ಸಾದಕರಿಗೆ ಗೊರೂಚ ದತ್ತಿ ನಿದಿ ಪ್ರಶಸ್ತಿ ಪ್ರದಾನ

Share

ಮೈಸೂರು,ಆ,04: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಕೊಡ ಮಾಡುವ ‘ಗೊರುಚ ದತ್ತಿನಿಧಿ’ ಪ್ರಶಸ್ತಿಯನ್ನು ಎಂಟು ಸಾಧಕರಿಗೆ, ನಗರದ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

2019 ಹಾಗೂ 2020ನೇ ಸಾಲಿನ ‘ಗೊರುಚ ಶರಣ ಪ್ರಶಸ್ತಿ’ಯನ್ನು ಕ್ರಮವಾಗಿ ಡಾ.ಸಿ.ವೀರಣ್ಣ, ಡಾ.ಬಸವರಾಜ ಸಾದರ, ‘ಗೊರುಚ ಜಾನಪದ ಪ್ರಶಸ್ತಿ’ಯನ್ನು ಡಾ.ಬಿ.ಎಸ್‌.ಸ್ವಾಮಿ, ಡಾ.ಎಚ್‌.ಟಿ.ಪೋತೆ, ‘ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪ್ರೊ.ಬಿ.ಆರ್‌.ಪೊಲೀಸ ಪಾಟೀಲ, ಡಾ.ಬಸವರಾಜ ಸಬರದ, ‘ಗೊರುಚ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪಿ.ಡಿ.ವಾಲೀಕಾರ ಹಾಗೂ ಡಾ.ಕುರುವ ಬಸವರಾಜ್‌ ಅವರಿಗೆ ಪ್ರದಾನ ಮಾಡಲಾಯಿತು.

ಅನಾರೋಗ್ಯದ ನಿಮಿತ್ತ ಡಾ.ಸಿ.ವೀರಣ್ಣ, ಡಾ.ಬಿ.ಎಸ್‌.ಸ್ವಾಮಿ, ಡಾ.ಬಸವರಾಜ ಸಾದರ ಹಾಗೂ ಡಾ.ಬಸವರಾಜ ಸಬರದ ಗೈರುಹಾಜರಾಗಿದ್ದರು. ಬಿ.ಎಸ್‌.ಸ್ವಾಮಿ ಪರವಾಗಿ ಅವರ ಮೊಮ್ಮಗ ವಿನಯ್‌ ಪ್ರಶಸ್ತಿ ಸ್ವೀಕರಿಸಿದರು.

ಗೊರುಚ ಶರಣ ಮತ್ತು ಜಾನಪದ ಪ್ರಶಸ್ತಿಗಳು ತಲಾ 25 ಸಾವಿರ ಹಾಗೂ ಗೊರುಚ ಗ್ರಂಥ ಪ್ರಶಸ್ತಿಗಳು ತಲಾ 10 ಸಾವಿರ ನಗದು ಬಹುಮಾನ ಒಳಗೊಂಡಿವೆ.

ಅಭಿನಂದನಾ ನುಡಿಗಳಾಡಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ‘ಗೊ.ರು.ಚನ್ನಬಸಪ್ಪನವರಿಗೆ 84 ವರ್ಷಗಳು ತುಂಬಿದಾಗ ನಡೆದ ಅಭಿನಂದನಾ ಸಮಾರಂಭದಲ್ಲಿ ನೀಡಿದ್ಧ 11,11,111 ಗೌರವಧನಕ್ಕೆ ಗೊರುಚ ಅವರು ಸ್ವಂತದ 4 ಲಕ್ಷ ಸೇರಿಸಿ ಶರಣ ಸಾಹಿತ್ಯ ಪರಿಷತ್‌ಗೆ ಕೊಡುಗೆಯಾಗಿ ನೀಡಿದ್ದರು. ಈ ಹಣವನ್ನು ‘ಗೊರುಚ ದತ್ತಿನಿಧಿ’ಯಾಗಿ ಸ್ಥಾಪಿಸಿ ಈ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗುತ್ತಿದೆ’ ಎಂದರು.

‘ಭೂದಾನ ಚಳವಳಿಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ವಿನೋಬಾ ಭಾವೆ ಅವರಿಗೆ ಗೊರುಚ ಅವರು ಚಿನ್ನದ ಉಂಗುರವನ್ನು ದಾನವಾಗಿ ನೀಡಿದ್ದರು. ಆಗ ಯುವಕರಾಗಿದ್ದ ಗೊರುಚ ಅವರನ್ನು ಕರೆದ ಭಾವೆ, ‘ನೀನು ಚಿನ್ನದ ಉಂಗುರ ನೀಡುವುದು ಹೆಚ್ಚಲ್ಲ, ನಿನ್ನ ಜೀವನದಲ್ಲಿ ಚಿನ್ನವನ್ನೇ ಧರಿಸದೇ ಇರುವುದು ಮುಖ್ಯ’ ಎಂದು ಹೇಳಿದ್ದರಂತೆ. ಇದೇ ಕಾರಣಕ್ಕೆ, ‘ನಾನು ಸಾಯುವ ತನಕ ಅಭೂಷಣನಾಗಿಯೇ ಬದುಕುತ್ತೇನೆ’ ಎಂದು ಗೊರುಚ ವಾಗ್ದಾನ ಮಾಡಿದ್ದಾರೆ’ ಎಂದು ತಿಳಿಸಿದರು.

‘ಪ್ರಶಸ್ತಿಗೆ ಭಾಜನರಾಗಿರುವ ಈ ಸಾಧಕರು ಯಾರೂ ಅರ್ಜಿ ಹಾಕಿದವರಲ್ಲ. ಶರಣ ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಕ್ಷೇತ್ರಕ್ಕೆ ಗಮನಾರ್ಹ ಸಾಧನೆ ಮಾಡಿದವರನ್ನೇ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಎಚ್‌.ಟಿ.ಪೋತೆ ಮಾತನಾಡಿ, ‘ದಲಿತ ಎಂದರೆ ಪ್ರಜ್ಞೆ. ಸಮಾನತೆ, ನ್ಯಾಯದ ಸಾಕ್ಷಿಪ್ರಜ್ಞೆ. ಬಸವಣ್ಣ ಸೇರಿದಂತೆ ಶಿವಶರಣರು ಸಮಾನತೆ, ನ್ಯಾಯಕ್ಕಾಗಿ ಹೋರಾಡಿದ್ದವರು. ಹೀಗಾಗಿ, ಶರಣ ಸಾಹಿತ್ಯವನ್ನು ದಲಿತ ಚಳವಳಿಯೆಂದು ನಾನು ಕರೆದಿದ್ದೇನೆ’ ಎಂದು ತಿಳಿಸಿದರು.

ಪಿ.ಡಿ.ವಾಲೀಕಾರ ಹಾಗೂ ಡಾ.ಕುರುವ ಬಸವರಾಜ್‌ ತಮ್ಮ ಅನಿಸಿಕೆ ಹಂಚಿಕೊಂಡರು.
ಪೊಲೀಸ್ ಪಾಟೀಲ್ ಅವರು ಮಾತನಾಡಿ ತತ್ವಪದ,ಲಾವಣಿ ಮತ್ತು ತ್ರಿಪದಿಗಳ ಪ್ರಚಾರ ಮಾಡುತ್ತಿದ್ದು ಇದರ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಮ್ಮ ತಂದೆ ತಾಯಿ ಹೆಸರಲ್ಲಿ ದತ್ತಿ ನಿದಿ ಸ್ಥಾಪಿಸಲು ಪ್ರಶಸ್ತಿ ಹಣದ ಜೊತೆಗೆ 15 ಸಾವಿರ ಹಣ ನೀಡಲಿದ್ದೇನೆ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಕುಂತಲಾ ಜಯದೇವ್‌ ಅವರು ಶರಣ ಸಾಹಿತ್ಯ ಪರಿಷತ್‌ಗೆ ಈಗಾಗಲೇ 5 ಲಕ್ಷ ದತ್ತಿ ನೀಡಿದ್ದು, ಈಗ ಕಾರ್ಯಕ್ರಮಗಳ ಖರ್ಚು–ವೆಚ್ಚಗಳಿಗಾಗಿ ಮತ್ತೆ 5 ಲಕ್ಷವನ್ನು ಪರಿಷತ್‌ಗೆ ನೀಡಿದರು.

Girl in a jacket
error: Content is protected !!