writing-ಪರಶಿವ ಧನಗೂರು
ನಕಲಿ ಛಾಪಾ ಕಾಗದದ ನೆಟ್ವರ್ಕ್ ಜಾಲ ರೀ ಆಕ್ಟೀವ್
ದೇಶದ ಆರ್ಥಿಕತೆಯನ್ನೆ ಬುಡಮೇಲು ಮಾಡಲು ಹೊರಟಿದ್ದ, ಭಾರತವನ್ನೇ ಬೆಚ್ಚಿ ಬೀಳಿಸಿದ್ದ ಬಹುಕೋಟಿ ಛಾಪಾ ಕಾಗದದ ಹಗಹರಣವೂ 2001ರಲ್ಲಿ ಬೆಳಕಿಗೆ ಬಂದದ್ದು ಬೆಂಗಳೂರಿನಲ್ಲೇ! ಸುಮಾರು ಹತ್ತು ವರ್ಷಗಳ ಕಾಲ ಸಿಬಿಐ ಮತ್ತು ಹಲವು ರಾಜ್ಯಗಳ ಪೊಲೀಸರಿಂದ ತನಿಖೆ ಗೊಳಪಟ್ಟಿದ್ದ 20.000 ಕೋಟಿ ರೂಪಾಯಿಗಳ ಮೌಲ್ಯದ ಈ ನಕಲಿ ಛಾಪಾ ಕಾಗದದ ಹಗಹರಣದ ರೂವಾರಿ ಬೆಳಗಾವಿ ಜಿಲ್ಲೆಯ ಖಾನಾಪುರ ಮೂಲದ ಅಬ್ದುಲ್ ಕರೀಂ ಲಾಲಾ ತೆಲಗಿ. ಆರಂಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ಹಣ್ಣು ಮಾರುತ್ತಿದ್ದ ಈ ಸಾಮಾನ್ಯ ಕರೀಂ ಲಾಲಾ ಬಾಂಬೆ ಜೈಲಿನೊಳಗೆ ಕುಳಿತು ಕಲಿತು ಬಂದ ವಿದ್ಯೆಯೇ ಈ ‘ನಕಲಿ ಛಾಪಾ ಕಾಗದ!’ 1994ರಲ್ಲಿ ಅಧಿಕ್ರತವಾಗಿ ಛಾಪಾ ಕಾಗದ ಪ್ರಿಂಟಿಂಗ್ ಮಾಡುವ ಪರವಾನಗಿ ಪಡೆದು ನಾಸಿಕ್ ನಲ್ಲಿ ಮುದ್ರಣ ಪ್ರಾರಂಭಿಸಿದ ಕರೀಂ ಲಾಲಾ ರಾಜಕಾರಣಿಗಳು, ಪೊಲೀಸರು, ಸ್ಟಾಂಪ್ ಪೇಪರ್ ವೆಂಡರ್ ಗಳ ಜಾಲ ನಿರ್ಮಿಸಿಕೊಂಡು ಈ ದೇಶದ ತುಂಬಾ ನಡೆಸಿದ್ದು 20ಸಾವಿರ ಕೋಟಿಗೂ ಹೆಚ್ಚಿನ ಆರ್ಥಿಕ ಅಪರಾಧ! ಭಾರತದ ಐದನೇ ಅತಿ ದೊಡ್ಡ ಹಣಕಾಸಿನ ಹಗಹರಣವಾಗಿ ಇಂದಿಗೂ ಟ್ರೆಂಡಿಂಗ್ ನಲ್ಲಿರುವ ಈ ನಕಲಿ ಛಾಪಾ ಕಾಗದದ ಹಗಹರಣದ ಸುತ್ತಾ, ಕತೆಹೆಣೆಯುತ್ತಾ ಬಾಲಿವುಡ್ ನಿರ್ದೇಶಕರು ವೆಬ್ ಸಿರೀಸ್ ಮಾಡಲು, ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ! ಅಷ್ಟೊಂದು ಕಿಮ್ಮತ್ತಿನ ಈ ಬಹುಕೋಟಿ ನಕಲಿ ಛಾಪಾ ಕಾಗದದ ಕಿಂಗ್ ಪಿನ್ ತೆಲಗಿಗೆ ಒಟ್ಟು 42ವರ್ಷಗಳ ಸುದೀರ್ಘ ಜೈಲು ಶಿಕ್ಷೆಯನ್ನು ಕೋರ್ಟು ವಿಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು! ಭಾರತ ದೇಶದ ರಾಜಧಾನಿ ದೆಹಲಿಯು ಸೇರಿದಂತೆ ಮಹಾರಾಷ್ಟ್ರ, ಅಹಮದಾಬಾದ್, ಕರ್ನಾಟಕ, ತಮಿಳುನಾಡು ಇನ್ನಿತರ ಹಲವು ರಾಜ್ಯಗಳಲ್ಲಿ ವಿಸ್ತರಣೆಯಾಗಿ ಹರಡಿಕೊಂಡಿದ್ದ ಈ ನಕಲಿ ಛಾಪಾ ಕಾಗದದ ವಂಚಕರ ಜಾಲ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಂತೂ ನಿಜಾ. ಹಲವಾರು ವರ್ಷಗಳ ಕಾಲ ದೇಶಾದ್ಯಂತ ತಮ್ಮ ನಕಲಿ ಛಾಪಾ ಕಾಗದದ ವಂಚಕರ ಜಾಲದ ಮೂಲಕ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ, ಕರೀಂ ಲಾಲಾ ತೆಲಗಿ ಮತ್ತವನ ಸಹಚರರ ವಿರುದ್ಧ ಕರ್ನಾಟಕ ಒಂದು ರಾಜ್ಯದಲ್ಲೇ 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು!
