ಅಶುಭ ಸುದ್ದಿಗಳ ದನಿಯಾದ ಈ ಸೇವಕ

Share

ಅಶುಭ ಸುದ್ದಿಗಳ ದನಿಯಾದ ಈ ಸೇವಕ

ಅದು ೧೯೯೧ರ ಜನವರಿ ತಿಂಗಳ ಮೊದಲ ದಿನ. ಹೊಸವರ್ಷದ ಹರ್ಷ ವಿಶ್ವದ ಎಲ್ಲೆಡೆ ಪಸರಿಸಿದ ದಿನ. ನಾನು ಕಳೆದ ಮೂರು ವರ್ಷಗಳಿಂದ ಸದೂರದ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಸೇವಾನಿರತನಾಗಿದ್ದವನು, ಒಂದು ತಿಂಗಳ ರಜೆಯ ಮೇಲೆ ದಾವಣಗೆರೆಗೆ ಬಂದಿದ್ದೆ. ಅಂದು ಸಾಯಂಕಾಲ ಐದರ ವೇಳೆ ಇದ್ದಿರಬಹುದು, ಸ್ನೇಹಿತ ಭದ್ರಾವತಿ ಮೂಲದ ಲೆಕ್ಚರರ್ ರೇಣುಕಾಪ್ರಸಾದರನ್ನು ಭೇಟಿಯಾಗಿ ಹೊಸವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲೆಂದು ಹೊರಗೆ ಹೋಗಿದ್ದವನು, ಎಂ.ಸಿ.ಸಿ. “ಬಿ” ಬ್ಲಾಕಿನಲ್ಲಿದ್ದ ನಮ್ಮ ಬಾಡಿಗೆ ಮನೆಗೆ ಹಿಂತಿರುಗಿದೆ. ಕಾಂಪೌಂಡ್ ಗೇಟನ್ನು ತೆಗೆದು ಒಳಗೆ ಕಾಲಿಟ್ಟವನಿಗೆ ಹಾಲಿನ ತೆರೆದ ಕಿಟಕಿಯ ಪಕ್ಕದಲ್ಲಿಯೇ ಕುಳಿತ ವ್ಯಕ್ತಿಯೋರ್ವನ ದರ್ಶನವಾಯಿತು. ಯಾರೋ ಪರಿಚಯದವರು ಇದ್ದ ಹಾಗಿದ್ದಾರಲ್ಲಾ ಎಂದು ಮನೆಯ ಒಳಗೆ ಬಂದವನು, ಹೊಸ್ತಿಲನ್ನು ದಾಟಿ, ಮುಂಬಾಗಿಲ ಸನಿಹವೇ ನಿಂತು, ನನ್ನಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ಕುಳಿತ ವ್ಯಕ್ತಿಯನ್ನು ದಿಟ್ಟಿಸಿ ನೋಡಿದವನಿಗೆ ಒಂದು ಕ್ಷಣ ಎದೆ ಧಸಕ್ ಎಂದಿತು.

ಮನೆಗೆ ಬಂದಿದ್ದವರು ತುರುವನೂರಿನ ಸಣ್ಣಸಿದ್ದಪ್ಪನವರ ತಿಪ್ಪಮ್ಮನ ಎರಡನೇ ಮಗನಾದ ಸೋಮಣ್ಣ ಮಾಮ. ಆತನನ್ನು ನಮ್ಮ ಮನೆಯಲ್ಲಿ ಕಂಡ ತಕ್ಷಣ ಹಿಂದಿನ ಎರಡು ಸಂದರ್ಭಗಳಲ್ಲಿ ಆತ ನಮ್ಮ ಮನೆಗೆ ಬಂದಿದ್ದು ಸವಿವರವಾಗಿ ನೆನಪಾಗತೊಡಗಿತು. ೧೯೮೩ರಲ್ಲಿ ನಾವು ಚಿತ್ರದುರ್ಗದ, ಪಿ.ಜೆ. ಬಡಾವಣೆಯ ಉದ್ಯೋಗ ವಿನಿಮಯ ಕೇಂದ್ರವಿದ್ದ “ಏರೋಪ್ಲೇನ್” ಕಟ್ಟಡದ ಬಳಿಯ, ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾಗ ಮೊದಲ ಬಾರಿಗೆ ಸೋಮಣ್ಣ ನಮ್ಮ ಮನೆಗೆ ಬಂದಿದ್ದ. ಮತ್ತೊಮ್ಮೆ ದಾವಣಗೆರೆಯ ವಿನೋಭಾನಗರದ ಹದಿನಾರನೇ ಕ್ರಾಸಿನಲ್ಲಿದ್ದ ನಮ್ಮ ಬಾಡಿಗೆ ಮನೆಗೆ ಆತನ ಪಾದಾರ್ಪಣೆಯಾಗಿದ್ದು ೧೯೮೫ರಲ್ಲಿ. ಕಾಕತಾಳೀಯ ಎನ್ನುವಂತೆ ಈ ಮೊದಲ ಎರಡು ಭೇಟಿಗಳೂ ಘಟಿಸಿದ್ದು ಜನವರಿ ತಿಂಗಳಲ್ಲಿಯೇ. ಮೊದಲನೆಯ ಭೇಟಿಯಲ್ಲಿ, ಅನಾರೋಗ್ಯ ಕಾರಣದಿಂದಾಗಿ ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದ ನನ್ನ ತಾತ ವಿರುಪಣ್ಣಗೌಡರ ಸಾವಿನ ಸಮಾಚಾರವನ್ನು ಹೊತ್ತು ತಂದಿದ್ದ ಸೋಮಣ್ಣ ಎರಡನೇ ಬಾರಿ ನನ್ನ ಸೋದರಮಾಮ, ತಾಯಿಯ ತಮ್ಮ, ಭದ್ರಾವತಿಯ ವಿ. ಐ.ಎಸ್. ಎಲ್. ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಸೋಮಣ್ಣಗೌಡ ಹೃದಯಾಘಾತದಿಂದ ಮಡಿದ ಅಶುಭಸುದ್ದಿಯನ್ನು ಒಡಲಲ್ಲಿ ಹೊತ್ತು ತಂದಿದ್ದ. ಹೀಗಾಗಿ ಸೋಮಣ್ಣ ನಮ್ಮ ಮನೆಗೆ ಬಂದ ಎಂದರೆ ಏನೂ ಅಪಥ್ಯವಾದ, ಕಹಿಯಾದ ಸುದ್ದಿಯನ್ನು ಹೊತ್ತು ತಂದಿದ್ದಾನೆ ಎಂದೇ ಗ್ರಹಿಸಿದ ಮನಕ್ಕೆ ದೊಡ್ಡ ಮಟ್ಟದಲ್ಲಿ ವ್ಯಾಕುಲತೆ ಉಂಟಾಯಿತು. “ಮಾಮಾ, ಚೆನ್ನಾಗಿದ್ದೀಯಾ?” ಎಂದು ಸೋಮಣ್ಣನನ್ನು ಮಾತನಾಡಿಸಿದ ನಾನು ಆತನ ಪಕ್ಕದಲ್ಲಿಯೇ ಇದ್ದ ಮತ್ತೊಂದು ಸ್ಟೀಲ್ ಕುರ್ಚಿಯ ಮೇಲೆ ಕುಳಿತು ಆತನಿಂದ ಬರಬಹುದಾದ ಪ್ರತಿಕ್ರಿಯೆಗೆ ಕಿವಿಯಾದೆ. ಕೇವಲ “ಹೂಂ” ಎಂದು ಒಮ್ಮೆ ನನ್ನ ಕಡೆಗೆ ತಿರುಗಿ ನಾನು ಎಸೆದ ಪ್ರಶ್ನೆಗೆ ಉತ್ತರವಾದ ಸೋಮಣ್ಣ ಮುಂದೇನೂ ಮಾತನಾಡಲಿಲ್ಲ. ಮತ್ತೆ ಕಿಟಕಿಯ ಕಡೆಗೆ ಮುಖಮಾಡಿ ಮನೆಯ ಮುಂದಿನ ರಸ್ತೆಯನ್ನು ಅನ್ಯಮನಸ್ಕನಾಗಿ ನೋಡುತ್ತಾ ಕುಳಿತ ಆತ ನನಗೆ ಎಂದಿನಂತೆ ಅಂದೂ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದ. ಅಷ್ಟರಲ್ಲಿ ಅಡುಗೆ ಮನೆಯಿಂದ ಸ್ಟೀಲ್ ಲೋಟವೊಂದರಲ್ಲಿ ಚಹಾವನ್ನು ತಂದ ಅಮ್ಮ ಅದನ್ನು ಮಾತಿಲ್ಲದೆ ಸೋಮಣ್ಣನ ಕೈಗಿಡಲು ಮುಂದಾದಳು. ಅತ್ತು ಕೆಂಪಾದಂತೆ ತೋರುತ್ತಿದ್ದ ಅವಳ ಕಣ್ಣುಗಳು ಸೋಮಣ್ಣ ಹೊತ್ತು ತಂದಿರಬಹುದಾದ ಸಮಾಚಾರದ ಗಂಭೀರತೆಯನ್ನು ಸಾರುತ್ತಿದ್ದವು. ಚಹಾ ಬೇಡವೇ ಬೇಡ ಎಂದು ತನ್ನ ಎಂದಿನ ಹಠವನ್ನು ಮುಂದುವರೆಸಿದ ಸೋಮಣ್ಣನ ಮುಂದಿದ್ದ ಟೀಪಾಯಿ ಮೇಲೆ ಚಹಾ ಇಟ್ಟ ಅಮ್ಮ ಅಡುಗೆಕೋಣೆಗೆ ತೆರಳಿದಳು. ಒಂದು ರೀತಿಯ ಶಾಕ್ ಗೆ ಒಳಗಾದಂತೆ ತೋರುತ್ತಿದ್ದ ಅಮ್ಮ ಏನನ್ನೂ ಮಾತನಾಡುವ ಸ್ಥಿತಿಯಲ್ಲಿ ಇದ್ದ ಹಾಗೆ ತೋರಲಿಲ್ಲ. ಏನೋ ಆಗಬಾರದ ಘಟನೆಯೊಂದು ಸಂಭವಿಸಿದೆ ಎಂದು ನನಗೆ ಅರಿವಾಗತೊಡಗಿತು. “ಏನು ಊರಿನ ಸಮಾಚಾರ? ಎಲ್ಲರೂ ಕ್ಷೇಮ ತಾನೇ?” ಎಂದು ಸೋಮಣ್ಣನನ್ನು ಪುನಃ ಮಾತಿಗೆ ಎಳೆಯುವ ಪ್ರಯತ್ನ ಮಾಡಿದೆನಾದರೂ ಆತನಿಂದ ಯಾವ ರೀತಿಯಲ್ಲೂ ಸೂಕ್ತವೆನಿಸುವ ಪ್ರತಿಕ್ರಿಯೆಬಾರದೇ ಇರಲು ನನ್ನ ಕುತೂಹಲವನ್ನು ಅದುಮಿಡಲು ಸಾಧ್ಯವಾಗದೆ “ಏನು ಬಂದಿದ್ದು? ವಿಶೇಷವಾದ ಸಮಾಚಾರ ಏನಾದರೂ ಇದೆಯೇ?” ಎಂದು ನೇರಾನೇರವಾಗಿ ಸೋಮಣ್ಣನನ್ನು ಪ್ರಶ್ನಿಸಲು ಮುಂದಾದೆ. ಉಹೂಂ, ಸೋಮಣ್ಣ ಎಂದಿನಂತೆ ತನ್ನ ತುಟಿಗಳನ್ನು ಹೊಲೆದುಕೊಂಡು ಮುಗಂ ಆಗಿಯೇ ಕುಳಿತಿದ್ದ. ಮತ್ತೊಮ್ಮೆ ನನ್ನತ್ತ ಮುಖ ತಿರುಗಿಸಿ ನೋಡಿದವನು ಅನಿತರಲ್ಲಿಯೇ ಮೊದಲಿನ ಹಾಗೆಯೇ ಮತ್ತೆ ಕಿಟಕಿಯತ್ತ ತಲೆ ಹಾಕಿ, ತನ್ನ ಬಲಗೈಯ ಮೊಣಕೈಯನ್ನು ಮಡಿಚಿದ ಬಲಗಾಲಿನ ಮೇಲೆ ಊರಿ ಇಡುವ ಮೂಲಕ ತುಸುವೇ ಬಾಗಿದ ತನ್ನ ತಲೆಗೆ ಭದ್ರವಾದ ಆಸರೆಯನ್ನು ಒದಗಿಸುತ್ತಾ, ಭಾವನೆಗಳು ಸತ್ತಂತಿದ್ದ ನಿರ್ಜೀವ ಕಣ್ಣುಗಳಿಂದ ಮನೆಯ ಮುಂದೆ ತಣ್ಣನೆ ಮಲಗಿದ್ದ ಟಾರ್ ರಸ್ತೆಯ ಕಡೆಗೆ ಎವೆಯಿಕ್ಕದೆ ನೋಟ ಬೀರುತ್ತಾ ಕುಳಿತವನನ್ನು ಬಾಯಿಬಿಡಿಸುವುದು ಎಂದಿನ ಹಾಗೆಯೇ ಇಂದೂ ದೊಡ್ಡ ಸವಾಲೇ ಆಗಿ ಪರಿಣಮಿಸತೊಡಗಿತು. ಸೋಮಣ್ಣ “ಸಿರಿಗರ” ಹೊಡೆದವನೇನೂ ಆಗಿರಲಿಲ್ಲ. ದರ್ಪದೌರ್ಜನ್ಯಗಳು, ರಾಗದ್ವೇಷಗಳು ಆತನ ಬಳಿ ಸುಳಿದ ಸುಳಿವೇ ಇರಲಿಲ್ಲ. ಆದರೂ ಆತನ ಬಾಯಿಂದ ಶಬ್ದಗಳ ಮುತ್ತುಗಳನ್ನು ಉದರಿಸುವುದು ಸಮುದ್ರದಾಳಕ್ಕೆ ಮುಳುಗಿ ಮುತ್ತುಗಳನ್ನು ಹೆಕ್ಕಿತರುವ ಕಾರ್ಯಕ್ಕಿಂತಲೂ ಅಧಿಕಕಷ್ಟದ ಕೆಲಸವಾಗಿ ಕಾಣತೊಡಗಿತು. ಆದರೂ ನನ್ನ ಪ್ರಯತ್ನಗಳನ್ನು ಬಿಡದೆ, ಬೇತಾಳದ ಬೆನ್ನತ್ತಿದ ತ್ರಿವಿಕ್ರಮನಂತೆ, ನನ್ನ ಪ್ರಶ್ನೆಗಳ ಸುರಿಮಳೆಯ ವರ್ಷಧಾರೆಯನ್ನು ಸೋಮಣ್ಣನ ಮೇಲೆ ಸುರಿಸುತ್ತಲೇ ಮುಂದುವರೆಸಿದ ನಾನು ಆತ ಮನೆಗೆ ಬಂದಿರಬಹುದಾದ ಸಂಭಾವ್ಯ ಕಾರಣಗಳ ಗಹನ ಅನ್ವೇಷಣೆಯಲ್ಲಿ ತೊಡಗಿಸಿಕೊಂಡೆ. ಹೀಗೆ ಹತ್ತಾರು ಬಾರಿ ನನ್ನ ಪ್ರಶ್ನೆಗಳಿಗೆ ಮೌನದ ಉತ್ತರವನ್ನು ನೀಡುತ್ತಾ ಬಂದಿದ್ದ ಸೋಮಣ್ಣ ಕಡೆಗೊಮ್ಮೆ ಕಟ್ಟಿದ ಗಂಟಲಿನ ಗದ್ಗದ ಸ್ವರದಿಂದ “ತಿಪ್ಪೇಶಿ” ಎಂದಷ್ಟೇ ಉಸುರಲು ಶಕ್ತನಾದ. ಇಷ್ಟು ಹೇಳಿದ ಸೋಮಣ್ಣ, ಕಟ್ಟಿದ ತನ್ನ ಗಂಟಲನ್ನು ಸರಿಮಾಡಿಕೊಳ್ಳುವ ಪ್ರಯತ್ನದ ಒಂದು ಭಾಗವೋ ಎಂಬಂತೆ, ತನ್ನ ಮುಂದೆ ಮೈಬಿಸಿ ಕಳೆದುಕೊಳ್ಳುತ್ತಾ, ನಮ್ಮ ಸಂಭಾಷಣೆಗಳಿಗೆ ಮೂಕಸಾಕ್ಷಿಯಾಗಿ ಸ್ಥಿತಪ್ರಜ್ಞನಂತೆ ಕಳೆದ ಐದು ನಿಮಿಷಗಳಿಗಿಂತಲೂ ಹೆಚ್ಚಾದ ಕಾಲಾವಧಿಯಲ್ಲಿ ಸ್ಥಿತವಾಗಿದ್ದ, ಟೀಪಾಯ್ ಮೇಲಿನ ಸ್ಟೀಲ್ ಲೋಟವನ್ನು ಕೈಗೆತ್ತಿಕೊಂಡು ಒಂದು ಗುಟುಕು ಟೀ ಸೇವಿಸಿ ಮತ್ತೆ ಲೋಟವನ್ನು ಅದರ ಸ್ವಸ್ಥಾನಕ್ಕೆ ಸೇರಿಸಿದ. ಆತನ ಬಾಯಿಂದ ಹೊರಬಿದ್ದ “ತಿಪ್ಪೇಶಿ” ಎನ್ನುವ ಹೆಸರನ್ನು ಆಲಿಸಿದವನಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ. ಸೋಮಣ್ಣ ಹೇಳಿದ ತಿಪ್ಪೇಶಿ ಯಾರಾಗಿರಬಹುದು? ಯಾಕಾಗಿ ತಿಪ್ಪೇಶಿ ಹೆಸರನ್ನು ತೆಗೆಯುತ್ತಿದ್ದಾನೆ? ಎನ್ನುವ ತೀವ್ರ ಲೆಕ್ಕಾಚಾರದಲ್ಲಿ ಮುಳುಗಿದವನಿಗೆ ನೆನಪಾಗಿದ್ದುದೇ ನನಗಿಂತಹ ವಯಸ್ಸಿನಲ್ಲಿ ಎರಡು ವರ್ಷ ಹಿರಿಯನಾದ ಸೋಮಣ್ಣನ ಅಣ್ಣ ಮಹಾಂತಪ್ಪ ಮೇಷ್ಟ್ರ ಮಗ ತಿಪ್ಪೇಶನ ನೆನಪು. ತಿಪ್ಪೇಶಿ ನನ್ನ ಬಾಲ್ಯದ ಗೆಳೆಯ. ನನ್ನ ಟೈರ್ ಗಾಲಿಗಳನ್ನು ಹಲವು ದಿನಗಳ ಕಾಲ “ಬುದ್ದಿ ಕಲಿಸುವುದಕ್ಕಾಗಿ” ಅವನ ಬಳಿ ಬಿಟ್ಟು, ನಂತರದ ದಿನಗಳಲ್ಲಿ ನಿತ್ಯವೂ ಅವನನ್ನು ಕಾಡಿಬೇಡಿ, ಹತ್ತು ಪೈಸೆಗಳ, ಭದ್ರಪ್ಪಶೆಟ್ಟಿಯ ಅಂಗಡಿಮನೆಯಿಂದ ಕೊಂಡುತಂದ ಹುರಿದ ಬಟಾಣಿಕಾಳುಗಳನ್ನು ಅವನಿಗೆ ನೈವೇದ್ಯದ ರೂಪದಲ್ಲಿ ಸಂದಾಯ ಮಾಡಿದ ತರುವಾಯವೆ, ಅವನು “ಬುದ್ದಿ ಕಲಿತಿವೆ” ಎಂದು ಪ್ರಮಾಣಪತ್ರದ ಸಮೇತ ಹಿಂದಿರುಗಿಸುತ್ತಿದ್ದ ಗಾಲಿಗಳನ್ನು ಗರ್ವದಿಂದ ಟಾರ್ ರಸ್ತೆಗಳ ಮೇಲೆ ಇಳಿಸಿ ಓಡಿಸುತ್ತಿದ್ದ ನೆನಪು ಉಕ್ಕಿಬಂದಿತು. “ಹೌದಾ, ತಿಪ್ಪೇಶನಿಗೆ ಏನಾಗಿದೆ?” ಎನ್ನುವ ಆತಂಕದಲ್ಲಿ ಮುಳುಗಿದವನಿಗೆ ಬಾಯಿ ತೆರೆದು ವಿಷಯವನ್ನು ವಿವರಿಸಿ ಹೇಳದ ಸೋಮಣ್ಣನ ಕಾರಣದಿಂದಾಗಿ ಆತಂಕ ಹೆಚ್ಚಾಗುತ್ತಲೇ ನಡೆದಿತ್ತು. ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಸಾಗಿದ್ದ ಆತಂಕವನ್ನು ಹತ್ತಿಕ್ಕಲಾಗದ

 

ಡುಗೆಮನೆಯ ಕಡೆ ಹೆಜ್ಜೆ ಹಾಕಿದವನು ಕಣ್ಣೀರನ್ನು ಕೆನ್ನೆಗಳ ಮೇಲೆ ಹರಿಸುತ್ತಲೇ ರಾತ್ರಿಯ ಊಟದ ತಯಾರಿಯಲ್ಲಿ ತೊಡಗಿದ್ದ ಅಮ್ಮನನ್ನು ಕುರಿತು “ತಿಪ್ಪೇಶಿಗೆ ಏನಾಗಿದೆ?” ಎನ್ನುವ ಏಕಾಏಕಿ ಪ್ರಶ್ನೆಯನ್ನು ಮುಂದಿಟ್ಟೆ. ತನ್ನ ಸೀರೆಯ ಸೆರಗಿನಿಂದ ಕೆನ್ನೆಗಳ ಮೇಲೆ ಉರುಳುತ್ತಿದ್ದ ಕಣ್ಣೀರಿನ ಹನಿಗಳನ್ನು ಹತ್ತಿಕ್ಕಿದ ಅಮ್ಮ “ಪರಮಶಿವಣ್ಣನ ಮಗ ತಿಪ್ಪೇಶಿ ನಿನ್ನೆ ರಾತ್ರಿ ಮೈಸೂರಿನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ” ಎನ್ನುವ ಹೃದಯವಿದ್ರಾವಕ ಸುದ್ದಿಯನ್ನು ನಡುಗುವ ಧ್ವನಿಯಿಂದಲೇ ಅರುಹಿದಳು.

