ಬೆಂಗಳೂರು, ಜು,02-ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಬೆಂಗಳೂರು ಉತ್ತರ ತಾಲ್ಲೂಕು” ಎಂದು ಬಾಗೇಪಲ್ಲಿಗೆ “ಭಾಗ್ಯನಗರ” ಎಂದು ಹೆಸರಿಡಲು ಇಂದು ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
ಈ ಕುರಿತು ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ವಿವರ ನೀಡಿದರು. ಆಡಳಿತವನ್ನು ಬೆಂಗಳೂರು ಕೇಂದ್ರಿತ ಎಂಬುದನ್ನು ತಪ್ಪಿಸಿ ವಿಕೇಂದ್ರೀಕರಣ ಮಾಡುವುದಕ್ಕಾಗಿಯೆ ಆಯಾ ಭಾಗದ ಸಮಸ್ಯೆಗಳ ಮೇಲೆ ಗಮನ ಹರಿಸಿ ಅವುಗಳಿಗೆ ಚಿಕಿತ್ಸಕ ಪರಿಹಾರ ನೀಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುತ್ತಿದ್ದೇವೆ. ಮೊದಲಿಗೆ ಕಲ್ಬುರ್ಗಿಯಲ್ಲಿ, ಆ ನಂತರ ಮಲೈ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಿದ್ದೆವು ಎಂದು ತಿಳಿಸಿದರು.
ಈ ಸಚಿವ ಸಂಪುಟ ಸಭೆಯಲ್ಲಿ ನಾವು 3400 ಕೋಟಿ ರೂಗಳಿಗೆ ಅನುಮೋದನೆ ನೀಡಿದ್ದೇವೆ. ಈ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ನೀರಾವರಿ, ಪ್ರವಾಸೋದ್ಯಮ, ರಸ್ತೆ- ಸೇತುವೆ ಮುಂತಾದ ವಿಷಯಗಳಿಗೆ ಆದ್ಯತೆ ನೀಡಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಕುಡಿವ ನೀರಿನ ಯೋಜನೆಗಳು ಅದರಲ್ಲೂ ಮುಖ್ಯವಾಗಿ ಎತ್ತಿನ ಹೊಳೆ ಯೋಜನೆಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಕಳೆದ ವರ್ಷವೇ ಎತ್ತಿನ ಹೊಳೆಯ ನೀರನ್ನು ಎತ್ತಿನ ಯಶಸ್ವಿಯಾಗಿ ಹರಿಸಲಾಯಿತು.ಸಭೆಯಲ್ಲಿ ನಾವು ಎತ್ತಿನಹೊಳೆ ಯೋಜನೆಯನ್ನು ವೇಗಗೊಳಿಸಲು ಹಾಗೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಹಳ್ಳಿಗಳಿಗೆ ಹರಿಸಲು ನಿರ್ದೇಶನಗಳನ್ನು ನೀಡಲಾಯಿತು.ಇದರಲ್ಲಿ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ಸಂಬಂಧಿಸಿದಂತೆ 31 ವಿಷಯಗಳಿಗೆ 2525 ಕೋಟಿ ರೂಗಳನ್ನು ಒದಗಿಸುವ ಕಾಮಗಾರಿ/ ಯೋಜನೆಗಳ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು ಎಂದು ವಿವರಿಸಿದರು.
ಶಿಕ್ಷಣಕ್ಕೆ- 1627.25 ಕೋಟಿ ರೂ ನೀಡಿದ್ದೇವೆ. ಇದರಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಮೂಲಭೂತ ಸೌಕರ್ಯ ಒದಗಿಸುತ್ತಿದ್ದೇವೆ.ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಎರಡು ವಸತಿ ನಿಲಯ ನಿರ್ಮಿಸಲು ತೀರ್ಮಾನಿಸಿದ್ದೇವೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ 1125.25 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿದ್ದೇವೆ.ನೀರಾವರಿ ಯೋಜನೆಗಳಿಗೆ – 1154 ಕೋಟಿ ನೀಡಿದ್ದೇವೆ. ಇದರಲ್ಲಿ 237 ಕೋಟಿ ರೂಗಳನ್ನು ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ 164 ಕೆರೆಗಳಿಗೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದೇವೆ.
ಈ ಭಾಗದಲ್ಲಿ ಅತಿ ಹೆಚ್ಚಾಗಿ ಗುಣಮಟ್ಟದ ಹೂ ಬೆಳೆಯುತ್ತಾರೆ. ಆದ್ದರಿಂದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವನ್ನು 10 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ಮಾಡಲಾಗಿದೆ.ಇದರ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಎಪಿಎಂಸಿ ವತಿಯಿಂದ 141.5 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಆರೋಗ್ಯ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 46 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಹಾಗೂ 21.40 ಕೋಟಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿಯಲ್ಲಿನ ಮೆಡಿಕಲ್ ಕಾಲೇಜುಗಳಿಗೆ ಎಂಆರ್ ಐ ಯಂತ್ರಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಹಾಗೂ 56 ಕೋಟಿ ರೂ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಪಿಎಚ್ ಸಿ, ಹಾಗೂ ಮಂಚೇನಹಳ್ಳಿಯ ಆಸ್ಪತ್ರೆಗಳನ್ನು ಉನ್ನತೀಕರಿಸಲು ಹಾಗೂ ಹೆಚ್ಚುವರಿ ಕಾಮಗಾರಿ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ
ಒಟ್ಟಾರೆ 123 ಕೋಟಿ ರೂ ವೆಚ್ಚದಲ್ಲಿ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.ಈ ಸಭೆಯಲ್ಲಿ ನಾವು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಿದ್ದೇವೆ.ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಹೆಸರಿಡಲು ತೀರ್ಮಾನಿಸಿದ್ದೇವೆ.
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾಲಯ ಎಂದು ಮರು ನಾಮೀಕರಣ ಮಾಡಲು ತೀರ್ಮಾನಿಸಿದ್ದೇವೆ. ಎಂದು ವಿವರ ನೀಡಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಎಚ್. ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.ಒಟ್ಟಾರೆ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು / ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.