ಮದುವೆ ದಲ್ಲಾಳಿಯ ಚಾಕುಚಕ್ಯತೆ

Share

ಮದುವೆ ದಲ್ಲಾಳಿಯ ಚಾಕುಚಕ್ಯತೆ

“ಇಂದ್ರಮ್ಮಾ, ಇಂದ್ರಮ್ಮಾ” ಎನ್ನುವ ಪರಿಚಿತ ಕಂಠವೊಂದು ನನ್ನ ಅಮ್ಮನ ಹೆಸರಿಡಿದು ಕೂಗುತ್ತಾ, ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿದ್ದ ನಮ್ಮ ಬಾಡಿಗೆ ಮನೆಯ ಮುಂಬಾಗಿಲು ದಾಟಿ ಒಳಬರಲು, ಹೊರಕೋಣೆಯಲ್ಲಿ ಕುಳಿತು ಅಂದಿನ “ವಿಜಯಕರ್ನಾಟಕ” ದಿನಪತ್ರಿಕೆಯ ಹಾಳೆಗಳನ್ನು ಮುಗುಚಿ ಹಾಕುತ್ತಿದ್ದ ನಾನು, ಯಾರು ಬಂದಿರಬಹುದು ಎನ್ನುವ ಕುತೂಹಲವನ್ನು ಅದುಮಿಡಲಾಗದೆ, ಮುಂಭಾಗದ ಹಾಲನ್ನು ಪ್ರವೇಶಿಸಿದೆ. “ಏನಪ್ಪಾ, ಪ್ರಕಾಶ, ಬೆಂಗಳೂರಿನಿಂದ ಯಾವಾಗ ಬಂದಿದ್ದು?” ಎಂದು ನನ್ನ ಯೋಗಕ್ಷೇಮವನ್ನು ವಿಚಾರಿಸಲು ಮೊದಲಿಟ್ಟ ಅತಿಥಿಯ ಮುಖವನ್ನು ದಿಟ್ಟಿಸಿ ನೋಡತೊಡಗಿದೆ. “ಯಾಕೆ ಸಾಹೇಬರೇ? ನನ್ನ ಗುರುತು ಹತ್ತಲಿಲ್ಲವೇ?” ಎನ್ನುತ್ತಾ ಸಾವಕಾಶವಾಗಿ ಹಾಲನ್ನು ಹೊಕ್ಕು ಅಲ್ಲಿದ್ದ ಸೋಫಾದ ಮೇಲೆ ವಿರಾಜಮಾನರಾದ ಆ ವ್ಯಕ್ತಿ ನನಗೆ ಬಹಳ ಪರಿಚಯದವರೆ ಅನ್ನಿಸಿದರೂ ಅವರ ಹೆಸರು ತಕ್ಷಣದಲ್ಲಿ ನಾಲಿಗೆ ಮೇಲೆ ಬಾರದೇ ಇದ್ದುದರಿಂದ ತುಸು ತಡವರಿಸುತ್ತ ನಿಂತಿದ್ದ ನನ್ನ ನೆರವಿಗೆ ಅಡುಗೆಮನೆಯಿಂದ ಹಾಲಿಗೆ ಧಾವಿಸಿ ಬಂದ ಅಮ್ಮನೆ ಬರಬೇಕಾಯಿತು. “ಕೂನಬೇವು ತಿಪ್ಪಣ್ಣ ಅಲ್ಲವೇನೋ?” ಎಂದು ನನ್ನನ್ನು ಉದ್ದೇಶಿಸಿ ನುಡಿದ ಅಮ್ಮ, “ಅಣ್ಣಾ, ಬನ್ನಿ, ಯಾವಾಗ ಬಂದಿದ್ದು?” ಎಂದು ಬಂದ ಅತಿಥಿಯ ಕುಶಲೋಪರಿಯನ್ನು ವಿಚಾರಿಸಲು ಹತ್ತಿದರು. ತಕ್ಷಣ ಬಂದಿರುವವರ ಹೆಸರು ನೆನಪಾಗಿ, ಆ ಹೆಸರಿನ ಒಟ್ಟಿಗೇ ಕಳೆದ ಸುಮಾರು ಎರಡು ದಶಕಗಳಿಗೂ ಮೀರಿದ ಕಾಲಘಟ್ಟದ ಹಿಂದಿನಿಂದಲೂ ತಳುಕು ಹಾಕಿಕೊಂಡಿದ್ದ ನೆನಪುಗಳ ಮಹಾಪೂರವೇ ನೊರೆ ಉಕ್ಕಿಸುತ್ತಾ ಪ್ರವಾಹದೋಪಾದಿಯಲ್ಲಿ ಹರಿದು ನುಗ್ಗಿದವು.

ತೊಂಬತ್ತರ ದಶಕದ ಕೊನೆಯ ವರ್ಷದ ರವಿವಾರವೊಂದರ ಬೆಳಗ್ಗಿನ ಹನ್ನೊಂದರ ವೇಳೆಗೆ ನಮ್ಮ ಮನೆಗೆ ಈ ಪರಿ ಅಚಾನಕ್ ಭೇಟಿ ನೀಡಿದ ಆ ವ್ಯಕ್ತಿ ಕೂನಬೇವು ಗಂಗಮ್ಮಗಳ ತಿಪ್ಪಣ್ಣ. ನಮ್ಮ ಊರಿನ ದಕ್ಷಿಣಕ್ಕೆ, ದುರ್ಗಕ್ಕೆ ಹೋಗುವ ದಾರಿಯಲ್ಲಿ, ಸುಮಾರು ಎರಡು ಮೈಲಿಗಳ ಅಂತರದಲ್ಲಿ ಬರುವ ಮೊದಲ ಹಳ್ಳಿಯೇ ಕೂನಬೇವು. ಎಲ್ಲಕಿಂತ ಮೊದಲು ಸಿಗುವ ಕೂನಬೇವು ಗೊಲ್ಲರಹಟ್ಟಿಯನ್ನು ದಾಟಿದರೆ ಸುಮಾರು ನೂರು, ನೂರೈವತ್ತು ಮೀಟರ್ ಗಳ ಫಾಸಲೆಯ ಒಳಗೇ ಕೂನಬೇವು ಮೊದಲಾಗುತ್ತದೆ. ನಮ್ಮ ಶಾಲಾದಿನಗಳಲ್ಲಿ ಅನೇಕ ಬಾರಿ ಕೂನಬೇವಿಗೆ ಗೆಳೆಯರ ಒಡಗೂಡಿ ನಡೆದುಕೊಂಡು ಹೋದದ್ದಿದೆ, ಹಲವು ಬಾರಿ ಗೆಳೆಯ ಸತ್ಯಾನಂದನ ಸೈಕಲ್ ಏರಿ ಕೂನಬೇವಿನ ಪಯಣ ಕೈಗೊಂಡಿದ್ದಿದೆ. ಕೂನಬೇವಿನಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳನ್ನು ನೋಡಿ ರಾತ್ರಿ ಎರಡು ಗಂಟೆಯ ಸುಮಾರಿಗೆ ನಡೆದೇ ಊರನ್ನು ಸೇರಿದ್ದೂ ಉಂಟು. ಕೂನಬೇವಿನ ಊರಭಾವಿಗೆ ಎತ್ತಿನಗಾಡಿ ಕಟ್ಟಿಕೊಂಡು ಹೋಗಿ, ಅಲ್ಲಿನ ಕುಡಿಯುವ ನೀರನ್ನು ದೊಡ್ಡದೊಡ್ಡ ತಾಮ್ರದ ಹಂಡೆಗಳಲ್ಲಿ, ಮನೆಯಲ್ಲಿ ಸಮಾರಂಭಗಳು ಇದ್ದ ದಿನವೋ, ದಸರಾ, ದೀಪಾವಳಿ, ಉಗಾದಿಯಂತಹ ಹಬ್ಬಹರಿದಿನಗಳ ಹೊತ್ತೋ, ಹೊತ್ತು ತಂದ ನೆನಪು, ಕುಡಿಯುವ ನೀರಿನ ಪರ್ಯಾಪ್ತ ಆಸರೆಯಿಲ್ಲದೆ, ವರ್ಷದ ಬಹುತೇಕ ದಿನಗಳಲ್ಲಿ ನೀರಿನ ಬರದಿಂದ ಕಂಗಾಲಾದ ನನ್ನ ಎಳೆಯ ಮನಸ್ಸಿನ ಮೂಲೆಯಲ್ಲಿ ಎಂದೂ ಅಳಿಸದ ಹಾಗೆ ದಾಖಲಾಗಿದೆ. ದುರ್ಗದ ರಸ್ತೆಯಲ್ಲಿ ಬರುವ ನಮ್ಮ ಹೊಲಕ್ಕೆ ಕೂನಬೇವು ಕೇವಲ ಒಂದು ಮೈಲಿ ದೂರವಷ್ಟೆ ಇರುವುದು. ಆ ಹೊತ್ತಿಗೆ ಕೂನಬೇವಿನಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಆ ಹಳ್ಳಿಯ ಎಲ್ಲಾ ಹುಡುಗ ಹುಡುಗಿಯರೂ ತುರುವನೂರಿನ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿಯೇ ತಮ್ಮ ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾದ ಅನಿವಾರ್ಯತೆ ಒದಗಿತ್ತು. ಹೀಗಾಗಿ ಒಂದರ್ಥದಲ್ಲಿ ಭೌತಿಕವಾಗಿ ಎರಡು ಊರುಗಳಂತೆ ತೋರುತ್ತಿದ್ದ ನನ್ನೂರು ಮತ್ತು ಕೂನಬೇವಿನ ಮಧ್ಯೆ ಅವಿನಾಭಾವ ಸಂಬಂಧ ನೆಲೆಸಿತ್ತು. ಮಾನಸಿಕತೆವಾಗಿ ಕೂನಬೇವು ಎಲ್ಲಾ ದೃಷ್ಟಿಕೋನಗಳಿಂದ ತುರುವನೂರಿನ ಪುರವಿಸ್ತಾರದ ಒಂದು ಭಾಗವೇ ಆಗಿ ಮಾರ್ಪಾಡಾಗಿತ್ತು. ಕೂನಬೇವಿನ ಹಲವಾರು ವ್ಯಕ್ತಿಗಳು ವಿವಿಧ ಕಾರಣಗಳಿಗಾಗಿ ನಮ್ಮೂರಿಗೆ ದಿನಂಪ್ರತಿ ಬರುವುದು ರೂಢಿಯಲ್ಲಿದ್ದರೆ, ಕೂನಬೇವಿನ ಅಂಚಿನಲ್ಲಿದ್ದ ನನ್ನೂರಿನ ಹೊಲಗಳ ರೈತರು ತಮ್ಮ ಜಮೀನುಗಳಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಕೂಲಿಯಾಳುಗಳ ಅನ್ವೇಷಣೆಯಲ್ಲಿ ದಿನಂಪ್ರತಿ ಬೆಳ್ಳಂಬೆಳಿಗ್ಗೆ ಹೊತ್ತು ಕೂನಬೇವಿಗೆ ನಿಯಮಿತ ರೂಪದಲ್ಲಿ ಎಡತಾಕುತ್ತಿದ್ದದ್ದು ಕೃಷಿವಲಯದಲ್ಲಿನ ಎಲ್ಲರಿಗೂ ತಿಳಿದ ಗುಟ್ಟಾಗಿತ್ತು.

