ಸಂತೆ ಎನ್ನುವುದು ಭಾರತೀಯ ಸಂಸ್ಕೃತಿಯ ಒಂದು ಹೆಗ್ಗರಿತು, ಈ ಮೂಲಕವೇ ಜಾನಪದ ಪರಂಪರೆಯ ಉನ್ನತೀಕರಣವೂ ಕೂಡ ಇಂತ ಸಂತೆ ಈಗ ಬದಲಾವಣೆಗೊಂಡಿದೆ ಮಾಲ್‌ಗಳ ಸಂಸ್ಕೃತಿಯಾಗಿದೆ ಈ ಬಗ್ಗೆ ಕುರಿತು ಡಾ.ಶಿವಕುಮಾರ್ ಕಂಪ್ಲಿ ಅವರ ಲೇಖನ ಸ್ತುತ್ಯರ್ಹವಾಗಿದೆ.
ಸಂತೆ ಎಂಬ ಸಾಂಸ್ಕೃತಿಕ ಸಂಕಥನ
ಆನ್ ಲೈನ್ ಶಾಪಿಂಗ್ ,ಬಿಗ್ ಬಜಾರ್,ಸೂಪರ್ ಮಾರ್ಕೆಟ್ ಗಳಂತಹ ಪದಾರ್ಥ ಕೇಂದ್ರಿತ ಮಾರುಕಟ್ಟೆಗಳ ನೆನಪುಗಳು ಹಳ್ಳಿ ನೆನಪುಗಳ ಸಾಂಸ್ಕೃತಿಕ ಸಂತೆಯನ್ನ ನೆನಪಿಸಿತು.” ಅವ್ವನ ಸೆರಗ ಚುಂಗಿಡಿದು ಹೊಲಗಳ ಹಸಿರು,ಕರಿ ಕಲ್ಲು ದಾರಿಗಳ ಕಾಲು ನಡಿಗೆಯಲ್ಲಿ ನಡೆದು ನಗರ ಸೇರುತ್ತಿದ್ದದ್ದು,ಬೆಳೆದಂತೆಲ್ಲಾ ಭಾವನ ಜೊತೆ ಸಂತೆಗೆ ಹೊರಟು, ಮೊದಲು ಸಿನಿಮಾ ನೋಡಿ ಆನಂತರ ಸಂತೆಯ ಲೆಕ್ಕವನ್ನ ಊರಾಚೆ ಬಂದಮೇಲೆ ಆಲದ ಮರದ ಬಳಿ ಕುಳಿತು ಒಂದೊಂದೇ ತರಕಾರಿ ತಲೆಗೆ ಹಚ್ಚಿ ನಿರಾಳವಾಗಿ ನಕ್ಕು ಮನೆ ಸೇರುತಿದ್ದದ್ದು.ಕ್ಷೌರಿಕರೇ ಇಲ್ಲದ ನಮ್ಮ ಉರಿಂದ ಅಜ್ಜ ತಿಂಗಳಿಗೊಂದಾವರ್ತಿ ಸಂತೆಯ ದಿನ ಹುಡುಗರೆಲ್ಲರನ್ನೂ ಕರೆದುಕೊಂಡು ಬಂದು ಕ್ಷೌರ ಮಾಡಿಸುತಿದ್ದದ್ದು.ಮೊದಲ ಬಾರಿಗೆ ಸಂತೆಗೆ ಬಂದ ಕುರಿ ನಾಗ ಅವರವ್ವನೆದುರು ಕಿರುಚಿ “ಅಗ್ಗೆಗ್ಗೆಗ್ಗೆ ಅಲ್ನೋಡಬೇ ಹಣ್ಣು ತೀರನ್ಯಾಗೆಲ್ಲಾ ಬೆಳದಾವೆ” ಅನ್ನೋ ಮಾತು.
