ಜಾತಿ ಮತ್ತು ಹಣ ಬಲದ ರಾಜಕಾರಣ ಇನ್ನೆಷ್ಟು ವರ್ಷ ಕಾಲ ಇರುತ್ತದೋ ಹೇಳಲಾಗದು. ಗುಜರಾತ್ ಸಿಎಂ ಆಗಿರುವ ಭೂಪೇಂದ್ರ ಪಟೇಲರಿಗೆ ಜಾತಿ ತೋರಿಸಿ ಚುನಾವಣೆ ಗೆಲ್ಲುವ ಅಧಿಕಾರವನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಕರ್ನಾಟಕದಲ್ಲೂ ಪ್ರಬಲ ಲಿಂಗಾಯತ-ವೀರಶೈವ ಸಮುದಾಯಕ್ಕೆ ಬೊಮ್ಮಾಯಿ ಮುಖ ತೋರಿಸುವ ಕೆಲಸ ಮಾಡಿದೆ. “ಮುದುಕರ ಕಾಲ ಮುಗಿಯಿತು” ಎಂಬ ಸಂದೇಶವನ್ನು ಯುವ ಮತದಾರರಿಗೆ ರವಾನಿಸುವ ಯತ್ನಕ್ಕೂ ಬಿಜೆಪಿ ಕೈ ಹಾಕಿರುವಂತಿದೆ.
ಯಾರಿಗೆ ಯಾರುಂಟು ಯರವಿನ ಸಂಸಾರ
ಮುದಿಗೂಬೆಗಳನ್ನು ನೋಡಿ ನೋಡಿ ಸಾಕಾಗಿದೆ ಎನ್ನುವುದು ಭಾರತದ ಪ್ರಚಲಿತ ರಾಜಕಾರಣದ ವಿಚಾರದಲ್ಲಿ ಜನ ಸಾಮಾನ್ಯರು ಆಡುವ ಬೇಸರದ ಮಾತು. ಎಲ್ಲ ಉದ್ಯೋಗದಲ್ಲೂ ನಿವೃತ್ತಿ ಎನ್ನುವುದೊಂದು ಇರುತ್ತದೆ. ಅದಕ್ಕೆ ಮುಖ್ಯವಾದ ಮಾನದಂಡ ವಯಸ್ಸು. ಅನಾರೋಗ್ಯ ಮತ್ತೊಂದು ಕಾರಣವಾಗಿರುತ್ತದೆ. ಇಂತಿಷ್ಟು ವರ್ಷ ಕೆಲಸ ಮಾಡಿದ ತರುವಾಯದಲ್ಲಿ ವ್ಯಕ್ತಿಯ ಜೀವನಕ್ಕೆ ವಿಶ್ರಾಂತಿ ಅಗತ್ಯ ಎನ್ನುವುದು ವೈಜ್ಞಾನಿಕ ದೃಷ್ಟಿಕೋನದಿಂದಲೂ ಸಮರ್ಥನೆಗೊಂಡಿದೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಇಳಿ ವಯಸ್ಸಿಗೆ ಅನುಗುಣವಾಗಿ ಅವರೆಲ್ಲ ವಾನಪ್ರಸ್ತಾಶ್ರಮಕ್ಕೆ ಹೋಗುತ್ತಿದ್ದರೆನ್ನುವ ಮಾತಿದೆ. ಆದರೆ ನಮ್ಮ ಪ್ರಸ್ತುತದ ರಾಜಕೀಯದಲ್ಲಿ ವಯಸ್ಸು ಎಷ್ಟಾದರೂ ಸರಿಯೇ ಅಧಿಕಾರ ರಾಜಕಾರಣಕ್ಕೆ ಗೋಂದು ಅಂಟಿಸಿಕೊಂಡು ಕೂರುವ ಪ್ರವೃತ್ತಿ ಅನೂಚಾನವಾಗುತ್ತಿದೆ. ಸ್ವತಂತ್ರವಾಗಿ ಮೇಲೆದ್ದು ನಿಲ್ಲಲೂ ಆಗದ; ನಿಂತವರು ಸುಲಭದಲ್ಲಿ ಕೂರಲೂ ಆಗದ; ನಾಲ್ಕು ಹೆಜ್ಜೆ ಜೋಲಿ ಹೊಡೆಯದೆ ನಡೆಯಲಾಗದ; ಎರಡು ಮೆಟ್ಟಿಲನ್ನೇರಿದಾಕ್ಷಣ ಏದುಸಿರುವ ಬಿಡುವ “ಊರು ಹೋಗೆನ್ನುವ ಕಾಡು ಬಾರೆನ್ನುವ” ಅವಸ್ಥೆಯಲ್ಲಿರುವ ಜನ ಆಡಳಿತ ಸೂತ್ರ ಬಿಡಲೊಪ್ಪದೆ ಇರುವುದನ್ನು ನೋಡಿದ ಯಾರಿಗೇ ಆದರೂ “ಮುದಿಗೂಬೆಗಳನ್ನು ನೋಡಿ ನೋಡಿ” ಸಾಕಾಗಿರುವುದು ನಿಜ.
