ಅಂದು ಅವನೊಡನೆ ಠೂ ಬಿಟ್ಟಿದ್ದು
ನಮ್ಮೂರಿನ ಆ ಸುಂದರ ಪರಿಸರ ನನ್ನ ಇರುವಿನವರೆಗೂ ಕಣ್ಣಮುಂದೆಯೇ ಇರುತ್ತದೆ. ಏಕೆಂದರೆ ಚಿಕ್ಕಂದಿನಲ್ಲಿ ಮಕ್ಕಳ ಮನಸ್ಸು ಅರಳುವಾಗ ಜೇಡಿಮಣ್ಣಿನಂತೆ ಮೃದುವಾಗಿರುತ್ತದೆ. ಅದನ್ನು ಹೇಗೆ ಬೇಕಾದರೂ ವಿನ್ಯಾಸಗೊಳಿಸಬಹುದು. ಬಿಳಿಯ ಹಾಳೆಯಂತೆ ನಿರ್ಮಲವಾಗಿರುತ್ತದೆ ಅದರ ಮೇಲೆ ಏನು ಬರೆದರೂ ಅಳಿಸಿಹೋಗದು. ಅಂತೆಯೇ ಆ ಸುಂದರ ಸೊಬಗಿನ ಪರಿಸರ ನನ್ನ ಮನಸ್ಸಿನಿಂದ ಎಂದೂ ದೂರಾಗದು. ‘ಒಡಲನೂಲಿನಿಂದ ಜೇಡ ಜಾಲ ನೇಯುವಂತೆ’ ಎಂಬ ಬೇಂದ್ರೆಯವರ ತೋಂತನದಂತೆ ಒಡಲು ಇರುವವರೆಗೂ ಬಾಲ್ಯದ ನೋಟದ ಜಾಲ ನೇಯುತ್ತಲೇ ಇರುತ್ತದೆ.
ನಮ್ಮೂರಿನ ಮಿಡಲ್ ಸ್ಕೂಲ್ ದಾಟಿ ಎಡಕ್ಕೆ ತಿರುಗಿದರೆ ಅಲ್ಲೇ ಹೈಸ್ಕೂಲ್ ಅದನ್ನು ದಾಟುತ್ತಾ ಮುಂದುರೆದರೆ ದನಗಳ ಆಸ್ಪತ್ರೆ. ಅಲ್ಲಿಂದ ಸ್ವಲ್ಪ ತಗ್ಗಿಗೆ ಇಳಿಯುತ್ತಾ ಹೋದರೆ ಎಡನೋಟಕ್ಕೆ ಕಾಣುವ ಕೆರೆ ಕೋಡಿಯಜಾಗ. ಅಹಾ.. ಅದರ ಸೊಬಗು ಏನು ಹೇಳಲಿ..? ಕಲ್ಲು ಮತ್ತು ಸಿಮೆಂಟಿನಿಂದ ಕಟ್ಟಿದ ಸುಂದರ ಕೆರೆಕೋಡಿ ಹೋಗುವ ಜಾಗ. ಕೆರೆ ನೀರು ಜಾರಿಹೋಗಲು ಮಾಡಿದ ಸುಂದರ ಇಳಿಜಾರು. ಆ ಒಣಗಿನ ದಾರಿಯಲ್ಲಿ ಸ್ವಲ್ಪ ದೂರ ನಡೆದು ಹೋಗಿ ಕೆರೆಕಟ್ಟೆಯಮೇಲಿನ ದೊಡ್ಡದಾದ ಅರಳಿಮರಗಳ ಜೋಡಿ ನೋಡುವುದೇ ಒಂದು ಸುಂದರ ದೃಶ್ಯ. ಅದರ ಪಕ್ಕದಲ್ಲಿ ದೊಡ್ಡ ಸಿಹಿನೀರಿನ ಬಾವಿ. ಅದರ ಸೌಂದರ್ಯವೂ ಅದ್ಭುತ ಸಾಕ್ಷಾತ್ ಗಂಗೆಯಂತೆ. ಆಗಿನ ಸಮಯದಲ್ಲಿ ಅಷ್ಟು ಚೆನ್ನಾಗಿ ಕಟ್ಟಿದ್ದರಲ್ಲಾ ! ಎಂದು ಸೋಜಿಗವಾಗುತ್ತದೆ. ಸುಂದರ ಗೋಲಾಕಾರದ ಆ ಬಾವಿಯ ಎರಡೂ ಬದಿಗೆ ಹಗ್ಗವನ್ನು ಹಾಕಿ ನೀರು ಸೇದಲು ಸಹಾಯವಾಗುವ ಮರದ ರಾಟೆಗಳನ್ನು ಹಾಕಿದ್ದರು. ಕಟ್ಟೆಯ ಆಮೇಲಿನ ಬಾವಿಯ ಸ್ವಲ್ಪ ಮುಂದಕ್ಕೆ ಹೋದರೆ ಹಾಳುಬಿದ್ದ ಒಂದು ನಾಲ್ಕು ಕಾಲಿನ ಮಂಟಪ. ಬಾವಿಯ ಹೆಂಗಸರು ಮಳೆ ಏನಾದರೂ ಬಂದರೆ ಅಲ್ಲಿಗೆ ಓಡಿ ಹೋಗಿ ನಿಲ್ಲುತ್ತಿದ್ದರು.