ದಾರಿ ಉದ್ದಕ್ಕೂ ನಾಟಕದ ಡೈಲಾಗ್ ಹೇಳುತ್ತ ಕಾಲುದಾರಿ ಸೊಗಸಾಗಿಸುತ್ತಿದ್ದ ಚೌಡಗಾ, ಸಂತೆ ಎಂದರೆ ಉಡುಪಿ ಹೋಟೆಲಿನ ಮಸಾಲೆ ದೋಸೆ,ವೀರಣ್ಣನ ಕಾರ ಮಂಡಕ್ಕಿ,ಸಂತೆ ಎಂದರೆ ಕೈ ಕೊಯ್ದು ಕೊಂಡು ಮರವಿಡಿದು ಕುಂಕುಮ ಭಂಡಾರ,ಹಚ್ಚಿಕೊಂಡು ನಾಕಾಣೆ,ಎಂಟಾಣೆ ಬೇಡುತಿದ್ದ ದುರಮುರುಗಿಯವ,ಅವನ ಹಿಂದೆ ಉರುಮೆ ಹೊಡೆಯುತಿದ್ದ ಕಪ್ಪನೆಯ ಬಡಕಲು ಹೆಂಡತಿ,ಆಕೆಯ ಬಗಲೊಳಗೆ ಸೀರೆಯ ಜೋಳಿಗೆಯಲ್ಲಿ ಅಮಾಯಕವಾಗಿ ಕಣ್ಣು ಬಿಡುತಿದ್ದ ಮಗು.”ಎಲ್ಲಿ ಕಾಣೆ ಎಲ್ಲಿ ಕಾಣೆ ಎಲ್ಲವ್ವನಂತಾಕಿ ಎಲ್ಲಿ ಕಾಣೆ” ಎಂದು ಚೌಡಕಿ ಬಡಿಯುತ್ತಾ ಸುತ್ತುತಿದ್ದ ಪಾರೇತಜ್ಜಿ.ಟೀ..ಲೋಟಗಳನ್ನ ಜೋಡಿಸಿ ಕೊಂಡು ನಮ್ಮಂತವನೇ ನಿಕ್ಕರ್ ಹುಡುಗ,ಜಿಲೇಬಿ,ಬಿಳಿ ಕೂದಲು ನಿರಿಗೆ ಮುಖದ ವಡೆ,ಚಕ್ಕಲಿ ಮಾರುವ ತಾತ,ಕರದೊಂಟು,ಬೇಸನ್ ಉಂಡೆ,ಕೊಬರಿ ಚಿನ್ನಿ ಮಾರುತ್ತ ತಿರುಗುವ ಪಟೆ ಪಟೆ ಲುಂಗಿಯ ಮೂಲಿಮನಿ ಚಿನ್ನಪ್ಪ,ಮೂಲೆಯಲ್ಲಿ ಗಿರ್ ಅಂತ ತಿರುಗಿಸಿ ಬೊಂಬಾಯ್ ಮಿಠಾಯಿ ತಿಮ್ಮಣ್ಣ ಮಿಠಾಯಿ ವಾಚು ಕಟ್ಟುತ್ತ,ಗುಲಾಬಿ ಬಣ್ಣದ ತೆನೆಯಂತಹ ನಾಲಿಗೆಗೆ ಇಟ್ಟೊಡನೆ ಕರಗುವ ಸೋನಪಾಪಡಿ ಮಿಠಾಯಿಯ ಸೊಗಸು..,”ಬರ್ರೋ ಹುಡ್ರ ಯಾಲಕ್ಕಿ ಬಾಲ್ ಹೈಸ್,ಕರ್ರಗಿದ್ದೋರ್ ಕೆಂಪಗಾಗೋ ಥಂಡಾ..ಥಂಡಾ..ಕೆಂಪ್ ಐಸ್” ಎನ್ನುತ್ತ ಬಣ್ಣಗಳ ಬಾಟಲಿಯಿಂದ ಕೆಂಪು,ಹಸಿರು,ಹಳದಿ ಬಣ್ಣಗಳ ಕಡ್ಡಿಯನ್ನ ಮಾಡುತಿದ್ದ ಐಸ್ ಬಂಡಿ ಹುಸೇನ್ ಸಾ, ಬರ್ರಿ..