ಪ್ರತಿಭೆಯ ವಿಕಾಸಕ್ಕೆ ಆಧುನಿಕ ಮಾಧ್ಯಮಗಳು ಪೂರಕವಾಗಬೇಕು- ಹಂಪ ನಾಗರಾಜಯ್ಯ

Share

ಬೆಂಗಳೂರು ,ಜ,7-ಜಾಗತೀಕರಣದ ಈ ಸಂದರ್ಭದಲ್ಲಿ ನಮಗೆ ಲಭ್ಯವಿರುವ ಇಂದಿನ ಆಧುನಿಕ ಮಾಧ್ಯಮ ಗಳನ್ನು ಯುವ ಲೇಖಕರು ತಮ್ಮ ಪ್ರತಿಭೆಯ ವಿಕಾಸಕ್ಕೆ ಬಳಸಿಕೊಳ್ಳಬೇಕು ಎಂದು ಕನ್ನಡದ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ 55 ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಹಿಂದೆ ಇಂತಹ ಅನುಕೂಲಗಳು ಇರಲಿಲ್ಲ ಈ ರೀತಿಯ ಅದ್ದೂರಿಯ ಪುಸ್ತಕ ಬಿಡುಗಡೆ ಸಮಾರಂಭ ಗಳು ನಡೆಯುತ್ತಿರಲಿಲ್ಲ. ಆದರೆ ಇಂದು ಸರ್ಕಾರ ಪುಸ್ತಕ ಪ್ರಾಧಿಕಾರದ ಮೂಲಕ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಅತ್ಯಂತ ಪ್ರಶಂಸನೀಯ, ರಾಜಾಶ್ರಯ ಗಳು ತಮ್ಮ ಆಸ್ಥಾನ ಕವಿಗಳನ್ನು ತಮ್ಮ ಸಿಂಹಾಸನದ ಆಸನಕ್ಕೆ ತಕ್ಕುದಾದ ಆಸನವನ್ನು ನೀಡುವ ಮೂಲಕ ಗೌರವಿಸುತ್ತಿದ್ದರು, ಹಾಗೆಯೇ ,ಇಂದು ಸರ್ಕಾರ ಹಾಗೂ ಪುಸ್ತಕ ಪ್ರಾಧಿಕಾರ ದಂತಹ ಸಂಸ್ಥೆಗಳು ಲೇಖಕರನ್ನು ಗುರುತಿಸಿ ,ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಯಾವುದೇ ಒಂದು ಕೃತಿಯ ಬಿಡುಗಡೆ ಚೊಚ್ಚಲ ಹೆರಿಗೆಗೆ ಸಮಾನ, ಏಕೆಂದರೆ ಆ ಕೃತಿಯ ಬರಹಗಾರ ತನ್ನ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅಂತಹುದೇ ಉದ್ವೇಗ, ತವಕ ಅನುಭವಿಸುತ್ತಾನೆ ಎಂದ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡದ ಹೆಸರಾಂತ ಸಾಹಿತಿ ಸಾ .ಶಿ ಮರುಳಯ್ಯ ಅವರ ಮೊದಲ ಕೃತಿ ‘ಸಂಗನಕಲ್ಲು’ ಬಿಡುಗಡೆಯಾದ ಸಂದರ್ಭವನ್ನು ಸ್ಮರಿಸಿದರು.
ಹಾಗೆಯೇ ,ಉಚಿತವಾಗಿ ಶಾಲಾ-ಕಾಲೇಜುಗಳಿಗೆ ಪುಸ್ತಕ ಹಂಚುವ ಯೋಜನೆ ಅತ್ಯಂತ ಪ್ರಶಂಸನೀಯ. ಇದು ಮಕ್ಕಳಲ್ಲಿ ಓದುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ , ಪುಸ್ತಕ ದಾನದ ಮೂಲಕ ಜ್ಞಾನದಾನ ಮಾಡುವುದು ನಿಜಕ್ಕೂ ಬಹುದೊಡ್ಡ ಸಂಗತಿ. ಅದರ ಮೂಲಕ ನಾವು ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಖ್ಯಾತ ಬರಹಗಾರ ಜಯಂತ ಕಾಯ್ಕಿಣಿ ಮಾತನಾಡಿ,ಬರಹಗಾರ ಬದುಕಿನ ಕಟ್ಟಳೆಗಳಿಂದ ಹೊರಗೆ ಬಂದು ಬರೆಯಬೇಕು ಎಂದು ಹೇಳಿದರು.
ಬದುಕಿನ ಕಟ್ಟಳೆಗಳನ್ನು ಮುರಿದು ಬರೆದರೆ ಮಾತ್ರ ಅದು ಅನುಭವದ್ರವ್ಯ ವಾಗುತ್ತದೆ , ಕಟ್ಟಲೆಗಳು ಸೃಜನಶೀಲತೆಯನ್ನು ಕಟ್ಟಿಹಾಕುತ್ತದೆ ಎಂದರು.
ಯುವ ಬರಹಗಾರರ ಚೊಚ್ಚಲ ಕೃತಿಯ ಬಿಡುಗಡೆ ಆಯಾ ಬರಹಗಾರರಿಗೆ ಎಂದೂ ಅವಿಸ್ಮರಣೀಯ, ಏಕೆಂದರೆ ,ಬದುಕಿನಲ್ಲಿ ಮೊದಲ ಮುತ್ತು, ಮೊದಲ ಅನುಭವ, ಮೊದಲ ಪುಸ್ತಕ ಕೊಡುವ ಸುಖ ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ .ಹಾಗಾಗಿ ಪ್ರತಿ ಲೇಖಕನಿಗೆ ಅವರ ಮೊದಲ ಪುಸ್ತಕದ ಬಿಡುಗಡೆ ಬದುಕಿನ ಅವಿಸ್ಮರಣೀಯ ಸಂದರ್ಭವಾಗಿರುತ್ತದೆ ಎಂದು ಅವರು ತಿಳಿಸಿದರು.

ಕಾವ್ಯದಲ್ಲಿ ಮೌನವು ಇರಬೇಕು ಎಂದು ಪ್ರತಿಪಾದಿಸಿದ ಜಯಂತಕಾಯ್ಕಿಣಿ ಮೌನ ಎಂಬುದು ಕಾವ್ಯದಲ್ಲಿನ ಅವ್ಯಕ್ತ ಭಾವ ಅದು ಹೇಳಲಾಗದ್ದನ್ನು ಹೇಳಲು ಕಾವ್ಯದಲ್ಲಿ ಬಳಸಬೇಕು, ಆದರೆ ಇತ್ತೀಚಿನ ಕವಿ ಗಳು ಅದನ್ನು ವಾಕ್ಯವಾಗಿ ಸಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಯ ಸುಮಾರು 250 ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಯುವ ಬರಹಗಾರರಿಗೆ ಕಾರ್ಯಕ್ರಮದ ಸ್ಮರಣಾರ್ಥ ಸ್ಮರಣ ಫಲಕ ನೀಡಲಾಯಿತು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ
ಕೆ.ಬಿ ಕಿರಣ್ ಸಿಂಗ್ ಸ್ವಾಗತಿಸಿದರು.
ಸಹಾಯಕ ನಿರ್ದೇಶಕಿ ಸೌಭಾಗ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Girl in a jacket
error: Content is protected !!