ಲಿಂಗಾಯತ ವೀರಶೈವ ಕೇಂದ್ರಿತ ಪಕ್ಷವಾಗಿರುವ ರಾಜ್ಯ ಬಿಜೆಪಿ ಈಗ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಒಕ್ಕಲಿಗ ಪ್ರದೇಶವನ್ನು ಆರಿಸಿಕೊಂಡಿದೆ. ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕರಿಸಿರುವ ಒಕ್ಕಲಿಗ ಸಮುದಾಯವನ್ನು ತನ್ನಿಚ್ಚೆಯ ರಾಜಕೀಯಕ್ಕೆ ಬಳಸಿಕೊಳ್ಳುವ ಅದರ ಯತ್ನಕ್ಕೆ ಪಕ್ಷದ ಒಳಗಿನಿಂದಲೇ ಕಿರಿಕಿರಿ ಎದುರಾಗಿದೆ. ಯೋಗೇಶ್ವರ್ ಸಿಡಿಸಿರುವ “ತ್ರಿಪಕ್ಷ ಸರ್ಕಾರ ಯಡಿಯೂರಪ್ಪನವರದು” ಎಂಬ ಬಾಂಬ್ನ ಸ್ವಿಚ್ ಎಲ್ಲಿದೆ ಮತ್ತು ಅದನ್ನು ಆನ್ ಆಫ್ ಮಾಡುತ್ತಿರುವವರು ಯಾರೆನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ
ಲಿಂಗಾಯತ-ವೀರಶೈವ ಗದ್ದಲಕ್ಕೆ ಇದುವರೆಗೆ ಸೀಮಿತವಾದಂತಿದ್ದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಘಟಕದಲ್ಲಿ ಇದೀಗ ಗೌಡರ ಗದ್ದಲವೂ ಮೇರೆ ಮೀರುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಲಿಂಗಾಯತ/ವೀರಶೈವ ಪ್ರಧಾನ ಪಕ್ಷವಾಗಿರುವ ಅದಕ್ಕೆ ಮುಂಬೈ ಕರ್ನಾಟಕ, ಈಶಾನ್ಯ ಕರ್ನಾಟಕ ಒಳಗೊಂಡ ಉತ್ತರ ಕರ್ನಾಟಕದಲ್ಲಿ ಅಗಾಧ ಜನ ಬೆಂಬಲವಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯವಿದೆ. ದಕ್ಷಿಣ ಕರ್ನಾಟಕ ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಗಣನೀಯವಾಗಿರುವ ಒಕ್ಕಲಿಗರ ಸೀಮೆಯಲ್ಲೂ ಉತ್ತರ ಕರ್ನಾಟಕ ಭಾಗದಂತೆ ಸಾಮ್ರಾಜ್ಯ ವಿಸ್ತರಿಸುವ ಸಹಜ ರಾಜಕೀಯ ಆಕಾಂಕ್ಷೆ ಬಿಜೆಪಿಗೆ ಇದೆ. ಮಂಡ್ಯದಂಥ ಒಕ್ಕಲಿಗ ಪ್ರಧಾನ ಜಿಲ್ಲೆಯಲ್ಲಿ ತಾನು ಬೆಂಬಲಿಸಿದ ಪಕ್ಷೇತರ ಅಭ್ಯರ್ಥಿ, ನಾಯ್ಡು ಸಮುದಾಯದ ಸುಮಲತಾ ಲೋಕಸಭೆಗೆ ಆಯ್ಕೆಯಾದ ತರುವಾಯದಲ್ಲಿ; ಅದೇ ಜಿಲ್ಲೆಯ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರವನ್ನು ಕಮಲದ ತೆಕ್ಕೆಗೆ ಹಾಕಿಕೊಂಡ ನಂತರದಲ್ಲಿ ಅದರ ಸಾಮ್ರಾಜ್ಯ ವಿಸ್ತರಣೆ ಹಂಬಲ ದಿನದಿನವೂ ಹೆಚ್ಚುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಪ್ರತಾಪ ಸಿಂಹ, ಮೈಸೂರು ಲೋಕಸಭಾ ಕ್ಷೇತ್ರವನ್ನು ಸತತ ಎರಡನೇ ಬಾರಿಗೂ ಗೆದ್ದ ಬಳಿಕ ತನಗೆ ಜನ ಮಣೆ ಹಾಕಲಿದ್ದಾರೆಂಬ ಭರ್ಜರಿ ವಿಶ್ವಾಸ ಪಕ್ಷದಲ್ಲಿ ಮೂಡಿದೆ.
ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ಸು ೧೭೯ ಶಾಸಕರೊಂದಿಗೆ ಅಧಿಕಾರಕ್ಕೆ ಬಂದಾಗ ಅವರೇ ಮುಖ್ಯಮಂತ್ರಿಯಾದರು. ಪಾಟೀಲರ ಆರೋಗ್ಯ ಹದಗೆಡುವುದಕ್ಕೆ ಕಾಯುತ್ತಿದ್ದರೊ ಎಂಬಂತೆ ರಾಜೀವ್ ಗಾಂಧಿ ತೆಗೆದುಕೊಂಡ ವೀರೇಂದ್ರರನ್ನು ಪದಚ್ಯುತಗೊಳಿಸುವ ತೀರ್ಮಾನ, ಪಕ್ಷದ ಪಾಲಿಗೆ ಬಹು ತುಟ್ಟಿಯದಾಯಿತು. ಇದು ತೊಂಭತ್ತರ ದಶಕದ ಕಥೆ. ವೀರೇಂದ್ರರಿಗೆ ಅನ್ಯಾಯ ಮಾಡಲಾಯಿತೆಂದು ಕಾಂಗ್ರೆಸ್ ವಿರುದ್ಧ ಸೆಟೆದು ನಿಂತ ಲಿಂಗಾಯತ/ವೀರಶೈವ ಸಮುದಾಯ ಈ ದಿನಕ್ಕೂ ಅದೇ ನಿಲುವಿನಲ್ಲಿದೆ. ಸಮುದಾಯದ ಹಿತ ಕಾಂಗ್ರೆಸ್ಗೆ ಬೇಕಾಗಿಲ್ಲ ಎನ್ನುವುದು ಅದರ ನಿಲುವು. ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಂಘಟನಾತ್ಮಕವಾಗಿ, ವಾಣಿಜ್ಯಕವಾಗಿ, ಔದ್ಯಮಿಕವಾಗಿ, ಔದ್ಯೋಗಿಕವಾಗಿ ಅತ್ಯಂತ ಮುಂದುವರಿದ ಸಮುದಾಯವಾದ ಲಿಂಗಾಯತ ವೀರಶೈವರ ನೋವನ್ನು ಅರ್ಥಮಾಡಿಕೊಂಡು ತಮ್ಮ ರಾಜಕೀಯಕ್ಕೆ ಅದನ್ನೇ ನಗದನ್ನಾಗಿಸಿಕೊಂಡವರು ಬಿ.ಎಸ್. ಯಡಿಯೂರಪ್ಪ. ನಾಲ್ಕು ನಾಲ್ಕೂವರೆ ದಶಕದ ತಮ್ಮ ರಾಜಕೀಯದಲ್ಲಿ ಯಡಿಯೂರಪ್ಪ ಹೆಚ್ಚಾಗಿ ಓಲೈಸಿದ್ದು ಲಿಂಗಯತ/ವೀರಶೈವರನ್ನು. ಆ ಸಮುದಾಯದ ಸಾವಿರಾರು ಮಠಗಳಲ್ಲಿ ಬಹುತೇಕವು ಈ ಹೊತ್ತು ಅವರ ಬೆನ್ನ ಹಿಂದೆ ಒಂದು ಸೇನೆಯ ರೂಪದಲ್ಲಿ ನಿಂತಿರುವುದಕ್ಕೆ ಇದೇ ಮತ್ತು ಇದೊಂದೇ ಕಾರಣ.
ವೀರಶೈವ ಲಿಂಗಾಯತರನ್ನು ಒಡೆದು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಮುಂದುವರಿದ ಸಿದ್ದರಾಮಯ್ಯ ಸರ್ಕಾರದ ಯತ್ನ ಕಾಂಗ್ರೆಸ್ ಚುನಾವಣಾ ಭವಿಷ್ಯಕ್ಕೆ ಗ್ರಹಣವಾಗಿದ್ದು ಹಳೆ ಕಥೆಯಲ್ಲ. ಆ ಯತ್ನ ವೀರಶೈವ ಲಿಂಗಾಯತ ಸಮುದಾಯವನ್ನು ಇನ್ನಷ್ಟು ಒಗ್ಗೂಡಿಸಿದ್ದರ ಜೊತೆಗೆ ಯಡಿಯೂರಪ್ಪ ಇನ್ನೂ ಪ್ರಬಲ ನಾಯಕರಾಗಿ ಬೆಳೆದಿದ್ದು ಕೂಡಾ ಹಳೆ ಕಥೆಯಲ್ಲ. ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕತ್ವ ಇಡುತ್ತ ಬಂದ್ತೆಡವಟ್ಟಿನ ನಂತರ ಎಡವಟ್ಟು ಹೆಜ್ಜೆಗಳು ರಾಷ್ಟ್ರೀಯ ಮಟ್ಟದಲ್ಲಿ ಆ ಪಕ್ಷಕ್ಕೆ ಮುಳವಾಗಿ ಬಿಜೆಪಿಗೆ ಅನುಕೂಲವಾಗುತ್ತ ಹೋದರೆ ಇಲ್ಲಿ ಕರ್ನಾಟಕದಲ್ಲಿ ಆ ಪಕ್ಷದ ತಪ್ಪು ನಿರ್ಣಯಗಳು ಯಡಿಯೂರಪ್ಪನವರ ಬೇರು ಬುಡ ಇನ್ನಷ್ಟು ಭದ್ರವಾಗಲು ನೆರವಾದವು. ಇಂದು ಬಿಜೆಪಿಯೊಳಗೆ ಯಡಿಯೂರಪ್ಪ ಬಲಿಷ್ಟ ನಾಯಕ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಪ್ರಶ್ನಾತೀತ ಧುರೀಣ.