ಆತ ಬೆಳೆಯಲು ದೇಶಾದ್ಯಂತ ಹಲವಾರು ರಾಜಕಾರಣಿಗಳು, ಗ್ರಹಮಂತ್ರಿಗಳು, ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳು, ಭೂಗತ ಜಗತ್ತಿನ ಮಾಫಿಯಾ ಡಾನ್ ಗಳು ಕಾರಣರಾಗಿದ್ದರು. ಆದ ಕಾರಣದಿಂದಲೇ ಹಲವಾರು ವರ್ಷಗಳ ಕಾಲ ದೇಶಾದ್ಯಂತ ತಮ್ಮ ನಕಲಿ ಛಾಪಾ ಕಾಗದದ ಜಾಲ ವಿಸ್ತರಿಸಿ ಈ ಖತರ್ನಾಕ್ ಕರೀಂ ಲಾಲಾ ತೆಲಗಿ ಎಂಬ ವಂಚಕ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನ ಸಂಚಿಗೆ ಸಾತ್ ನೀಡುತ್ತಿದ್ದ ಎಂಬ ರೂಮರ್ಸ್ ಗಳು ಇದ್ದವು! ಈ ಪ್ರಕರಣದಲ್ಲಿ ಕರ್ನಾಟಕದ ಮುಸ್ಲಿಂ ರಾಜಕಾರಣಿ ರೋಷನ್ ಬೇಗ್ ಮತ್ತು ಅವರ ಸಹೋದರನ ಹೆಸರು ಕೇಳಿ ಬಂದಿತ್ತು. ಒಬ್ಬ ಮುಖ್ಯಮಂತ್ರಿಯ ಅಳಿಯನ ಹೆಸರೂ ಪ್ರಸ್ತಾಪವಾಗಿತ್ತು! ಹಿರಿಯ ಐಪಿಎಸ್ ಅಧಿಕಾರಿ ಗಳು ಇದರಲ್ಲಿ ಶಾಮೀಲಾಗಿರುವ ಶಂಕೆ ಇತ್ತು. ಹಾಗೆಯೇ ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿ ಒತ್ತೆ ಇಟ್ಟುಕೊಂಡಿದ್ದಾಗ, ಇದೇ ಛಾಪಾ ಕಾಗದ ಹಗಹರಣದ ರೂವಾರಿ ಕರೀಂ ಲಾಲಾ ತೆಲಗಿ ಬಳಿಯಿಂದಲೂ, ಕೋಟಿಗಟ್ಟಲೆ ಹಣ ಪಡೆದು ಅಂದಿನ ಮುಖ್ಯಮಂತ್ರಿಗಳ ಆದೇಶದಂತೆ ವೀರಪ್ಪನ್ ಕೈಗೆ ಕೊಟ್ಟು ಡಾಕ್ಟರ್ ರಾಜಕುಮಾರ್ ರನ್ನು ಬಿಡಿಸಿಕೊಂಡು ಬರಲಾಯಿತೆಂಬ ಗುಲ್ಲೆದ್ದಿತ್ತು! ಅಂತಾ ಕರೀಂ ಲಾಲಾ ತೆಲಗಿಗೆ ಕೊನೆಗೆ ಏಡ್ಸ್ ವೈರಸ್ ಇರುವ ರಕ್ತದ ಇಂಜೆಕ್ಷನ್ ಇಂಜೆಕ್ಟ್ ಮಾಡಿಸಲಾಯಿತು ಎಂಬ ವಿಚಿತ್ರ ವಾದಗಳು ಗಾಳಿಸುದ್ದಿ ಗಳಾಗಿ ಗಲ್ಲಿತುಂಬಾ ಹರಿದಾಡಿದವು. ಭಾರತದೇಶವನ್ನೆ ಬೆಚ್ಚಿ ಬೀಳಿಸಿದ್ದ ಕರೀಂ ಲಾಲಾ ತೆಲಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 11ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾಗಲೇ ಬಹು ಅಂಗಾಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸತ್ತನೆಂಬ ಸುದ್ದಿ ಬಂತು! ಈಗ ಈತ ಮರಣಹೊಂದಿದ ಹಲವಾರು ವರ್ಷಗಳ ನಂತರವೂ ಕರ್ನಾಟಕದಲ್ಲಿ ಅಲ್ಲಲ್ಲಿ ಈ ನಕಲಿ ಛಾಪಾ ಕಾಗದದ ವಂಚಕರ ಹಾವಳಿ ತಲೆಎತ್ತಿವೆ. ಸುಲಭವಾಗಿ ಹಣ ಮಾಡುವ ಆಸೆಗೆ ಬಿದ್ದು ಕೆಲವು ವಂಚಕರು ನಕಲಿ ಛಾಪಾ ಕಾಗದ ಪತ್ರಗಳನ್ನು ತಯಾರಿಸುತ್ತಿದ್ದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತಮ್ಮ ಜಾಲಗಳನ್ನು ಅಲ್ಲಲ್ಲಿ ವಿಸ್ತರಿಸಿ 2001ಕ್ಕಿಂತಲೂ ಮೊದಲೇ ನೊಂದಣಿಯಾಗಿರುವ ಆಸ್ತಿ ಪತ್ರಗಳಿಗೆ ವಿರುದ್ಧವಾಗಿ ನಕಲಿ ಛಾಪಾ ಕಾಗದಗಳನ್ನು ತಯಾರಿಸಿ ಅದಕ್ಕಿಂತ ಹಿಂದಿನ ದಿನಾಂಕಕ್ಕೆ ನಕಲಿ ಜಿಪಿಎ.ಮಾಡಲು, ನಕಲಿ ನೊಂದಣಿ ಮಾಡಲು, ಬಳಸುವವರಿಗೆ ಸಾವಿರಾರು ರೂಪಾಯಿಗಳಿಗೆ ಮಾರಾಟಮಾಡಿ ಹಣ ಗಳಿಸುತ್ತಿದ್ದಾರೆ. ಪೊಲೀಸರು ಕೂಡ ಅಲ್ಲಲ್ಲಿ ಕಾರ್ಯಾಚರಣೆ ನಡೆಸಿ ಕೆಲುವು ವಂಚಕರನ್ನು ಬಂಧಿಸಿ ಜೈಲಿಗಟ್ಟಿ ಸುಮ್ಮನಾಗುತಿದ್ದಾರೆ.
ನಕಲಿ ಛಾಪಾಕಾಗದ ಜಾಲ ವಿಸ್ತರಣೆ
ಈಗ ಮತ್ತೆ ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದದ ಹಗಹರಣ ಬೆಳಕಿಗೆ ಬಂದಿದೆ. ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದ ಪೊಲೀಸರ ತಂಡ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ದಾಳಿಮಾಡಿ ನಕಲಿ ಛಾಪಾ ಕಾಗದದ ಹಗಹರಣದ ಐವರ ಗ್ಯಾಂಗ್ ಅನ್ನು ಬಂಧಿಸಿದ್ದಾರೆ! ಈ ಬೆಳವಣಿಗೆಯನ್ನು ಗಮನಿಸಿದರೆ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲೇ ಹೆಚ್ಚಾಗಿ ನಕಲಿ ಛಾಪಾ ಕಾಗದದ ವಂಚಕರು ಅಡಗಿ ಕುಳಿತು ತಮ್ಮ ಜಾಲವನ್ನು ವಿಸ್ತರಣೆ ಮಾಡಿಕೊಂಡು, ಆಸ್ತಿ ನೊಂದಣಿ ಇಲಾಖೆಗೆ ಯಾಮಾರಿಸಿ, ಸರ್ಕಾರದ ಆರ್ಥಿಕ ವ್ಯವಸ್ಥೆಗೆ ದಕ್ಕೆ ತರುವ ಪ್ರಯತ್ನ ಮಾಡುತಿದ್ದಾರೆ ಎಂಬುದು ಸದ್ಯಕ್ಕೆ ಮೇಲ್ನೋಟಕ್ಕೆ ಕಾಣುತ್ತಿದೆ.
