ನೆಲ ಮತ್ತು ನೀರಿನತ್ತ ಬೆರಳು ಮಾಡುವ ಅಗಸ್ತ್ಯ ನಕ್ಷತ್ರ
ಸೃಜನಶೀಲ ಬರಹಗಳು ಪ್ರಾದೇಶಿಕ ಅರೆ ಚರಿತ್ರೆಗಳ ಖಾಲಿತನವನ್ನು ತುಂಬಿಕೊಡುವ ಅಮೃತಧಾರೆಗಳಂತೆ.ಸರಳ ರೇಖೆಯಂತೆ ಚಲಿಸುವ ಸಾಂಪ್ರದಾಯಿಕ ಚರಿತ್ರೆಗೆ ಕೆಲವೊಮ್ಮೆ ಹಂಗಿನ ನೆರಳು ಕವಿದು ಅದು ಹೊಮ್ಮಿಸೋ ಬೆಳಕು ಏಕಮುಖಿಯಾಗುವ, ಅದು ಮುಲಾಜಿನ ಮಡಿಲಿಗೆ ಬೀಳುವ ಸತ್ಯ ಈಗಾಗಲೇ ಜಾಹೀರಾಗಿದೆ.ಅಂತಹ ಅರೆತನವನ್ನು, ಖಾಲಿತನವನ್ನು ಪ್ರಾದೇಶಿಕ ಸೃಜನಶೀಲ ಬರಹಗಳು ತುಂಬಿಕೊಡುತ್ತಿವೆ.
ಕನ್ನಡ ಕಥನ ಪರಂಪರೆಯಲ್ಲಿ ಪ್ರಾದೇಶಿಕ ಬರಹಗಳು ವಸ್ತು,ರಚನಾ ವಿಧಾನ ಹಾಗೂ ಭಾಷಾ ಪ್ರಯೋಗಗಳಿಂದ ಹೊಸ ಹೊಸ ಎಲ್ಲೆಗಳನ್ನು ಸಾಧಿವೆ. ಕೆಲವು ತಾತ್ವಿಕ ನಿಷ್ಟೆಯ ನಿರ್ಬಂಧಕ್ಕೂ ಒಳಗಾಗಿವೆ.
ವಿಮರ್ಶಾ ಪ್ರಾದೇಶಿಕತೆಯು ಮಾನವ ಸಮೂಹವನ್ನು ಅಭಿವೃದ್ಧಿಶೀಲ ನೋಟಗಳಿಂದ ಗ್ರಹಿಸುವ, ಬಹು ಸೃಷ್ಟಿಗಳ ಸೂಕ್ಷ್ಮ ವಿರೋಧಾಭಾಸಗಳನ್ನು ಸೃಷ್ಟಿಸುತ್ತಿರುವ, ಪ್ರತಿ ಚಹರೆಗಳಿಂದಲೇ ಹೇಗೆ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶದ ಅಂಚಿಗೆ ಚಲಿಸುತ್ತಿವೆ ಎಂಬುದನ್ನು ತೋರುವುದಾಗಿದೆ.
ಪ್ರಾದೇಶಿಕ ವಿಮರ್ಶೆಯು ಲೇಖಕನ ಜೀವಪರವಾದ ನೈತಿಕತೆಯನ್ನು ಗುರುತಿಸುವುದಾಗಿದೆ.ಬರಹಗಾರ ತಾನು ಹೊಂದಿರಬಹುದಾದ ಪ್ರಾದೇಶಿಕ ಸರಹದ್ದುಗಳ ಮೇಲಿನ ಅಕ್ಕರೆ,ಒಲುಮೆಯ ಗುಣವನ್ನು ಹಾಗೂ ತಾನು ವಾಸಿಸಿದ, ತನ್ನನ್ನು ರೂಪಿಸಿದ ಸಮೂಹಗಳ, ಕಾಲಗಳ, ಚರಿತ್ರೆಯ ಕೊರತೆಗಳನ್ನು ಕೆದಕಿ ಭಿನ್ನ ಭಿನ್ನ ದಾರಿಗಳ ಮೂಲಕ ಬರೆದು ತೋರುವುದಾಗಿದೆ.