ನಮ್ಮನ್ನು ಆಳುತ್ತಿರುವ ಅಥವಾ ಆಳಲು ಹಾತೊರೆಯುತ್ತಿರುವ ರಾಜಕಾರಣಿಗಳನ್ನು ಗಮನಿಸಬೇಕು. ಈ ಮಾತು ತುಸು ಅತಿರಂಜಿತ ಎಂದೆನ್ನಿಸಬಹುದಾದರೂ ಹೇಳದೇ ವಿಧಿಯಿಲ್ಲ. ನಮ್ಮ ಅನೇಕ ವಯಸ್ಸಾದ ರಾಜಕಾರಣಿಗಳಿಗೆ ಸ್ವತಂತ್ರವಾಗಿ ಮೂತ್ರ ವಿಸರ್ಜಿಸುವುದೂ ಆಗದ ಕೆಲಸ. ಅನೇಕರು ಅದಕ್ಕೆಂದೇ ಸಹಾಯಕರನ್ನು ನೇಮಿಸಿಕೊಂಡಿರುವ ಉದಾಹರಣೆಗಳಿವೆ. ವಯೋಸಹಜವಾಗಿ ಎದುರಾಗುವ ಸಮಸ್ಯೆಗಳಲ್ಲಿ ಇದೂ ಒಂದು ಎನ್ನುವುದು ನಿಜ. ಹಾಗಾಗಿ ಗೇಲಿ ಸಲ್ಲದು. ಆದರೆ ಅಧಿಕಾರ ಸೂತ್ರ ಹಿಡಿದು ಜನರಿಗೆ ಅವರು ಮೆಚ್ಚುವಂಥ ಆಡಳಿತ ನೀಡಬೇಕಾಗಿರುವ ಜವಾಬ್ದಾರಿಯುಳ್ಳ ರಾಜಕಾರಣಿಗಳಿಗೆ ತಮಗೆ ವಯಸ್ಸಾಯಿತು; ಇನ್ನು ಈ ಉಸಾಬರಿ ಸಾಕು ಎನಿಸಬೇಕು. ಸ್ವಯಂ ನಿವೃತ್ತಿ ಪಡೆಯಬೇಕು. ಆದರೆ ಹಾಗೆ ಆಗುತ್ತಿಲ್ಲ ಎನ್ನುವುದಕ್ಕಾಗಿಯೇ ರಾಜಕಾರಣದಲ್ಲಿರುವ ವಯಸ್ಸಾದವರನ್ನು ಗೌರವದಿಂದ ನೋಡುವ ಬದಲಿಗೆ ಮುದಿಗೂಬೆಗಳೆಂದು ಜನ ಕರೆಯುತ್ತಾರೆ.
