ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು!
ಭಾರತೀಯರು ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳಿಗಾಗಿ ಹೋರಾಡುತ್ತ ಬಂದ ಕಾರಣ ಸಮಯ ಪೋಲಾಯಿತಲ್ಲದೆ ದೇಶ ದುರ್ಬಲವಾಯಿತು ಎಂದಿದ್ದಾರೆ ಪ್ರಧಾನಮಂತ್ರಿ ಮೋದಿ.
ಮೋದಿಯವರು ಮೂಲಭೂತ ಹಕ್ಕುಗಳಿಗೆ ಮೂಲಭೂತ ಕರ್ತವ್ಯಗಳನ್ನು ತಳುಕು ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರಾಯಶಃ ಕಡೆಯ ಬಾರಿಯೂ ಅಲ್ಲ. ಈ ಹಿಂದೆಯೂ ಇಂತಹ ಮಾತುಗಳನ್ನು ಆಡಿರುವುದು ಉಂಟು.
ಮೂಲಭೂತ ಹಕ್ಕುಗಳಿಂದ ದೇಶ ದುರ್ಬಲವಾಗಿಲ್ಲ. ಮೇಲು ಕೀಳುಗಳ, ಏಣಿಶ್ರೇಣಿಯ, ಕರ್ಮಸಿದ್ಧಾಂತದ, ಜಾತಿ ವ್ಯವಸ್ಥೆಯ ಯಥಾಸ್ಥಿತಿವಾದಿ ಅಸ್ತ್ರಗಳ ಅಡಿಪಾಯ ಕಂಪಿಸತೊಡಗಿದೆ. ಅಕ್ಷರ ಅರಿವು ಅನ್ನ ಜಮೀನುಗಳ ಮೇಲಿನ ಏಕಸ್ವಾಮ್ಯವು ಸಮಾನತೆ- ಸಹಬಾಳ್ವೆಯ ಅಪಾಯ ಎದುರಿಸಿದೆ. ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು ಎಂದು ನಡೆಸಲಾಗಿದ್ದ ದಮನ ದಬ್ಬಾಳಿಕೆಗೆ ಸಂವಿಧಾನದ ಸಮಾನತೆಯ ಹೊಳಪಿನ ಹರಿತ ಖಡ್ಗ ಎದುರಾಗಿದೆ.
ಹಿಂದೂ ಸಮಾಜ ನಿರ್ವಂಚನೆಯಿಂದ ದಲಿತರನ್ನು ಸರಿಸಮನಾಗಿ ನಡೆಸಿಕೊಳ್ಳಬೇಕು ಎಂಬ ಅಂಬೇಡ್ಕರ್ ಆಗ್ರಹಕ್ಕೆ ಇಂದಿಗೂ ರಾಜಕೀಯ ಪಕ್ಷ-ಪರಿವಾರಗಳು ಜಾಣ ಕಿವುಡು ಮತ್ತು ಕುರುಡನ್ನೇ ತೋರಿವೆ. ಶೂದ್ರರ ಸೃಷ್ಟಿಯಾದದ್ದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಸೇವೆಗೆ ಎಂದು ಸಾರಿದ್ದ ಪ್ರಾಚೀನ ಭಾರತದ ಕಾನೂನು ಸಂಹಿತೆ ಮನುಸ್ಮೃತಿಯನ್ನು ಅಂತರಂಗದಲ್ಲಿ ಆರಾಧಿಸುವ ವಿಚಾರಧಾರೆಗೆ ಸೇರಿದವರು ನರೇಂದ್ರ ಮೋದಿ. ದೇಶದಲ್ಲಿ ಅಸಮಾನತೆಯನ್ನು ಅಳಿಸಿ ಹಾಕುವ ಕುರಿತು ಮೋದಿ ಎಂದಾದರೂ ಮಾತಾಡಿರುವುದುಂಟೇ, ದಿನ ಬೆಳಗಾದರೆ ದಲಿತರ ಮೇಲೆ ನಡೆಯುವ ಅತ್ಯಾಚಾರಗಳು ಅನಾಚಾರಗಳನ್ನು ನಿಲ್ಲಿಸಲು ಅವರು ಮನಸಾರೆ ಕ್ರಮ ತೆಗೆದುಕೊಂಡಿರುವುದು ಉಂಟೇ?