ಬರ್ರಿ..ಗೋಲಿ ಸೋಡ,ನಿಂಬು ಮಸಾಲಿ..ಸೋಡಾ”,ಎಂದು ಕೂಗುವ ಚಂದ್ರಣ್ಣ, ಬಿಟ್ರ ಸಿಗದಿಲ್ಲ ಗರಮ್ ಗರಮ್ ಮೈಸೂರ್ ಮಂಡಕ್ಕಿ “ಎಂದು ಕರೆಯುತಿದ್ದ ಭೂಸಿ.ಸದ್ದಿರದೇ ನಿಂಬೆ ಹಣ್ಣು ರಾಶಿ ಮುಂದೆ ಕುಳಿತ ಅಜ್ಜಿ,ನಕ್ಕು ನಕ್ಕು ಹೆಚ್ಚು ರೇಟು ಮಾಡಿ ಈರುಳ್ಳಿ ಮಾರುತಿದ್ದ ಕಿಲಾಡಿ ಜಯಕ್ಕ,” ಸೊಪ್ಪರಕ್ಕೋ ..ಸೊಪ್ಪಾ..ಎಂದು ಬಗೆ ಬಗೆಯ ಸೊಪ್ಪಿನ ರಾಶಿ ಹಾಕಿಕೊಂಡ ಹೆಣ್ಣಾಲಪ್ಪ” “,ಐ.. ಏನಾ ಮಾವ, ಬೇಸದಿಯಾ..!! ಅಂತ.. ತತಾ.. ನಾಕಾಣಿ ” ಎಂದು ಎಂದು ಜೋತಾಡುವ ಜೋಗಕ್ಕ…
ಸಂತೆ ಎಂದರೆ ಊರೂರ ತರಕಾರಿಗಳು,ದೇಶ ದೇಶಗಳ ದವಸ ಧಾನ್ಯಗಳು,ಎಲ್ಲೆಲ್ಲಿಯೋ ಪ್ರಪಂಚದ ಮಸಾಲೆ ಪದಾರ್ಥಗಳು,ಇಲ್ಲೇ ಹತ್ತಿರದಿಂದ ಬಸ್ಸನ್ನೋ,ಟ್ರಾಕ್ಟರ್ ಅನ್ನೋ ಹತ್ತಿ ಬಂದ ಹೂವು ಹಣ್ಣುಗಳು,ಸಂತೆ ಎಂದರೆ ರೈತರಿಗಾಗಿಯೇ ಬಂದು ಕುಂತ ಪಟಗೋಣಿ,ಮಿಣಿ,ಬಾರಿಕೋಲು,ಹಗ್ಗ,ಕುಕ್ಕಿ,ಗೊಂಡೇವು,ಕಂಬಳಿ,ಈಚಲ ಚಾಪಿ,ಕಡ್ಡಿ ಚಾಪಿ,ಗೋಣಿಚೀಲ,ಕುಳೇವು,ಗಾಣ,ನೆಲುವು,ಚಿಬ್ಬಲಿ,ಬಗೆ ಬಗೆಯ ಬಿದಿರ ಪುಟ್ಟಿಗಳು,ಕುರ್ಚಿಗಿ,ಕುಡುಗೋಲು,ಕೊಡಲಿ,ಮಹಿಳೆಯರ ಮುದ್ದಿ ಕೋಲು,ಕೈ ಬಟ್ಟಲು,ಚುಚ್ಚುಗ,ತೊಗೆ ತಿಕ್ಕುವ ಕೋಲು, ಸೌಟುಗಳು,ತಾಳಿಮಣಿ,ಹವಳ,ಬಳೆ,ಆಭರಣ,ಶಿವದಾರ,ಉಡುದಾರ,ಕುಂಕುಮ ವಿಭೂತಿ ಉಂಡೆ,ದೈವದ ಪೋಟೋಗಳು,ಬಣ್ಣ ಬಣ್ಣದ ಹರಳುಗಳು,ಉಂಗುರಗಳು,ಕೂಕಣಿ ತೆಗೆವ,ಮುಳ್ಳು ತೆಗೆವ,ಉಗುರು ಕತ್ತರಿಸುವ ಪುಟಾಣಿ ಗೊಂಚಲು, ಜೋಬಿನ ಸೈನ್ ಬನೀನ್‌ಗಳು,ಕೆಂಪು ವಸ್ತ್ರ,ಪಟ ಪಟೆ ನಿಕ್ಕರು, ಬಣ್ಣದ ಗಿರಿ ಕನ್ಯೆ ಬನೀನ್ ಗಳು,ಬಗೆ ಬಗೆ ಅಂಗಿ, ರೆಡಿಮೇಡ್ ಬಟ್ಟೆಗಳು,ತರಕಾರಿ ಬೀಜಗಳ ಪಾಕೀಟು,ಇಲಿ ಹೆಗ್ಗಣ,ಜಿರಲೆ ಓಡಿಸುವ ಪುಡಿ,ಮಡಕೆ ,ಕುಡಿಕೆ,ಸಣ್ಣ ದೊಡ್ಡ ಮಣ್ಣಿನ ಹುಂಡಿಗಳು,ರಿಬ್ಬನ್ನು,ಹೇರ್ ಪಿನ್ನು,ಜಡಯ ಗೊಂಡೇವು,ಪಿನ್ನು,ಆಟದ ಸಾಮಾನುಗಳು,ಸಂತೆ ಎಂದರೆ ಜವಾರಿ ಕೋಳಿಗಳು, ಕೊನೆ ಸಾಲುಗಳಲ್ಲಿ ಕುಳಿತ ತಂಬಾಕು,ಸಾಯಿಬಣ್ಣನ ಒಣ ಮೀನು,ಸೀಗಡಿ,ಲಂಬಾಣಿ ಅಜ್ಜಿಯರು ತಂದ ಬಗೆ ಬಗೆಯ ರಸಕವಳದ ಮೂಲಗಳು.
ಸಂತೆ ಎಂದರೆ ಗೋಡೆ ಬಳಿ ನಿಂತ ಮುಳ್ಳಾವಿಗಿ ಶರಣರು, ಬುಡು ಬುಡುಕೆ ಸದ್ದು ಮಾಡುತ್ತ ಬಂಢಾರ ಹಚ್ಚುವ ಗ್ವಾರಪ್ಪಂದಿರು,ಟೆಂಟು ಸುತ್ತುತ್ತ ಜಾಕಾತಿ ಕೇಳುವ ಒರಟು ಏಜೆಂಟ್,ಸಂತೆ ಎಂದರೆ ಹೊರಗೆ ನಿಂತೇ ಕೈ ಬೀಸಿ ಸೆಳೆವ ಸಿನಿಮಾ… ಕದಿಯಲು ತಯಾರಾದ ಕಳ್ಳರು, ಸಂತೆ ಎಂದರೆ ಸೆಳೆ ಸೆಳೆದು ಆವರಿಸುವ ತೆಗ್ಗಿನ ಮನಿಗಳ ವೇಶ್ಯೆಯರು..ಸಂತೆ ಎಂದರೆ ಲಾಲ್ ಕಟ್ಟುವ ಸಾಬರು,ಕೊಡೆ ರಿಪೇರಿ ಮಾಡುವ,ಕೊಡಪಾನ,ಬಕೇಟ್ ರಿಪೇರಿ ಮಾಡುವ ಬುಡಕಟ್ಟಿನವರು,
ಸಂತೆ ಎಂದರೆ ನಗರದ ಬ್ಯಾಟರಿ,ಶೆಲ್ಲು,ಗಡಿಯಾರ,ಮಾರುವವರು.ಸಂತೆ ಎಂದರೆ ಬಯಲಸುತ್ತ ನಿಂತ ಹನುಮಪ್ಪ,ಹೂ ಕೇಳುವ ಭಕ್ತರು,ನಾಲಿಗೆ ಬಿಟ್ಟ ಕಾಳವ್ವ, ಸುಮ್ಮನೆ ನಿಂತ ವೀರಭದ್ರ ,ಸಂತೆ ಎಂದರೆ ಛತ್ರಿ ಹಿಡಿದು ಭವಿಷ್ಯ ಹೇಳೋ ಬಾಲ ಬಸವ,ಸಂತೆ ಎಂದರೆ ಜಾಗಟಿ ಬಾರಿಸೋ ದಾಸಯ್ಯ, ಗಿಣಿ ಶಾಸ್ತ್ರ ಹೇಳುವವರು..