ಯಡಿಯೂರಪ್ಪ ಬೆಳೆದುದು ರಾಜ್ಯದ ಇತರ ಪಕ್ಷಗಳಿಗೆ ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅದೇ ಕಾಲಕ್ಕೆ ಬಿಜೆಪಿ ವರಿಷ್ಟರಿಗೆ ಪಕ್ಷದ ಭವಿಷ್ಯ ಒಬ್ಬ ನಾಯಕನ ಕಾರಣವಾಗಿ ಮುಗ್ಗರಿಸುತ್ತಿದೆಯಲ್ಲ ಎಂಬ ನೋವು. ಕೇವಲ ಒಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುವುದರ ದೂರಗಾಮೀ ಅಡ್ಡ ಪರಿಣಾಮಗಳು ಏನೇನು ಮತ್ತು ಅದರಿಂದ ಆಗಬಹುದಾದ ಅಪಾಯಗಳೇನೇನು ಎನ್ನುವುದರ ಅರಿವು ಆ ಪಕ್ಷದ ಮುಖಂಡತ್ವದಲ್ಲಿ ತಡವಾಗಿಯಾದರೂ ಮೂಡುತ್ತಿದೆ ಎನ್ನಬಹುದು. ಹಾಗೆಂದೇ ಪರ್ಯಾಯ ರಾಜಕಾರಣಕ್ಕೆ ಪಕ್ಷ ಒಲವು ತೋರಿದೆ. ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣವೆಂದರೆ ಒಂದು ಜಾತಿಗೆ ಬದಲಾಗಿ ಇನ್ನೊಂದನ್ನು ಓಲೈಸುವುದು; ಒಂದರ ಜೊತೆಗೆ ಮತ್ತೊಂದು ಜಾತಿ ಸಮುದಾಯಕ್ಕೆ ಆದ್ಯತೆ ನೀಡುವುದು; ಬಲವಾದ ಜಾತಿ ಸಮುದಾಯ ಸಂಘಟನೆಗಳನ್ನು ಒಡೆಯುವುದು. ಈಮಧ್ಯೆ ಲಿಂಗಾಯತ ವೀರಶೈವ ಸಮುದಾಯವನ್ನು ಕೈಲಿಟ್ಟುಕೊಂಡೇ ಒಕ್ಕಲಿಗ ಸಮುದಾಯಕ್ಕೆ ಗಾಳ ಹಾಕುವುದು ಬಿಜೆಪಿಯ ಸದ್ಯದ ಗುರಿ.