ನಾನು ಪ್ರೈಮರಿ ಶಾಲೆಯಲ್ಲಿ ಇದ್ದ ದಿನಗಳಲ್ಲಿಯೇ ತಿಪ್ಪಣ್ಣ ಪ್ರತೀನಿತ್ಯ ನಮ್ಮೂರಿಗೆ ಬಂದು ಹೋಗುವುದನ್ನು ಗಮನಿಸಿದ್ದೆ. ಬೆಳಿಗ್ಗೆ ಮೃತ್ಯುಂಜಯ ಬಸ್ಸಿನಲ್ಲಿ ಕೂನಬೇವಿನಿಂದ ಬರುತ್ತಿದ್ದ ತಿಪ್ಪಣ್ಣ ಊರಲ್ಲಿನ ಯಾರ ಮನೆಗೆ ಹೋಗಬೇಕಾದರೂ ಬಸ್ ಸ್ಟ್ಯಾಂಡ್ ನಲ್ಲಿದ್ದ ನಮ್ಮ ಮನೆಯ ಮುಂದೆಯೇ ಹಾದುಹೋಗಬೇಕಾಗಿತ್ತು. ಮೂಲತಃ ಕೃಷಿಕ ಕುಟುಂಬದ ಕುಡಿಯಾದ ತಿಪ್ಪಣ್ಣನಿಗೆ ಪ್ರತೀದಿನ ಬೆಳಿಗ್ಗೆ ನನ್ನೂರಿಗೆ ಬಂದು ಸಾಯಂಕಾಲ ಸುಮಾರು ಏಳು, ಎಂಟು ಗಂಟೆಯ ಸಮಯಕ್ಕೆ ಕೂನಬೇವಿಗೆ ಹಿಂತಿರುಗುವಂತಹ ಘನಕಾರ್ಯವೇನಿದ್ದೀತು? ಎಂದು ಹಲವಾರು ಬಾರಿ ಯೋಚಿಸಿ ಹೈರಾಣಾಗಿದ್ದಿದೆ. ಈ ಬಗ್ಗೆ ಯಾರನ್ನಾದರೂ ಕೇಳಿ ತಿಳಿಯಬೇಕು ಎಂದು ತವಕಪಟ್ಟಿದ್ದರೂ ಯಾರನ್ನು ಕೇಳುವುದು? ಊರ ಆಂಜನೇಯ ದೇವರ ತಲೆಯ ಮೇಲಿನ ಹೂ ತಪ್ಪಿದರೆ ತಪ್ಪೀತು, ಆದರೆ ತಿಪ್ಪಣ್ಣ ತುರುವನೂರಿಗೆ ಬಾರದೇ ಇರುವ ದಿನಗಳೇ ಇಲ್ಲ ಎನ್ನುವಷ್ಟು ನಿಯಮಿತರೂಪದಲ್ಲಿದ್ದ ತಿಪ್ಪಣ್ಣನ ನನ್ನೂರಿನ ಭೇಟಿ ನನಗಿದ್ದ ಬಾಲ್ಯಸಹಜ ಕುತೂಹಲಗಳಲ್ಲಿಯೇ ಪ್ರಮುಖವಾಗಿದ್ದು. ತಿಪ್ಪಣ್ಣ ನೋಡಲಿಕ್ಕೆ ನನಗೆ ಎಂದೂ ಒಬ್ಬ ರೈತನ ರೀತಿ ತೋರಿಬರಲೇ ಇಲ್ಲ. ಗರಿಗರಿಯಾಗಿ ಇಸ್ತ್ರಿ ಮಾಡಿದ ಬಿಳಿಖಾದಿ ಪಂಚೆ ಮತ್ತು ಶರ್ಟ್ ಗಳಲ್ಲಿ ಕಂಗೊಳಿಸುತ್ತಿದ್ದ ತಿಪ್ಪಣ್ಣ ಸದಾ ಕಾಲ ಎಡಹೆಗಲ ಮೇಲೆ ಒಂದು ದಪ್ಪನಾದ, ಒರಟಾದ, ಬಿಳಿಯ ಶಲ್ಯವನ್ನು ನೀಟಾಗಿ ಮಡಚಿ ಹೊದ್ದಿರುತ್ತಿದ್ದ. ಗಾಢವಾಗಿ ಹಚ್ಚಿದ ಕೊಬ್ಬರಿ ಎಣ್ಣೆಯ ನೆರವಿನಿಂದ ತನ್ನ ದಟ್ಟವಾದ ಕೂದಲರಾಶಿಯನ್ನು ಒಪ್ಪವಾಗಿ, ಒಂದು ಕೂದಲೂ ಅಲುಗಾಡಿ ಮೇಲೇಳದ ಹಾಗೆ ನೀಟಾಗಿ ಇಟ್ಟಿರುತ್ತಿದ್ದ. ತಲೆಯ ನಡುವಿಗೆ ಬರುವಂತೆ ಬೈತಲೆ ತೆಗೆಯುತ್ತಿದ್ದ ತಿಪ್ಪಣ್ಣನದು ದಟ್ಟ ಕೃಷ್ಣವರ್ಣದ ಮೈಬಣ್ಣ. ನೀಳವಾದ ಮೂಗು, ಕೋಲುಮುಖ, ತೆಳುವಾಗಿ ಟ್ರಿಮ್ ಮಾಡಿದ ಅಗಲ ಮೀಸೆ, ನೀಟಾಗಿ ಶೇವ್ ಮಾಡಿದ ಮುಖದ ತಿಪ್ಪಣ್ಣನನ್ನು ನೋಡಿದ ಯಾರಾದರೂ ಈತ ಸೊಗಸುಗಾರ, ಶಿಸ್ತುಗಾರ ಮತ್ತು ಮೋಜುಗಾರ ಮೂರೂ ಸಮಪ್ರಮಾಣದಲ್ಲಿ ಮೇಳೈಸಿದ ವ್ಯಕ್ತಿವಿಶೇಷ ಎನ್ನುವುದನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದಿತ್ತು.ಕಾಲಿಗೆ ಕಪ್ಪನೆಯ, ಸದಾ ಹೊಸದಾಗಿ ತೋರುತ್ತಿದ್ದ ಬಾಟ ಚಪ್ಪಲಿಗಳನ್ನು ತೊಟ್ಟು ‘ಕೀರ್ ಕೀರ್’ ಎಂದು ಶಬ್ದ ಮಾಡುತ್ತಾ ತಿಪ್ಪಣ್ಣ ನಮ್ಮ ಮನೆಯ ಮುಂದಿನ ಊರ ಮುಖ್ಯರಸ್ತೆಯಲ್ಲಿ ಹೊರಟ ಎಂದರೆ ಶಾಲಾ ಮಕ್ಕಳಾದ ನಮಗೆ ಇನ್ನು ಶಾಲೆಯ ತಯಾರಿಗೆ ಮೊದಲಾಗಬೇಕು ಎನ್ನುವ ಸಂದೇಶ ರವಾನೆಯಾಗುತ್ತಿತ್ತು. ನಾನು ತಿಪ್ಪಣ್ಣನನ್ನು ಮೊದಲ ಬಾರಿಗೆ ಕಂಡಾಗ ಆತನ ವಯಸ್ಸು ನಲ್ವತ್ತನ್ನು ದಾಟಿರಲಿಲ್ಲ. ರೈತವರ್ಗಕ್ಕೆ ಸೇರಿದವನಾದರೂ ದೇಹವನ್ನು ಎಂದೂ ಕೃಷಿಯ ಕಷ್ಟಕಾರ್ಪಣ್ಯಗಳಿಗೆ ಒಡ್ಡದ ತಿಪ್ಪಣ್ಣನ ದೇಹ ಸುಕೋಮಲವಾಗಿದ್ದಲ್ಲಿ, ಆತನ ಚರ್ಮ ವಿಶೇಷವಾದ ಹೊಳಪಿನಿಂದ ಕೂಡಿತ್ತು. ಮುಖದ ಮೇಲೆ ಶಾಶ್ವತರೂಪದಲ್ಲಿ ನೆಲೆಸಿದ್ದ ಎಂತಹುದೋ ಒಂದು ಆತ್ಮವಿಶ್ವಾಸ, ಹೊಳೆಯುತ್ತಿದ್ದ ಬಿಳಿಕಣ್ಣುಗಳು ಹಾಗು ಕೆನ್ನೆಯ ಹೊಳಪಿನೊಂದಿಗೆ ಸ್ಪರ್ಧೆಯನ್ನು ಮಾಡುವಂತಿತ್ತು. ಸದಾ ಹಸನ್ಮುಖಿಯಾಗಿರುತ್ತಿದ್ದ ತಿಪ್ಪಣ್ಣನ ಶುಭ್ರಬಿಳಿ ದಂತಪಂಕ್ತಿ ಸಮೇತದ ನಗುಮುಖ ಮಾತ್ರವೇ ಈಗ ನನ್ನ ನೆನಪಿನಲ್ಲಿ ಉಳಿದಿರುವುದು. ನಗದೇ ಗಂಭೀರ ಮುಖಮುದ್ರೆ ಹಾಕಿ ಕುಳಿತ ತಿಪ್ಪಣ್ಣನ ಮುಖವನ್ನು ಕಣ್ಣಮುಂದೆ ತರಲಿಕ್ಕೆ ಬೆಳಗಿನಿಂದ ನೂರು ಬಾರಿ ಪ್ರಯತ್ನಿಸಿದ್ದೇನೆ, ಊಹೂಂ, ಏನೂ ಪ್ರಯೋಜನವಾಗಿಲ್ಲ, ತಿಪ್ಪಣ್ಣನ ಮುಖಮಂಡಲದ ನೆನಪು ನಗುಮುಖದ ಒಂದಿಗೆ ಫೆವಿಕಾಲ್ ಅಂಟಿನಿಂದ ಅಂಟಿಸಿದ ರೀತಿಯಲ್ಲಿ ನನ್ನ ಸ್ಮೃತಿಪಟಲದಲ್ಲಿ ನೆಲೆಯೂರಿಬಿಟ್ಟಿದೆ.

