ಲೇಖಕಿಯ ಪರಿಚಯ
ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ.ಎ.ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ೩೦ ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ, ಇ-ಪತ್ರಿಕೆಗಳಲ್ಲಿ, ವೆಬ್ಸೈಟ್ ಗಳಲ್ಲಿ ಪ್ರಕಟವಾಗಿದ್ದು ಇದುವರೆವಿಗೂ ೫ ಪುಸ್ತಕಗಳನ್ನು ಕನ್ನಡನಾಡಿಗೆ ನೀಡಿರುವ ಇವರ ಪುಸ್ತಕಗಳು ‘ಕಸಾಪ’ ದ ದತ್ತಿ ಮತ್ತು ‘ಕಲೇಸಂ’ ನ ದತ್ತಿ ಪ್ರಶಸ್ತಿಗಳಿಗೆ ಭಾಜನವಾಗಿವೆ. ರಾಜ್ಯಮಟ್ಟದ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಮತ್ತು ಗೌರವಗಳು ದೊರೆತಿವೆ. ಇವರ ಎಲ್ಲಾ ಪುಸ್ತಕಗಳೂ ಜನರಿಂದ ಅಪಾರ ಮೆಚ್ಚುಗೆ ಗಳಿಸಿವೆ. ಇವರು ಪ್ರತಿ ವಾರ ಭಾವ ಭಿತ್ತಿ ಅಂಕಣ ದಲ್ಲಿ ತಮ್ಮ ಭಾವನೆಗಳ ಗುಚ್ಚವನ್ನು ಇಲ್ಲಿ ಪೋಣಿಸಲಿದ್ದಾರೆ
ಅಪ್ಪ ಅಂದ್ರೆ ಅಕಾಶ..
ತಾಯಿಯನ್ನು ತಾಯ್ನಾಡಿಗೆ, ಭೂಮಿಗೆ ಹೋಲಿಸುವುದು ಸರ್ವೇಸಾಮಾನ್ಯ ಮತ್ತು ವಾಸ್ತವವೂ.. ಸತ್ಯವೂ ಸಹ. ತಾಯಿಯ ಬಗ್ಗೆ ನಾವೆಲ್ಲರೂ ಯಾಕೆ ಅಷ್ಟು ಪ್ರೀತಿಯುಳ್ಳವರಾಗಿರಾಗಿರುತ್ತೇವೆ ಎಂದರೆ ತಾಯಿ ನಮ್ಮನ್ನು ಹೆತ್ತ ನಂತರವೂ ಅವಳ ಮಡಿಲಲ್ಲಿ, ಬೆವರ ವಾಸನೆಯೊಂದಿಗೆ ಅವಳ ಮೃದು ಸ್ಪರ್ಷ ಆರೈಕೆಯಲ್ಲಿರುತ್ತೇವೆ. ನಮ್ಮ ಬೇಕು ಬೇಡಗಳನ್ನು ಪೂರೈಸುವ ಅಮ್ಮ ನಮಗೆ ಹತ್ತಿರವಾಗಿರುತ್ತಾಳೆ ನಿಜ. ಆದರೆ ಅಮ್ಮನಷ್ಟೇ ಸರಿದೂಗುವ ಅಪ್ಪ ನಮಗೆಷ್ಟು ಹತ್ತಿರ?.