೨೦೧೮ರ ವಿಧಾನ ಸಭಾ ಚುನಾವಣೆ ಯಾವುದೇ ಪಕ್ಷಕ್ಕೂ ನಿಚ್ಚಳ ಬಹುಮತ ತರಲಿಲ್ಲ. ಅತಂತ್ರ ವಿಧಾನ ಸಭೆಯ ಮೊದಲ ಪರಿಣಾಮವೆಂದರೆ ಜೆಡಿಎಸ್/ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ. ಅದು ಉರುಳಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದುದು ಎರಡನೆ ಪರಿಣಾಮ. ಆಗ ಅದಕ್ಕೆ ಬೆಂಬಲ ನೀಡಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ರಾಜೀನಾಮೆ. ಮುಂದೆ ಆ ಪೈಕಿ ಒಬ್ಬಿಬ್ಬರನ್ನು ಹೊರತಾಗಿಸಿದರೆ ಉಳಿದವರೆಲ್ಲರೂ ಮಂತ್ರಿಗಳಾಗಿ ಕನಸು ನನಸಾಗಿಸಿಕೊಂಡರು. ಹಾಗೆ ಆಪರೇಷನ್ ಕಮಲದ ಭಾಗವಾಗಿ ಬಂದವರಲ್ಲಿ ಒಕ್ಕಲಿಗರಾದ ಎಸ್.ಟಿ.ಸೋಮಶೇಖರ್, ನಾರಾಯಣ ಗೌಡ, ಸಿ.ಪಿ.ಯೋಗೇಶ್ವರ್ ಮಂತ್ರಿಗಳಾದರು. ಹದಿನೇಳು ಶಾಸಕರ ರಾಜೀನಾಮೆ ಮತ್ತು ಬಿಜೆಪಿ ಸರ್ಕಾರ ರಚನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದ ಯೋಗೇಶ್ವರ್, ಈಗ ಬಂಡಾಯದ ಬಾವುಟ ಹಾರಿಸಿ ಬಿಜೆಪಿಯೊಳಗೆ ಆರಂಭವಾಗಿರುವ ಗೌಡರ ಗದ್ದಲಕ್ಕೆ ಕಹಳೆ ಊದಿದ್ದಾರೆ. ಯೋಗೇಶ್ವರ್ ಹೇಳುತ್ತಿರುವುದನ್ನು ನಂಬಬಹುದಾದರೆ ಯಡಿಯೂರಪ್ಪ ಆಡಳಿತ ಹಳ್ಳ ಹಿಡಿಯುತ್ತಿದೆ; ಮುಖ್ಯಮಂತ್ರಿ ಮಗ ಬಿ.ವೈ.ವಿಜಯೇಂದ್ರ ಸೂಪರ್ ಸಿಎಂ ಆಗಿ ಪಕ್ಷದ ವರ್ಚಸ್ಸನ್ನೂ ಸರ್ಕಾರದ ಮರ್ಯಾದೆಯನ್ನೂ ತಂದೆಯ ಗೌರವವನ್ನೂ ಹಾಳು ಮಾಡುತ್ತಿದ್ದಾರೆ. ಇದೇ ಮಾತನ್ನು ಉತ್ತರ ಕರ್ನಾಟಕ ಭಾಗದ ಲಿಂಗಾಯತ (ಪಂಚಮಶಾಲಿ) ಶಾಸಕ ಬಸವನ ಗೌಡ ಯತ್ನಾಳರೂ ಹೇಳುತ್ತಿದ್ದಾರೆ.
ವಿಜಯೇಂದ್ರರನ್ನು ಟೀಕಿಸುವ ಭರದಲ್ಲಿ ಯೋಗೇಶ್ವರ್, ಯಡಿಯೂರಪ್ಪನವರ ತಲೆದಂಡಕ್ಕೆ ಪಟ್ಟು ಹಿಡಿದಿದ್ದಾರೆ. ಅವರ ಪ್ರಕಾರ ವಿಜಯೇಂದ್ರರನ್ನು ನಿಯಂತ್ರಿಸದಿದ್ದರೆ ಪಕ್ಷ ಹಾಳಾಗುತ್ತದೆ. ವಿಜಯೇಂದ್ರನ್ನು ನಿಯಂತ್ರಿಸುವುದಕ್ಕೆ ಯಡಿಯೂರಪ್ಪ ಬದಲಾವಣೆಯೊಂದೇ ಮಾರ್ಗ. ಈ ಮಾತನ್ನು ಆಡಳಿತ ಪಕ್ಷದ ಇನ್ನೂ ಕೆಲವು ಶಾಸಕರು ಆಪ್ತ ಮಾತುಕತೆ ಕಾಲದಲ್ಲಿ ಒಪ್ಪಿಕೊಳ್ಳುತ್ತಾರೆ. ಮೈಸೂರು ಭಾಗದ ಇನ್ನೊಬ್ಬ ಪ್ರಭಾವಿ ನಾಯಕ ಕುರುಬ ಸಮುದಾಯದ ಎಚ್.