ಅಂಚೆಯಣ್ಣನ ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ಸೇವಾಮನೋಭಾವ

Share

ಅಂಚೆಯಣ್ಣನ ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ಸೇವಾಮನೋಭಾವ

ಅದು ೧೯೮೦ನೇ ಇಸವಿ ಮೇ ತಿಂಗಳ ಮೊದಲನೇ ವಾರ. ನಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿದು ಮೂರು ವಾರಗಳ ಮೇಲಾಗಿತ್ತು. ಮೇ ಹತ್ತರ ಒಳಗೆ ಫಲಿತಾಂಶ ಬರುವ ನಿರೀಕ್ಷೆಯೂ ಇತ್ತು. ಫಲಿತಾಂಶದ ನಿಖರ ದಿನಾಂಕವನ್ನು ಅಂದಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಇನ್ನೂ ಪ್ರಕಟ ಮಾಡಿರಲಿಲ್ಲ. ಇಂದಿನ ಹಾಗೆ ಅಂತರ್ಜಾಲದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸುವ ಸವಲತ್ತು ಅಂದಿನ ದಿನಗಳಲ್ಲಿ ಉಪಲಬ್ಧವಿರಲಿಲ್ಲ. ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶಗಳನ್ನು ಪ್ರಕಟಿಸುವ, ಹಲವು ವರ್ಷಗಳ ಕಾಲ ನಡೆದು ಬಂದ ಪದ್ಧತಿಗೆ, ಪ್ರೌಢಶಿಕ್ಷಣ ಮಂಡಳಿ ತಿಲಾಂಜಲಿ ಕೊಟ್ಟು ಈಗಾಗಲೇ ದಶಕಗಳೇ ಸಂದಿದ್ದವು. ಕಳೆದ ಎರಡು ಮೂರು ವರ್ಷಗಳಲ್ಲಿ ಪ್ರೌಢಶಿಕ್ಷಣ ಮಂಡಳಿ ಯಾವ ದಿನಾಂಕವನ್ನೂ, ಫಲಿತಾಂಶ ಪ್ರಕಟಣೆಯ ದೃಷ್ಟಿಯಿಂದ, ಮುಂಗಡವಾಗಿ ನಿಗದಿಗೊಳಿಸದೆ, ಅಚಾನಕ್ಕಾಗಿ ಫಲಿತಾಂಶಗಳನ್ನು ಆಯಾಯ ಪ್ರೌಢಶಾಲೆಗಳಿಗೆ ರವಾನಿಸಿ, ಫಲಿತಾಂಶ ಹೊರಬೀಳುವ ದಿನದಂದು ಫಲಿತಾಂಶಗಳ ವಿವರಗಳನ್ನು ಮಾತ್ರ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಿಸುವ ನೂತನ ಪದ್ಧತಿಗೆ ಶರಣಾಗಿದ್ದು ವಿದ್ಯಾರ್ಥಿ ಸಮೂಹದಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸಿತ್ತು. ಒಟ್ಟಾರೆ ಎಸ್ಸೆಸ್ಸೆಲ್ಸಿ ಫಲಿತಾಂಶದ ವಿಷಯದಲ್ಲಿ ಸ್ಪಷ್ಟತೆಗಿಂತ ಹೆಚ್ಚಾಗಿ ಗೋಜು ಗೊಂದಲಗಳೇ ಪರೀಕ್ಷಾರ್ಥಿಗಳ ಮನಸ್ಸನ್ನು ಸವಾರಿ ಮಾಡುತ್ತಿದ್ದ ಕ್ಲಿಷ್ಟ ಸಮಯಘಟ್ಟವದು. ಇದೇ ಕಾರಣಕ್ಕೆ ಮೇ ತಿಂಗಳ ಮೊದಲನೇ ವಾರದಿಂದಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ನಮ್ಮಲ್ಲಿ ವಿಚಿತ್ರವಾದ ತಳಮಳ ಶುರುವಾಗಿತ್ತು. ಮೊದಲನೇ ವಾರದ ಅಂತ್ಯದಿಂದ ಮೊದಲುಗೊಂಡಂತೆ ಎರಡನೇ ವಾರದ ಕೊನೆಯವರೆಗಿನ ಯಾವ ದಿನದಲ್ಲಿಯಾದರೂ ಫಲಿತಾಂಶ ನಮ್ಮೂರಿನ ಹೈಸ್ಕೂಲು ತಲುಪುವ ಸಾಧ್ಯತೆಗಳು ನಿಚ್ಚಳವಾಗಿದ್ದವು. ಹೀಗಾಗಿ ಅಂಚೆ ಮೂಲಕವಾಗಿ ಬರುತ್ತಿದ್ದ ಫಲಿತಾಂಶದ ಮೇಲೆ ತೀವ್ರತರವಾದ ನಿಗಾ ಇಡುವ ಕೆಲಸ ಹತ್ತನೇ ತರಗತಿಯ ಪರೀಕ್ಷಾರ್ಥಿಗಳ, ಮೇ ತಿಂಗಳ, ಮೊದಲೆರಡು ವಾರಗಳ ತುರ್ತು ಅಗತ್ಯದ ಕೆಲಸವಾಗಿ ಮಾರ್ಪಾಡು ಹೊಂದಿತ್ತು.