ಈ ಸುದ್ದಿಯನ್ನು ಕೇಳಿದವನಿಗೆ ಕಾಲ ಕೆಳಗಿನ ನೆಲ ಕುಸಿದಂತಾಯಿತು. ಪರಮಶಿವಣ್ಣಗೌಡ ಮಾಮನ ದೊಡ್ಡಮಗನಾಗಿದ್ದ ತಿಪ್ಪೇಶ ನನ್ನ ಬಾಲ್ಯ ಸ್ನೇಹಿತನಾಗಿದ್ದವನು, ನಾವು ಒಟ್ಟಿಗೆ ಆಡಿ ಬೆಳೆದವರು. ನನಗಿಂತ ಎರಡು ವರ್ಷ ಸಣ್ಣವನಾದ ತಿಪ್ಪೇಶಿ ಚಿಕ್ಕಂದಿನಿಂದಲೂ ನನ್ನ ಒಡನಾಡಿಯಾಗಿದ್ದವನು. ನನ್ನ ತಾತನ ಮನೆಯ ಎದುರು ಮನೆಯಲ್ಲಿದ್ದ ತಿಪ್ಪೇಶಿಯೊಟ್ಟಿಗೆ ನಾನು ತಾತನ ಮನೆಗೆ ಹೋದಾಗಲೆಲ್ಲಾ ಗಂಟೆಗಟ್ಟಲೆ ಆಡುತ್ತಿದ್ದೆ. ತಿಪ್ಪೇಶಿ ಮನೆಗೆ ದಿನಾಲು ಸಂಜೆಯೂ, ತಿಪ್ಪೇಶಿ ಅವ್ವ ನೀಲಜ್ಜಿಯ ಜೊತೆಗೆ ಚೌಲ ಆಡಲು ತೆರಳುತ್ತಿದ್ದ ನನ್ನ ಅವ್ವನಿಗೆ ಬಾಲವಾಗಿ, ನಾನೂ ತೆರಳುತ್ತಿದ್ದೆ. ಅವ್ವ ಚೌಲ ಆಡುವ ಅಷ್ಟೂ ಸಮಯವೂ ತಿಪ್ಪೇಶಿಯೊಟ್ಟಿಗೆ ಆಟ ಆಡುವುದರಲ್ಲಿಯೇ ಮಗ್ನನಾಗುತ್ತಿದ್ದ ನಾವು ಆಡದ ಆಟಗಳೇ ಇಲ್ಲ ಎನ್ನಬಹುದು. ಕಣ್ಣುಮುಚ್ಚಾಲೆಯಿಂದ ಹಿಡಿದು, ಗೋಲಿಗೆಜ್ಜುಗ, ಚಿನ್ನಿಕೋಲು, ಮರಕೋತಿ, ಕೊಕ್ಕೋ ಕಬಡ್ಡಿಗಳಂತಹ ಗ್ರಾಮೀಣಕ್ರೀಡೆಗಳನ್ನು ಗೆಳೆಯರ ಗುಂಪಿನೊಡಗೂಡಿ ಗಂಟೆಗಳ ಕಾಲ ಮನದಣಿಯೆ ಆಡುತ್ತಿದ್ದ ನಾವು ರಾತ್ರಿ ದೀಪ ಹಚ್ಚಿದ ಮೇಲೆಯೇ ಮನೆಗೆ ಮರಳುತ್ತಿದ್ದದ್ದು. ಹೊಸವರ್ಷದ ಮುನ್ನಾರಾತ್ರಿಯಂದು ತನ್ನ ಸಹಪಾಠಿಯೊಂದಿಗೆ ದ್ವಿಚಕ್ರವಾಹನದ ಹಿಂಬದಿಯ ಸವಾರನಾಗಿ ಮೈಸೂರು ನಗರಪ್ರದಕ್ಷಿಣೆಗೆಂದು ತನ್ನ ಹಾಸ್ಟೆಲ್ ರೂಮಿನಿಂದ ಹೊರಟಿದ್ದ ತಿಪ್ಪೇಶಿ, ಹಿಂಬದಿಯಿಂದ ವೇಗವಾಗಿ ಬಂದ ಲೋಡು ತುಂಬಿದ ಲಾರಿಯೊಂದು, ಚಾಲಕನ ಅಜಾಗರೂಕತೆಯ ಕಾರಣದಿಂದಾಗಿ ಮೈಮೇಲೆ ಹರಿದ ಪರಿಣಾಮವಾಗಿ ತನ್ನ ಗೆಳೆಯನ ಸಮೇತನಾಗಿ ಸಾವಿನಮನೆಯ ಕದ ತಟ್ಟಿದ್ದ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಸಮಾಜಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದ ತಿಪ್ಪೇಶನ ಅಕಾಲಮರಣ ಕೇವಲ ಆತನ ಮನೆ ಮಂದಿಗಾದ ಭರಿಸಲಾರದ ನಷ್ಟವಷ್ಟೆ ಆಗಿರದೆ ಊರಿನ ಉನ್ನತಿಯ ಅಸಂಖ್ಯ ಸುಂದರ ಸ್ವಪ್ನಗಳನ್ನು ಕಂಡ ತಿಪ್ಪೇಶಿ ಹೀಗೆ ಸದ್ದುಗದ್ದಲವಿಲ್ಲದೆ, ಸುಖಾಸುಮ್ಮನೆ, ಅನಾಥನಂತೆ ಸಾವಿನ ದವಡೆ ಸೇರಿದ್ದು ಇಡೀ ಊರಿಗೇ ಆದಂತಹ ಭರಿಸಲಾರದ ಬಹುದೊಡ್ಡ ಪ್ರಮಾಣದ ನಷ್ಟವೇ ಆಗಿ ಮಾರ್ಪಾಡುಹೊಂದಿತ್ತು. ಬಾಳಿ ಬೆಳಗಬೇಕಾಗಿದ್ದ ಗ್ರಾಮೀಣ ಪ್ರದೇಶದ ಅಸಾಧಾರಣ ಪ್ರತಿಭೆಯೊಂದು ಕುಡಿಯೊಡೆದು ಹೂವಾಗಿ ಅರಳುವ ಪೂರ್ವದಲ್ಲಿಯೇ ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾದ ವಿಲಕ್ಷಣತೆ ಊರ ಇತಿಹಾಸದಲ್ಲಿ ಎಂದೂ ಅಳಿಯದ ರೀತಿಯಲ್ಲಿ ದಾಖಲಾಗಿದೆ ಎಂದು ಭಾವಿಸುತ್ತೇನೆ.

ರಾತ್ರಿಯ ಅಡುಗೆಯನ್ನು ಮಾಡಿಟ್ಟು ಸಂಜೆ ಸುಮಾರು ಆರರ ವೇಳೆಗೆ ಸೋಮಣ್ಣನ ಒಟ್ಟಿಗೆ ತುರುವನೂರಿಗೆ ತೆರಳಿದ ಅಮ್ಮನಿಗೆ “ತಿಪ್ಪೇಶನ ಪಾರ್ಥಿವ ಶರೀರ ಇನ್ನೂ ಊರನ್ನು ತಲುಪಿಲ್ಲ, ಕಳೇಬರಹ ಮೈಸೂರಿನಿಂದ ಊರಿಗೆ ರಾತ್ರಿ ಸುಮಾರು ಹತ್ತರ ವೇಳೆಗೆ ಬರುತ್ತದೆ” ಎನ್ನುವ ವಿಷಯವನ್ನು ಸೋಮಣ್ಣ ಅರುಹಲಾಗಿ ನಾಳೆ ಅಪ್ಪನ ಜೊತೆಗೆ ತಿಪ್ಪೇಶನ ಅಂತ್ಯಸಂಸ್ಕಾರಕ್ಕೆ ಹೋಗೋಣ ಎಂದುಕೊಂಡ ನಾನು ತಿಪ್ಪೇಶನ ಕುರಿತು ನನ್ನ ನೆನಪಿನಬುಟ್ಟಿಯ ಮೂಲೆಯಲ್ಲಿ ಜತನವಾಗಿ ಹುದುಗಿ ಕೂತಿದ್ದ, ಲೆಕ್ಕಕ್ಕೇ ಸಿಗದಷ್ಟಿದ್ದ ಸವಿನೆನಪುಗಳೊಟ್ಟಿಗೆ ರಾತ್ರಿಯನ್ನು ಬೆಳಗುಮಾಡಿದೆ.

ಹೀಗೆ ನಮ್ಮ ಮನೆಗೆ ಸಾವಿನ ಸುದ್ದಿಯನ್ನು ಒಂದಲ್ಲ, ಮೂರು ಮೂರು ಬಾರಿ ತಂದ ಸೋಮಣ್ಣ ಟೆಲಿಫೋನ್ ಗಳ ವ್ಯಾಪಕ ಬಳಕೆಯಿಲ್ಲದ ಆ ದಿನಗಳಲ್ಲಿ ಸಾವಿನಂತಹ ಶೋಕಭರಿತ ಸುದ್ದಿಗಳನ್ನು ಊರಿಂದ ಹೊರಗಿದ್ದ ಊರಿನ ಜನಕ್ಕೆ ಮುಟ್ಟಿಸುವ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ. ಹೇಳಬೇಕಾದ ವಿಷಯವನ್ನು ಸೂಕ್ತರೀತಿಯಲ್ಲಿ, ಆದಷ್ಟೂ ಕಡಿಮೆ ಶಬ್ದಗಳ ಮೂಲಕ ಸಂವಹನಿಸುವುದರಲ್ಲಿ ಅತಿರಥ ಮಹಾರಥ್ಯವನ್ನು ಕೈವಶ ಮಾಡಿಕೊಂಡಿದ್ದ ಸೋಮಣ್ಣ ಎಂದೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಿದವನೇ ಅಲ್ಲ. ಯಾವುದೇ ಹೆಚ್ಚಿನ ವಿವರಣೆಗಳಿಲ್ಲದೆ ಸೋಮಣ್ಣ ಬಿತ್ತರಿಸುತ್ತಿದ್ದ ಅಶುಭಸುದ್ದಿಗಳು ಅಂದು ಸಾಕಷ್ಟು ಪ್ರಚಲಿತವಾಗಿಯೇ ಇದ್ದ ಟೆಲಿಗ್ರಾಂನಷ್ಟೆ ಹ್ರಸ್ವವಾಗಿರುತ್ತಿದ್ದವು. ಹೇಗೆ ಟೆಲಿಗ್ರಾಂ ಕೊಡುತ್ತಿದ್ದ ಸುದ್ದಿಗಳು ವ್ಯಾಕರಣಭರಿತವಾಗಿ ಇಲ್ಲದೇ ಹೋದರೂ ರವಾನಿಸಬೇಕಾದ ಮಾಹಿತಿಯನ್ನು ಕರಾರುವಕ್ಕಾಗಿ ನೀಡುತ್ತಿದ್ದವೋ ಥೇಟ್ ಅದೇ ರೀತಿಯಲ್ಲಿ ಸುಂದರ, ತರ್ಕಬದ್ಧ ಆಲಾಪಗಳ ಹೊರತಾಗಿಯೂ ಹೇಳಬೇಕಾದ ಸುದ್ದಿಸಾರವನ್ನು ಕೇಳುವ ಕಿವಿಗಳಿಗೆ ಮನನವಾಗುವಂತೆ ಮುಟ್ಟಿಸುವ, ಅನುಕರಿಸಲು ಅಸಾಧ್ಯವೆನಿಸಿದ, ಗಮಕಕಲೆಯೊಂದು ಸೋಮಣ್ಣನಿಗೆ ಸಹಜವಾಗಿಯೇ ಸಿದ್ಧಿಸಿತ್ತು. ವಿಷಯವನ್ನು ಹೆಕ್ಕಿ, ಹೆಕ್ಕಿ ವಿಶದವಾಗಿ ಅರಿಯಬೇಕು ಎಂದವರಿಗೆ