ಈಗಾಗಲೇ ಶರೀಫನ ಬೊಗಸೆ, ತುಂಗಭದ್ರೆಯ ಪಾತ್ರದಲಿ,ಹೇಳಲೇಬೇಕದಾದದ್ದು ಇನ್ನೂ ಇದೆ, ಎಂಬ ಕವನ ಸಂಕಲನಗಳ ಮೂಲಕ ತನ್ನ ಸೃಜನಶೀಲ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ ಮಲ್ಲಿಕಾರ್ಜುನ ಗೌಡ ತೂಲಹಳ್ಳಿಯವರು ಪ್ರಸ್ತುತ ʼಅಗಸ್ತ್ಯ ನಕ್ಷತ್ರʼ ಎಂಬ ವಿಶಿಷ್ಟ ಕಥಾ ಸಂಕಲನದ ಮೂಲಕ ʼವರ್ಣಕʼ ಜಗತ್ತಿನಿಂದ ʼವಸ್ತುಕʼ ಜಗತ್ತಿನತ್ತ ಹೊರಳಿದ್ದಾರೆ.
ಎರಡು ಸಣ್ಣ ಮತ್ತು ಎರಡು ನೀಳ್ಗತೆಗಳನ್ನು ಒಳಗೊಂಡಿರುವ ನಾಲ್ಕು ಕಥೆಗಳ ಈ ಸಂಕಲನವು ಅನುಭವಸಾಂದ್ರತೆಗಳಿಂದ ಕೂಡಿದೆ. ಇಲ್ಲಿ ಅವರೇ ಬರೆದು ಕೊಂಡಂತೆ “ ಈ ಎಲ್ಲಾ ಕಥೆಗಳ ಬೀಜಗಳನ್ನು ನನ್ನ ಮನೋಭೂಮಿಕೆಯಲ್ಲಿ ಚಲ್ಲಿದ್ದು ಅಪ್ಪ. ಆತನ ಜೊತೆಗೇ ನನ್ನ ಬಾಲ್ಯ,ಯೌವ್ವನದ ಒಂದಷ್ಟು ವರ್ಷಗಳನ್ನು ಕಳೆಯುವಾಗ ಈ ಸಮಾಜ, ಇಲ್ಲಿನ ಒಳ ಸುಳಿಗಳು, ಈ ಜನಗಳ ಅಂತರಾಳ ಒಂದೊಂದೇ ನನಗೆ ಗೊತ್ತಾಗತೊಡಗಿದವು. ಇವುಗಳ ಜೊತೆಗೆ ನನ್ನ ಸುತ್ತಾಟ, ಬೇರೆ ಬೇರೆ ಊರಿನ ಅನುಭವ ಅಲ್ಲಿನ ಬದುಕಿನ ಸಂದರ್ಭಗಳಲ್ಲಿ ಎದುರಾದ ಕೆಲ ಸಂಗತಿಗಳು ನನ್ನನ್ನು ಕಾಡುತಿದ್ದವು. ಅಪ್ಪನ ಗೆಳೆಯರು ತಳ ಸಮುದಾಯಕ್ಕೆ ಸೇರಿದ, ತಮ್ಮ ಅವಮಾನಗಳ ಮೀರುವ ಹಠವಾದಿ ವ್ಯಕ್ತಿಗಳು. ಅಪ್ಪನಿಗಿದ್ದ ನಾಟಕಗಳ ಸೆಳೆತ, ಅಭಿನಯದ ಮೋಹ, ಆತನ ವ್ಯಕ್ತಿತ್ವದಲ್ಲಿ ಆಳವಾಗಿ ಬೇರು ಬಿಟ್ಟಿದ್ದ ನಿಷ್ಠೂರತೆ, ಸ್ಪಷ್ಟ ರಾಜಕೀಯ ನಿಲುವು ಇವು ಒಳ್ಳೆಯ ಹೃದಯಗಳನ್ನು ಜಾತಿ ಮೀರಿ ಸಂಪಾದಿಸಿಕೊಂಡಿದ್ದವು. ಕೆಲವೊಮ್ಮೆಯಂತೂ ಅನ್ಯಾಯ ಕಂಡಾಗ ಊರಿನ ಜಾತಿನಿಷ್ಟ ವಾತಾವರಣವನ್ನು ಮುಲಾಜಿಲ್ಲದೇ ಎದುರು ಹಾಕಿಕೊಂಡು, ಹೆಚ್ಚು ಕಡಿಮೆ ಬಾಳಿನ ಕೊನೆಯ ತನಕ ಕೋರ್ಟು ಕಛೇರಿ ಅಲೆದವನಾತ, ಇಂತಹ ಅಪ್ಪನ ಸಾಂಗತ್ಯದಲ್ಲಿ ಬೆಳೆಯುತ್ತಾ ಅರಳಿದ ನನ್ನ ಮನಸ್ಸಿನೊಳಗೆ ಒಂದೂರಿನಿಂದ ಮತ್ತೊಂದೂರಿಗೆ ಪಯಣಿಸಿದ ನನ್ನ ಹಾದಿಯಲ್ಲಿ ಈ ಕಥೆಗಳು ಹುಟ್ಟಿದವು.”
