ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ
by-ಕೆಂಧೂಳಿ
ಚಿತ್ರದುರ್ಗ,ಫೆ,24-ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ ರುಪಾಯಿ ಅನುದಾನ ಕಾಯ್ದಿರಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಿದೆ.
ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಶಾಸಕರುಗಳಾದ ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ ಅವರಿಗೆ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯದ ಪತ್ರ ಹಸ್ತಾಂತರಿಸಿ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಲಾಯಿತು.
ಭದ್ರಾ ಮೇಲ್ದಂಡೆ ಕಾಮಗಾರಿ ಅನುದಾನ ಕೊರತೆ ಕಾರಣಕ್ಕೆಆಮೆಗತಿಯಲ್ಲಿ ಸಾಗಿದೆ. ಯೋಜನೆ ಆರಂಭಿಸಿದಾಗ ಇದ್ದ ಉತ್ಸಾಹ ಹಾಗೆಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಂಡು ಬಯಲು ಸೀಮೆ ರೈತರ ಉತ್ಪಾದನಾ ಸಾಮರ್ಥ್ಯ ಮತ್ತಷ್ಟು ಇಮ್ಮಡಿಯಾಗುತ್ತಿತ್ತು. ನಮ್ಮನಾಳುವ ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಕಾರಣಕ್ಕೆ ಸಾಧ್ಯವಾಗದೇ ಹೋಗಿದೆ. 2018 ರ ದರಪಟ್ಟಿ ಅನುಸಾರ ಭದ್ರಾ ಮೇಲ್ದಂಡೆ ಕಾಮಗಾರಿಯ 21 ಸಾವಿರ ಕೋಟಿ ರು ವೆಚ್ಚಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ದರಪಟ್ಟಿ ಪರಿಷ್ಕರಣೆ ಹಂತದಲ್ಲಿದ್ದು ಪರಿಷ್ಕೃತವಾದಲ್ಲಿ ಯೋಜನಾ ವೆಚ್ಚಕ್ಕೆ ಮತ್ತೆ ಸಾವಿರಾರು ಕೋಟಿ ರು ಸೇರ್ಪಡೆಯಾಗುತ್ತದೆ. ಸಾಲದೆಂಬಂತೆ ಅರ್ಧಕ್ಕೆ ನಿಂತ ಕಾಮಗಾರಿಗಳು ದೀರ್ಘಕಾಲದವರೆಗೆ ಗುಣಮಟ್ಟ ಕಾಯ್ದುಕೊಳ್ಳುತ್ತವೆ ಎಂಬ ಗ್ಯಾರಂಟಿಗಳು ಇಲ್ಲವಾಗಿದೆ. ಬಿಸಿಲಿಗೆ ಬಾಯ್ದೆರೆದಿರುವ ಕಾಲುವೆಗಳಲ್ಲಿ ನಿೀರು ತುಂಬದಿದ್ದರೆ ಹಾಳಾಗುವ ಸಾಧ್ಯತೆಗಳೇ ಹೆಚ್ಚು ಎಂದು ಹಕ್ಕೊತ್ತಾಯ ಪತ್ರದಲ್ಲಿ ತಿಳಿಸಲಾಗಿದೆ.
ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ರು ನೀಡುವುದಾಗಿ 2022-23 ರ ಬಜೆಟ್ ನಲ್ಲಿ ಘೋಷಿಸಿತ್ತು. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆಯಬಾರದು.ತನ್ನ ಪಾಲಿನ ಬದ್ದತೆ ಮೆರೆಯಲೇ ಬೇಕಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿದ್ದಲ್ಲ.
ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಈಗಾಗಲೇ ಜಲಶಕ್ತಿ ರಾಜ್ಯ ಸಚಿವ ಹಾಗೂ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿ ಜಿಲ್ಲೆ ಪ್ರತಿನಿಧಿಸುವ ವಿ.ಸೋಮಣ್ಣ ಅವರಿಗೂ ಮನವಿ ಮಾಡಿದೆ. ಕಳೆದ ಗಾಂಧಿ ಜಯಂತಿಯಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ 45 ದಿನದ ಒಳಗಾಗಿ ಮೊದಲೇ ಕಂತು ಬಿಡುಗಡೆ ಮಾಡಿಸುವುದಾಗಿ ಹೇಳಿ ಹೋದವರು ಮತ್ತೆ ಹಿಂತಿರುಗಿ ನೋಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಪದೇ ಪದೆ ವಂಚನೆ, ದ್ರೋಹಕ್ಕೆ ಒಳಗಾಗುತ್ತಿದೆ. ರಾಜ್ಯ ಸರ್ಕಾರ ಕೂಡಾ ಇದೇ ಹಾದಿ ಹಿಡಿಯಬಾರದೆಂಬುದು ಸಮಿತಿ ಎಚ್ಚರಿಸಿದೆ.