 

ಸಾಮಾನ್ಯವಾಗಿ ಬೆಳಿಗ್ಗೆ ಹತ್ತರ ಒಳಗೆ ದುರ್ಗದ ಕಡೆಯಿಂದ ಊರಿಗೆ ಬರುತ್ತಿದ್ದ “ಮೃತ್ಯುಂಜಯ” ಲೈನ್ ಸರ್ವೀಸ್ ಬಸ್ಸಿನಲ್ಲಿ ನಮ್ಮೂರಿಗೆ ಅಂಚೆಪತ್ರಗಳು ದುರ್ಗದ ಮುಖ್ಯ ಅಂಚೆ ಕಾರ್ಯಾಲಯದಿಂದ ಬರುತ್ತಿದ್ದದ್ದು ದಶಕಗಳಿಂದ ನಡೆದು ಬಂದ ವಾಡಿಕೆ. ಕಾರಣಾಂತರಗಳಿಂದ, ಒಂದು ಪಕ್ಷ ಅಂಚೆಚೀಲಗಳು ಮೃತ್ಯುಂಜಯ ಬಸ್ಸಿನಲ್ಲಿ ಬಾರದೇ ಹೋದಲ್ಲಿ ಹನ್ನೊಂದು ಗಂಟೆಯ “ಜೈಹಿಂದ್” ಬಸ್ಸಿನವರೆಗೂ ಕಾಯಬೇಕಿತ್ತು. ಅಪರೂಪಕ್ಕೆ ಎನ್ನುವಂತೆ ಕೆಲವೊಮ್ಮೆ ಅಂಚೆಚೀಲಗಳು ಹನ್ನೆರೆಡು ಗಂಟೆಯ “ಗೀತಾ” ಬಸ್ಸಿನಲ್ಲಿಯೋ, ಎರಡು ಗಂಟೆಯ “ತಿಪ್ಪೇಸ್ವಾಮಿ” ಬಸ್ಸಿನಲ್ಲಿಯೋ ಬಂದಿದ್ದೂ ಇದೆ. ಆದರೆ ಊರಿನ ಅಂಚೆ ಈ ರೀತಿ ತಡವಾಗುತ್ತಿದ್ದದ್ದು ಅಪವಾದ ಮಾತ್ರವಾಗಿದ್ದು ಕಡೇ ಪಕ್ಷ “ಜೈಹಿಂದ್” ಬಸ್ಸಿನಲ್ಲಿ ಅಂಚೆಚೀಲಗಳು ಬಾರದೇ ಇದ್ದಲ್ಲಿ ಆ ಹೊತ್ತು ಊರಿಗೆ ಅಂಚೆ ಬರಲಾರದು ಎನ್ನುವುದು ಜನಮಾನಸದಲ್ಲಿ ಪ್ರಚಲಿತವಾದ ವಿಷಯವೇ ಆಗಿತ್ತು. ನಮ್ಮ ಮನೆ ಊರ ಬಸ್ ಸ್ಟ್ಯಾಂಡಿನಲ್ಲಿಯೇ ಇದ್ದ ಕಾರಣ ಹಲವಾರು ವರ್ಷದ ನನ್ನ ಸೀನಿಯರ್ ವಿದ್ಯಾರ್ಥಿಗಳ ಪ್ರತೀ ವರ್ಷದ ಮೇ ತಿಂಗಳ ಫಲಿತಾಂಶದ ನಿರೀಕ್ಷೆಯ ಪಟಾಲಂಗಳಿಗೆ ನಾನು ಸಾಕ್ಷಿಯಾಗಿದ್ದಿದೆ. ಬೆಳಿಗ್ಗೆ ಸುಮಾರು ಒಂಬತ್ತರ ವೇಳೆಗೇ ಬಸ್ ಸ್ಟ್ಯಾಂಡಿನಲ್ಲಿ ಜಮಾಯಿಸತೊಡಗುತ್ತಿದ್ದ, ಪ್ರಾರಂಭದಲ್ಲಿ ಒಬ್ಬರೋ, ಇಬ್ಬರೋ ವಿದ್ಯಾರ್ಥಿಗಳಿಂದ ಮೊದಲುಗೊಳ್ಳುತ್ತಿದ್ದ ಆ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಡೆ, ಸಾವಕಾಶವಾಗಿ ತನ್ನ ಸಂಖ್ಯೆಯಲ್ಲಿ ಗಣನೀಯ ವೃದ್ಧಿಯನ್ನು ಕಾಣುವ ಮೂಲಕ ಸುಮಾರು ಹತ್ತು ಗಂಟೆಯ ವೇಳೆಗೆ ಮೂವತ್ತರ ಆಜುಬಾಜಿಗೆ ಹಿಗ್ಗುತ್ತಿದ್ದದ್ದು ನಾನು ಮೇ ತಿಂಗಳ ಮೊದಲನೇ ಎರಡು ವಾರಗಳಲ್ಲಿ ತಪ್ಪದೇ ನೋಡುತ್ತಿದ್ದ ಸಾಮಾನ್ಯವಾದ ನೋಟ.

 

 

ಕೆಲವು ವರ್ಷಗಳಲ್ಲಿ, ಎಸ್ಸೆಸ್ಸೆಲ್ಸಿ ಫಲಿತಾಂಶಗಳು ವಿಳಂಬವಾಗಿ ಮೇ ತಿಂಗಳ ಕೊನೆಗೋ ಅಥವಾ ಜೂನ್ ತಿಂಗಳ ಮೊದಲೇ ವಾರದಲ್ಲಿಯೋ ಬಂದಿದ್ದೂ ಇದೆ. ಊರ ಬಸ್ ನಿಲ್ದಾಣದಲ್ಲಿ ಗುಂಪು ಸೇರುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ಸಂಖ್ಯೆ ಫಲಿತಾಂಶ ವಿಳಂಬವಾದ ವರ್ಷಗಳಲ್ಲಿ, ವಿಳಂಬದ ಅವಧಿಯ ಅನುಲೋಮ ಪ್ರಮಾಣದಲ್ಲಿ ಹಿಗ್ಗುತ್ತಾ ನಡೆದು ಫಲಿತಾಂಶ ಬರುವ ದಿನದ ಒಂದೆರೆಡು ದಿನಗಳ ಮುಂಚೆ ತನ್ನ ಗರಿಷ್ಠ ಸಂಖ್ಯೆಯನ್ನು ಮುಟ್ಟಿ, ಫಲಿತಾಂಶ ಬರುವ ದಿನದವರೆಗೂ ಅದೇ ಸಂಖ್ಯೆಯನ್ನು ಕಾಯ್ದುಕೊಂಡು ಹೋಗುತ್ತಿದ್ದ ವಿಲಕ್ಷಣ ಘಟನೆಯೊಂದಕ್ಕೆ ನಾನು ಸಾಕ್ಷಿಯಾಗಿದ್ದೂ ಇದೆ. ಪರೀಕ್ಷಾ ಫಲಿತಾಂಶ ವಿಳಂಬವಾದ ವರ್ಷಗಳಲ್ಲಿ, ವಿದ್ಯಾರ್ಥಿಗಳ ಮೇ ಮೊದಲೆರಡರ ವಾರಗಳ ಗುಂಪಿನಲ್ಲಿ ಕಾಣಿಸಿಕೊಳ್ಳದ ಹುಡುಗಿಯರು, ಮೂರನೇ ವಾರದ ಪ್ರಾರಂಭದ ದಿನಗಳಿಂದ ಬಸ್ಸುಸ್ಟ್ಯಾಂಡಿನಲ್ಲಿ ಗೋಚರಿಸುತ್ತಿದ್ದದ್ದು ಫಲಿತಾಂಶ ನಿರೀಕ್ಷೆಯ ಈ ಪ್ರಹಸನದ ಒಂದು ಪ್ರಮುಖ ನಿರ್ಣಾಯಕ ಘಟ್ಟವಾಗಿಯೇ ನನಗೆ ತೋರಿಬರುತ್ತಿತ್ತು. ಫಲಿತಾಂಶ ‘ಅತಿ’ ಎನ್ನುವ ಮಟ್ಟಕ್ಕೆ ವಿಳಂಬವಾದ ವರ್ಷ, ಊರಿನ ಆ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಊರ ಮುಖ್ಯ ಬಸ್ ನಿಲ್ದಾಣದಲ್ಲಿ ಜಮಾಯಿಸುತ್ತಿದ್ದದ್ದು ಒಂದು ವಿಶೇಷವಾದ ಸಂಗತಿಯೇ ಆಗಿತ್ತು. ಹುಡುಗರು ಬಸ್ ಸ್ಟ್ಯಾಂಡಿನ ಮಧ್ಯಭಾಗದಲ್ಲಿ ಗುಂಪುಗುಂಪಾಗಿ ನಿಂತು ಹರಟುತ್ತಿದ್ದರೆ, ಹುಡುಗಿಯರು ಕುಂಬಾರ ಕುರುಗೋಡಪ್ಪನ ದರ್ಜಿ ಅಂಗಡಿ ಕಂ ವಾಸದ ಮನೆಯ ಮುಂದಿನ ಜಗುಳಿಯಲ್ಲಿಯೋ, ಕಲ್ಲಪ್ಪದೇವರ ಪೂಜಾರಿ ಇಷ್ಟಲಿಂಗಯ್ಯನ ಮನೆಯ ಮುಂದಿನ ಚಾವಡಿಯಲ್ಲಿಯೋ ಅಥವಾ ಅದರ ಪಕ್ಕದಲ್ಲಿದ್ದ ಕುಂಬಾರ ಏಕಾಂತಪ್ಪನ, ದೊಡ್ಡ ಜಿವ್ವೆಮರದ ನೆರಳಿನಲ್ಲಿದ್ದ ಮನೆಯ, ಆ ದಿನಗಳಲ್ಲಿ ಏಕಾಂತಪ್ಪನ ಮನೆಯ ಮುಂದಿನ ಕೋಣೆಯಲ್ಲಿ ಬಾಡಿಗೆಗಿದ್ದ ಹೈಸ್ಕೂಲು ಗುಮಾಸ್ತರಾದ ದಾವಣಗೆರೆ ಮೂಲದ ಬಸವರಾಜ್ ಅವರ ರೂಮಿನ ಮುಂದಿದ್ದ, ಕಿರಿದಾದ ಅಂಗಳದಲ್ಲಿಯೂ ಜಮಾಯಿಸುತ್ತಿದ್ದರು. ನನ್ನಪ್ಪ ಹೈಸ್ಕೂಲು ಮೇಷ್ಟ್ರಾಗಿದ್ದರು ಎನ್ನುವ ಕಾರಣಕ್ಕೆ ನಮ್ಮ ಮನೆಯ ಅಂಗಳದಲ್ಲಿ ಸುಳಿಯುವ ಧೈರ್ಯ ತೋರದಿದ್ದ ಹುಡುಗಿಯರು, ಐದೈದು ನಿಮಿಷಗಳಿಗೊಮ್ಮೆ, ತಾವು ಕುಳಿತ ಜಾಗದಿಂದ ಎದ್ದು ಬಂದು, ತಾವಿದ್ದ ತಾವುಗಳ ಅಂಚಿಗೆ ಜರುಗುತ್ತಾ, ಬಸ್ ಸ್ಟ್ಯಾಂಡಿನೆಡೆಗೆ ದೃಷ್ಟಿಬೀರಿ ಮತ್ತೆ ತಂತಮ್ಮ ಸ್ವಸ್ಥಾನಗಳಿಗೆ ಮರಳುತ್ತಿದ್ದದ್ದು ಬಹಳ ಸಾಮಾನ್ಯವಾದ ನೋಟವೇ ಆಗಿತ್ತು. ಹುಡುಗಿಯರ ಮತ್ತೊಂದು ಗುಂಪು ಬಸ್ ಸ್ಟ್ಯಾಂಡಿನ ಮತ್ತೊಂದು ಬದಿಗೆ ಇದ್ದ ಗುಳಪ್ಪನವರ (ತಣ್ಣೀರು) ಬಸವರಾಜಪ್ಪನವರ ಮನೆಯ ಮುಂಭಾಗದಲ್ಲಿಯೂ ಗುಂಪಾಗಿರುತ್ತಿದ್ದದ್ದು ನನಗೆ ನೆನಪಿದೆ. ಹೀಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡ ಊರ ಎಲ್ಲಾ ವಿದ್ಯಾರ್ಥಿಗಳ ಕುಂಭಮೇಳದಲ್ಲಿ ನನಗೆ ತಮ್ಮ ಅನುಪಸ್ಥಿತಿಯ ಕಾರಣದಿಂದ ಗಮನವನ್ನು ಸೆಳೆಯುತ್ತಿದ್ದದ್ದು, ಗುಂಪಿನ ಭಾಗವಾಗದೇ ಉಳಿದಿರುತ್ತಿದ್ದ “ಸಲ್ಪಿಮೆಂಟರಿ” ವಿದ್ಯಾರ್ಥಿಗಳ, ಬಹಳ ಸಣ್ಣದೇ ಎನ್ನಬಹುದಾದ, ಹುಡುಗಿಯರನ್ನೂ ಒಳಗೊಂಡಂತೆ, ಇದ್ದ ಅಲ್ಪಸಂಖ್ಯಾತ ಗುಂಪು.

 

ಹೋದ ಸಲದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಪೂರಕ ಪರೀಕ್ಷೆ ಬರೆದ ಈ ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ನಿರೀಕ್ಷೆಯ ಬೇಗುದಿಯನ್ನು ತಮ್ಮ ಎದೆಯಲ್ಲಿಯೇ ಅವಿತಿಟ್ಟುಕೊಂಡು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ಭಾಗವಾಗಲು ತೋರುತ್ತಿದ್ದ ಹಿಂಜರಿಕೆಗೆ ಮುಖ್ಯಕಾರಣ ಅವರಲ್ಲಿ ಆ ಹೊತ್ತು ಮಡುಗಟ್ಟಿದ್ದ ಸಂಕೋಚವೇ ಇದ್ದೀತು ಎಂದು ಈಗ ನನಗನ್ನಿಸುತ್ತದೆ. ಫಲಿತಾಂಶ ಪ್ರಕಟವಾದ ಹೊತ್ತೂ, ಫಲಿತಾಂಶವನ್ನು ಅಂಟಿಸಿರುತ್ತಿದ್ದ ಹೈಸ್ಕೂಲು ನೋಟೀಸು ಬೋರ್ಡನ್ನು ನೋಡಲು ಖುದ್ದಾಗಿ ಹೋಗುವಷ್ಟು ಧೈರ್ಯವನ್ನು ಒಗ್ಗೂಡಿಸಲಾಗದ ಈ ವಿದ್ಯಾರ್ಥಿಮಿತ್ರರು ತಮ್ಮ ಅಣ್ಣತಮ್ಮಂದಿರನ್ನೋ, ಅಕ್ಕತಂಗಿಯರನ್ನೋ ಫಲಿತಾಂಶ ನೋಡಲಿಕ್ಕೆ ಕಳುಹಿಸುತ್ತಿದ್ದದ್ದೂ ಅವರಲ್ಲಿ ಮಡುಗಟ್ಟಿದ ಸಂಕೋಚದ ಹಿಮ ಪೂರ್ಣಪ್ರಮಾಣದಲ್ಲಿ ಕರಗದೇ ಇದ್ದ ಕಾರಣಕ್ಕಾಗಿಯೇ ಎಂದು ಈಗಲೂ ನಾನು ಭಾವಿಸುವುದಿದೆ.

