ಮುತ್ತು ಮತ್ತು ರಾಜ ಎಂಬ ರೂಪಕಗಳ ಹಿಂದೆ…
ಒಬ್ಬ ವ್ಯಕ್ತಿಯ ಶ್ರಮ ಮತ್ತು ಸೃಜನಶೀಲತೆಯ ಹಿಂದೆ ಒಂದು ತಲೆಮಾರಿಗೆ ಅಗತ್ಯವಾದ ಸಂಸ್ಕøತಿಯು ರೂಪುಗೊಳ್ಳುತ್ತಿರುತ್ತದೆ.ಒಬ್ಬ ಮೇರು ನಟ ತನ್ನ ನಟನೆಯನ್ನು ಕೇವಲ ಮನರಂಜನೆಗೆ ಮಾತ್ರ ಮೀಸಲಿಡದೆ ಸಾಮಾಜಿಕ ಪ್ರಗತಿಗೆ ಪೂರಕವಾಗ ಬಹುದಾದ ಜವಾಬ್ದಾರಿಯನ್ನ ನಿರ್ವಹಿಸುವ ಅಗತ್ಯತೆಗೆ ಮೀಸಲಿಡುತ್ತಾನೆ. ರಾಜ್ ಅವರ ಸಿನಿಮಾಗಳು ಅಂತಹ ಅಭಿರುಚಿಗಳ ಎಳೆಗಳಿಂದಲೂ ಕೂಡಿದೆ. ನೆಲ,ಜಲ,ಭಾಷೆ ಮತ್ತು ಶ್ರಮಿಕರ ಅನೇಕ ಸಂಗತಿಗಳನ್ನು, ಮಧ್ಯಮವರ್ಗದ ಅನೇಕ ತೊಳಲಾಟಗಳನ್ನು ಅವರ ಸಿನಿಮಾಗಳು ವಸ್ತುವಾಗಿಸಿಕೊಂಡಿವೆ. ಬೆಳೆದ ನಟನೊಬ್ಬ ತನ್ನ ಚಿತ್ರದ ಮೂಲಕ ನೀಡಬಹುದಾದ ಸಂದೇಶವನ್ನು ಅವರ ಚಿತ್ರಗಳ ಕುಟುಂಬ ಮಾದರಿ ಹಾಗೂ ವ್ಯಕ್ತಿಯ ದುರಾಚಾರ ವಿದೂರ ನಡೆಯಮೂಲಕ ನೋಡಬಹುದಾಗಿದೆ.
ದುಡಿಯುವ ಜನರ ಕನಸು, ಕಲ್ಪನೆ, ಸಾಮಾಜಿಕ ಬದುಕುಗಳನ್ನು,ಆದರ್ಶಗಳನ್ನು ತಮ್ಮ ನಟನೆಯ ಮೂಲಕ ಬಿಂಬಿಸುತ್ತಾ ಹೋದ ರಾಜ್‍ಕುಮಾರ್ ಸಿನಿಮಾಗಳ ನೆಲಗಳನ್ನು ಬಹುಮುಖಿಯಾಗಿ ಗ್ರಹಿಸಬಹುದಾಗಿದೆ.ಒಂದು ಚಿಕ್ಕ ಉದಾಹರಣೆಯಂತೆ ಅವರ ಸಿನಿಮಾಗಳನ್ನು ಭಾಷೆ ಮತ್ತು ಸಾಹಿತ್ಯದಿಂದಲೂ ಅದರಲ್ಲೂ ವಿಶೇಷವಾಗಿ ಶ್ರಮ ಸಂಸ್ಕøತಿಯ ಹಿನ್ನೆಲೆಯಲ್ಲಿಯೂ ನಿಕಷಕ್ಕೆ ಒಡ್ಡಬಹುದಾಗಿದೆ.
