ಒಲವೇ ಇಂತಿ ನಿನಗಾಗಿ…
“ ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ”
ಬೆಣ್ಣೆ ಮಾತಿನ,ಹಾಲು ನಗೆಯ,ಹೂ ಮನಸಿನ ಓ ನನ್ನ ಪಾದರಸದಂತಹ ಸಖಿಯೇ, ನಿನ್ನ
ನೆನಪಾದಾಗಲೆಲ್ಲಾ ಬೆಟ್ಟವೇ ಬಂದು ತಲೆಯ ಮೇಲೆಳಿದಂತಾಗುತ್ತದೆ. ಯಾವ ಸುಖದ ಹಂಗಿಲ್ಲದೇ ಬರೀ
ಮಾತು…ಮಾತು…ಮಾತುಗಳಲ್ಲೇ ಕನಸು ಕಟ್ಟಿಕೊಂಡು ನೆಲ ಮುಗಿಲು ಒಂದಾಗುವಂತೆ ನಗುತ್ತಾ ಓಡಾಡುತಿದ್ದೆವಲ್ಲಾ ಎಲ್ಲಿ ಹೋದವು ಆ ದಿನಗಳು!!
ಹಾಳೂರಿನ ಹಳೆಯ ಒಂಟಿಕೋಣೆಯಲ್ಲಿ ಪುಸ್ತಕಗಳ ಜೊತೆಗೆ ಪಿಶಾಚಿಯ ಹಾಗೆ ಹಗಲು ರಾತ್ರಿಗಳನ್ನಮುಕ್ಕುತ್ತಾ ಕುಳಿತ ನನ್ನನ್ನ ನಿನ್ನ ಮೃದು ಸ್ಪರ್ಶದ ನೆನಪು ಈಚೆಗೆ ತಂದಿತು. ಎಷ್ಟು ಚಂದ ಮಾತಾಡುತಿದ್ದಿ! ಏನೆಲ್ಲಾ ತರ್ಕ ಹೂಡಿ ವಾಗ್ವಾದದ ಬೆಂಕಿಯನ್ನ ಬೆಳಕುಮಾಡಿ ತೋರಿಸುತಿದ್ದಿ ಲಂಕೇಶ್,ಬೈರಪ್ಪ,ಮಾಸ್ತಿ,ಕುವೆಂಪು,ಕಾರಂತ,ಟಾಲ್
ಸ್ಟಾಯ್,ಗಾಲಿಬ್,ತೇಜಸ್ವಿ,ಬೋದಿಲೇರ್,ಗಿಬ್ರಾನ್,ಹೆಮಿಂಗ್ವೇ,ಷೋಯಾಂಕ,ಅಚೀಬೆ,ಪ್ರತಿಭಾ ನಂದಕುಮಾರ್,ಕಂಬಾರ, ಸಿದ್ದಲಿಂಗಯ್ಯ, ನಿಮ್ಮ ಗುರು ಬರಗೂರು ಎಷ್ಟೊಂದು ಚರ್ಚೆಗಳು!
ಪ್ರೇಮ ಸಂಬಂಧಗಳು ಉದ್ದೇಶ ಮತ್ತು ಗುರಿಗಳನ್ನ ನಾಶಮಾಡುತ್ತವೆ. ʼಹೆಣ್ಣಿನ ಹಿಂದೆ ಹೋದವನು ಸರ್ವ ನಾಶವಾಗುತ್ತಾನೆʼ ಎಂಬ ನಿರಾಶಾವಾದೀಗಳ ಸಾಲುಗಳು ನೀನು ಕಂಡಾಗಲೆಲ್ಲಾ ನೀರ ಮೇಲಿನ
ಗುಳ್ಳೆಯಂತೆ ಕಾಣುತಿದ್ದವು!
“ ಒಂದು ಮಳೆಬಿಲ್ಲು..ಒಂದು ಮಳೆ ಮಳೆ ಮೋಡ..