ತಮಿಳುನಾಡಿಗೆ ಗತ್ತುಗೈರತ್ತನ್ನು ತಂದಿತ್ತವರಲ್ಲಿ ಎಂ.ಕರುಣಾನಿಧಿ ನಿಸ್ಸಂಶಯವಾಗಿ ಒಬ್ಬರು. ೨೦೧೬ರಲ್ಲಿ ಆ ರಾಜ್ಯದ ವಿಧಾನ ಸಭೆಗೆ ಚುನಾವಣೆ ನಡೆದಾಗ ತೊಂಭತ್ತು ದಾಟಿದ್ದ ಅವರನ್ನು ವ್ಹೀಲ್ ಚೇರಿನಲ್ಲಿ ಕುಳ್ಳಿರಿಸಿ ಸಿಎಂ ಅಭ್ಯರ್ಥಿ ಎಂದು ಜನಕ್ಕೆ ಹೇಳಲಾಯಿತು. ಕರುಣಾನಿಧಿಯವರನ್ನು ದೇವರಂತೆ ಆರಾಧಿಸುವ ಜನ ತಮಿಳುನಾಡಿನ ಉದ್ದಗಲಕ್ಕೂ ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ಆದರೆ ಆರಾಧನಾ ಭಾವ ಎಲ್ಲ ಕಾಲಕ್ಕೂ ಕೆಲಸಕ್ಕೆ ಬರುವುದಿಲ್ಲ. ಡಿಎಂಕೆಗೆ ಈ ಸತ್ಯ ಮನವರಿಕೆಯಾಗುವ ವೇಳೆಗೆ ಚುನಾವಣೆ ಮುಗಿದು ವ್ಯತಿರಿಕ್ತ ಫಲಿತಾಂಶ ಬಂದಿತ್ತು. ಎಂ.ಜಿ. ರಾಮಚಂದ್ರನ್ ಅವರಂತೆ ಕೊನೆಯುಸಿರಿನವರೆಗೂ ಮುಖ್ಯಮಂತ್ರಿಯಾಗಿರುವ ಕರುಣಾನಿಧಿ ಆಸೆ ಕಮರಿ ಹೋಗಿದ್ದು ಹೀಗೆ. ಎಂಜಿಆರ್ ಕೋಮಾದಲ್ಲಿದ್ದೂ ಸಿಎಂ ಆಗಿ ಮುಂದುವರಿದಿದ್ದರು ಎನ್ನುವುದನ್ನು ಮರೆಯಬಾರದು.
ಕಳೆದ ಮೂರು ಚುನಾವಣೆಗಳಿಂದ “ಇದು ನನ್ನ ಕೊನೆಯ ಚುನಾವಣೆ” ಎನ್ನುತ್ತಲೇ ಇರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಲಿ ರಾಜ್ಯಸಭಾ ಸದಸ್ಯರು. ದೇವೇ ಗೌಡರಿಗೆ ವಯಸ್ಸಾಗಿದೆ ಎನ್ನುವುದು ಹೌದು. ಆದರೆ ಅವರ ಜಾಗೃತ ಪ್ರಜ್ಞೆ ಹಸಿರಾಗಿಯೇ ಇರುವುದೂ ಹೌದು. ಇನ್ನೂ ಕೆಲವು ವರ್ಷ ಅವರ ರಾಜಕೀಯ ಮಹತ್ವ ಹೀಗೇ ಇರುತ್ತದೆ. ಹಾಗೆ ನೋಡಿದರೆ ಅವರ ಒಂದು ಕಾಲದ ಶಿಷ್ಯ ಸಿದ್ದರಾಮಯ್ಯ ಕೂಡಾ “ಇದೇ ನನ್ನ ಕೊನೆಯ ಚುನಾವಣೆ” ಎನ್ನುತ್ತ ಕಣದಲ್ಲಿದ್ದಾರೆ. ಆಕ್ಷೇಪಿಸುವಷ್ಟು ವಯಸ್ಸು ಅವರದಲ್ಲ, ಬಿಡಿ. “ಸ್ವಯಂ ಇಚ್ಚೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ” ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿರುವ ಬಿ.ಎಸ್. ಯಡಿಯೂರಪ್ಪ ಇನ್ನೂ ಒಂದೂವರೆ ದಶಕ ಸಕ್ರಿಯ ರಾಜಕಾರಣದಲ್ಲಿರುವ ಮಾತನ್ನು ಆಡಿದ್ದಾರೆ. ವಯಸ್ಸು ೭೫ ದಾಟಿರುವ ನಾಯಕರಿಗೆ ಬಿಜೆಪಿ ಉಚಿತವಾಗಿ ನೀಡುವ ಮಾರ್ಗದರ್ಶಕ ಮಂಡಲದ ಸದಸ್ಯತ್ವವನ್ನು ೭೮ ವರ್ಷದ ಯಡಿಯೂರಪ್ಪ ನಿರಾಕರಿಸಿದ್ದಾರೆ. ಸದಸ್ಯತ್ವ ಕೊಡಲು