ಅದಕ್ಕೆ ಮುಂದೆ ನಡೆದರೆ ಮತ್ತೊಂದು ಕೆರೆಕೋಡಿಯ ಜಾಗ. ಅದನ್ನು ದಾಟಿ ಕಟ್ಟೆಯ ಮೇಲೆಯೇ ನಡೆದರೆ ಎರಡು ಕಿಮೀ ನಡೆದರೆ ಅಗ್ರಹಾರ. ಇನ್ನೂ ಕೆಲವು ಹಳ್ಳಿಗಳು ಸಿಗುತ್ತಿದ್ದವು. ಅಗ್ರಹಾರದ ಸುಂದರನ ಬಗ್ಗೆ ಈಗ ಹೇಳುವ ವಿಷಯ.
ಅಗ್ರಹಾರದಿಂದ ಬರುತ್ತಿದ್ದ ನಮ್ಮ ಶಾಲೆಯ ಗುರುಗಳಾದ ನಾರಾಯಣಗೌಡ ಮಾಸ್ಟರ್ ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ದರು. ನೋಡಲು ತುಂಬಾ ಸುಂದರವಾಗಿದ್ದರು. ಥೇಟ್ ಹೀರೋ ತರಹ. ನಮ್ಮ ಶಾಲೆಗೆ ಬರುತ್ತಿದ್ದ ಹೊಂಗೇನಹಳ್ಳಿಯ ಕೃಷ್ಣಾ ಟೀಚರ್ ಸಹ ಸುಂದರಿ ಮತ್ತು ಉತ್ತಮ ಶಿಕ್ಷಕಿ. ಸದಾ ಬಿಡುವಿನ ವೇಳೆಯಲ್ಲಿ ತರಗತಿಯಲ್ಲಿ ಹಾಡು ಹೇಳಿಸುತ್ತಿದ್ದರು. ನನಗೆ ಅವರು ಒಂದು ಹಾಡು ಕಲಿಸಿದ್ದರು ಚಿತ್ರಗೀತೆ. “ನಿನ್ನ ನೀನು ಮರೆತರೇನು ಸುಖವಿದೇ” ಎಂಬ ಎವರ್ ಗ್ರೀನ್ ಹಾಡು. ನಾನಾಗ ಬಹುಶಃ ೫ ಅಥವಾ ೬ ನೇ ತರಗತಿ. ಇದರ ಬಗ್ಗೆ ಇನ್ನೊಂದು ಸಂಚಿಕೆಯಲ್ಲಿ ಹೇಳುವೆ. ಈಗ ನಾನು ಹೇಳಬೇಕಿರುವುದು ನಾರಾಯಣಗೌಡ ಮಾಸ್ಟರ್ ಮಗ ಸುಧಾಕರ ಗೌಡನ ಬಗ್ಗೆ. ಇವನು ನನ್ನ ಕ್ಲಾಸ್ ಮೇಟ್.
