ತುಮಕೂರು ಜಿಲ್ಲೆಯ3025 ಎಕರೆ ಮುದಿಗೆರೆ ಅಮೃತಮಹಲ್ ಕಾವಲ್ ಸಂರಕ್ಷಣೆ: ಈಶ್ವರ ಖಂಡ್ರೆ
by-ಕೆಂಧೂಳಿ
ಬೆಂಗಳೂರು, ಮಾ.10: ಶಿರಾ ತಾಲೂಕು ಮುದಿಗೆರೆಯ ಅಮೃತ ಮಹಲಾ ಕಾವಲ್ ನ 3025 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯವಾಗಿ ಉಳಿಸಿ, ಅಭಿವೃದ್ಧಿ ಪಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಸದಸ್ಯ ಚಿದಾನಂದ್ ಎಂ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುದಿಗೆರೆ ಅಮೃತ ಮಹಲ್ ಅನ್ನು ರಾಜ್ಯ ಅರಣ್ಯ ಎಂದು ಅಂದಿನ ಮೈಸೂರು ಮಹಾರಾಜರು 1900ರಲ್ಲಿ ಅಧಿಸೂಚನೆ ಹೊರಡಿಸಿರುತ್ತಾರೆ. ಒಂದು ಬಾರಿ ಅರಣ್ಯ ಎಂದು ಅಧಿಸೂಚನೆ ಆದ ಮೇಲೆ ಅದು ಅರಣ್ಯವಾಗೇ ಇರುತ್ತದೆ. ಅರಣ್ಯ ಭೂಮಿಯನ್ನು ಮಂಜೂರು, ದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತುಮಕೂರು ಜಿಲ್ಲೆಯಲ್ಲಿ 113123.23 ಹೆಕ್ಟೇರ್ ಅರಣ್ಯ:
ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆ 113123.23 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಪೈಕಿ 4001 ಪ್ರಕರಣಗಳಲ್ಲಿ 8024.70 ಎಕರೆ ಅರಣ್ಯ ಭೂಮಿ ಒತ್ತುವರಿ ಅಥವಾ ಮಂಜೂರಾತಿ ಆಗಿದೆ. ಒತ್ತುವರಿ ತೆರೆವಿಗೆ 500 ಪ್ರಕರಣ ದಾಖಲಿಸಲಾಗದ್ದು, ತುಮಕೂರು, ಮಧುಗಿರಿ ಮತ್ತು ತಿಪಟೂರು ಉಪ ವಿಭಾಗದಲ್ಲಿ ಈವರೆಗೆ 457.35 ಎಕರೆ ಒತ್ತುವರಿ ತೆರವಿಗೆ ಆದೇಶ ನೀಡಲಾಗಿದೆ, 146.22 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿವರಿಸಿದರು.
ಚಿಂಕಾರ ವನ್ಯಜೀವಿಧಾಮದಲ್ಲಿ ಹುಲ್ಲು ಬೆಳೆಸಲು ಕ್ರಮ
ತುಮಕೂರು ಜಿಲ್ಲೆ ಬುಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದಲ್ಲಿ ಪ್ರಾಣಿಗಳಿಗೆ ಆಹಾರ ಒದಗಿಸಲು ಹುಲ್ಲು ಬೀಜ ಬಿತ್ತನೆ, ನಾಟಿ ಮಾಡಲಾಗುತ್ತಿದ್ದು, ಹುಲ್ಲು ಗಾವಲಿನಲ್ಲಿ ಬೆಳೆದಿರುವ ಲಾಂಟನಾ ತೆರವಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಸದಸ್ಯ ಚಿದಾನಂದ್ ಎಂ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಅರಣ್ಯದಲ್ಲಿ ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗದಂತೆ ಹಾಲಿ ಇರುವ ಕಟ್ಟೆಗಳಲ್ಲಿ ಹೂಳು ತೆಗೆಯುವುದು, ನಾಲಾ ಬದು, ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ನೀರು ಸಂಗ್ರಹ ಹೆಚ್ಚಿಸಲಾಗುತ್ತಿದೆ ಎಂದರು.
ಚಿಂಕಾರಾ ವನ್ಯಜೀವಿಧಾಮದಲ್ಲಿ ವನ್ಯಜೀವಿ ಕಳ್ಳಬೇಟೆ ತಡೆಗೆ ಶಿಬಿರ ಸ್ಥಾಪಿಸಲಾಗಿದ್ದು, ಸಿಬ್ಬಂದಿ ರಾತ್ರಿ ಹಗಲು ಗಸ್ತು ತಿರುಗುತ್ತಿದ್ದಾರೆ. ಕಳ್ಳ ಬೇಟೆಯ ಮೇಲೆ ನಿರಂತರ ನಿಗಾ ಇಡಲಾಗಿದೆ ಎಂದೂ ತಿಳಿಸಿದರು.
ಕಾಡ್ಗಿಚ್ಚು ನಿಯಂತ್ರಿಸಲು ಹೊಸ ಬೆಂಕಿ ರೇಖೆ ನಿರ್ಮಾಣ, ಹಳೆಯ ಬೆಂಕಿ ರೇಖೆ ನಿರ್ವಹಣೆ, ಕಾವಲುಗಾರರ ನೇಮಕ, ಗಸ್ತು ನಿಯೋಜನೆ, 24/7 ಮುನ್ನೆಚ್ಚರಿಕೆ ವ್ಯವಸ್ಥೆ ಸೇರಿ ಎಲ್ಲ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.