ವಿಕಾಸದ ಎದರು ನಿಂತು ವಿನಾಶಗಳ ಚಲನೆಗಳನ್ನು ಶೋಧಿಸುವ ಉಮೇದಿನ ಮಲ್ಲಿಕಾರ್ಜುನ ಗೌಡ ತೂಲಹಳ್ಳಿಯವರು ತಮ್ಮ ಕಥೆಗಳನ್ನು ತಾಳ್ಮೆಯ ಒಲೆಯಲ್ಲಿಟ್ಟು ಹದವಾಗಿ ಬೇಯಿಸಿ ಬಡಿಸಿದ್ದಾರೆ. ಇವರು ಕಥನಕ್ಕೆಂದು ಆಯ್ದುಕೊಂಡ ನೆಲದ ಭಾಷೆ ಮತ್ತು ತಾಂತ್ರಿಕ ತಿರುವುಗಳೇ ಈ ಕಥೆಗಳ ಯಶಸ್ಸಿನ ಸೂತ್ರಗಳಾಗಿವೆ. ಕಥನ ಹಾಗೂ ಕಥನ ತಂತ್ರಗಳನ್ನು ನೆಲ ಮೂಲದಿಂದಲೇ ನೋಡುವ ಇವರ ವಿಶಿಷ್ಟತೆಯನ್ನು ʼಅಗಸ್ತ್ಯ ನಕ್ಷತ್ರʼ ಕಥೆಯೇ ಸಾಕ್ಷೀಕರಿಸಿದೆ. ಬಳ್ಳಾರಿ ಸೀಮೆಯ ರಕ್ತರಾತ್ರಿ ನಾಟಕವನ್ನು, ಎಲಿವಾಳ ಸಿದ್ದಯ್ಯನವರ ಅಶ್ವತ್ಧಾಮನ ಪಾತ್ರವನ್ನು ಈ ಕಥನವು ಎರಕಹೊಯ್ದುಕೊಂಡಿದೆ. ಕೊಲೆಯ ಸಂಚನ್ನು ಬೇಧಿಸುವ ಈ ಕಥೆಯು ಆಳದಲ್ಲಿ ಭೋಜನಗೌಡ ತಳವರ್ಗಗಳಿಗಾದ ಅನ್ಯಾಯ ಮತ್ತು ಶೋಷಣೆಯ ಪರವಾಗಿ ನಿಂತದ್ದೇ ಕಾರಣವೆಂಬ ಎಡಪಂಥೀಯ ಧೋರಣೆಗೆ ಸಂಪ್ರದಾಯ ಶಕ್ತಿಗಳು ತೋರುವ ವರ್ತಮಾನದ ಪ್ರತಿಕ್ರಿಯೆಯಂತೆ ಕಾಣುತ್ತದೆ. “ಸರೋಜ ಆಸ್ತಿ ಪತ್ರಗಳ ತೋರಿಸಿದಾಗ ಅವುಗಳಲ್ಲಿ ಬಡವರಿಗೆ ಚೀಲ ಜೋಳ,ಪುಡಿಗಾಸು ಕೊಟ್ಟು ಬರೆಸಿಕೊಂಡ ಜಮೀನುಗಳೇ ಹೆಚ್ಚಿದ್ದವು.ಅಂಥ ಎಷ್ಟೋ ಹೊಲ ಉಳುಮೆ ಕಾಣದೆ ಈಗ ಬೀಳಾಗಿದ್ದವು. ಜಮೀನು ಕಳಕೊಂಡ ಪರಿವೆಯೇ ಇಲ್ಲದೆ ಅಂತಹ ಬಡವರ ಹೆಂಡಿರು ಮಕ್ಕಳು ಕೂಲಿ ನಾಲಿ ಮಾಡಿ ಬದುಕುವ ಚಿತ್ರ ಗೌಡರ ಕಣ್ಮುಂದೆ ಸುಳಿದಾಗ ʼಇವ್ಯಾವೂ ನ್ಯಾಯವಾದ ಆಸ್ತಿಗಳಲ್ಲ. ಕಷ್ಟದಲ್ಲಿ ಬೇಯ್ತಿರೋ ಅವರವರ ಆಸ್ತಿಗಳನ್ನು ಈಗಲಾದರೂ ಹಿಂದಕ್ಕೆ ಕೊಟ್ಟು ಪುಣ್ಯ ಕಟ್ಗೊಳ್ರೀʼ ಎಂದಿದ್ದ ಸರೋಜಮ್ಮನಿಗಾಗಿ ಗೌಡ್ರು ಸ್ಥಳೀಯ ಎಂ.