ಮುಂದಾಗಿದ್ದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಮಕಮಕ ನೋಡುವಂತಾಗಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂಥ ರಾಜಕಾರಣಿಗಳು ಹಲವರಿದ್ದಾರೆ. ಮತ್ತೊಂದು ಕಡೆಯಲ್ಲಿ ಅಧಿಕಾರ ಸಾಕು ಎಂದವರೂ, ಬೇಡ ಎಂದವರೂ ಇದ್ದಾರೆ. ಪ್ರಧಾನಿ ಜವಾಹರ ಲಾಲ್ ನೆಹರೂ ಸರ್ಕಾರದ ನೀತಿಯ ಕಟು ಟೀಕಾಕಾರರಾಗಿದ್ದ ರಾಮ ಮನೋಹರ ಲೋಹಿಯಾ, ತಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೂ ತಾವು ವಿರೋಧ ಪಕ್ಷಗಳ ಸಾಲಿನಲ್ಲೇ ಮುಂದುವರಿಯುವುದಾಗಿ ಹೇಳಿದ್ದರು. ೧೯೭೭ರಲ್ಲಿ ಲೋಕಸದಭೆಗೆ ಆಯ್ಕೆಯಾಗಿದ್ದ ಜನಸಂಘ/ಬಿಜೆಪಿಯ ನಾನಾಜಿ ದೇಶಮುಖ್ರಿಗೆ ಮುರಾರಜಿ ದೇಸಾಯಿ ತಮ್ಮ ಸಂಪುಟಕ್ಕೆ ಸೇರುವಂತೆ ಆಹ್ವಾನಿಸಿದ್ದರು. ಸ್ವತಃ ಜಯಪ್ರಕಾಶ ನಾರಾಯಣ ಒತ್ತಡ ಹಾಕಿದ್ದರು. ಆದರೆ ನಾನಾಜಿ ಒಪ್ಪಿಕೊಳ್ಳಲಿಲ್ಲ. ರಾಜಕೀಯೇತರ ಸಾಮಾಜಿಕ ಸೇವೆಗೆ ಅವರು ತಮ್ಮನ್ನು ಅರ್ಪಿಸಿಕೊಂಡರು. ಮುಂದೆ ಅವರಿಗೆ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತು.
೧೯೬೯ರಲ್ಲಿ ಬೆಂಗಳೂರು ಲಾಲ್ಬಾಗ್ನಲ್ಲಿ ನಡೆದ ಏಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ಹೋಳಾಯಿತು. ಒಂದು ಕವಲು ಇಂದಿರಾಗಾಂಧಿ ಅವರನ್ನು ಒಪ್ಪಿಕೊಂಡಿತು. ಮತ್ತೊಂದು ಮುರಾರಜಿ ದೇಸಾಯಿ ಹಿಂದೆ ನಿಂತಿತು. ಮುರಾರಜಿ ಜೊತೆ ನಿಂತವರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರೂ ಒಬ್ಬರು. ಆ ಸಂದರ್ಭದಲ್ಲಿ ಅವರು ಏಐಸಿಸಿ ಅಧ್ಯಕ್ಷರೂ ಆಗಿದ್ದರು. ತಾವು ಹೊಂದಿದ್ದ ಸಿಎಂ ಸ್ಥಾನಕ್ಕೆ ವೀರೇಂದ್ರ ಪಾಟೀಲರನ್ನು ಕರೆತಂದು ಕುಳ್ಳಿರಿಸಿದ ಎಸ್ಸೆನ್ ಮತ್ತೆಂದೂ ಸಕ್ರಿಯ ರಾಜಕಾರಣಕ್ಕೆ ಯಾರು ಎಷ್ಟೇ ಒತ್ತಾಯ ಮಾಡಿದರೂ ಮರಳಲಿಲ್ಲ. ರಾಜಕೀಯಕ್ಕೆ ಅನುಭವದ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದ ಅವರು, ಅನುಭವವನ್ನು ನಾವೇ ಬಳಸಬೇಕೆಂದೇನೂ ಇಲ್ಲ ಅದನ್ನು ಹಂಚಿಕೊಳ್ಳಲು ಬರುತ್ತದೆ ಎನ್ನುತ್ತಿದ್ದರು. ಮಾರ್ಗದರ್ಶನ ಎಂದು ಈಗ ಪದೇ ಪದೇ ಬಳಕೆಯಾಗುವ ಪದಕ್ಕೆ ಅಂದು ಇದ್ದ ಅರ್ಥ, ನಿಜದಲ್ಲಿ ನಿಜವಾಗಿತ್ತು.