ರೋಪ್ ಹಾಕುವ ಪೋಲೀಸ್ ಅಪ್ಪಗಳು, ಬಸ್,ಲಾರಿಗಾಗಿ ಓಡುವ ಗಂಟು ಹೊತ್ತ ಹಳ್ಳಿಗರು,ಗುಂಪು ಗುಂಪಾಗಿ ಬಂದು,ನಗು ನಗುತ್ತಾ ಓಣಿ ಸುದ್ದಿ ಊರ ಸುದ್ದಿ ಹಂಚಿಕೊಳ್ಳುವ ದೊಡ್ಡೂರ ನೀರೆಯರು …ಸಂತೆ ಎಂದರೆ ದಾರಿಯಲೇ ಕುಡಿದು ಬಿದ್ದ ಯುವಕ,ಜನರ ನಡುವೆ ನುಗ್ಗುವ ಗೂಳಿ, ಸರ್ಕಲ್ ನೊಳಗೆ ಕೂಗಾಡೋ ಹುಚ್ಚ, ಮೂಗಿಗೇ ರಾಚುವ ಬಿಸಿ ಪಕೋಡಾ,ವಡೆ,ಮೆಣಸಿನಕಾಯಿ,ಪರಾತ ತುಂಬಿಕೊಂಡ ವಗ್ಗಣ್ಣಿ…ಓಹ್ ಸಂತೆಗೆ ಎಷ್ಟೊಂದು ರೂಪಗಳು!?
ಸಂತೆಯೊಂದು ಬಯಲ ವ್ಯವಹಾರ, ಬಯಲೊಳಗೇ ಉದ್ಯೋಗ ಸೃಷ್ಟಿಸುವ ಕೇಂದ್ರ. ಬಜಾರುಗಳು ಶ್ರೀಮಂತ ಹಾಗೂ ಮಧ್ಯಮ ವರ್ಗಗಳ ಕಡೆ ಗಮನಹರಿಸಿದರೆ ಸಂತೆ ರೈತರ ಹಾಗೂ ಕೂಲಿಕಾರರ ಕಡೆಗೇ ವಾಲಿರುತ್ತದೆ,ಬಜಾರುಗಳಲ್ಲಿ ಲಕ್ಷಾಂತರ ವಹಿವಾಟು ನಡೆದರೆ,ಈ ಸಂತೆಗಳಲ್ಲಿ ಸಾವಿರಾರು ರೂಪಾಯಿಗಳ ವಹಿವಾಟು ನಡೆಯುತ್ತದೆ.ಬಜಾರು ಪದಾರ್ಥಗಳ ರೇಟು ಹೇಳಿದರೂ,ನಗುವ ಹಳ್ಳಿಗರು ” ಇವು ಮನಿಷಾರು ಕೊಳ್ಳಾವಲ್ಲ” ಎಂದೇ ಷರಾ ಬರೆಯುತ್ತಾರೆ.
ದೊಡ್ಡ ಬಜಾರಿನ ಉದ್ದೇಶ ಲಾಭವೇ ಆದರೆ ಸಂತೆಯ ಉದ್ದೇಶ ಬದುಕು ಮತ್ತು ಸಹಕಾರ.ಬಜಾರಿನಲ್ಲಿ ನಿಶ್ಯಬ್ದ ಮನೆ ಮಾಡಿಕೊಂಡಂತೆಯೇ ಸಂತೆಯಲ್ಲಿ ಗದ್ದಲವೇ ಬಂಡವಾಳ,ಚೌಕಾಷಿಯೇ ಮೂಲ ಮಂತ್ರ.ಜನ ಇಲ್ಲಿ ರೇಗುತ್ತಾರೆ,ಹಾಕ್ಯಾಡುತ್ತಾರೆ,ನಗುತ್ತಾರೆ ಈ ಮಧ್ಯ ಬಂದವರಿಗೂ ತಮ್ಮ ಕೈಲಾದ ದಾನ ಮಾಡುತ್ತಾರೆ.