“ಅಮ್ಮಾ, ಮೊದಲು ಮುಖ ತೊಳೆದುಕೊಂಡು ದೇವರ ಮುಂದೆ ದೀಪ ಹಚ್ಚಿ ಬನ್ನಿ, ಆಮೇಲೆ ನಿಮ್ಮ ಜೊತೆಗೆ ಮಾತನಾಡುವುದು ತುಂಬಾ ಇದೆ” ಎಂದು ನನ್ನ ಅಮ್ಮನನ್ನು ಕುರಿತು ತಿಪ್ಪಣ್ಣ ನುಡಿದ ಮಾತುಗಳಿಂದ ನನ್ನ ಯೋಚನಾಲಹರಿಗೆ ಕತ್ತರಿ ಏಟು ಬಿತ್ತು. “ಚಂದ್ರಣ್ಣ ಕಾಣುತ್ತಿಲ್ಲ, ಎಲ್ಲಿ ಹೋಗಿದ್ದಾನೆ?” ಎಂದು ನನ್ನನ್ನು ಉದ್ದೇಶಿಸಿ ತಿಪ್ಪಣ್ಣ ಕೇಳುವುದಕ್ಕೂ ನನ್ನ ಅಪ್ಪ ಮನೆಯೊಳಗೆ ಕಾಲಿಡುವುದಕ್ಕೂ ಒಂದಕ್ಕೊಂದು ತಾಳೆಯಾಯಿತು. “ಚಂದ್ರಣ್ಣ, ಎಂತಹ ಕೆಲಸ ಮಾಡಿಬಿಟ್ಟೆಯಲ್ಲ? ಮೊನ್ನೆ ಕೂನಬೇವಿನ ಹಿಂದಿ ಮೇಷ್ಟ್ರು ತಿಪ್ಪೇಸ್ವಾಮಿ ಮನೆಗೆ ಅವರ ಮೊಮ್ಮಗನ ನಾಮಕರಣ ಸಮಾರಂಭಕ್ಕೆ ಬಂದವನು ನಮ್ಮ ಮನೆಗೆ ಏಕೆ ಬರಲಿಲ್ಲ? ನಮ್ಮ ಊರಿಗೆ ಬಂದು ನನ್ನನ್ನು ಕಾಣದೆ ಹೋಗುವಂತಹ ದೊಡ್ಡ ಅಪರಾಧ ನನ್ನಿಂದ ಏನಾಗಿದೆ ಚಂದ್ರಣ್ಣ? ನೀನು ಬಂದಿರುವ ವಿಷಯ ತಿಳಿದ ನಾನು ಬಸ್ ಸ್ಟ್ಯಾಂಡ್ ಗೆ ಬಂದು ಗಂಟೆಗಟ್ಟಲೆ ನಿನಗಾಗಿ ಹುಡುಕಿದೆ, ಗೊತ್ತಾ?” ಎಂದು ಅಪ್ಪನೊಂದಿಗೆ ತನ್ನ ಎಂದಿನ ಅನುಕರಿಸಲಸಾಧ್ಯವಾದ, ವಿಶಿಷ್ಟ ಶೈಲಿಯಲ್ಲಿ ಮಾತಿಗೆ ಮೊದಲಿಟ್ಟ ತಿಪ್ಪಣ್ಣ, “ನಾನೂ ನಿಮ್ಮ ಮನೆಗೆ ಬರಬಾರದು ಅಂತಲೇ ಇದ್ದೆ ಕಣಪ್ಪಾ, ಆದರೆ ಇಂದ್ರಮ್ಮನ ಮುಖ ನೋಡಿ, ಒಂದು ವಿಶೇಷವಾದ ಕಾರ್ಯನಿಮಿತ್ತ ನಿಮ್ಮ ಮನೆಯ ಹೊಸಿಲು ದಾಟಿ ಒಳಬಂದಿರುತ್ತೇನೆ. ನಾನು ಬಂದ ಕಾರ್ಯವನ್ನು ಇಂದ್ರಮ್ಮನ ಮುಂದೆ ಅಷ್ಟೇ ನಾನು ಹೇಳುವುದು, ದಯವಿಟ್ಟು ತಪ್ಪು ತಿಳಿಯಬೇಡ” ಎಂದು ನುಡಿದ ತಿಪ್ಪಣ್ಣನ ಮಾತುಗಳನ್ನು, ಆತನ ಸ್ವಭಾವದ ಅರಿವಿದ್ದ ಅಪ್ಪ, ಗಂಭೀರವಾಗಿ ತೆಗೆದುಕೊಂಡಂತೆ ಕಾಣಲಿಲ್ಲ. ತನ್ನ ಮಾತುಗಳಿಗೆ ಅಪ್ಪನವತಿಯಿಂದ ಸೂಕ್ತ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ನನ್ನ ಕಡೆ ತಿರುಗಿದ ತಿಪ್ಪಣ್ಣ “ಏನು? ಸಾಹೇಬರು ಬೆಂಗಳೂರಿನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಂತೆ, ನನ್ನ ಕಣ್ಣ ಮುಂದೆ ಬೆಳೆದ ಹುಡುಗ ನೀನು, ಈಗ ನೋಡಿದರೆ ದೊಡ್ಡ ಸಾಹೇಬನಾಗಿದ್ದೀಯ, ನೋಡಪ್ಪಾ, ಕಾಲ ಎಷ್ಟು ಜಲ್ದಿ ಬದಲಾಗುತ್ತೆ” ಎಂದು ಮೆಚ್ಚುಗೆ ಮಿಶ್ರಿತ ದೂರುವ ಧ್ವನಿಯಲ್ಲಿ ಉಸುರುವಷ್ಟರಲ್ಲಿ ಅಮ್ಮ ದೇವರಿಗೆ ದೀಪ ಹಚ್ಚಿ ಹಾಲಿಗೆ ಬಂದಳು. ಅಮ್ಮನನ್ನು ನೋಡಿದ ತಿಪ್ಪಣ್ಣ ತನ್ನ ಶರ್ಟ್ ಜೇಬಿನಿಂದ ತುಂಬಾ ಜತನದಿಂದ ಬಿಳಿ ಕವರ್ ಒಂದನ್ನು ತೆಗೆದು ಅದನ್ನು ಜೋಪಾನವಾಗಿ ಅಮ್ಮನಿಗೆ ನೀಡಲು ಹೊರಟ. “ಬಲಗೈ ಮುಂದೆ ಮಾಡಮ್ಮ, ಇಂತಹ ವಸ್ತುಗಳನ್ನು ಎಡಗೈಯಿಂದ ಮುಟ್ಟಬಾರದು” ಎನ್ನುತ್ತಾ ಕವರನ್ನು ಅಮ್ಮನ ಬಲಗೈಗೆ ಹಸ್ತಾಂತರಿಸಿದವನು “ಈ ಕವರನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಿದ ನಂತರವೇ ತೆಗೆದು ನೋಡಬೇಕು” ಎನ್ನುವ ಅಜ್ಞಾಭರಿತ ಕೋರಿಕೆಯನ್ನು ಮುಂದಿಟ್ಟ. ತಿಪ್ಪಣ್ಣನ ಮಾತಿನಂತೆ ಕವರನ್ನು ದೇವರಪಠಗಳ ಮುಂದೆ ಇಟ್ಟು, ಕೈಮುಗಿದು, ಮನದಲ್ಲಿಯೇ ಪ್ರಾರ್ಥನೆ ಸಲ್ಲಿಸಿದ ಅಮ್ಮ, ಮತ್ತೆ ಕವರ್ ಸಮೇತ ಹಾಲಿಗೆ ಬಂದವಳು “ತೆಗೆದುಕೊಳ್ಳಿ, ಕವರ್ ತೆಗೆಯಿರಿ” ಎಂದು ಅಪ್ಪನನ್ನು ಉದ್ದೇಶಿಸಿ ನುಡಿದಳು. “ಬೇಡ, ಬೇಡ, ಚಂದ್ರಣ್ಣ ಕವರ್ ತೆಗೆಯುವುದು ಬೇಡ, ನೀನೇ ಕವರ್ ತೆಗೆಯಬೇಕು” ಎಂದು ಒತ್ತಾಯಪೂರ್ವಕ ಧ್ವನಿಯಲ್ಲಿ ತಿಪ್ಪಣ್ಣ ನಿವೇದಿಸಲು, ಮನಸ್ಸಿಲ್ಲದ ಮನಸ್ಸಿನಲ್ಲಿ ಕವರ್ ತೆಗೆದ ಅಮ್ಮನಿಗೆ ಅಲ್ಲಿ ಕಂಡಿದ್ದು ಒಂದು ಪಾಸ್ ಪೋರ್ಟ್ ಅಳತೆಯ ಕಲರ್ ಭಾವಚಿತ್ರ. ಭಾವಚಿತ್ರವನ್ನು ನೋಡಲು ಹೋದವಳಿಗೆ “ಅದನ್ನು ಮೊದಲು ಕಣ್ಣುಗಳಿಗೆ ಒತ್ತಿಕೊಂಡು ಆಮೇಲೆ ನೋಡಮ್ಮ” ಎಂದು ತಿಪ್ಪಣ್ಣನ ಉಪದೇಶ ತೂರಿಬರಲಾಗಿ, ಆತ ಹೇಳಿದ ಹಾಗೆಯೇ ಮಾಡಿದ ಅಮ್ಮ ಫೋಟೋವನ್ನು ಒಂದು ಕ್ಷಣ ದಿಟ್ಟಿಸಿ ನೋಡಿ ನನ್ನ ಕೈಗೆ ವರ್ಗಾಯಿಸಲು ಮೊದಲಾದಳು. ಅಮ್ಮನನ್ನು ತಡೆದ ತಿಪ್ಪಣ್ಣ “ಫೋಟೋವನ್ನು ಚಂದ್ರಣ್ಣನ ಕೈಗೆ ಕೊಡು, ಪ್ರಕಾಶನಿಗಲ್ಲ” ಎಂದು ಹೇಳಲು ತನ್ನ ಕುರ್ಚಿಯಿಂದ ಎದ್ದ ಅಪ್ಪ ಅಮ್ಮನ ಕೈಯಿಂದ ಫೋಟೋ ತೆಗೆದುಕೊಂಡವನು ತಾನೂ ಒಂದು ಕ್ಷಣ ದಿಟ್ಟಿಸಿ ನೋಡಿ ತಿಪ್ಪಣ್ಣನಿಗೆ ಮರಳಿ ನೀಡಿದನು. ತನ್ನ ಕೈಗೆ ಬಂದ ಫೋಟೋವನ್ನು ಮತ್ತೆ ನನ್ನ ಕೈಗೆ ಇಟ್ಟ ತಿಪ್ಪಣ್ಣ “ಪ್ರಕಾಶ, ಸರಿಯಾಗಿ ನೋಡಪ್ಪ, ಅಮೆರಿಕೆಯಲ್ಲಿರುವ ನಿನ್ನ ತಮ್ಮ ಭೋಗೇಶ್ ಗೆ ಒಂದು ಸುಸಂಸ್ಕೃತ, ವಿದ್ಯಾವಂತ ಮನೆತನದ, ನಿಮ್ಮ ಮನೆಯ ವಾತಾವರಣಕ್ಕೆ ಎಲ್ಲಾ ರೀತಿಯಲ್ಲಿಯೂ ಸೂಕ್ತವಾಗುವ ಒಂದು ಹುಡುಗಿಯನ್ನು ಆಯ್ಕೆಮಾಡಿ ಆಕೆಯ ಫೋಟೋವನ್ನ ತಂದಿದ್ದೇನೆ” ಎಂದವನು ಅಮ್ಮನ ಕಡೆ ತಿರುಗಿ “ಹುಡುಗಿ ಹಿರಿಯೂರಿನ ಸಮೀಪದ ಗಣನಾಯಕನ ಹಳ್ಳಿಯವಳು, ಎಮ್.