ಕೊಪ್ಪಳವೆಂಬ ಮಹಾಕೊಪಣಾಚಲ
ಕೊಪ್ಪಳವು ಮಧ್ಯ ಕರ್ನಾಟಕದ ಪ್ರಸಿದ್ಧ ಪ್ರಾಚೀನ ಎಡೆ. ಇದು ಶಿಲಾಯುಗ ಕಾಲದಿಂದಲೂ ಮಾನವನ ವಸತಿ ತಾಣ. ನೂತನ ಶಿಲಾಯುಗದ ಕೊಡಲಿ, ಮಡಕೆಗಳು, ಬೃಹತ್ ಶಿಲಾಯುಗದ ಕಲ್ಗೋರಿಗಳು(ಮೋರೇರ ಮನೆ) ಇಲ್ಲಿವೆ. ಮೌರ್ಯ ಅಶೋಕನ ಎರಡು ಬಂಡೆಗಲ್ಲು ಶಾಸನಗಳು ಕಂಡುಬಂದಿರುವುದು ಇಲ್ಲಿನ ಗವಿಮಠ ಮತ್ತು ಪಾಲ್ಕಿಗುಂಡುಗಳಲ್ಲಿ. ಶಾತವಾಹನ ಕಾಲದ ೫೫೩೪ ಮುದ್ರಾಂಕಿತ ನಾಣ್ಯಗಳ ರಾಶಿಯೇ ಇಲ್ಲಿನ ಚಿಕ್ಕಸಿಂಧೋಗಿಯಲ್ಲಿ ದೊರೆತಿರುವುದು ಗಮನಾರ್ಹ. ಬ್ರಾಹ್ಮಿ ಲಿಪಿಯಲ್ಲಿರುವ ಸಿರಿಸತಕನಿ ಎಂಬ ನಾಣ್ಯ ದೊರೆತಿದೆ. ಚಂದ್ರವಳ್ಳಿಯ ಕ್ರಿ.ಶ. ೪೫೦ರ ಶಾಸನದಲ್ಲಿ ಕುಪಣ ಉಲ್ಲೇಖವಿದ್ದು, ಕೊಪ್ಪಳದ ಪ್ರಾಚೀನ ಹೆಸರು ಕುಪಣವೆಂಬುದು ಸ್ಪಷ್ಟವಾಗಿದೆ. ಕೊಪ್ಪಳವನ್ನು ಶಾಸನ-ಸಾಹಿತ್ಯಗಳಲ್ಲಿ ಕುಪಣ, ಕುಪಣತೀರ್ಥ, ಕುಪಣಶ್ರೀತೀರ್ಥ, ಕುಪಣತೀರ್ಥಸ್ಥಾನ, ಕುಪಣಾಚಲ, ಸಿದ್ಧಕುಪಣ, ಕುಪಣಪುರ, ಕೊಪಣ, ಕೊಪಣತೀರ್ಥ, ಕೊಪಣಾದ್ರಿ, ಮಹಾಕೊಪಣನಗರ, ಮಹಾಕೊಪಣಾಚಲ, ಕೊಪಣವೇಂಟೆ, ಕೊಪಣನಾಡು ಎಂಬುದಾಗಿ ಮನದಣಿಯೆ ಬಣ್ಣಿಸಿವೆ. ಚೀನಾ ಯಾತ್ರಿಕ ಹೂಯೆನ್ತ್ಸಾಂಗ್ ಇದನ್ನು ಕೊಂಕಿನಪುಲೋ ಎಂದು ಕರೆದಿದ್ದಾನೆ. ಕುಪಣವೆಂದರೆ ಎತ್ತರದ ದಿಬ್ಬ, ರಾಶಿ, ಚಿಕ್ಕಗುಡ್ಡ ಎಂಬುದಾಗಿದೆ.