ಸಿನಿಮಾ ಎಂಬ ಪರಿಣಾಮಕಾರಿ ಮಾಧ್ಯಮವು ಸಹಜವಾಗಿಯೇ ಹಣ ಉಳ್ಳವರ ಪ್ರಭಲರ ಶಕ್ತಿಗೆ ಒಳಗಾಗುವಂತದ್ದು ಇಲ್ಲಿ ಪ್ರಕಟವಾಗುವ ಮೌಲ್ಯಗಳು ಇಂತಹ ‘ದೊಡ್ಡ’ ಜನರ ಬದುಕಿನ ಉಪಕ್ರಮದಂತಿರುತ್ತವೆ. ರಾಜ್ ಸಿನಿಮಾಗಳು ಈ ದಾರಿಯನ್ನು ಪ್ರಜ್ಞಾ ಪೂರ್ವಕವಾಗಿ ಬಳಸುವಾಗಲೂ ಅದರ ಕೇಂದ್ರವನ್ನು ಜನರ ಬೆವರ ಕೇಂದ್ರದತ್ತಲೇ ಸೆಳೆವ ತಂತ್ರವನ್ನೇ ಬಳಸಿಕೊಂಡಿವೆ.ಸಿರಿವಂತ,ರಾಜ,ಉನ್ನತ ಸ್ಥಾನದ ಯಾವುದೇ ಪಾತ್ರವಿದ್ದರೂ ಅದರ ನಡೆಯನ್ನು ಜನ ಸಾಮಾನ್ಯರ ಜೀವನ ಮೌಲ್ಯಗಳ ಹಲವು ಕೇಂದ್ರವಾನ್ನಾಗಿಸಿದರು. ರಂಜನೆಯ ಉದ್ದೇಶದಿಂದ ಹುಟ್ಟಿಕೊಂಡ ಈ ಮಾಧ್ಯಮವನ್ನು ರಾಜ್ ತಮ್ಮ ನಾಟಕ ಶಾಲೆಯ ಬಹುಮುಖಿ ಸಾಮಾಜಿಕ ಜವಾಬ್ದಾರಿಗಳ ವಸ್ತು ತಂತ್ರಗಳಿಂದಲೇ ಕೊನೆತನಕವೂ ಬೆಸೆದು ಹೊರಟರು. ಎತ್ತರಕ್ಕೆ ಏರಿದರೂ ಏಕತಾನತೆಯಂತೆ ಭಾಸವಾಗುವ ಉದ್ದೇಶಿತ ಕೇಂದ್ರವನ್ನು ಮಾತ್ರ ಅವರು ಎಂದಿಗೂ ಬದಲು ಮಾಡಲಿಲ್ಲ. ತಮ್ಮ ಜೊತೆ ಜೊತೆಗೆ ಹೊರಟ ಚಿತ್ರರಂಗ ಹಲವು ನಟರ ಹವ್ಯಾಸ ಬದಲಾವಣೆಯನ್ನು ಕಂಡಾಗಲೂ ಅವರು ತಮ್ಮ ಉದ್ದೇಶಿತ ಏಕರೂಪೀ ನಡೆಯಿಂದ ವಿಚಲಿತರಾಗಲಿಲ್ಲ. ಕಥಾವಸ್ತುವಿನ ತಮ್ಮ ಪಾತ್ರವನ್ನು ಅವರು ಸಾಮಾಜಿಕ ಕಳಕಳಿ ಮತ್ತು ಸದಾಶಗಳಿಂದ ಕೂಡಿದ ಸಾಮಾಜಿಕ ಚಿಂತನೆಯನ್ನಾಗಿಸಿದರು. ಈ ನೆಲೆಯಲ್ಲಿ ರಾಜ್ ಅವರೆಂದರೆ ಒಬ್ಬರಲ್ಲ ಅನೇಕರು ಎಂಬಂತೆ ಅವರ ಪಾತ್ರದ ಇತಿಹಾಸ ಕಾಣುತ್ತದೆ.
ಆಡುತಿರುವ ಮೋಡಗಳೇ ಹಾರುತಿರುವ ಹಕ್ಕಿಗಳೇ
ಯಾರ ತಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ
ಒಬ್ಬನು ತನ್ನಯ ಸಲುವಾಗಿ ಹಲವರ ದೋಚಿ ನಗುವಂತ
ಒಬ್ಬನೆಲ್ಲೋ ನಗುತಿರಲು ಕೋಟಿ ಮಂದಿ ಅಳುವಂತ
ಲೋಕವಿದುವಂತೆ ಹೊಯ್ ಪಾಪದಾ ಸಂತೆ
ಹಾಡುಗಳಿಂದಲೂ ರಾಜ್ ಸಿನಿಮಾಗಳನ್ನ ಎರಡು ನೆಲೆಗಳಲ್ಲಿ ಗ್ರಹಿಸ ಬಹುದು.1) ಜೀವಲೋಕ ಕೇಂದ್ರಿತ ಹಾಡುಗಳು 2) ವಸ್ತುಲೋಕ ಕೇಂದ್ರಿತ ಹಾಡುಗಳು.