ಈ ಒಂದು ಪ್ರಶ್ನೆ ಬರುವುದು ಸಹಜ. ಮಗು ಚಿಕ್ಕದಾಗಿದ್ದಾಗ ಅಮ್ಮನಷ್ಟೇ ಮುದ್ದಿಸಿ ಎತ್ತಿ ಆಡಿಸುವ ಅಪ್ಪ ಕ್ರಮೇಣ ಮಗು ಬೆಳೆದಂತೆ ಸ್ವಲ್ಪ ದೂರವಾಗುವುದು ಸಹಜ. ಬಹುಶಃ ಅಮ್ಮ ಸದಾಮನೆಯಲ್ಲಿರುವುದರಿಂದ ಇರಬಹುದು ಅಮ್ಮನ ಒಡನಾಟವೇ ಹೆಚ್ಚು. ಅಮ್ಮ ಅಪ್ಪ ಇಬ್ಬರೂ ಸಹ ಸೂರ್ಯ ಚಂದ್ರರಷ್ಟೇ ಮುಖ್ಯ ನಮ್ಮ ಬದುಕಿಗೆ. ಮಗು ಬೆಳೆದಂತೆ ಕಣ್ಣಿಗೆ ಕಂಡದ್ದನ್ನೆಲ್ಲಾ ಬೇಡಿದಾಗ ಅಮ್ಮ ಗದರಿಸಲು ಮನಸ್ಸಾಗದೆ ಅಪ್ಪನೆಂಬ ಗುಮ್ಮನನ್ನು ತೋರಿಸಿ ‘ಬೇಡ ಅಪ್ಪ ಬೈತಾರೆ.. ಅಪ್ಪಗೆ ಇಷ್ಟವಿಲ್ಲ ಹೊಡೀತಾರೆ’ ಎಂದು ತನಗರಿವಿಲ್ಲದೆಯೇ ಭಯವನ್ನು ತಾಯಿ ತುಂಬಿರುತ್ತಾಳೆ. ಆಗ ಮಗು ಅಪ್ಪನೆಂದರೆ ಹೆಚ್ಚು ಸಲುಗೆವಹಿಸದೆ ಬೆಳೆದುಬಿಡುತ್ತದೆ.
ಅಮ್ಮ ತನ್ನ ಹೊಟ್ಟೆಯಲ್ಲಿ ಹೊತ್ತಿರುವಷ್ಟು ದಿನ ಮಗುವನ್ನು ಅಪ್ಪ ತನ್ನ ತಲೆಯಲ್ಲಿ ಹೊತ್ತಿರುವುದು ನಮಗೆ ಅರಿವಾಗುವುದೇ ಇಲ್ಲ. ತನ್ನ ಪತ್ನಿ ಒಂದು ಜೀವ ಹೊತ್ತಿದ್ದಾಳೆ ಎಂದು ತಿಳಿದಂದಿನಿಂದ ಅವಳ ಆರೋಗ್ಯದ ಬಗ್ಗೆ, ಆಹಾರದ ಬಗ್ಗೆ, ಬೇಕು-ಬೇಡಗಳನ್ನು ಆಕೆಯ ಹಿಂದೆಯೇ ಇದ್ದು ನೋಡಿಕೊಳ್ಳುವ ಅಮ್ಮನಂತಹ ಜೀವ ಅಪ್ಪ ಎಂದರೆ ತಪ್ಪಾಗದು. ಅಪ್ಪನೆಂಬುವನು ಗಂಡು ಎಂದ ಮಾತ್ರಕ್ಕೆ ಗಡುಸಿನ ಮತ್ತು ಮೃದುವಿಲ್ಲದವನು ಎಂದರ್ಥವಲ್ಲ. ಅವನಿಗೆ ಅಮ್ಮನಷ್ಟು ಮೃದುವಾಗಿ ಮಾತನಾಡಲು ಬರದಿರಬಹುದು ಆದರೆ ಅವನ ಹೃದಯ ಅಮ್ಮನಷ್ಟೇ ಮೃದು. ಅವನ ದುಡಿದ ಬೆರಳುಗಳು ಒಡಟಾಗಿರಬಹುದು ಆದರೆ ತನ್ನ ಮಗುವನ್ನು ಆಲಂಗಿಸುವ ಆ ತೋಳುಗಳು ಮಮತೆಯ ಸಂಕೋಲೆ.