ಮೇ ಮೊದಲನೇ ವಾರದ ಮೊದಲ ದಿನವೇ ಊರ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿಯೇ ಇದ್ದ ಬಡಗಿ ತಿಪ್ಪಣ್ಣನ ಮಗ ಬಿ.ಟಿ. ನಾಗರಾಜನ ಆಗಮನದಿಂದ ಕಳೆಗಟ್ಟಿದ ಬಸ್ಸುನಿಲ್ದಾಣದ, ನಮ್ಮ ಬ್ಯಾಚಿನ ಹುಡುಗರ ಫಲಿತಾಂಶ ನಿರೀಕ್ಷಣಾ ತಂಡದ ಎರಡನೇ ಸದಸ್ಯನಾಗಿ ನಾನು ಸೇರಿದ ನಂತರ ಕಲ್ಲಪ್ಪನವರ ಬಸಣ್ಣನ ಮಗ ಜಿ.ಬಿ. ಚಿದಾನಂದ, ವೃಷಭೇಂದ್ರಪ್ಪಸ್ವಾಮಿ ಮೇಷ್ಟ್ರ ಮಗ ಎಂ.ವಿ. ಸತ್ಯಾನಂದ, ಕುರುಬರ ಬಸಪ್ಪ ಮೇಷ್ಟ್ರ ಮಗ ಎಂ.ಬಿ. ಹನುಮಂತಪ್ಪ, ಆಚಾರಿ ಸಿದ್ದಪ್ಪನ ಮಗ ಕೆ. ಎಸ್. ಜಕಣಾಚಾರಿ, ಕುರುಬರ ಗಾಬರಿಯವರ ಜಿ. ಆರ್. ತಿಪ್ಪೇಸ್ವಾಮಿ, ಕುರುಬರ ರುದ್ರಮುನಿ, ನಾಯಕರ ರುದ್ರಮುನಿ, ಧನಂಜಯರೆಡ್ಡಿ, ಸಂಗಟಿ ಟಿ.ಎಸ್. ಕೃಷ್ಣಾರೆಡ್ಡಿ, ಜಿ. ಟಿ. ಹೇಮಣ್ಣಗೌಡ ಮುಂತಾದ ಸಹಪಾಠಿಗಳ ಆಗಮನದಿಂದ ಬೆಳದಿಂಗಳ ಚಂದ್ರನಿಗಿಂತ ದ್ವಿಗುಣವಾದ ವೇಗದಲ್ಲಿ ತನ್ನ ಸಂಖ್ಯೆಯನ್ನು ವೃದ್ಧಿ ಮಾಡಿಕೊಳ್ಳುತ್ತಾ ಹೊರಟಿತ್ತು. ಅದೇನು ದುರಾದೃಷ್ಟವೋ ಏನೋ, ಸುಮಾರು ಎರಡು ವಾರಗಳು ಬಸ್ ಸ್ಟ್ಯಾಂಡಿನಲ್ಲಿ ಜಾತಕಪಕ್ಷಿಗಳಂತೆ ಕಾದರೂ ನಮಗೆ ಫಲಿತಾಂಶದ ಸುಳಿವೇ ಸಿಗಲಿಲ್ಲ. ನಮ್ಮ ಫಲಿತಾಂಶ ನಿರೀಕ್ಷೆಯ ಯಜ್ಞದ ಮೂರನೇ ವಾರದ ಮೊದಲ ದಿನವೇ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿಯೇ ವಾಸವಿದ್ದ ಗುಳಪ್ಪನವರ ಜಿ. ಬಿ. ಸಾವಿತ್ರಮ್ಮ ತನ್ನ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಗಿದ್ದು ಹುಡುಗಿಯರೂ ನಮ್ಮ ನಿರೀಕ್ಷೆಯ ಯಾಗದಲ್ಲಿ ಭಾಗವಹಿಸುವ ಮೊದಲ, ಸ್ಪಷ್ಟವೆನ್ನಬಹುದಾದ ಸಂಕೇತವನ್ನು ನೀಡಿತ್ತು. ಮಾರನೇ ದಿನ ಪಾಲಾ ಸುಬ್ಬಣ್ಣಶೆಟ್ಟರ ಮೂರನೇ ಮಗಳು ಪಿ.ಎಸ್. ಜ್ಯೋತಿಪ್ರಭಾಳ ಆಗಮನದಿಂದ ಕಳೆಗಟ್ಟಿದ ಹುಡುಗಿಯರ ಗುಂಪಿಗೆ ದೊಡ್ಮನೆ ವೀರಣ್ಣನ ಮಗಳು ಡಿ.ವಿ.ಅನ್ನಪೂರ್ಣ, ಪರೋತಪ್ಪನವರ ರುದ್ರಮುನಿ ಮಗಳು ಅನ್ನಪೂರ್ಣ, ರೆಡ್ಡಿಯವರ ಪ್ರೇಮಲೀಲ, ಕುರುಬರ ಕೊಳ್ಳಿ ಮನೆತನದ ಭಾರತಿ, ರೆಡ್ಡಿಯವರ ವಿಮಲಮ್ಮ ಮೇಡಂ ಮಗಳು ಉಷಾ ಮುಂತಾದ ಹುಡುಗಿಯರೂ ಭಡ್ತಿಯಾಗುವ ಮೂಲಕ ನಮ್ಮ ನಿರೀಕ್ಷೆಯ ಪರ್ವಕ್ಕೆ “ಸ್ತ್ರೀಶಕ್ತಿ”ಯನ್ನೂ ಧಾರಾಳರೂಪದಲ್ಲಿ ಸಮಾವೇಶಗೊಳಿಸಿದರು.