ವಿಶ್ವನಾಥ್, ಜೆಡಿಎಸ್ನಿಂದ ಹೊರಕ್ಕೆ ಬಂದು ಬಿಜೆಪಿಯಿಂದ ಎಂಎಲ್ಸಿ ಆದರೂ ಮಂತ್ರಿಯಾಗುವ ಕನಸನ್ನು ನನಸು ಮಾಡಿಕೊಳ್ಳಲಾಗಲಿಲ್ಲ. ಹುಣಸೂರು ಉಪ ಚುನಾವಣೆಯಲ್ಲಿ ತಾವು ಸೋಲುವುದಕ್ಕೆ ಮುಖ್ಯ ಕಾರಣ ಯೋಗೇಶ್ವರ್ ಮಾಡಿದ ಮೋಸ ಎಂದು ಕೆಲವು ದಿನಗಳ ಹಿಂದೆ ಹೇಳುತ್ತಿದ್ದ ವಿಶ್ವನಾಥ್, ಈಗ ಮುಖ್ಯಮಂತ್ರಿ ಬದಲಾವಣೆ ಯತ್ನದಲ್ಲಿ ಅದೇ ಯೋಗೇಶ್ವರ್ ಜೊತೆ ಕೈಜೋಡಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಿಸುವುದಕ್ಕೆ ಮುಹೂರ್ತ ಇಟ್ಟ ಜಾಗ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದರ ಮೈಸೂರು ಮನೆ ಎಂದು ವಿಶ್ವನಾಥ್ ಇತ್ತೀಚೆಗೆ ಹೇಳಿದ್ದನ್ನು ಪ್ರಸಾದ್ ಅಲ್ಲಗಳೆದಿಲ್ಲ. ಇದೀಗ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸದೆ ವಿರಮಿಸುವುದಿಲ್ಲ ಎನ್ನುತ್ತಿರುವ ಯಾತ್ನಾಳ್, ಅದೇ ನಿವಾಸದಲ್ಲಿ ಪ್ರಸಾದ್ರನ್ನು ಭೇಟಿ ಮಾಡಿ ಚರ್ಚಿಸಿರುವುದರ ಹೂರಣ ಏನಿರಬಹುದೆಂಬ ವಿಚಾರದಲ್ಲಿ ತಲೆಗೊಂದು ತರ್ಕ ಹೊರಬೀಳುತ್ತಿದೆ. ಅಲ್ಲಿ ಮತ್ತೊಂದು ಮುಹೂರ್ತಕ್ಕಾಗಿ ಪಂಚಾಂಗ ನೋಡುವ ಕೆಲಸ ಶುರು ಆಗಿದೆಯೇ ಯಾರು ಬಲ್ಲ?
ಯಡಿಯೂರಪ್ಪ ಸರ್ಕಾರದಲ್ಲಿ ಯೋಗೇಶ್ವರ್ ಪ್ರವಾಸೋದ್ಯಮ ಖಾತೆ ಕ್ಯಾಬಿನೆಟ್ ಸಚಿವ. ಆದರೆ ಅವರಿಗೆ ಸಿಎಂ ವಿರುದ್ಧ ತಣಿಯದ ಕೋಪ. ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯನ್ನು ಗಟ್ಟಿಯಾಗಿ ಊರಿಸುವ ಪ್ರತಿಜ್ಞೆಯೊಂದಿಗೆ ಪಕ್ಷಕ್ಕೆ ಸೇರಿ ಎಂಎಲ್ಸಿಯಾಗಿ ಮಂತ್ರಿಯೂ ಆಗಿರುವ ಯೋಗೇಶ್ವರ್ಗೆ ಅಷ್ಟೆಲ್ಲ ಸಿಡುಕ್ಯಾಕೆ ಸಿಟ್ಟೇಕೆ…? ರಾಜ್ಯದಲ್ಲಿ ಈಗ ಇರುವುದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯುಳ್ಳ ತ್ರಿಪಕ್ಷ ಸರ್ಕಾರ ಎನ್ನುವುದು ಹೋದಲ್ಲಿ ಬಂದಲ್ಲಿ ಯೋಗೇಶ್ವರ್ ಪದೇ ಪದೇ ಮಾಡುತ್ತಿರುವ ಆರೋಪ. ಈ ಆರೋಪವನ್ನು ಚನ್ನಪಟ್ಟಣ ಅಥವಾ ರಾಮನಗರದಲ್ಲಿ ಅವರು ಮಾಡುತ್ತಿಲ್ಲ, ದೆಹಲಿಗೂ ದೂರನ್ನೊಯ್ದು ಯಾರಿಗೆಲ್ಲ ಮುಟ್ಟಿಸಬೇಕೋ ಅವರಿಗೆಲ್ಲ ಮುಟ್ಟಿಸಿ ಬಂದಿದ್ದಾರೆ. ಯೋಗೇಶ್ವರ್ ಮಾತಿನಲ್ಲೇ ಹೇಳುವುದಾದರೆ ಅವರು ಪರೀಕ್ಷೆ ಬರೆದಾಗಿದೆ. ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.