ಸಿ. ಎ. ಮಾಡಿ ಬೆಂಗಳೂರಿನ ಹೆಸರಾಂತ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾಳೆ, ಹುಡುಗಿಯ ಅಣ್ಣನೂ ಇಂಜಿನಿಯರ್, ಅಮೆರಿಕೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗನಿಮಿತ್ತ ಪತ್ನಿಸಮೇತ ನೆಲೆಸಿದ್ದಾನೆ. ಆತನಿಗೆ ಗಣನಾಯಕನ ಹಳ್ಳಿ ಸಮೀಪವೇ ಇರುವ ಸೂರನಹಳ್ಳಿಯ ಸಂಬಂಧಿಕರ ಮನೆಯಲ್ಲಿಯೇ ಕನ್ಯೆ ತೆಗೆದಿದ್ದಾರೆ. ಹುಡುಗಿಯ ತಂದೆ ತಾಯಿ ಹಳ್ಳಿಯಲ್ಲಿದ್ದಾರೆ, ಹುಡುಗಿಯ ದೊಡ್ಡ ಅಕ್ಕನನ್ನು ಶಿವಮೊಗ್ಗಕ್ಕೆ ಕೊಟ್ಟಿದ್ದಾರೆ, ಅಳಿಯ ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದಾನೆ, ಆತ ಚೆನ್ನಗಿರಿ ಸಮೀಪದ ನಲ್ಲೂರಿನವನು. ಹುಡುಗಿಯ ಅಪ್ಪ ಅಮ್ಮ ನನಗೆ ಬಹಳ ಚೆನ್ನಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಪರಿಚಯಸ್ಥರು, ತುಂಬಾ ಮರ್ಯಾದಸ್ಥ ಜನ, ಮರ್ಯಾದೆಗಾಗಿ ಜೀವಕೊಡುವ ಮಂದಿ, ಊರಲ್ಲಿ ಮನೆ, ಹದಿನೈದು ಎಕರೆ ಖುಷ್ಕಿ ಭೂಮಿ ಹೊಂದಿದ್ದಾರೆ” ಎಂದು ತನ್ನ ವಿವರಗಳ ಗಂಗಾಪ್ರವರವನ್ನು ಮುಂದುವರೆಸುತ್ತಲೇ ಹೋಗುತ್ತಿದ್ದ. ಇದಕ್ಕೆ ಕಡಿವಾಣ ಹಾಕುವಂತೆ, ಬಾಗಿಲಮರೆಯಲ್ಲಿ ನಿಂತು, ಹಾಲಿನಲ್ಲಿ ನಡೆಯುತ್ತಿದ್ದ ಮಾತುಕತೆಗಳಿಗೆ ಕಿವಿಯಾಗಿದ್ದ ಅಮ್ಮ, ತನ್ನ ಸೆರಗನ್ನು ಒಮ್ಮೆ ಸರಿ ಮಾಡಿಕೊಂಡು, ತಲೆಯ ಅರ್ಧಭಾಗವನ್ನು ಬಳಸುವ ಹಾಗೆ ಸೀರೆ ಸೆರಗು ಹೊದ್ದು, “ಅಣ್ಣಾ, ನಾವು ಭೋಗೇಶ್ ಗೆ ಇದೇ ಊರಿನ ಒಂದು ಹುಡುಗಿ ಜೊತೆ ಮದುವೆ ಮಾಡಬೇಕೆಂದಿದ್ದೇವೆ, ಹುಡುಗಿ ಡಾಕ್ಟರ್, ನಮಗೆ ಎಲ್ಲಾ ರೀತಿಯಿಂದಲೂ ಸರಿಹೊಂದುವ ಸಂಬಂಧ, ಈಗಾಗಲೇ ಮಾತುಕತೆಯನ್ನು ಮುಗಿಸಿದ್ದೇವೆ” ಎನ್ನಲಾಗಿ ತಿಪ್ಪಣ್ಣ ಮೋಡದೆತ್ತರಕ್ಕೆ ಹಾರಿಬಿಡಲು ಯತ್ನಿಸುತ್ತಿದ್ದ ಬಲೂನ್ ‘ಟುಸ್’ ಎಂದು ಒಡೆದು ತನ್ನ ಮೈನಲ್ಲಿನ ಗಾಳಿಯನ್ನು ಸಶಬ್ದ ಸಮೇತ ಹೊರಚೆಲ್ಲುತ್ತಾ ಧರಾಶಾಹಿಯಾಯಿತು. ಅಮ್ಮನ ಈ ತಣ್ಣೀರು ಎರೆಚುವ ಮಾತುಗಳಿಂದ ತನ್ನ ಹರಿಕಥೆಯ ಪ್ರಲಾಪದ ಓಘಕ್ಕೆ ಬ್ರೇಕ್ ಹಾಕಿದ ತಿಪ್ಪಣ್ಣ, “ಹೌದೇನಮ್ಮ, ನನಗೆ ಗೊತ್ತೇ ಇರಲಿಲ್ಲ. ನೀವು ಹುಡುಗಿ ಹುಡುಕುವ ವಿಚಾರವನ್ನು ನಮ್ಮೂರಿನ ಸೊಸೈಟಿ ಜಗದೀಶ್ ಹೋದ ವಾರವಷ್ಟೇ ನನಗೆ ತಿಳಿಸಿದ್ದ. ಹಾಗಾಗಿ ಆತುರಾತುರವಾಗಿ ನಿಮ್ಮ ಮನೆಗೆ ಬಂದೆ. ತಪ್ಪು ನನ್ನದೇ, ಮನೆಯಲ್ಲಿ ಕೈಗೆ ಬಂದ ಇಬ್ಬಿಬ್ಬರು ವಿವಾಹಯೋಗ್ಯ ಹುಡುಗರಿದ್ದರೂ ನಿಮ್ಮ ಸಂಪರ್ಕವನ್ನು ಸುಮಾರು ವರ್ಷಗಳ ಕಾಲ ನಾನು ಮಾಡಲೇ ಇಲ್ಲ. ನನಗೆ ಯಾವ ಮಂಕು ಕವಿದಿತ್ತೋ ಕಾಣೆ. ನಾನು ನಿಮ್ಮ ಮನೆಗೆ ಮೊದಲಿನ ಹಾಗೆ ಬಂದು ಹೋಗಿ ಮಾಡುತ್ತಿದ್ದರೆ, ಇವತ್ತು ಲಕ್ಷ್ಮಿ ಮತ್ತು ಸರಸ್ವತಿಯ ಸಂಗಮದಂತಿರುವ ಈ ಕನ್ಯೆ ನಿಮ್ಮ ಮನೆಯ ಭಾಗ್ಯವನ್ನು ಮುಗಿಲೆತ್ತರಕ್ಕೆ ಬೆಳಗುತ್ತಿದ್ದಳು” ಎಂದು ನುಡಿದು, ನನ್ನ ತಮ್ಮನಿಗೆ ನಿಶ್ಚಯವಾದ ಹುಡುಗಿಯ ಪೂರ್ವಾಪರಗಳನ್ನು ವಿಂಗಡಿಸಿ ಕೇಳಿ ತಿಳಿದುಕೊಂಡು ಮಧ್ಯಾಹ್ನದ ಗಡದ್ದಾದ ಜೋಳದರೊಟ್ಟಿ, ಎಣ್ಣೆಗಾಯಿ ಪಲ್ಯದ ಊಟದ ನಂತರ “ಬಂದ ದಾರಿಗೆ ಸುಂಕವಿಲ್ಲ” ಎನ್ನುವ ಹಾಗೆ ತನ್ನ ಊರಿಗೆ ತೆರಳಿದ.

ಹೀಗೆ ನಮ್ಮ ಮನೆಗೆ ಸುಮಾರು ವರ್ಷಗಳ ನಂತರ ದರ್ಶನ ಭಾಗ್ಯವನ್ನು ಕರುಣಿಸಿದ ತಿಪ್ಪಣ್ಣ ಮೊತ್ತಮೊದಲಿಗೆ ಊರಿನ ನಮ್ಮ ಮನೆಗೆ ಪ್ರವೇಶ ಕೊಟ್ಟ ದಿನದ ವಿವರ ನನ್ನ ಕಣ್ಣ ಮುಂದೆ ಕಟ್ಟತೊಡಗಿತು. ಅದೊಂದು ದಿನ ಬೆಳಿಗ್ಗೆ, ಯಥಾಪ್ರಕಾರ ಬಸ್ಸಿನಿಂದ ಇಳಿದ ತಿಪ್ಪಣ್ಣ, ನನ್ನ ಮನೆ ಮುಂದಿನ ಹಾದಿಯನ್ನು ತುಳಿಯದೆ ನೇರವಾಗಿ ನಮ್ಮ ಮನೆಯ ಅಂಗಳವನ್ನು ಪ್ರವೇಶಿಸಿದ್ದು ನನಗೆ ಆಶ್ಚರ್ಯವನ್ನು ಉಂಟು ಮಾಡಿತ್ತು. “ಗೌರಮ್ಮ, ಮನೆಯಲ್ಲಿ ಇದ್ದೀಯೇನಮ್ಮಾ?” ಎನ್ನುತ್ತಲೇ ನಮ್ಮ ಮನೆಯ ಮುಂಬಾಗಿಲನ್ನು ದಾಟಿದವನು ಮುಂದಿನ ಎರಡು ವರ್ಷಗಳ ಕಾಲ ಬಸ್ಸಿನಲ್ಲಿ ಇಳಿದವನು ಸೀದಾ ನಮ್ಮ ಮನೆಗೇ ಬಂದು, ದಿನಪೂರ್ತಿ ನನ್ನ ಅವ್ವನ ಎದುರಿಗೆ ಪಡಸಾಲೆಕಟ್ಟೆಯ ಮೇಲೆ ಹಾಸುತ್ತಿದ್ದ ಕಡ್ಡಿಚಾಪೆಯ ಮೇಲೆ ಪವಡಿಸಿ ಕುಳಿತು, ತಲೆ ತುಂಬಾ ಊರ ವಿಷಯಗಳನ್ನು ಹರಟಿ, ಎರಡು ಮೂರು ಟೀ ಸಮಾರಾಧನೆಗಳ ಮಧ್ಯೆ ಮಧ್ಯಾಹ್ನದ ಊಟವನ್ನೂ ಗಡದ್ದಾಗಿ ಮೆದ್ದು, ಸಂಜೆಯ ತಿಂಡಿ ಅಂಗಡಿಯ ಕುರುಕಲು ತಿಂಡಿಯ ರುಚಿನೋಡಿ, ಸಾಯಂಕಾಲದ ಬಸ್ಸಿಗೆ ತನ್ನ ಊರು ಸೇರಿಕೊಳ್ಳುತ್ತಿದ್ದ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ನನ್ನ ಚಿಕ್ಕಪ್ಪನಿಗೆ ಹೆಣ್ಣು ಹುಡುಕುತ್ತಿದ್ದೆವು, ಹೀಗಾಗಿ ಈ ವಿಷಯ ಕುರಿತು ತನ್ನ ಮಾತುಕತೆಯ ಮಧ್ಯೆ ಆಗೊಮ್ಮೆ, ಈಗೊಮ್ಮೆ ಪ್ರಸ್ತಾವ ಮಾಡುತ್ತಲೇ ತನ್ನ ಕಾರ್ಯವನ್ನು ಹಂತಹಂತಗಳಲ್ಲಿ ಸಾಧಿಸುತ್ತಾ ನಡೆದ ತಿಪ್ಪಣ್ಣನ ಮನದ ಹುನ್ನಾರ ಲೋಕಾಚಾರದ ವಿಷಯದಲ್ಲಿ ಸಾಕಷ್ಟು ಪ್ರಾಜ್ಞಳಾದ ನನ್ನ ಅವ್ವನ ಅರಿವಿಗೂ ಕಡೆಯವರೆಗೆ ಬರದೆ ಹೋಯಿತು ಅಂದರೆ ತಿಪ್ಪಣ್ಣ ತನ್ನ ಕಾಯಕದಲ್ಲಿ ಎಂತಹ ಕುಶಲಕರ್ಮಿ, ಸಿದ್ಧಹಸ್ತನಾಗಿದ್ದ ಎನ್ನುವುದನ್ನು ಸುಲಭದಲ್ಲಿ ಊಹಿಸಬಹುದು. ಎರಡು ವರ್ಷಗಳ ಕಾಲ ತನ್ನ ಸತತ ಸಾಧನೆಯಿಂದ ದುರ್ಗದ ಹುಡುಗಿಯೊಂದಿಗೆ ನನ್ನ ಚಿಕ್ಕಪ್ಪನ ಮದುವೆಯನ್ನು ಈಡೇರಿಸುವುದರಲ್ಲಿ ಕೊನೆಗೂ ಸಾಫಲ್ಯ ಸಾಧಿಸಿದ ತಿಪ್ಪಣ್ಣ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸುವ ವಿಷಯದಲ್ಲಿ ಪೂರ್ಣನಂಬಿಕೆ ಇಟ್ಟವನು. ನನ್ನ ಚಿಕ್ಕಪ್ಪನ ಮದುವೆ ಮುಖಾಂತರ ತನ್ನ ದಲ್ಲಾಳಿ ಕಾರ್ಯಕ್ಷೇತ್ರವನ್ನು ನಮ್ಮ ಊರಿಗೆ ಯಶಸ್ವಿಯಾಗಿ ವಿಸ್ತರಿಸಿದನಲ್ಲದೇ ತನ್ನ ಕಿರೀಟಕ್ಕೆ ಸಾಧನೆಯ ಮತ್ತೊಂದು ಗರಿಯನ್ನು ಸಿಕ್ಕಿಸಿಕೊಂಡ.

