ಬೆಂಗಳೂರು,ಮೇ,೨೪ : ರಾಜ್ಯದಲ್ಲಿ ಲಭ್ಯ ಇರುವ ಕೋವಿಡ್ ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರ ಸೌಲಭ್ಯಗಳ ಬಗ್ಗೆ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಶ್ವೇತಪತ್ರ ಹೊರಡಿಸುವಂತೆ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಪಾಲಿಸಬೇಕು. ಶ್ವೇತಪತ್ರ ಎಂದರೆ ಸುಳ್ಳು ಹೇಳುವುದಲ್ಲ. ಸತ್ಯಾಂಶವನ್ನು ಜನರ ಮುಂದೆ ಇಡುವಂಥದ್ದು ಎಂದರು.
ಆಕ್ಸಿಜನ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನೂ ಸರ್ಕಾರ ಈ ವರೆಗೆ ಪಾಲಿಸಿಲ್ಲ. ಶ್ವೇತಪತ್ರದ ವಿಚಾರದಲ್ಲಿಯಾದರೂ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡಲಿ ಎಂದು ಹೇಳಿದರು.
ಪ್ರಧಾನಿಯವರು ಕಣ್ಣೀರು ಹಾಕಿರುವುದು ನಾಟಕ. ಕಣ್ಣೀರು ಹಾಕುವುದರಿಂದ ಆಕ್ಸಿಜನ್, ಲಸಿಕೆ ಸಿಗುವುದಿಲ್ಲ. ಭಾವನಾತ್ಮಕವಾಗಿ ಜನರನ್ನು ಮರಳು ಮಾಡುವ ಪ್ರಯತ್ನ ಇದು ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.
ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳು ಹಾಗೂ ದುಡಿಯುವ ವರ್ಗದವರಿಗೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದೆ. ಆದರೆ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಕಳೆದ ವರ್ಷ ಇದೇ ರೀತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ, ಬಹುತೇಕ ಮಂದಿಗೆ ಪರಿಹಾರವೇ ಸಿಕ್ಕಿಲ್ಲ. ಈ ವರ್ಷವೂ ಸಹ ಎಲ್ಲರಿಗೂ ಪರಿಹಾರ ಸಿಗುವ ಬಗ್ಗೆ ಅನುಮಾನವಿದೆ. ಪರಿಹಾರ ಪಡೆಯಲು ಅನುಸರಿಸಬೇಕಾದ ಮಾರ್ಗ ಏನು ಎಂಬುದನ್ನೇ ಸರ್ಕಾರ ಈ ವರೆಗೆ ತಿಳಿಸಿಲ್ಲ. ಹೀಗಾಗಿ ಪ್ಯಾಕೇಜ್ ಎಂಬುದು ಕೇವಲ ಕಣ್ಣೊರೆಸುವ ತಂತ್ರ.
ಲಸಿಕೆ ವಿಚಾರದಲ್ಲಿ ಅಪಪ್ರಚಾರ ಏನಿಲ್ಲ. ಲಸಿಕೆ ಇಲ್ಲ ಎಂಬುದು ವಾಸ್ತವ. ೧೮ ವರ್ಷ ಮೀರಿದವರಿಗೆ ಮೇ ೧ರಿಂದ ಲಸಿಕೆ ಎಂದು ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದರು. ಈಗ ಕೊಡುತ್ತಿಲ್ಲ. ಅದು ಸುಳ್ಳೇ ? ಇದರಲ್ಲಿ ಅಪಪ್ರಚಾರ ಏನು ? ಮೇ ೧ರಂದು ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು ಸುಳ್ಳೇ. ಈಗ ಲಸಿಕೆ ಇಲ್ಲದಿವರುವುದು ಸುಳ್ಳೇ ?
ಅಭಿಯಾನಕ್ಕೆ ಚಾಲನೆ ನೀಡಿ ಮೂರು ವಾರಗಳಾದರೂ ರಾಜ್ಯಕ್ಕೆ ಲಸಿಕೆ ಬಂದಿಲ್ಲ. ಸರ್ಕಾರ ಪಾರದರ್ಶಕವಾಗಿರಲಿ. ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡು ಈಗ ಕಾಂಗ್ರೆಸ್ಸಿಗರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದರೆ ಹೇಗೆ ? ಎಂದು ಪ್ರಶ್ನಿಸಿದರು.
ಕೋವಿಡ್ ಸೌಲಭ್ಯಗಳ ಕುರಿತು ಶ್ವೇತಪತ್ರಹೊರಡಿಸಲು ಸಿದ್ದರಾಮಯ್ಯ ಆಗ್ರಹ
Share