ಎಲ್.ಎ. ಬಾಬಣ್ಣನಿಗೆ ಒಪ್ಪಿಸಿ ಸರ್ಕಾರದ ಮಟ್ಟದಲ್ಲಿ ಮಾತನಾಡಿಸಿ ಪಟ್ಟಕೊಡಿಸುವ ಕಾರ್ಯಕ್ರಮವನ್ನು ನಿಗಧಿ ಮಾಡುತ್ತಾರೆ. ಆದರೆ ಲಿಂಗನ ಗೌಡನ ಕುತಂತ್ರದಿಂದಾಗಿ ಹಿರೇಗುಡ್ಡದ ಕೊರಕಲಿನ ಆ ಬಯಲನ್ನು ಕಾಳವ್ವನ ಸರ ಎಂದು ಘೋಷಿಸಲ್ಪಡುತ್ತದೆ. ಇವರೇ ಸೇರಿ “ ಆ ನೆಲದಾಗ ಕಾಳವ್ವ ನೆಡ್ಕಂಡೋಗಿ ಗುಡ್ಡದ ಮ್ಯಾಲೆ ಕುಂತಾಳಂತೆ!? ಆ ಭೂಮಿಯ ಉದ್ದಕ್ಕೂ ಆಕಿ ಪಾದ್ಗಳು ಅಲ್ಲಲ್ಲಿ ಅದಾವಂತೆ!” ಎಂಬ ಕತೆ ಕಟ್ಟುತ್ತಾರೆ. ಪರಿಣಾಮ ಪಟ್ಟ ನೀಡುವ ಕಾರ್ಯಕ್ರಮಕ್ಕೆಂದು ಬೀಗರು ಬಿಜ್ಜರನ್ನು ಕರೆಸಿದ ಮಾದಿಗರು ಗೋಳಾಡುತ್ತಾರೆ. ಶ್ರೀಮಠದ ಸ್ವಾಮಿಗಳು ಭೋಜನಗೌಡನಿಗೆ “ ಜಾತಿಗೆಟ್ಟು ನೀತಿಗೆಟ್ಟು ಬದುಕಬ್ಯಾಡಲೇ ತಮ್ಮ” ಎಂದದ್ದಲ್ಲದೇ ,” ಕಾಳವ್ವನ ಮಹಿಮಾ ಜಗಕ್ಕ ಸಾಗಬೇಕು. ಅಲ್ಲಿ ಮಠ ಕಟ್ಟಿಸಬೇಕು. ಕಾವಿ ಹಾಕಿರೋ ಪುಣ್ಯಕ್ಕ ನನ್ನ ಜಾತಿ ಬೆಳೆಸ್ಬೇಕು” ಎನ್ನುತ್ತಾರೆ.
“ಹಸ್ಗಂಡಿರೋ ಹೊಟ್ಟಿಮ್ಯಾಲೆ ಮಠ ಕಟ್ಟಿದ್ರೇನು? ಮಸೀದಿ ಕಟ್ಟಿದ್ರೇನು? ಅದು ಸಮಾಧೀನ.” ಎಂದು ಸ್ವಾಮಿಗಳ ಮಾತಿಗೆ ಪ್ರತಿಕ್ರಿಯಿಸುವ ಬೋಜನಗೌಡನ ಮಾತು ಹಳ್ಳಿಯ ಒಡಲೊಳಗಿನ “ಭೂಮಿ” ಪ್ರಶ್ನೆಯನ್ನು ಅರಸು ತಂದ ಕಾನೂನಿನ ನಂತರವೂ ಹೇಗೆ ಭಿನ್ನ ಚಲನೆಯ ಮೂಲಕ ಮತ್ತೆ ಭೂಮಾಲಿಕರ ಸ್ವತ್ತಾಗುತ್ತಿದೆ ಎಂಬ ಪ್ರಧಾನ ಅಂಶದತ್ತ ಈ ಕಥೆಯು ಮುಖಮಾಡಿದೆ. ಸ್ವಾಮಿಗಳ ಜೊತೆಗೆ ತಾವೇ ನಿಂತು ಗೆಲ್ಲಿಸಿದ ಬಾಬಣ್ಣನೂ ಶಾಮೀಲಾದದ್ದು ಪ್ರಸ್ತುತ ಓಟು ಪ್ರಧಾನ ರಾಜಕಾರಣದ ಮುಖವಾಡವನ್ನು