ಜೀವಲೋಕದ ಮಾದರಿಯಲ್ಲಿ ಮಾನವೀಯತೆ ಪ್ರಧಾನವಾಗಿರುತ್ತದೆ.ಸೃಜನಶೀಲ ಸಂಸ್ಕøತಿಯ ಅನಾವರಣ ಮುಖ್ಯವಾಗಿರುತ್ತದೆ.ಪರಂಪರೆಯ ಧಾರ್ಮಿಕ ಸಾಮಾಜಿಕ ಬದುಕಿನ ಸಾಹಿತ್ಯ ಹಾಗೂ ಜನಪದರ ವಾಚಿಕ ಸಂಗತಿಗಳು ಇಲ್ಲೆಲ್ಲಾ ಕಾಣಿಸುತ್ತವೆ.ದೇಶೀತನದ ಈ ಅನುಕರಣಾ ಮಾದರಿಯು ಗಂಭೀರ ನಡೆಯಿಂದ ಶಾಂತ ರಸಗಳಿಂದಲೇ ಕೂಡಿರುತ್ತವೆ.
ವಸ್ತುಲೋಕದಲ್ಲಿ ಆಧುನಿಕತೆ ಮುಖ್ಯವಾಗಿರುತ್ತದೆ. ಆಧುನಿಕ ಪ್ರಭಾವಳಿಗಳ ಓದು ಮತ್ತು ವಿದೇಶಿ ಪರಿಕರಗಳು ಹಾಗೂ ಪಶ್ಚಿಮ ಸಂಸ್ಕೃತಿಯ ರೀತಿನೀತಿಗಳ ತೌಲನಿಕ ರೀತಿಗಳು ಕಂಡುಬರುತ್ತವೆ. ಇಲ್ಲಿ ಹಾಸ್ಯ,ವಿಡಂಬನೆ,ವ್ಯಂಗ್ಯಗಳು ಪ್ರಮುಖ ಅಸ್ತ್ರಗಳಂತೆ ಕಂಗೊಳಿಸುತ್ತವೆ.
ರಾಜ್ ಕುರಿತಾದ ಸಾಹಿತ್ಯದ ಶೋಧನೆಯು ಡಾ.ರಾಜ್‍ಕುಮಾರ್ ಅವರನ್ನ ವ್ಯಕ್ತಿ ಪ್ರಧಾನವಾಗಿ ನೋಡುವುದಕ್ಕಿಂತ ಸಮೂಹ ಪ್ರಧಾನವಾಗಿ ನೋಡುವುದೇ ಸರಿ. ರಾಜ್ ಅವರೂ ಕೂಡಾ ತಮ್ಮನ್ನ ‘ಮುತ್ತುರಾಜ’ ಮತ್ತು ‘ರಾಜಕುಮಾರ’ ಎಂದು ವಿಭಜಿಸಿಕೊಂಡು “ಈ ರಾಜಕುಮಾರ ನಿಮ್ಮಿಂದ ಆದವ, ನೀವು ಬಯಸಿದಂತೆ ಅಭಿನಯಿಸುತ್ತ ಹೋದವ ಅವನು ನಿಮ್ಮ ಸೊತ್ತು” ಎಂದು ಹೇಳುವ ವಿಧಾನವೇ ಈ ರೀತಿಯ ನೋಟದ ಪ್ರಧಾನ ಕೇಂದ್ರ ಎಂದೇ ನಾವು ಗಮನಿಸಬೇಕಾಗುತ್ತದೆ. ಇಲ್ಲಿ ರಾಜ್ ಸಿನಿಮಾಗಳನ್ನು ಪೂರ್ವಾಮುಖಿ ಮತ್ತು ಉತ್ತರಮುಖಿಯಾಗಿ ನೋಡಿದರೆ ಪೂರ್ವದಲ್ಲಿ ರಾಜ್ ಪಾತ್ರವು ಸಾಮಾಜಿಕ ನಡೆಯ ಕನ್ನಡಿಯಂತೆ ಕಂಡರೆ ಉತ್ರಮುಖಿಯಲ್ಲಿ ವ್ಯಕ್ತಿ ಆರಾಧನೆಯ ದ್ವೀಪದಂತೆ ಕಂಡರೂ ಆ ನಿರೂಪಣೆಯ ಒಟ್ಟಾರೆ ನಡೆಯಲ್ಲಿ ಸಾಮಾಜಿಕ ಸೊಗಸಿಗೆ ಮಾರಕವಾಗದಂತೆಯೇ ಅವರ ನಡತೆಯನ್ನೂ, ವಿನಯವನ್ನೂ ನಿಭಾಯಿಸಿರುವುದನ್ನು ಕಾಣಬಹುದು. ಈ ನೆಲೆಯಲ್ಲಿ ಬರಗೂರು ಅವರು ನೀಡಿದ ಉಲ್ಲೇಖವನ್ನು ಗಮನಿಸಬಹುದಾಗಿದೆ.” ಡಾ.