ಸಂತೆಯಲ್ಲಿ ವಸ್ತುವಿಗೆ ಒಂದೇ ಬೆಲೆ ಇರಲ್ಲ ಬದಲಿಗೆ ಜನ ನೋಡಿ ರೇಟು ಏರು ಪೇರು ಆಗುತ್ತವೆ.ಸಂತೆಯ ಎಂಟ್ರೆನ್ಸ,ಮುಖ್ಯ ಆವರಣ,ಮೂಲೆ ಮೂಲೆಗಳು, ದೂರದ ಟೆಂಟ್ ಗಳು ಭಿನ್ನ ಭಿನ್ನ ಧರ ಹಾಗೂ ವಸ್ತುವನ್ನ ಹೊಂದಿರುತ್ತವೆ.ಕೆ.ಜಿ.ಮಾಲು,ಗುಂಪಿ ಮಾಲು,ಉಂಡಾಗುತ್ತಿಗಿ,ಅಂದಾಜು ತೂಕ ಅಂತೆಲ್ಲಾ ಬಹು ಬಗೆಯ ವ್ಯಾಪಾರಗಳಿರುತ್ತವೆ.
ಸಂತೆ ನಿರ್ಧಿಷ್ಟ ದಿನಗಳಂದೇ ನಡೆಯುವುದರಿಂದ ಇವನ್ನ ವಾರದ ಸಂತೆಗಳೆಂದು ಕರೆಯುತ್ತಾರೆ,ಹಾಗಾಗಿ ಇವು ಶನಿವಾರ ಸಂತೆ,ಶುಕ್ರವಾರ
ಸಂತೆ,ಮಂಗಳವಾರ,ಬುಧವಾರ,ಗುರುವಾರ,ಭಾನುವಾರ, ಸೋಮವಾರ ಸಂತೆಗಳೆಂದು ಭಿನ್ನ ಭಿನ್ನ ದಿನಗಳಲ್ಲಿ ಒಂದೊಂದು ಊರಲ್ಲಿ ನಡೆಯುತ್ತವೆ.ಜನಪದರು ಸಂತೆ ಬಯಲನ್ನ ’ಮಾಳ’ ಎಂದು ಕರೆಯುತ್ತಾರೆ.ಸಂತೆ ಮಾಳಗಳಂತೆ ಗೋಮಾಳ,ಕುರಿಮಾಳಗಳು ಗೋ ಸಂತೆ ಮತ್ತು ಕುರಿ ಸಂತೆಗಳನ್ನ ನೆನಪಿಸುತ್ತವೆ.ಪಶು, ಪಕ್ಷಿಗಳನ್ನ ಮಾರುವ ಬಯಲನ್ನ ’ಆಸರ’ಗಳೆಂದೂ ಕರೆಯುತ್ತಾರೆ.ವಾರದ ಸಂತೆ,ಹಬ್ಬದ ಸಂತೆ,ವಿಶೇಷ ಸಂತೆಗಳು ನಡೆಯುವ ಈ ಬಯಲುಗಳಿಂದಲೇ ಇವು ಕೆಲ ಊರುಗಳ ಸ್ಥಳನಾಮಗಳೂ ಆಗಿವೆ.ಸೋಮವಾರ ಪೇಟೆ,ಬೇಸ್ತವಾರ ಪೇಟೆ,ಸಂತೆ ಬೆನ್ನೂರು,ಸಂತೆ ಮಾರನ ಹಳ್ಳಿ .