ಬಯಲಿಗೆಳೆದಂತೆ ಕಾಣುತ್ತದೆ. ಲಿಂಗನಗೌಡನಿಗೆ ಧಾರ್ಮಿಕ ಮತ್ತು ರಾಜಕೀಯ ಶಕ್ತಿ ಸಿಕ್ಕಿದ್ದೇ ಸರೋಜಳ್ನು ಮಾನಗೇಡಿ ಸಿದ್ಲಿಂಗನ ಮೂಲಕ ಅತ್ಯಾಚಾರ ಮತ್ತು ಕೊಲೆಮಾಡಿಸಿ ಆ ಆರೋಪವನ್ನು ಭೋಜನಗೌಡನ ಮೇಲೆಯೇ ಬರುವಂತೆ ಮಾಡುತ್ತಾನೆ. ಧರ್ಮದ ಹೆಸರಲ್ಲಿ ಭೂಮಿ ಮತ್ತು ಹೆಣ್ಣು ಬಲಿಯಾಗುವ ಎರಡಲುಗಿನ ಈ ಕತ್ತಿಯ ಮೊನಚನ್ನು ಲೇಖಕರು ಎಲ್ಲೂ ಸಿನಿಮೀಯವಾಗಿಸದೇ ಕರುಳಿರಿವಂತೆ ಹೆಣೆದಿದ್ದಾರೆ. ದಲಿತನಿಂದಲೇ ದಲಿತರ ಹೆಣ್ಣನ್ನು ಕೊಲ್ಲಿಸುವ ಭೂಮಾಲಿಕರ, ದಲಿತರ ಓಟು ಪಡೆದೂ ದಲಿತರನ್ನೇ ಶೋಷಿಸುವವರ ಪರವಾಗುವ ರಾಜಕಾರಣಿಗಳ ವರ್ತಮಾನದ ಜಾತಿ ನಿಷ್ಟ ಕಾಳಜಿಯನ್ನು ಈ ಕಥೆಯು ಬಿಡಿಸಿತೋರಿಸಿದೆ.
ʼಕಣಿವೆ” ಕಥೆಯು ರೈತರ ಲಾಭಕೋರತನದಿಂದಾಗುವ ದುರಂತವನ್ನು ಶೋಧಿಸುತ್ತಲೇ “ಕುಲಕ್ಕೆ ಮೂಲ ಕೊಡಲಿಪೆಟ್ಟು” ಎಂಬಂತೆ ಸ್ವಾರ್ಥಿ ದಲಿತನೊಬ್ಬ ಕುತಂತ್ರಿಯಾಗಿ ಬೆಳೆಯುವ ತನ್ನ ಸ್ವಾರ್ಥಕ್ಕೆ ತನ್ನ ಕೇರಿಗಳ ಬದುಕನ್ನೇ ಬೀದಿಗೆ ತರುವ, ಭಂಡತನದಿಂದಲೇ ಸಿರಿವಂತನಾಗಿ ಬೆಳೆದು ಸಜ್ಜನರಿಂದ ಗೌರವನ್ನು ಪಡೆಯುವ ಹೊಸ ದಲಿತ ಮುಖಂಡರ ಮತ್ತೊಂದು ಮುಖವನ್ನು ಈ ಕಥೆಯು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಅಗಸ್ತ್ಯ ನಕ್ಷತ್ರ ಕಥೆಯಲ್ಲಿ ಧಾರ್ಮಿಕತೆಯು ತಳವರ್ಗದ ರೈತರ ಲೋಕದ ಮೇಲೆ ಅಪ್ಪಳಿಸಿದರೆ ಇಲ್ಲಿ ಆರ್ಥಿಕತೆಯು ಕೇರಿಯ ರೈತರ ಮತ್ತು ಕೂಲಿಕಾರರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕುಗಳ ಮೇಲೆ ಅಕ್ರಮಿಸಿರುವುದನ್ನು ಸೂಚಿಸುತ್ತದೆ.