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ ಏನನೋ ಮಾತಾಡಿವೆ”
ನಿಜ ಮಾತಾಡುತ್ತಾ… ಮಾತಾಡುತ್ತಾ ನಮ್ಮ ಜೀವನಗಳೋ ಹಳೆಯ ಪೋಟೋಗಳಂತಾಗಿಬಿಟ್ಟವು
ನೋಡು. ಕಾಲದ ಅಂತರದಲ್ಲಿ ಎಷ್ಟೆಲ್ಲಾ ಬದಲಾವಣೆ ಈಗ ನಿನ್ನ ನೆನಪು ಮಾಡಿಕೊಳ್ಳವುದೇ ಅಪರಾಧ ಎಂಬಷ್ಟು ದೂರದಲ್ಲಿ ನಾನಿದ್ದೇನೆ. ನಿನ್ನ ಮಾತಿಗೆ ಅಂಕೆ ಇರಲಿ ಎನ್ನುವ ನ್ಯಾಯವಾದಿಯ ಕುರ್ಚಿಯಲ್ಲಿ ನೀನಿದ್ದೀಯ. ಒಂದಂತೂ ಸತ್ಯ ನೀನು ಎತ್ತರಕ್ಕೆ ಬೆಳೆದು ನಗೆಯ ಹಾದಿ ಸವೆಸುತ್ತಿದ್ದೀಯ! ನಾನೂ ಎತ್ತರದಲ್ಲೇ
ನಿಂತು ಮೈತುಂಬಾ ಹೂವರಳಿಸಿ ನಿಂತ ಸುರಗಿ ಮರದ ಹೂ ರಾಶಿಗಳನ್ನ ನೋಡುತಿದ್ದೇನೆ. ನೆಲದ ತುಂಬಾ ಹೂಗಳದೇ ಘಮಲು ಜೇನುಗಳ ದುಂಬಿಗಳ ಝೇಂಕಾರದಲ್ಲಿ ಸಾಗರದ ಹೆಗ್ಗೋಡಿನ ತುಂಬಾ ಸಂಸ್ಕೃತಿ ಶಿಬಿರದಲ್ಲಿ ಓಡಾಡಿದ ಸಿಹಿ ನೆನಪುಗಳ ಸಾಕ್ಷಿಯಂತೆ ಒಂದೊಂದೇ ಹೂಗಳ ಹೆಕ್ಕಿ ಬೊಗಸೆ ತುಂಬಿಕೊಂಡಿದ್ದೇನೆ. ನೆನಪುಗಳು ಎಷ್ಟೊಂದು ಮಧುರ ಅಲ್ಲವೇ ಗೆಳತಿ!
ಸಾಮಾನ್ಯವಾಗಿ ಪ್ರಕೃತಿಯ ಹೂಗಳು ಎರಡು, ಮೂರು ದಿನವೋ ಕಳೆದು ಬಾಡಿ ಹೋಗುತ್ತವೆ. ಬಾಡಿದ ಹೂವಿಗೆ ವಾಸನೆಯೂ ಇಲ್ಲ ಬೆಲೆಯೂ ಇಲ್ಲ. ಆದರೆ ಈ ಸುರಗಿ ಹೂ ನೋಡು ನಮ್ಮ ಸಂಬಂಧದಂತೆಯೇ ವಿಶಿಷ್ಟ. ಇವು ಒಣಗಿದ ನಂತರವೂ ಹಲವು ತಿಂಗಳುಗಳ ಕಾಲ ಪರಿಮಳ ಬೀರುತ್ತಲೇ ಇರುತ್ತವೆ! ಸುರಗಿ ಒಣಗಿದ ಮೇಲೆ ಅದರ ಸುವಾಸನೆ ಇನ್ನೂ ಸೊಗಸು. ಮಲೆನಾಡಿನ ಜನ ಮತ್ತು ಕರಾವಳಿಯ ಜನ ಸುರಗಿ ಹೂಗಳನ್ನು ಸಂಗ್ರಹಿಸಿ ಶುಭ್ರವಾದ ಬಟ್ಟೆಯಲ್ಲಿ ಕಟ್ಟಿಟ್ಟು ಒಣಗಿಸಿ ಮರುದಿನ ಆ ಹೂವಿನ ತೊಟ್ಟು ಬಿಡಿಸಿ ಅದರ ಸಿಪ್ಪೆಗಳನ್ನು ಎಣ್ಣೆ ಹಚ್ಚಿದ ಸೂಜಿಯಿಂದ ಪೋಣಿಸಿ ಒಂದೊಂದೇ ಹೂ ಪೋಣಿಸಿ ಹಾರ ತಯಾರಿಸುತ್ತಾರೆ. ಹೀಗೆ ತಯಾರಾದ ಹಾರಗಳನ್ನು ಐದು ಆರು ದಿನ ಬೆಳಗಿನ ಹೊತ್ತು
ಹುಲ್ಲಿನ ಮೇಲೆ ಅಥವಾ ಅಡಿಕೆಯ ಹಾಳೆಗಳ ಮೇಲೆ ಹಾಸಿ ಒಣಗಿಸುತ್ತಾರೆ.ಮತ್ತೆ ಒಂದು ವಾರ ಇಬ್ಬನಿ ಬೀಳುವಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಈ ಹೂವಿನ ಪರಿಮಳ ಹೆಚ್ಚಾಗುತ್ತದೆ.
ವರ್ಷಾನುಗಟ್ಟಲೆ ಅದರ ಬಣ್ಣ ಮತ್ತು ಸುವಾಸನೆ ಮಾಸದೇ ಬಾಳಿಕೆಗೆ ಬರುತ್ತದೆ. ಇಲ್ಲಿನ ಹೆಣ್ಣು ಮಕ್ಕಳು ಈ ಹೂವುಗಳನ್ನು ಬೇಕಾದ ಮುಡಿದು ಬೇಡವಾದಾಗ ತೆಗೆದಿಡುತ್ತಾರೆ. ತಮ್ಮ ಮನೆಗಳಲ್ಲಿ ವರ್ಷಗಟ್ಟಲೆ ಜೋಪಾನವಾಗಿಟ್ಟು ಮತ್ತೆ ಮತ್ತೆ ಮುಡಿಯುತ್ತಾರೆ. ಅಲ್ಲಿ ತಾಜಾ ಹೂಗಿಂತಲೂ ಈ ಹೂವಿಗೇ ಬೇಡಿಕೆ ಹೆಚ್ಚು. ಅಂದು ಗೊತ್ತಿಲ್ಲದೆಯೇ ನಮ್ಮ ನಮ್ಮ ಬೊಗಸೆಗೆ ತುಂಬಿಕೊಂಡ ಈ ಹೂಗಳನ್ನ ನಾವು ಅದ್ಯಾವುದೋ ದೇಗುಲದ ಎದುರಲ್ಲ ನಿಂತು..