”ಮನು ರಚಿಸಿದ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದಲ್ಲಿ ಹಿಂದೂಗಳ ಅವುಗಳನ್ನು ಸ್ವಯಂಪ್ರೇರಣೆ ಮತ್ತು ವಿಧೇಯತೆಯಿಂದ ಪಾಲಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರ ಪಾಲಿಗೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ” ಎಂಬುದು ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ನ1949ರ ನವೆಂಬರ್ 30ರ ಸಂಚಿಕೆಯ ಸಂಪಾದಕೀಯ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಆಗಾಗ ಹಾಕುವ ಗುಟುರುಗಳ ಮೂಲ ಇದು. ಮೀಸಲಾತಿಯನ್ನು ಕೂಡ ಅಂತ್ಯಗೊಳಿಸುತ್ತೇವೆ ಎಂಬ ಧಮಕಿಯನ್ನು ಇದೀಗ ಬಗೆಬಗೆಯಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ.ಮೀಸಲಾತಿಯೆಂಬುದು ಅಸಮಾನತೆಯನ್ನು ಅಳಿಸುವ ದಾರಿಯಲ್ಲಿ ಪ್ರಭುತ್ವ ಇಡಲೇಬೇಕಾದ ಒಂದು ಸಣ್ಣ ಹೆಜ್ಜೆ. ಇದನ್ನು ಸಹಿಸದ ವರ್ಗ ಯಾವುದು, ಅದು ಯಾರೊಂದಿಗೆ ನಿಂತಿದೆ ಮತ್ತು ಅದರೊಂದಿಗೆ ಯಾರು ನಿಂತಿದ್ದಾರೆ ಎಂದು ಆಲೋಚಿಸಬೇಕಿದೆ. ಮೋದಿಯವರ ಮಾತಿನ ಒಳಾರ್ಥ ಆಗ ನಿಚ್ಚಳವಾದೀತು.
ಅವರು ಸೇರಿಸಿದ್ದ ಮೂಲಭೂತ ಕರ್ತವ್ಯಗಳು ಹತ್ತು. ಹನ್ನೊಂದನೆಯದನ್ನು ಅಳವಡಿಸಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ.ಇತರರ ಹಕ್ಕುಗಳನ್ನು ಹತ್ತಿಕ್ಕಿ ಸಂಪ್ರದಾಯಗಳ ಮೂಲಕ ಯಜಮಾನಿಕೆ ಸಾಧಿಸುವುದೇ ಕರ್ತವ್ಯಗಳನ್ನು ಹಕ್ಕುಗಳಿಗೆ ತಳುಕು ಹಾಕುವವರ ಅಸಲಿ ಉದ್ದೇಶ ಎಂಬುದಾಗಿ ತಜ್ಞರು ವ್ಯಾಖ್ಯಾನಿಸುತ್ತಾರೆ.

ಮನುಧರ್ಮ ಸಂಹಿತೆಯು ಈ ನೆಲದ ಬಹುಜನರ ಭುಜಗಳ ಮೇಲೆ ಇರಿಸಿದ್ದು ಕೇವಲ ಕರ್ಮ ಕರ್ತವ್ಯಗಳ ನೊಗವನ್ನೇ ವಿನಾ ಸಮಾನತೆಯ ಘನತೆಯನ್ನು ಅಲ್ಲವೇ ಅಲ್ಲ. ಬಹುಜನ ಸಮುದಾಯಗಳು ಸಮಾನತೆಯ ಮೂಲದಿಂದ ಹುಟ್ಟುವ ನೂರಾರು ಮುೂಲಭೂತ ಹಕ್ಕುಗಳಿಂದ ಸಾವಿರಾರು ವರ್ಷಗಳಿಂದ ವಂಚಿತರಾಗಿದ್ದಾರೆ. ಸ್ವತಂತ್ರ ಭಾರತದಲ್ಲೂ ಮೂಲಭೂತ ಹಕ್ಕುಗಳು ಅವರಲ್ಲಿನ ಬಹುಪಾಲು ಜನರನ್ನು ಮುಟ್ಟಿಲ್ಲ.
ಶತಮಾನಗಳಿಂದ ಕೇವಲ ಹಕ್ಕುಗಳನ್ನು ಮಾತ್ರವೇ ಚಲಾಯಿಸಿಕೊಂಡು ಬಂದಿರುವ ಕುಲೀನ ವರ್ಗಗಳು ಸಮಾನತೆಯನ್ನು ನಿತ್ತರಿಸುತ್ತಿಲ್ಲ. ಕೇವಲ ಎಪ್ಪತ್ತು ವರ್ಷಗಳಿಗೇ ಅಸಹನೆಯಿಂದ ಕುದಿಯತೊಡಗಿರುವುದನ್ನು ಕಾಣುತ್ತಿದ್ದೇವೆ. ಸಮಾನತೆ ಸಾರುವ ಸಂವಿಧಾನವನ್ನು ಬದಲಾಯಿಸುವ ಮಾತನ್ನು ಎಪ್ಪತ್ತು ವರ್ಷಗಳಿಂದ ಇಂದಿನ ತನಕ ಆಡುತ್ತಲೇ ಬಂದಿದ್ದಾರೆ. ಪ್ರಧಾನಿ ಮೋದಿಯವರು ಈ ಕುಲೀನ ವರ್ಗಗಳ ಮನದಾಳದ ಅಸಹನೆಗೆ ಮಾತು ನೀಡತೊಡಗಿದ್ದಾರೆ.ತಲೆ ತಲಾಂತರಗಳಿಂದ ಹಕ್ಕುಗಳನ್ನು ಅನುಭವಿಸಿಕೊಂಡು ಬಂದಿರುವ ಅನುಕೂಲಸ್ಥರ ಭಾಷೆಯನ್ನೇ ಆಡಿದ್ದಾರೆ.