ಭೂಮಿಯಂತೆಯೇ ಹಳ್ಳಿಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಮತ್ತೊಂದು ಕೇಂದ್ರವೇ ನೀರು. ಇಲ್ಲಿ ನೀರೊಂದು ಜಾತಿ ರಾಜಕಾರಣದ ವಸ್ತುವಾದಾಗ ಅದು ಹೇಗೆ ನಿಸರ್ಗವಿರೋಧಿಯಾಗಿ ಚಲಿಸಿ ಊರ ಅಭಿವೃದ್ಧಿಗೇ ಸಂಚಕಾರ ತರಬಲ್ಲದು ಎಂಬುದನ್ನು “ನಲ್ಲಿ ಬಂತು” ಕಥೆ ಹೇಳುತ್ತದೆ.
ಬಾವಿ ನೀರು,ಹೊಲದ ಬೋರುನೀರು,ಕೊಳವೆ ಬಾವಿ,ನಲ್ಲಿನೀರುಗಳ ಸಂಕಥನಗಳನ್ನೆಲ್ಲಾ ಕಣ್ಣಮುಂದೆ ಹರಡುವ ಈ ಕಥೆಯು ಅನುಗಾಲವೂ ನೂರಾರು ಕೊಡವಿಟ್ಟು ಹನಿ ನೀರಿಗಾಗಿ ಕಾಯುವ ಬಯಲುಸೀಮೆಯ ಬಹುದೊಡ್ಡ ಸಮಸ್ಯೆಯತ್ತ ಬೆರಳು ಮಾಡಿದೆ. ಗ್ರಾಮೀಣಾಭಿವೃದ್ಧಿಯ ನೀರು ಸರಬರಾಜು ಯೋಜನೆಯ ಉದ್ದೇಶವನ್ನೇ ಬುಡಮೇಲು ಗೊಳಿಸುವ ಹಳ್ಳಿಗಳ ಸ್ವಾರ್ಥ ರಾಜಕಾರಣವು ಜಾತಿ ವ್ಯವಸ್ಥೆಯ ಅಸ್ತ್ರವನ್ನು ಬಳಸಿಕೊಂಡು ಧರ್ಮರಾಜಕಾರಣವನ್ನು ಮತ್ತು ರಾಜಕಾರಣವನ್ನು ಸರಕಾಗಿಸಿಕೊಂಡು ಸ್ವಾರ್ಥತನವನ್ನೇ ಉಳಿಸಿಕೊಳ್ಳುವ ವಿಶಿಷ್ಟ ಕಥನವಿದು. ಬಡವರ ಪರವಾದ ನಲ್ಲಿ ನೀರಿನ ಯೋಜನೆಯು ಪಂಚಾಯ್ತಿಯ ಅಧ್ಯಕ್ಷ ಅಣ್ಣಪ್ಪನ ಚಾಣಾಕ್ಷತನದಿಂದಾಗಿ ಆ ಯೋಜನೆಯ ಪೈಪುಗಳೇ ರಾತ್ರೋ ರಾತ್ರಿ ಆತನ ಹೊಲದ ನೀರಾವರಿಗೆ ಸಾಗಿಹೋಗುವುದು. ಬೆಳೆದು ಬಾಳಬೇಕಾದ ಸಣ್ಣೀರ ಗೌಡನ ಮಗ ಮಳ್ಳನ ಗೌಡ, ದುರುಗವ್ವನ ಮಗಳು ಕಣ್ಣೆದುರೇ ಸಾಯುವುದು, ದನಿಯೆತ್ತಿದ ಕರಾಟೆ ಕೊಟ್ರಪ್ಪ ಬಡಿಸಿಕೊಂಡು ಆಸ್ಪತ್ರೆ ಸೇರುವುದು,ಪ್ರಾಮಾಣಿಕರಾದ ಇಂಜಿನಿಯರ್, ಮೇಸ್ತ್ರಿ ಕಾಳಪ್ಪ ಮತ್ತು ಬಸ್ ಡ್ರೈವರ್ ತಮ್ಮದಲ್ಲದ ತಪ್ಪಿಗೆ ಊರವರ ಬೈಗುಳಕ್ಕೆ ಈಡಾಗುವುದು ಕೊನೆಗೆ ಧರ್ಮ ಪೀಠದ ಗುರುಗಳೇ ಬಂದು ಆ ತಾರತಮ್ಯದ ನೀರು ಸರಬರಾಜಿನ ಈ ಯೋಜನೆಯನ್ನು