ನೋಡುನೋಡುತ್ತಿದ್ದ ಹಾಗೆ ಸುಮಾರು ಮೂವತ್ತರ ಸಂಖ್ಯೆಯ ಹುಡುಗರ ಮತ್ತು ಹದಿನೈದರಷ್ಟು ಹುಡುಗಿಯರ ಸಂಖ್ಯೆಯನ್ನು ಮುಟ್ಟಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ನಮ್ಮ ಗುಂಪಿನ ಮೆರವಣಿಗೆಯಲ್ಲಿ ಒಬ್ಬ ಉತ್ಸವಮೂರ್ತಿಯೂ ಇರಬೇಕಲ್ಲವೇ? ಹೌದು, ನಮ್ಮ ಮೆರವಣಿಗೆಯ ಉತ್ಸವಮೂರ್ತಿ ಅಂದಿನ ನಮ್ಮೂರಿನ ಅಂಚೆ ಕಚೇರಿಯ ಇಲಾಖೇತರ ನೌಕರನಾದ ಅಂಚೆಪೇದೆ ವಿಜಯಣ್ಣನೇ ಆಗಿದ್ದ. ಊರ ಮುಖ್ಯರಸ್ತೆಯಲ್ಲಿದ್ದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ರುದ್ರಣ್ಣಗೌಡರ ಮನೆಯಲ್ಲಿ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಊರಿನ ಅಂಚೆಕಚೇರಿಯ ಆ ಹೊತ್ತಿನ, ಪೋಸ್ಟ್ ಮಾಸ್ಟರ್ ತಳವಾರರ ನಂತರ ಲಭ್ಯವಿದ್ದ ಏಕೈಕ ಅಂಚೆನೌಕರನೆಂದರೆ ಈ ವಿಜಯಣ್ಣನೇ. “ಮೃತ್ಯುಂಜಯ” ಬಸ್ಸು ಬರುವ ವೇಳೆಗೆ ಸರಿಯಾಗಿ ಬಸ್ಸು ನಿಲ್ದಾಣದಲ್ಲಿ ಉಪಸ್ಥಿತವಿರುತ್ತಿದ್ದ ವಿಜಯಣ್ಣ, ಬಸ್ಸು ನಿಲುಗಡೆಯಾದ ಮರುಕ್ಷಣವೇ ಬಸ್ಸನ್ನು ಹಿಂಬಾಗದ ಬಾಗಿಲ ಮೂಲಕ ಸರಸರ ಏರಿ, ನಿರ್ವಾಹಕ ಕೂರುತ್ತಿದ್ದ ಬಸ್ಸಿನ ಎಡಭಾಗದ ಕೊನೆಯ ಸಾಲಿನ ಸಿಂಗಲ್ ಸೀಟಿನ ಅಡಿಯಿಂದ ಐದಾರರ ಸಂಖ್ಯೆಯಲ್ಲಿರುತ್ತಿದ್ದ, ಸೀಲು ಮಾಡಲಾದ ಅಂಚೆಯ ಗೋಣಿಚೀಲದಂತಹ ಬ್ಯಾಗುಗಳನ್ನು ಹಿಡಿದು ಸರ್ರನೇ ಕೆಳಗಿಳಿಯುತ್ತಿದ್ದ. ಹೀಗೆ ಬಸ್ಸಿನಿಂದ ಜತನದಿಂದ ಇಳಿಸಿಕೊಂಡ ಅಂಚೆಚೀಲಗಳನ್ನು ತನ್ನ ಎಡಭುಜದ ಮೇಲೆ ಸಾವಕಾಶವಾಗಿ ಏರಿಸಿಕೊಂಡವನು, ಬಸ್ ಸ್ಟ್ಯಾಂಡಿನಿಂದ ಕೇವಲ ಮೂರ್ನಾಲ್ಕು ನಿಮಿಷಗಳ ದೂರವಿದ್ದ ಅಂಚೆಕಚೇರಿಗೆ ನಡೆದೇ ಕೊಂಡೊಯ್ಯುತ್ತಿದ್ದ. ಇದು ವಿಜಯಣ್ಣ ವರ್ಷದ ಎಲ್ಲಾ ದಿನಗಳಲ್ಲಿಯೂ ತಪ್ಪದೇ ಪಾಲಿಸುತ್ತಿದ್ದ ದಿನಚರಿಯ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ಕೇವಲ ರವಿವಾರದಂದು ಅಂಚೆಕಚೇರಿಗೆ ರಜಾ ಎನ್ನುವ ಕಾರಣಕ್ಕಷ್ಟೆ ಬಸ್ ಸ್ಟ್ಯಾಂಡಿನಲ್ಲಿ ಬೆಳಗ್ಗಿನ ಹತ್ತರ ವೇಳೆಯಲ್ಲಿ ವಿಜಯಣ್ಣನ ದರ್ಶನಭಾಗ್ಯ ದೊರಕುತ್ತಿರಲಿಲ್ಲ. ವಿಜಯಣ್ಣನ ಈ ದಿನನಿತ್ಯದ ಬಸ್ ಸ್ಟ್ಯಾಂಡ್ ಯಾತ್ರೆ ಊರಿನ ಉಳಿದ ಹಲವಾರು ದಿನನಿತ್ಯದ ಘಟನಾವಳಿಗಳಂತೆ, ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ, ಗಮನವನ್ನೀಯದ, ಯಾಂತ್ರಿಕತೆಯ ಪರಧಿಯಲ್ಲಿ ಸಮೀಕರಣಗೊಂಡ ಸಂಗತಿಯೇ ಆಗಿ ಮಾರ್ಪಾಡು ಹೊಂದಿತ್ತು. ಆದರೆ ಮೇ ತಿಂಗಳ ಮೊದಲನೇ ವಾರದಿಂದ ಮೊದಲ್ಗೊಂಡು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುವ ದಿನದವರೆಗೆ ವಿಜಯಣ್ಣನ ಚುರುಕಾದ, ಸ್ವಲ್ಪ ಚಿಕ್ಕವೇ ಅನ್ನಬಹುದಾದ ಶ್ವೇತವರ್ಣದ ಕಣ್ಣುಗಳನ್ನು, ಆಯಾಯ ಬ್ಯಾಚಿನ ಬಾಲಕರ ವತಿಯಿಂದ ಹರಿದುಬರುತ್ತಿದ್ದ ಗಮನವೆಂಬ ಹೊನಲು ಬೆಳಕಿನ ಪ್ರಖರತೆ, ಕುರುಡಾಗಿಸುವ ಮಟ್ಟಕ್ಕಿರುತ್ತಿತ್ತು. ಸ್ವಭಾವತಃ ಸಂಕೋಚವೆನ್ನಬಹುದಾದ ವ್ಯಕ್ತಿತ್ವದ ಧಣಿಯಾದ ವಿಜಯಣ್ಣ ಇಂತಹ ನಿರೀಕ್ಷಿತ ಬೆಳವಣಿಗೆಯ ಹೊತ್ತಲ್ಲೂ ಸಂಕೋಚದ ಮುದ್ದೆಯೇ ಆಗಿಬಿಡುತ್ತಿದ್ದ.