ಒಮ್ಮೆ ನಮ್ಮ ಊರಿನ ದನಗಳನ್ನು ಒಟ್ಟಾಗಿ ಬಯಲಿಗೆ ಹುಲ್ಲು ಮೇಯಿಸಲು ಕರೆದೊಯ್ಯುತ್ತಿದ್ದವ ವ್ಯಕ್ತಿ ಆರೋಗ್ಯ ಸರಿಯಿಲ್ಲವೆಂದೋ ಏನೋ ನೆನಪಿಲ್ಲ ಬಂದಿರಲಿಲ್ಲ. ನಮ್ಮ ಮನೆಯಲ್ಲಿ ಒಂದು ಎಮ್ಮೆ ಇತ್ತು.
ನಿeಕ್ಕೂ ಆ ಎಮ್ಮೆ ತುಂಬಾ ಮುದ್ದಾಗಿತ್ತು. ಕಪ್ಪನೆ ಬಣ್ಣ ಎರಡು ಚಿಕ್ಕ ಕೊಂಬುಗಳು ‘ಬ್ರಾಕೆಟ್’ ತರವೇ ಇದ್ದವು. ಇಂತಹ ಸಮಯದಲ್ಲಿ ಅಪ್ಪಾಜಿಗೆ ಹೇಗೆ ಉಪಾಯ ಹೊಳೆದಿತ್ತೋ ಏನೋ.. ನಾನು ಬೇರೆ ಬೇಗ ಬೆಳಗ್ಗೆ ಏಳಲು ಮೊಂಡಾಟ ಮಾಡುತ್ತಿದ್ದೆ. ಅದಕ್ಕೆ ನನಗೆ ಹೇಳಿದರು. “ಬೆಳಗ್ಗೆ ಬೇಗ ಎದ್ದು ಎಮ್ಮೆಯನ್ನು ಒಂದೆರಡುತಾಸು ಗದ್ದೆಯ ಕಡೆ ಕರೆದುಕೊಂಡು ಹೋಗಿ ಹುಲ್ಲು ಮೇಯಿಸಿಕೊಂಡು ಬಾ” ಎಂದು. ನಾನು ಒಲ್ಲದ ಮನಸ್ಸಿನಿಂದಲೇ ಅಪ್ಪಾಜಿಗೆ ಎದುರು ಹೇಳದೆ ಅಮ್ಮನ ಬಳಿ ಬೈಯ್ದು ಗೊಣಗುತ್ತಲೇ ಕರೆದುಕೊಂಡು ಹೊರಡಲು ಅನುವಾದೆ.
ಎಮ್ಮೆ ಅಂದರೆ ಎಮ್ಮೆಯೇ ಅದು ಬೇಗ ಎಳೆದರೆ ಬರುತ್ತಿರಲಿಲ್ಲ. ಅದಕ್ಕೆ ಇಷ್ಟ ಬಂದಂತೆಯೇ ಅದರ ನಡಿಗೆ. ಬೆಳಗ್ಗೆ ಬಹುಶಃ ಏಳಕ್ಕೆ ಹೋಗುತ್ತಿದ್ದೆ… ಸುಧಾಕರ ಅಗ್ರಹಾರದಿಂದಲೇ ಬರುತ್ತಿದ್ದದು. ಶಾಲೆಯ ಸಮಯಕ್ಕೆ ಆತ ಬರುವ ಮೊದಲೇ ಅವನಿಗೆ ನಾನು ನಾನು ಎಮ್ಮೆಯನ್ನು ಮೇಯಿಸಿಕೊಂಡು ಬಂದ ವಿಷಯ ತಿಳಿಯಬಾರದು’ ಎಂದು ವಾಪಸ್ ಕರೆದುಕೊಂಡು ಬಂದು.. ಶಾಲೆಗೆ ರೆಡಿಯಾಗಿ ತಿಂಡಿ ತಿಂದು ಬರಬೇಕಾಗಿತ್ತು. ಪ್ರತಿದಿನವೂ ಇದನ್ನು ಮನದಲ್ಲಿ ಇಟ್ಕೊಂಡು ಸರಿಯಾದ ಸಮಯಕ್ಕೆ ಇವೆಲ್ಲವನ್ನೂ ಮೈನ್ಟೈನ್ ಮಾಡ್ತಿದ್ದೆ. ಆಗಿನ ಮುಗ್ಧ ಮನಸ್ಸುಗಳು ಎಷ್ಟು ಸೊಗಸು ಸಣ್ಣವಿಷಯಗಳೇ ದೊಡ್ಡದಾಗಿ ಎಷ್ಟು ಹಿಂಸೆಯಾಗುತ್ತಿದ್ದವು. ನಗೆ ಬರಿಸುತ್ತದೆ ನೆನೆದರೆ.
