳ ಮೂಲಕ ಓದಿ ಪರಿಶೀಲಿಸಿದ್ದಿದೆ. ಆದರೆ ಯಾವ ಯುದ್ಧಗಳಲ್ಲೂ ಈ ಬಗೆಯಲ್ಲಿ ನಡೆದ ನರಮೇಧಕ್ಕೆ ಸಾಕ್ಷ್ಯಗಳಿಲ್ಲ. ಪ್ರಪಂಚದ ಮಹಾಯುದ್ಧಗಳಲ್ಲೂ ಹಿಟ್ಲರ್ ಇಂತಹ ನರಮೇಧಗಳನ್ನು ಕೈಗೊಂಡನೆಂಬ ಸಂಗತಿಗಳನ್ನು ಓದಿದ್ದೇವೆ. ಅಲ್ಲೂ ಇಲ್ಲಿಯಂತೆ ತಲೆಗಳನ್ನು ಕತ್ತರಿಸಿ ಒಪ್ಪವಾಗಿ ಜೋಡಿಸಿಟ್ಟ ಉದಾಹರಣೆಗಳೇ ಇಲ್ಲ. ಆದರೆ ಇಲ್ಲಿ ಕಂಡುಬರುವ ತಲೆಬುರುಡೆಗಳದು ವಿಚಿತ್ರವಾದುದಾಗಿತ್ತು.

ಸಾಲಾಗಿ ಒಪ್ಪವೆನ್ನುವಂತೆ ಒಂದರ ಪಕ್ಕದಲ್ಲಿ ಒಂದರಂತೆ ಜೋಡಿಸಿ ಸಂಸ್ಕಾರ ಮಾಡಿದಂತೆ ಜೋಡಿಸಿಟ್ಟ ತಲೆಬುರುಡೆಗಳಾಗಿದ್ದವು. ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ಪ್ರಾಕಾರ ಗೋಡೆಯಲ್ಲಿ ತಾಂತ್ರಿಕ ಪಂಥಗಳ ಹಿನ್ನೆಲೆಯಲ್ಲಿ ಭಕ್ತರು ಆತ್ಮಾರ್ಪಣೆ ಮಾಡಿಕೊಳ್ಳುತ್ತಿರುವ ಶಿಲ್ಪಗಳನ್ನು ಆಗತಾನೆ ಅಲ್ಲಿ ನಾನು ಕಂಡಿದ್ದೆನು. ಭಕ್ತರು ತಮ್ಮ ದೇಹವನ್ನು ಶಿವಲಿಂಗಕ್ಕೆ ಸಮರ್ಪಿಸುತ್ತಿರುವ, ಭಕ್ತರ ಶಿರಗಳನ್ನು ವ್ಯಕ್ತಿಯೋರ್ವ ಕಡಿಯುತ್ತಿರುವಂತಹ ಶಿಲ್ಪಗಳೂ ಅಲ್ಲಿನ ಹೊರಗೋಡೆಯಲ್ಲಿವೆ. ಅಲ್ಲದೆ ಕಡಿದ ಶಿರಗಳನ್ನು ಸಾಲಾಗಿ ಜೋಡಿಸಿಟ್ಟಂತೆ ಕಡೆದ ಹತ್ತಾರು ಉಬ್ಬುಗೆತ್ತನೆಗಳನ್ನೂ ಅಲ್ಲಿ ಕಂಡಿದ್ದೆನು. ಅಂತಹ ಆತ್ಮ ಸಮರ್ಪಣೆಯ ಬಲಿದಾನಗಳೇನಾದರೂ ಅಣ್ಣಿಗೇರಿಯಲ್ಲಿ ನಡೆದಿರಬಹುದೇ ಎಂದು ನನಗನ್ನಿಸಿತು. ಇಂತಹ ಆತ್ಮಾರ್ಪಣೆಯ ಉಬ್ಬುಶಿಲ್ಪಗಳನ್ನು ನಾಡಿನ ಸಂಸ್ಕೃತಿ ಚಿಂತಕರಾದ ಡಾ. ಎಂ.ಎಂ ಕಲಬುರ್ಗಿ ಅವರಿಗೂ ಕಳುಹಿಸಿಕೊಟ್ಟೆನು. ಅವರು ಈ ಬಗೆಯ ಶಿಲ್ಪ ಮತ್ತಿತರ ಪ್ರಾಚೀನ ಆಚರಣೆಗಳಿಂದ ಆಗಿರಬಹುದಾದ ಸಂಗತಿಯನ್ನೂ ಪ್ರಕಟಪಡಿಸಿದ್ದರು. ಆದರೆ ಅಣ್ಣಿಗೇರಿಯಲ್ಲಿ ಕಂಡುಬಂದ ತಲೆಬುರುಡೆಗಳು ಶ್ರೀಶೈಲದ ಉಬ್ಬುಶಿಲ್ಪಗಳಂತೆ ಪೂರ್ಣಪ್ರಮಾಣದ ತಲೆಗಳಾಗಿರಲಿಲ್ಲ. ಅಲ್ಲಿ ಕಂಡುಬಂದ ತಲೆಬುರುಡೆಗಳ ವಿಶೇಷತೆಯೆಂದರೆ ದವಡೆ ಇಲ್ಲದ ತಲೆಯ ಮೇಲ್ಭಾಗ ಮಾತ್ರವಿದ್ದುದು. ಒಂದೇ ಒಂದು ತಲೆಬುರುಡೆಯಲ್ಲೂ ದವಡೆಯ ಭಾಗವಿಲ್ಲದುದು ವಿದ್ವಾಂಸರಿಗೆ ಅನೇಕ ಸಂದೇಹ, ಸಂಶಯಗಳಿಗೆ ಎಡೆಯಾಗಿತ್ತು. ತಲೆಯೊಂದಿಗೆ ಇರಬೇಕಾಗಿದ್ದ ದವಡೆಯಿಲ್ಲದೆ ಮನುಷ್ಯನ ದೇಹವಿರುವುದುಂಟೇ, ಹಾಗೆಯೇ ದೇಹದ ಇತರೆ ಭಾಗಗಳಾದ ಕೈ, ಕಾಲು, ಪಕ್ಕೆಲುಬಿನ ಹಂದರ, ಬೆನ್ನುಮೂಳೆ ಮತ್ತಿತರ ದೇಹದ ಮೂಳೆಯ ಅವಶೇಷಗಳೇನಾದರೂ ತಲೆಯೊಂದಿಗೆ ಇವೆಯೇ ಎಂದರೆ, ಆ ರೀತಿಯ ಒಂದೂ ದೇಹ ಅಲ್ಲಿ ಕಂಡುಬರದಿದ್ದುದು ನಿಜಕ್ಕೂ ಯೋಚನೆಗೂ ನಿಲುಕದಂತಹ ಸಂಗತಿಗಳಾಗಿದ್ದವು. ಈ ಹಿನ್ನೆಲೆಯಲ್ಲಿಯೇ ವಿದ್ವಾಂಸರಿಗೆ ಇವುಗಳ ಬಗೆಗಿನ ಕುತೂಹಲ ಹೆಚ್ಚಾಗಿದ್ದದ್ದು. ಹಾಗಿದ್ದೂ ತಲೆಯನ್ನುಳಿದು ದೇಹದ ಇತರೆ ಭಾಗಗಳ ಪಳಿಯುಳಿಕೆಗಳ್ನ ಎಲ್ಲಿವೆಯೆಂಬುದನ್ನು ಉತ್ಖನನದ ಮೂಲಕ ಪತ್ತೆಹಚ್ಚಲು ಪ್ರಯತ್ನಗಳು ನಡೆದವು. ಇಂತಹ ಪ್ರಯತ್ನಗಳಿಂದ ದವಡೆ ಭಾಗವನ್ನು ಹೊರತುಪಡಿಸಿ ಕೈಕಾಲು, ಇತರೆ ದೇಹಭಾಗದ ಮೂಳೆಗಳ ರಾಶಿ ಒಂದೆಡೆ ಕಂಡುಬಂದು, ಅದೂ ಕುಪ್ಪೆಯಂತೆ ಹಾಕಿದ್ದುದು ಗೋಚರವಾಗಿದೆ. ಇದರಿಂದ ಸಂಶೋಧಕರಿಗೆ ಚರಿತ್ರೆಯಲ್ಲಿ ಏನೋ ಒಂದು ವಿಚಿತ್ರವಾದ ಘಟನೆ ನಡೆದಿದೆ ಎಂಬ ಸತ್ಯವಂತೂ ಕಣ್ಣಮುಂದೆ ಕಾಣುತ್ತಿತ್ತು. ಇದು ಅನೇಕ ಸಂಶೋಧನೆಗಳಿಗೆ ನಾಂದಿಯಾಯಿತು. ಇದಕ್ಕೆ ಸಂಬಂಧಿಸಿದ ಐತಿಹ್ಯ, ಸ್ಥಳೀಯ ಹೇಳಿಕೆ, ಧರ್ಮ, ಆಚಾರ, ವಿಚಾರ, ಮಾಟ-ಮಂತ್ರದಂತಹ ಕಂದಾಚಾರಗಳೂ ಸೇರಿ ಒಂದೊಂದು ಬಗೆಯ ಹೇಳಿಕೆಗಳನ್ನು ಆಧರಿಸಿ ಮಾಧ್ಯಮಗಳು ದಿನನಿತ್ಯ ತಮ್ಮದೇ ಆದ ಪ್ರಚಾರವನ್ನು ರಾಜ್ಯದಾದ್ಯಂತ ಹರಡಿದ್ದವು. ಅದೂ ಒಂದು ಬಗೆಯ ಇತಿಹಾಸವೇ. ಈ ಎಲ್ಲ ಬಗೆಯ ಆಲೋಚನೆ, ಸಂಶೋಧನೆಗಳಿಗೆ ಅವಕಾಶವಿತ್ತದ್ದು ಅಲ್ಲಿನ ಜಿಲ್ಲಾಡಳಿತ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು. ಇದೊಂದು ಯಕ್ಷಪ್ರಶ್ನೆಯಾಗಿ ಎಲ್ಲರನ್ನೂ ಕಾಡಿದುದರಲ್ಲಿ ಸಂದೇಹವಿರದು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಮತ್ತು ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ.ಆರ್.ಗೋಪಾಲ್ ಅವರ ತಂಡ ಕೈಗೊಂಡ ಕಾರ್ಯವನ್ನು ನಿಜಕ್ಕೂ ನೆನಯಬೇಕು.