“ ನಾ ನಿನಗೆ ನೀ ನನಗೆ ಜೇನಾಗುವಾ…
ನಾ ನಿನಗೆ, ನೀ ನನಗೆ ಜೇನಾಗುವಾ…
ರಸ ದೇವ ಗಂಗೆಯಲಿ ಮೀನಾಗುವಾ, ಹೂವಾಗುವಾ ಹಣ್ಣಾಗುವಾ, ಪ್ರತಿ ರೂಪಿ ಭಗವತಿಗೆ
ಮುಡಿಪಾಗುವಾ”
ಎಂದು ಕುವೆಂಪು ಅವರ ಗೀತೆಯನ್ನು ಹೇಳಿದ್ದು ಇಂದಿಗೂ ಸಾರ್ಥಕ ಎನಿಸುತ್ತದಲ್ಲವೇ? ಗೆಳತಿ
ಹೆಣ್ಣಿಗಾಗಿ ಗಂಡು ಎಷ್ಟೊಂದು ಸಾಹಸ ಮಾಡುತ್ತಾನೆ ಎಂಬುದನ್ನ ನಮ್ಮ ಮಹಾಕಾವ್ಯಗಳೇ ಸಾಕ್ಷಿಯಂತೆ
ಕಾಣುತ್ತವೆ. ಅಲಂಕಾರ, ಭಾಷೆ, ಸಾಹಸ ಎಲ್ಲದರಲ್ಲೂ ದೊಡ್ಡದೊಂದು ಬದಲಾವಣೇ ಕಾಣುವುದು
ಹೆಣ್ಣು ದನಿಯ ಸೋಂಕಿನಿಂದಲೇ ಗೆಳತಿ ಈ ಸ್ವಭಾವ ಪುರುಷರಲ್ಲಷ್ಟೇ ಅಲಸಲ ಪಕ್ಷಿಗಳಲ್ಲೂ
ಕಾಣಬಹುದು. ಕೆಲವು ಸೊಗಸಾಗಿ ಹಾಡುತ್ತವೆ, ಕೆಲವು ನರ್ತಿಸುತ್ತವೆ, ಕೆಲವು ಬಣ್ಣ ಬಣ್ಣದ ಗರಿಗಳಿಂದ ಸೊಗಸುಗಾರಿಕೆಯನ್ನ ಮೆರೆಯುತ್ತವೆ. ಸಮುದಾಯದ ಸ್ವಯಂವರದಂತೆ ಪಕ್ಷಿ ಲೋಕದಲ್ಲೂ ಗಂಡಿನ ಆಯ್ಕೆಯಲ್ಲಿ ಸ್ಫರ್ದೆ ಇದೆ.
ಹೆಣ್ಣೆನ್ನ ಬಯಸುವ ಗೀಜಗ ನೀರಿನ ಹತಿರದ ಪ್ರದೇಶದಲ್ಲಿ ಹಾವು ಪ್ರಾಣಿ ಮತ್ತು ಮನುಷ್ಯರಿಗೆ
ನಿಲುಕದ ಜಾಗದಲ್ಲಿ ಬತ್ತದ ಹುಲ್ಲನ್ನು ನೆಯ್ದು ಗೂಡು ಕಟ್ಟುತ್ತದೆ. ಗೂಡಿನ ಒಳಭಾಗದಲ್ಲಿ
ಹಸಿಯಾದ ಮೃದು ಮಣ್ಣನ್ನ ಮೆತ್ತಿ ಮೊಟ್ಟೆಯಿಡುವ ಜಾಗವನ್ನು ತಯಾರು ಮಾಡುತ್ತದೆ.