ಸಂತೆಗೂ,ಉತ್ಪಾದನಾ ಮೂಲವಾದ ಕಲ್ಯಾಣಿಗಳಿಗೂ ಸಂಬಂಧವಿದೆ ಕೆಲವು ಕಡೆ ಕಲ್ಯಾಣಿ ಪಕ್ಕದ ಬಯಲುಗಳೇ ಸಂತೆ ಕೇಂದ್ರಗಳಾಗಿವೆ.ಸಂತೆಗೂ ಬನಶಂಕರಿ ದೇವಿಗೂ ಸಂಬಂಧವಿದೆ.ಕುಷ್ಟಗಿಯ ದೋಟಿಹಾಳದ ಬನಶಂಕರಿ ಸಂತೆ,ತುಮಕೂರಿನ ತಿಪಟೂರು ತಾಲೂಕಿನ ಇಗನ ಸಂತೆಯ ಬನಶಂಕರಿ ದೇವಾಲಯ, ದುರ್ಗದ ಸಂತೇ ಹೊಂಡ ಇವಕ್ಕೊಂದು ಉದಾಹರಣೆ
ಉತ್ಪಾದಕರೇ ಮಾರಾಟಗಾರರೂ ಆಗಿರುವ ಸಂತೆಯಲ್ಲಿ ಗಂಡು ಹೆಣ್ಣೆಂಬ ಲಿಂಗ ಬೇಧವಿಲ್ಲ.ಇಲ್ಲಿ ಪೂರ್ಣ ಕಾಲಿಕ ವ್ಯಾಪಾರಸ್ಥರು,ಅರೆ ಕಾಲಿಕ ವ್ಯಾಪಾರಸ್ಥರು,ಪ್ರಾಸಂಗಿಕ ವ್ಯಾಪಾರಸ್ಥರು ಇರುತ್ತಾರೆ.ಸಂತೆ ರೂಪದ ಮಾರುಕಟ್ಟೆಗೆ ಗ್ರೀಸ್ ನಲ್ಲಿ ಅಗೋರಾ ಎಂದು ರೋಮ್ ನಲ್ಲಿ ವೇದಿಕೆ,ಎಂದು ಇಸ್ತಾಂಬೂಲ್ ನಲ್ಲಿ ಬಜಾರ್ ಎಂದು ಕರೆಯಲಾಗುತ್ತಿತ್ತಂತೆ .ಸಂತೆಯ ಒಳಾಂಗಣ ಬಜಾರು ಇರುವಂತೆಯೇ ಮಲೇಷ್ಯಾ ದೊಳಗೆ ದೋಣಿ ಮಾರುಕಟ್ಟೆ ಇದೆ.ಚೈನಾದೊಳಗೆ ರಾತ್ರಿ ಮಾರುಕಟ್ಟೆ ಇದೆ.ಸಂತೆ ಪದಾರ್ಥಗಳನ್ನ ಮಾರುವಂತೆಯೇ ಹಿಂದೆ ಪ್ರಭುವರ್ಗಗಳ ಕಾಲದಲ್ಲಿ ಸಂತೆಯು ದಾಸ ದಾಸಿಯರ ಮಾರಾಟದ ಕೇಂದ್ರಗಳಾಗಿದ್ದವು.ಹೆಣ್ಣುಗಳನ್ನೂ ಪಶು,ಪಕ್ಷಿಗಳಂತೆ ಬಯಲಲ್ಲಿ ಮಾರಾಟ ಮಾಡುವ ಕೇಂದ್ರಗಳೂ ಆಗಿದ್ದವು.ಈ ನೆಲೆಯಲ್ಲಿಯೇ ಸಂತೆ ವೇಶ್ಯೆಯರಿಗೂ,ಜೋಗತಿಯರಿಗೂ ಬೇಟದ ಮತ್ತು ಬಿಕ್ಷೆಯ ನಂಟೂ ಸೃಷ್ಟಿಸಿರುವ ಜೊತೆಗೆ ಪುರಾತನ ನೋವಿನ ನಂಟನ್ನೂ ಅಡಗಿಸಿರಬೇಕೇನೋ !?