ತಿಪ್ಪಣ್ಣ ನಾನು ನೋಡಿದ ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳಲ್ಲಿಯೇ ಈಡುಜೋಡಿಲ್ಲದ ಮಾತುಗಾರ. “ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡುತ್ತಾನೆ” ಎನ್ನುವ ನುಡಿಗಟ್ಟು ಈತನನ್ನು ನೋಡಿಯೇ ಹುಟ್ಟಿರಬೇಕು ಅಥವಾ ತಿಪ್ಪಣ್ಣನಿಗಿಂತ ಮೊದಲೇ ಈ ನುಡಿಗಟ್ಟು ಚಾಲ್ತಿಯಲ್ಲಿ ಇತ್ತು ಎಂದಾದರೆ ತಿಪ್ಪಣ್ಣನ ವಿಷಯದಲ್ಲಿ ಇದು ಹೊಂದಾಣಿಕೆಯಾದಷ್ಟು ಬೇರೆ ಯಾವ ಪ್ರಭೂತಿಯ ವಿಷಯದಲ್ಲೂ ಹೊಂದಾಣಿಕೆಯಾಗದು. ಎಂತಹವರನ್ನೂ, ಅದರಲ್ಲೂ ವಿಶೇಷವಾಗಿ, ಸ್ತ್ರೀ ಕುಲವನ್ನು, ಮರುಳು ಮಾಡುವಂತೆ ಮಾತನಾಡುವುದು ತಿಪ್ಪಣ್ಣನಿಗೆ ದೈವದತ್ತ ಬಳುವಳಿಯಾಗಿ ಬಂದ ಕಲೆಯೇ ಹೌದು. “ಮಾತನಾಡಿದರೆ ಮುತ್ತಿನ ಹಾರದ ಹಾಗಿರಬೇಕು” ಎನ್ನುವ ಮಾತಿನಂತೆ ತಿಪ್ಪಣ್ಣ ಮಾತನಾಡುವಾಗ ಮುತ್ತುಗಳ ಮಳೆಯೇ ಸುರಿಯುತ್ತಿತ್ತು. ಪ್ರತೀ ಮಾತನ್ನು ತೂಕಕ್ಕೆ ಹಾಕಿ, ತನ್ನದೇ ಆದ ಘನಗಾಂಭೀರ್ಯ ಶೈಲಿಯಲ್ಲಿ, ಶಾಂತಸ್ವರ ಸಮೇತನಾದ ತಿಪ್ಪಣ್ಣ ವಿಷಯದ ಪ್ರಸ್ತಾವನೆಯನ್ನು ಮಂಡಿಸುತ್ತಾ ಸಾಗುತ್ತಿದ್ದರೆ ಆತನ ಮುಂದೆ ಕುಳಿತವರು ಆತನಾಡುತ್ತಿದ್ದ ಮಾತುಗಳಿಗೆ ಹಾವಾಡಿಗನ ಪುಂಗಿಗೆ ತಲೆದೂಗುವ ನಾಗರನಂತೆ ತಲೆಯಾಡಿಸದೆ ಬೇರೆ ಗತ್ಯಂತರವಿರಲಿಲ್ಲ. ತಿಪ್ಪಣ್ಣನ ಮಾತುಗಾರಿಕೆಯ ಕೌಶಲ್ಯಕ್ಕೆ ಕವಿಕಲ್ಪನೆಯ ಭೃಂಗವೇನಾದರೂ ಸಾಥ್ ನೀಡಿದ್ದಲ್ಲಿ, ತಿಪ್ಪಣ್ಣನ ರೂಪದಲ್ಲಿ ಕನ್ನಡ ನಾಟಕಲೋಕಕ್ಕೆ ಒಬ್ಬ ಶೇಕ್ಸ್ಪಿಯರ್ ಲಭ್ಯವಾಗುತ್ತಿದ್ದ. ಅಂತಹ ನಾಟಕೀಯ, ಬಣ್ಣದ, ಕೇಳುಗರನ್ನು ರೋಮಾಂಚನಗೊಳಿಸುವ, ಎಂದೂ ಖಾಲಿಯಾಗದ ಮಾತುಗಳ ಗಣಿ ಮತ್ತು ಧಣಿ ಆತ. ಎಂತಹವರನ್ನೂ ತನ್ನ ಮಾತುಕತೆಯ ಜಾಲದಲ್ಲಿ ಸುಲಭದಲ್ಲಿ ಬಂಧಿಯಾಗಿಸುತ್ತಿದ್ದ ತಿಪ್ಪಣ್ಣನ ಎದುರು ಮಾತುಗಾರಿಕೆಯಲ್ಲಿ ಗೆದ್ದೆ ಎಂದು ಎದೆತಟ್ಟಿ ಹೇಳಿಕೊಳ್ಳುವ ಯಾವ ವ್ಯಕ್ತಿಯೂ ನಮ್ಮ ಊರಿನ ನೂರು ಕಿಲೋಮೀಟರ್ ಸುತ್ತಳತೆಯಲ್ಲಿಯೇ ಇರಲಿಲ್ಲ ಎನ್ನುವುದು ಅತಿಶಯೋಕ್ತಿಯಾಗಿರಲಿಲ್ಲ. ತನ್ನ ಈ ವಾಕ್ಚಾತುರ್ಯದ ಭಲೇಭಾತಿ ಪರಿಚಯವಿದ್ದ ತಿಪ್ಪಣ್ಣ ಬಹಳ ಸಣ್ಣ ಪ್ರಾಯದಲ್ಲಿಯೇ ತನ್ನ ಮೂವತ್ತು ಎಕರೆ ಖುಷ್ಕಿ ಜಮೀನಿನ ಬೇಸಾಯವನ್ನು ಅಣ್ಣ ಮತ್ತು ಆತನ ಮಕ್ಕಳಿಗೆ ವಹಿಸಿ, ತಾನು ಮಾತ್ರ ಶ್ವೇತಾಂಬರಿಯಾಗಿ, ಸುತ್ತಮುತ್ತಲ ಹತ್ತೂರುಗಳಲ್ಲಿ ಹೆಣ್ಣುಗಂಡುಗಳ ಸಂಬಂಧ ಕುದುರಿಸುವ ಕಲ್ಯಾಣಕಾರಿ ಕೆಲಸಕ್ಕೆ ಮೊದಲಾಗಿದ್ದ. ಕಾಲಕ್ರಮೇಣ ಈ ಕಸುಬಿನಲ್ಲಿ ಒಂದು ವೃತ್ತಿಯನ್ನೂ ಅರಸಿದ್ದ ತಿಪ್ಪಣ್ಣ ಹುಡುಗಿಯವರ ಕಡೆಯಿಂದ ಭರ್ಜರಿಯಾಗಿ ಕಮಿಷನ್ , ಚಿನ್ನದ ಆಭರಣಗಳ ಉಡುಗೊರೆ ಪಡೆಯುತ್ತಿದ್ದ ಎನ್ನುವುದು ಜನಜನಿತವಾದ ಮಾತಾಗಿತ್ತು. ಕೇವಲ ಲಿಂಗಾಯತ ಮನೆಗಳ ಮಟ್ಟಿಗೆ ಮಾತ್ರ ತನ್ನ ದಲ್ಲಾಳಿ ವ್ಯವಹಾರವನ್ನು ಸೀಮಿತಗೊಳಿಸಿದ್ದ ತಿಪ್ಪಣ್ಣ ಸಂಬಂಧಗಳ ಗಟ್ಟಿಬೆಸುಗೆಗಳನ್ನು ಹಾಕಲು ಊರ ಲಿಂಗಾಯತರ ನೂರೈವತ್ತಕ್ಕೂ ಹೆಚ್ಚಿನ ಸಂಖ್ಯೆಯ ಮನೆಗಳ ಮೊರೆಹೋಗಿದ್ದ. ತಿಪ್ಪಣ್ಣ ನಮ್ಮ ಫಾಸಲೆಯ ಐವತ್ತಕ್ಕೂ ಮೀರಿದ ಹಳ್ಳಿಗಳಲ್ಲಿ ವಿವಾಹಯೋಗ್ಯ ವೀರಶೈವ ಹುಡುಗ ಹುಡುಗಿಯರ ಸಂಪೂರ್ಣ ಮಾಹಿತಿಯನ್ನು, ಅವರ ಮೂರು ತಲೆಮಾರುಗಳ ಕುಲಪ್ರವರದೊಟ್ಟಿಗೆ, ತನ್ನ ತಲೆಯಲ್ಲಿ ಹುದುಗಿಸಿಟ್ಟುಕೊಂಡು, ನಡೆದಾಡುವ “ಮ್ಯಾರೇಜ್ ಬ್ಯೂರೋ” ಎಂದೆನಿಸಿದ್ದ. ತನ್ನ ಕೆಲಸದಲ್ಲಿ ಅತೀವ ಮಟ್ಟದ ವೃತ್ತಿಪರತೆಯನ್ನು ಧಾರಾಳವಾಗಿ ಪ್ರದರ್ಶಿಸುತ್ತಿದ್ದ ತಿಪ್ಪಣ್ಣ ಒಮ್ಮೆ ತಾನು ಮದುವೆ ವಿಚಾರವಾಗಿ ಎಡತಾಕುತ್ತಿದ್ದ ಮನೆಗಳಲ್ಲಿ ಮದುವೆ ಸಂಪನ್ನವಾಯಿತು ಎಂದರೆ ಸುತಾರಾಂ ಎಂದರೂ ಆ ಮನೆಗಳ ಕಡೆ ತಲೆ ಮತ್ತೆ ಹಾಕದೆ ಹೊಸ ಶಿಕಾರಿಗಳನ್ನ ಹುಡುಕುತ್ತಾ ಹೊರಡುತ್ತಿದ್ದ. ಮತ್ತಷ್ಟು ಹೊಸ ಸಂಬಂಧಗಳನ್ನು ಬೆಸೆಯುವ ಸತತ ಅನ್ವೇಷಣೆಯಲ್ಲಿ ಸದಾ ನಿರತನಾಗಿರುತ್ತಿದ್ದ ತಿಪ್ಪಣ್ಣ ಎಂದೂ ತಾನು ಮಾಡಿದ ಸಂಬಂಧಗಳ ವಿವಾಹಗಳ ಉತ್ತರಾರ್ಧದ ಸ್ಥಿತಿಗತಿಗಳ ಬಗ್ಗೆ ತಲೆ ಕೆಡಿಸಿಕೊಂಡವನೆ ಅಲ್ಲ. “ಮಾರಾಟದ ನಂತರದ ಸೇವೆ”, ಇದನ್ನು ಆಂಗ್ಲ ಭಾಷೆಯಲ್ಲಿ “ಆಸ್ (ASS)” ಎಂದೂ ಕರೆಯುತ್ತಾರೆ, ತಿಪ್ಪಣ್ಣನ ಶಬ್ದಕೋಶದ ಭಾಗವಾಗದೇ ಉಳಿದ ಪದ. ತಿಪ್ಪಣ್ಣ “ಆಸ್” ಪದದ ಇಂಗ್ಲೀಷ್ ಅರ್ಥವಾದ “ಕತ್ತೆ”ಯಷ್ಟೇ ಬೆಲೆಯನ್ನು ತಾನು ಬೆಸೆದ ಸಂಬಂಧಗಳ ವಿವಾಹೋತ್ತರ ಸ್ಥಿತಿಗತಿಗಳಿಗೆ ಕಟ್ಟಿದಾತ. ತಿಪ್ಪಣ್ಣನ ಸಂಪರ್ಕಕ್ಕೆ ಬಂದ ಒಂದೂವರೆ ದಶಕದ ನಂತರ, ನನ್ನ ಉಚ್ಚವ್ಯಾಸಂಗದ ವೇಳೆ, ಮ್ಯಾನೇಜ್ಮೆಂಟ್ ನ ತರಗತಿಗಳಲ್ಲಿ ಕಲಿಯುವ ಹೊತ್ತು, ತನ್ನ ಕಾಯಕದಲ್ಲಿ ಮ್ಯಾನೇಜ್ಮೆಂಟ್ ನ ಹಲವಾರು ತತ್ವಗಳನ್ನು ವೈಜ್ಞಾನಿಕ ರೀತಿಯಲ್ಲಿ ತನ್ನ ಸಮಯದಲ್ಲಿಯೇ ಅಳವಡಿಸಿಕೊಂಡಿದ್ದ ತಿಪ್ಪಣ್ಣ ಎಂತಹ ಅಭಿಜಾತ ಪ್ರತಿಭೆ ಎನ್ನುವ ವಿಷಯ ನನ್ನ ಗಮನಕ್ಕೆ ನಿಧಾನವಾಗಿ ಬರುತ್ತಾ ಹೋಯಿತು. ಉದಾಹರಣೆಗಾಗಿ ನಾವು ಮ್ಯಾನೇಜ್ಮೆಂಟ್ ಪರಿಭಾಷೆಯಲ್ಲಿ, ಒಂದು ಸಂಸ್ಥೆಗೆ ಮಾರಾಟ ಮಾಡುವ ಸಂದರ್ಭದಲ್ಲಿ, ಡಿ.