ಉದ್ಘಾಟಿಸುವುದು ದೊಡ್ಡ ವ್ಯಂಗ್ಯದಂತೆ ಕಾಣುತ್ತದೆ. ಸಣ್ಣೀರ ಗೌಡನು ಚಲುವಾದಿ ಸಿದ್ಲಿಂಗಜ್ಜನ ಬಳಿ “ ಅಲ್ಲಜ್ಜ ಗಂಗವ್ವಗ ಮೈಲ್ಗಿಲ್ಲ ಅಂತಾರ ಬಲ್ಲವರು. ಪೈಪಿನಗುಂಟ ಅರ್ಕಂಡ್ಬರೋ ನೀರು ಯಾ ಜಾತಿ ಕೇರಿ ಸುತ್ತಿಗೆಂಡ್ಬಂದ್ರೇನಜ್ಜ? ನೀರೇನು ಜಾತಿ ವೊತ್ಗಂಡ್ಬರ್ತವಾ? ಮಂಗ ಸೂಳೆಮಕ್ಳು ಮೂರು ಬಿಟ್ಟರ್ನ ಕಲೆ ಅಕ್ಕಂಡು ಜಾತಿ ಮಾಡಾಕೊಂಟಾರ” ಎಂದಿದ್ದ ಮಾತು ಇಲ್ಲಿ ಈಡೇರಲಾರದ ಕನಸಾಗಿಯೇ ಉಳಿದು ಹಳ್ಳಿಗಳಲ್ಲಿ ಅಭಿವೃದ್ಧಿಯ ಕನಸೊತ್ತವರ, ಆ ಕನಸಿಗಾಗಿ ಜೀವನವನ್ನೇ ಮುಡುಪಿಟ್ಟವರ ನೀರವ ಆರ್ತನಾದವಾಗಿಯೇ ಉಳಿಯುತ್ತದೆ. ತಳವರ್ಗಕ್ಕೆ ಭೂಮಿಯು ಕನಸಾಗಿ ಉಳಿವಂತೆಯೇ ಕುಡಿಯುವ ನೀರೂ ಕೂಡಾ ತೋರಿಕೆಯ ಕಾರ್ಯವಾಗಿ; ಗಂಗವ್ವ ಅಧ್ಯಕ್ಷರ ಮನೆ ಎದರು ತುಂಬಿ ಹರಿದು, ತಳವರ್ಗಗಳ ಓಣಿಗಳಲ್ಲಿ ತೊಟ್ಟಿಕ್ಕುವ ನೆಪವಾಗಿ ಹನಿವ ರೀತಿಯೇ ಹೇಗೆ ಹಳ್ಳಿಗಳಲ್ಲಿ ಜನಪರ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬ ವ್ಯಂಗ್ಯದಂತಿವೆ. ವಾಸ್ತವವಾಗಿ ಇಲ್ಲಿರುವುದು ಉತ್ಸರ್ಪಿಣಿ ಕಾಲವಲ್ಲ ಅವಸರ್ಪಿಣಿ ಕಾಲವಂಬೋ ಧ್ವನಿ ಪೂರ್ಣ ನೋವನ್ನು ಈ ಕಥೆ ಸಶಕ್ತವಾಗಿ ಹಿಡಿದಿಟ್ಟಿದೆ.
“ಘಾಟು” ಕಥೆಯು ʼಗಳಿಕೆʼಯ ದುರಾಸೆಗೆ ಬಿದ್ದ ರೈತರು ತಂಬಾಕನ್ನು ಬೆಳೆದು ತಮ್ಮ ಹೊಲಗಳನ್ನು ದಲ್ಲಾಳಿಗಳ, ವ್ಯಾಪಾರಿಗಳ ಕರಾಳ ಹಸ್ತಗಳ ಪಾಲಾಗಿಸುವ ಆ ಮೂಲಕ ಹಳ್ಳಿಯು ಸರಕಾಗಿ ತನ್ನೆಲ್ಲಾ ನಿಯಂತ್ರಗಳನ್ನು ಕಳಕೊಂಡು ನೆಲ ಬತ್ತಿಸಿಕೊಂಡು, ಜಲ ಬತ್ತಿಸಿಕೊಂಡು “ ಮೇವು ನೀರಿಲ್ಲದೇ ದನಗಳು ಬಿಸಿಲನ್ನೇ ಉಂಡು ತೇಕುವ “ ಸ್ಥಿತಿಗೆ ತಲುಪಿರುವ, ಉದ್ಯೋಗವಿಲ್ಲದ ಜನಗಳು ಸುದ್ದಿ ಬಡಿಯುತ್ತಾ, ಅಂದರ್ ಬಹರ್,ತೂರಾಬಿಲ್ಲಿ,ಓಸಿಯಾಟ ಎನ್ನುವ ವಿನಾಶಗಳ ಜಾಡು ಹಿಡಿದ.