ಸಮೂಹದಲ್ಲಿ ಗೂಡು ಮಾಡವ ಈ ಹಕ್ಕಿಗಳಿಗೆ ಗೂಡಿಗಾಗಿ ಸ್ಥಳ ಆಯ್ಕೆಯಲ್ಲೂ ಸ್ಪರ್ಧೆ ಇರುತ್ತದೆ.ಗೂಡು ಶೇಕಡಾ ಎಪ್ಪತ್ತರಷ್ಟು ಆದಾಗ ಗಂಡು ಹಕ್ಕಿಗಳು ಆಯಾ ಗೂಡಿನ ಮೇಲೆ ಕುಳಿತು ರೆಕ್ಕೆ ಬಡಿಯುತ್ತಾ ಹೆಣ್ಣನ್ನು ಕರೆಯುತ್ತವೆ. ಸುತ್ತಲ ಮಧುರ ಸ್ವರಗಳ ಗಂಡುಗಳ ಕೂಗಿನಿಂದ ಉತ್ತೇಜಿತವಾದ ಹೆಣ್ಣು ಹಕ್ಕಿ ಸಂಭ್ರಮದಿಂದ ವಯ್ಯಾರದಿಂದ ಆಗಮಿಸುತ್ತವೆ. ಹೆಣ್ಣು ಪ್ರತ್ಯಕ್ಷವಾದೊಡನೆ ಎಲ್ಲಾ ಗಂಡು ಗಳು ಗೂಡು ಕಟ್ಟಿದ ರೀತಿ ನೋಡಲು ಕೀಚ್…ಕೀಚ್.. ಎಂದು ಕರೆಯುತ್ತವೆ ಅಲ್ಲಿಗೆ ಬಂದ ಹೆಣ್ಣು ಹಕ್ಕಿ ಗೂಡುಗಳ ಒಳಗೆ ಪರೀಕ್ಷಿಸಿ ಅಲ್ಲಲ್ಲಿ ಕೊಕ್ಕಿನಿಂದ ಹಿಡಿದೆಳೆದು ಗೂಡು ಗಟ್ಟಿಯಾಗಿದೆಯಾ ಎಂದು ನೋಡುತ್ತಾಳೆ. ಗೂಡು ಸರಿಯಿಲ್ಲವೆಂದು ಅನಿಸಿದರೆ ಆ ಗೂಡು ಕಟ್ಟಿದ ಹಕ್ಕಿಯನ್ನು ತಿರಸ್ಕರಿಸಿ ಬೇರೆ ಗಂಡಿನ ಗೂಡುಗಳ ಕಡೆ ತೆರಳುತ್ತಾಳೆ ಚಂದದ, ಕೌಶಲ್ಯದ ಗೂಡು ನೋಡಿಯೇ ಹೆಣ್ಣು ಒಲಿಯುತ್ತಾಳೆ.
ಅಂಬರದ ಕಪ್ಪು ಗುಬ್ಬಚ್ಚಿ ಅಥವಾ ತಂತಿಬಾಲದ ಗುಬ್ಬಚ್ಚಿ ಎಂದು ಕರೆಸಿಕೊಳ್ಳುವ ಗುಬ್ಬಚ್ಚಿಗಳು ಸೇತುವೆ ಕೆಳಗಿನ ದುರ್ಗಮ ಪ್ರದೇಶದಲ್ಲಿ ಮಣ್ಣಿನಿಂದ ಗೂಡು ಕಟ್ಟುವುದಲ್ಲದೇ ಅವಕ್ಕೆ ಬಾಗಿಲನ್ನೂ ನಿರ್ಮಿಸುತ್ತವೆ. ನೀರ ಬಳಿಯ ಫಲವತ್ತಾದ ಮಣ್ಣನ್ನು ಚೊಂಚಿನಿಂದ ತಂದು ಲಾಲಾರಸದೊಂದಿಗೆ ಕಟ್ಟುವ
ಈ ಗೂಡುಗಳು ಕಡ್ಡಿ ಮತ್ತು ಬತ್ತದ ಎಳೆಗಳ ಗೂಡಿಗಿಂತಲೂ ಗಟ್ಟಿಯಾಗಿರುತ್ತವೆ.
ಗೆಳತಿ ಪಕ್ಷಿಗಳಲ್ಲೂ ಸಾಹಸವೊಂದು ಬದುಕಾಗಿದೆ ನಾಲ್ಕು ಗ್ರಾಂ ನಷ್ಟು ತೂಗುವ ದಾಸರಿ ಹಕ್ಕಿ ಅಥವಾ
ಹೆಮ್ಮಿಂಗ್ ಬರ್ಡ್ ವಲಸೆ ಹೋಗುವ ಪ್ರಂಪಂಚದ ಪುಟ್ಟ ಹಕ್ಕಿ. ಪ್ರತಿ ಗಂಟೆಗೆ ಐವತ್ತು ಕಿ.ಮೀ.