ಒಂದು ಕಡೆ ನಾನು ಒಂದು ವಾಸ್ತವದ ಲೇಖನ ಓದಿದ್ದೆ. ಒಬ್ಬ ವ್ಯಕ್ತಿ ತನ್ನ ಮಗಳ ಹತ್ತನೇ ವಯಸ್ಸಿನಲ್ಲಿ ಯಾವುದೋ ಕಾಯಿಲೆಯಿಂದ ತನ್ನ ಪ್ರೀತಿಯ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಮಗಳನ್ನು ತನ್ನ ಅಜ್ಜಿಯ ಮನೆಗೆ ಕಳಿಸು ಎಂದು ಹಿತೈಷಿಗಳು ಅವನಿಗೆ ತಿಳಿಸಿದರೂ ತನ್ನ ಮುದ್ದು ಮಗಳನ್ನು ತಾನೇ ತನ್ನ ಆರೈಕೆಯಲ್ಲಿ ಬೆಳೆಸಲು ತೀರ್ಮಾನಿಸುತ್ತಾನೆ. ತಾಯಿಯ ಪ್ರೀತಿಯ ಕೊರತೆ ಬರದಂತೆ ತನ್ನ ಮಗಳನ್ನು ತಂದೆತಾಯಿ ಎರಡೂ ತಾನಾಗಿ ಬೆಳೆಸುತ್ತಾನೆ. ಮಗಳು ಹದಿಮೂರನೇ ವಯಸ್ಸಿನಲ್ಲಿ ಋತುಮತಿಯಾಗುತ್ತಾಳೆ. ಏನೂ ಅರಿಯದ ಮಗಳು ಅಪ್ಪನಲ್ಲಿ ವಿಷಯ ತಿಳಿಸುತ್ತಾಳೆ. ಅಪ್ಪ ಸ್ವಲ್ಪವೂ ಮುಜುಗರಗೊಳ್ಳದೆ ಮಗಳಿಗೆ ಮೊಬೈಲಿನಲ್ಲಿ ಅವಳ ಈ ಪರಿಸ್ಥಿತಿಯಲ್ಲಿ ಹೇಗಿರಬೇಕು? ಏನು ಮಾಡಬೇಕು? ಎಂಬ ವಿವರಣೆಯನ್ನು ವೀಡಿಯೋ ಮೂಲಕ ನೋಡಲು ಕೊಟ್ಟು ಪರಿಸ್ಥಿತಿಯನ್ನು ಸರಳಗೊಳಿಸುತ್ತಾರೆ.
‘ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ಯಾರು ಇಲ್ಲವಯ್ಯಾ
ಹಾಲಲದ್ದು ನೀರಲದ್ದು
ಕೂಡಲ ಸಂಗಮದೇವ..!’
ಬಸವಣ್ಣನವರ ಈ ವಚನದಲ್ಲಿ ದೇವರು ತಾಯಿ ತಂದೆ ಎಲ್ಲವೂ ಆಗಿದ್ದಾನೆ. ಅಂತೆಯೇ ತಾಯಿ ತಂದೆ ಭೂಮಿಯಲ್ಲಿ ಕಣ್ಣಿಗೆ ಕಾಣುವ ದೇವರು. ಅಂತೆಯೇ ತಂದೆಯೂ ಎಲ್ಲವೂ ಆಗಲು ಸಾಧ್ಯ. ಒಂಟಿಯಾಗಿ ತನ್ನ ಮಕ್ಕಳನ್ನು ಸಾಕಿ ಸಲಹಿ ವಿದ್ಯಾಭ್ಯಾಸವಿತ್ತು ಗುರಿ ತಲುಪಿಸುವ ತಾಯಿಯಾಗಬಲ್ಲ, ಗುರುವಾಗಬಲ್ಲ, ದೇವನಾಗಬಲ್ಲ. ಭೂತಾಯಿಯಂತಹ ಸಹೃದಯನಾಗಬಲ್ಲ. ಹೌದಲ್ಲವೇ?
-ವಿಶಾಲಾ ಆರಾಧ್ಯ ರಾಜಾಪುರ