ಕಾಮರಾಜ್ ಪ್ಲಾನ್ ಎನ್ನುವುದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಜಾರಿಗೆ ಬಂದ ಪಕ್ಷದ ಆಂತರಿಕ ಬೆಳವಣಿಗೆ. “ಕೆಲಸಕ್ಕೆ ಬಾರದವರನ್ನು, ಕೈಲಾಗದವರನ್ನು (ಮುದಿಯರು ಎಂದು ನೇರವಾಗಿ ಹೇಳಿರಲಿಲ್ಲ) ಸಕ್ರಿಯ ರಾಜಕೀಯದಿಂದ ದೂರವಿಡುವುದಕ್ಕೆ ಕಾಮರಾಜ ನಾಡಾರರು ರೂಪಿಸಿದ ಯೋಜನೆ ಅದಾಗಿತ್ತು. ಮುಖ್ಯವಾಗಿ ಇಂದಿರಾ ಗಾಂಧಿಗೆ ಬೇಡವಾದವರನ್ನು ಹೊರಗಿಡುವ ಪ್ಲಾನೂ ಅದಾಗಿತ್ತು.ಸಂಕ್ಷಿಪ್ತ ಅವಧಿಗೆ ಅದು ಯಶಸ್ಸನ್ನೂ ಕಂಡಿತು. ಅಧಿಕಾರಕ್ಕೆ ಬಂದವರು/ ಬರಬೇಕೆಂದು ಕಾದು ನಿಂತವರು ಅದನ್ನು ಅಷ್ಟೆಲ್ಲ ಸುಲಭದಲ್ಲಿ ಬಿಟ್ಟುಕೊಡುವ ಉದಾರಿಗಳೇನೂ ಅಲ್ಲ. ಕಾಮರಾಜ್ ಪ್ಲಾನ್ ಎನ್ನುವುದು ಅವರ ಸಾವಿನೊಂದಿಗೆ ಸತ್ತೇ ಹೋಯಿತು. ಈ ಯೋಜನೆ ಕಾರಣವಾಗಿ ಅತ್ಯಲ್ಪ ಅವಧಿಗೆ ನೇಪಥ್ಯಕ್ಕೆ ಸರಿದಿದ್ದ ಮುದುಕ ತದುಕರೆಲ್ಲರೂ ಮತ್ತೆ ರಂಗದ ಮೇಲೆ ಬಂದರು. ಯಾವುದೆ ಒಂದು ಪಕ್ಷಕ್ಕೆ ಸೀಮಿತವಲ್ಲದ ಎಲ್ಲ ಪಕ್ಷಗಳ ಬಹುತೇಕ ಎಲ್ಲ ರಾಜಕಾರಣಿಗಳಿಗೂ ಸಮಾನವಾಗಿ ಅನ್ವಯಿಸುವ ಮಾತು ಎಂದರೆ ಅಧಿಕಾರ ಎನ್ನುವುದು ತಮ್ಮ ಕುಟುಂಬದ ಜಹಗೀರು ಎಂದು ಭಾವಿಸುವುದು. ತಾವಲ್ಲವಾದರೆ ತಮ್ಮ ಕುಟುಂಬದ ಒಬ್ಬರಾದರೂ ಅಧಿಕಾರದಲ್ಲಿ ಇರತಕ್ಕದ್ದು ಎನ್ನುವುದು ಅವರ ಅಜೆಂಡಾ.