ವೇಗದಲ್ಲಿ ಚಲಿಸುವ ಇವುಗಳು ಸತತವಾಗಿ ಆರುನೂರು ಮೈಲಿಗಳಷ್ಟು ದೂರ ವಿರಮಿಸದೇ
ಹಾರಬಲ್ಲವು. ಒಂದು ಔನ್ಸ ತೂಗುವ ನಾರ್ದನ್ ಮೀಟಿಯರ್ ಎಂಬ ಪುಟ್ಟ ಹಕ್ಕಿ ಆರ್ಕ್ಟಿಕ್ ನಿಂದ ಆಫ್ರಿಕಾಕ್ಕೆ ಒಂಭತ್ತು ಸಾವಿರ ಮೈಲಿ ದೂರ ಕ್ರಮಿಸುವ ಹಾಡು ಹಕ್ಕಿಯಾಗಿದೆ. ಉತ್ತರ ದೃವದಿಂದ ದಕ್ಷಿಣ ದ್ರವಕ್ಕೆ ಪಯಣಿಸುವ ಆರ್ಕ್ಟಿಕ್ ರೀವ ಪಕ್ಷಿ ಮಾರ್ಗ ಮಧ್ಯದಲ್ಲಿ ಹಲವು ಭು ಪ್ರದೇಶವನ್ನು ಸುತ್ತುತ್ತಾ ಹೋಗುತ್ತದೆ. ಈ ಹಕ್ಕಿ ವರ್ಷವೊಂದಕ್ಕೆ ಹಾರಾಡುವ ದೂರ ಎಂಭತ್ತೊಂದು ಸಾವಿರ ಕಿ.ಮೀ. ಪಟ್ಟೆ ಬಾಲದ ಗಾಡ್ವಿಟ್ ಎಂಬ ಪಕ್ಷಿ ತನ್ನ ವಲಸೆಯ ಸಮಯದಲ್ಲಿ ಏಳುಸಾವಿರ ಮೈಲಿಯಷ್ಟು ದೂರವನ್ನು
ಹಗಲು ರಾತ್ರಿಯೆನ್ನದೆ ಎಂಟು ದಿನಗಳ ವಿರಾಮವಿಲ್ಲದೇ ಕ್ರಮಿಸಿ ದೂರ ಹಾರಾಟಕ್ಕೆ ದಾಖಲೆಯಾಗಿದೆ.
ಗೆಳತಿ ಆಗ ನನ್ನದು ನಿರುದ್ಯೋಗ ಪರ್ವ. ನಿನ್ನ ಕೈ ಹಿಡಿದು ಸಾಕುವ ಧೈರ್ಯ ನನಗೆ ಬರಲಿಲ್ಲ. ದಿಕ್ಕಿರದೆ ದೂರ ಸಿಡಿದ ಒಂಟಿ ನಕ್ಷತ್ರದ ಹಾಗೆ ನಾನು ನಿನ್ನ ಮುಗಿಲ ತೆಕ್ಕೆಯಿಂದ ಜಾರಿ ನೆಲಕೆ ಅಪ್ಪಳಿಸಿ ಬಿದ್ದು ಬಿಟ್ಟೆ ಗಾಲಿಬ್ ಹೇಳುವಂತೆ “ ಆಕಾಶವನ್ನೇ ಸಿಂಹಾಸವನ್ನಾಗಿಸಿಕೊಂಡಿರುವ ಮಹಾಪ್ರಭು ಹಾಗೂ ಸೂರ್ಯನಂತೆ ಈ
ಭೂಮಿಯನ್ನಾಳುವ ಪ್ರಭು ಅವರು ಉಪವಾಸ ವ್ರತ ಮಾಡಲೇ ಬೇಕು, ನಿಜ ಆದರೆ ಉಪವಾಸ ಮುಗಿದಾಗ
