ರಾಜ್ಯದಲ್ಲಿ ಮತ್ತೇ ಆಮ್ಲಜನಕ ಬಿಕ್ಕಟ್ಟು, ಬಳ್ಳಾರಿಯ ಆಮ್ಲಜನಕ ಘಟಕ ಸ್ಥಗಿತ

Share

ಬೆಂಗಳೂರು: ರಾಜ್ಯಸರ್ಕಾರದ ಎಡವಟ್ಟುಗಳಿಂದ ಬಳ್ಳಾರಿಯಲ್ಲಿ ಉತ್ಪಾದನೆಯಾಗುವ ಆಮ್ಲಜನಕ ಘಟಕದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಈಗ ಮತ್ತೊಮ್ಮೆ ಆಮ್ಲಜನಕ ಕೊರತೆ ಉಂಟಾಗಿದೆ.
ಸರ್ಕಾರಕ್ಕೆ ಇಷ್ಟೆಲ್ಲಾ ಅನುಭವಗಳಾದರೂ ಕೂಡ ಒಂದು ಆಮ್ಲಜನಕವನ್ನು ನಿರ್ವಹಣೆ ಮಾಡುವ ಕುರಿತು ಅದನ್ನು ಶೀಘ್ರ ಸರಿಪಡಿಸುವ ತಂತ್ರಜ್ಞಾನದ ಕೊರತೆ ಎದ್ದು ಕಾಣುತ್ತಿದೆ ಇನ್ನೂ ಸಚಿವರು ಸಹಮತ ಇಲ್ಲದೆ ಇರುವ ಕಾರಣ ಇಂತ ಅನಾಹುತಗಳು ಮೇಲಿಂದ ಮೇಲಾಗುತ್ತಿವೆ ಆದರೂ ಇನ್ನೂ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಎಂದರೆ ನಿಜಕ್ಕೂ ಇದು ಈ ರಾಜ್ಯದ ದುರಂತವೇ ಸರಿ ಎನ್ನಬೇಕು.
ಬಳ್ಳಾರಿ ಜಿಲ್ಲೆಯ ಏರ್ ವಾಟರ್ ಮತ್ತು ಪ್ರಾಕ್ಷೈರ್ ಆಮ್ಲಜನಕ ಘಟಕದಲ್ಲಿ ದೋಷ ಕಾಣಿಸಿಕೊಂಡ ಕಾರಣ ರಾಜ್ಯ ಸರ್ಕಾರ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಬಿಎಂಪಿಗೆ ಸೇರಿದಂತೆ ಜಿಲ್ಲಾ ಆಡಳಿತಗಳಿಗೆ ನೊಟೀಸ್ ನಿಡಿದೆ.
ಎರಡು ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ರಾಜ್ಯದ ಆಮ್ಲಜನಕ ಸರಬರಾಜು ೨೨೦ ಮೆಟ್ರಿಕ್‌ಟನ್‌ಗೆ ಸೀಮಿತಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.


ರಾಜ್ಯಕ್ಕೆ ಪ್ರತಿದಿನದ ಆಮ್ಲಜನಕ ಸರಬರಾಜು ಮಿತಿ ೮೫೦ ಮೆಟ್ರಿಕ್ ಟನ್ ಇತ್ತು. ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಮೇ ೨೧ರಂದು ರಾಜ್ಯದ ಆಮ್ಲಜನಕ ಬೇಡಿಕೆ ಪ್ರಮಾಣ ೮೨೨ ಮೆಟ್ರಿಕ್ ಟನ್ ಮತ್ತು ಮೇ ೨೨ಕ್ಕೆ ೮೮೫ ಮೆಟ್ರಿಕ್ ಟನ್ ಇತ್ತು. ಬೆಂಗಳೂರು ನಗರದಲ್ಲಿ ಕ್ರಮವಾಗಿ ೩೦೮ ಮೆಟ್ರಿಕ್ ಟನ್ ಮತ್ತು ೩೪೦ ಮೆಟ್ರಿಕ್ ಟನ್ ಬೇಡಿಕೆಯಿತ್ತು. ಮೇ ೨೧, ೨೨ರಂದು ಮೈಸೂರು ಜಿಲ್ಲೆಯಲ್ಲಿ ೫೪.೮ ಮೆಟ್ರಿಕ್ ಟನ್ ಮತ್ತು ೫೫.೯ ಮೆಟ್ರಿಕ್ ಟನ್, ಬಳ್ಳಾರಿ ಜಿಲ್ಲೆಯಲ್ಲಿ ೪೦.೧೫ ಮತ್ತು ೪೧.೨೬, ಧಾರವಾಡ ಜಿಲ್ಲೆಯಲ್ಲಿ ೩೧.೯೬ ಮತ್ತು ೫೭.೦೮ ಮೆಟ್ರಿಕ್ ಟನ್ ಆಮ್ಲಜನಕದ ಬೇಡಿಕೆಯಿತ್ತು