ಇದೀಗ ಮುದುಕರಲ್ಲದವರ ಕೈಗೂ ಅಧಿಕಾರ ಕೊಟ್ಟು ನೋಡುವ ತಂತ್ರಕ್ಕೆ ಬಿಜೆಪಿ ಬಂದಿರುವಂತಿದೆ. ಹೊಸಬರ ಕೈಗೆ ಅಧಿಕಾರ ಕೊಟ್ಟಾಕ್ಷಣದಲ್ಲೇ ಕೇಳಿ ಬರುವ ಮಾತು: ಅವರಿಗೆ ಆಡಳಿತ ಅನುಭವವಾದರೂ ಏನಿದೆ? ಅವರು ಮೊದಲ ಬಾರಿಗೆ ಶಾಸಕರಾದವರಲ್ಲವೆ? ಆರೆಂಟು ಅವಧಿಗೆ ಶಾಸಕರಾದ ಹಿರಿಯರು ಇರುವಾಗ ಈ ಆಯ್ಕೆ ಸರಿಯೆ ನ್ಯಾಯ ಸಮ್ಮತವೇ ಎಂಬಿತ್ಯಾದಿ ಗುಸುಗುಸು ಬಿಜೆಪಿಯಲ್ಲೂ ನಡೆದಿದೆ. ಹಾಗಂತ ಮೋದಿ ಭಯದಲ್ಲಿರುವ ಅವರಲ್ಲಿ ಯಾರಿಗೂ ಧ್ವನಿ ಏರಿಸುವ ತಾಕತ್ತು ಇಲ್ಲ. ಹೊಸಬರಾದರೆ ಆಡಳಿತ ನಡೆಸಲು ಬರೋಲ್ಲ ಎನ್ನುವುದು ಎಲ್ಲರ ವಿಚಾರದಲ್ಲೂ ಸಮಾನವಾಗಿ ಅನ್ವಯಿಸುವುದಿಲ್ಲ. ಇಂದಿರಾ ಗಾಂಧಿ ಹತ್ಯೆ ಆದ ಸಮಯದಲ್ಲಿ ವಾರಾಣಸಿಯಲ್ಲಿದ್ದ ರಾಜೀವ್ ಗಾಂಧಿ ಅವರನ್ನು ವಾಯುಪಡೆಯ ವಿಶೇಷ ವಿಮಾನದಲ್ಲಿ ಕರೆತಂದು ಪ್ರಧಾನಿಯನ್ನಾಗಿ ಮಾಡಲಾಯಿತು. ಪೈಲಟ್ ಕೆಲಸ ಮಾಡಿಕೊಂಡಿದ್ದ ಮತ್ತು ಅದುವರೆಗೆ ರಾಜಕಾರಣದಿಂದ ದೂರವೇ ಇದ್ದ ರಾಜೀವ್ ಮುಂದೆ ಉತ್ತಮ ಪ್ರಧಾನಿ, ಜನಪ್ರಿಯ ನಾಯಕರೆನಿಸಿದರು.
ಒಂದು ಆಕಸ್ಮಿಕದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಚಂದ್ರಶೇಖರ್ ಪ್ರಧಾನಿಯಾದರು. ಅವರು ಲೋಕಸಭೆಗೆ ಪದೇ ಪದೇ ಆಯ್ಕೆಯಾಗಿದ್ದರು. ಆದರೆ ಪ್ರಧಾನಿ ಆಗುವವರೆಗೆ ಅವರು ಯಾವ ಅಧಿಕಾರವನ್ನೂ ನಿಭಾಯಿಸಿರಲಿಲ್ಲ. ಕೇಂದ್ರದಲ್ಲಿ ಮಂತ್ರಿಯಾಗುವುದು ಹಾಗಿರಲಿ, ತಾಲ್ಲೂಕು ಬೋರ್ಡ್ನ ಅಧ್ಯಕ್ಷ ಕೂಡಾ ಆಗಿರಲಿಲ್ಲ. ಪ್ರಧಾನಿಗಿರಿ ನೇರವಾಗಿ ಕೈಗೆ ಬಂತು. ಆದರೆ ಅವರ ಆಡಳಿತಾವಧಿ ಕೂಡಾ ದೇವೇಗೌಡರಂತೆ ಅಲ್ಪಾಯುಷಿ ಆಯಿತು. ಅದೇನೇ ಇರಲಿ. ಇದೀಗ ಬಿಜೆಪಿ ವರಿಷ್ಟ ಮಂಡಳಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯತ್ನಕ್ಕೆ ಮುಂದಾಗಿದೆ. ಅದಕ್ಕೆ ಪೂರ್ವದಲ್ಲಿ ದೇಶದಲ್ಲಿ ಅಜಮಾಸು ೬೦ ಕೋಟಿಯಷ್ಟಿರುವ ಯುವ ಮತದಾರರನ್ನು ಓಲೈಸುವುದಕ್ಕೆ ಬೇಕಾದ ಬಗೆಬಗೆಯ ಕಾರ್ಯ ತಂತ್ರಗಳನ್ನು ಹೆಣೆಯುತ್ತಿದೆ. ಯುವ ಮತದಾರರ ಮುಂದೆ ವಯಸ್ಸಾದವರನ್ನು ನಿಲ್ಲಿಸುವುದಕ್ಕೂ ಬದಲಾಗಿ ಯುವ ಮುಖಗಳನ್ನು ಸಾದರಪಡಿಸುವುದಕ್ಕೂ ಇರುವ ವ್ಯತ್ಯಾಸವನ್ನು ಅದು ಮನವರಿಕೆ ಮಾಡಿಕೊಂಡಿರುವಂತಿದೆ.