ಕೊಪ್ಪಳವನ್ನು ಅಧ್ಯಯನ ನಿಮಿತ್ತ ನೋಡಲು ಸಾಧ್ಯವಾದದ್ದು ೨೦೦೦ದಲ್ಲಿ. ದೇವಾಲಯ ಕೋಶವೆಂಬ ಮಹಾಯೋಜನೆಯು ನಮ್ಮನ್ನು ಇಲ್ಲಿಗೆ ಕರೆದೊಯ್ಯಿತು. ನನ್ನ ಜೀವನದಲ್ಲಿ ಇಡೀ ಜಿಲ್ಲೆಯ ಪ್ರತಿ ಗ್ರಾಮವನ್ನೂ ಸುತ್ತಿನೋಡಿದ ಮೊದಲ ಜಿಲ್ಲೆ ಅದು ಕೊಪ್ಪಳವೇ. ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದ ಮಟ್ಟಿಗೆ ಹೇಳುವುದಾದರೆ ಈ ಜಿಲ್ಲೆ ಶಿಲ್ಪಗಳ ಖನಿಯೇ ಆಗಿದೆ. ಜಿಲ್ಲೆಯ ಅನೇಕ ಶಿಲ್ಪಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಅವಕಾಶ ನಮ್ಮದಾಗಿದ್ದುದು ಸುದೈವವೇ ಸರಿ. ಕೊಪ್ಪಳದ ಎರಡು ಬೃಹತ್ ಫಿರಂಗಿಗಳು ವಿವಿಯ ಅಕ್ಷರ ಕಟ್ಟಡದ ಮುಂದೆ ವಿರಾಜಮಾನವಾಗಿದ್ದು, ಶೋಭೆ ತಂದಿವೆ. ಇವೆಲ್ಲವೂ ಇತಿಹಾಸವನ್ನು ನಾಡಿಗೆ ಸಾರಿ ಸಾರಿ ಹೇಳುವಂತಿವೆ.
ಈ ಜಿಲ್ಲೆ ಪ್ರಾಗೈತಿಹಾಸಿಕವಲ್ಲದೆ ಚಾರಿತ್ರಿಕ ಆಕರಗಳನ್ನು ಒಳಗೊಂಡ ಅತ್ಯಂತ ಸಮೃದ್ಧ ಜಿಲ್ಲೆಯೆನ್ನಬಹುದು. ಧಾರ್ಮಿಕವಾಗಿಯೂ ಬೌದ್ಧ, ಜೈನ, ಶೈವ, ವೈಷ್ಣವ, ಶಾಕ್ತ ಧರ್ಮಗಳ ನೆಲೆವೀಡಾಗಿತ್ತು. ಕೊಪ್ಪಳವನ್ನೇ ನೋಡಿದರೆ ಅಶೋಕನ ಶಾಸನ ಮತ್ತು ಹೂಯೆನ್ತ್ಸಂಗನ ಉಲ್ಲೇಖಗಳು ಬೌದ್ಧ ಧರ್ಮವು ಮೌರ್ಯ ಕಾಲದಿಂದ ಬಾದಾಮಿ ಚಾಲುಕ್ಯರ ಕಾಲದವರೆಗೂ ಅಸ್ತಿತ್ವದಲ್ಲಿದ್ದುದು ದೃಢವಾಗುತ್ತದೆ. ಇದರಿಂದ ಈ ಭಾಗದ ಪ್ರಾಚೀನ ಧರ್ಮ ಬೌದ್ಧಮತವೇ ಆಗಿದ್ದಿತು. ಅಂತೆಯೇ ಕ್ರಿ.ಶ. ೮ನೆಯ ಶತಮಾನದ ಹೊತ್ತಿಗೆ ಪ್ರವೇಶಿಸಿದ ಜೈನಧರ್ಮವು ಕಲ್ಯಾಣ ಚಾಲುಕ್ಯ ಕಾಲದವರೆಗೆ ತನ್ನ ಪಾರಮ್ಯವನ್ನು ಇಲ್ಲಿ ಮೆರೆದಿದೆ. ಇದಕ್ಕೆ ನೂರಾರು ಶಾಸನ, ಜಿನಬಿಂಬ, ಬಸದಿಗಳು ಕಾರಣವಾಗಿವೆ. ನಂತರ ಶೈವ ಮತ್ತು ವೈಷ್ಣವ ಧರ್ಮಗಳ ಅಸ್ತಿತ್ವವನ್ನು ಶಂಭುಲಿಂಗ, ಗವಿಮಠ, ಚೆನ್ನಕೇಶವ, ಬಾಲಕೃಷ್ಣ ದೇವಾಲಯಗಳು ಸಾರುತ್ತವೆ. ರಾಷ್ಟ್ರಕೂಟರ ಕಾಲದಲ್ಲಿ ಕೊಪ್ಪಳ ಮತ್ತು ಅಲ್ಲಿನ ಜೈನಧರ್ಮಕ್ಕೆ ವಿಶೇಷ ಮಾನ್ಯತೆ ಸಿಕ್ಕಿತೆಂದೇ ಹೇಳಬೇಕು.
ಅಂದಿನ ಪ್ರೋತ್ಸಾಹದ ಪ್ರತೀಕವಾಗಿ ನೂರಾರು ಶಿಲಾಶಾಸನ, ಅದರಲ್ಲೂ ನಿಸಿದಿಗಳನ್ನೇ ಹೆಚ್ಚಾಗಿ ಕಾಣುತ್ತೇವೆ. ಇವುಗಳ ಅನಾವರಣವೋ ರೋಚಕವೇ. ೧೯೯೨ರಲ್ಲಾದ ಮಹಾಮಳೆಗೆ ಇಲ್ಲಿನ ಕೋಟೆಗೋಡೆಯ ಒಂದು ಭಾಗ ಕುಸಿದುಹೋಯಿತು. ಕುಸಿದ ಕೋಟೆಗೋಡೆಯಲ್ಲಿ ಇದ್ದುದು ಕೇವಲ ಕಲ್ಲುಬಂಡೆಗಳಲ್ಲ, ಅವು ಶಿಲಾಶಾಸನಗಳು, ಬರೀ ಶಾಸನಗಳಲ್ಲ, ಕೋಟೆಗೋಡೆಗೆ ತುಂಡರಿಸಿ ಪೇರಿಸಿಟ್ಟ ನಿಸಿದಿ ಶಾಸನಕಲ್ಲುಗಳೇ ಆಗಿದ್ದವು. ಅದೂ ಈ ನಿಶದಿಕಲ್ಲು ಶಾಸನಗಳು ಇಂದು ನಿನ್ನೆಯವಲ್ಲ, ಕ್ರಿ.ಶ. ೯-೧೦ನೇ ಶತಮಾನದವು. ಇವು ಕಾಲಾಂತರದಲ್ಲಿ ಧಾರ್ಮಿಕ ಉಪೇಕ್ಷೆಗೆ ಒಳಗಾಗಿ ಕೋಟೆಗೋಡೆಯ ಕಲ್ಲುಗಳಾಗಿ ಮಾರ್ಪಟ್ಟದ್ದು ವಿಪರ್ಯಾಸ. ಇದು ಜೈನಧರ್ಮದ ಅವನತಿಯ ಸಂಕೇತವೂ ಆಗಿದ್ದಿತು. ಇವುಗಳನ್ನು ಸಂರಕ್ಷಿಸಿದ ಕೀರ್ತಿ ರಾಜ್ಯ ಪುರಾತತ್ವ ಇಲಾಖೆಯದಾದರೆ, ಒಂದೆಡೆ ದಾಖಲಿಸಿದ ಹಿರಿಮೆ ನಾಡೋಜ ಹಂಪ ನಾಗರಾಜಯ್ಯ ಅವರಿಗೆ ಸಲ್ಲುತ್ತದೆ. ರಾಷ್ಟ್ರಕೂಟ ಅಮೋಘವರ್ಷನ ಕಾಲದ ಕವಿರಾಜಮಾರ್ಗದಲ್ಲಿ ಕೊಪ್ಪಳವನ್ನು ಮಹಾಕೊಪಣವೆಂದೇ ಬಣ್ಣಿಸಿದೆ. ಈ ಅವಧಿಯಲ್ಲಿ ದೊರೆತ ಪ್ರೋತ್ಸಾಹದ ಪ್ರತೀಕವಾಗಿ ಕೊಪ್ಪಳವು ನೂರಾರು ಬಸದಿಗಳ ಬೀಡಾಗಿತ್ತು. ಇಂದಿಗೂ ಜನಮಾನಸದಲ್ಲಿ ಉಳಿದಿರುವಂತೆ ಇಲ್ಲಿ ೭೭೨ ಬಸದಿಗಳಿದ್ದು, ಜೈನ ಧರ್ಮೀಯರ ಬಹುದೊಡ್ಡ ನೆಲೆವೀಡಾಗಿತ್ತು. ಇದಕ್ಕೆ ಪೂರಕವೆನ್ನುವಂತೆ ಚಂದ್ರನಾಥ, ಶಾಂತಿನಾಥ, ನೇಮಿನಾಥ, ಜಯಧೀರ, ಪುಷ್ಪದಂತ, ಪಾರ್ಶ್ವನಾಥ ಮೊದಲಾದ ಬಸದಿಗಳ ಉಲ್ಲೇಖಗಳೂ ಇವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಸಿದ್ಧ ನೆಲೆಗಳಲ್ಲಿ ಶ್ರವಣಬೆಳಗೊಳವನ್ನು ಹೊರತುಪಡಿಸಿದರೆ ನಂತರದ ಸ್ಥಾನ ಕೊಪ್ಪಳಕ್ಕೆ ಸಲ್ಲುವುದು. ಇದನ್ನು ಜೈನರ ದಕ್ಷಿಣಕಾಶಿಯೆಂದೇ ಕರೆಯುತ್ತಾರೆ.