ವಿಜಯಣ್ಣ ಬಸ್ ಸ್ಟ್ಯಾಂಡಿಗೆ ಪ್ರವೇಶಿಸಿದನೆಂದರೆ ವಿದ್ಯಾರ್ಥಿಗಳ ಗುಂಪು ಆತನನ್ನು ಜೈಕಾರ ಹಾಕುವ ಮೂಲಕ ಸ್ವಾಗತಿಸುತ್ತಿತ್ತು. ಅಲ್ಲಿಯವರೆಗೂ ಸಂಭಾವ್ಯಶಕ್ತಿಯಾಗಿ ಅದೃಶ್ಯರೂಪದಲ್ಲಿ ಇರುತ್ತಿದ್ದ ಪರೀಕ್ಷಾರ್ಥಿಗಳ ಉತ್ಸಾಹ ವಿಜಯಣ್ಣನ ಆಗಮನದಿಂದ ಚಲನಶಕ್ತಿಯ ರೂಪಧಾರಣೆ ಮಾಡುತ್ತಿತ್ತು. ಆದಷ್ಟೂ ವಿಜಯಣ್ಣನ ಬಳಿ ಸಾರಿ ಆತನ ಮೈಗೆ ಮೈ ತಾಕುವ ಹಾಗೆ ನಿಲ್ಲಬೇಕು ಎನ್ನುವ ಬಯಕೆ ಅಲ್ಲಿ ನೆರೆದ ಎಲ್ಲಾ ವಿದ್ಯಾರ್ಥಿಗಳ ತಣಿಯದ ಮನದಿಂಗಿತವಾಗಿರತ್ತಿತ್ತು. ಅಷ್ಟೇನೂ ನೀಳಕಾಯದವನಲ್ಲದ, ಕುಳ್ಳನೇ ಎಂದು ಎದೆತಟ್ಟಿ ಹೇಳಬಹುದಾದ ವಿಜಯಣ್ಣ, ಆ ವೇಳೆಗಾಗಲೇ ಬೆಳೆದು ನಿಂತಿರುತ್ತಿದ್ದ ವಿದ್ಯಾರ್ಥಿಗಳ ಹಿಂಡಿನಲ್ಲಿ ಮೋಡದ ಮರೆಯ ಚಂದ್ರಮನಂತೆ ಕಾಣೆಯಾಗಿರುತ್ತಿದ್ದ. ವರ್ಷದ ಯಾವ ಕಾಲದಲ್ಲಿಯೂ ಕಂಡುಬರದ, ಈ ತೆರನಾದ ತನ್ನನ್ನು ಕೇಂದ್ರೀಕೃತವಾಗಿರಿಸಿಕೊಂಡ, ವಿಶೇಷ ಗಮನದ ಕಾರಣವರ್ಷದಿಂದ ಅತೀವ ಮುಜುಗರಕ್ಕೊಳಗಾದಂತೆ ಕಂಡುಬರುತ್ತಿದ್ದ ವಿಜಯಣ್ಣ “ಅಣ್ಣಗಳಾ, ಸ್ವಲ್ಪ ಸರಿದು ನಿಲ್ಲುತ್ತೀರಾ? ನನ್ನ ಉಸಿರು ಕಟ್ಟಿದ ಹಾಗಾಗುತ್ತಿದೆ” ಎಂದು ದೀನವಾಣಿಯಲ್ಲಿ ತನ್ನ ಸುತ್ತಲೂ ನೆರೆದ ವಿದ್ಯಾರ್ಥಿಗಳಿಗೆ ಮೊರೆಯಿಡುತ್ತಿದ್ದರೆ, ಅಂಚೆಪೇದೆಯ ಈ ಬೊಬ್ಬೆ ಕಡೆ ಗಮನವನ್ನೇ ಕೊಡದ ವಿದ್ಯಾರ್ಥಿಗಳ ಗುಂಪು “ವಿಜಯಣ್ಣಾ, ನಮ್ಮ ಫಲಿತಾಂಶ ಇವತ್ತು ಬಂದೇ ಬರುತ್ತದಲ್ಲವೇ?”ಎನ್ನುವ ಒಕ್ಕೊರಲಿನ ಸವಾಲನ್ನು ಎಸೆಯುತ್ತಿತ್ತು. “ಹೇಗ್ರಪ್ಪಾ ಇದರ ಬಗ್ಗೆ ನಾನು ಈಗಲೇ ಹೇಳಲಿ? ನನಗೆ ಈ ಬಗ್ಗೆ ಹೇಗೆ ಗೊತ್ತಾಗುತ್ತದೆ?” ಎನ್ನುವ ವಿಜಯಣ್ಣನ ಅಮಾಯಕತೆಯನ್ನೇ ಸ್ಫುರಿಸುವಂತಿದ್ದ ಸಮರ್ಥನೆಗೆ ತನ್ನ ಪಟ್ಟು ಸಡಿಲಿಸದ ಹುಡುಗರ ಗುಂಪು “ಅದ್ಹೇಗೆ ನಿನಗೆ ಗೊತ್ತಾಗುವುದಿಲ್ಲ ವಿಜಯಣ್ಣ? ಇವತ್ತಿನ ಅಂಚೆಯಲ್ಲಿ ಏನೇನು ಬರುತ್ತದೆ ಎಂದು ನಿನಗೆ ತಿಳಿಯದೇ ಇರುತ್ತದೆಯೇ?” ಎಂದು ಆತನನ್ನು ದಬಾಯಿಸುವ ಪ್ರಯತ್ನ ಮಾಡಲು ಪ್ರಾರಂಭಿಸುತ್ತಿತ್ತು. ಇದರಿಂದ ವಿಚಲಿತನಾದಂತೆ ತೋರಿಬರುತ್ತಿದ್ದ ವಿಜಯಣ್ಣ, “ಇಲ್ಲಪ್ಪ, ಅಂಚೆಯಲ್ಲಿ ಏನು ಬರುತ್ತದೆ ಎಂದು ನನಗೆ ಹೇಗೆ ಮುಂಚಿತವಾಗಿ ತಿಳಿಯುತ್ತದೆ? ಅದು ಸಾಧ್ಯವಿಲ್ಲದ ಮಾತು” ಎಂದು ಗುಂಪಿನ ಮಾತನ್ನು ತಳ್ಳಿ ಹಾಕುವ ಪ್ರಯತ್ನ ಮಾಡುವ ಹೊತ್ತು “ಹಾಗಾದರೆ ನಿನ್ನೆ ನೀನು ನಮ್ಮ ಅಜ್ಜಿಗೆ ಅದ್ಹೇಗೆ ನಮ್ಮ ತಾತನ ಸ್ವಾತಂತ್ಯ್ರಯೋಧರ ಗೌರವಧನದ ಮನಿಯಾರ್ಡರ್ ಇಂದು ಬಂದೇ ಬರುತ್ತದೆ ಎಂದು ಹೇಳಿದೆ?” ಎನ್ನುವ ಪಾಟೀಸವಾಲನ್ನು ಸ್ವಾತಂತ್ರ್ಯಯೋಧರ ಮೊಮ್ಮಗನಾದ ಯತಿರಾಜು ಹಾಕಲು ಸ್ವಲ್ಪ ಗಲಿಬಿಲಿಗೊಂಡಂತೆ ಕಂಡುಬಂದ ವಿಜಯಣ್ಣ “ಅಣ್ಣಯ್ಯಾ, ಅದು ಮಾಸಾಶನದ ವಿಷಯ ಕಣಪ್ಪಾ, ಪ್ರತೀ ತಿಂಗಳೂ ಇಂತಹ ದಿನವೇ ನಮ್ಮ ಕೈಸೇರುತ್ತದೆ ಎಂದು ಕರಾರುವಕ್ಕಾಗಿ ಹೇಳಬಹುದು. ಆದರೆ ನೀವು ಕೇಳುತ್ತಿರುವುದು ಎಸ್ಸೆಸ್ಸೆಲ್ಸಿ ಫಲಿತಾಂಶದ ವಿಷಯ, ಯಾವತ್ತು ಬರುತ್ತದೆ ಎಂದು ನನಗೆ ಹೇಗೆ ತಿಳಿಯುತ್ತದೆ ಹೇಳು?”