ಎಂ.ಎ.(DMA) ಎನ್ನುವ ಒಂದು ಪದಪುಂಜವನ್ನು ಅತಿಯಾಗಿ ಬಳಸುತ್ತೇವೆ. ಇದರ ಅರ್ಥ “ನಿರ್ಧಾರ ತೆಗೆದುಕೊಳ್ಳುವ ಅಧಿಕಾರ”. ಒಂದು ಸಂಸ್ಥೆಗೆ ಮಾರಾಟ ಮಾಡುವಾಗ ಈ ಅಂಶದ ಅರಿವು ಮಾರಾಟಗಾರರಿಗೆ ಇರಬೇಕಾಗಿರುವುದು ಅತ್ಯವಶ್ಯಕ. ತಿಪ್ಪಣ್ಣ ಕೂಡ ಈ ಪದದ ಆಳದ ಅರ್ಥವನ್ನು ಗ್ರಹಿಸಿ ಅದರ ಸದ್ಬಳಕೆಯನ್ನು ತನ್ನ ಮದುವೆಯ ದಲ್ಲಾಳಿಕಾರ್ಯದಲ್ಲಿ ಯಥೇಚ್ಚರೂಪದಲ್ಲಿ ಮಾಡುತ್ತಿದ್ದ. ಯಾವುದೇ ಮನೆ ಹೊಕ್ಕುವ ಮೊದಲು ಆ ಮನೆವಾರ್ತೆಗಳಲ್ಲಿ, ಸಾಮಾನ್ಯರೂಪದಲ್ಲಿ ಮತ್ತು ವಿಶೇಷವಾಗಿ ಮದುವೆ ಸಂದರ್ಭಗಳಲ್ಲಿ ಮನೆಯ ಯಾವ ಸದಸ್ಯರ ವಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಅಡಗಿರುತ್ತದೆ ಎನ್ನುವ ಅಂಶದ ಆಮೂಲಾಗ್ರ ಸಂಶೋಧನೆಯನ್ನು ಮಾಡಿಯೇ ಆ ಮನೆಯ ಹೊಸ್ತಿಲು ಮೆಟ್ಟುತ್ತಿದ್ದ. ಹೀಗಾಗಿಯೇ ನನ್ನ ಅವ್ವ ಮತ್ತು ಅಮ್ಮನನ್ನು ಅತಿ ಹೆಚ್ಚಿನ ಪ್ರಾಧ್ಯಾನ್ಯತೆ ಕೊಟ್ಟು ಅವರ ಬಳಿ ಸಂಬಂಧಗಳ ಪ್ರಸ್ತಾವ ಮಾಡಿದ್ದ. ನನ್ನ ತಾತ ಮತ್ತು ಅಪ್ಪನನ್ನು ವಿವಾಹದ ವಿಷಯಗಳಲ್ಲಿ ಎಂದೂ ಗಂಭೀರರೂಪದಲ್ಲಿ ಗಣನೆಗೆ ತೆಗೆದುಕೊಳ್ಳದ ತಿಪ್ಪಣ್ಣ ಇವರ ಉತ್ಸವಮೂರ್ತಿಯಂತಹ ಸ್ವರೂಪಗಳ ಬಗ್ಗೆ ಕೂಲಂಕುಷ ರೀತಿಯಲ್ಲಿ ಅರಿತವನಾಗಿದ್ದ. ಡಿ. ಎಂ. ಎ. ಗುರುತಿಸುವ ವಿಚಾರದಲ್ಲಿ ತಿಪ್ಪಣ್ಣ ಎಂದೂ ಎಡವಿದವನೆ ಅಲ್ಲ. ಒಂದು ಸಂಬಂಧ ಕುದುರಿಸುವ ಹಿಂದೆ ತಿಪ್ಪಣ್ಣ ಬಿದ್ದ ಎಂದರೆ ಮುಗಿಯಿತು, ಹಿಡಿದ ಕೆಲಸವನ್ನು ಅರ್ಥಾತ್ ಮದುವೆಯನ್ನು ಮುಗಿಸಿ, ಭರ್ಜರಿ ಮದುವೆ ಊಟವನ್ನು ಸವಿಯದೆ ಬಿಟ್ಟವನೆ ಅಲ್ಲ.

ತಿಪ್ಪಣ್ಣ ಮದುವೆಗಳ ವಿಷಯದಲ್ಲಿ ಗಿನ್ನೆಸ್ ದಾಖಲೆಗೆ ಸಕಲ ರೀತಿಯಲ್ಲಿಯೂ ಅರ್ಹನಾದವನು ಅನ್ನಬಹುದು. ಗಿನ್ನೆಸ್ ದಾಖಲೆಗಳಲ್ಲಿ ಅತಿ ಹೆಚ್ಚು ವಿವಾಹಗಳಿಗೆ ಹಾಜರಾತಿ ಹಾಕಿದ ವ್ಯಕ್ತಿಗಳ ದಾಖಲೆ ಇದೆಯೋ ಇಲ್ಲವೋ ತಿಳಿಯೆ. ಆದರೆ ಈ ದಾಖಲೆಯನ್ನು ಗಿನ್ನೆಸ್ ಪುಸ್ತಕಕ್ಕೆ ಸೇರಿಸುವ ಪ್ರಮೇಯ ಬಂದ ಹೊತ್ತು ಕೂನಬೇವು ಗಂಗಮ್ಮಗಳ ತಿಪ್ಪಣ್ಣನ ದಾವೆಯನ್ನು ಗಿನ್ನೆಸ್ ಸಂಸ್ಥಾಪಕರು ಕಡೆಗಣಿಸುವ ಹಾಗಿಯೇ ಇಲ್ಲ. ವರ್ಷದ ಮದುವೆ ಋತುವಿನ ಎಲ್ಲಾ ದಿನಗಳಲ್ಲಿ ಒಂದಿಲ್ಲೊಂದು ಮದುವೆಗೆ ತಪ್ಪದೇ ತಿಪ್ಪಣ್ಣ ಹಾಜರಾಗುತ್ತಿದ್ದ. ಅಷ್ಟೇ ಅಲ್ಲದೆ ಈ ಕಾಲದ ಬಹುತೇಕ ದಿನಗಳಲ್ಲಿ, ತಿಪ್ಪಣ್ಣ ಒಂದು ಮದುವೆಗಿಂತ ಹೆಚ್ಚಿನ ಮದುವೆಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ ನಡೆದ ಮದುವೆಗಳೂ ಸೇರಿದಂತೆ, ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಲಭ್ಯವಿದ್ದ ಸಾರಿಗೆ ವ್ಯವಸ್ಥೆಗಳಲ್ಲಿ ಸಂಚರಿಸುತ್ತಾ ಭಾಗವಹಿಸುತ್ತಿದ್ದ. ಹೀಗಾಗಿ ಒಂದು ದಿನದಲ್ಲಿ ಹೆಚ್ಚು ಸಂಖ್ಯೆಯ ಮದುವೆಗಳಲ್ಲಿ ಹಾಜರಾತಿ ಕೊಟ್ಟ ಮತ್ತೊಂದು ಗಿನ್ನೆಸ್ ದಾಖಲೆಯೂ ಒಕ್ಕಣಿಕೆಯಾದಲ್ಲಿ ಅದೂ ತಿಪ್ಪಣ್ಣನ ಹೆಸರಿನಲ್ಲಿಯೇ ನಮೂದಾಗಬೇಕಾಗುತ್ತದೆ. ಸ್ಮಾರ್ಟ್ ಫೋನ್, ಕಂಪ್ಯೂಟರ್, ಡಿಜಿಟಲ್ ಕ್ಯಾಲೆಂಡರ್ ಇಲ್ಲದ ಆ ದಿನಮಾನದಲ್ಲಿ, ತಾನು ದಿನವೊಂದರಲ್ಲಿ ಯಾವ ಯಾವ ಮದುವೆಗಳಿಗೆ, ಎಲ್ಲೆಲ್ಲಿ, ಯಾವ ಯಾವ ವೇಳೆಗಳಲ್ಲಿ, ಯಾವ ಯಾವ ಛತ್ರಗಳಲ್ಲಿ ಹಾಜರಾಗಬೇಕು ಎನ್ನುವ ವಿವರಗಳನ್ನು ತಿಪ್ಪಣ್ಣ ಅದು ಹೇಗೆ ತನ್ನ ಹೆಚ್ಚಿನ ಮಟ್ಟದಲ್ಲಿ ಓದುಬರಹಕ್ಕೆ ತೆರೆದುಕೊಳ್ಳದ ಮಸ್ತಕದಲ್ಲಿ ಅಡಗಿಸಿಟ್ಟುಕೊಳ್ಳುತ್ತಿದ್ದ ಎನ್ನುವುದು ನನಗೆ ಇಂದೂ ಕುತೂಹಲದ ಸಂಗತಿಯಾಗಿಯೇ ಉಳಿದಿದೆ. ಇದೊಂದು ಬಾಂಬೆಯ ಡಬ್ಬಾವಾಲಾಗಳ ಕಥೆಗೆ ಸಮಾನಾಂತರವಾದದ್ದು. ಲಕ್ಷಾಂತರ ಊಟದ ಡಬ್ಬಿಗಳನ್ನು ಅವುಗಳ ಸರಿಯಾದ ಮಾಲೀಕರಿಗೆ, ಕ್ಲುಪ್ತ ಸಮಯಕ್ಕೆ ತಲುಪಿಸಲು ಬಾಂಬೆಯಲ್ಲಿ ಈ ಕೆಲಸಕ್ಕೆಂದು ನಿಯೋಜಿತರಾಗಿರುವ ಡಬ್ಬಾವಾಲಾ ಮಂದಿ ಅದು ಹೇಗೆ ಒಂದು ಸಣ್ಣ ತಪ್ಪಿಗೂ ಎಡೆಕೊಡದೆ ತಮ್ಮ ಕಾರ್ಯವನ್ನು ದಶಕಗಳಿಂದ ನಿಭಾಯಿಸುತ್ತಾರೆ ಎನ್ನುವುದು ಅನೇಕ ವಿಶ್ವವಿದ್ಯಾನಿಲಯಗಳ ಸಂಶೋಧನೆಯ ವಿಷಯವಾಗಿದ್ದಲ್ಲಿ, ತಿಪ್ಪಣ್ಣ ತಾನು ಭಾಗವಹಿಸುವ ಮದುವೆಗಳ, ಸ್ಥಳಗಳ ಚಾಚೂ ತಪ್ಪದ ವಿವರಗಳನ್ನು ತನ್ನ ಮೆದುಳಿನಲ್ಲಿ ಅದು ಹೇಗೆ ಸಂಗ್ರಹಿಸಿಟ್ಟುಕೊಂಡಿರುತ್ತಿದ್ದ ಎನ್ನುವುದೂ ಯಾರಾದರೂ ಆಸಕ್ತರ ಡಾಕ್ಟರೇಟ್ ಪ್ರಬಂಧದ ವಸ್ತುವಾಗಬಲ್ಲದು. ತಾನು ಭಾಗವಹಿಸುವ ಎಲ್ಲಾ ಮದುವೆಗಳಲ್ಲಿಯೂ, ವರನ ಕಡೆಯವನೆಂದೋ, ವಧುವಿನ ಕಡೆಯವನೆಂದೋ ಪರಿಚಯಿಸಿಕೊಂಡು, ಇದ್ದ ಇಲ್ಲದ, ಸಲ್ಲುವ ಸಲ್ಲದ ನೆಂಟಿಸ್ತನಗಳ ಭದ್ರಬಲೆ ಹೆಣೆಯುತ್ತಾ, ಅಲ್ಲಿ ನೆರೆದಿದ್ದ ತನಗೆ ಪರಿಚಯವಿದ್ದ, ಪರಿಚಯವೇ ಇಲ್ಲದ ವ್ಯಕ್ತಿಗಳ ಜೊತೆ ತಾರಕಕ್ಕೇರಿದ ಸ್ವರದಲ್ಲಿ ಕಾಡುಹರಟೆ ಹೊಡೆಯುತ್ತಾ, ನಗು, ಕೇಕೆಗಳನ್ನು ಹಾಕುತ್ತಾ, ಹಾಸ್ಯದ ಪಟಾಕಿಗಳನ್ನು ಸಿಡಿಸುತ್ತಾ, ಎಷ್ಟೋ ವರ್ಷಗಳಿಂದ ಕೇವಲ ಪರಿಚಯವಿರುವ ಆಪತ್ಬಾಂಧವನಂತೆ ನಟಿಸುತ್ತಾ, ಮದುವೆಯ ಅಂಗಣವನ್ನು ಖುಷಿಯಿಂದ ತುಂಬುತ್ತಾ, ವಿವಾಹದ ಸುಗ್ರಾಸಭೋಜನವನ್ನು ಸವಿಯುತ್ತಿದ್ದ ತಿಪ್ಪಣ್ಣ ತನ್ನ ಮನೆಯ ಅನ್ನವನ್ನು ಈ ಕಾರಣವರ್ಷ ದಶಕಗಳ ಕಾಲ ವರ್ಜಿಸಿದವನೆ. ದಿನವೂ ತಿನ್ನುವ ಭೂರಿಭೋಜನ ತಿಪ್ಪಣ್ಣನ ನಾಲಿಗೆಯ ರುಚಿಯನ್ನು ಹಾಳುಗೆಡವದೇ ಇದ್ದಿದ್ದೂ ಮತ್ತೊಂದು ಸೋಜಿಗದ ಸಂಗತಿಯೇ. ಎರಡು ದಿನ ಸಿಹಿ ತಿಂದರೆ ಮೂರನೇ ದಿನ ಮುದ್ದೆ ಬಯಸುವ ನಮ್ಮ ನಾಲಿಗೆಗಳಿಗೂ, ದಿನವೂ ಸಿಹಿಭೋಜನವನ್ನು ಉಂಡೂ ಮತ್ತಷ್ಟು ಸುಗ್ರಾಸ ಭೋಜನಕ್ಕೆ ಹಾತೊರೆಯುತ್ತಿದ್ದ ತಿಪ್ಪಣ್ಣನ ನಾಲಿಗೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಹೀಗೆ ಮಿತಿಮೀರಿದ ಸಿಹಿಯನ್ನು ಸವಿಯುತ್ತಿದ್ದ ಎನ್ನುವ ಕಾರಣಕ್ಕೋ ಏನೋ ಕೇವಲ ಸಿಹಿಯಾದ ಪದಪುಂಜಗಳಷ್ಟೇ ತಿಪ್ಪಣ್ಣನ ಬಾಯಿಂದ ಹೊರಬರುತ್ತಿದ್ದವು ಎನ್ನುವುದೂ ಮತ್ತೊಂದು ಡಾಕ್ಟರೇಟ್ ಸಂಶೋಧನೆಯ ವಿಷಯವಾಗಬಲ್ಲದು. ಅಣ್ಣನ ಮಗ ವಿಶ್ವನಾಥ, ತನ್ನ ತಮ್ಮಂದಿರ ಜೊತೆಗೂಡಿ, ಹೊಲಗಳಲ್ಲಿ ಬೆವರು ಸುರಿಸುತ್ತಾ, ತಲೆಗೆ ಕಟ್ಟಿದ ಟವೆಲ್ ಮೂಲಕ ಬೆವರನ್ನು ಒರೆಸುತ್ತಾ ಕೃಷಿಕೆಲಸ ಮುಂದುವರೆಸುತ್ತಿದ್ದರೆ, ಕಲ್ಯಾಣಮಂಟಪದ ಊಟದ ಹಾಲ್ ಗಳಲ್ಲಿ ಮದುವೆಯ ಭೋಜನ ಸವಿಯುತ್ತಾ, ಜನಜಂಗುಳಿಯ ಕಾರಣ ಕಿತ್ತು ಬರುತ್ತಿದ್ದ ಬೆವರನ್ನು ತನ್ನ ಶಾಲಿನ ಮೂಲಕ ಒರಸುತ್ತಾ ತನ್ನ ಕೆಲಸವನ್ನು ಥೇಟ್ ಅದೇ ರೀತಿ ಮುಂದುವರಿಸುತ್ತಿದ್ದ ತಿಪ್ಪಣ್ಣನಿಗೂ ಇದ್ದ ಯಾವುದಾದರೂ ಒಂದು ಸಾಮ್ಯತೆಯನ್ನು ಓದುಗರು ಗಮನಿಸಿದಲ್ಲಿ ನನಗೂ ತಿಳಿಸತಕ್ಕದ್ದು.

ತನ್ನ ಜೀವಿತದ ಬಹುತೇಕ ವರ್ಷಗಳ ಕಾಲ ತನ್ನ ವೈಯಕ್ತಿಕ ಬದುಕನ್ನು ಮೂರಾಬಟ್ಟೆಯಾಗಿಸಿಕೊಂಡು ಕಂಡವರ ಸಂಬಂಧಗಳ ಬೆಸುಗೆ ಹಾಕುವುದರಲ್ಲಿಯೇ ತಲ್ಲೀನನಾದ ತಿಪ್ಪಣ್ಣ ಸಂಸಾರದ ವಿಷಯದಲ್ಲಿ ಅಂತಹಾ ಸುಖಿಯಾಗಿರಲಿಲ್ಲ. ಇದ್ದ ಒಬ್ಬನೇ ಮಗ ಮಲ್ಲಿಕಾರ್ಜುನ ನಮ್ಮೂರಿನ ಹತ್ತನೇ ತರಗತಿಯನ್ನು ಪಾಸುಮಾಡಲು ಮೂರು ವರ್ಷಗಳ ಸಮಯ ತೆಗೆದುಕೊಂಡಾಗ ಕಂಗಾಲಾದ ತಿಪ್ಪಣ್ಣ ನನ್ನ ಅಪ್ಪನ ಬಳಿ ತನ್ನ ಮಗನನ್ನು ಕರೆದುಕೊಂಡು ಬಂದವನು, “ಚಂದ್ರಣ್ಣ, ನನ್ನ ಮಗ ಮಲ್ಲಿಯನ್ನ ನಿನ್ನ ಮಡಿಲಿಗೆ ಹಾಕುತ್ತಿದ್ದೇನೆ. ಇವನನ್ನು ಎಸ್ಸೆಸ್ಸೆಲ್ಸಿ ಪಾಸುಮಾಡಿಸುವುದು, ಬಿಡುವುದು ನಿನಗೆ ಬಿಟ್ಟಿದ್ದು” ಎಂದು ಹೇಳಿ ದುರ್ದಾನ ತೆಗೆದುಕೊಂಡವನಂತೆ ಹೊರಟುಹೋಗಿದ್ದ. ಮುಂದಿನ ಒಂದು ವರ್ಷದ ಕಾಲ ದಿನವೂ ಕೂನಬೇವಿನಿಂದ ಬಂದು ಹೋಗಿ ಮಾಡುತ್ತಾ ನನ್ನ ಅಪ್ಪನ ಬಳಿ ಶಿಷ್ಯವೃತ್ತಿ ನಡೆಸಿದ ಮಲ್ಲಿಕಾರ್ಜುನ ಕೊನೆಗೂ ಆ ವರ್ಷ ಹತ್ತನೇ ಇಯತ್ತೆ ಪಾಸುಮಾಡಿದ್ದು ತಿಪ್ಪಣ್ಣನ ಸಂತೋಷವನ್ನು ಮುಗಿಲು ಮುಟ್ಟಿಸಿತ್ತು. “ಚಂದ್ರಣ್ಣ, ಮಲ್ಲಿ ನನ್ನ ಮಗ ಅಲ್ಲ, ನಿನ್ನ ಮಗನಿದ್ದ ಹಾಗೆ” ಎನ್ನುವ ತನ್ನ ಎಂದಿನ ಶೈಲಿಯ ಬಣ್ಣದ ಮಾತುಗಳನ್ನು ಆಡಿ, ನನ್ನ ಅಪ್ಪನ ಟ್ಯೂಶನ್ ಫೀಯನ್ನೂ ಪೀಕದೆ ಹೋದ ತಿಪ್ಪಣ್ಣ ಮುಂದೊಮ್ಮೆ ಮಗ ಮಲ್ಲಿಯ ಮದುವೆಯ ಆಮಂತ್ರಣಪತ್ರಿಕೆ ಕೊಡಲು ದಾವಣಗೆರೆಯ ನಮ್ಮ ಮನೆಗೆ ಬಂದಾಗ “ಚಂದ್ರಣ್ಣ, ನಿನ್ನ ಮಗನ ಮದುವೆ, ಲಗ್ನಪತ್ರಿಕೆ ಕೊಡಲು ಬಂದಿದ್ದೇನೆ” ಎಂದು ಬಾಗಿಲಿನಲ್ಲಿಯೇ ಕೂಗಿ ಹೇಳುತ್ತಾ ಮನೆ ಪ್ರವೇಶಿಸಲು, ನಾನೂ ಆ ಸಮಯಕ್ಕೆ ಮದುವೆ ವಯಸ್ಸಿಗೆ ಬಂದು, ಬೆಂಗಳೂರಿನ ಸುತ್ತಮುತ್ತ ಕಣ್ಯಾನ್ವೇಷಣೆಯಲ್ಲಿ ತೊಡಗಿದ್ದ ಕಾರಣ, ನನ್ನ ಅಪ್ಪ ಮತ್ತು ಅಲ್ಲಿಯೇ ಇದ್ದ ಅಮ್ಮನ ಎದೆಗಳು ಕ್ಷಣ ಕಾಲ ಬಡಿತವನ್ನು ಮರೆತ ಸಂಗತಿಯನ್ನು ನನ್ನ ಅಮ್ಮ ಇರುವ ದಿನಗಳ ಕೊನೆಯವರೆಗೂ ನೆನಸಿಕೊಂಡು ಹೊಟ್ಟೆ ಉಣ್ಣಾಗುವಂತೆ ನಕ್ಕಿದ್ದಿದೆ.