ಆದರೆ ಇವೆಲ್ಲವುಗಳ ಕುರುಹಾಗಿ ಇಂದು ಉಳಿದುಬಂದಿರುವ ಏಕೈಕ ಬಸದಿಯೆಂದರೆ ಅದು ಪಾರ್ಶ್ವನಾಥನದು. ಉಳಿದ ಎಲ್ಲ ಬಸದಿಗಳು ದೇವಾಲಯಗಳಾಗಿ ಮಾರ್ಪಾಟಾಗಿವೆ. ಇಲ್ಲಿನ ಜಿನಾಲಯಗಳು ಕಾಲಾಂತರದಲ್ಲಿ ವೈಷ್ಣವರಿಗೆ ಚನ್ನಕೇಶವ, ಬಾಲಕೃಷ್ಣ ದೇವಾಲಯಗಳಾಗಿ, ಶೈವರಿಗೆ ಅಮೃತೇಶ್ವರ, ಗವಿಮಠಗಳಾಗಿ ಪರಿವರ್ತನೆಗೊಂಡಿವೆ. ಈ ಮಾರ್ಪಾಟು ಇಂದು ನಿನ್ನೆಯದಲ್ಲ. ಕೃಷ್ಣದೇವರಾಯನ ಕಾಲಕ್ಕೇ ಆಗಿಹೋಗಿದೆ. ಅವನದೇ ಒಂದು ಶಾಸನದಲ್ಲಿ ಹೇಳುವಂತೆ ಕೊಪಣದ ಚನ್ನಕೇಶವ ದೇವರಿಗೆ ಹಿರಿಯ ಸಿಂದೋಗಿ ಗ್ರಾಮವನ್ನು ಸಮರ್ಪಿಸಿದ್ದನು. ಈ ದೇವಾಲಯದ ಗರ್ಭಗೃಹದಲ್ಲಿರುವ ಮೂರ್ತಿಯ ಕೆಳಗಿನ ಪೀಠವು ಜಿನಪೀಠವೇ ಆಗಿದೆ. ಅಂತೆಯೇ ಬಾಲಕೃಷ್ಣ ದೇಗುಲದ ಮೂರ್ತಿಯ ಪೀಠವೂ ಜಿನಪೀಠವೇ ಆಗಿತ್ತು. ಅಂತೆಯೇ ಗವಿಮಠದ ಬಂಡೆಗಲ್ಲುಗಳು ಮತ್ತು ಅಲ್ಲಿನ ಅಮೃತೇಶ್ವರ ಗುಹಾಲಯದ ಬಂಡೆಗಲ್ಲುಗಳಲ್ಲಿರುವ ಜಿನಬಿಂಬಗಳು ಅಲ್ಲಿನ ಜೈನಧರ್ಮ ಮತ್ತು ಅದರ ಪ್ರಾಚೀನತೆಯನ್ನು ಸಾರಿ ಹೇಳುತ್ತವೆ. ಇದು ಕಾಲಾಂತರದಲ್ಲಿ ಕರ್ನಾಟಕದಲ್ಲಿ ಜೈನಧರ್ಮ ಮತ್ತು ಅದರ ಅನುಸರಣೆಗಳಿಂದ ಜನರು ವಿಮುಖವಾದದ್ದನ್ನು ವ್ಯಕ್ತಪಡಿಸುತ್ತದೆ.