ರಾಜಕುಮಾರ್ ಅವರು ದೊಡ್ಡ ಕಲಾವಿದರೆಂಬು ನಿಜ. ಆದರೆ ಸಮಾಜಕ್ಕೆ ಜನರಿಗೆ ಅವರ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ನಿರಂತರವಾಗಿ ಕೇಳುವವರು ಇದ್ದಾರೆ. ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ. ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ ನಿಜ. ಯಾವುದೇ ಕಲಾಕಾರರು,ಸಾಹಿತಿ, ಕಲಾವಿದ ಯಾರೇ ಆಗಿರಲಿ ಜನಗಳಿಗೆ ಜವಾಬ್ದಾರರಾಗಬೇಕು. ಆಗ ಅವರಲ್ಲಿ ಸದಭಿರುಚಿ ಮತ್ತು ಸಮಕಾಲೀನ ಸಾಮಾಜಿಕ ನೆಲೆಗಳು ಜಾಗೃತವಾಗಿರುತ್ತವೆ. ಕೆಲವರಲ್ಲಿ ಸೈದ್ಧಾಂತಿಕತೆಯ ರೂಪದಲ್ಲಿ,ಮತ್ತೆ ಕೆಲವರಲ್ಲಿ ನೈತಿಕತೆಯ ರೂಪದಲ್ಲಿ ಈ ಅಂಶಗಳು ಅನಾವರಣಗೊಳ್ಳುತ್ತವೆ.”
ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಆಜ್ಞೆ ನಾ ಮೀರುವುದುಂಟೇನು
ಛೇ..ಛೇ..ಆಗದು ಆಗದು.
ಕಲೆ,ಸಾಹಿತ್ಯ,ನಟನೆ ನಮ್ಮ ಜನರನ್ನ ಸಂಮೋಹನಗೊಳಿಸುವ, ಅನುಕರಣಶೀಲರನ್ನಾಗಿಸುವ ಗಾರುಡಿ ವಿದ್ಯೆಗಳು.ಮತ್ತೆ ಮತ್ತೆ ಮರು ಮೌಲ್ಯಮಾಪನದೊಂದಿಗೆ ಸೃಜನಶೀಲ ಸೃಷ್ಟಿಗೆ ಆಕರಗಳಾಗುವ ಇವನ್ನ ನಮ್ಮ ಜನ ಅಸಾಮಾನ್ಯ ಶಕ್ತಿಗಳೆಂದು, ದೈವದ ವರಗಳೆಂದೇ ಭಾವಿಸುತ್ತಾರೆ.ಈ ನೆಲೆಯ ಸಾಧಕರನ್ನ ಮಹಾ ಪುರುಷರಂತೆ ಗೌರವಿಸುತ್ತಾರೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ.
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲೀ..
