ಬೆಂಗಳೂರು ಆ,21-ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ ತಕ್ಕಂತೆ ಲಭ್ಯವಾಗಲು ಕೃಷಿ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ..
“ರೈತ ಕರೆ ಕೇಂದ್ರ” ಉನ್ನತೀಕರಣದ ಮಹತ್ವದ ಒಡಂಬಡಿಕೆಗೆ ವಿಕಾಸಸೌಧ ಕಚೇರಿಯಲ್ಲಿ ಇಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಸಹಿ ಹಾಕಿದರು.
ಸಚಿವ ಚಲುವರಾಯಸ್ವಾಮಿಯವರು ಕೃಷಿ ಇಲಾಖೆಯ ಅಧಿಕಾರ ವಹಿಸಿಕೊಂಡ ನಂತರ ರೈತರ ಅಭಿವೃದ್ಧಿ ರೈತ ಪರ ಕೆಲಸಕ್ಕೆ ಒತ್ತು ನೀಡಿದ್ದು, ಈಗಾಗಲೇ ರೈತ ಕರೆ ಕೇಂದ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಫರ್ಶ ನೀಡಿರುವ ಸಚಿವರು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡರು..
ಒಡಂಬಡಿಕೆ ನಂತರ ಮಾತನಾಡಿದ ಸಚಿವರು, ಬೆಳೆ ಮಾಹಿತಿ, ಹವಾಮಾನ ಮಾಹಿತಿ, FRUITS ದತ್ತಾಂಶ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಸೇರಿದಂತೆ ಪ್ರಮುಖ ಕೃಷಿ ಮಾಹಿತಿಗಳನ್ನ ಸಮಗ್ರಗೊಳಿಸಿ, ವಿಶ್ಲೇಷಿಸಿ, ರೈತರಿಗೆ ನಿಖರ ಮತ್ತು ತಂತ್ರಜ್ಞಾನ ಆಧಾರಿತ ಸಲಹಾ ಸೇವೆಗಳನ್ನ ಒದಗಿಸಲು ಅನುಕೂಲವಾಗುತ್ತದೆಂದು ತಿಳಿಸಿದರು.
ಈ ಹಿಂದೆ ರೈತ ಕರೆ ಕೇಂದ್ರದ ಸಹಾಯವಾಣಿಯ 8 ಬೇರೆ ಬೇರೆ ನಂಬರ್ಗಳು ಚಾಲ್ತಿಯಲ್ಲಿತ್ತು. ಇದನ್ನು ಸರಳೀಕರಿಸುವ ಉದ್ದೇಶದಿಂದ ಸಚಿವರು ಏಕ ರೈತ ಕರೆ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ್ದರು. ಇದೀಗ ಅದಕ್ಕೆ ಮತ್ತಷ್ಟು ಹೈಟೆಕ್( AI) ಸ್ಪರ್ಶ ನೀಡುತ್ತಿರುವ ಸಚಿವರು BEL ಸಂಸ್ಥೆ ಯೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದರು..
ಒಪ್ಪಂದದ ಪ್ರಮುಖ ಅಂಶಗಳು:
ಬಿ.ಇ.ಎಲ್ ಸಂಸ್ಥೆಯ EQUINOX ವೇದಿಕೆಯನ್ನು ಕೃಷಿ ಕ್ಷೇತ್ರಕ್ಕೆ ಹೊಂದಿಸುವುದು. ತಾಂತ್ರಿಕ ಸಲಹೆ ಹಾಗೂ ಮಾಹಿತಿ (ದತ್ತಾಂಶ) ಸಂಯೋಜನೆಗೆ ಬೆಂಬಲ ನೀಡುವುದು.
ಕೇಂದ್ರೀಕೃತ ಡ್ಯಾಶ್ಬೋರ್ಡ್ ಗೆ ಕೃಷಿ ಇಲಾಖೆಯು ಕೃಷಿ ಸಂಬಂಧಿತ ಮಾಹಿತಿಗಳು ಸರ್ಕಾರಿ ಯೋಜನೆಗಳು ಮತ್ತು ನೀತಿ ವಿವರಗಳನ್ನ ಒದಗಿಸುತ್ತದೆ.
