ಕೊನೆಗೂ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆನಂದ್ ಸಿಂಗ್

Share

ಬೆಂಗಳೂರು,ಆ.೨೪: ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಸದ್ಯಕ್ಕೆ ಶಮನವಾಗಿದ್ದು, ಇಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಸಚಿವ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ನಿರ್ಧಾರ ತಿಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಸಿಂಗ್ ಜೊತೆಗೆ ರಾಜೂಗೌಡ ಕೂಡ ಬಂದಿದ್ದರು. ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ಇರುವ ಖಾತೆಯಲ್ಲೇ ಮುಂದುವರೆಯಿರಿ. ನಾಳೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಿಮ್ಮ ಖಾತೆ ಬದಲಾವಣೆ ಸಂಬಂಧ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ. ಅಲ್ಲಿ ತನಕ ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಬೊಮ್ಮಾಯಿ ಸಿಂಗ್‌ಗೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಆನಂದ್ ಸಿಂಗ್ ಸದ್ಯ ಇರುವ ಖಾತೆಯಲ್ಲೇ ಮುಂದುವರೆಯಲು ಇಚ್ಛಿಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಆನಂದ್ ಸಿಂಗ್ ವಿಕಾಸಸೌಧಕ್ಕೆ ತೆರಳಿದರು. ಬಳಿಕ ಮಾತನಾಡಿದ ಅವರು, ಈ ಮೊದಲು ಮಾತನಾಡಿದ ವಿಚಾರವನ್ನೇ ಸಿಎಂ ಬಳಿ ಪ್ರಸ್ತಾಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಅವರನ್ನು ಭೇಟಿಯಾಗಿದ್ದೆ. ಇಬ್ಬರೂ ಸಹ ಮೊದಲು ಅಧಿಕಾರ ಸ್ವೀಕಾರ ಮಾಡು ಅಂತ ಹೇಳಿದ್ದರು. ಹೀಗಾಗಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಸಿಎಂ ಅವರು ನನ್ನ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದರು. ಬ್ಲಾಕ್‌ಮೇಲ್ ತಂತ್ರನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ

ಬಳಿಕ ಆನಂದ್ ಸಿಂಗ್ ಅಧಿಕಾರ ಸ್ವೀಕಾರ ಮಾಡಿದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಕಚೇರಿ ಪೂಜೆ ನಡೆಯಿತು. ಇದೇ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಈಗ ಎಲ್ಲವೂ ಬಗೆಹರಿದಿದೆ. ನಾನು, ಸಿಎಂ ಹಾಗೂ ರಾಜೂಗೌಡ ಕುಳಿತು ಚರ್ಚಿಸಿದ್ದೇವೆ. ಆನಂದ್ ಸಿಂಗ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಈಗ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಸಭೆಯನ್ನೂ ನಡೆಸಲಿದ್ದಾರೆ ಎಂದರು.

 

 

Girl in a jacket
error: Content is protected !!