ಇಂತಹ ಅಭಿಮಾನಕ್ಕೆ, ಪ್ರೀತಿಗೆ, ಪಾತ್ರರಾದವರು ನಮ್ಮ ಕನ್ನಡದ ಮೇರು ನಟ ಡಾ.ರಾಜ್‍ಕುಮಾರ್. ವಚನಕಾರರ ಸತ್ಯ ಶುದ್ಧ ಕಾಯಕ,ವಿನಯವಂತಿಕೆ, ಸರಳತೆಯ ಸೂತ್ರವನ್ನ ಅನುಸರಿಸಿ ಮೇರು ವ್ಯಕ್ತಿತ್ವವಾದವರು. ಇಂದು ಅವರ ಹೆಸರನ್ನ ಅಂಗಡಿಗಳಿಗೆ,ಕನ್ನಡದ ಕೆಲಸಗಳಿಗೆ, ರಸ್ತೆಗೆ ಇಡಲಾಗುತ್ತಿದೆ. ಕನ್ನಡದ ಹೆಸರು ಬಂದಾಗಲೆಲ್ಲಾ ಕುವೆಂಪು ಅವರೊಂದಿಗೇ ರಾಜ್ ನೆನಪು ಮರುಕಳಿಸುತ್ತದೆ.
“ದೊಡ್ಡಜಾತಿಯ ಬೆಂಬಲವಿಲ್ಲದೆ, ಶ್ರೀಮಂತಿಕೆಯ ನೆರಳಿಲ್ಲದೆ” ದೊಡ್ಡ ಪದವಿಯ ಹಂಗೂ ಇಲ್ಲದೆ ಕೇವಲ 3 ನೇ ತರಗತಿಯ ಹುಡುಗನೊಬ್ಬ ದೇಶವೇ ಗುರ್ತಿಸುವ ಅನನ್ಯ ಪ್ರತಿಭೆಯಾದದ್ದು ಪವಾಡವೇನಲ್ಲ”. ಶ್ರದ್ಧೆ-ಶ್ರಮ-ಸಂಕಲ್ಪದಿಂದ ಒಬ್ಬ ಸಾಮಾನ್ಯ ಹೀಗಾಗಲು ಸಾಧ್ಯ ಎಂಬ ವ್ಯಕ್ತಿತ್ವ ವಿಕಸನದ ಕೀಲಿಕೈಗಳನ್ನ ರಾಜ್ ಈ ಜನತೆಗಿತ್ತಿದ್ದಾರೆ.
ಆಗದು ಎಂದು ಕೈಲಾಗದು ಎಂದು
ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚದೆ ಇರಬೇಕೆಂದೆಂದೂ
ಎನ್ನುವ ರಾಜ್ ತಮ್ಮವೃತ್ತಿಜೀವನದ ಉದ್ದಕ್ಕೂ ಬಡವರ ಪರವಾದ ಮೌಲ್ಯಕ್ಕೇ ಬೆಲೆಕೊಟ್ಟರು.ರೈತನಾಗಿ, ಕಾರ್ಮಿಕನಾಗಿ, ನ್ಯಾಯ ನೀಡುವ ವಕೀಲನಾಗಿ, ಬಂಡಾಯಗಾರನಾಗಿ, ಅಧಿಕಾರಿಯಾಗಿ ನಾನಾ ರೂಪಕಗಳಲ್ಲಿ ಈ ಮೌಲ್ಯವನ್ನ ಅವರು ವಿಸ್ತರಿಸಿದ್ದಾರೆ.
ನ್ಯಾಯವೆಲ್ಲಿ? ನ್ಯಾಯವೆಲ್ಲಿ?
ನ್ಯಾಯವೆಲ್ಲಿ ಅಡಗಿದೆ
ಯಾರ ಕೇಳಿ ಬಾನಿನಿಂದ ಸೂರ್ಯ ಬಿಸಿಲ ಚೆಲ್ಲುವ
ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
ಯಾರಕರೆಗೆ ಮೇಘರಾಜ ಮಳೆಯ ಸುರಿಸುವಾ
ಯಾವ ಮನುಜ ನದಿಯ ನೀರತನ್ನದೆನ್ನುವಾ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನುವರೆ
ಡಾ. ರಾಜ್. ಅವರ ಪಾತ್ರದಲ್ಲಿ ಉದಯಶಂಕರ್ ಪಾತ್ರವೂ ಮುಖ್ಯವಾದದ್ದು. ಮಹಾಕಾವ್ಯ, ವಚನ,ಕೀರ್ತನೆ,ತತ್ವಪದ, ಉಪನಿಷತ್ತುಗಳ ಸಾರವನ್ನು ಅವರು ರಾಜ್ ನುಡಿಯ ಉಡಿಗಿಟ್ಟು ಮೆರಸಿದರು.ಮಾತೃಭಕ್ತಿ, ಪಿತೃನಿಷ್ಟೆ, ಸಹೋದರ ವಾತ್ಸಲ್ಯ, ಅಕ್ಕ ತಂಗಿಯರ ಮೇಲಿನ ಪ್ರೀತಿ, ಮಗುವಿನೊಂದಿಗಿನ ವಾತ್ಸಲ್ಯ ಮೊದಲಾದ ಕುಟುಂಬ ಶಕ್ತಿಗಳು ಅವರ ಚಿತ್ರಗಳಲ್ಲಿ ಪ್ರಾಧಾನ್ಯತೆಯನ್ನ ಪಡೆದಿದ್ದವು.ಹಾಗಾಗಿಯೇ ಪಂಚತಾರಾ ಸಂಸ್ಕøತಿಗಿಂತಲೂ ಹಳ್ಳಿಯ ರಾಗಿರೊಟ್ಟಿ, ರಾಗಿಮುದ್ದೆಗಳನ್ನ ರಾಜ್ ಪಾತ್ರ ಎತ್ತಿ ಹಿಡಿಯಿತು.
ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರೂ?
ಮೀಸೆ ತಿರುವಿ ಕುಣಿದೋರೆಲ್ಲಾ ಮಣ್ಣಾದರು
ಇನ್ನು ನೀನ್ಯಾವ ಲೆಕ್ಕ ಹೇಳು ಸುಕುಮಾರಿಯೇ
ಅಯ್ಯೋ ಹೆಮ್ಮಾರಿಯೇ..
ಎಂದು ಹಾಡಿದ ಅವರ ಹಾಡು ಕೇವಲ ಪದಗಳ ಸಾಲಲ್ಲ ಅವು ನಿತ್ಯ ಬದುಕಿನ ಜನರ ಸಾಮಾಜಿಕ ಬದುಕಿನ ಸತ್ಯಗಳು. ಈ ಹಿನ್ನೆಲೆಯಲ್ಲಿ ರಾಜ್ ಸಿನಿಮಾಗಳ ಸಾಮಾಜಿಕ ನೆಲೆಗಳನ್ನ ನಾಲ್ಕು ಬಗೆಯಲ್ಲಿ ವಿಸ್ತರಿಸಿಕೊಳ್ಳ ಬಹುದು.1)ಕಾಯಕ ಪ್ರಧಾನ ನೆಲೆ 2)ಜಮೀನ್ದಾರಿ ಅಥವಾ ಬಂಡವಾಳ ಶಾಹಿ ವಿರೋಧಿ ನೆಲೆ 3)ನಾಡು ನುಡಿ ಪ್ರೇಮದ ನೆಲೆ 4) ಭಕ್ತಿ ಮತ್ತು ಆದ್ಯಾತ್ಮಿಕ ನೆಲೆ.
ರಾಜ್ ಸಿನಿಮಾಗಳು ಬಹುತೇಕ ದೇಶೀ ಪ್ರಧಾನವಾದವು. ಅಲ್ಲಿ ಜಾನಪದ ಸೊಗಡಿತ್ತು. ಜಾತ್ರೆ, ರಥೋತ್ಸವ, ಡೊಳ್ಳು, ಕೋಲಾಟ, ಸಹನಾಯಿ, ಹಲಗೆಗಳು; ಕತ್ತಿ ವರಸೆ, ಮಲ್ಲಯುದ್ಧ, ಯೋಗ ಕುದುರೆ ಸವಾರಿ, ಈಜು, ಮೊದಲಾದ ದೇಶೀಯ ಕಲೆಗಳು ಅಲ್ಲಿದ್ದವು.
ಬಿಟ್ಟರೇ ಸಿಗದೋನೇ ಬೆಟ್ಟದಾ ಪುರದೋನೇ
ಕಂಬಾಳಿ ಕುರುಬಾನೆ ಹಂಬಾಲ ನಿನಮ್ಯಾಲೆ
ನಂಬೀ ಬಂದೇ ನನ್ನ ಗೆಳೆಯಾನೇ
ಅಂಗೆ ಇಂಗೇ ಓಡಬ್ಯಾಡ ನನ್ನ ಬುಟ್ಟುಜಾರಬ್ಯಾಡ
ಧೀರಾ..ಓ ಬೀರಾ..