ಗೌಡರ ಗದ್ದಲ ಇರುವುದೇ ಇಲ್ಲಿ. ಹಳೆ ಮೈಸೂರು ಪ್ರಾಂತ್ಯದಲ್ಲಿ ತಾವು ಒಕ್ಕಲಿಗ ಬಿಜೆಪಿ ಶಕ್ತಿ ಕೇಂದ್ರದ ಸೂತ್ರಧಾರ ಆಗುವ ಹೆಬ್ಬಯಕೆ ಯೋಗೇಶ್ವರ್ ಅವರದು. ಆ ಬಯಕೆಗೆ ಹಲವು ಅಡ್ಡಿಅಡಚಣೆ ಎದುರಾಗಿದೆ. ಅದರಲ್ಲಿ ಒಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣವಾಗಿ, ಇನ್ನೊಂದು ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೆಪದಲ್ಲಿ. ಎಚ್ಡಿಕೆ ಹಾಗೂ ಡಿಕೆಶಿ ಪ್ರಸ್ತುತ ರಾಜಕೀಯದಲ್ಲಿ ಪ್ರತಿಪಕ್ಷಗಳ ನಾಯಕರಂತೆ ಕಾಣಿಸಿಕೊಂಡರೂ ಒಳಗೊಳಗೇ ಯಡಿಯೂರಪ್ಪ ಜೊತೆ ಮೈತ್ರಿ ಭಾವದಲ್ಲಿದ್ದಾರೆ ಎನ್ನುವುದು ಯೋಗೇಶ್ವರ್ ಅನುಮಾನ. ರಾಮಮನಗರ, ಚನ್ನಪಟ್ಟಣ ಮುಂತಾದೆಡೆ ಯಾರು ಅಧಿಕಾರಿಗಳಾಗಿ ಬರಬೇಕು ಎನ್ನುವುದನ್ನು ತಥಾಕಥಿತ ಪ್ರತಿಪಕ್ಷ ನಾಯಕರು ತೀರ್ಮಾನ ಮಾಡುತ್ತಾರೆಯೆ ಹೊರತೂ ಆಡಳಿತ ಪಕ್ಷದವರಲ್ಲ ಎನ್ನುವುದು ಯೋಗೇಶ್ವರ್ ಕೊಡುವ ವಿವರಣೆ. ಅದಕ್ಕೆ ತಮ್ಮದೇ ಆದ ಸಾಕ್ಷ್ಯಾಧಾರಗಳನ್ನೂ ಅವರು ಮಂಡಿಸುತ್ತಾರೆ.
ಯಡಿಯೂರಪ್ಪ ಈ ನಾಯಕರ ಮಾತನ್ನು ಕೇಳುತ್ತಾರೆಯೇ ಶಿವಾಯಿ ತಮ್ಮಂಥ ಪಕ್ಷಕ್ಕೆ ದುಡಿಯುವರ ಮಾತಿಗಲ್ಲ ಎನ್ನುವುದು ಯೋಗೇಶ್ವರ್ ವಾದ. ಅತ್ತೂಕರೆದೂ ಎಂಬಂತೆ ಮಂತ್ರಿಗಳಾದವರಲ್ಲಿ ಯೋಗೇಶ್ವರ್ ಕೂಡಾ ಒಬ್ಬರು. ಮಂತ್ರಿಯಾದ ನಂತರದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ತಮ್ಮ ಕೈಗೆ ಬರುತ್ತದೆಂದು ಅವರು ನಂಬಿದ್ದರು. ಆದರೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಆ ಜಿಲ್ಲೆ ಉಸ್ತುವಾರಿಯಾಗಿದ್ದಾರೆ. ಚುನಾವಣೆ ಕಾಲದಲ್ಲಿ ನಂತರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಇನ್ನಿಲ್ಲದ ಹಿಂಸೆಯನ್ನು ಕೊಟ್ಟವರು ಡಿಕೆಶಿ ಸಹೋದರರು, ಕುಮಾರಸ್ವಾಮಿ ಮತ್ತವರ ಬೆಂಬಲಿಗರು ಎನ್ನುವುದು ಯೋಗೇಶ್ವರ್ ಅಳಲು. ನೊಂದ ಬಿಜೆಪಿ ಕಾರ್ಯಕರ್ತರ ಕಣ್ಣೀರನ್ನೊರೆಸಲು ಜಿಲ್ಲಾ ಉಸ್ತುವಾರಿ ತಮ್ಮ ಕೈಗೆ ಬರಬೇಕು ಎನ್ನುವುದು ಅವರ ಆಗ್ರಹ. ಯಾವುದೇ ಕಾರಣಕ್ಕೂ ಈ ಆಗ್ರಹಕ್ಕೆ ಮಣಿಯಬೇಡಿ ಎಂಬ ಪ್ರತಿಪಕ್ಷ ನಾಯಕರ ಮನವಿಯೋ ಮಾತಿಗೋ ಯಡಿಯೂರಪ್ಪ ಮಣೆ ಹಾಕಿದ್ದಾರೆ ಎನ್ನುತ್ತಾರೆ ಯೋಗೇಶ್ವರ್.