ಕೊಪ್ಪಳ ಒಂದು ಕಾಲದಲ್ಲಿ ದಕ್ಷಿಣ ಭಾರತದ ಪವಿತ್ರ ಕ್ಷೇತ್ರವಾಗಿತ್ತು. ಆದ್ದರಿಂದಲೇ ಇದನ್ನು ತೀರ್ಥ, ಮಹಾತೀರ್ಥ, ಆದಿತೀರ್ಥವೆಂದು ಕರೆದಿರುವುದು. ಅಂತೆಯೇ ಕವಿರಾಜಮಾರ್ಗದಲ್ಲಿ ಇದನ್ನು ಮಹಾಕೊಪಣ ನಗರವೆಂದೇ ಕರೆದಿದೆ. ಅಂದರೆ ೯-೧೦ನೆಯ ಶತಮಾನದಲ್ಲಿ ಇದೊಂದು ನಗರವಾಗಿದ್ದುದು ಸ್ಪಷ್ಟವಾಗುತ್ತದೆ. ಕೊಪ್ಪಳದ ನಗರದ ಪ್ರಾಚೀನತೆ ಅಶೋಕನ ಕಾಲಕ್ಕೆ ಹೋಗುತ್ತದೆ. ಅವನು ಹಾಕಿಸಿದ ಎಲ್ಲ ಶಾಸನಗಳು ಸಾಮಾನ್ಯವಾಗಿ ಪ್ರಾಚೀನ ನಗರಗಳೇ ಆಗಿದ್ದುದನ್ನು ಕಾಣಬಹುದು. ಅವೆಲ್ಲವೂ ವ್ಯಾಪಾರ ಮತ್ತು ವಾಣಿಜ್ಯಗಳ ಬಹುಮುಖ್ಯ ಕೇಂದ್ರಗಳೇ ಆಗಿದ್ದವು. ಅಂತಹ ಕೇಂದ್ರಗಳನ್ನು ಆಯ್ದಕೊಂಡೇ ಶಿಲಾಶಾಸನಗಳನ್ನು ಹಾಕಿಸಿದ್ದನು. ಇದನ್ನು ಬ್ರಹ್ಮಗಿರಿ, ಮಸ್ಕಿ, ಸನ್ನತಿಗಳಲ್ಲಿ ಕಾಣಬಹುದು. ಅಂತೆಯೇ ಕೊಪ್ಪಳವು ಪ್ರಾಚೀನ ಪವಿತ್ರ ಸ್ಥಳವೆಂಬುದನ್ನು ರನ್ನನು ತನ್ನ ಅಜಿತನಾಥ ಪುರಾಣದಲ್ಲಿ ಬಣ್ಣಿಸಿದ್ದಾನೆ. ಅವನು ದಾನಚಿಂತಾಮಣಿ ಅತ್ತಿಮಬ್ಬೆಯ ಗುಣಸ್ವಭಾವವನ್ನು ಬಣ್ಣಿಸುತ್ತಾ, “ಬಿಳಿಯರಳೆಯಂತೆ ಗಂಗಾಜಳದಂತೆಸೆವ ಜಿತಸೇನಮುನಿಪತಿಯ ಗುಣಾವಳಿಯಂತೆ ನೆಗಳ್ದ ಕೊಪಣಾಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ”. ಇಲ್ಲಿ ಕೊಪಣಾಚಲವು ಪವಿತ್ರವಾದ ಜೈನ ಕ್ಷೇತ್ರವಾಗಿತ್ತೆಂಬುದು ಸ್ಪಷ್ಟವಾಗುತ್ತದೆ.
ಒಟ್ಟಿನಲ್ಲಿ ಕೊಪ್ಪಳವು ಪ್ರಾಚೀನ ಕಾಲದಿಂದಲೂ ಮಾನವನ ಬಹುದೊಡ್ಡ ವಸತಿ ತಾಣವಾಗಿದ್ದು, ಮೌರ್ಯರ ಕಾಲಕ್ಕೆ ಬೌದ್ಧ ಧರ್ಮಕ್ಕೂ, ರಾಷ್ಟ್ರಕೂಟರ ಕಾಲಕ್ಕೆ ಜೈನ ಧರ್ಮಕ್ಕೂ, ವಿಜಯನಗರ ಕಾಲದ ಹೊತ್ತಿಗೆ ಶೈವ, ವೈಷ್ಣವ ಧರ್ಮಗಳಿಗೂ ಆಶ್ರಯದ ತಾಣವಾಗಿದ್ದುದನ್ನು ಚಾರಿತ್ರಿಕ ದಾಖಲೆಗಳು ಸಾರುತ್ತವೆ. ಇದಕ್ಕೆ ಅಲ್ಲಿನ ಶಾಸನ, ದೇಗುಲ, ಮಠಗಳಲ್ಲದೆ ಇಂದಿಗೂ ಫಿರಂಗಿಗಳ ಸಿಡಿಗುಂಡುಗಳಿಗೆ ಜಗ್ಗದೆ ಮುಗಿಲೆತ್ತರಕ್ಕೆ ನಿಂತಿರುವ ಅದಮ್ಯ ಕೋಟೆಯು ಸಾಕ್ಷಿಯಾಗಿವೆ. ಜೊತೆಗೆ ಇಂದಿಗೂ ಗವಿಮಠದ ಕ್ರಿಯಾಶೀಲ ಚಟುವಟಿಕೆಗಳಿಂದ ನಾಡಿನ ಗಮನ ಸೆಳೆಯುತ್ತಿರುವುದು ಕೊಪ್ಪಳದ ಹಿರಿಮೆಯೇ ಆಗಿದೆ.