ನಡೆಯನ್ನು ಸೂಚಿಸುತ್ತದೆ. ನೀತಿಯೇ ನಗೆಪಾಟಲಿಗೆ ಒಳಗಾಗುವ ಸೊಗಸಾದ ವಿಡಂಬನಾತ್ಮಕ ಅಂತ್ಯವನ್ನು ಈ ಕಥೆ ಸೂಚಿಸುತ್ತದೆ. “ ಮಠದ ಮಾರುತೆಯ್ಯನವರು ಬೀಡಿಗೆ ಕಡ್ಡಿಗೀರಿ ಒಂದೆರಡು ದಮ್ಮೆಳೆದು “ ನೋಡ್ರೀ ಈ ತೊಂಬಾಕದ ರಂಪಾಟ ನಿಲ್ಲಬೇಕಪ್ಪ ಅಂದ್ರ ಎಲ್ಲರೂ ಬೀಡಿ ಸೇದೋದು ಬಿಡಬೇಕು ನೋಡ್ರಿ” ಅಂದ್ರು. ಅಲ್ಲಿದ್ದವರೆಲ್ಲಾ ಕೊಕಾಡಿ ನಗಲು ಪ್ರಾರಂಭಿಸುತಿದ್ದಂತೆ ಲಾರಿಗಳು ಉಗುಳಿದ ಹೊಗೆ ನೆತ್ತಿಗೇರಿ ಕೆಮ್ಮತೊಡಗಿದರು.
ಇಲ್ಲಿನ ಕಥೆಗಳ ಭಾಷೆ ಕೆಲವು ಕಡೆ ಮಲ್ಲಿಕಾರ್ಜುನ ಗೌಡರ ಕಥೆಗಳಿಗೆ ಶಕ್ತಿಯಾಗಿರುವಂತೆಯೇ ಮಿತಿಯಾಗಿಯೂ ಕಾಣುತ್ತದೆ. ಕೆಲವು ಕಡೆ ಅತಿ ವಿಸ್ತಾರದತ್ತ ತೆರಳುವ ವಿವರಣೆಗಳು ಕಥೆಯು ತೋರ ಬಹುದಾದ ಮೊನಚನ್ನು ಮೊಂಡಾಗಿಸುವಂತಿವೆ. ಕೆಲವು ಕಡೆ ಕಾಣುವ ಇವರ ಕಾವ್ಯಾತ್ಮಕ ಹದದ ಧ್ವನಿಪೂರ್ಣ ಸಾಲುಗಳೇ ಇವರೊಬ್ಬ ಗಟ್ಟಿ ಕಥೆಗಾರರಾಗಿ ಬೆಳೆಯಬಲ್ಲ ಸೂಚನೆಯನ್ನೂ ನೀಡುತ್ತವೆ.
ಹೊರಗಿನ ಹಣವಂತರು ಮತ್ತು ರಾಜಕಾರಣಿಗಳು ಹಳ್ಳಿಗಳ ಒಳಗಿನ ಜಾತೀಯತೆಯ ಕೈ ಹಿಡಿದು ಧಾರ್ಮಿಕ ಅಸ್ತ್ರಗಳಿಂದ ಹೇಗೆ ಹಳ್ಳಿಗಳನ್ನು ವಿನಾಶದತ್ತ ತಳ್ಳುತ್ತಿದ್ದಾರೆ ಎಂಬ ಸುಡುವ ಕೆಂಡದ ಬಿಸಿ ಮುಟ್ಟಿಸುವ ಈ ಸಂಕಲನವು ಹೊಲಕಾಣದ ಚೋಮರಿಗೆ ಅರ್ಪಿಸಿರುವ ಪರಿಯೂ ಗಮನಾರ್ಹ.
ಬೆವರಿನ ಶೋಧವು ಹಳ್ಳಿಯ ಒಡಲ ಸಂಕಟಗಳಿಗೆ ಬನಿಯಾದರೂ ಅದರ ಒಳಗಿನ ಪ್ರಗತಿಪರ ಹೆಜ್ಜೆಯೂ ಕೂಡ ತಳದಲ್ಲಿ ಮಹಿಳಾ ಶೋಷಕ ಗುಣವನ್ನೇ ಹೊತ್ತು ನಿಂತಿದೆ ಎಂಬ ಇವರ ಕಥೆಗಳ ಒಳಗಿನ ಸೂಕ್ಷ್ಮ ವ್ಯಂಗ್ಯವನ್ನೂ ಮರೆಯುವಂತಿಲ್ಲ.