೨೦೧೮ರ ಚುನಾವಣೆಯಲ್ಲಿ ಡಿಕೆಶಿ-ಎಚ್ಡಿಕೆ ಒಂದಾಗಿ ಜೋಡೆತ್ತಾಗಿ ನಿಂತು ತಮ್ಮನ್ನು ಸೋಲಿಸಿದರೆಂಬ ದುಃಖ ಯೋಗೇಶ್ವರ್ರಲ್ಲಿ ಆಗಾಗ ಉಮ್ಮಳಿಸುತ್ತದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿ ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಲೆಂದೇ ಎಚ್ಡಿಕೆ-ಡಿಕೆಶಿ ಒಂದಾದರು ಎಂಬುದು ನಿಲ್ಲದ ಅಳಲು. ಮಂತ್ರಿಯಾದ ನಂತರ ಸೇಡು ತೀರಿಸಿಕೊಳ್ಳುವ ಯೋಗೇಶ್ವರ ಹಂಬಲ ಹೆಪ್ಪುಗಟ್ಟಿ ಹೋಗುತ್ತಿದೆ. ಮುಖ್ಯಮಂತ್ರಿಯಾದವರ ಸಹಕಾರ ಇಲ್ಲವಾದರೆ ರಾಜಕೀಯ ಸಬಲರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕಷ್ಟ ಎನ್ನುವುದರ ವಾಸ್ತವ ಅವರ ನಜರಿನಲ್ಲಿದೆ. ಎಂದೇ ಅವರಿಗೆ ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ಬೇಕಾಗಿದೆ. ಯೋಗೇಶ್ವರ್ ರೀತಿಯಲ್ಲೇ ಮತ್ತೊಂದು ರೀತಿಯ ಗೌಡರ ಗದ್ದಲಕ್ಕೆ ಬಿಜೆಪಿ ಅಂಗಳದಲ್ಲಿ ಮಂಟಪ ಸಿದ್ಧವಾಗಿದೆ. ಸಚಿವರಾದ ಅಶ್ವತ್ಥನಾರಾಯಣ ಮತ್ತು ಆರ್.ಅಶೋಕ ಈ ಗದ್ದಲದ ಬಹುಮುಖ್ಯ ಪಾತ್ರಧಾರಿಗಳು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರ್.ಅಶೋಕ ಉಪ ಮುಖ್ಯಮಂತ್ರಿ. ಒಕ್ಕಲಿಗ ಕೋಟಾ ಎಂದು ಅದನ್ನು ಕರೆಯಬಹುದು. ಕುರುಬರ ಕೋಟಾದಲ್ಲಿ ಕೆ.ಎಸ್.ಈಶ್ವರಪ್ಪ ಡಿಸಿಎಂ ಆಗಿದ್ದರು. ಈಗ ಅವರಿಬ್ಬರೂ ಕ್ಯಾಬಿನೆಟ್ ದರ್ಜೆ ಸಚಿವರು ಮಾತ್ರ. ಡಿಸಿಎಂ ಹುದ್ದೆ ತಪ್ಪಿದ್ದರಿಂದ ಆಗಿರುವ ಗಾಯವನ್ನು ಇಬ್ಬರೂ ನೆಕ್ಕುತ್ತ ಕುಳಿತಿದ್ದಾರೆ. (ಈ ಮಾತು ಜಗದೀಶ ಶೆಟ್ಟರ್ಗೂ ಅನ್ವಯ. ಅವರು ಮುಖ್ಯಮಂತ್ರಿಯೇ ಆಗಿದ್ದವರು. ಈಗ ಹಿಂಬಡ್ತಿಯಾಗಿ ಸಚಿವರಷ್ಟೇ ಆಗಿದ್ದಾರೆ).
ತಮಗೆ ಡಿಸಿಎಂ ಹುದ್ದೆ ಕೈತಪ್ಪಿದ್ದಷ್ಟೇ ಆಗಿದ್ದರೆ ಅಶೋಕ್ ಯೋಚನೆ ಮಾಡುತ್ತಿದ್ದರೋ ಇಲ್ಲವೋ ಹೇಳಲಾಗದು. ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದ ಶಾಸಕ ಅಶ್ವತ್ಥನಾರಾಯಣ ತಮ್ಮ ಕುರ್ಚಿಯಲ್ಲಿ ಡಿಸಿಎಂ ಆಗಿ ಕೂತಿರುವುದು ಮತ್ತು ಅದು ಒಕ್ಕಲಿಗ ಕೋಟಾ ಆಗಿರುವುದು ಅಶೋಕ್ರ ನಿದ್ರೆಯನ್ನು ಕೆಡಿಸಿರುವ ಬೆಳವಣಿಗೆ. ಅಶೋಕ್ರ ಕೈಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಎಂಬ ಪ್ರತಿಷ್ಟಿತ ಹುದ್ದೆಯೂ ಇಲ್ಲ. ಮಾತ್ರವಲ್ಲ ಬೆಂಗಳೂರಿನಲ್ಲಿಯೇ ನಡೆಯುವ ಕೆಂಪೇಗೌಡರ ದಿನಾಚರಣೆಯಂಥ ಕಾರ್ಯಕ್ರಮಗಳ ಆಹ್ವಾನ ಪತ್ರದಲ್ಲಿ ಪದ್ಮನಾಭ ನಗರದ ಶಾಸಕ ತಮ್ಮ ಹೆಸರೇ ನಾಪತ್ತೆಯಾಗುವಂಥ ಕಿರಿಕಿರಿಯೂ ಅಶೋಕ್ ಪಾಲಿನ ದುಃಸ್ವಪ್ನವಾಗಿದೆ. ಇಂದಲ್ಲ ನಾಳೆ ತಾವೇ ಸಿಎಂ ಎಂದು ಅಶೋಕ್ ತಮ್ಮ ಆಪ್ತರ ಸಂಗದಲ್ಲಿ ಆಡಿದ್ದುಂಟು. ಈಗ ನೋಡಿದರೆ ಕಾಲಕೆಳಗಿನ ನೆಲವೇ ಕುಸಿಯುವ ಸೂಚನೆ ಎದುರಾಗಿದೆ.
ಪರಸ್ಪರ ನಡೆಸುತ್ತಿರುವ ಈ ಹೊಡೆದಾಟದಲ್ಲೂ ಯೋಗೇಶ್ವರ್ ವಿರುದ್ಧ ಯಡಿಯೂರಪ್ಪನವರ ಬೆಂಬಲಕ್ಕೆ ಬಹುತೇಕ ಒಕ್ಕಲಿಗ ಸಚಿವರು ತೋಳೇರಿಸಿ ನಿಂತಿದ್ದಾರೆ. ಯಡಿಯೂರಪ್ಪನವರನ್ನು ಟೀಕಿಸುವವರು ಅವರ ಪಾದ ದೂಳಿಗೂ ಸಮರಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಘೋಷಿಸಿದ್ದಾರೆ. ಯೋಗೇಶ್ವರ್ ಜೊತೆಯಲ್ಲಿ ಯಡಿಯೂರಪ್ಪನವರನ್ನು ಸಿಎಂ ಮಾಡಲೆಂದು “ತ್ಯಾಗ” ಮಾಡಿ ಬಂದವರಲ್ಲಿ ಸೋಮಶೇಖರ್ ಕೂಡಾ ಒಬ್ಬರು. ಸಚಿವರಾದ ಅಶ್ವತ್ಥನಾರಾಯಣ, ಅಶೋಕ, ನಾರಾಯಣ ಗೌಡ ಮುಂತಾದ ಒಕ್ಕಲಿಗ ಕುಲ ಬಾಂಧವರ ಸೇನೆ ಯಡಿಯೂರಪ್ಪ ರಕ್ಷಣೆಗೆ ಕತ್ತಿಗುರಾಣಿ ಹಿಡಿದು ನಿಂತಿದೆ. ಯುದ್ಧಕ್ಕೆ ವೇದಿಕೆ ಸಿದ್ಧವಾಗಿದ್ದು ಸಂಧಾನ ಪ್ರಕ್ರಿಯೆ ಏನಾಗುತ್ತದೆಂದು ಹೇಳಲಾಗದು. ಮಹಾ ಭಾರತದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಸಂಧಾನ ಮಾಡಿಸುವ ಕೆಲಸ ವಹಿಸಿಕೊಂಡ ಶ್ರೀಕೃಷ್ಣನಿಗೇ ಉಭಯ ಪಕ್ಷಗಳ ಮಧ್ಯೆ ಸಂಧಾನವಾಗುವುದು ಬೇಕಾಗಿರಲಿಲ್ಲ; ಅದರ ಪರಿಣಾಮ ಕುರುಕ್ಷೇತ್ರ ಯುದ್ಧ ಎನ್ನುತ್ತದೆ ವ್ಯಾಸ ಮಹರ್ಷಿಗಳ ಮಹಾಕಾವ್ಯ. ಇಲ್ಲಿ ಏನಾಗುತ್ತದೋ ನೋಡೋಣ.