ತೀವ್ರನಿರಾಶೆಯನ್ನು ಉಂಟುಮಾಡುವಂತಿದ್ದ ಸೋಮಣ್ಣ ಇಂದಿನ ಯಂತ್ರಮಾನವರನ್ನು ಹೋಲುವ ರೀತಿಯಲ್ಲಿಯೇ ತನ್ನ ಕಾರ್ಯಸಾಧನೆಗೈಯುತ್ತಿದ್ದ. ತಾನು ಬಂದ ಕೆಲಸ ಮುಗಿದ ನಂತರ ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ, ತಾನು ಬಂದ ಊರಲ್ಲಿ ಮತ್ತೆ ಯಾರಾದರೂ ಸಂಬಂಧಿಗಳಿದ್ದಲ್ಲಿ, ಅವರಿಗೂ ಸಮರ್ಪಕ ರೀತಿಯ ವಿಷಯ ಪಾರಾಯಣೆಯನ್ನು ಮಾಡಿಯಾದ ಮೇಲೆ, ತನ್ನ ಊರ ದಾರಿಯನ್ನು ಹಿಡಿಯುತ್ತಿದ್ದ ಸೋಮಣ್ಣ ನನ್ನಲ್ಲಿ ಮೊದಲಿನಿಂದಲೂ ತೀವ್ರತರವಾದ ಕುತೂಹಲವನ್ನು ಹುಟ್ಟಿಹಾಕಿದ್ದವನೇ. ಎಪ್ಪತ್ತನೇ ದಶಕದ ಮಧ್ಯಭಾಗದಲ್ಲಿ, ನಾವು ಊರಿನ ಬಸ್ ಸ್ಟ್ಯಾಂಡ್ ನಲ್ಲಿ ಹೊಸಮನೆಯನ್ನು ಕಟ್ಟಿಸುವ ಹೊತ್ತು, ಸಣ್ಣಸಿದ್ದಪ್ಪನವರ ಮಹಾಂತಪ್ಪ ಮೇಷ್ಟ್ರ ಮನೆಯಲ್ಲಿ ಬಾಡಿಗೆಗೆ ಇದ್ದ ವೇಳೆಯಲ್ಲಿ, ಸೋಮಣ್ಣ ನಮ್ಮ ನೆರೆಮನೆಯವನಾಗಿದ್ದ. ಹೀಗಾಗಿ ಸೋಮಣ್ಣ ನಾನು ಬಾಲ್ಯದಿಂದಲೂ ನೋಡುತ್ತಲೇ ಬಂದಿದ್ದ ವ್ಯಕ್ತಿ ವಿಶೇಷ ಎನ್ನಲು ಅಡ್ಡಿಯಿಲ್ಲ.

ನೋಡಲು ಐದೂವರೆ ಅಡಿಗಳಷ್ಟು ಎತ್ತರದ, ಸಾಧಾರಣ ಮೈಕಟ್ಟಿನ, ಕಪ್ಪು ಮೈಬಣ್ಣದ ಸೋಮಣ್ಣ ಸಾಮಾನ್ಯರಲ್ಲಿ ಸಾಮಾನ್ಯನಂತೆ ತೋರುತ್ತಿದ್ದ. ಸದಾ ಬಿಳಿಯ ಬಣ್ಣದ ಲುಂಗಿ, ವರ್ಷಗಳಿಂದ ಇಸ್ತ್ರಿಯನ್ನೇ ಕಾಣದ, ತೋಳುಗಳ ಮೇಲೆ ಬರುವ ಹಾಗೆ ಮಡಿಚಿ ಇಟ್ಟಿರುತ್ತಿದ್ದ ತುಂಬು ತೋಳಿನ ಮಾಸಿದ ಅಡ್ಡಡ್ಡ ಪ್ರಿಂಟ್ ಗಳಿದ್ದ ಪಟ್ಟೆ ಶರ್ಟ್, ಮೀಸೆಯೇ ಇಲ್ಲದ, ನಯವಾಗಿ ಶೇವ್ ಮಾಡಿರುತ್ತಿದ್ದ ಕೆನ್ನೆಗಳು, ನಿಖರವಾಗಿ ತಿದ್ದಿಟ್ಟಂತೆ ಮೂಡಿದ ಗದ್ದ, ಸಣ್ಣಹಣೆಯ ಮೇಲೆ ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದ ತುಸು ಗುಂಗುರು ಎಂದೇ ಹೇಳಬೇಕಾದ ಚಿಕ್ಕದಾದ ಕಪ್ಪುಕೂದಲುಗಳ ದಟ್ಟರಾಶಿ, ಮುಖದ ಆಕಾರಕ್ಕೆ ಹೋಲಿಸಿದಲ್ಲಿ ಚಿಕ್ಕವೇ ಅನ್ನಿಸುವಂತಿದ್ದ ಕಿವಿಗಳು, ನೀಳವಾಗಿ, ತುದಿಯಲ್ಲಿ ತುಸುವೇ ಹರಡಿಕೊಂಡಿದ್ದಂತೆ ಭಾಸವಾಗುತ್ತಿದ್ದ ದಪ್ಪಮೂಗು ಇವು ನನಗೆ ಈ ಹೊತ್ತು ನೆನಪಿನಲ್ಲಿ ಉಳಿದಿರುವ ಸೋಮಣ್ಣನ ಬಾಹ್ಯರೂಪಿನ ವಸ್ತುನಿಷ್ಠ ವಿವರಣೆ. ಜೀವಮಾನವಿಡೀ ಕಾಲಲ್ಲಿ ಎಂದೂ ಚಪ್ಪಲಿಯನ್ನು ಮೆಟ್ಟಿದವನೇ ಅಲ್ಲದ ಸೋಮಣ್ಣ ಸುದ್ಧಿ ಸಂವಹನೆಗಾಗಿ ಅಕ್ಷರಶಃ ತನ್ನ ಪಾದಾರವಿಂದಗಳನ್ನು ಅತಿ ಹೆಚ್ಚು ಎನ್ನುವ ರೀತಿಯಲ್ಲಿ ಸವೆಸಿದವನೆ. ಸೋಮಣ್ಣನನ್ನು ನೋಡುವಾಗಲೆಲ್ಲಾ ನಾನು ನಾಲ್ಕನೇ ತರಗತಿಯ ಶಾಲಾಪ್ರವಾಸದ ವೇಳೆ ನೋಡಿದ ಶ್ರವಣಬೆಳಗೊಳದ ಗೊಮ್ಮಟನ ನೆನಪಾಗುತ್ತಿತ್ತು. ಗಟ್ಟಿಯಾಗಿ ಮುಚ್ಚಿಕೊಂಡಿರುವ ಗೊಮ್ಮಟನ ಮೂರ್ತಿಯ ಸ್ಪಷ್ಟ, ದೃಢವಾದ ತುಟಿಗಳನ್ನು ಹೋಲುವ ತುಟಿಗಳ ಒಡೆಯನಾದ ಸೋಮಣ್ಣ ತನ್ನ ತುಟಿಗಳನ್ನು ಸದಾ ಹೊಲೆದುಕೊಂಡೇ ಇರುತ್ತಿದ್ದ. ಸೋಮಣ್ಣನ ಬಾಯಿಯನ್ನು ಬಿಡಿಸುವುದು ನನ್ನ ಮಟ್ಟಿಗಂತೂ ಪ್ರತಿಬಾರಿಯೂ ಅಸಾಧ್ಯವಾದ ಕಾರ್ಯವೇ ಆಗಿ ಸಾಬೀತಾಗುತ್ತಿತ್ತು. ಅನೇಕ ಬಾರಿ, ಸೋಮಣ್ಣ ಸಿಕ್ಕಾಗಲೆಲ್ಲಾ ಆತನನ್ನು ಮಾತಿಗೆ ಎಳೆಯುವ ನನ್ನ ಪ್ರಯತ್ನ, ಹೊಳೆಯಲ್ಲಿ ತೊಳೆಯುವ ಹುಣಸೇಹಣ್ಣಿನ ರೂಪಧಾರಣೆಯನ್ನೇ ಮಾಡುತ್ತಿತ್ತು. ಸೋಮಣ್ಣನನ್ನು ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ದೃಷ್ಟಿಕೋನಗಳಿಂದ ಕೇಳಿ, ಕೆರಳಿಸಿ ಆತನನ್ನು ಮಾತನಾಡಲಿಕ್ಕೆ ಎಳೆಯುವ ನನ್ನ ಯಾವ ಪ್ರಯತ್ನಗಳೂ ಅಲ್ಲಿಯವರೆಗೂ ಸಫಲವಾಗಿದ್ದಿಲ್ಲ. ನಾನು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಮೌನದಿಂದಲೇ ಉತ್ತರ ನೀಡುತ್ತಿದ್ದ ಸೋಮಣ್ಣ ಬಹಳ ಅಪರೂಪಕ್ಕೆ ಒಮ್ಮೆ “ಹೂಂ”, “ಉಹೂಂ” ಎಂದಷ್ಟೇ ಹೇಳಿ ಮತ್ತದೇ ತನ್ನ ಟ್ರೇಡ್ ಮಾರ್ಕ್ ಆದ ಮೌನದ ಮೊರೆ ಹೋಗುತ್ತಿದ್ದ. ಹಿಮಾಲಯದ ಹಿಮಚ್ಚಾದಿತ ಪರ್ವತಗಳ ಜನರಹಿತ ಶಿಖರಶ್ರೇಣಿಗಳಲ್ಲಿ ವಾಸಮಾಡಲಿಕ್ಕೆ ಯೋಗ್ಯ ಎಂದು ತೋರಿಬರುತ್ತಿದ್ದ ಸೋಮಣ್ಣ ತನ್ನ ಮಾತುಗಳಲ್ಲಿ ತೋರಿಸುತ್ತಿದ್ದ ಮಟ್ಟದ ಜಿಪುಣತನವನ್ನು ತನ್ನ ಮಾತುಗಳಲ್ಲಿ ಪ್ರದರ್ಶಿಸಿದ ಯಾವ ವ್ಯಕ್ತಿಯನ್ನೂ ನಾನು ನನ್ನ ಜೀವಮಾನದಲ್ಲಿಯೇ ಇಲ್ಲಿಯವರೆಗೂ ನೋಡಿಲ್ಲ.