ಮಾರ್ಚ್ ತಿಂಗಳಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ ಕನಿಷ್ಟ ಐದು ಸಾವಿರ ಕೋಟಿ ರುಪಾಯಿ ಅನುದಾನ ಕಾಯ್ದಿರಿಸುವ ಮೂಲಕ ಕಾಮಗಾರಿಗೆ ಚುರುಕಿನ ವೇಗ ನೀಡಬೇಕು.ಜಿಲ್ಲೆಯ ಎಲ್ಲ ಶಾಸಕರು ಸಿಎಂ ಮುಂದೆ ಹಠ ಹಿಡಿದು ಕುಳಿತು ಐದು ಸಾವಿರ ಕೋಟಿ ರು ಅನುದಾನ ಘೋಷಣೆ ಮಾಡಿಸುವುದರ ಮೂಲಕ ನೆಲದ ಋಣ ತೀರಿಸಬೇಕೆಂದು ಹಕ್ಕೊತ್ತಾಯ ಪತ್ರದಲ್ಲಿ ತಿಳಿಸಲಾಗಿದೆ.
ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ಡಿ.ಸುಧಾಕರ್, ಜಿಲ್ಲೆಯ ಎಲ್ಲ ಶಾಸಕರು ಈಗಾಗಲೇ ಸಿಎಂ ಭೇಟಿ ಮಾಡಿ ಬಾಕಿ ಬಿಲ್ ಹೊರತು ಪಡಿಸಿ ಮೂರು ಸಾವಿರ ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೀರಾವರಿ ಅನುಷ್ಟಾನ ಹೋರಾಟ ಸಮಿತಿಯವರು ಅನುದಾನ ಬಿಡುಗಡೆಗೆ ಸಂಸದರ ಮೇಲೆ ಒತ್ತಡ ಹಾಕುವಂತೆ ಸಲಹೆ ಮಾಡಿದರು.
ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನ, ಅನುದಾನ ಬಳಕೆಗೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ಸಭೆಯನ್ನು ಚಿತ್ರದುರ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಸಭೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯ ಸಂಸದ ಗೋವಿಂದ ಕಾರಜೋಳ ವಹಿಸಲಿ ಎಂದು ಸಚಿವ ಸುಧಾಕರ್ ಒತ್ತಾಯಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಭದ್ರಾ ಮೇಲ್ದಂಡೆ ಕಾಮಗಾರಿಯ ಇನ್ನೆರೆಡುವರೆ ವರ್ಷದ ಒಳಗೆ ಪೂರ್ಣಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ವಿಚಾರದಲ್ಲಿ ತನ್ನ ಬದ್ದತೆ ಪ್ರದರ್ಶಿಸಲಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದರು.
ಶಾಸಕ ವಿರೇಂದ್ರ ಪಪ್ಪಿ ಮಾತನಾಡಿ, ಭದ್ರಾ ಕಾಮಗಾರಿ ಪೂರ್ಣಗೊಳ್ಳುವ ತನಕ ಜನರ ಹೋರಾಟದ ಪರವಾಗಿ ನಿಲ್ಲುವುದಾಗಿ ಹೇಳಿದರು.ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಸಚಿವ, ಶಾಸಕದ್ವಯರಿಗೆ ಹಕ್ಕೊತ್ತಾಯದ ಪತ್ರ ಹಸ್ತಾಂತರಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಜೆ.ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಲಕ್ಷಣರೆಡ್ಡಿ, ಅನಂತರೆಡ್ಡಿ, ಸಿಪಿಐ ಮುಖಂಡ ಸುರೇಶ್ ಬಾಬು, ಬಸವರಾಜಪ್ಪ, ರೈತ ಸಂಘದ ಮುಖಂಡರಾದ ಕೆ.ಪಿ.ಭೂತಯ್ಯ,ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಚೇತನ್ ಯಳನಾಡು, ಹುಣಿಸೆಕಟ್ಟೆ ಕಾಂತರಾಜ್, ಸುಧ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.