ತಿಪ್ಪಣ್ಣನ ಬದುಕು ಕೊನೆಯ ಕೆಲವರ್ಷಗಳಲ್ಲಿ ಹೇಳಿಕೊಳ್ಳುವಷ್ಟು ಸುಖವಾಗಿರಲಿಲ್ಲ. ತಿಪ್ಪಣ್ಣನ ಅವಿರತ ಶೋಷಣೆಯಿಂದ ರೋಸಿಹೋಗಿದ್ದ ಆತನ ಅಣ್ಣನ ಮಕ್ಕಳು ಆಸ್ತಿಯಲ್ಲಿ ಭಾಗವನ್ನು ತೆಗೆದುಕೊಂಡು ದೂರವಾದರು. ಮಗ ಮಲ್ಲಿ, ದೊಡ್ಡಪ್ಪನ ಮಕ್ಕಳು ಇರುವವರೆಗೆ ಹೊಲಗದ್ದೆಗಳ ಕಡೆಗೆ ತಲೆ ಹಾಕಿದವನಲ್ಲದ ಕಾರಣ, ತನ್ನ ಪಾಲಿಗೆ ಬಂದ ಜಮೀನನ್ನು ನಿಭಾಯಿಸಲು ಹೆಣಗಾಡತೊಡಗಿದ. ಹತ್ತಾರು ಊರುಗಳಲ್ಲಿ ಅಲೆದು ಕೊನೆಗೆ ದುರ್ಗದಿಂದ ಮಗನಿಗೆ ಮನಮೆಚ್ಚಿ ತಂದಿದ್ದ ಸೊಸೆ ಮಾವನನ್ನು ಸೇರದಾದಳು. ಹೆಂಡತಿಯ ಸೆರಗಿಗೆ ಗಂಟುಬಿದ್ದ ಮಲ್ಲಿ ತಿಪ್ಪಣ್ಣನನ್ನು ಮನೆಯಿಂದ ಹೊರಹಾಕಿ ಊರ ಹೊರಗಿನ ಹೊಲದಲ್ಲಿದ್ದ ಸಣ್ಣ ಗುಡಿಸಿಲೊಂದರಲ್ಲಿ ಇಟ್ಟ. ಊರು ಸುತ್ತುವ ತನ್ನ ಅಭ್ಯಾಸವನ್ನು ವಯಸ್ಸು ಮತ್ತು ಪರ್ಯಾಪ್ತ ಹಣ ಸಿಗದೇ ಇರುವ ಕಾರಣಕ್ಕೆ ಕೈಬಿಟ್ಟ ತಿಪ್ಪಣ್ಣ ವಿಲವಿಲ ಒದ್ದಾಡತೊಡಗಿದ. ಸುತ್ತಮುತ್ತಲ ಊರುಗಳ ವಿವಾಹ ಸಂಬಂಧಿತ ವಿಷಯಗಳ ಸಮಯಾಧಾರಿತ ಪ್ರಾಪ್ತತೆಯ ಕೊರತೆಯಿಂದ, ಪ್ರಾಣವಾಯುವಿನ ಅಭಾವದಿಂದ ನರಳುವ ಕೋವಿಡ್ ರೋಗಿಗಳ ಸ್ಥಿತಿ ತಿಪ್ಪಣ್ಣನದಾಯಿತು. ಕುಳಿತಲ್ಲಿ, ನಿಂತಲ್ಲಿ ಮದುವೆಯ ಸಂಭ್ರಮ ಕಣ್ಣಿಗೆ ಕಟ್ಟುತ್ತಿರಲು, ಸೊಸೆ ಮೂರೂ ಹೊತ್ತೂ ಕಳುಹಿಸುತ್ತಿದ್ದ ಜೋಳದ ಮುದ್ದೆ, ಬದನೇಕಾಯಿ ಯಾ ಟೊಮೋಟೊಕಾಯಿ ಚಟ್ನಿ ರುಚಿಸದೆ ಊಟ ಸೇರದಾಯಿತು. ಊಟ ಬಿಟ್ಟು ಎಷ್ಟೋ ದಿನಗಳನ್ನು ಹಸಿದ ಹೊಟ್ಟೆಯಲ್ಲಿಯೇ ದೂಡುವ ಪರಿಸ್ಥಿತಿಗೆ ಬಂದ ತಿಪ್ಪಣ್ಣನ ಸ್ಥಿತಿ ದಿನಕಳೆದಂತೆ ಹೆಚ್ಚು ಶೋಚನೀಯವಾಗುತ್ತಾ ಸಾಗಿತ್ತು. ನಾನು ನನ್ನ ಸೋದರ ಸಂಬಂಧಿ ಗಣೇಕಲ್ ವಹಿಲೇಶನ ಮದುವೆಯ ಸಂದರ್ಭದಲ್ಲಿ, ಊರಿನ ರಾಮಲಿಂಗ ಕಲ್ಯಾಣಮಂಟಪದಲ್ಲಿ, ಎರಡು ಸಾವಿರದ ಒಂದನೇ ಇಸವಿಯ ಆದಿಭಾಗದಲ್ಲಿ, ಕೊನೆಯ ಬಾರಿಗೆ ತಿಪ್ಪಣ್ಣನನ್ನು ಭೇಟಿಯಾಗಿದ್ದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಸೊರಗಿದ್ದ ತಿಪ್ಪಣ್ಣ ತನ್ನ ಗತಕಾಲದ ನೆರಳಾಗಿ ಮಾತ್ರವಷ್ಟೇ ಕಂಡುಬಂದಿದ್ದ. ವಹಿಲೇಶನ ಮದುವೆಯ ವಿಷಯವನ್ನು ಹೇಗೋ ತಿಳಿದುಕೊಂಡವನು, ತನ್ನನ್ನು ತಾನು ನಿಯತ್ರಿಸಲಾರದೆ, ಹೊಲದ ಮನೆಯಿಂದ ತಪ್ಪಿಸಿಕೊಂಡು, ಗೊಲ್ಲರಹಟ್ಟಿಯನ್ನು ಸೇರಿದವನು ನಡೆದುಕೊಂಡೇ ತುರುವನೂರಿಗೆ ಬಂದು ಸೇರಿದ್ದ. ಅಲ್ಲಲ್ಲಿ ಹರಿದು, ಹೊಲಿಗೆ ಹಾಕಿದ ಪಂಚೆ, ಅಲ್ಲಲ್ಲಿ ತೂತಾಗಿ, ತೇಪೆ ಹಾಕಿದ್ದ, ಇಸ್ತ್ರಿಯಿಲ್ಲದ ಶರ್ಟ್, ತಾವು ಒಂದು ಕಾಲದಲ್ಲಿ ಬಿಳಿಯಾಗಿದ್ದೆವು ಎನ್ನುವುದನ್ನು ತಮ್ಮ ಕಂದುಬಣ್ಣದ ಛಾಯೆಯ ಹಿನ್ನೆಲೆಯಲ್ಲಿ ನಿರೂಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿ ಸೋತಿದ್ದವು. ಸದಾ ಪಟಪಟ ಹರಳು ಹುರಿದಂತೆ ಮಾತನಾಡುತ್ತಾ, ಮಾತಿನ ಮುತ್ತುಗಳನ್ನು ಯಥೇಚ್ಚವಾಗಿ ಚೆಲ್ಲುತ್ತಿದ್ದ ತಿಪ್ಪಣ್ಣ ತನ್ನ ಎಂದಿನ ಶೈಲಿಯ ರೋಚಕ ಮಾತುಗಾರಿಕೆಗೆ ತಿಲಾಂಜಲಿ ಇಟ್ಟು ಮೌನದ ಮೊರೆಹೋಗಿದ್ದ. ಮದುವೆ ಮಂಟಪದ ಒಂದು ಮೂಲೆಯಲ್ಲಿ ಅಸೀನನಾಗಿ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ತಿಪ್ಪಣ್ಣನ ಕಣ್ಣಾಲಿಗಳು ಅಂದು ಅದ್ಯಾವ ಕಾರಣಕ್ಕೋ ತೇವಭರಿತವಾಗಿದ್ದವು. ದಿಕ್ಕು ತೋಚದವನಂತೆ ತಲೆ ಮೇಲೆ ಕೈಹೊತ್ತು ಕುಳಿತ ತಿಪ್ಪಣ್ಣನ ಆ ಶ್ರೇಣಿಯ ಮ್ಲಾನವದನ ಭಂಗಿಯನ್ನು ನಾನು ಎಂದೂ ಕಂಡವನೆ ಅಲ್ಲ. ಚಿರಪರಿಚಿತರಾದ ಅನೇಕ ವ್ಯಕ್ತಿಗಳು, ತಿಪ್ಪಣ್ಣ ಕುದುರಿಸಿದ ವಿವಾಹಬಂಧನದ ಜೋಡಿಗಳೂ ಸೇರಿದಂತೆ, ಅಲ್ಲಿ ನೆರೆದಿದ್ದ ಅನೇಕ ಅತಿಥಿ, ಆಮಂತ್ರಿತರು ತಿಪ್ಪಣ್ಣನನ್ನು ಕಂಡೂ, ಮಾತನಾಡಿಸುವ ಗೋಜಿಗೆ ಹೋಗದೇ, ಆತನನ್ನು ಕಂಡೇ ಇಲ್ಲದವರಂತೆ, ಮದುವೆ ಮುಗಿಸಿ ತಂತಮ್ಮ ಜಾಗ ಖಾಲಿ ಮಾಡಿದ್ದು ಜಗತ್ತಿನ ಯಾವತ್ತೂ ವ್ಯವಹಾರಗಳ ಸೂಕ್ಷ್ಮ ಎಳೆಗಳ ಅತಿ ಸನಿಹದ ಪರಿಚಯವಿದ್ದ ತಿಪ್ಪಣ್ಣನ ಮನಸ್ಸಿನಲ್ಲಿಯೂ ಬೇಸರದ ಆಳವಾದ ಗೆರೆಗಳನ್ನು ಕೊರೆದಿತ್ತು.

ಇದಾದ ಕೇವಲ ಒಂದು ವರ್ಷದ ಒಳಗೇ ಕೂನಬೇವು ಗಂಗಮ್ಮಗಳ ತಿಪ್ಪಣ್ಣನ ನಿಧನದ ವಾರ್ತೆ ನನ್ನ ಕಿವಿ ಮೇಲೆ ಬಿದ್ದಿತು. ಸಾಯುವ ಕೊನೆಯ ದಿನಗಳಲ್ಲಿ ಯಾರ ಆರೈಕೆಯೂ ಇಲ್ಲದೆ, ಸರಿಯಾದ ಊಟ, ನೀರಿನ ಆಸರೆಯಿಲ್ಲದೆ, ಹೊಲದ ಮನೆಯಲ್ಲಿ ಒಂಟಿಯಾಗಿ ನರಳಿ, ನರಳಿ ಮಣ್ಣಾದ ತಿಪ್ಪಣ್ಣನ ಸಾವಿನ ಬಗ್ಗೆ ನಾನು ಒಂದು ರೀತಿಯ ಅನುಕಂಪಭರಿತ ಸಂಕಟವನ್ನು ಅನುಭವಿಸಿದೆ. ಸ್ವರ್ಗದಲ್ಲಿಯೂ ದೇವಾನುದೇವತೆಗಳು ವಿವಾಹ ವಿಷಯದಲ್ಲಿ ತೀವ್ರತರವಾಗಿ ಸಂಬಂಧಗಳ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ ಎನ್ನುವ ಎಲ್ಲಿಯೋ ಒಮ್ಮೆ ಓದಿದ್ದ ವಾಕ್ಯವೊಂದು ನನ್ನಲ್ಲಿ ಸಮಾಧಾನದ ಎಳೆಯನ್ನು ಮೂಡಿಸಿತು. ಕೂನಬೇವಿನ ಗಂಗಮ್ಮಗಳ ತಿಪ್ಪಣ್ಣ ಇಹಲೋಕವನ್ನು ತ್ಯಜಿಸಿದರೂ, ಪರಲೋಕದಲ್ಲಿ ತನ್ನ ಎಂದಿನ ಕಾರ್ಯವನ್ನು ಶುರು ಹಚ್ಚಿಕೊಂಡಿರುತ್ತಾನೆ ಎನ್ನುವ ಸಮಾಧಾನ ತಿಪ್ಪಣ್ಣನ ಮದುವೆ ದಲ್ಲಾಳಿ ಕೆಲಸದ ಚಾಕಚಕ್ಯತೆಯ ಅರಿವಿದ್ದ ನನ್ನ ಮನದಲ್ಲಿ ಮೂಡಿತ್ತು. ಇಂದ್ರಜಾಲವನ್ನು ಮೀರಿಸುವ ತನ್ನ ಮಾತಿನ ಶಬ್ದಜಾಲದಿಂದ ಭೂಲೋಕದ ಎಲ್ಲಾ ಮದುವೆಗಳೂ ನಿರ್ಣಯವಾಗುವ ಸ್ವರ್ಗಲೋಕದಲ್ಲಿ ನಡೆಯುವ ದೇವತೆಗಳ ಭವಿಷ್ಯದ ಹಲವಾದರೂ ವಿವಾಹಗಳಲ್ಲಿ ನಮ್ಮ ಕೂನಬೇವು ಗಂಗಮ್ಮಗಳ ತಿಪ್ಪಣ್ಣನ ಕೈವಾಡ ಇದ್ದೇ ಇರುತ್ತದೆ ಎನ್ನುವ ದೃಢ ಮತ್ತು ಎಂದೂ ಹುಸಿಯಾಗಬಾರದ ನಂಬಿಕೆಯನ್ನು ನಾನು ಒಡಲಲ್ಲಿ ಕಟ್ಟಿಕೊಂಡಿದ್ದೇನೆ.

 

Girl in a jacket
error: Content is protected !!