 

ತನ್ನ ದಿವ್ಯಮೌನದ ಹೊರತಾಗಿಯೂ ಸೋಮಣ್ಣ ವಿಧೇಯತೆಯ ಮೂರ್ತಿ ಸ್ವರೂಪವಾಗಿದ್ದ. ಪರಿಚಯದ ಯಾರಾದರೂ ಹೇಳಿದ ಕೆಲಸಗಳನ್ನ ಇಲ್ಲ ಎನ್ನದೇ ಮಾಡುತ್ತಿದ್ದ ಸೋಮಣ್ಣ ಊರ ಅನೇಕ ಸೇವಾಕಾಂಕ್ಷಿಗಳ ಆಪತ್ಭಾಂದವನಂತೆ ಕಾರ್ಯ ನಿರ್ವಹಿಸುತ್ತಿದ್ದ. ಮಾಡಬೇಕಾದ ಕೆಲಸವನ್ನು ಸೋಮಣ್ಣನಿಗೆ ವಹಿಸಿದರೆ ತೀರಿತು, ಮತ್ತೆ ಆ ಕಡೆ ಗಮನ ಹರಿಸಬೇಕಾಗಿಲ್ಲ ಎನ್ನುವುದು ಊರ ಲಿಂಗಾಯತ ಮನೆಗಳ ಮಟ್ಟಿಗೆ ಆ ಕಾಲಮಾನದಲ್ಲಿ ಜನಜನಿತವಾದ ವಿಷಯವೇ ಆಗಿತ್ತು. ಹೀಗಾಗಿ ದೂರದೂರುಗಳಿಗೆ ಅಶುಭಸುದ್ದಿ ಸಂವಹನೆಗಳ ಸಂದರ್ಭದಲ್ಲಿ ಸೋಮಣ್ಣ ಊರಜನಗಳಿಗೆ ಅನಿವಾರ್ಯವಾಗಿ ನೆನಪಾಗುತ್ತಿದ್ದ “ಸಂಕಟ ಬಂದಾಗಿನ ವೆಂಕಟರಮಣನೇ” ಆಗಿದ್ದ. ಊರ ಯಾರ ಮನೆಯಲ್ಲಿಯಾದರೂ ಮೃತ್ಯು ಸಂಭವಿಸಿದ ವೇಳೆಯಲ್ಲಿ, ಗುಂಡಿತೋಡುವ, ಶಾಸ್ತ್ರಸಂಬಂಧಿ ಕಾರ್ಯಗಳನ್ನು ಸಂಪನ್ನಗೊಳಿಸುವ ವ್ಯಕ್ತಿಗಳಿಗೆ ನಡೆಸುವ ಹುಡುಕಾಟದ ಹಾಗೆಯೇ ಸಂತ್ರಸ್ತಮನೆಗಳ ವತಿಯಿಂದ ಸೋಮಣ್ಣನ ಹುಡುಕಾಟವೂ ಮೊದಲಾಗುತ್ತಿತ್ತು. ಸಾವಿನ ಸುದ್ದಿಯನ್ನು ಹೊತ್ತು ಸೋಮಣ್ಣ ಹೋಗಬೇಕಾಗಿದ್ದ ಊರುಗಳ ಪಟ್ಟಿ, ಅಲ್ಲಿ ಭೇಟಿ ನೀಡಬೇಕಾದ ಮನೆಗಳ ಪಟ್ಟಿ ಇವುಗಳನ್ನು ಸೋಮಣ್ಣನಿಗೆ ಒಪ್ಪಿಸಿದರೆ ಸಾವು ಸಂಭವಿಸಿದವರ ಮನೆಯವರ ಕಡೆಯಿಂದ ಒಂದು ಬಹಳ ದೊಡ್ಡ, ತುರ್ತು ಅಗತ್ಯದ ಕಾರ್ಯವೊಂದು ಮುಕ್ತಾಯವಾದ ಹಾಗೆಯೇ ಅನ್ನಿಸುತ್ತಿತ್ತು. ಮನೆಯವರು ಕೊಟ್ಟ ಅಷ್ಟೂ ಊರುಗಳ, ಪ್ರತಿ ಊರಿನ ಅಷ್ಟೂ ಮನೆಗಳ ಭೇಟಿಯನ್ನು ತನ್ನ ಪರಮಕರ್ತವ್ಯದ ಹಾಗೆ ತಲೆ ಮೇಲೆ ಹೊತ್ತು ಮಾಡಿ ಮುಗಿಸುತ್ತಿದ್ದ ಸೋಮಣ್ಣ ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ, ಊರ ಮೂಲಕ ಹಾದು ಹೋಗುತ್ತಿದ್ದ ಸರ್ವೀಸ್ ಬಸ್ ಗಳ ಸವಾರನಾಗಿ, ಸುದ್ದಿ ತಲುಪಿಸಬೇಕಾದ ಎಲ್ಲಾ ಊರುಗಳ, ಎಲ್ಲಾ ಮನೆಗಳನ್ನೂ ಹೊಕ್ಕು ವಿಷಯವನ್ನು ಆದಷ್ಟೂ ಶೀಘ್ರವಾಗಿ, ಹ್ರಸ್ವವಾಗಿ, ಚೊಕ್ಕದಾಗಿ ರವಾನಿಸುತ್ತಿದ್ದ. ಸೋಮಣ್ಣ ತನ್ನ ಈ ಶೋಕಭರಿತ ಸಮಾಚಾರಗಳನ್ನು ಬಿತ್ತರಿಸುವ ಕೆಲಸದಲ್ಲಿ ತೋರುತ್ತಿದ್ದ ಅತ್ಯಂತ ಹೆಚ್ಚಿನಮಟ್ಟದ ಶ್ರದ್ಧೆಯ ಕಾರಣದಿಂದಾಗಿ ಶೋಕತೃಪ್ತ ಮನೆಮಂದಿಗಳ ಮೊದಲ ಮತ್ತು ಕೊನೆಯ ಆಯ್ಕೆಯಾಗಿರುತ್ತಿದ್ದ. ತನ್ನ ಈ ಕೆಲಸದಲ್ಲಿ ದೊಡ್ಡಮಟ್ಟದ ವೃತ್ತಿಪರತೆಯನ್ನು ಮೆರೆಯುತ್ತಿದ್ದ ಸೋಮಣ್ಣ ಹೃದಯಗಳಿಗೆ ಶಾಕ್ ಕೊಡುವಂತಹ ವಿಷಯಗಳನ್ನು ತನ್ನ ತಣ್ಣನೆಯ, ಕುಗ್ಗಿದ ಸ್ವರದಲ್ಲಿ ಆರುಹುತ್ತಿದ್ದರೆ ವಿಷಯದ ತೀವ್ರತೆ ಎಷ್ಟೋ ಪಟ್ಟು ಕಡಿಮೆಯಾದ ಅನುಭವವೊಂದಕ್ಕೆ ಫಲಾನುಭವಿಗಳು ಪಾತ್ರವಾಗುತ್ತಿದ್ದರು ಎನ್ನುವ ಮಾತಿಗೆ ನಾನೇ ಸಾಕ್ಷಿಯಾಗಿದ್ದೇನೆ.

ಸೋಮಣ್ಣ ಹೆಚ್ಚು ಓದಿದವನಲ್ಲ. ಹಾಗೋ ಹೀಗೋ ಮಾಡಿ ಊರಿನ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯ ಮೊದಲ ಮೂರು ತರಗತಿಗಳ ಮುಖದರ್ಶನ ಮಾಡುವ ವೇಳೆಗೆ ಬಸವಳಿದು, ಹೈರಾಣಾಗಿ ಶಾಲೆಗೆ ದೊಡ್ಡ ನಮಸ್ಕಾರ ಹೊಡೆದು ಹೊರಬಿದ್ದ ಸೋಮಣ್ಣ ತನ್ನ ತಂದೆ ಭೀಮಣ್ಣ ಮತ್ತು ತಾಯಿ ತಿಪ್ಪಮ್ಮ ಅನೇಕ ವರ್ಷಗಳ ಕಾಲ ನಡೆಸಿಕೊಂಡು ಬರುತ್ತಿದ್ದ, ಹೊಲೆಯರ ಕೇರಿಯಲ್ಲಿದ್ದ ಚಿಲ್ಲರೆ ಅಂಗಡಿಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವ ವಿಶೇಷವಾದ ಆಸಕ್ತಿಯನ್ನೂ ತೋರಲಿಲ್ಲ.

 

ಬದಲಾಗಿ, ಅಣ್ಣ ಪ್ರೈಮರಿ ಶಾಲೆಯ ಶಿಕ್ಷಕನಾಗಿ ಸರ್ಕಾರಿಸೇವೆಯಲ್ಲಿ ತೊಡಗಿದ ಬಳಿಕ ಇದ್ದ ನಾಲ್ಕು ಎಕರೆ ಖುಷ್ಕಿ ಜಮೀನಿನ ಕೃಷಿಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡ. ಸೋಮಣ್ಣ ಕನ್ನಡ ಓದಲೂ ತಡವರಿಸುತ್ತಿದ್ದ ಪರಿ ಮಾತ್ರ ನನ್ನಲ್ಲಿ ಅನೇಕ ಬಾರಿ ನಗೆಯ ಅಲೆಯನ್ನು ಉಕ್ಕಿಸಿದ್ದಿದೆ. ಕನ್ನಡ ಕರಪತ್ರವೊಂದನ್ನು ನಡುಗುವ ಕೈಗಳಿಂದ ಓದಲು ಶುರುಮಾಡುತ್ತಿದ್ದ ಸೋಮಣ್ಣ ಅರ್ಧಗಂಟೆಗಳ ಕಾಲ ಕಳೆದರೂ ಮುಗಿಯದ ಕರಪತ್ರವನ್ನು ಓದುವ ತನ್ನ ಪ್ರಯತ್ನದ ಭರಾಟೆಯಲ್ಲಿ ತೊಟ್ಟಬಟ್ಟೆಗಳು ಒದ್ದೆಯಾಗುವಂತೆ ಬೆವರುತ್ತಿದ್ದನೇ ಹೊರತು ಕರಪತ್ರದ ಓದು ಒಂದು ಸಾಲೂ ಮುಂದೆ ಸಾಗುತ್ತಿರಲಿಲ್ಲ. ತನ್ನ ಸೌಮ್ಯಸ್ವಭಾವ, ರವಷ್ಟೂ ಕೋಪಗೊಳ್ಳದ ಮನೋಭಾವ, ತಾನು ಇದ್ದ ಸ್ಥಿತಿಗತಿಗಳ ಬಗ್ಗೆ ಎಂದೂ ಗೊಣಗದ, ಬೇಸರ ವ್ಯಕ್ತಪಡಿಸದ ಮನಃಸ್ಥಿತಿಯ ಸೋಮಣ್ಣ ತನ್ನ ಈ ಅಪರೂಪದ ಗುಣಗಳಿಂದಲೇ ಜನಮಾನಸಕ್ಕೆ ಹೆಚ್ಚು ಹತ್ತಿರವಾಗಿದ್ದ. ಮೃತ್ಯುಸೋಂಕಿದ ಮನೆಗಳವರು ತಮ್ಮ ದುಃಖದಲ್ಲಿ ಮುಳುಗಿ, ಸೋಮಣ್ಣನಿಗೆ ಊರುಗಳಿಗೆ ಹೋಗಬೇಕಾದ ಖರ್ಚುವೆಚ್ಚಗಳನ್ನು ಕೊಡಲು ಮರೆತ ಹೊತ್ತೂ, ಹಣದ ಬಗ್ಗೆ ತಗಾದೆ ಮಾಡದೆ ತನ್ನ ಬಳಿ ಇದ್ದ ಹಣವನ್ನೋ ಅಥವಾ ಊರ ಯಾರ ಬಳಿಯಾದರೂ ಕೇಳಿ ಪಡೆದ ಕೈಸಾಲವನ್ನೋ ಬಳಸಿಕೊಂಡು ಸಾವಿನ ಸುದ್ದಿಯನ್ನು ಅರುಹುವ ತನ್ನ ಘನಕಾರ್ಯಕ್ಕೆ ಮೂರ್ತಸ್ವರೂಪ ಕೊಡಲು ಮುಂದಾಗುತ್ತಿದ್ದ ಸೋಮಣ್ಣ ಮೃತವ್ಯಕ್ತಿಯ ಸಾವಿನ ಸಂಬಂಧದ ಎಲ್ಲಾ ಕಾರ್ಯಗಳೂ ಮುಗಿದ ನಂತರವೇ ತನಗೆ ಬರಬೇಕಾದ ಹಣವನ್ನು ಸಂತ್ರಸ್ತಮನೆಗಳವರ ಬಳಿ ಸೂಕ್ಷ್ಮರೀತಿಯಲ್ಲಿ ಕೇಳಿ ಪಡೆಯುತ್ತಿದ್ದ. ಮನೆಯವರು “ಎಷ್ಟು ಹಣ ಖರ್ಚಾಯಿತು?” ಎಂದು ಪದೇ ಪದೇ ಕೇಳಿದರೂ ಸ್ಪಷ್ಟವಾಗಿ ಏನನ್ನೂ ಹೇಳದಿರುತ್ತಿದ್ದ ಸೋಮಣ್ಣ ಮನೆಯವರು ಕೊಟ್ಟ ಹಣವನ್ನು ದೂಸರಾ ಮಾತಿಲ್ಲದೆ ಸ್ವೀಕರಿಸಿ ಹೊರಡುತ್ತಿದ್ದ. ತನ್ನ ಜೇಬಿನಿಂದ ಆದ ಖರ್ಚಿಗೆ ಸಮನಾದ ಹಣವನ್ನಷ್ಟೆ ಮನೆಯವರಿಂದ ಅಪೇಕ್ಷಿಸುತ್ತಿದ್ದ ಸೋಮಣ್ಣ ಒಂದು ವೇಳೆ ಮನೆಯವರು ಆದ ಖರ್ಚಿಗಿಂತಲೂ ಹೆಚ್ಚಿನ ಹಣಕೊಡಲು ಮುಂದಾದರೆ ಅದನ್ನು ತನಗೆ ಸಾಧ್ಯವಾದ ಎಲ್ಲಾ ನಯವಂತಿಕೆಯೊಂದಿಗೆ ತಿರಸ್ಕರಿಸುತ್ತಿದ್ದ. ಶೋಕಸುದ್ದಿಗಳ ಬಿತ್ತರಿಕೆಯಲ್ಲಿ ವ್ಯಯವಾಗುತ್ತಿದ್ದ ತನ್ನ ಸಮಯ, ಶ್ರಮದ ಲೆಕ್ಕವನ್ನ ಎಂದೂ ಹಣದ ರೂಪದಲ್ಲಿ ಗಣನೆಗೆ ಹಾಕದ ಸೋಮಣ್ಣ ಸಾವಿನ, ಕೆಟ್ಟಸುದ್ದಿಗಳ ಪ್ರಸಾರವನ್ನು ಸಮಾಜದ ಒಂದು ಅಗತ್ಯ ಸೇವೆಯ ರೂಪದಲ್ಲಿಯೇ ಪರಿಗಣಿಸಿಕೊಂಡು ಬಂದವನಾಗಿದ್ದ.