ತಲೆಬುರುಡೆಗಳನ್ನು ಅನೇಕ ಚಾರಿತ್ರಿಕ ಸಂಗತಿಗಳು, ದಾಖಲೆಗಳಿಗೆ ಹೋಲಿಸಿ, ಪ್ರಯೋಗಿಸುವ ಪರಿಕ್ರಮಗಳು ನಡೆದವು. ಪುರಾತತ್ವ ಶಾಲೆಯ ಪ್ರಯೋಗಕ್ಕೂ ಒಳಪಡಿಸಲಾಯಿತು. ಭುವನೇಶ್ವರದ ಪ್ಲೊರೆನ್ಸಿಕ್ ವರದಿಯು ೬೩೦ ವರ್ಷಗಳಷ್ಟು ಹಳೆಯವೆಂದು ಹೇಳಿತು. ಇದಕ್ಕೆ ಚಾರಿತ್ರಿಕ ಘಟನೆ, ಯುದ್ಧಗಳನ್ನೂ ಸಂಶೋಧಿಸುವ ಸಂಶೋಧನೆಗಳು ನಡೆದವು. ಅನೇಕ ಬಗೆಯ ವೈಜ್ಞಾನಿಕ ಸಂಶೋಧನೆಗಳಿಗೂ ಈ ತಲೆಬುರುಡೆಗಳು ಒಳಪಟ್ಟವು. ಕೊನೆಗೆ ಅಮೇರಿಕಾದ ಫ್ಲಾರಿಡಾಕ್ಕೂ ಅವಶೇಷಗಳನ್ನು ಕಳುಹಿಸಿಕೊಡಲಾಯಿತು. ಫ್ಲಾರಿಡಾದ ವಿದ್ವಾಂಸರು ೧೭ನೆಯ ಶತಮಾನದವೆಂಬ ವರದಿಯನ್ನು ನೀಡಿದರು. ಇದನ್ನು ಆಧರಿಸಿ ನಡೆಸಿದ ಸಂಶೋಧನೆಯಲ್ಲಿ ಇದೊಂದು ಬರಗಾಲದ ಭಯಾನಕ ಚಿತ್ರಣ, ಭೀಕರ ಬರಗಾಲದ ಪಳಿಯುಳಿಕೆಗಳೆಂಬ ತೀರ್ಮಾನಕ್ಕೆ ಬರಲಾಯಿತು. ಅಲ್ಲದೆ ಇದು ೧೭೯೨-೯೬ರಲ್ಲಾದ ಭೀಕರ ಬರಗಾಲ, ಅದನ್ನು ದಾಖಲೆಗಳಲ್ಲಿ ಡೌಗಿ(ಡೋಗಿ) ಬರಗಾಲವೆಂದೂ ಕರೆಯುತ್ತಿದ್ದುದನ್ನು ದೃಢಪಡಿಸಿದರು. ಡೋಗಿ ಬರಗಾಲದ ಭೀಕರತೆ ಎಷ್ಟಿತ್ತೆಂದರೆ ಆಹಾರ-ನೀರು ಸಿಗದೆ ಪ್ರಾಣಿಪಕ್ಷಿಗಳೆನ್ನದೆ ಎಲ್ಲೆಂದರಲ್ಲಿ ಹೆಣಗಳ ರಾಶಿಯೇ ಬಿದ್ದಿದ್ದವು. ಈ ಮಧ್ಯೆ ಸತ್ತ ಹೆಣಗಳನ್ನು ಪ್ರಾಣಿ-ಪಕ್ಷಿಗಳು ತಿಂದು ತಲೆಬುರುಡೆ, ಮೂಳೆಯ ಅವಶೇಷಗಳು ಎಲ್ಲೆಂದರಲ್ಲಿ ಹರಡಿದ್ದವು.