ಈ ಯೋಜನೆ 2 ಹಂತಗಳಲ್ಲಿ ಜಾರಿಯಾಗುವುದು. ಮೊದಲನೆಯದಾಗಿ ಪ್ರಾಯೋಗಿಕ ಹಂತ (ಒಂದು ವರ್ಷ) ನಂತರ ಪೂರ್ಣ ಪ್ರಮಾಣದಲ್ಲಿ (4 ವರ್ಷ) ಜಾರಿಗೆ ತರುವುದು.
ಈ ಯೋಜನೆ ರಾಜ್ಯ ಸರ್ಕಾರದ ರೈತರ ಬಲವರ್ಧನೆಗೆ ತಂತ್ರಜ್ಞಾನ ಬಳಸುವ ಬದ್ಧತೆಯ ಪ್ರತಿಬಿಂಬವಾಗಿದೆ. ರೈತ ಕರೆ ಕೇಂದ್ರವು ರೈತ ಸ್ನೇಹಿ ಏಕಗವಾಕ್ಷಿ (Singal Widow) ವ್ಯವಸ್ಥೆಯಾಗಿದೆ.
ರೈತರ ಪ್ರಶ್ನೆಗಳಿಗೆ ಒಂದೇ ಸಹಾಯವಾಣಿಯನ್ನು ಒದಗಿಸುವುದು (ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ) ವಿವಿಧ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದು.
ಸುಧಾರಿತ ಸಂವಹನ ಸಾಧನಗಳಾದ ವ್ಯಾಟ್ಸ್ಅಪ್, ಟೆಲಿಗ್ರಾಂ, ಚಾಟ್ಬಾಟ್, ವಿಡಿಯೋ ಕರೆ, ವಿಡಿಯೋ/ಆಡಿಯೋ ಕ್ಲಿಪ್ಗಳು ಡ್ಯಾಶ್ಬೋರ್ಡನ್ನು ಅಭಿವೃದ್ಧಿಪಡಿಸುವುದು ಹಾಗೂ AI ಆಧಾರಿತ ನಿರ್ಧಾರ ಬೆಂಬಲ ವ್ಯವಸ್ಥೆಯನ್ನ ಅಭಿವೃದ್ಧಿಪಡಿಸುವುದು.
ಇದೇ ವೇಳೆ ಹವಾಮಾನ ಬದಲಾವಣೆಯಂಥ ಈ ಸಂದರ್ಭದಲ್ಲಿ ಭತ್ತದ ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಯಲು ಭತ್ತದ ಕೃಷಿಯಲ್ಲಿ ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಿಸಲು ಹಾಗೂ ನೀರನ್ನು ಮಿತವಾಗಿ ಬಳಸಿ ಭತ್ತ ಬೆಳೆಯುವ ಹೊಸ ಯೋಜನೆಗೆ ಸಚಿವರು J-PAL ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದರು.
ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯ ಆಯ್ದ ಗ್ರ್ರಾಮಗಳಲ್ಲಿ 210 ರೈತರ ಜಮೀನಿನಲ್ಲಿ ಪರ್ಯಾಯವಾಗಿ ನೀರು ನಿಲ್ಲಿಸುವ ಮತ್ತು ಒಣಗಿಸುವ ಪ್ರಕ್ರಿಯೆಯ ಹಾಗೂ ಭತ್ತದ ಬೆಳೆಯಲ್ಲಿ ನೇರ ಬಿತ್ತನೆ ತಾಂತ್ರಿಕತೆಯನ್ನು ಅಳವಡಿಸಿ, ಭತ್ತದ ಕೃಷಿ ಮಾಡುವ ಯೋಜನೆಯ ಮಹತ್ವದ ಒಪ್ಪಂದಕ್ಕೆ ಚಲುವರಾಯಸ್ವಾಮಿಯವರು ಸಹಿ ಹಾಕಿದರು.
ಈ ಯೋಜನೆಗೆ ನೋಂದಣಿ ಮಾಡಿದ ರೈತರಿಗೆ ಎಕರೆಗೆ ರೂ.4000ರ ವರೆಗೆ ಹಾಗೂ 2 ಎಕರೆಗೆ ರೂ.8000ರ ವರೆಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಜಿ.ಟಿ. ಪುತ್ರ, ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣ ರೆಡ್ಡಿ, BEL ಹಾಗೂ J-PAL ಸಂಸ್ಥೆಯ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.