ಸೋಮಣ್ಣನನ್ನು ಕೇವಲ ಅಶುಭಸುದ್ದಿಗಳ ಸರದಾರನಾಗಿಯೇ ನೋಡಬೇಕಿಲ್ಲ. ಧಾರಾಳರೂಪದಲ್ಲಿ ಶುಭಸುದ್ದಿಗಳ, ಅದರಲ್ಲೂ ಮದುವೆಮುಂಜಿಯಂತಹ ಶುಭಕಾರ್ಯಗಳ ಕರೆಯೋಲೆಗಳನ್ನ ಹಂಚುವಲ್ಲಿಯೂ ಸೋಮಣ್ಣ ಅಗಾಧಮಟ್ಟದ ಕಾರ್ಯಕ್ಷಮತೆಯನ್ನು ಸಾಧಿಸಿ ತೋರಿಸಿದ್ದ. ಮದುವೆಮನೆಯವರು, ಕಾರಣಾಂತರಗಳಿಂದ ಬಳಿಸಾರಲು ಆಗದೇ ಇದ್ದ ಊರುಗಳಲ್ಲಿ ನೆಲೆಸಿದ್ದ ನೆಂಟರಿಷ್ಟರನ್ನು ಕೂಗುವ ಕೆಲಸದಲ್ಲಿ ಸೋಮಣ್ಣ ಅನಿವಾರ್ಯವಾಗಿ ಬೇಕಾದವನಾಗಿದ್ದ. ಬಳ್ಳಾರಿಸೀಮೆಯ ಹಳೇಕೋಟೆ, ಕುಡುತಿನಿ, ಮಿಂಚೇರಿ, ಸಿರುಗುಪ್ಪ, ತೆಕ್ಕಲುಕೋಟೆ, ಜೋಳದರಾಶಿ, ಎಮ್ಮಿಗನೂರು, ಕುರುಗೋಡು, ಕಲ್ಲೂರು, ಮಣ್ಣೂರು, ಸಿಂಧೋಗಿ, ಗಣೇಕಲ್ಲು, ಚೇಳಗುರ್ಕಿ, ಸಿರುಗುಪ್ಪ, ಕಲ್ಲುಕಂಭ, ತಿಪ್ಪಲಾಪುರ, ಜವಳಗೇರಿ ಮುಂತಾದ ಹಲವು ಹತ್ತೂರುಗಳನ್ನ ಒಂದು ವಾರಕ್ಕೂ ಮೀರಿದ ಕಾಲಾವಧಿಯಲ್ಲಿ, ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡ ಹಾಗೆ ತಿರುಗಿ, ಆಮಂತ್ರಣ ಪತ್ರಿಕೆಗಳನ್ನ ಹಂಚುತ್ತಿದ್ದ ಸೋಮಣ್ಣ ಯಾವ ಊರಿನಲ್ಲಿಯೂ ರಾತ್ರಿ ವೇಳೆಯಲ್ಲಿ ನಿಂತವನೇ ಅಲ್ಲ. ಆದಷ್ಟೂ ರಾತ್ರಿಯ ವೇಳೆಯಲ್ಲಿ ಸರ್ಕಾರಿ ಬಸ್, ಖಾಸಗಿ ಬಸ್, ಲಾರಿ ಅಥವಾ ಅಂತಹುದೇ ಯಾವುದೇ ಆ ವೇಳೆಗಳಲ್ಲಿ ಲಭ್ಯವಿರುತ್ತಿದ್ದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮೂಲಕ ಊರಿಂದೂರಿಗೆ ಪ್ರಯಾಣಿಸುತ್ತಿದ್ದ ಸೋಮಣ್ಣ ಊಟ, ತಿಂಡಿಯ ಸಮಯಗಳಲ್ಲಿ ಮಾತ್ರ ತಾನು ಭೇಟಿಕೊಟ್ಟ ಮನೆಗಳವರು ಬಲವಂತಮಾಡಿ ಕೊಡಮಾಡಿದ ಆಹಾರವನ್ನಷ್ಟೆ ಸ್ವೀಕರಿಸಿ ಆತುರಾತುರವಾಗಿ ಬಾಕಿ ಉಳಿದ ಮನೆಗಳನ್ನು ಸುದ್ದಿಯಿಂದ ಆವರಿಸಲು ಅರಸಿ ಹೊರಡುತ್ತಿದ್ದ. ಊಟತಿಂಡಿಯ ಸಮಯ ಮುಗಿದ ನಂತರದಲ್ಲಿ ಸೋಮಣ್ಣ ಕರೆಯಲು ಹೋದ ಮನೆಗಳವರು ಎಷ್ಟೇ ಬಲವಂತ ಮಾಡಿದರೂ ಕಾಫಿ, ಟೀಗಳನ್ನೂ ಸೇವಿಸದೆ ಕೇವಲ ಒಂದು ಲೋಟ ನೀರು ಮಾತ್ರ ಸೇವಿಸಿ ತನ್ನ ದಣಿವರಿಯದ ಕಾಯಕವನ್ನು ಮುಂದುವರೆಸುತ್ತಿದ್ದ. ಆದರೂ ಅದ್ಯಾವ ಕಾರಣಗಳಿಂದಲೋ ಸೋಮಣ್ಣನ ನೆನಪು ಆತ ತರುತ್ತಿದ್ದ ಸಾವಿನ, ಅಶುಭಸುದ್ದಿಗಳ ಕಾರಣ ಮಾತ್ರವೇ ನನ್ನ ಮನಸ್ಸಿನಲ್ಲಿ ಅಚ್ಚಾಗಿ, ಆತ ತರುತ್ತಿದ್ದ ಶುಭಕಾರ್ಯಗಳ ಸುದ್ದಿಗಳ ನೆನಪೇ ನನ್ನಲ್ಲಿ ಇಲ್ಲದಿರುವುದು ಸೋಜಿಗವೇ ಸರಿ. ಸೋಮಣ್ಣ, ನಮ್ಮ ಮನೆಯ ಮಟ್ಟಿಗಾದರೂ, ಎಂದೂ ಶುಭ ಸುದ್ದಿಸಮಾಚಾರಗಳ ವಾಹಕನಾಗಿ ಬರಲಿಲ್ಲ ಎನ್ನುವುದೂ ಇದಕ್ಕೆ ಬಹಳ ಪ್ರಮುಖವಾದ ಅಂಶವಾಗಿರಬೇಕು.

 