ತಲೆಬುರುಡೆಯಲ್ಲಿ ದವಡೆಭಾಗ ನರಮಾಂಸವಿಲ್ಲದಾಗ ಸಹಜವಾಗಿ ಬೇರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಬರಗಾಲದಿಂದ ತತ್ತರಿಸಿ ಊರನ್ನು ತೊರೆದು ಜನ ಗುಳೆ ಹೋದ ಮತ್ತು ಬದುಕುಳಿದವರು ಎಲ್ಲೆಂದರಲ್ಲಿ ಕಂಡುಬಂದ ತಮ್ಮ ಹಿರಿಯರ ತಲೆಬುರುಡೆಗಳನ್ನು ಸಂಗ್ರಹಿಸಿ ಅಣ್ಣಿಗೇರಿಯ ಸ್ಥಳವೊಂದರಲ್ಲಿ ಸಾಲಾಗಿ, ಒಪ್ಪವಾಗಿ ಜೋಡಿಸಿ ಸಂಸ್ಕಾರ ನೀಡಿದ ಅವಶೇಷಗಳೆಂಬ ಸತ್ಯವನ್ನು ಸಂಶೋಧನೆಗಳು ದೃಢಪಡಿಸಿದವು.
ಒಟ್ಟಿನಲ್ಲಿ ಗ್ರಾಮ ಪಂಚಾಯತಿಯ ಕಾಮಗಾರಿಯಲ್ಲಿ ಕಂಡುಬಂದ ಆಕಸ್ಮಿಕ ಶೋಧ ಜಿಲ್ಲಾಡಳಿತ, ಪುರಾತತ್ವ ಇಲಾಖೆಗಳಲ್ಲದೆ ದೇಶವಿದೇಶಗಳತ್ತ ಸಂಶೋಧನೆಯ ರಹದಾರಿಯನ್ನೇ ಸೃಷ್ಟಿಸಿ ವಿಸ್ತರಿಸಿತೆಂದರೆ ಅತಿಶಯೋಕ್ತಿಯಾಗಲಾರದು.

 

 

 

Girl in a jacket
error: Content is protected !!