ಬೆಂಗಳೂರಿನ ಕೋರ್ಟುಗಳ ಮುಂಭಾಗ ಮತ್ತು ಕಂದಾಯ ಇಲಾಖೆಯ ಕೇಂದ್ರ ಕಛೇರಿಯ ಬಳಿ ಈ ನಕಲಿ ಛಾಪಾ ಕಾಗದದ ಮಾರಾಟ ದಂಧೆ ಬಹುದಿನಗಳಿಂದ ನಡೆಯುತ್ತಿರುವ ಸುಳುವನ್ನಿಡಿದು ನಗರ ಪೊಲೀಸರು ಮಪ್ತಿಯಲ್ಲಿ ಅವಿತು ಕುಳಿತ ಕಾರ್ಯಾಚರಣೆ ನಡೆಸಿ ದಾಳಿಮಾಡಿ ರೆಡ್ ಹ್ಯಾಂಡ್ ಆಗಿ ವಂಚಕರನ್ನು ಬಂಧಿಸಿದ ತರುವಾಯ ಬೆಂಗಳೂರಿನ ವಿವೇಕನಗರ, ಜೆಜೆನಗರ, ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಐವರು ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ, ಅಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ ಪತ್ರಗಳನ್ನು, ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ಕಂಪ್ಯೂಟರ್, ಪೆನ್ ಡ್ರೈವ್, ಸೀಲ್ ಮುಂತಾದ ಅನೇಕ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ! ಈಗ ಸರ್ಕಾರಕ್ಕೆ ಅಬಕಾರಿಯಂತೆ ಕಂದಾಯ ಇಲಾಖೆಯೂ ದಿನನಿತ್ಯದ ನೇರ ಆದಾಯದ ಮೂಲವಾಗಿರುವುದರಿಂದ ರಾಜ್ಯದ ಎಲ್ಲಾ ಆಸ್ತಿ ನೊಂದಣಿ ಕಛೇರಿಗಳ ಬಳಿ ದಿನನಿತ್ಯ ಈಗ ಈ ನಕಲಿ ಛಾಪಾ ಕಾಗದಗಳದ್ದೇ ಕಾರುಬಾರು. ಕ್ರಯಪತ್ರ, ಕರಾರು ಪತ್ರ, ತಕರಾರು ದಾವೆಗೆ ದಾಖಲು ಪತ್ರ, ಉಯಿಲು, ಜಿಪಿಎ, ಆಸ್ತಿ ಪರಭಾರೆ ಒಪ್ಪಂದ ಪತ್ರಗಳಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿರುವ 2002ಕ್ಕಿಂತಲೂ ಹಿಂದಿನ ಎಲ್ಲಾ ಇಸವಿಯ ನಕಲಿ ಛಾಪಾ ಕಾಗದದಗಳನ್ನು ಈಗಲೂ ನಕಲಿ ಛಾಪಾ ಕಾಗದ ವಂಚಕರು ಮುದ್ರಿಸಿ ಮಾರಾಟ ಮಾಡುತ್ತಿರುವುದು ಸುಳ್ಳೇನಲ್ಲ. ಅದು ಹಲವಾರು ಬಾರಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಪ್ರಾಂಕಿಂಗ್ ಯಂತ್ರ ಬಳಸಿ ನಕಲಿ ಛಾಪಾ ಕಾಗದಗಳನ್ನು ಉಪಯೋಗಿಸಿ ಕೊಂಡು ಆಸ್ತಿನೊಂದಣಿ ಕಛೇರಿ ಗಳಲ್ಲೇ ಭ್ರಷ್ಟಾಚಾರ ನಡೆಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಡವರ, ಮಧ್ಯಮವರ್ಗದ ಜನರ ಆಸ್ತಿಗಳನ್ನು ಕಬಳಿಸಲು ಸಂಚು ನಡೆಯುತ್ತಿರುವುದು ಕೆಲವು ಪ್ರಕರಣಗಳಲ್ಲಿ ಗೊತ್ತಾಗಿದೆ. ನಾಲ್ಕೈದು ವರ್ಷಗಳ ಹಿಂದೆ, ಹತ್ತಿಪ್ಪತ್ತು ವರ್ಷಗಳ ಹಿಂದೆ ಇದೇ ಆಸ್ತಿಯನ್ನು ನಮಗೇ ಬರೆದುಕೊಡಲಾಗಿದೆ! ಎಂದು ನಕಲಿ ದಾಖಲೆಗಳನ್ನು ತೋರಿಸಿ ಲಿಟಿಗೇಷನ್ ಸ್ರಷ್ಠಿಸುವ, ಭೂಮಿ ಕಬಳಿಸುವ ಕೆಲಸಗಳು ಈ ನಕಲಿ ಛಾಪಾ ಕಾಗದದ ಕಾರಣದಿಂದ ಎಲ್ಲಾ ಕಡೆ ಕಂಡುಬರುತ್ತಿವೆ.