ಎಮ್ಮೆಯನ್ನು ಕರೆದುಕೊಂಡು ಅದನ್ನು ದೊಡ್ಡಹಗ್ಗದಿಂದ ಬಿಗಿದರೆ ಮುಗಿಯಿತು. ಅದರ ಪಾಡಿಗೆ ಅದು ಸುತ್ತಮುತ್ತಲ ಮೇವು ಮೇಯುತ್ತಿತ್ತು. ಪಕ್ಕದ ಕಾಲುದಾರಿಯಲ್ಲಿ ನಾನು ಗೆರೆಗಳನ್ನು ಇಳೆದು ಕುಂಟುತ್ತಾ ಆಟವಲ್ಲದ ಆಟವನು ಆಡುತ್ತಾ ನಲಿಯುತ್ತಿದ್ದೆ. ಆಗ ಆ ಎಮ್ಮೆ ಮೇಯುವ ಹುಲ್ಲಿನ ಘಮಲು ನನ್ನ ಮೂಗಿಗೆ ಬಡಿದು ಒಂದು ಅಪೂರ್ವತೆ ನನ್ನ ಮೆದುಳು ಸೇರಿ “ಅಹಾ..” ಎನ್ನಿಸಿ ಉಚ್ಛ್ವಾಸವನ್ನು ದೀರ್ಘವಾಗಿ ಎಳೆದುಕೊಳ್ಳುವಂತೆ ಮಾಡುತ್ತಿತ್ತು. ಹೊಲದಲ್ಲಿ ಕಳೆ ಕೀಳುವಾಗ ಮಹಿಳೆಯರ ಪಕ್ಕ ಹೋದರು ಈ ಹುಲ್ಲಿನ ಸೊಗಡು ಮೂಗಿಗೆ ಹಿತವಾಗುತ್ತಿದ್ದು. ಮಳೆಬಂದಾಗಿನ ಮಣ್ಣಿನ ಘಮಲು ಸಹ ಜಗತ್ತಿನಲ್ಲಿನ ಎಲ್ಲಾ ಆಶಯಗಳನ್ನೂ ಮೀರಿಸುವ ಅನುಭವ ಈ ಮಣ್ಣಿನ ಮತ್ತು ಮಳೆಯ ಮಿಲನದಲ್ಲಿದೆ. ಎಂತಹ ಅದ್ಭುತ ಶಕ್ತಿಗಳನ್ನು ದೇವರು ಎಲ್ಲೆಲ್ಲಿ ಅಡಗಿಸಿಟ್ಟಿದ್ದಾನೆ ಎನ್ನಿಸುತ್ತದೆ. ಆ.. ಅದಿರಲಿ ಎಮ್ಮೆ ಮೇಯುತ್ತಿತ್ತು. ನಾನು ಕುಂಟುತ್ತಾ ಅತ್ತಿತ್ತಾ ಛಂಗನೆ ಜಿಗಿಯುವಾಗ ಅಕಸ್ಮಾತ್ ಕಟ್ಟೆಯ ಕಡೆ ನೋಟ ಹೋಯಿತು. “ಅಯ್ಯೋ.. ಸುಧಾಕರ ಬಿಳಿಶರ್ಟ ಹಾಕಿ, ಖಾಕಿ ನಿಕ್ಕರ್ ಮತ್ತು ಬಗಲಿಗೆ ಪಾಠಿಚೀಲಾ ಹಾಕಿ ಬರುತ್ತಿದ್ದಾನೆ.” ಬೇಗ ಅವನು ಬರುವಷ್ಟರಲ್ಲಿ ಹೊರಟುಬಿಡೋಣ ಎಂದು ಎಮ್ಮೆಯನ್ನು ಎಳೆದುಕೊಂಡು ಬರಲು ಅನುವಾದೆನು. ಎಮ್ಮೆ ನನ್ನ ತೀವ್ರತೆಗೆ ನೆರವಾಗಲೇ ಇಲ್ಲ. ಹಾಗೋಹೀಗೋ ಕೋಲೊಂದು ಹುಡುಕಿಕೊಂಡು ಅದನ್ನು ಸಾಗಿಸುತ್ತಾ ಬರುತ್ತಿದ್ದೆ. ದಾರಿಯಲ್ಲಿ ಅವ ನನ್ನ ಕಂಡೇ ಕಂಡನು. ನನಗೆ ಅವನಿಗೆ ಮುಖ ತೋರಲು ನಾಚಿಕೆ.. ಮುಂದೆ ಭರಭರನೆ ನಡೆದೆ..! ಕಳ್ಳಾ “ಏಯ್ ವಿಶಾಲಾಕ್ಷಿ.. ಸ್ಕೋಲ್ ಬಿಟ್ಟು ಎಮ್ಮೆ ಮೇಯಿಸ್ತಿದ್ದೀಯಾ” ಎಂದ. ಸಿಟ್ಟಿನಿಂದ ತಿರುಗಿ “ ಏಯ್..ಹೋಗೋ ಕೋತಿ” ಎಂದು ತುಟಿ ಕಡಿಯುತ್ತಾ ಕೋಪಾ ತೋರಿದೆ. ಆತ “ ಅಹಹಹಹ” ನಗುತ್ತಿದ್ದ. ನಾನು ಕುದಿಯುತ್ತಾ ಮನೆಗೆ ಹೋದೆ. ಅಂದು ಶಾಲೆಗೆ ಹೋಗದೆ..“ ಅಮ್ಮನ ಬಳಿ ಅಳುತ್ತಾ ಗೊಣಗುತ್ತಲೇ..ಇದ್ದೆ.” ಅಮ್ಮ ನಗುತ್ತಾ ‘ ಶಾಲೆಗೆ ಹೋಗು’ ಎಂದರೂ ಕೇಳಲಿಲ್ಲ.
ಮಾರನೇ ದಿನ ಶಾಲೆಯ ತರಗತಿ ಮಾಸ್ಟರ್ ಹಾಜರಿ ಕರೆದಾಗ ‘ಎಸ್ ಸಾರ್’ ಎಂದೆ. ‘ನೆನ್ನೆ ಯಾಕೆ ಬರಲಿಲ್ಲ’ ಎಂದು ಪ್ರಶ್ನಿಸಿದರು. ನಾನು ಉತ್ತರಿಸುವ ಮುನ್ನವೇ “ ಸಾರ್ ಅವಳು ದನ ಕಾಯಲು ಹೋಗಿದ್ದಳು” ಎಂಬ ಧ್ವನಿ ಹಿಂದಿನಿಂದ ಬಂತು.. ಹಿಂತಿರುಗಿ ನೋಡಿದೆ. ಅವನೇ “ಸುಧಾಕರ ಗೌಡ”!.. ಸಹಪಾಠಿಗಳೆಲ್ಲಾ ಅವನ ಮಾತಿಗೆ ‘ಗೊಳ್’ ಎಂದು ನಕ್ಕರು. ನಾನೊಬ್ಬಳೇ ಅತ್ತಿತ್ತು. ಮಾಸ್ಟರ್ ಎಲ್ಲರನ್ನೂ ಗದರಿಸಿ ಸುಮ್ಮನಾಗಿಸಿದ್ದರು.
ಅಂದು ಅವನೊಡನೆ ‘ಠೂ’ ಬಿಟ್ಟಿದ್ದು ಇದುವರೆವಿಗೂ ಮಾತನಾಡಿಲ್ಲ. ಸಿಗಲೂ ಇಲ್ಲ ಅಂತಿಟ್ಕೊಳ್ಳಿ..ಸಿಕ್ಕರೂ ಸೇಡು ತೀರಿಸ್ಕೊಳ್ಳದೇ ಬಿಡಲ್ಲ. (ಹ ಹ ಹ)