ಎಂಬ ಹಳ್ಳಿನುಡಿಗಳ ಜೊತೆಗೆ ಗಾದೆಮಾತು, ಒಗಟುಗಳು, ನಾಣ್ಣುಡಿಗಳು, ಹಿತೋಕ್ತಿಗಳು,ಅವರ ಸಂಭಾಷಣೆಯ ಸಾಲೊಳಗಿದ್ದವು.ರಾಜ್ ಪಾತ್ರ ಮುಖ್ಯವಾಗುವುದು ಅದರ ಸದಾಶಯದಿಂದ.ಅವರ ಚಿತ್ರಗಳಲ್ಲಿ ಕೊನೆತನಕವೂ ವ್ಯಕ್ತಿತ್ವ ವಿಕಸನದ ಸಾಲುಗಳಿದ್ದವು.ಆಶಾವಾದದ ಬೆಳಕು ಬದುಕನ್ನ ಬೆಳಸಬಲ್ಲದು ಎಂಬ ನಂಬಿಕೆ ಇವುಗಳದಾಗಿತ್ತು.
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವಾ ನಂಬಿಕೆಗಳು ಬೇಕು
ಜೀವ ರಾಶಿಯಲ್ಲಿ ಮಾನವರಿಗೆ ಆಧ್ಯತೆ
ನಾವೇ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ
ಇಲ್ಲಿ ಈಸ ಬೇಕು ಇದ್ದು ಜೈಸ ಬೇಕು
ನಾಗರೀಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದಡೊಂಕು ಕಾಣದೆ ಜಗವನೇಕೆ ನೀ ದೂರುವೆ
ಎಂದು ಹಾಡುವ ರಾಜ್ ಮೂಲಕ ಅನೇಕರು ತಮ್ಮ ಸಾಮಾಜಿಕ ಬದುಕನ್ನ ನಿರ್ಮಿಸಿಕೊಂಡರು ಹಾಗಾಗಿ ರಾಜ್ ಎಂದರೆ ರೈತ ಸಂಘದ ಪ್ರೊಫೆಸರ್ ನಂಜುಂಡ ಸ್ವಾಮಿಗೂ ಇಷ್ಟ, ಪರಮ ನಿಷ್ಟೂರವಾದಿ ಚಂಪಾಗೂ ಇಷ್ಟ. ರಾಜ್ ಎಂದರೆ ಭಾಷಾ ವಿಜ್ಞಾನಿ ಕೆ.ವಿ.ನಾರಾಯಣರಿಗೂ ಪ್ರೀತಿ.ರಾಜ್ ಕನ್ನಡ ಚಿತ್ರರಂಗದ ಯುಗಶಕ್ತಿ ಯಾಗಿದ್ದರು.ರಾಜ್‍ರನ್ನ ಬರಗೂರು ಅಪ್ಪಟ ಪ್ರಜಾಪ್ರತಿಭೆ ಎನ್ನುತ್ತಾರೆ.
ಗೋಕಾಕ್ ಚಳುವಳಿಯ ನೆನಪನ್ನ ಡಾ.ಪಾಟೇಲ್ ಪುಟ್ಟಪ್ಪನವರು ಹೇಳುತ್ತ ಡಾ.ರಾಜ್ ಚಳುವಳಿಗೆ ಇಳಿದ ಮೇಲೆ ಜನರೂ ಇದು ನಮ್ಮ ಚಳುವಳಿ ಎಂದು ಚಳುವಳಿಗೆ ಇಳಿದದ್ದು ರಾಜ್ ಪ್ರೇರಣೆಯಿಂದ ನಾನು ಜವಹರ್‍ಲಾಲ್ ನೆಹರೂ, ಇಂದಿರಾಗಾಂದಿ üಅವರು ಬಂದಿದ್ದಾಗ ಜನರು ಯಾವ ರೀತಿ ಸೇರಿದ್ದರು ಎಂಬುದನ್ನ ನೋಡಿದ್ದೇ ಆದರೆ ಡಾ.ರಾಜ್ ಅವರು ಗೋಕಾಕ್ ಚಳುವಳಿಗೆ ಧುಮುಕಿದಾಗ ಸೇರಿದಂಥಹ ಜನಸ್ತೋಮವನ್ನ ಮತ್ತೆ ನನ್ನ ಜೀವಮಾನದಲ್ಲೇ ಕಂಡಿಲ್ಲ. ಅದೊಂದು ರೋಮಾಂಚಕ ವಾತಾವರಣ” ಎಂದಿದ್ದಾರೆ.