ಸೋಮಣ್ಣ ಬಡತನವನ್ನೇ ಹೊದ್ದು ಜೀವಿಸಿದವನು. ಹೆಂಡತಿ ಹನುಮಂತಕ್ಕ, ಮಗಳು ಪುಷ್ಪ, ಈಶ್ವರಿಯೊಂದಿಗೆ ತನ್ನ ಚಿಕ್ಕಚೊಕ್ಕ ಸಂಸಾರವನ್ನು ಹೆಚ್ಚಿನ ಯಾವ ಪ್ರಲೋಭಗಳಿಗೂ ಒಳಗಾಗದೆ ವ್ಯಥಿಸಿದ ಸೋಮಣ್ಣ ಇದ್ದ ಹಾಸಿಗೆಯ ಉದ್ದದ ಅರ್ಧಕ್ಕಷ್ಟೆ ಕಾಲು ಚಾಚಿದವನು. ತಳಕುಬಳುಕುಗಳ ಜೀವನ ಶೈಲಿಯಿಂದ ಗಾವುದ ದೂರವೇ ಉಳಿದಿದ್ದ ಸೋಮಣ್ಣ ಸುಖಜೀವನದ ಕಲ್ಪನೆಯನ್ನೇ ತನ್ನ ತಲೆಯಲ್ಲಿ ತಾರದವನು. ಸುದ್ದಿ ಆರುಹಲು ಹೋದ ಮನೆಗಳಲ್ಲಿ ಐದು ನಿಮಿಷಗಳ ಕಾಲಕ್ಕಿಂತ ಹೆಚ್ಚು ಕೂತರೆ ವಿಚಿತ್ರ ಚಡಪಡಿಕೆಗೆ ಒಳಗಾದಂತೆ ತೋರುತ್ತಿದ್ದ ಸೋಮಣ್ಣ ತನ್ನ ಮನೆಯಲ್ಲಿ ಕಳೆದ ಸಮಯಕ್ಕಿಂತ ಹೆಚ್ಚಾದ ಸಮಯವನ್ನು ರಾಜ್ಯದ ರಸ್ತೆಗಳ ಮೇಲೆಯೇ ಕಳೆದವನು. ಇಂದಿನ ಸಾಮಾಜಿಕ ತಾಣಗಳು, ಮೊಬೈಲುಗಳ ಜಗತ್ತಿಗೆ ಸುಲಭದ ಸಂವಾದಿಯಾಗಿದ್ದ ಸೋಮಣ್ಣ ಅಂತರ್ಜಾಲ ಇಲ್ಲದ ವೇಳೆಯಲ್ಲಿಯೂ ಜನಮನಗಳ ಮಧ್ಯೆ ಸಂಬಂಧಗಳ ಜಾಲವನ್ನು ಬಲವಾಗಿ ಹೆಣೆದಾತ, ಇದ್ದ ಜಾಲವನ್ನು ಗಟ್ಟಿಗೊಳಿಸುತ್ತಾ ನಡೆದಾತ. ಸುದ್ದಿಬಿತ್ತರಿಕೆ ಕಷ್ಟಸಾಧ್ಯ ಎನ್ನಿಸಿದ ಹೊತ್ತು ತನ್ನ ಶ್ರಮದಾನದ ಮೂಲಕ ವಿಷಯಗಳ ಪ್ರಸರಣದಲ್ಲಿ ಗಮನ ಸೆಳೆಯುವ ಗಹನರೂಪದ ಕಾರ್ಯವನ್ನು ಸಾಧಿಸಿದಾತ. ವಿಶೇಷರೂಪದ ಸೌಲಭ್ಯ ಸವಲತ್ತುಗಳನ್ನ ಬೇಡದೆ, ಲಭ್ಯವಿದ್ದ ಸಾಧನ ಸವಲತ್ತುಗಳ ಮುಖೇನ ಸುದ್ದಿಗಳನ್ನು ಅವುಗಳ ಮೂಲಸ್ವರೂಪದಲ್ಲಿಯೇ ಪ್ರಸರಿಸಿದಾತ. ನೈಜಸುದ್ದಿಗಳನ್ನ ಸುಣ್ಣಬಣ್ಣ, ರೆಕ್ಕೆಪುಕ್ಕಗಳನ್ನ ಹಚ್ಚದೆ ಅವುಗಳನ್ನು ಸಂತ್ರಸ್ತಮನೆಯವರು ತನಗೆ ಸಂವಹನಿಸಿದ ರೀತಿಯಲ್ಲಿಯೇ, ತನಗೇ ವಿಶಿಷ್ಠವಾದ, ತಗ್ಗಿದ ತೀವ್ರತೆಯೊಂದಿಗೆ, ಸಣ್ಣನೆಯ, ತಣ್ಣನೆಯ ಧ್ವನಿಯಲ್ಲಿ ಸಂಬಂಧಿಕರ ಮನೆಮನೆಗಳಿಗೆ ತಲುಪಿಸಿದಾತ. ಸುದ್ದಿಗಳಿಗೆ ಮಾತ್ರವೇ ಕಡೆಯವರೆಗೂ ತನ್ನ ಬದ್ಧತೆಯನ್ನು ಪ್ರದರ್ಶಿಸಿದ ಸೋಮಣ್ಣ ಸುದ್ದಿಗಳನ್ನು ಒಡಲಲ್ಲಿ ಮಡುಗಿಟ್ಟುಕೊಂಡು ಊರುಬಿಡುವ ಹೊತ್ತು ಸಂತ್ರಸ್ತರಮನೆಯ ಆರ್ಥಿಕ ಸ್ಥಿತಿಗತಿಗಳನ್ನ, ಅವರ ಸಾಮಾಜಿಕಸ್ತರವನ್ನು ಎಂದೂ ತನ್ನ ಗಮನೆಗೆ ತಂದವನೇ ಅಲ್ಲ. ಬಡವ-ಬಲ್ಲಿದ, ಆಳು- ಕೀಳುಗಳ, ಜಾತಿ-ಧರ್ಮಗಳ ಮಿತಿಗಳಿಂದಾಚೆ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿದ್ದ ಸೋಮಣ್ಣ ತನ್ನ ಸುದ್ದಿ ಪ್ರಸಾರವನ್ನು ತನ್ಮಯತೆಯಿಂದ, ಏಕಾಗ್ರಚಿತ್ತದಿಂದ ದಶಕಗಳ ಕಾಲ ಮುನ್ನಡೆಸಿಕೊಂಡು ಬರುವಲ್ಲಿ ಅತ್ಯಂತ ಸಮಾಜವಾದಿ, ಪ್ರಜಾಪ್ರಭುತ್ವ, ಜಾತ್ಯಾತೀತತೆಗಳ ರೀತಿನೀತಿಗಳನ್ನು ಢಾಳಾಗಿ ಮೇಳೈಸಿದಾತ. ಸೋಮಣ್ಣ ಮನೆಗೆ ಬಂದನೆಂದರೆ ಏನೋ ಅಶುಭಸುದ್ದಿ, ಅಪಶಕುನವನ್ನು ಹೊತ್ತೇ ತಂದಿದ್ದಾನೆ ಎಂದು ಭಾವಿಸುವ ಮಂದಿಯೇ ಹೆಚ್ಚಾಗಿದ್ದ ಕಾಲಘಟ್ಟದಲ್ಲಿಯೂ ಅಂತಹ ಯಾವ ವಿಚಾರಗಳ ಬಗ್ಗೆಯೂ ತನ್ನ ತಲೆಕೆಡಿಸಿಕೊಳ್ಳದೆ ತನ್ನ ಸುದ್ದಿ ಬಿತ್ತರಿಕೆಯಲ್ಲಿಯೇ ಧನ್ಯತೆಯನ್ನು ಕಂಡವನು ಸೋಮಣ್ಣ. ಊರ ನೂರಾರು ಜನರ ಸಾವಿನ ಸುದ್ದಿಗಳ ದೂತನಾಗಿ ಕೆಲಸ ಮಾಡಿದ ಸೋಮಣ್ಣ ತನ್ನ ಅನನ್ಯ ಕಾರ್ಯಸಾಧನೆಯ ಬಗ್ಗೆ ಎಂದೂ ಹೆಮ್ಮೆಪಟ್ಟವನೇ ಅಲ್ಲ. ತಾನಾಯಿತು, ತಾನು ಒಪ್ಪಿ ಅಪ್ಪಿದ ಕೆಲಸವಾಯಿತು ಎನ್ನುತ್ತಲೇ ತನ್ನ ಕಾಯಕವನ್ನು ಕೈಗೊಂಡ ಸೋಮಣ್ಣ ಮೊದಲಬಾರಿಗೆ ಸುದ್ದಿಯನ್ನು ಬಿತ್ತರಿಸುವ ವೇಳೆ ಮೆರೆದ ಶ್ರದ್ಧೆಯನ್ನು ತನ್ನ ಕೊನೆಯ ಸುದ್ದಿಪ್ರಸರಣದ ವೇಳೆಯೂ ಮೆರೆದು ಅಪರೂಪದ ವೃತ್ತಿಪರತೆಯನ್ನು ಮೆರೆದಾತ, ಕೆಲಸವೊಂದನ್ನು ಕಾಯಕದ ಮಟ್ಟಕ್ಕೆ ಏರಿಸುವುದು ಹೇಗೆ? ಎನ್ನುವ ವಿಷಯದಲ್ಲಿ ಜಿಜ್ಞಾಸಿಗಳಿಗೆ ಸ್ವಯಂರೂಪದ ಪ್ರಾತ್ಯಕ್ಷಿಕೆಯಾದಾತ.

ಸೋಮಣ್ಣನ ಸಮಾಜಸೇವೆಯ ಮತ್ತೊಂದು, ಅಷ್ಟು ಪ್ರಚಾರಕ್ಕೆ ತುತ್ತಾಗದ ಆಯಾಮವೂ ಇದೆ. ಸುದ್ದಿಗಳ ಪ್ರಸಾರದಲ್ಲಿ ವ್ಯಸ್ಥನಾಗಿರದ ಹೊತ್ತು ಸೋಮಣ್ಣ ಊರಜನಗಳಿಗೆ ತನ್ನ ಸಹಾಯಹಸ್ತವನ್ನು ಧಾರಾಳವಾಗಿ ಚಾಚುತ್ತಿದ್ದ. ನಮ್ಮ ಮನೆಯ ಮಾಳಿಗೆಯ ಮೇಲೆ ಪ್ರತೀ ವರ್ಷ ಹಾಕುತ್ತಿದ್ದ ಕರ್ಲುಮಣ್ಣಿನ, ಒಂದು ಸಂಜೆಯ ಎರಡು ಮೂರು ಗಂಟೆಗಳ ಸಮುದಾಯದ ಯುವಕರ ಶ್ರಮದಾನದ ವೇಳೆ, ಸೋಮಣ್ಣ ಈ ತಂಡದ ಅವಿಭಾಜ್ಯ ಅಂಗವಾಗಿರುತ್ತಿದ್ದ. ಆಗೊಮ್ಮೆ, ಈಗೊಮ್ಮೆ ಮನೆಗೆ ತುರ್ತುಸಂದರ್ಭಗಳಲ್ಲಿ ಬೇಕಾದ, ಮರದ ಸೌದೆಗಳನ್ನು ಸೀಳುವ ಕೆಲಸಕ್ಕೆ ಸೋಮಣ್ಣನನ್ನು ಓಲೈಸುವ ಪರಿಪಾಠವಿತ್ತು. ಜೋಳದಸೊಪ್ಪೆಯ ಬಣವೆಯನ್ನು ಹಾಕುವ ವೇಳೆ, ತಿಪ್ಪೆಯಲ್ಲಿ ಸಂಗ್ರಹವಾದ ಗೊಬ್ಬರವನ್ನು ಹೊಲಕ್ಕೆ ಸಾಗಿಸುವ ವೇಳೆ, ಹೊಲದಲ್ಲಿ ಕಣವನ್ನು ಸಿದ್ದಪಡಿಸುವ ವೇಳೆ, ಮನೆಯನ್ನು ಸುಣ್ಣಬಣ್ಣಗಳಿಂದ ಹೊಂಡು ಬಳಿಯುವ ವೇಳೆ, ಮದುವೆಮುಂಜಿಗಳಂತಹ ಶುಭಕಾರ್ಯದ ಸಂದರ್ಭಗಳಲ್ಲಿ ಚಪ್ಪರಹಾಕುವ ವೇಳೆ, ಊಟಬಡಿಸುವ ವೇಳೆ, ಪಾತ್ರೆಪಗಡಗಳನ್ನು ಊರಮನೆಗಳಿಂದ ತರುವ ವೇಳೆ, ಅಡುಗೆಗೆ ಬೇಕಾದ ಒಲೆಗಳನ್ನು ನಿರ್ಮಿಸುವ ವೇಳೆ, ಕಾರ್ಯಗಳಿಗೆ ಬೇಕಾದ ತರಕಾರಿ, ಹಣ್ಣುಹಂಪಲುಗಳನ್ನು ದುರ್ಗದ ಮಾರುಕಟ್ಟೆಯಿಂದ ತರುವ ವೇಳೆ, ದನದ ಹಟ್ಟಿಗೆ ಗಚ್ಚುಕಲಸಿ ತೇಪೆ ಹಚ್ಚುವ ವೇಳೆ, ದನಗಳನ್ನು ಮಾರುವುದಕ್ಕಾಗಿ ಕಲ್ಲೇದೇವರಪುರದ ಜಾತ್ರೆಗೆ ಹೊಡೆದುಕೊಂಡು ಹೋಗುವ ಸಂದರ್ಭದಲ್ಲಿ, ನಾಯಕನಹಟ್ಟಿ ಜಾತ್ರೆ ವೇಳೆ ಊರ ಹೊರಗಿನ ಅವ್ವಕ್ಕಜ್ಜಿ, ಪುಟ್ಟಪ್ಪನವರ ತೋಟದಲ್ಲಿ ವಾರದ ಕಾಲ ಹೂಡುವ ವಾಸ್ತವ್ಯದ ತಯಾರಿಯ ವೇಳೆ, ಪ್ರತೀ ಮಂಗಳವಾರ ಊರಸಂತೆಯಲ್ಲಿ ಅವ್ವ ಹಾಕುತ್ತಿದ್ದ ತಿಂಡಿ ಅಂಗಡಿಯ ಟಾರ್ಪಾಲಿನ ಮಾಡು ಸಿದ್ಧಪಡಿಸುವ ವೇಳೆ ಹೀಗೆ ಹಲವು ಹತ್ತಾರು ಕೆಲಸಕಾರ್ಯಗಳು ಸಂಪನ್ನವಾಗುವ ಹೊತ್ತು, ಸೋಮಣ್ಣನ ಕೈವಾಡ ಇದ್ದೇ ಇರುತ್ತಿತ್ತು. ತನಗೆ ಕಾಲಲ್ಲಿ ತೋರಿಸಿದ ಕೆಲಸಗಳನ್ನು ತಲೆಯ ಮೇಲೆ ಹೊತ್ತು ಮಾಡುತ್ತಿದ್ದ ಸೋಮಣ್ಣ ನಮ್ಮ ಊರಜನರಿಗೆ, ರಾಮಾಯಣದ ಕಾಲದಲ್ಲಿ ಆಯೋಧ್ಯಾನಗರಿಯ ಪ್ರಜೆಗಳಿಗೆ ದೊರೆತ ಭರತನಂತಹವನು. ಎಂದೂ ತಾನು ಮಾಡುತ್ತಿದ್ದ ಸಹಾಯಗಳಿಗೆ ಹಣದ ರೂಪದಲ್ಲಿಯೋ ಅಥವಾ ವಸ್ತುಗಳ ರೂಪದಲ್ಲಿಯೋ ಪ್ರತಿಫಲ ಬಯಸದ ಸೋಮಣ್ಣನಿಗೆ ಒಂದು ಕಪ್ಪು ಚಹಾ ಕುಡಿಸುವುದರಲ್ಲಿ ನಮ್ಮ ಇರೋಬರೋ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗಿತ್ತು. ಅವ್ವ ಗದರಿಸಿ ಹೇಳಿದ ಹೊತ್ತು ಮಾತ್ರ ಒಲ್ಲದ ಮನಸ್ಸಿನಲ್ಲಿಯೇ ಚಹಾಸೇವನೆ ಮಾಡುತ್ತಿದ್ದ ಸೋಮಣ್ಣ ರಾಗದ್ವೇಷಗಳನ್ನು , ಅಸೂಯೆ ಅಸಮಾನತೆಗಳನ್ನ, ಕಷ್ಟಸುಖಗಳನ್ನ, ಹಗಲು ರಾತ್ರಿಗಳನ್ನು ಮೀರಿದ ಯೋಗಿಯ ಮನಃಸ್ಥಿತಿಯನ್ನು ಹೊಂದಿದ್ದವನಾಗಿದ್ದ. ತನ್ನ ಕಿತ್ತುತಿನ್ನುವ ಬಡತನದ ಮಧ್ಯೆಯೂ ಯಾರಿಂದಲೂ ಏನನ್ನೂ ಕೇಳಿ ಪಡೆಯದೇ ಇರುತ್ತಿದ್ದ ಸೋಮಣ್ಣನಿಗೆ ಪತ್ನಿ ಎಮ್ಮಿಗನೂರು ಮೂಲದ ಹನುಮಂತಕ್ಕ ಕೊಟ್ಟ ಮಾನಸಿಕ ಬೆಂಬಲ, ತುಂಬಿದ ಮನೋಸ್ಥೈರ್ಯ ವರ್ಣನೆಗೆ ನಿಲುಕದ್ದು. ಹನುಮಂತಕ್ಕ ಗಂಡನ ಜೊತೆಯಾಗಿ ಎಳೆದ ಸಂಸಾರರಥವನ್ನು ಅವಳ ಪಕ್ಕದ ಮನೆಯಲ್ಲಿಯೇ ಇದ್ದು ಬಹಳ ಹತ್ತಿರದಿಂದ ಗಮನಿಸಿದ್ದೇನೆ, ಒಂದು ದಿನವೂ ಗಂಡನನ್ನು ತನ್ನ ಬೇಕುಬೇಡಗಳಿಗೆ ಕಾಡದ, ಬೇಡದ ಹನುಮಂತಕ್ಕ ಗಂಡನ ಜಂಗಮಸೇವೆಗೆ ಎಂದೂ ಅಡ್ಡಿಪಡಿಸಿದವಳಲ್ಲ. ರಾತ್ರೋರಾತ್ರಿ ದೂರದೂರುಗಳಿಗೆ ಬಿತ್ತರಿಸಬೇಕಾದ ಸುದ್ದಿಗಳನ್ನು ಒಡಲಲ್ಲಿ ಅಡಗಿಸಿ ಸೋಮಣ್ಣ ಊರು ಬಿಡುವ ಹೊತ್ತು ಆತನನ್ನು ನಗುತ್ತಲೇ ಬೀಳುಕೊಡುತ್ತಿದ್ದ ಹನುಮಂತಕ್ಕನ ಆ ಮಟ್ಟದ ಬೆಂಬಲದ ಹೊರತಾಗಿ ಸೋಮಣ್ಣ ತನ್ನ ಅಮೂಲ್ಯವಾದ ಸಮಾಜಸೇವೆಯ ಶೃಂಗವನ್ನು ಈ ಪರಿ ಆರೋಹಿಸಲು ಶಕ್ಯವೇ ಇರಲಿಲ್ಲ.