ಸಮಾನತೆ, ನ್ಯಾಯ ಹಾಗೂ ಸ್ವಾತಂತ್ರ್ಯ ಎಂಬುವು ಸಾಂವಿಧಾನಿಕ ಹಕ್ಕುಗಳ ಅಡಿಪಾಯಗಳು. ಇವುಗಳಿಗಾಗಿ ಹೋರಾಡುವುದು ದೇಶವನ್ನು ದುರ್ಬಲಗೊಳಿಸುತ್ತದೆ ಎಂಬುದು ಮೋದಿಯವರ ಅಚಲ ನಂಬಿಕೆ ಹೌದು.
ಇಲ್ಲವಾದರೆ ಆದಿವಾಸಿಗಳ ಹಕ್ಕುಗಳಿಗೆ ಹೋರಾಡಿದ ಫಾದರ್ ಸ್ಟ್ಯಾನ್ ಸ್ವಾಮಿ ಜೈಲಿನಲ್ಲಿ ಸಾಯಬೇಕಿರಲಿಲ್ಲ. ಪ್ರಖರ ಅಂಬೇಡ್ಕರವಾದಿ ಆನಂದ್ ತೇಲ್ತುಂಬ್ಡೆ, ಆದಿವಾಸಿಗಳ ಅಕ್ಕ ಎನಿಸಿಕೊಂಡ ಸುಧಾ ಭಾರಧ್ವಾಜ್ ಮುಂತಾದ ಅನೇಕ ದಮನಿತರ ಬಂಧುಗಳು ಜೈಲುಪಾಲಾಗಬೇಕಿರಲಿಲ್ಲ.
ಸಂವಿಧಾನವನ್ನು ಮತ್ತು ಅದರ ಆದರ್ಶಗಳನ್ನು, ಸಾಂವಿಧಾನಿಕ ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು, ರಾಷ್ಟ್ರಗೀತೆಯನ್ನು ಗೌರವಿಸಬೇಕು ಹಾಗೂ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮೌಲ್ಯಗಳನ್ನು ಪಾಲಿಸಬೇಕು. ದೇಶದ ಸಮಗ್ರತೆ, ಏಕತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡಬೇಕು. ಕರೆ ನೀಡಿದಾಗ ಮುಂದೆ ಬಂದು ದೇಶಸೇವೆ ಮಾಡಬೇಕು. ಧರ್ಮ, ಭಾಷೆ, ಪ್ರದೇಶ ಮತ್ತಿತರೆ ಗಡಿಗಳ ದಾಟಿ ಸೋದರ ಮತ್ತು ಸಮರಸ ಭಾವವನ್ನು ಬೆಳೆಸಬೇಕು. ಮಹಿಳೆಯ ಘನತೆಗೆ ಭಂಗ ತರುವ ಆಚರಣೆಗಳನ್ನು ಕೈಬಿಡಬೇಕು. ನಮ್ಮ ಬಹುಮುಖೀ ಸಮಾಜದ ಸಿರಿವಂತ ಪರಂಪರೆಯನ್ನು ಸಂರಕ್ಷಿಸಿ ಗೌರವಿಸಬೇಕು. ಅರಣ್ಯ ಸರೋವರ, ನದಿಗಳನ್ನು ಸಂರಕ್ಷಿಸಬೇಕು. ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು. ಸಾರ್ವಜನ ಆಸ್ತಿಪಾಸ್ತಿಯನ್ನು ರಕ್ಷಿಸಬೇಕು, ಹಿಂಸಾಚಾರ ತೊರೆಯಬೇಕು. ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟತೆ ಸಾಧಿಸಲು ಶ್ರಮಿಸಬೇಕು. ಪೋಷಕರು ತಮ್ಮ ಮಗುವಿಗೆ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಬೇಕು.

ಈ ಕರ್ತವ್ಯಗಳನ್ನು ತಾವು ಖುದ್ದು ಎಷ್ಟರಮಟ್ಟಿಗೆ ನೆರವೇರಿಸಿದ್ದಾರೆಂದು ಮೋದಿಯವರು ತಮ್ಮನ್ನು ಕೇಳಿಕೊಳ್ಳಬೇಕಿದೆ.