ತಿನ್ನಲು ಏನೂ ಇಲ್ಲದವ ಅವನಿನ್ನೇನು ಮಾಡಲು ಸಾಧ್ಯ ಉಪವಾಸವನ್ನೇ ಉಣ್ಣುವುದು ಬಿಟ್ಟು” ಗೆಳತಿ ಒಲವೆಂಬುದು ಮುಗಿಯದ ಸಂತೆ,ಮರೆಯದ ಹಾಡು, ಮಾಸದ ಸ್ಪರ್ಶ ಜೀವ ಕರಗಿ ಹಣ್ಣಾಗಿ, ಮಣ್ಣು ಸೇರುವ ತನಕ ನಿನ್ನ ಹೆಸರ ಕೋಟೆ ಕುಸಿಯದು, ನಿನ್ನ ನಗೆಯ ಜಯದ ಸಂಭ್ರಮ ಮರೆಯಾಗದು, ನಿನೆಲ್ಲೋ ಮತ್ತೊಂಡು ಗೂಡಿನಲ್ಲಿ ಹಾಡುವ ಹಕ್ಕಿಯಾಗಿರುವೆ. ನೀನು ಸುಖವಾಗಿರಬೇಕು. ಅದುವೇ ನನ್ನ ಪ್ರಾರ್ಥನೆ. ಕೆ.ಎಸ್.ನ. “ಲುಮೆಯದು ಹೊನ್ನ ಬೆಳಸು” ಎಂದಿದ್ದಾರಲ್ಲವೇ! ಈ ಮಧುರ ಪ್ರೀತಿ ನನ್ನೊಳಗೂ ನಿನ್ನೊಳಗೂ ಸದಾ ಅರಳಿದ ಪಾರಿಜಾತದಂತಿರಲಿ ಗಾಲಿವ ಹೇಳುವಂತೆ “ ಯಾರಾದರೂ ಕೆಟ್ಟ ಮಾತಾಡಿದರೆ ಕೇಳಿಸಿಕೊಳ್ಳಬೇಡ,ಯಾರಾದರೂ ಕೆಟ್ಟದ್ದು ಮಾಡಿದ್ದರ ಬಗ್ಗೆ ಮಾತಾಡಬೇಡ ಯಾರಾದರೂ ದಾರಿ ತಪ್ಪುವುದ ಕಂಡರೆ ತಡೆದು ನಿಲ್ಲಿಸು” ಗೆಳತಿ ಹಳೆಯ ನೆನಪು ಹೊಸ ಬದುಕಿಗೆ ಆರಂಭವಾಗಬೇಕು. ಹೊಸ ಹೊಸ ಸಾಧನಿಗೆ ಸ್ಫೂರ್ತಿಯಾಗಬೇಕು. ನಿನ್ನ ಧ್ವನಿ ಕೇಳಿದಾಗ, ನಿನ್ನ ನಗು ಕಂಡಾಗ ನೋವೆಲ್ಲಾ ದೂರವಾಗಬೇಕು.
ಸಮಸ್ತ ಕಾರ್ಯಗಳಿಗೆ, ಆಲೋಚನೆಗಳಿಗೆ ನೀನೇ ಸ್ಫೂರ್ತಿ ಆಗಬೇಕು. ಹುಣ್ಣಿಮೆ ಕಂಡ ಸಮುದ್ರದಂತೆ ಬದುಕಿನ ದಿಕ್ಕು ಪ್ರತಿ ಫಲಿಸಬೇಕು. ನಮ್ಮ ಒಲವಿಗೆ ನಮ್ಮ ನೋವಿಗೆ ನಮ್ಮ ಮರಣಗಳಿಗೆ ಅರ್ಥ ನೀಡಬಲ್ಲ ಶಕ್ತಿಯೇ ಈ ಬಂಧ. ಈ ಜೀವನಕ್ಕೆ ಪ್ರೇಮ ಬಿಟ್ಟು ಮತ್ತೊಂದು ಸತ್ಯವಿಲ್ಲ. ನಕ್ಷತ್ರ ನಿಲುಕದು
ಆದರೆ ಅದರ ಬೆಳಕಿನಂತೆಯೇ ನೀನೆನಗೆ.
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ!