ಸಂಗೀತದ ಅನನ್ಯ ಉಪಾಸಕನ ಅಸಂಗತ ಬದುಕು..!
“ನೀರ ಮೇಲಣ ಗುಳ್ಳೆ ನಿಜವಲ್ಲೊ ಹರಿಯೇ” ಎನ್ನುವ ಸುಶ್ರಾವ್ಯ ಕಂಠವೊಂದು ಕಿವಿಗಳನ್ನು ಅಪ್ಪಳಿಸಲು, ಜಳಕಕ್ಕೆಂದು ಬಚ್ಚಲು ಮನೆಗೆ ನಡೆದಿದ್ದವನು ಹಿಂತಿರುಗಿ ಓಡುತ್ತಾ ಸೀದಾ ಮುಂಬಾಗಿಲಿಗೆ ಬಂದು ನಿಂತು, ಕತ್ತನ್ನು ನೀಳವಾಗಿ ಹೊರಚಾಚಿ, ರಸ್ತೆಯ ಎರಡೂ ಬದಿಗೆ ದೃಷ್ಟಿ ಹರಿಸುತ್ತಾ, ಬಾಗಿಲ ಎಡತೋಳಿಗೆ ದೇಹದ ಅಷ್ಟೂ ಭಾರವನ್ನು ಹಾಕಿ ಒರಗಿ ನಿಂತೆನು. ನಾನು ಊಹಿಸಿದಂತೆಯೇ ಸುಮಾರು ಐವತ್ತನ್ನು ಮೀರಿದ ವಯಸ್ಸಿನ ಕೃಶಕಾಯದ, ಗೌರವರ್ಣದ, ಬಣ್ಣದ ಪಟ್ಟೆಪಟ್ಟೆ ಲುಂಗಿ ಮತ್ತು ಬಿಳಿಯ ಬನಿಯನ್ ಧರಿಸಿದ ಕುಳ್ಳ ವ್ಯಕ್ತಿಯೊಬ್ಬ ತನ್ನ ಎಡಭುಜದ ಮೇಲೆ ಸಲಿಕೆಯನ್ನು ಹೊತ್ತುಕೊಂಡು, ಬಲಗೈಯಲ್ಲಿ ಬುತ್ತಿಯ ಚೀಲವನ್ನು ಹಿಡಿದು, ತಲೆಗೆ ಹಸಿರು ಟವೆಲ್ ಒಂದನ್ನು ಸುತ್ತಿಕೊಂಡು ದಾಸರಪದವನ್ನು ಇಂಪಾಗಿ ಹಾಡುತ್ತಾ, ತುಸು ಕುಂಟುತ್ತಲೆ ರಸ್ತೆಯ ಒಂದು ಬದಿಯಲ್ಲಿ ನಡೆದು ಹೋಗುತ್ತಿದ್ದ. ಆಗಿನ್ನೂ ಬೆಳಗಿನ ಏಳರ ಸಮಯ. ನಮ್ಮ ಮನೆಯ ಮುಂದಿನ, ಬಸ್ ಸ್ಟ್ಯಾಂಡ್ ಗೆ ಎಡತಾಕಿದಂತೆ ಇದ್ದ ಟಾರ್ ರಸ್ತೆ ತುಂಬಾ ಚಟುವಟಿಕೆಗಳಿಂದ ಕೂಡಿದ ದಿನದ ಸಮಯವದು. ಅವತ್ತು ಶನಿವಾರದ ದಿನವಾದ್ದರಿಂದ ಬಿಳಿ ಪ್ಯಾಂಟ್ ಮತ್ತು ಶರ್ಟ್ ನ ಶಾಲಾ ಸಮವಸ್ತ್ರ ಧರಿಸಿ ಸಾಲುಸಾಲಾಗಿ ಬೆಳಗಿನ ಶಾಲೆಗೆ ತೆರಳುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು, ಬಿಳಿರವಿಕೆ, ನೀಲಿಲಂಗದ ಸಮವಸ್ತ್ರ ಧರಿಸಿ, ಬಾಲಕರನ್ನು ಮೀರಿಸುವ ಉತ್ಸಾಹದಲ್ಲಿ ಬೀಗುತ್ತಾ ಸಾಲಾಗಿ ಸಾಗುತ್ತಿದ್ದ ವಿದ್ಯಾರ್ಥಿನಿಯರ ಬಳಗ, ಈ ಒಮ್ಮುಖದ ಚಲನೆಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ನಮ್ಮ ಬೀದಿಯ ನಾಲ್ಕಾರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು, ತಂತಮ್ಮ ಹೊಲಗಳಿಗೆ ಎತ್ತಿನಬಂಡಿಗಳಲ್ಲಿ ತೆರಳುತ್ತಿದ್ದ ರೈತಾಪಿವರ್ಗ, “ಮಹಾದೇವಿ” ಬಸ್ ಹಿಡಿದು ದುರ್ಗದ ಕಾಲೇಜುಗಳಿಗೆ ಹೊರಡಲು ಅಣಿಯಾಗಿ ಬಸ್ ಸ್ಟ್ಯಾಂಡ್ ನಲ್ಲಿ ನೆರೆದ ಹತ್ತಾರು ಯುವಕ ಯುವತಿಯರ ಹಿಂಡಿನ ಜೊತೆಗೆ ದುರ್ಗದ ಆಫೀಸುಗಳಿಗೆ ನೌಕರಿ ಮಾಡವ ನಿಮಿತ್ತ ಬಸ್ಸಿನಲ್ಲಿ ತೆರಳಲು ವಾಡಿಕೆಯಂತೆ ಕಾಯುತ್ತಾ ನಿಂತ ವೀರಭದ್ರಯ್ಯ ಸ್ವಾಮಿಗಳ ಮಗ ಪಂಚಣ್ಣ, ಹೈಸ್ಕೂಲು ಹಿಂದಿ ಮೇಷ್ಟ್ರು ಮಗ ಲೆಕ್ಚರ್ ಶಶಿಧರ್, ಕೋರ್ಟ್ ಕೆಲಸದ ನಾಯಕರ ಪೆಂಚಮ್ಮನ ಮಗ ತಿಪ್ಪೇಸ್ವಾಮಿ, ತಿಪ್ಪಯ್ಯ ಮೇಷ್ಟ್ರ ಮಗಳು ಸರೋಜಮ್ಮ, ಬಾಗೇನಾಳ್ ಗೆ ತೆರಳಬೇಕಿದ್ದ ಏಕಾಂತಪ್ಪ ಮೇಷ್ಟ್ರು, ಕೂನಬೇವಿಗೆ ತೆರಳಬೇಕಿದ್ದ ಗುರುಮಲ್ಲಪ್ಪ ಮೇಷ್ಟ್ರು ಹೀಗೇ ಕೆಲವು ಊರ ಹಿರಿಯರ, ಗುರುಗಳ, ಗೌರವಾನ್ವಿತ ಜನಸಮೂಹದ ಸಮಾವೇಶವೇ ಅಲ್ಲಿ ನೆರೆದಿತ್ತು. ಇನ್ನು ದುರ್ಗದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುವ ಕೆಲ ರೋಗಿಗಳ ಗುಂಪಿನ ನಡುವೆ ಏನೂ ಕಿಸಿಯುವಂತಹ ಕಾರ್ಯಗಳು ದುರ್ಗದಲ್ಲಿ ಇಲ್ಲದಿದ್ದರೂ ಹೊತ್ತು ಕಳೆಯುವ ಮತ್ತು ಚೈನಿ ಮಾಡುವ ಗುರುತರವಾದ ಉದ್ದೇಶದಿಂದ ಉದ್ದೀಪನಗೊಂಡಂತಿದ್ದ, ಬಸ್ಸಿನ ಆಗಮನಾಭಿಲಾಷಿಗಳಾದ ಊರ ಕೆಲ ಸ್ಥಿತಿವಂತ ಯುವಕರು, ಹೀಗೆ ಇವರೆಲ್ಲರನ್ನೂ ತನ್ನಲ್ಲಿ ಸಮೀಕರಿಸಿಕೊಂಡ ಬಸ್ ಸ್ಟ್ಯಾಂಡ್ ನ ನಮ್ಮ ರಸ್ತೆ ಚಟುವಟಿಕೆಗಳ ಗೂಡಾಗಿ ಮಾರ್ಪಾಡಾಗಿತ್ತು. ಇದರ ಯಾವ ಪರವೆಯೂ ಇಲ್ಲದೆ “ತಾನಾಯ್ತು, ತನ್ನ ಸಂಗೀತವಾಯ್ತು” ಎಂದು ಉಚ್ಚಕಂಠದಲ್ಲಿ ದಾಸರಪದಗಳನ್ನು ಹಾಡುತ್ತಲೇ ತನ್ನ ದೈನಂದಿನ, ಟಾರ್ ರಸ್ತೆಯ ಎರಡೂ ಬದಿಗಳಿಗೆ ಮಣ್ಣು ಹಾಕುವ ಕೆಲಸಕ್ಕೆ ತೆರಳುತ್ತಿದ್ದ, ಎಂದಿನಂತೆ ನನ್ನನ್ನು ಇಂದೂ ಆಕರ್ಷಿಸಿದ್ದು ಭಜನೆ ರುದ್ರಣ್ಣನ ಘನಶಾರೀರ ಸಂಪತ್ತು.
ಆಗ ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ನನಗೂ ಅಂದು ಬೆಳಗಿನ ಶಾಲೆ ಇತ್ತು. ಶಾಲೆಗೆ ಹೋಗಲು ತಯಾರಾಗುವ ಹಂತದಲ್ಲಿ, ರುದ್ರಣ್ಣನ ಮನಮೋಹಕ ಸಂಗೀತಕ್ಕೆ, ಮುರಳಿಯ ಕೊಳಲಿನ ಗಾನಮಾಧುರ್ಯಕ್ಕೆ ಮನಸೋತು ಓಡೋಡುತ್ತಾ ಬಂದ ಗೋವಿನ ಸ್ಥಿತಿ, ನನ್ನದಾಗಿತ್ತು. ನನಗರಿವಿಲ್ಲದೇ ರುದ್ರಣ್ಣನನ್ನು ಸುಮಾರು ದೂರ ಹಿಂಬಾಲಿಸಿ ಆತನ ಸಂಗೀತವನ್ನು ಸವಿಯುತ್ತಾ ನಡೆದವನನ್ನು ತಡೆದು ನಿಲ್ಲಿಸಿದ್ದು ಬಹಿರ್ದೆಸೆಗೆಂದು ತೆರಳುತ್ತಿದ್ದ ನನ್ನ ಮಾಮ ಜಡಿಯಪ್ಪಗೌಡ. “ಇವತ್ತು ಸ್ಕೂಲ್ ಇಲ್ಲವಾ? ಎಲ್ಲಿಗೆ ಹೋಗುತ್ತಿದ್ದೀಯ? ನಡಿ ಮನೆಗೆ” ಎಂದು ಗದರಿಸಿ, ನನ್ನ ಕೈಹಿಡಿದುಕೊಂಡು ನಮ್ಮ ಮನೆಬಾಗಿಲಿಗೆ ತಂದುಬಿಟ್ಟ ಮಾಮನನ್ನು ಗುರಾಯಿಸಿ ನೋಡುತ್ತಲೇ ಮನೆಯ ಒಳಗೆ ಕಾಲಿಟ್ಟೆ. ಇವತ್ತು ಶನಿವಾರ, ಅರ್ಧ ದಿನ ಮಾತ್ರ ಶಾಲೆ, ಮಧ್ಯಾಹ್ನದ ನಂತರ ಭಜನೆ ರುದ್ರಣ್ಣ, ದುರ್ಗದ ರಸ್ತೆಯಲ್ಲಿ ಜೂಗಣ್ಣನವರ ಹೊಲದ ಆಜುಬಾಜಿನಲ್ಲಿ ಎಲ್ಲಿಯಾದರೂ ಕೆಲಸ ಮಾಡುತ್ತಿರುತ್ತಾನೆ, ಆತ ಇದ್ದಲ್ಲಿಗೆ ಗೆಳೆಯರ ಗುಂಪಿನೊಟ್ಟಿಗೆ ಹೋಗಿ ಸಂಜೆ ಕತ್ತಲಾಗುವವರೆಗೂ ಆತನ ಗಾನಾಮೃತವನ್ನು ಸವಿಯಬೇಕು ಎಂದು ನಿರ್ಧರಿಸಿ ಬೇಗಬೇಗ ಶಾಲೆಗೆ ರೆಡಿಯಾಗತೊಡಗಿದೆ.
ನನ್ನನ್ನು ಬಾಲ್ಯದಲ್ಲಿ ಅತೀವವಾಗಿ ಆಕರ್ಷಿಸಿದ ಹಲವು ವ್ಯಕ್ತಿಗಳಲ್ಲಿ ಭಜನೆ ರುದ್ರಣ್ಣನೂ ಒಬ್ಬ. ಹಲವಾರು ವ್ಯಕ್ತಿಗಳು ಬೇರೆ ಬೇರೆ ಕಾರಣಗಳಿಂದ ನನ್ನ ಎಳೆಯ ಮನಸ್ಸನ್ನು ಕದ್ದಿದ್ದರೆ ರುದ್ರಣ್ಣ ತನ್ನ ಇಂಪಾದ ಹಾಡುಗಾರಿಕೆಯ ಮೂಲಕವೇ ನನ್ನ ಮನಸ್ಸಿನ ಕೋಟೆಗೆ ಲಗ್ಗೆ ಹಾಕಿದ್ದ. ಆಗಿನ್ನೂ ಸಂಗೀತ ಇಂದಿನ ಮಟ್ಟಕ್ಕೆ ಸಮುದಾಯದಲ್ಲಿ ಹರಡಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಮದುವೆ ಸಮಾರಂಭಗಳಲ್ಲಿ, ದೇವಸ್ಥಾನದ ಜಾತ್ರೆಗಳ ವೇಳೆ ಮಾತ್ರ ಸೌಂಡ್ ಸಿಸ್ಟಂನಲ್ಲಿ ತೂರಿ ಬರುತ್ತಿದ್ದ ಕನ್ನಡ ಚಲನ ಚಿತ್ರಗಳ ಗೀತೆಗಳು ಕೇಳಿಸಿಕೊಳ್ಳಲಿಕ್ಕೆ ಸಿಗುತ್ತಿದ್ದವು. ಅಲ್ಲೊಬ್ಬ,
ಇಲ್ಲೊಬ್ಬ ಉಳ್ಳವರ ಮನೆಗಳಲ್ಲಿ ದೊಡ್ಡಗಾತ್ರದ ಪೆಟ್ಟಿಗೆಯಂತಹ ರೇಡಿಯೋಗಳು ಇದ್ದವಾದರೂ ವಿದ್ಯುತ್ ಇಲ್ಲವೆಂಬ ಕಾರಣದಿಂದಲೋ, ವಿದ್ಯುತ್ ಇದ್ದಾಗಲೂ ಕರೆಂಟ್ ಬಿಲ್ಲು ಜಾಸ್ತಿ ಬರುತ್ತದೆ ಎನ್ನುವ ಕಾರಣದಿಂದಲೋ ತಮ್ಮ ರೇಡಿಯೋಗಳಲ್ಲಿ ಹಾಡುಗಳನ್ನು ನುಡಿಸುವ ಮಂದಿ ಕಡಿಮೆಯೇ ಇದ್ದರು. ಇನ್ನು ಪಟ್ಟಣದಲ್ಲಿ ಪದವಿ ಪಡೆದು ಬಂದು, ಉದ್ಯೋಗಗಳಿಲ್ಲದೆ, ಊರ ಪೋಲಿಕಟ್ಟೆಗಳ ಪಾಲಾಗುತ್ತಿದ್ದ ಕೆಲ ನವಯುವಕರ ಕೈಯಲ್ಲಿ ಟ್ರಾನ್ಸಿಸ್ಟರ್ ಎನ್ನುವ ಹೊತ್ತೊಯ್ಯುವ, ಬ್ಯಾಟರಿ ಚಾಲಿತ ರೇಡಿಯೋಗಳು ಇದ್ದವಾದರೂ ಬ್ಯಾಟರಿ ಸೆಲ್ ಗಳು ಬೇಗ ಹಾಳಾಗುತ್ತವೆ ಎನ್ನುವ ಕಾರಣದಿಂದ ಅವುಗಳನ್ನು ನುಡಿಸುವಾಗಲೂ, ವಾಲ್ಯೂಮ್ ತುಂಬಾ ಕಡಿಮೆ ಇಟ್ಟುಕೊಂಡು ತಮ್ಮ ಕಿವಿಗೆ ಹತ್ತುವಂತೆ ಟ್ರಾನ್ಸಿಸ್ಟರ್ ಗಳನ್ನು ಆನಿಸಿ ಇಟ್ಟುಕೊಂಡು ಕೇಳುವವರೇ ಹೆಚ್ಚು. ಇನ್ನು ನಮಗೆ ಸಂಗೀತ ಕಿವಿಗೆ ಬೀಳಬಹುದಾದ ಮತ್ತೊಂದು ಅವಕಾಶ ಎಂದರೆ ಚಂದ್ರಮೌಳೇಶ್ವರ ಗುಡಿಯಲ್ಲಿ ಪ್ರತೀ ಸೋಮವಾರ ಸಂಜೆ ನಡೆಯುತ್ತಿದ್ದ ಕಾರಣೀಕದ ಸಂದರ್ಭಗಳಲ್ಲಿ ಮಾತ್ರ. ದೇವರ ಆರಾಧನೆಯ ಶುಭವೇಳೆ ತಮ್ಮ ಸುಶ್ರಾವ್ಯ ಕಂಠಗಳಿಂದ ಹಾಡುತ್ತಿದ್ದ ಊರಿನ ಶೆಟ್ಟರ ಮತ್ತು ಬ್ರಾಹ್ಮಣರ ಮಹಿಳೆಯರ ಸಮೂಹ ಗಾಯನದ ಮುಖೇನ ನನ್ನ ಏಕಾಗ್ರ ಆಲಿಸುವಿಕೆಗೆ ಲಭ್ಯವಾಗುತ್ತಿದ್ದ ಭಕ್ತಿಗೀತೆಗಳು ನನ್ನ ಮನಸ್ಸಿನಲ್ಲಿ ಭಕ್ತಿಪರಂಪರೆಯ ಒಂದು ಹೊಸಹುಟ್ಟಿಗೆ ಕಾರಣವಾದ ಸಂಗತಿಯನ್ನು ನಾನಾಗಲೇ ಗುರುತಿಸಿದ್ದೆ. ಊರಿಗೆ ಮಂತ್ರಿಮಹೋದಯರು, ಹಿರಿಯ ರಾಜಕಾರಣಿಗಳು, ಉನ್ನತ ಅಧಿಕಾರಿವರ್ಗ ಆಗಮಿಸುತ್ತಿದ್ದ ವೇಳೆ ಅವರನ್ನು ಸ್ವಾಗತಿಸಿ, ಸನ್ಮಾನಿಸುತ್ತಿದ್ದ ಪುರಜನರ ಸಭೆಸಮಾರಂಭಗಳಲ್ಲಿ ಊರಿನ ಶಾನುಭೋಗ ಸಹೋದರಿಯರಾದ ರಂಗಮ್ಮ ಮತ್ತು ಸುಧಾಬಾಯಿ ಅವರ ಮೋಹಕ ಗಾಯನಗಳೂ ಅಪರೂಪಕ್ಕೆ ಕೇಳಸಿಗುತ್ತಿದ್ದವು. ಹಾಗಾಗಿ ಬರದ ನಾಡಾದ ನನ್ನೂರಿನಲ್ಲಿ ಕೊರತೆ ಎನ್ನುವುದು ಕೇವಲ ಮಳೆಬೆಳೆಗಳಿಗೆ ಮಾತ್ರ ಸಂಬಂಧಿಸಿದ್ದಾಗಿರದೆ ಸಂಗೀತಕ್ಷೇತ್ರವನ್ನೂ ತನ್ನ ಕಬಂಧಬಾಹುಗಳಿಂದ ಬಂಧಿಸಿತ್ತು ಎನ್ನುವುದು ನಿಜವಾದ ಮಾತು.
ನನಗೆ ಚಿಕ್ಕಂದಿನಿಂದ ಸಿನೆಮಾ ಹಾಡುಗಳ ಬಗ್ಗೆ ಅಂತಹ ವಿಶೇಷವಾದ ಒಲವೇನೂ ಇರಲಿಲ್ಲ. ಹರೀಶ ಟೂರಿಂಗ್ ಟಾಕೀಸ್ ನಲ್ಲಿ ಚಿತ್ರ ಪ್ರಾರಂಭವಾಗುತ್ತಿದ್ದ ಮೊದಲು, ಕೊನೆಯ ಹಾಡಾಗಿ ಹಾಕುತ್ತಿದ್ದ “ನಮೋ ವೆಂಕಟೇಶ, ನಮೋ ತಿರುಮಲೇಶ” ಮಾತ್ರ ಅನೇಕ ವರ್ಷಗಳ ಕಾಲ ನನ್ನ ನೆಚ್ಚಿನ ಚಲನಚಿತ್ರ ಗೀತೆಯಾಗಿತ್ತು. ಈ ಗೀತೆ ಕಿವಿಯ ಮೇಲೆ ಬಿದ್ದ ತಕ್ಷಣ ಮನೆಯಿಂದ ಬರ್ಕೀಸು ಬಿಟ್ಟು ಹಾಡು ಮುಗಿಯುವುದರ ಒಳಗೆ ಟಾಕೀಸ್ ಸೇರುತ್ತಿದ್ದ ರಾತ್ರಿಗಳ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. “ಸಪ್ನೊಂಕಿ ರಾಣಿ ಕಬ್ ಆಯೇಗಿ ತೂ” ಎನ್ನುವ ಹಿಂದಿ ಚಲನಚಿತ್ರದ ಹಾಡನ್ನು “ಮೂವತ್ತು ಮಾರ್ಕಿ” ನ ಬೀಡಿಗಳ ಪ್ರಚಾರಕ್ಕೆಂದು ಮಂಗಳವಾರದ ಊರಸಂತೆಯಲ್ಲಿ ಬೀಡುಬಿಡುತ್ತಿದ್ದ ಮಾರಾಟದ ವ್ಯಾನ್ ಮೇಲಿಟ್ಟ ಸೌಂಡ್ ಸಿಸ್ಟಂ ನಲ್ಲಿ ನುಡಿಸುತ್ತಿದ್ದದ್ದನ್ನು ಸಂತೆಯಲ್ಲಿ ಹಾಕಿದ ನಮ್ಮ ಅವ್ವನ ತಾತ್ಪಾಲ್ ಹೊದಿಸಿದ ತಿಂಡಿ ಅಂಗಡಿಯ ಮಧ್ಯದ ಗೂಟಕ್ಕೆ ಒರಗಿ ಕೂತು ಕೇಳಿಸಿಕೊಳ್ಳುವುದು ನನ್ನ ಜಾಯಮಾನವಾಗಿತ್ತು. “ಮಾನವಾ ದೇಹವು ಮೂಳೆ ಮಾಂಸದ ತಡಿಕೆ” ಎನ್ನುವ ಅಣ್ಣನವರ ಭಕ್ತಕುಂಬಾರದಲ್ಲಿನ ಹಾಡು ನನಗೆ ಬಹಳ ಕಾಲ ಗುಂಗನ್ನು ಹಿಡಿಸಿದ್ದೂ ಹೌದು.
ಮಧ್ಯಾಹ್ನದ ತರಗತಿಗಳಿಗೆ ಕುರುಬರ ಕೇರಿಗೆ ಹೋಗಿ ಹನುಮಂತಪ್ಪನನ್ನು ಅವನ ಮನೆಯಿಂದ ಕರೆದುಕೊಂಡು ಹೋಗುವ ಹೊತ್ತಿನ ಒಂದೂಕಾಲು ಗಂಟೆಗೆ ಸರಿಯಾಗಿ ಭದ್ರಾವತಿಯ ಆಕಾಶವಾಣಿ ನಿಲಯದಿಂದ ದಿನಂಪ್ರತಿ ಪ್ರಸಾರವಾಗುತ್ತಿದ್ದ ಕನ್ನಡ ಚಲನಚಿತ್ರ ಗೀತೆಗಳ “ರಸಮಂಜರಿ” ಕಾರ್ಯಕ್ರಮವನ್ನು ಹನುಮಂತಪ್ಪನ ಅಣ್ಣ ಜಯ್ಯಣ್ಣನ ಟ್ರಾನ್ಸಿಸ್ಟರ್ ರೇಡಿಯೋದಲ್ಲಿ ಕೇಳುತ್ತಿದ್ದ ನೆನಪು ಈಗಲೂ ತಾಜಾವಾಗಿದೆ. ಆದರೆ ಈ ಎಲ್ಲಾ ಸಂಗೀತಗಳ ಲಭ್ಯತೆಯ ಮಧ್ಯೆ ನನಗೆ ಸಂಗೀತದ ರಸದೌತಣವನ್ನು ಉಣಬಡಿಸುತ್ತಿದ್ದದ್ದು ಭಜನೆ ರುದ್ರಣ್ಣನವರ ಅಭಿಜಾತ ಸಂಗೀತದ ಅವ್ಯಾಹತ ಹರಿವು ಮಾತ್ರವೇ.
ದೊಡಘಟ್ಟ ಮೂಲದವನಾದ ರುದ್ರಣ್ಣನ ವೈಯಕ್ತಿಕ ಬದುಕಿನ ವಿವರಗಳ ಬಗ್ಗೆ ನನಗೆ ಅಂತಹಾ ಮಾಹಿತಿ ಇಲ್ಲ. ನನಗೆ ತಿಳಿದ ಮಟ್ಟಿಗೆ ರುದ್ರಣ್ಣ ಕೊನೆಯವರೆಗೂ ಅವಿವಾಹಿತನಾಗಿಯೇ ಉಳಿದಿದ್ದ. ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ಊರ ಸುತ್ತಮುತ್ತಲಿನ ಸಣ್ಣಪುಟ್ಟ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ರುದ್ರಣ್ಣ ನನ್ನ ತಾತನ ಸೋದರ ಸಂಬಂಧಿ ಎಂದು ಕೇಳಿದ್ದ ನೆನಪು. ಆದರೆ ಎಂದೂ ನಮ್ಮ ಮನೆಯ ಹೊಸ್ತಿಲನ್ನೂ ತುಳಿಯದ ರುದ್ರಣ್ಣ ತೀರಾ ಅಪರೂಪಕ್ಕೆ ಒಮ್ಮೆ ಎನ್ನುವಂತೆ, ಅದೂ ಅವ್ವ ಅಂಗಡಿಯಲ್ಲಿ ಇರದ ವೇಳೆಗಳಲ್ಲಿ, ನಮ್ಮ ಅಂಗಡಿಮನೆಗೆ ಬಂದು ಗಣೇಶಬೀಡಿ ಕಟ್ಟು ಮತ್ತು ಬೆಂಕಿಪೊಟ್ಟಣವನ್ನು ಖರೀದಿಸುತ್ತಿದ್ದ ಎನ್ನುವುದು ಮಸುಕುಮಸುಕಾಗಿ ನೆನಪಿನಲ್ಲಿದೆ. ನನ್ನ ತಾತ ಅಂಗಡಿಯಲ್ಲಿ ಇದ್ದರೆ “ಏನು ತಿಪ್ಪಣ್ಣ, ಚೆನ್ನಾಗಿದ್ದೀಯ?” ಎಂದಷ್ಟೇ ಪ್ರಶ್ನಿಸಿ ತನಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದ ರುದ್ರಣ್ಣನಿಂದ ನನ್ನ ತಾತ ಹಣವನ್ನು ಪಡೆದಿದ್ದುದ್ದನ್ನು ನಾ ಕಾಣೆ.
ರುದ್ರಣ್ಣ ಎಷ್ಟೇ ಬಲವಂತ ಮಾಡಿದರೂ ಆತನಿಂದ ದುಡ್ಡು ತೆಗೆದುಕೊಳ್ಳದೆ ಇರುತ್ತಿದ್ದ ತಾತ ನಾನು ಕೇಳಿದ್ದ ಅವರ ರಕ್ತಸಂಬಂಧದ ಬಗ್ಗೆ ಅನಧಿಕೃತ ಮುದ್ರೆ ಒತ್ತಿದ್ದ. ಈ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದದ್ದು ನಾನು ಹೈಸ್ಕೂಲಿನ ಒಂಬತ್ತೆಯ ಇಯತ್ತೆಯಲ್ಲಿದಾಗ, ಭಜನೆ ರುದ್ರಣ್ಣ ತೀರಿಕೊಂಡ ಹೊತ್ತಿನಲ್ಲಿ. ಅಣ್ಣತಮ್ಮಂದಿರು, ರಕ್ತಸಂಬಂಧಿಗಳ ಪೈಕಿ ಯಾರಾದರೂ ತೀರಿಕೊಂಡರೆ ಮನೆಯನ್ನು ಹೊಂಡು ಬಳಿಯಬೇಕು ಎನ್ನುವ ನಮ್ಮ ಕಡೆಯ ಸಂಪ್ರದಾಯದಂತೆ ರುದ್ರಣ್ಣ ಗತಿಸಿದಾಗ ನಮ್ಮ ಮನೆಯನ್ನು ಅವ್ವ ಸುಣ್ಣಬಣ್ಣಗಳಿಂದ ಪೂರ್ತಿಯಾಗಿ ಬಳಿಸಿದ್ದಳು. ಆದರೆ ನಮ್ಮ ಮನೆಯಲ್ಲಿ ರುದ್ರಣ್ಣನನ್ನು ಕುರಿತಾಗಿ ಎಂದೂ ಮಾತುಕತೆ ನಡೆದ ಸಂಗತಿಯೇ ನನಗೆ ನೆನಪಿಲ್ಲ. ಹಾಗಂತ ನನ್ನ ಅವ್ವನನ್ನೂ ಸೇರಿದಂತೆ ನಮ್ಮ ಮನೆಯ ಯಾವ ಸದಸ್ಯರೂ ನಾನು ಬಾಲ್ಯಕಾಲದಲ್ಲಿ ಭಜನೆ ರುದ್ರಣ್ಣನ ಹಿಂದೆ ಹುಚ್ಚು ಹಿಡಿದವನಂತೆ ಅಲೆಯುತ್ತಿದ್ದುದ್ದನ್ನು ಒಂದು ಹಂತದ ತೀವ್ರತೆಗಿಂತ ಹೆಚ್ಚಾಗಿ ವಿರೋಧಿಸಿದವರಲ್ಲ.
ರುದ್ರಣ್ಣ ಸಂಗೀತವೇ ಮನುಷ್ಯರೂಪದಲ್ಲಿ ಜೀವತಳೆದ ಅಪ್ಪಟ, ಅದ್ಭುತ ಗ್ರಾಮೀಣ ಹಿನ್ನೆಲೆಯ ಪ್ರತಿಭೆಯ ಸಾಗರ ಸ್ವರೂಪದಂತಹವನು. ಹಳ್ಳಿಗಾಡಿನಲ್ಲಿ ಅರಳಿದ ಸಂಗೀತದ ನಳನಳಿಸುವ ಪಾರಿಜಾತ ಕುಸುಮದಂತಹವನು. ಯಾವ ಪಾರಂಪರಿಕ ಸಂಗೀತ ಶಿಕ್ಷಣದ ಹಿನ್ನೆಲೆಯೂ ಇಲ್ಲದೆ, ಕಾಡಿನ ಕೋಗಿಲೆಗೆ ದೈವದತ್ತವಾಗಿ ಸಲ್ಲುವ ಸಂಗೀತಜ್ಞಾನದ ಹಾಗೆ, ಹಾಡುಗಾರಿಕೆ ರುದ್ರಣ್ಣನಿಗೆ ಅಭಿಜಾತರೂಪದಲ್ಲಿ ಒಲಿದು ಬಂದಿತ್ತು. ಹಾಗಂತಲೇ “ಭಜನೆ” ಎನ್ನುವ ಅನ್ವರ್ಥನಾಮ ಆತನ ಹೆಸರಿನ ಪೂರ್ವಾರ್ಧದಲ್ಲಿ, ಹಾಲಿನಲ್ಲಿ ಸೇರಿದ ಕಲ್ಲುಸಕ್ಕರೆ ಹಾಗೆ ಬೆರೆತು ಸೇರಿ, ಊರ ಎಲ್ಲರೂ ಆತನನ್ನು “ಭಜನೆ ರುದ್ರಣ್ಣ” ಎಂದೇ ಗುರುತಿಸುವ ಹಾಗಾಗಿತ್ತು. ರುದ್ರಣ್ಣನ ಹಾಡುಗಾರಿಕೆ ಅತ್ಯಂತ ವೈವಿಧ್ಯಮಯ ಮತ್ತು ವೈಶಾಲ್ಯತೆಯನ್ನು ಹೊಂದಿದ್ದಾಗಿತ್ತು. ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಅಪರೂಪದ ಶಾರೀರ ರುದ್ರಣ್ಣನಿಗಿತ್ತು. ಆತನ ಎದೆಯಾಳದಿಂದ ಹೊಮ್ಮುತ್ತಿದ್ದ ಸಂಗೀತದ ಧಾರೆ ಪಂಡಿತಪಾಮರ ಈರ್ವರನ್ನೂ ಏಕಕಾಲದಲ್ಲಿ ಮೂಕವಾಗಿಸುವಷ್ಟು ಸಶಕ್ತವಾಗಿತ್ತು. ಭಜನೆ ರುದ್ರಣ್ಣ ತನ್ನ ಅನ್ವರ್ಥನಾಮದ ಸೀಮೋಲ್ಲಂಘನೆ ಮಾಡಿ ಸಂಗೀತದ ಹಲವು ಹತ್ತು ಪ್ರಕಾರಗಳಲ್ಲಿ ಸಿದ್ಧಹಸ್ತನೆನಿಸಿದ್ದ. “ಸಂಗೀತ ನಾಭಿಯಿಂದ ಉತ್ಪನ್ನವಾಗಬೇಕು, ಕಂಠಜನ್ಯವಾದರೆ ಸಾಲದು” ಎಂದು ಸದಾ ನುಡಿಯುತ್ತಿದ್ದ ರುದ್ರಣ್ಣ ಸಂಗೀತ ತಾಲೀಮನ್ನು ಶಾಸ್ತ್ರೀಯವಾಗಿ ಗುರುಮುಖೇನ ಪಡೆದವನೆ ಅಲ್ಲ ಎನ್ನುವ ವಿಷಯವನ್ನು ಆತನ ಸಂಗೀತಕ್ಕೆ ಕಿವಿಯಾದ ಯಾರೂ ಸುಲಭದಲ್ಲಿ ನಂಬುವ ಹಾಗಿರಲಿಲ್ಲ. ದಾಸರಪದ, ಭಜನೆಯ ಹಾಡುಗಳು, ಶರಣರ ವಚನಗಳು, ಜಾನಪದ ಗೀತೆಗಳ ಕಣಜವೆ ಆಗಿದ್ದ ರುದ್ರಣ್ಣನ ಸಂಗೀತಪ್ರಜ್ಞೆ ಅತ್ಯದ್ಭುತವಾದದ್ದು, ಅತ್ಯಮೋಘವಾದದ್ದು, ಶಬ್ದಗಳ ಜಾಲದಲ್ಲಿ ಸುಲಭದಲ್ಲಿ ಹಿಡಿದಿಡಲಾಗದ್ದು. ಸೃಜನಶೀಲತೆಯ ಎಲ್ಲಾ ಎಲ್ಲೆಗಳನ್ನು ಮೀರಿ ಪ್ರವಹಿಸುವಂತಹುದು. ದೈವೀಸಾಕ್ಷಾತ್ಕಾರದ ಮೆಟ್ಟಲುಗಳ ಆರೋಹಣದ ಯಾನವನ್ನು ಕಟ್ಟಿಕೊಡುವಂತಹುದು. “ಸಂಗೀತಕ್ಕೂ ಭಗವಂತ ಒಲೆಯಬಲ್ಲ” ಎನ್ನುವ ನಂಬಿಕೆಯನ್ನು ದೃಢಗೊಳಿಸುವಂತಹುದು. “ಸಂಗೀತ ಗಂಧರ್ವವಿದ್ಯೆ” ಎನ್ನುವ ಮಾತಿಗೆ ಕಿಚ್ಚುಹಚ್ಚುವಂತಹದು. ರುದ್ರಣ್ಣ ಹಾಡಲು ಮೊದಲಿಟ್ಟರೆ ಹಾದಿಬೀದಿಯ ಜನರ ಪಾಡು ಒತ್ತಟ್ಟಿಗಿರಲಿ, ರಸ್ತೆಯ ಮೇಲಿನ ದನಕರುಗಳು, ನಾಯಿಬೆಕ್ಕುಗಳು, ಕಾಗೆ ಬಾವಲಿಗಳು ಮೊದಲುಗೊಂಡ ಸುತ್ತಮುತ್ತಲ ಸಮಸ್ತ ಪ್ರಾಣಿಪ್ರಪಂಚ ಕ್ಷಣಕಾಲ ಅವ್ವಕ್ಕಾಗಿ, ತಮ್ಮ ಲೌಕಿಕ ಚಟುವಟಿಕೆಗಳಿಗೆ ತಾತ್ಕಾಲಿಕ ವಿದಾಯ ಹೇಳಿ, ರುದ್ರಣ್ಣನಿಂದ ನಿರ್ಮಿತಿಗೊಂಡ ಸಂಗೀತಸಾಗರದಲ್ಲಿ ಮುಳಿಗೇಳುತ್ತಿದ್ದವು ಎಂದರೆ ರುದ್ರಣ್ಣನ ಸಂಗೀತದ ಅಲೌಕಿಕ ಪ್ರತಿಭೆಯ ಅಲ್ಪ ಪರಿಚಯ ಓದುಗಗಣಕ್ಕಾದೀತು. ಅನೇಕ ದಿನಗಳ ಸಂಜೆಗಳಲ್ಲಿ, ಶಾಲಾ ವೇಳೆಯ ನಂತರ, ಗೆಳೆಯರ ಗುಂಪನ್ನು ಕಟ್ಟಿಕೊಂಡು ಭಜನೆ ರುದ್ರಣ್ಣನನ್ನು ಅರೆಸುತ್ತಾ ಊರ ಗಲ್ಲಿಗಲ್ಲಿಗಳಲ್ಲಿ ತಿರುಗಿದ್ದೂ ಉಂಟು. ರುದ್ರಣ್ಣ ಕಂಡ ತಕ್ಷಣ ಆತನನ್ನು ಕಾಡಿಬೇಡಿ, ದಿನದ ಯಾವುದೇ ಹೊತ್ತಾಗಲಿ, ಗಂಟೆಗಳ ಕಾಲ ಆತನ ಸಂಗೀತ ಮಾರ್ದವ್ಯಕ್ಕೆ ತಲೆದೂಗಿದ್ದೂ ಉಂಟು. ತನ್ನ ಪಾಡಿಗೆ ತಾನು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಸಂಗೀತವನ್ನೇ ಉಸಿರಾಡುತ್ತಿದ್ದ ರುದ್ರಣ್ಣನಿಗೆ ಆತನ ಹಾಡುಗಾರಿಕೆಗಾಗಿ ಹೆಚ್ಚು ಪೀಡಿಸಬೇಕಾಗಿರಲಿಲ್ಲ. ಒಂಟಿಯಾಗಿ ರಸ್ತೆಗಳಲ್ಲಿ ನಡೆಯುತ್ತಲೇ ಗಾನಸುಧೆಯನ್ನು ಹರಿಸುತ್ತಿದ್ದ ರುದ್ರಣ್ಣ ಬೇಡಿಕೆಯ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು ಅರ್ಥಾತ್ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವ ವ್ಯಕ್ತಿಗಳ ಪೈಕಿಯೇ? ತನ್ನ ಗಾನಮಾಂತ್ರಿಕತೆಯಲ್ಲಿ ನಮ್ಮನ್ನು ಮಂತ್ರಮುಗ್ಧಗೊಳಿಸಲು ಸದಾ ಹವಣಿಸುತ್ತಿದ್ದ ಭಜನೆ ರುದ್ರಣ್ಣನ ಗಾಯನದ ಮೋಡಿಯನ್ನು, ಝಳಕನ್ನು ದೊಡ್ಡವನಾದಾಗ ಸಿ.ಎಸ್. ಅಶ್ವತ್ಥ್ ಅವರ ಹಾಡುಗಳಲ್ಲಿ ಕಂಡಿದ್ದೇನೆ. ಎಂಬತ್ತರ ದಶಕದ ಆದಿಯಲ್ಲಿ ಅಶ್ವತ್ಥ್ ಅವರ ಗಾಯನವನ್ನು ಕ್ಯಾಸೆಟ್ ನಲ್ಲಿ ಕೇಳಿಸಿಕೊಂಡವನು ಒಂದು ರೀತಿಯ ಶಾಕ್ ಗೆ ಒಳಗಾಗಿದ್ದೆ. ಥೇಟ್ ರುದ್ರಣ್ಣನ ಗಾಯನಶೈಲಿಯನ್ನು ನೆನಪಿಸುವಂತಿದ್ದ ಅಶ್ವಥ್ ಅವರ ಸಂಗೀತ ನನ್ನನ್ನು ಕೆಲದಿನಗಳ ಮಟ್ಟಿಗೆ ಅನ್ಯಮನಸ್ಕನನ್ನಾಗಿಸಿತ್ತು. ಎಲೆಕ್ಟ್ರಾನಿಕ್ಸ್ ಕ್ರಾಂತಿಯ ಒಂದು ದಶಕದ ಮೊದಲೇ ಮಣ್ಣಾದ ಭಜನೆ ರುದ್ರಣ್ಣನ ಸಿರಿಕಂಠವೇನಾದರೂ ಒಂದು ವೇಳೆ ಕ್ಯಾಸೆಟ್ ನ ಸುರಳಿಗಳಲ್ಲಿ ಧ್ವನಿಯ ರೂಪದಲ್ಲಿ ಖೈದಾಗಿದ್ದರೆ ಎಷ್ಟು ಚೆನ್ನಾಗಿತ್ತು ಎನ್ನುವ ನನ್ನ ಅಂತರಂಗದ ಕೂಗು ಹಲವು ದಿನಗಳ ಮಟ್ಟಿಗೆ ನನ್ನ ಮನವನ್ನು ಇನ್ನಿಲ್ಲದಂತೆ ಕಾಡಿದ್ದು ದಿಟ. ನಾನು ಇಂದು ಕನ್ನಡ ಸುಗಮಸಂಗೀತ ಕ್ಷೇತ್ರದ ಅತ್ಯುಗ್ರ ಅಭಿಮಾನಿ ಎಂದಲ್ಲಿ ಅದರ ಹಿಂದೆ ಅಂದು ಭಜನೆ ರುದ್ರಣ್ಣ ಬಿತ್ತಿದ್ದ ಸಂಗೀತದ ಬೀಜಗಳು ಮೊಳಕೆ ಒಡೆದು, ಸೊಂಪಾಗಿ ಬೆಳೆದು, ಹೆಮ್ಮರವಾಗಿ ಬೆಳೆದು ನಿಂತಿರುವುದನ್ನು ಯಾರಾದರೂ ಸುಲಭದಲ್ಲಿ ಗುರುತಿಸಿಯಾರು.
ಭಜನೆ ರುದ್ರಣ್ಣ ಸಂಗೀತಯೋಗಿ. ಸಂಗೀತದ ಸೇವೆಗಾಗಿಯೇ ಜನ್ಮ ತಳೆದವನು. ಸಂಗೀತದ ಅನನ್ಯ ಉಪಾಸಕ. ಸಂಗೀತಕಾಯಕದಲ್ಲಿ ಲೌಕಿಕ ಜಗತ್ತಿನ ಸರ್ವಸ್ವವನ್ನೂ ಸಾಕ್ಷೀಕರಿಸಿಕೊಂಡಾತ. ಬಿಡುವಾದಾಗೊಮ್ಮೆ, ತಂಬೂರಿಯನ್ನು ಮೀಟುತ್ತಾ ತನ್ನ ಗುಡಿಸಿಲಿನಂತಹ ಸಣ್ಣಮನೆಯ ಅಂಗಳದಲ್ಲಿ ರುದ್ರಣ್ಣ ಹಾಡಲು ಕುಳಿತ ಎಂದರೆ ಅಲ್ಲಿ ದೈವ ಸಾಕ್ಷಾತ್ಕಾರವಾಗುತ್ತಿತ್ತು. ನಿರ್ಮಲ ನೈರ್ಮಲ್ಯ ಸಂಗೀತಶಾರದೆ ತನ್ನ ಶುದ್ಧಶ್ವೇತವರ್ಣದ ವಸ್ತ್ರಗಳನ್ನು ಹೊದ್ದು ಅಲ್ಲಿ ಹಾಜರಾಗುತ್ತಿದ್ದಳು.
ಬೀಸುವ ಗಾಳಿಯೂ ಕ್ಷಣಕಾಲ ನಿಂತು ರುದ್ರಣ್ಣನ ಗಾಯನವನ್ನು ತನ್ನ ಮಂದಾನಿಲದಲ್ಲಿ ಬೆರೆಸಿಕೊಂಡು ಧನ್ಯತಾಭಾವದಿಂದ ಮುಂದೆ ಸಾಗುತ್ತಿತ್ತು. ಯಾವ ಫಲಾಫಲಗಳ ಅಪೇಕ್ಷೆಯಿಲ್ಲದೆ ತನ್ನ ಮರಣದ ಕೆಲವೇ ಕೆಲವು ತಿಂಗಳುಗಳ ಮೊದಲಿನವರೆಗೂ ನನ್ನ ನೆಲದ ಎದೆಯಲ್ಲಿ ಅಪ್ರತಿಮ ಸಂಗೀತ ಶಿಲ್ಪ ಕೊರೆಯುತ್ತಲೆ ಸಾಗಿದ ಭಜನೆ ರುದ್ರಣ್ಣನ ಸಂಗೀತದ ಅಶ್ವಮೇಧಯಾಗದ ಕುದುರೆ ಊರ ಯಾರ ಮನೆಯ ಮುಂದಾದರೂ ಬೇಷರತ್ತಾಗಿ ಬಂದು ನಿಲ್ಲುತ್ತಿತ್ತು. ಜಾತಿ, ಧರ್ಮ, ಅಂತಸ್ತುಗಳ ಬೇಧಗಳನ್ನು ಬದಿಗೆ ಒತ್ತಿ, ಯಾರ ಮನೆಯಿಂದಲೇ ಆಗಲೀ ಗಾಯನದ ಆಮಂತ್ರಣ ಬಂತು ಎಂದರೆ ರುದ್ರಣ್ಣ ಅದನ್ನು ತಿರಸ್ಕರಿಸಿದವನೇ ಅಲ್ಲ. ದಿನದ ಯಾವ ಹೊತ್ತಿನಲ್ಲಿಯೇ ಆಗಲಿ, ಕರೆದವರ ಮನೆಗೆ ಹೋಗಿ ಅವರ ಪೂಜಾಕಾರ್ಯಗಳಿಗೆ ಕಳೆಕಟ್ಟುತ್ತಿದ್ದವನು, ಸಂಗೀತ ಗುಣದ ಸಿಂಧುತ್ವದ ಮುದ್ರೆ ಒತ್ತುತ್ತಿದ್ದನು ಆತ. ಅನೇಕರ ಮನೆಗಳಲ್ಲಿ ಶುಭಕಾರ್ಯಗಳಿಗಾಗಿ ಬರುತ್ತಿದ್ದ ಪರಊರುಗಳ ನೆಂಟರಿಷ್ಟರು ಭಜನೆ ರುದ್ರಣ್ಣನ ಸಂಗೀತ ಇಟ್ಟರೆ ಮಾತ್ರ ತಾವು ತುರುವನೂರಿಗೆ ಬರುತ್ತೇವೆ ಎನ್ನುವ ಮುಂಗಡ ಷರತ್ತನ್ನು ಹಾಕಿದ ವಿಷಯಗಳನ್ನ ಕೇಳಿದ್ದ ನೆನಪು. ನೂರನಾಲ್ಕು ಡಿಗ್ರಿಗಳನ್ನ ಮೀರಿದ ತಾಪಮಾನದ ಜ್ವರ ದೇಹವನ್ನು ಬಾಡಿಸುತ್ತಿದ್ದಾಗಲೂ, ಹಠಕ್ಕೆ ಬಿದ್ದವನಂತೆ ಬಸಪ್ಪಸ್ವಾಮಿಗಳ ಗದ್ದುಗೆಯ ವಾರ್ಷಿಕ ಮಹೋತ್ಸವವೊಂದರಲ್ಲಿ ರಾತ್ರಿಯಿಡೀ ತನ್ಮಯತೆಯಿಂದ ಹಾಡುತ್ತಲೇ ತನ್ನ ಭಕ್ತಿಯ ಕುರುಹು ಪ್ರದರ್ಶಿಸಿದ ರುದ್ರಣ್ಣ ಬೆಳಗಿನ ನಾಲ್ಕು ಗಂಟೆಯ ಹೊತ್ತಿಗೆ ಹಾಡುತ್ತಲೇ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಆತುರಾತುರವಾಗಿ ಆತನನ್ನು ಊರಿನ ಆಸ್ಪತ್ರೆಗೆ ಕರೆದೊಯ್ದ ಸಮಾರಂಭದ ಆಯೋಜಕರು ಆ ಹೊತ್ತಿನಲ್ಲಿ ನರ್ಸ್ ಶಿವಲಿಂಗಮ್ಮನ ಕೈಕಾಲುಗಳನ್ನು ಹಿಡಿದು ಡ್ರಿಪ್ಸ್ ಹಾಕಿಸುವ ಮೂಲಕ ರುದ್ರಣ್ಣನನ್ನು ಉಳಿಸಿಕೊಂಡಿದ್ದು ಊರ ಇತಿಹಾಸದ ಒಂದು ಭಾಗವೇ ಆಗಿದೆ. ಸುಮಾರು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದ ರುದ್ರಣ್ಣ ಆಸ್ಪತ್ರೆಯಿಂದ ಬಿಡುಗಡೆಯಾದ ದಿನದ ಸಂಜೆಯೇ ಇಂದ್ರಣ್ಣಗೌಡರ ಮನೆಯ ಪೂಜೆಯ ಕಾರ್ಯವೊಂದರಲ್ಲಿ ಮತ್ತೆ ಕೋಗಿಲೆಯಾಗಿ ಉಲಿದಿದ್ದು ಸಂಗೀತದೇವಿಯ ಕೃಪಾಕಟಾಕ್ಷದಿಂದ ಮಾತ್ರ ಎಂದು ನಾನು ನನಗೆ ಸಾಧ್ಯವಿರುವಷ್ಟೂ ಮಟ್ಟಿಗಿನ ವಿನಮ್ರಭಾವದಿಂದ ಸಾದರಪಡಿಸುತ್ತಿದ್ದೇನೆ. ತನ್ನ ಸಂಗೀತಸೇವೆಗಾಗಿ ಯಾರಿಂದಲೂ, ಎಂದೂ ಒಂದು ಚಿಕ್ಕಾಸನ್ನೂ ಕೇಳಿ ಪಡೆಯದ ರುದ್ರಣ್ಣ ಯಾರಾದರೂ ಸ್ವಯಂಪ್ರೇರಣೆಯಿಂದ ಏನನ್ನಾದರೂ ಕೊಡಲು ಬಂದರೆ ಖಡಾಖಂಡಿತವಾಗಿ ನಿರಾಕರಿಸುತ್ತಿದ್ದ. ತನ್ನ ಜನ್ಮಜಾತ ಪ್ರತಿಭೆ ಜಂಗಮದ ಸೇವೆಗಾಗಿ ಮಾತ್ರ ಎಂದು ದೃಢವಾಗಿ ನಂಬಿದ್ದ ರುದ್ರಣ್ಣ ಹಣಕ್ಕಾಗಿ ಸಂಗೀತದಂತಹ ದೈವಿಕಪ್ರತಿಭೆಯನ್ನು ಮಾರಾಟ ಮಾಡಬಹುದು ಎನ್ನುವ ಯೋಚನೆ ಮಾತ್ರವನ್ನು ತಾನು ಸಂಗೀತ ಹೊರಡಿಸುತ್ತಿದ್ದ ನಾಭಿಯ ಮಟ್ಟದಿಂದಲೇ ಖಡಾಖಂಡಿತವಾಗಿ ವಿರೋಧಿಸುತ್ತಿದ್ದ.
ನಾನು ಕಂಡ ಹಾಗೆ, ಸಂಗೀತ ಸಾಮ್ರಾಜ್ಞನಾದ ಭಜನೆ ರುದ್ರಣ್ಣ ಬಡತನವನ್ನೇ ಹೊದ್ದು ಬದುಕಿದವನು. ಕೊನೆಯವರೆಗೂ ರುದ್ರಣ್ಣ ಬಳಿ ಉಳಿದಿದ್ದು ಎಂದರೆ ಎರಡು ಮಾತ್ರ, ದಿನಗೂಲಿಯ ಭೌತಿಕ ಶ್ರಮ ಮತ್ತು ಸಂಗೀತ ಆರಾಧನೆಯ ದೈವಿಕ ಸಾಧನೆ. ದಿನಗೂಲಿ ಎರಡು ಹೊತ್ತಿನ ಊಟಕ್ಕೆ ದಾರಿ ತೋರಿದರೆ ಸಂಗೀತ ರುದ್ರಣ್ಣನ ದೇಹ ಮತ್ತು ಆತ್ಮಗಳನ್ನು ಒಟ್ಟಾಗಿ ಹಿಡಿದಿಡಲು ಬೇಕಾದ ಅಮೃತವರ್ಷಿಣಿಯಾಗಿತ್ತು. ಸಂಗೀತ ಒಲಿದ ನಾನು ಬಡವ ಎನ್ನುವ ಭಾವನೆಯನ್ನು ರುದ್ರಣ್ಣ ತನ್ನ ಮನಸ್ಸಿನಲ್ಲಿ ಎಂದೂ ಧಾರಣೆ ಮಾಡದವನು ಮಾತ್ರವಲ್ಲದೆ ಅದನ್ನು ತನ್ನ ನಡವಳಿಕೆಯಲ್ಲೂ ಯಥೇಚ್ಚವಾಗಿ ಪ್ರದರ್ಶಿಸುತ್ತಿದ್ದ. ಭಜನೆ ರುದ್ರಣ್ಣ ಮೂಲತಃ ನಿಷ್ಠುರವಾದಿ. ತನ್ನ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಛಾತಿಯುಳ್ಳವನು. ಊರಿನ ಸಾರ್ವಜನಿಕ ಗಣೇಶ ಮಹೋತ್ಸವಕ್ಕೆಂದು ದುರ್ಗದಿಂದ ಕರೆಸಿದ ಅಂದಿನ ನಾಡಿನ ಪ್ರಖ್ಯಾತ ಗಾಯಕರೊಬ್ಬರು ಅಕ್ಕನ ವಚನವೊಂದನ್ನು ಹಾಡುವ ವೇಳೆ ಶ್ರುತಿಯಲ್ಲಿ ಮಾಡಿದ ಸಣ್ಣ ಎಡವಟ್ಟನ್ನು ಸಹಿಸದ ರುದ್ರಣ್ಣ ನೇರವಾಗಿ ವೇದಿಕೆಯನ್ನು ಏರಿ ಆ ಗಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದೇ ಅಲ್ಲದೆ ಸರಿಯಾದ ರೀತಿಯಲ್ಲಿ ಅಕ್ಕನವರ ಆ ವಚನವನ್ನು ಹಾಡುವ ಧಾಟಿಯನ್ನು ತಾನು ಹಾಡಿ ತೋರಿಸುವ ಮೂಲಕ ಸಭಿಕರ ಮುಂದಿಟ್ಟಾಗ ಸುಮಾರು ಐದು ನಿಮಿಷಗಳ ಕಾಲ ನಿಲ್ಲದೆ ಸಾಗಿದ ಕರತಾಡನ ಮುಗಿಲು ಮುಟ್ಟಲಾಗಿ, ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಂಗಾಲಾದಂತೆ ಕಂಡುಬಂದ ಪ್ರಸಿದ್ಧ ಗಾಯಕರು ನೆರೆದ ಸಭಿಕರ ಕ್ಷಮೆ ಕೇಳಿದ ಘಟನೆ ರುದ್ರಣ್ಣನ ಅಭಿಜಾತ ಸಂಗೀತ ಪ್ರತಿಭೆ, ಪ್ರೇಮದ ಒಟ್ಟಿಗೇ ತಪ್ಪುಗಳನ್ನು ಕಂಡಾಗ ಅವುಗಳನ್ನು ಗುರುತಿಸಿ, ಖಂಡಿಸುವ ಮತ್ತು ಅವುಗಳನ್ನು ಸರಿಪಡಿಸುವ ಎಡೆಯಲ್ಲಿನ ಅಪರೂಪದ ಮನಃಸ್ಥಿತಿಯನ್ನೂ ಪ್ರದರ್ಶಿಸುತ್ತದೆ.
ಬೀದಿ ಬೀದಿಗಳಲ್ಲಿ ಹಾಡುತ್ತಲೇ ಜೀವಮಾನವೊಂದನ್ನು ವ್ಯಯಿಸಿದ ಭಜನೆ ರುದ್ರಣ್ಣ ತನ್ನ ಅವಸಾನದ ಕೊನೆಯ ಕೆಲವು ತಿಂಗಳುಗಳಲ್ಲಿ ಮಾನಸಿಕವಾಗಿ ತೀರಾ ಕುಗ್ಗಿ ಹೋಗಿದ್ದ. ಪಕ್ಕದ ಊರು ಚಿಕ್ಕಗೊಂಡನಹಳ್ಳಿಯ ಬಸವಸಮಿತಿಯ ಸಭೆಯ ವಚನಗಾಯನದಲ್ಲಿ ಭಾಗವಹಿಸಿ ಬಂದ ತರುವಾಯ ಗಂಟಲಿಗೆ ಆದ ಸೋಂಕೊಂದರ ಪರಿಣಾಮವಾಗಿ ತನ್ನ ಎಂದಿನ ಸಂಗೀತವನ್ನು ಮುಂದುವರೆಸಲು ಆಗದೆ ಕೇವಲ ಕೀರಲು ಧ್ವನಿಯನ್ನು ಮಾತ್ರವೇ ತನ್ನ ಗಂಟಲಿನಿಂದ ಹೊರಹಾಕಲು ಶಕ್ತನಾದ ರುದ್ರಣ್ಣನ ಸ್ಥಿತಿ ದಿನದಿಂದ ದಿನಕ್ಕೆ ಅತ್ಯಂತ ಶೋಚನೀಯವಾಗುತ್ತಾ ಸಾಗಿತ್ತು. ದಾವಣಗೆರೆಯಲ್ಲಿದ್ದ ದೊಡ್ಡಅಣ್ಣನ ಮಕ್ಕಳು ರುದ್ರಣ್ಣನನ್ನು ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಸಾಧ್ಯವಾದ ಎಲ್ಲಾ ಬಗೆಯ ಚಿಕಿತ್ಸೆಗಳನ್ನು ಕೊಡಿಸಿದರಾದರೂ ರುದ್ರಣ್ಣನ ಧ್ವನಿ ಮೊದಲ ತರಹ ಆಗಲೇ ಇಲ್ಲ. ಹೆಚ್ಚಿನ ಚಿಕಿತ್ಸೆಯಿಂದ ಏನೂ ಪ್ರಯೋಜನವಾಗದು ಎಂದು ನಗರದ ಪ್ರಖ್ಯಾತ ಇಎನ್ ಟಿ ವೈದ್ಯ ಡಾ.ಶಂಕರ್ ಕೈ ಚೆಲ್ಲಿದ ಮೇಲೆ ಊರಿಗೆ ಮರಳಿದ ರುದ್ರಣ್ಣ ದಿನಗೂಲಿಯನ್ನು ಮಾಡದಷ್ಟು ಹೈರಾಣನಾಗಿ ಹೋಗಿದ್ದ. ಊರಿನಲ್ಲಿದ್ದ ರುದ್ರಣ್ಣನವರ ಇನ್ನೊಬ್ಬ ಅಣ್ಣನ ಮಕ್ಕಳ ಮನೆಯಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದ ರುದ್ರಣ್ಣ ಸಂಗೀತದ ಒಡನಾಟ ಬಿಟ್ಟು ಬದುಕಲು ತೀವ್ರವಾಗಿ ಚಡಪಡಿಸುತ್ತಿದ್ದ. ಈ ಚಡಪಡಿಕೆ ನೀರಿನಿಂದ ತೆಗೆದ ಮೀನೊಂದು ಪಡುವ ಚಡಪಡಿಕೆಯನ್ನು ಮೀರಿದಾಗಿತ್ತು. ಈ ಅವಧಿಯಲ್ಲಿ ರುದ್ರಣ್ಣನನ್ನು ನಾನು ಎರಡು ಮೂರು ಬಾರಿ ಭೇಟಿ ಮಾಡಿದ್ದಿದೆ. ನನ್ನನ್ನು, ನನ್ನ ಎಂದಿನ ಗೆಳೆಯರ ಬಳಗದೊಂದಿಗೆ ಕಂಡ ರುದ್ರಣ್ಣನ ದುಃಖದ ಕಟ್ಟೆ ಈ ಪ್ರತೀ ಭೇಟಿಗಳ ವೇಳೆಯೂ ಒಡೆದು ಆತ ಬಿಕ್ಕಿಬಿಕ್ಕಿ ಮಗುವಿನ ಹಾಗೆ ಅತ್ತಿದ್ದಿದೆ. ಸಂಗೀತ ಓತಪ್ರೋತವಾಗಿ ಹರಿಯಬೇಕಿದ್ದ ಗಂಟಲು ಶಾಶ್ವತವಾಗಿ ಕಟ್ಟಿದ್ದು ರುದ್ರಣ್ಣನಿಗೆ ಸಹಿಸಲಾಗದ ಮರ್ಮಾಘಾತವನ್ನೇ ನೀಡಿತ್ತು. ಶರೀರದ ಶ್ರಮ ಮತ್ತು ಶಾರೀರದ ಸಂಗೀತ ಎರಡನ್ನೂ ಒಮ್ಮೆಲೇ ತ್ಯಜಿಸಬೇಕಾಗಿ ಬಂದ ಶಾಕ್ ನಿಂದ ರುದ್ರಣ್ಣ ಹೊರಬರಲು ಆಗಲೇ ಇಲ್ಲ. ಹೀಗೆ, ಭೌತಿಕ ಮತ್ತು ಆಧ್ಯಾತ್ಮಿಕ, ಈ ಎರಡೂ ಕ್ಷೇತ್ರಗಳಲ್ಲಿ ರುದ್ರಣ್ಣ ಅಕ್ಷರಶಃ ಲೂಟಿಯಾಗಿದ್ದ. ರುದ್ರಣ್ಣನ ನಾಭಿಯಿಂದ ಉತ್ಪನ್ನವಾಗುವ ಗಾಯನಸುಧೆ ಆತನ ಜೋಡಿಕಣ್ಣುಗಳಲ್ಲಿ, ಸಂಗೀತದ ಬದಲಾದ ಅಭಿವ್ಯಕ್ತಿಯೋ ಎನ್ನುವಂತೆ
ಗಂಗೆಯರೂಪದಲ್ಲಿ ಕಣ್ಣೀರಾಗಿ ಕೋಡಿ ಒಡೆದು ಹರಿಯುವಾಗ ನಮ್ಮ ಹೃದಯಗಳನ್ನೂ ತನ್ನೊಟ್ಟಿಗೆ ಕೊಚ್ಚಿಕೊಂಡು ಹೋಗುತ್ತಿದ್ದದ್ದು ಗತಕಾಲದ ಆ ಸಂಗತಿಯನ್ನು ಒಕ್ಕಣಿಸುವ ಈ ಹೊತ್ತೂ ಹೃದಯವಿದ್ರಾಹಕ ಸಂಗತಿಯಾಗಿಯೇ ಕಾಡುತ್ತಿದೆ. ಕಾಳುಗಳನ್ನು ಆಯ್ದುಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕೋಳಿಯ ಕಾಲುಗಳನ್ನು ಶಾಶ್ವತರೂಪದಲ್ಲಿ ಮುರಿಯಲಾಗಿತ್ತು. ಸಂಗೀತವನ್ನೇ ಬದುಕಿನ ಉದ್ದಕ್ಕೂ ಉಸಿರಾಡಿದ್ದ ಹಿರಿಯಜೀವ ತನ್ನ ಉಸಿರಿನ ಆಸರೆ ಇಲ್ಲದೆ ತೀವ್ರತರನಾದ ಸಂಕಟವನ್ನು ಅನುಭವಿಸುತ್ತಾ ಒಳಗೊಳಗೇ ದಹಿಸುತಿತ್ತು. ಕೊನೆಯ ಬಾರಿ ರುದ್ರಣ್ಣನ ದಯನೀಯ ಅವಸ್ಥೆಗೆ ಸಾಕ್ಷಿಯಾದ ಗೆಳೆಯರ ಹೃದಯಗಳು ಭಾರವಾಗಿದ್ದವು. ಬಸ್ ಸ್ಟ್ಯಾಂಡ್ ನ ಮುಸ್ಟೂರ ಬ್ರಾಹ್ಮಣರ ಹೋಟೆಲಿನಿಂದ ಪಾರ್ಸೆಲ್ ಕಟ್ಟಿಸಿಕೊಂಡು ಹೋಗಿದ್ದ ನಾಲ್ಕು ಇಡ್ಲಿಗಳನ್ನ ಚಟ್ನಿಸಹಿತ ಬಲವಂತವಾಗಿ ರುದ್ರಣ್ಣನಿಗೆ ತಿನ್ನಿಸುವಲ್ಲಿ ಸಫಲರಾದ ನಾವುಗಳು ಮುದುಡಿದ ಹೃದಯಗಳನ್ನು ಹೊತ್ತುಕೊಂಡೇ ಮನೆಗಳನ್ನು ಸೇರಿಕೊಂಡೆವು.