ಇಲ್ಲಿ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಕೈಗೆ ರಾಜ್ಯವನ್ನು ಕೊಟ್ಟಂತೆ ಗುಜರಾತ್, ಅಸ್ಸಾಮದಲ್ಲೂ “ಯುವಕರ” ಕೈಗೆ ಆಡಳಿತ ಒಪ್ಪಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭೂಪೇಂದ್ರ ಪಟೇಲ್ ಹಾಗೂ ಬೊಮ್ಮಾಯಿ ಆಯ್ಕೆಯ ಹಿಂದೆ ಜಾತಿ ತುಷ್ಟೀಕರಣ ನೀತಿ ಇದೆ ಎಂದು ಯಾರೂ ಹೇಳಬಹುದು. ಯಡಿಯೂರಪ್ಪ ಹಿಂದೆ ನಿಂತಿರುವ ಲಿಂಗಾಯತ ವೀರಶೈವ ಸಮುದಾಯ ಪಕ್ಷ ಬಿಟ್ಟು ಹೋಗಲಾಗದಂತೆ ಬೊಮ್ಮಾಯಿ ಕೂರಿಸಿ ತಂತ್ರ ಹೆಣೆಯಲಾಗಿದೆ. ಯಡಿಯೂರಪ್ಪ ಇದೀಗ ವಿಧಾನ ಸಭೆಯ ಕೊನೆ ಸಾಲಿಗೆ ಸಂದಿದ್ದಾರೆ. ಸದ್ಯ ಬಿಜೆಪಿ ವಿರುದ್ಧ ಹೋಗುವುದೆಂದರೆ ಬೊಮ್ಮಾಯಿ ವಿರುದ್ಧ ಹೋದಂತೆ ಎಂದು ತಿಳಿದಿರುವ ಲಿಂಗಾಯತ ವೀರಶೈವ ಸಮುದಾಯ ಗಪ್ಚುಪ್ ಆಗಿದೆ.
ಅಲ್ಲಿ ಗುಜರಾತಿನಲ್ಲಿ ಎಲ್ಲ ದೃಷ್ಟಿಯಿಂದಲೂ ಪ್ರಭಾವಿಗಳಾಗಿರುವ ಪಟೇಲ್ ಸಮುದಾಯದ ಮೂಗಿಗೆ ತುಪ್ಪವನ್ನು ಸವರುವ ಕೆಲಸವನ್ನು ಮೋದಿ-ಶಾ ಜೋಡಿ ಮಾಡಿದೆ. ಪಟೇಲರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ನಿಲ್ಲುವುದಕ್ಕೆ ಏನೆಲ್ಲ ಬೇಕೋ ಆ ಎಲ್ಲ ತಂತ್ರವೂ ಭೂಪೇಂದ್ರ ಪಟೇಲ್ ಆಯ್ಕೆಯಲ್ಲಿದೆ. ಎಲ್ಲೀವರೆಗೆ ಜಾತಿ,ಹಣ ಆಧರಿಸಿದ ಚುನಾವಣೆ ನಡೆಯುತ್ತಿರುತ್ತದೋ ಅಲ್ಲೀವರೆಗೆ ಇಂಥದ್ದು ನಡೆಯುತ್ತಲೇ ಇರುತ್ತದೆ. ಮೋದಿ ಮತ್ತು ಶಾರಿಗೆ ಗುಜರಾತ್ ತವರು ರಾಜ್ಯ. ಅಲ್ಲಿ ಪಕ್ಷ ಸೋಲುವುದು ಎಂದರೆ ಇವರಿಬ್ಬರೂ ಮುಖಡಿಯಾಗಿ ಬಿದ್ದಂತೆ.