ಅವರತ್ತು ದಾಟಿದ ವಯಸ್ಸಿನ ನಂತರವೂ ತನ್ನ ಸುದ್ದಿ ಪ್ರಸರಣದ ಕಾರ್ಯಗಳನ್ನು ನಿಲ್ಲಿಸದೇ ಮುಂದುವರೆಸಿದ ಸೋಮಣ್ಣ ಕೊನೆಗೊಮ್ಮೆ ತನ್ನ ಕೆಲಸಕ್ಕೆ ತಿಲಾಂಜಲಿ ನೀಡಬೇಕಾಗಿ ಬಂದದ್ದು ತಾಂತ್ರಿಕತೆಯ ಪ್ರಗತಿಯಿಂದಾಗಿಯೇ ಹೊರತು ಸೋಮಣ್ಣನ ಹೆಚ್ಚಾದ ವಯಸ್ಸಿನ ಕಾರಣದಿಂದಾಗಿ ಅಲ್ಲ ಎನ್ನುವುದು ಸರ್ವವಿದಿತ. ಸಾವುನೋವಿನ ಮನೆಯಿಂದ ಕೆಲವೇ ನಿಮಿಷಗಳಲ್ಲಿ ದೂರವಾಣಿ, ಮೊಬೈಲ್ ಅಥವಾ ಸಾಮಾಜಿಕ ಜಾಲಗಳ ಬೆನ್ನೇರಿ ಪ್ರಸಾರವಾಗುವ ಸುದ್ದಿಗಳ ವೇಗವನ್ನು ಸೋಮಣ್ಣ ಸರಿದೂಗಿಸುವುದು ಅಸಾಧ್ಯವಾದ ಮಾತೇ ಆಗಿ ಪರಿವರ್ತಿತವಾಗಿತ್ತು. ಬದಲಾದ ತಾಂತ್ರಿಕ ಪರಿವೇಶದ ಕಾರಣದಿಂದಾಗಿ ನಿಧಾನವಾಗಿ ಸಂತ್ರಸ್ತರ ಮನೆಯವರ ಚಿತ್ತಭಿತ್ತಿಯಿಂದ ದೂರವಾಗುತ್ತಾ ಸಾಗಿದ ಸೋಮಣ್ಣನ ಸಮಾಜಸೇವೆಯ ಉತ್ತುಂಗದ ಎಪ್ಪತ್ತು, ಎಂಬತ್ತು, ತೊಂಬತ್ತರ ದಶಕಗಳ ಅಮೂಲ್ಯ ನೆನಪುಗಳು ಊಹಿಸಿದ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಜನಮಾನಸದಿಂದ ಮರೆಯಾಗುತ್ತಾ ನಡೆದಿದ್ದು ಯಾವ ಕಾರಣಗಳಿಗಾಗಿ ಎನ್ನುವ ಪ್ರಶ್ನೆಗೆ ನನ್ನ ಎದೆಯಲ್ಲಿ ಇನ್ನೂ ಸಮರ್ಪಕ ಉತ್ತರ ಮೂಡಿಲ್ಲ. ತೀರಾ ವಯ್ಯಸ್ಸಾದ ಬಳಿಕ ಎಮ್ಮಿಗನೂರಿನ ವಿವಾಹಿತ ಮಗಳ ಮನೆಯನ್ನು ಪತ್ನಿಸಮೇತನಾಗಿ ಸೇರಿದ ಸೋಮಣ್ಣ ಊರನ್ನು ಬಿಡುವ ವೇಳೆ ಅನುಭವಿಸಿದ ಸಂಕಟ ಮಾತ್ರ ವರ್ಣಾತೀತವಾದದ್ದು, ಶಬ್ದಗಳಲ್ಲಿ ಸೆರೆಹಿಡಿಯಲು ಆಗದಂತಹುದು. ದಶಕಗಳ ಕಾಲದ ತನ್ನ ಕಾರ್ಯಕ್ಷೇತ್ರವನ್ನು ಅನಾಥಗೊಳಿಸಿ ಅಜ್ಞಾತಸ್ಥಳಕ್ಕೆ ಹೊರಟು ನಿಂತಿದ್ದ ಆ ವೇಳೆ ಸೋಮಣ್ಣನ ಗೊಮ್ಮಟ ಹೃದಯವೂ ವಿಲವಿಲನೆ ಒದ್ದಾಡಿತ್ತು. ಊರಜನರಿಗೆ ಪಥ್ಯವಾಗದ ಸೋಮಣ್ಣನ ಜನಸೇವೆಯ ಪರ್ವ ಶಾಶ್ವತರೂಪದಲ್ಲಿ ಅಂತ್ಯಕಂಡ ವಿಷಯವನ್ನು ಸೋಮಣ್ಣ ಊರೂರುಗಳಲ್ಲಿ ಹಂಚಿದ ಸುದ್ದಿಯ ರೂಪದಲ್ಲಿಯೇ ಹರಡಲು ಊರಲ್ಲಿ ಸೋಮಣ್ಣನ ಸಂವಾದಿಯಾಗಿ ಯಾರೂ ಉಪಲಬ್ದವಿರಲಿಲ್ಲ. ಅದರ ಅವಶ್ಯಕತೆಯೂ ಊರಜನರಿಗೆ ಇರಲಿಲ್ಲ. ದಶಕಗಳ ಕಾಲ ಊರಿನ ಅಶುಭಸುದ್ದಿಗಳಿಗೆ ದನಿಯಾದ ಸೋಮಣ್ಣ ಧಣಿ, ಸಮಾಜಸೇವೆಯನ್ನು ಮಾಡಲು ಮಾರ್ಗಗಳೇ ತೋಚುತ್ತಿಲ್ಲ ಎಂದು ಅಲವತ್ತುಕೊಂಡು ಪರಿಪರಿಯಾಗಿ ಪರಿತಪಿಸುವ ಅನೇಕ ಪ್ರಭೃತಿಗಳ ಕಣ್ಣುಗಳನ್ನು ತೆರೆಸಿ, “ಮನಸ್ಸಿದ್ದರೆ ಮಾರ್ಗ” ಎನ್ನುವ ಮಾತಿನ ಹಾಗೆ, ಸಮಾಜಸೇವೆಯ ಹರವು ಹಿಮಾಲಯದಷ್ಟೆ ವಿಸ್ತಾರವಾಗಿ, ವಿಶಾಲವಾಗಿ ಹರಡಿರುವ ಸಾಧ್ಯತೆಗಳ ಅಪರೂಪದ ಆಯಾಮವೊಂದರ ಅನಾವರಣವನ್ನು ಮಾಡುತ್ತಾನೆ ಎಂದು ನಾನು ಪಪರಿಭಾವಿಸಿರುತ್ತ

Girl in a jacket
error: Content is protected !!