ಮಾರನೆಯ ದಿನ, ನನ್ನ ಊರಿನ ಅದಾಗಲೇ ಭಣಗುಟ್ಟುತ್ತಿದ್ದ ಸಾಂಸ್ಕೃತಿಕರಂಗ, ತನ್ನ ಅಭೂತಪೂರ್ವ ಪ್ರತಿಭಾಸೂರ್ಯನ ಅವಸಾನದಿಂದ ಮತ್ತಷ್ಟು ಬಳಲಿ ಬೆಂಡಾದ ಖೇದಕರ ದಿನ. ಮುಂಜಾವಿನಲ್ಲಿಯೇ ಊರಿನ ಸರ್ಕಾರಿ ದನದ ಆಸ್ಪತ್ರೆಯಲ್ಲಿದ್ದ ಹೊಂಗೆ ಮರವೊಂದಕ್ಕೆ ನೇಣು ಹಾಕಿಕೊಂಡು ಇಹಲೋಕವನ್ನು ತ್ಯಜಿಸಿದ ಭಜನೆ ರುದ್ರಣ್ಣನ ಮರಕ್ಕೆ ನೇತು ಬಿದ್ದಿದ್ದ ಶವದ ಅಂತಿಮದರ್ಶನಕ್ಕೆ ನಾವು ಗೆಳೆಯರು ವಿಷಯ ತಿಳಿದ ಒಡನೆಯೇ ದೌಡಾಯಿಸಿದೆವು. ಹಿಂದಿನ ದಿನ ಸಾಯಂಕಾಲವಷ್ಟೆ ಕಣ್ಣೀರಿನ ಕೋಡಿ ಹಾರಿಸಿದ್ದ ರುದ್ರಣ್ಣನ ನಯನದ್ವಯಗಳು ಇನ್ನು ಎಂದೂ ತೆರೆಯದ ಹಾಗೆ ಶಾಶ್ವತವಾಗಿ ಮುಚ್ಚಿಕೊಂಡಿದ್ದವು. ನನ್ನೂರಿನ ಕೋಗಿಲೆ ತನ್ನ ಬನದ ಗಾಯನವನ್ನು ಇನ್ನೆಂದೂ ನುಡಿಸಲಾರೆ ಎಂದು ನೆರೆದ ಜನರಲ್ಲಿ ಕ್ಷಮೆಯನ್ನು ಕೇಳುವ ರೀತಿಯಲ್ಲಿ ರುದ್ರಣ್ಣನ ಕುಣಿಕೆ ಬಿಗಿದ ಕಂಠ ವಿನಮ್ರಭಾವದಿಂದ ನತಮಸ್ತಕವಾಗಿತ್ತು. ನಾಲಗೆ ಹೊರಚಾಚಿದ, ತೆರೆದ ಬಾಯಿಂದ ಸಂಗೀತದ ಆರಾಧನೆ ಯಾವ ಕ್ಷಣದಲ್ಲಿಯಾದರೂ ಮೊದಲಿಡಬಹುದು ಎಂದು ಅಲ್ಲಿ ನೆರೆದವರಿಗೆ ಭ್ರಾಂತವಾಗುತ್ತಿತ್ತು. ಸವೆದ ಕೃಶದೇಹ ಬೆಳಗಿನ ಗಾಳಿಯ ಹೊಡೆತಕ್ಕೆ ಮರದ ರೆಂಬೆಯಿಂದ ತೂಗಾಡುತ್ತಾ ಇದ್ದರೆ ಸಂಗೀತ ಸಾಮ್ರಾಟನ ದಣಿವರಿಯದ ಸಂಗೀತಸುಧೆ ನಮ್ಮ ಕಿವಿಗಳಲ್ಲಿ ಹಿನ್ನೆಲೆ ಗಾಯನದ ರೂಪದಲ್ಲಿ ಮೂಡುತ್ತಲೇ ಮರೆಯಾಗುತ್ತಿತ್ತು. ಪೊಲೀಸ್, ಮಹಜರ್ ಎಂದು ನಡೆಯಬೇಕಾದ ಎಲ್ಲಾ ವಿಧಿವಿಧಾನಗಳ ನಂತರ ಲಿಂಗಾಯತ ವಿಧಿಯಂತೆ ಶಾಸ್ತ್ರೋಕ್ತವಾಗಿ ರುದ್ರಣ್ಣನ ಪಾರ್ಥಿವ ಶರೀರಕ್ಕೆ ಅಂತ್ಯಕ್ರಿಯೆಯನ್ನು ಮಾಡುವ ವೇಳೆ ಮುಸ್ಸಂಜೆಯಾಗಿತ್ತು. ಊರಿಗೆ ಊರೇ ರುದ್ರಭೂಮಿಯಲ್ಲಿ ನೆರೆಯುವ ಮೂಲಕ ತನ್ನ ಮಣ್ಣಿನಿಂದ ಟಿಸಿಲೊಡೆದ ಅಭೂತಪೂರ್ವ ಚೇತನವೊಂದಕ್ಕೆ ಅಶ್ರುತರ್ಪಣ ನೀಡಿದರು. “ಶರಣರನ್ನು ಮರಣದಲ್ಲಿ ನೋಡು” ಎನ್ನುವ ನಾಡುನುಡಿಯ ಹಾಗೆ ಅಂದು ಅಲ್ಲಿ ರುದ್ರಭೂಮಿಯಲ್ಲಿ ಒಂದಿಂಚು ಜಾಗವೂ ಖಾಲಿ ಇಲ್ಲದ ಹಾಗೆ ನೆರೆದಿದ್ದ ಜನಸಾಗರ ಭಜನೆ ರುದ್ರಣ್ಣನ ಬದುಕಿನ ಸಾರ್ಥಕ್ಯದ ದ್ಯೋತಕವಾಗಿತ್ತು. ರುದ್ರಣ್ಣನ ಮೃತ ದೇಹವನ್ನು ಕುಣಿಗೆ ಇಳಿಸುವ ಸಮಯದಲ್ಲಿ ಕಲ್ಲಪ್ಪದೇವರ ಪೂಜಾರಿ ಇಷ್ಟಲಿಂಗಯ್ಯ ಅವರ ಸುಪುತ್ರ ಗೌರಯ್ಯ ಹಾಡಿದ ಬಸವಣ್ಣನವರ “ಕಳಬೇಡ, ಕೊಲಬೇಡ” ಎನ್ನುವ ಭಜನೆ ರುದ್ರಣ್ಣನವರ ಅತಿಪ್ರಿಯ ವಚನದ ಗಾಯನದ ಮಧುರ ಪ್ರಸ್ತುತಿ ಇಡೀ ಸನ್ನಿವೇಶದ ಗಾಂಭೀರ್ಯತೆಯನ್ನು ನೂರ್ಮಡಿ ಹೆಚ್ಚಿಸಿತ್ತು. ಈ ದೃಶ್ಯ, ಲೇಖನ ಬರೆಯುವ ಈ ಹೊತ್ತೂ, ಮತ್ತೆಮತ್ತೆ ಮನದ ಚಿತ್ತಭಿತ್ತಿಯಲ್ಲಿ ಮೂಡಿಮೂಡಿ ಮರೆಯಾಗುತ್ತಿರುವ ವಿಸಂಗತಿಗೆ ಮಾತ್ರ ನನ್ನಲ್ಲಿ ಯಾವ ಸಿದ್ದ ಉತ್ತರಗಳೂ ಸದ್ಯಕ್ಕೆ ಇದ್ದಂತೆ ತೋರುವುದಿಲ್ಲ.