– ಶ್ರೀ ಡಾ. ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಕಸ-ರಸ.
ರಸವಿಲ್ಲದ್ದು ಕಸ. ಕಬ್ಬು ಗಾಣದಲಿ ಸಿಕ್ಕು ಹೊರಬರುತ ಬರುತ ಆಗುವುದು ಕಸ! ಕಸದಲ್ಲಿದೆ ರಸ! ಒಣ ಹುಲ್ಲು ತಿಂದ ಹಸು ಎಮ್ಮೆ ನೀಡುವುದು ಹಾಲ! ಕಸದಿಂದ ಗೊಬ್ಬರ. ಅದ ಹೀರುವ ತರು ನೀಡುವುದು ರಸಭರಿತ ಹಣ್ಣು!ಕಸದಿಂದ ರಸ! ಕಸ ತ್ಯಾಜ್ಯ ಬಳಸಿದ ಗೊಂಬೆ ಹಾರಾದಿಗಳದೆಷ್ಟು ಚೆನ್ನ! ರಸ ಸತ್ತ್ವವಿಲ್ಲದ ವಸ್ತು ಇಲ್ಲ. ನಿಜ, ಕಸದಲ್ಲಿ ರಸ ತುಸು ಕಡಿಮೆ! ಕಸ ಗಾತ್ರ ಹೆಚ್ಚು, ರಸ ಗಾತ್ರ ಕಡಿಮೆ! ಕಸ ಸ್ಥೂಲ, ರಸ ಸೂಕ್ಷ್ಮ. ಕಸ ದುರ್ಬಲ, ರಸ ಬಲಿಷ್ಠ! ಕಸ ತಿನ್ನುವುದಕ್ಕಿಂತ ಸತ್ತ್ವಯುತ ತುಸು ತಿನ್ನುವುದು ಮೇಲು! ಅಷ್ಟಿಷ್ಟಲ್ಲ ಮುಖ್ಯ. ಸತ್ತ್ವವೇನೆಂಬುದು ಮುಖ್ಯ! ಊಟ ಬಟ್ಟೆ ವಸತಿ ಆಸ್ತಿ ಬಂಧು ಮಿತ್ರ ಜನ ವಿದ್ಯೆ ಲೆಕ್ಕವಿಲ್ಲದ ಕಸಗಳಿಕೆಗಿಂತ ಲೆಕ್ಕದಲ್ಲಿರುವ ತುಸು ಸತ್ತ್ವರಸಗಳಿಕೆ ಇರಲಿ.ನೂರು ದಡ್ಡರಿಗಿಂತ ಒಬ್ಬ ಜಾಣ, ನೂರು ಹೇಡಿಗಳಿಗಿಂತ ಒಬ್ಬ ಶೂರ, ಎಲ್ಲರಿಗಿಂತ ತನ್ನ ತಾ ತಿಳಿದವ ಶ್ರೇಷ್ಠ!
ಕಸವನು ರಸವ ಮಾಡೋಣ, ಕಸ ಬಿಡುತಲಿ ರಸವ ಗ್ರಹಿಸೋಣ!!