ಎಂದು ಯತಿರಾಜನಿಗೆ ಮರುಪ್ರಶ್ನೆ ಎಸೆಯುತ್ತಿದ್ದ. ವಿಜಯಣ್ಣನ ಉತ್ತರದಿಂದ ಸಮಾಧಾನಗೊಳ್ಳದ, ಗುಂಪಿನ ನಾಯಕತ್ವವನ್ನು ಈಗಾಗಲೇ ತಾನೇ ವಹಿಸಿಕೊಂಡತೆ ವರ್ತಿಸುತ್ತಿದ್ದ, ವಯಸ್ಸಿನಲ್ಲಿ ನಮ್ಮೆಲ್ಲರಿಗಿಂತಲೂ ಎರಡು ವರ್ಷ ದೊಡ್ಡವನಾದ ಅಗಸರ ಕಿಳ್ಳಮಂಜನ “ವಿಜಯಣ್ಣಾ, ನಮ್ಮ ಫಲಿತಾಂಶದ ವಿಷಯ ನಿಮ್ಮ ಪೋಸ್ಟ್ ಮಾಸ್ಟರ್ ತಳವಾರರಿಗಾದರೂ ತಿಳಿದಿರಬೇಕಲ್ಲವೇ?” ಎನ್ನುವ ಪ್ರಶ್ನೆಗೆ ಇವರಿಗೆ ಇನ್ನು ಏನು ಸಮಜಾಯಿಷಿ ಕೊಟ್ಟೂ ಉಪಯೋಗವಿಲ್ಲ ಎಂದರಿತ ವಿಜಯಣ್ಣ ತಲೆಯೆತ್ತಿ ತನ್ನ ಭಾಗ್ಯದ ಪಾಲಾಗಿ ಉಳಿದಿದ್ದ ಒಂದಗಲಳತೆಯ ನೀಲಾಕಾಶಕ್ಕೆ ಮುಖ ಮಾಡಿ ನಿಂತ. ವಿಜಯಣ್ಣನ ಈ ಭಂಗಿಯನ್ನು ನೋಡಿದ ಹುಡುಗರು “ಹೋ” ಎನ್ನುವ ದೊಡ್ಡ ಧ್ವನಿಯಲ್ಲಿ ಕಿರಿಚಾಡಲು ಮೊದಲು ಮಾಡಿದರು. ಆ ಹೊತ್ತಿಗೆ ಸರ್ಕಾರಿ ಆಸ್ಪತ್ರೆ ಕಡೆಯಿಂದ ಸಾವಿತ್ರಮ್ಮನ ಮನೆಯ ಮುಂಭಾಗದ ರಸ್ತೆಯ ಇಳಿಜಾರನ್ನು ಸಾವಕಾಶವಾಗಿ ಇಳಿಯುತ್ತಾ ಬರುತ್ತಿದ್ದ ಹೈಸ್ಕೂಲು ಮುಖ್ಯೋಪಾಧ್ಯಾಯ ರಾಯ್ನಳ್ಳಿ ನೀಲಕಂಠಪ್ಪ ಮಾಸ್ತರು ಹಾಗೂ ಅವರ ಹೆಣ್ಣುಮಕ್ಕಳ ಪೈಕಿ ಇಬ್ಬರು ಮತ್ತು ಮಗ ಮೃತ್ಯುಂಜಯನನ್ನೂ ಒಳಗೊಂಡ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ತಂಡವನ್ನು, ಆ ಕಾಲಕ್ಕೆ ಹೆಚ್ಚೂ ಕಡಿಮೆ ಇದೂ ಕೂಡ ಊರಿನ ಒಂದು ದಿನನಿತ್ಯದ ಘಟನಾವಳಿಯೇ ಎನ್ನಿಸಿದ್ದ, ಕಂಡ ಗುಂಪು ಮುಂದಿನ ಒಂದು ಕ್ಷಣದಲ್ಲಿ ವಿಜಯಣ್ಣನನ್ನು ಒಂಟಿಯಾಗಿಸಿ ದಿಕ್ಕುಪಾಲಾಗಿತ್ತು. ಇದರಿಂದ “ಬದುಕಿದೆಯಾ ಬಡಜೀವವೇ” ಎನ್ನುವ ರೀತಿಯ ದೀರ್ಘವಾದ ಉಸಿರೊಂದನ್ನು ಒಳಗೆಳೆದುಕೊಂಡ ವಿಜಯಣ್ಣ ತನ್ನ ಬಳಿ ಸಾರುತ್ತಿದ್ದ ಮೇಷ್ಟ್ರಿಗೆ ನಮಸ್ಕಾರ ಹಾಕಿ “ಸರ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಯಾವತ್ತು ಬರುತ್ತದೆ? ನಿಮ್ಮ ಹುಡುಗರು ಈ ವಿಷಯದಲ್ಲಿ ನನಗೆ ಬಹಳ ತೊಂದರೆ ಕೊಡುತ್ತಿದ್ದಾರೆ ನೋಡಿ” ಎಂದು ನಮ್ಮ ಮೇಲಿನ ದೂರೊಂದನ್ನೂ ಅನಾಯಾಸವಾಗಿ ದಾಖಲಿಸುವ ಪ್ರಯತ್ನ ಮಾಡಿದ. ಇದನ್ನು ಕೇಳಿಯೂ ಕೇಳಿಸಿಕೊಳ್ಳದ ಹಾಗೆ ಅಂಚೆಪೇದೆಗೆ ಮರು ನಮಸ್ಕಾರವನ್ನಷ್ಟೇ ಹಾಕಿ ಮುಂದೆ ಸಾಗಿದ ನೀಲಕಂಠಪ್ಪ ಮೇಷ್ಟ್ರು ವಿಜಯಣ್ಣನಲ್ಲಿ ದೊಡ್ಡ ಪ್ರಮಾಣದ ನಿರಾಶೆಯನ್ನು ಉಂಟು ಮಾಡಿದರು.