ಜನವರಿ 2021 ರಲ್ಲಿ ಒಂದು ವಿಶಿಷ್ಟ ರೀತಿಯ ಪ್ರಕರಣವೂಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದು ಸದ್ದು ಮಾಡಿತ್ತು. ಎಂ.ಮಂಜುಳ ಎಂಬುವರು ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಅವರಿಗೆ ‘ಕಂಡವರ ಆಸ್ತಿ ಹೊಡೆಯಲು ನಕಲಿ ಪ್ರಾಂಕಿಂಗ್ ಬಳಕೆ ಮಾಡಲಾಗುತ್ತಿದೆ!’ ಎಂದು ಆರೋಪಿಸಿ ಈ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಐ.ಜಿ.ಆರ್. ನಿರ್ದೇಶನದ ಮೇರೆಗೆ ಬೆಂಗಳೂರು ಜಿಲ್ಲಾ ನೊಂಧಣಾಧಿಕಾರಿ ಕೂಲಂಕಷವಾಗಿ ತನಿಖೆ ನಡೆಸಿದ್ದರು. ಈ ತನಿಖೆಯಲ್ಲಿ ನಕಲಿ ಛಾಪಾ ಕಾಗದ, ಉಬ್ಬಚ್ಚು ಯಂತ್ರ, ಉಪ ನೊಂಧಣಾಧಿಕಾರಿಗಳ ಮುದ್ರೆ ಬಳಸಿ ವಂಚಿಸಿರುವ ಘಟನೆ ಸಾಬೀತಾಗಿತ್ತು!
ಬೆಂಗಳೂರಿನ ಯಲಹಂಕ, ಕೆಂಗೇರಿ, ಶಿವಾಜಿನಗರದ ನೊಂಧಣಾಧಿಕಾರಿಗಳ ಸಹಿ ಮತ್ತು ಮೊಹರು ಕೂಡ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿತ್ತು! ಎಲ್ಲಾ ಕಡೆ ಈ ನಕಲಿ ಛಾಪಾ ಕಾಗದದ ವಂಚಕರ ಜಾಲ ಕೆಲಸಮಾಡುತ್ತಿದೆ ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.
ಮತ್ತೇ ರೀ ಆಕ್ಟೀವ್ ಆಗಿದೆಯಾ ಛೋಟಾ ತೆಲಗಿ ಗ್ಯಾಂಗ್!?
ಈಗ ಬೆಂಗಳೂರಿನಲ್ಲಿ ಬಂಧನವಾಗಿರುವ ಐವರು ನಕಲಿ ಛಾಪಾ ಕಾಗದದ ವಂಚಕರ ಬೇರುಗಳು ವಿವೇಕನಗರದಲ್ಲೇ ಇರುವುದನ್ನು ನೋಡುತ್ತಿದ್ದರೇ ಮತ್ತೆ ಛೋಟಾ ತೆಲಗಿಯ ನಕಲಿ ಛಾಪಾ ಕಾಗದದ ವಂಚಕರ ಗ್ಯಾಂಗ್ ರೀಆಕ್ಟೀವ್ ಆಗಿರಬಹುದೆಂಬ ಶಂಕೆ ಬಲವಾಗುತ್ತಿದೆ! ಈಗ ಐವರನ್ನು ಬಂಧಿಸಿರುವ ಬೆಂಗಳೂರಿನ ವಿವೇಕನಗರದ ಎಸ್ಪಿ ರಸ್ತೆಯಲ್ಲೇ 2020ರ ಅಕ್ಟೋಬರ್ ತಿಂಗಳಲ್ಲಿ ನಕಲಿ ಛಾಪಾ ಕಾಗದ ಪತ್ರಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ಹಸೈನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿಯನ್ನು ಅಂದಿನ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ರವರ ನೇತೃತ್ವದ ಪೊಲೀಸರ ತಂಡ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ದಾಳಿಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದು ಜೈಲಿಗಟ್ಟಿದರು. ಸಾರ್ವಜನಿಕರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ವಂಚಿಸುತ್ತಿದ್ದ ಈ ಛೋಟಾ ತೆಲಗಿ 2002ರಲ್ಲೇ ಕೇಂದ್ರ ಸರ್ಕಾರ ನಿಷೇಧಿಸಿರುವ ಹತ್ತು ರೂಪಾಯಿಂದ ಹಿಡಿದು 25 ಸಾವಿರ ರೂಪಾಯಿವರೆಗಿನ ಎಲ್ಲಾ ನಕಲಿ ಛಾಪಾ ಕಾಗದಗಳನ್ನು ಮುದ್ರಿಸಿ ಮಾರಾಟ ಮಾಡಿ ತಾನು ಹಣಗಳಿಸಿಕೊಂಡು, ಸರ್ಕಾರದ ಬೊಕ್ಕಸಕ್ಕೆ ವಂಚಿಸಿ ಹಾಡುಹಗಲೇ ಆರ್ಥಿಕ ಅಪರಾಧ ವೆಸಗುತಿದ್ದ ಈ ಜಾಲದ ಕಿಂಗ್ ಪಿನ್ ಹಸೈನಿ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ ತಾನು ಕೇವಲ 7ನೇ ತರಗತಿ ಓದಿದ್ದರೂ, ತನ್ನ ಸಹಚರರಾದ ಇಂಜಿನಿಯರಿಂಗ್ ಗ್ರಾಜುಯೇಟ್ ಬಸವೇಶ್ವರ ನಗರದ ಹರೀಶ್ ಗೆ, ಶವರ್ ಅಲಿಯಾಸ್ ಸೀಮಾ, ನಜ್ಮಾ ಮತ್ತು ಫಾತಿಮಾ ಎಂಬ ಕಂಪ್ಯೂಟರ್ ನಾಲೆಡ್ಜ್ ಹೊಂದಿದ್ದವರಿಗೂ ಗುರುವಾಗಿದ್ದದ್ದೇ ವಿಶೇಷ! ಇವರೆಲ್ಲರ ಜೊತೆಗೆ ಸೇರಿ ಕಂಪ್ಯೂಟರ್ ಸಹಾಯದಿಂದ ಹಳೆಯ ನಕಲಿ ಛಾಪಾ ಕಾಗದ ಪತ್ರಗಳನ್ನು ತಯಾರಿಸಿ, ಹಳೆಯ ಜಮೀನು ವ್ಯಾಜ್ಯಕ್ಕಾಗಿ ಈ ಪತ್ರಬಳಸಲು ಹುಡುಕುತ್ತಿದ್ದವರನ್ನು ಸಂಪರ್ಕಿಸಿ ಈ ನಕಲಿ ಛಾಪಾ ಕಾಗದ ಪತ್ರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದದ್ದಾಗಿ ಪೊಲೀಸರೆದುರು ಒಪ್ಪಿಕೊಂಡಿದ್ದರು.
ಬೆಂಗಳೂರಿನ ಕಂದಾಯ ಭವನದ ಬಳಿ ಸ್ಟಾಂಪ್ ವೆಂಡರ್ ಮತ್ತು ಟೈಪಿಂಗ್ ಕೆಲಸ ಮಾಡುತ್ತಾ ಗಿರಾಕಿಗಳನ್ನು ಹುಡುಕುತ್ತಿದ್ದ ಸೀಮಾ ಮತ್ತು ಫಾತಿಮಾ ಕಿಂಗ್ ಪಿನ್ ಛೋಟಾ ತೆಲಗಿಯಿಂದ ನಕಲಿ ಛಾಪಾ ಕಾಗದ, ನಕಲಿ ಹಕ್ಕು ಪತ್ರಗಳನ್ನು ತರಿಸಿಕೊಂಡು ವಿವೇಕನಗರದ ಎಸ್ಪಿ ರಸ್ತೆಯಲ್ಲಿರುವ ಅಮರ್ ರೇಡಿಯೋ ಅಂಗಡಿ ಬಳಿ ಮಾರುತ್ತಿದ್ದರಂತೆ. ಇದೆ ಸಮಯದಲ್ಲಿ ಮಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಂದಿನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಸೌಮೇಂದು ಮುಖರ್ಜಿಯವರ ನೇತೃತ್ವದ ಪೊಲೀಸರ ತಂಡ ಛೋಟಾ ತೆಲಗಿ ಗ್ಯಾಂಗ್ ನ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿತ್ತು. ಅದೇ ದಿನ ಛೋಟಾ ತೆಲಗಿ ಗ್ಯಾಂಗ್ ನ ಎಲ್ಲರ ಮನೆ ಮೇಲೂ ದಾಳಿ ನಡೆಸಿದ್ದ ಪೊಲೀಸರು ಬೇರೆ ಬೇರೆ ಮುಖಬೆಲೆಯ 400ಕ್ಕೂ ಹೆಚ್ಚು ನಕಲಿ ಛಾಪಾ ಕಾಗದ ಪತ್ರಗಳನ್ನು, ಫ್ರಾಂಕಿಂಗ್, ಎಂಭೋಸಿಂಗ್ ಮಾಡಿರುವ ಡಾಕ್ಯುಮೆಂಟ್ ಸೀಟ್ ಗಳು,ರಾಜ ಮಹಾರಾಜರ ಕಾಲದ್ದೆನ್ನಲಾದ ನಕಲಿ ಛಾಪಾ ಕಾಗದಗಳು, ತಾಲೂಕು ಉಪ ಖಜಾನೆ ಸೀಲುಗಳು., ಶಿವಾಜಿ ನಗರ, ಬೊಮ್ಮನಹಳ್ಳಿ ಹಿರಿಯ ಉಪ ನೊಂದಣಿ ಅಧಿಕಾರಿಗಳ ಸೀಲುಗಳು ಮತ್ತು ವಿಶ್ವಭಾರತಿ ಹೌಸಿಂಗ್ ಬಿಲ್ಡಿಂಗ್ ಕಾರ್ಪೋರೇಷನ್ ಸೊಸೈಟಿಯ ಕಾರ್ಯದರ್ಶಿಗಳ ಸೀಲ್ ಮತ್ತು ಪ್ಯಾಡ್ ಜಪ್ತಿ ಮಾಡಿದ್ದರು! ಈ ನಕಲಿ ಛಾಪಾ ಕಾಗದದ ಕಿಂಗ್ ಪಿನ್ 7ನೇ ತರಗತಿಯ ಕಿಲಾಡಿ ಛೋಟಾ ತೆಲಗಿಯ ಮನೆಯಲ್ಲಿಯೇ ಎಲ್ಲಾ ನಕಲಿ ಛಾಪಾ ಕಾಗದದ ದಂಧೆ, ಮುದ್ರಣ ನಡೆಯುತ್ತಿತ್ತೆಂಬುದು ತನಿಖೆಯಿಂದ ಹೊರಬಂದಿತ್ತು! ಎ4 ಅಳತೆಯ ಪೇಪರ್ ಗಳಿಗೆ ವಾಟರ್ ಮಾರ್ಕಿಂಗ್ ಮಾಡಿ ನಕಲಿ ಬಾಂಡ್ ಪೇಪರ್ ಗಳನ್ನಾಗಿ ಪರಿವರ್ತಿಸುತಿದ್ದನಂತೇ ಈ ಛೋಟಾ ತೆಲಗಿ! ಕಳೆದ ಹತ್ತು ವರ್ಷಗಳಿಂದಲೂ ಇದೇ ದಂಧೆ ಯಲ್ಲೇ ಪಳಗಿರುವ ಹುಸೈನಿಯನ್ನು ಇದೇ ಕಾರಣಕ್ಕೆ ಬೆಂಗಳೂರಿನ ಛೋಟಾ ತೆಲಗಿ ಎಂದು ಅಡ್ಡಹೆಸರಿಟ್ಟು ಕರೆಯುತ್ತಾರೆ!
2013ರಲ್ಲೇ ಇದೆ ನಕಲಿ ಛಾಪಾ ಕಾಗದದ ಪ್ರಕರಣದಲ್ಲಿ ಹಸೈನಿ ಅಲಿಯಾಸ್ ಛೋಟಾ ತೆಲಗಿ ಜೈಲಿಗೆ ಹೋಗಿ ಬಂದಿದ್ದರೂ ಈತ ಬುದ್ಧಿಕಲಿತಿರುವ ಯಾವ ಲಕ್ಷಣಗಳೂ ಇಲ್ಲ. ಹ್ಯಾಬಿಚುಯಲ್ ಕ್ರಿಮಿನಲ್ ಗಳಂತಾಗಿ ಹೋಗಿರುವ ಈತ ಮತ್ತು ಈತನ ಜೊತೆಗಿರು ಸಹಚರರು ಹಣದ ವ್ಯಾಮೋಹಕ್ಕೇ ದಾಸರಾಗಿ ಹೀಗೆ ವಂಚಕರಾಗಿ ಬದಲಾಗಿ ಹೋಗಿದ್ದಾರೆ. ಸರ್ಕಾರಕ್ಕೆ ವಂಚಿಸಿ, ಜನರನ್ನು ಮೋಸಗೊಳಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಹಣ ಆಸ್ತಿ ಮಾಡಿಕೊಂಡಿದ್ದಾನೆ! ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್, ಕಂದಾಯ ಭವನದ ಬಳಿ ಬಾಡಿಗೆ ಕರಾರು ಪತ್ರ, ಭೋಗ್ಯದ ಕರಾರು ಪತ್ರಮಾರುವ ಬ್ರೋಕರ್ ಕೆಲಸ ಮಾಡುತ್ತಿದ್ದ ಈತ ಈಗ ನಕಲಿ ಛಾಪಾ ಕಾಗದದ ಕಿಂಗ್ ಪಿನ್! ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ! ತಲೆ ಮೇಲೊಂದು ಛೋಟಾ ತೆಲಗಿ ಎಂಬ ಕಿರೀಟ! ಇದು ಇವೊತ್ತಿನ ಭವ್ಯ ಭಾರತದ ಪರಿಸ್ಥಿತಿ. ಅನಕ್ಷರತೆ, ಬಡತನ , ಮೂಡನಂಬಿಕೆ, ಭ್ರಷ್ಟಾಚಾರ, ಜಾತೀಯತೆ, ರಾಜಕೀಯ ಅಸ್ಥಿರತೆ, ಆರ್ಥಿಕ ಸಂಕಷ್ಟ,ಬೆಲೆ ಏರಿಕೆ, ನಿರುದ್ಯೋಗ, ಅನಾರೋಗ್ಯ, ಮುಂತಾದ ಅನೇಕ ಸಾಮಾಜಿಕ ಸಂಕಷ್ಟ ಗಳಿಂದ ನರಳುತ್ತಿರುವ ಭಾರತಕ್ಕೆ ಮಿತಿಮೀರುತ್ತಿರುವ ಈ ಹಗಹರಣಗಳ ಕಾಟ ಒಂದುಕಡೆ! ಜನರನ್ನು ಶೋಷಿಸುವ ಅಧಿಕಾರಶಾಹಿಗಳ ಜೊತೆಗೆ ಈ ವಂಚಕರ, ಮೋಸಗಾರರ ಕಾಟ ನಮ್ಮ ದೇಶದ ಜನರನ್ನು ಉರಿದು ಮುಕ್ಕುತ್ತಿವೆ. ನೆಮ್ಮದಿ ಕಿತ್ತುಕೊಂಡು ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ. ಆಳುವ ವರ್ಗಗಳು ಜನರನ್ನು ವಂಚಿಸುತ್ತಾ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿರುವುದರಿಂದ ಈಗ ಎಲ್ಲಾ ಕಡೆಯೂ ಅದರ ದುರ್ವಾಸನೆ ಬೀರುತ್ತಿದೆ.
ಅದರ ಕರಿನೆರಳೆ ಈ ನಕಲಿ ಛಾಪಾ ಕಾಗದದಂತ ಹಗಹರಣಗಳು ಪ್ರಕರಣಗಳು. ಪೊಲೀಸರು ಈಗ ಬೆಲೆಗೆ ಸಿಕ್ಕಿರುವ ಈ ನಕಲಿ ಛಾಪಾ ಕಾಗದದ ವಂಚಕರ ತಲೆ-ಬುಡವನ್ನು ಬಿಡದೆ ಜಾಲಾಡಿ, ಅವರ ಜಾಲವನ್ನು ಬೇಧಿಸಿ ಈ ಗ್ಯಾಂಗ್ ನ ಹಿಂದೆ ಯಾರ್ಯಾರು ಇದ್ದಾರೆ, ಈ ಹಗಹರಣದ ಉದ್ದ-ಅಗಲ ಆಳ ಎಲ್ಲಿಯವರೆಗೂ ವಿಸ್ತರಣೆಯಾಗಿದೆ ಎಂಬುದನ್ನು ಕೂಲಂಕಷವಾಗಿ ತನಿಖೆ ನಡೆಸಿ, ಈ ನಕಲಿ ಛಾಪಾ ಕಾಗದ ದಂಧೆಯನ್ನು ಬೇರುಸಹಿತ ಕಿತ್ತೊಗೆಯಲು ಟೊಂಕಕಟ್ಟಿ ನಿಲ್ಲಬೇಕಿದೆ. ಕರೀಂ ಲಾಲಾ ತೆಲಗಿಯಂತೆ ಬೆಂಗಳೂರಿನ ಈ ಛೋಟಾ ತೆಲಗಿಗೂ ನ್ಯಾಯಾಲಯ ಸರಿಯಾದ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದರಷ್ಟೇ ಈ ದಂಧೆ ಮತ್ತೆ ಮತ್ತೆ ಮರುಕಳಿಸದೇ ಮಾಯವಾಗುವುದು.