“ಮಾನವನಾಗುವೆಯಾ, ಇಲ್ಲಾ ದಾನವ ನಾಗುವೆಯಾ, ಎನೆಂದು ನಾ ಹಾಡಲೀ ಮಾನವನಾಸೆಗೆ ಕೊನೆಯಲ್ಲಿ, ಪ್ರೀತಿನೇ ಆದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ”, ಎಂದು ಮಾನವ ಪ್ರೀತಿಯ ಹಾಡುಗಳನ್ನ ಹಾಡುತ್ತ ಉಳುವ ಯೋಗಿಯ ನೋಡಿಲ್ಲಿ, ಎಂದು ರೈತ ಗೀತೆ ಹಾಡುತ್ತಾ, ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ಎಂದು ಒಗ್ಗಟ್ಟಿನ ಬಲವನ್ನ ಹರಸುತ್ತ, ಒಲವೇ ಜೀವನ ಸಾಕ್ಷತ್ಕಾರ ಎಂದವರು ರಾಜ್.
ಹಣ, ಕೀರ್ತಿ, ಅಧಿಕಾರ ಬಂದೊಡನೆ ತಮ್ಮ ಮೂಲ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಜನರಿಗೆ ಸವಾಲೆಂಬಂತೆ ರಾಜ್ ತಮ್ಮ ಮೂಲ ವ್ಯಕ್ತಿತ್ವನ್ನ ಕೊನೆತನಕವೂ ಸದ್ವಿನಯದಿಂದಲೇ ರೂಪಿಸಿ ಕೊಂಡಿದ್ದರು.
ಶಿಸ್ತುಬದ್ಧ ಆಹಾರ,ಯೋಗ, ಪ್ರಾಣಯಾಮ, ಧ್ಯಾನದಂತಹ ದೇಶೀಯ ಅಂತಃಶಕ್ತಿ ರೂಢಿಸಿಕೊಂಡಿದ್ದ ಡಾ.ರಾಜ್ ಅಭಿಮಾನಿಗಳಲ್ಲಿ ದೇವರನ್ನ ಕಾಣುವ, ನಿರ್ಮಾಪಕರಲ್ಲಿ ಅನ್ನ ನೀಡುವ ಧಣಿಯನ್ನ ಗುರ್ತಿಸುವ, ನಿರ್ದೇಶಕರಲ್ಲಿ ಗುರುತನವನ್ನ ಗುರ್ತಿಸುವ ಪ್ರಿಯ ಶಿಷ್ಯನಾಗುವ ಗುಣಗಳಿಂದ ಜಾತಿ ಶ್ರೇಷ್ಟರನ್ನ ದಾಟಿ ಬೆಳೆದರು.
ದೀನಾ ನಾ ಬಂದಿರುವೆ ಬಾಗಿಲಲಿ ನಿಂತಿರುವೆ
ಜ್ಞಾನ ಬಿಕ್ಷೆಯ ನೀಡಿ ದಯ ತೋರಿ ಗುರುವೇ
ಎನ್ನುತ್ತಲೇ ಪಕ್ವಗೊಂಡ ರಾಜ್ ಉದಾತ್ತ ಪಾತ್ರ ಮತ್ತು ಸಾಹಿತ್ಯಗಳಿಂದ ತಮ್ಮನ್ನ ಬಂಧಿಸಿಕೊಂಡಿದ್ದರು. ಜೀವನದುದ್ದಕ್ಕೂ ಆಭಿರುಚಿ ಪ್ರಧಾನ್ಯತೆಯನ್ನೇ ಪಾಲಿಸಿದರು.ಹಾಗಾಗಿ ರಾಜ್‍ಕುಮಾರ್ ಎಂಬುದೇ ಕನ್ನಡದ ದುಡಿಯುವ ವರ್ಗಗಳು ಸೃಷ್ಟಿಸಿದ ವ್ಯಕ್ತಿತ್ವ ಮತ್ತು ಅವರ ಸದಭಿರುಚಿಯು ನಿರ್ಮಿಸಿದ ಆದರ್ಶ ಎನ್ನಬಹುದು