ಇದೀಗ ಆಮ್ಲಜನಕ ಉತ್ಪಾದನೆಯಲ್ಲಿ ತೊಂದರೆ ಎದುರಾಗಿರುವುದರಿಂದ ಜಿಲ್ಲಾಡಳಿತಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ಬೇಡಿಕೆಯ ಶೇ ೨೦ರಷ್ಟು ಪ್ರಮಾಣ ಕಡಿಮೆಯಾಗಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ರಾಜ್ಯ ಸರ್ಕಾರವು ಜಿಲ್ಲಾಡಳಿತಗಳಿಗೆ ಎಚ್ಚರಿಕೆ ನೀಡಿದೆ. ಸೋಮವಾರ ಮತ್ತು ಮಂಗಳವಾರ ಆಮ್ಲಜನಕ ಬೇಡಿಕೆಯನ್ನು ಎಚ್ಚರಿಕೆಯಿಂದ ನಿರ್ವಹಿಸಲು ಸೂಚನೆ ನೀಡಿದೆ. ಆಸ್ಪತ್ರೆಗಳಿಗೂ ಈ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಆಮ್ಲಜನಕದ ದಾಸ್ತಾನು ಪ್ರಮಾಣವನ್ನು ಗಮನಿಸಿಕೊಳ್ಳುವಂತೆ, ಆಪತ್ಕಾಲಕ್ಕೆಂದು ಇರಿಸಿಕೊಂಡಿರುವ ದಾಸ್ತಾನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕೋವಿಡ್? ಉಸ್ತುವಾರಿ ಘಟಕದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹೇಳಿದ್ದಾರೆ
ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ, ಆದರೆ ಆಮ್ಲಜನಕದ ಬೇಡಿಕೆ ಕಡಿಮೆಯಾಗಿಲ್ಲ
ಕರ್ನಾಟಕದಲ್ಲಿ ಕೋವಿಡ್-೧೯ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಆಮ್ಲಜನಕದ ಬೇಡಿಕೆ ಕಡಿಮೆಯಾಗಿಲ್ಲ ಎಂದು ರಾಜ್ಯದಲ್ಲಿ ಆಮ್ಲಜನಕ ಸರಬರಾಜು ನಿರ್ವಹಣೆಯ ಉಸ್ತುವಾರಿ ಅಧಿಕಾರಿ ಮೌನೀಶ್ ಮುದ್ಗೀಲ್ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೋಗಿಗಳ ಸಂಖ್ಯೆ ೨.೪ ಲಕ್ಷದಿಂದ ೧.೨ ಲಕ್ಷಕ್ಕೆ ಇಳಿಕೆಯಾದರೂ ಆಮ್ಲಜನಕದ ಬೇಡಿಕೆ ಪ್ರಮಾಣ ಕಡಿಮೆಯಾಗಿಲ್ಲ. ಐಸಿಯು ಮತ್ತು ವೆಂಟಿಲೇಟರ್ ಸಹಿತ ಐಸಿಯುಗಳಲ್ಲಿರುವ ರೋಗಿಗಳ ಸಂಖ್ಯೆ ಬೆಂಗಳೂರಿನಲ್ಲಿ ಇನ್ನೂ ಕಡಿಮೆಯಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಮ್ಲಜನಕದ ಬೇಡಿಕೆ ಎಂದಿನಂತೆ ಮುಂದುವರಿದಿರಲು ಇದು ಮುಖ್ಯ ಕಾರಣ ಇರಬಹುದು ಎಂದು ಅವರು ವಿಶ್ಲೇಷಿಸಿದರು.
ಬೆಂಗಳೂರು ನಗರದಲ್ಲಿ ಎಷ್ಟು ಆಮ್ಲಜನಕ ಬಳಕೆಯಾಗುತ್ತಿದೆ ಎಂಬ ಬಗ್ಗೆ ವಿಸ್ತೃತವಾದ ಮಾಹಿತಿ ಸಂಗ್ರಹ ವ್ಯವಸ್ಥೆ ರೂಪುಗೊಂಡಿಲ್ಲ. ರಾಜ್ಯಕ್ಕೆ ಹೆಚ್ಚುವರಿಯಾಗಿ ಬರುತ್ತಿರುವ ಆಮ್ಲಜನಕವನ್ನು ಬಿಬಿಎಂಪಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಬಿಬಿಎಂಪಿಯಿಂದ ನಿಖರ ಮಾಹಿತಿ ಸಂಗ್ರಹಿಸುತ್ತೇವೆ. ನಿಗದಿತ ಉತ್ಪಾದನೆ ಮತ್ತು ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿಯೂ ನಮ್ಮ ರಾಜ್ಯಕ್ಕೆ ಪ್ರತಿದಿನ ಆಮ್ಲಜನಕದ ವಿಶೇಷ ಸರಬರಾಜು ಬರುತ್ತಿದೆ. ಇದು ನಿಯಮಿತವಾಗಿ ಕೇಂದ್ರ ಸರ್ಕಾರದಿಂದ ಹಂಚಿಕೆಯಾದ ಭಾಗದಂತೆ ಬರುವ ಆಮ್ಲಜನಕ ಅಲ್ಲ ಎನ್ನುವುದನ್ನು ಗಮನಿಸಬೇಕು ಎಂದು ಅವರು ಗಮನ ಸೆಳೆದರು.

Girl in a jacket
error: Content is protected !!