ಈ ವೇಳೆಗೆ ಖಂಡುಗದಷ್ಟು ಹೊಗೆ ಕಾರುತ್ತಾ, ವಿಕಾರವಾದ ಶಬ್ದದೊಂದಿಗೆ ಬಸ್ಸುನಿಲ್ದಾಣಕ್ಕೆ ಬಂದು ನಿಂತ “ಮೃತ್ಯುಂಜಯ” ಬಸ್ಸಿನ ಸುತ್ತಮುತ್ತ, ಆ ವೇಳೆಗೆ ಚದುರಿಹೋಗಿದಂತಿದ್ದ ಹುಡುಗರ ಗುಂಪು, ಅದ್ಯಾವ ಮಾಯೆಯಿಂದಲೋ ಸಕ್ಕರೆಯ ಗೂಡನ್ನು ಮುತ್ತುವ ನೊಣಗಳ ಹಾಗೆ ಅನಿತರಲ್ಲಿಯೆ ಮುತ್ತಿಕೊಂಡಿತು. ಬಸ್ ಹಿಂಭಾಗದ ಬಾಗಿಲಿಗೆ ಅಡ್ಡವಾಗಿ ನಿಂತ ಹುಡುಗರನ್ನು ಗದರಿಸುತ್ತಲೇ ಪ್ರಯಾಣಿಕರ ಇಳಿಯುವಿಕೆಗೆ ಅನುವು ಮಾಡಿಕೊಟ್ಟ ಬಸ್ ಕಂಡಕ್ಟರ್ ಆ ಕ್ಷಣದ ಪರಿಸ್ಥಿತಿಯನ್ನು ತ್ವರಿತವಾಗಿ ಅರಿತವನಾಗಿ ತಾನೇ ಸೀಟಿನ ಕೆಳಗಿದ್ದ ಅಂಚೆಚೀಲಗಳನ್ನು, ಆ ಹೊತ್ತಿಗೆ ಪ್ರಯಾಸದಿಂದ ಬಾಗಿಲ ಬಳಿಗೆ ಬಂದ ವಿಜಯಣ್ಣನಿಗೆ, ಹಸ್ತಾಂತರಿಸಿದ. ಅಂಚೆಚೀಲಗಳನ್ನು ಬಹಳ ಪ್ರಯಾಸದಿಂದ, ಮುತ್ತಿದ್ದ ಹುಡುಗರ ಗುಂಪಿನಿಂದ, ಸಾಕಷ್ಟು ಜಾಗರೂಕತೆಯಿಂದ ಹೊರತಂದ ವಿಜಯಣ್ಣ, ಸ್ವಲ್ಪವೂ ತಡಮಾಡದೆ ಅವುಗಳನ್ನು ತನ್ನ ಹೆಗಲಿಗೇರಿಸಿಕೊಂಡವನು, ಬಿರುಬಿರನೆ ಅಂಚೆಕಚೇರಿಯ ಕಡೆಗೆ ನಡೆಯತೊಡಗಿದ. ವಿಜಯಣ್ಣನ ಈ ವ್ಯವಹಾರ ಕಂಡ ಹುಡುಗರ ಗುಂಪು ಶೀಘ್ರದಲ್ಲಿಯೇ ಮತ್ತೆ ಒಗ್ಗೂಡಿ ವಿಜಯಣ್ಣನ ಬೆನ್ನು ಬಿದ್ದಿತು. ಓಡುತ್ತಲೇ ವಿಜಯಣ್ಣನನ್ನು ಸಮೀಪಿಸಿದ ಗುಂಪಿನ ಮುಂಭಾಗದಲ್ಲಿದ್ದ ಕಟ್ಟೆ ತಿಪ್ಪೇಸ್ವಾಮಿ ಮಗ ಧನುಂಜಯ ವಿಜಯಣ್ಣನ ಹೆಗಲಿಗೇ ಕೈಹಾಕಿ ಚೀಲಗಳನ್ನು ಕಸಿಯುವ ಪ್ರಯತ್ನ ಮಾಡಿದ. ಇದರಿಂದ ಗಾಬರಿಗೊಂಡ ವಿಜಯಣ್ಣ ಹೇಗೋ ಧನಂಜಯನ ದಾಳಿಯಿಂದ ಬಚಾವಾಗಿ, ತನ್ನನ್ನು ತಾನು ಸಂಭಾಳಿಸಿಕೊಂಡವನು, ಪೋಸ್ಟ್ ಆಫೀಸ್ ಕಡೆಗೆ ಓಡತೊಡಗಿದ. ವಿಜಯಣ್ಣ ಓಟ ಕಿತ್ತಿದ್ದನ್ನು ನೋಡಿ ಗುಂಪಿನ ಮುಂಚೂಣಿಯಲ್ಲಿದ್ದ ಹುಡುಗರ ಪೈಕಿ ಕೆಲವರೂ ಓಡತೊಡಗಿದರು. ಆಗಷ್ಟೇ ನಾಗಪ್ಪಶೆಟ್ಟರ ಅಂಗಡಿಯ ಮುಖ್ಯರಸ್ತೆಯ ತಿರುವನ್ನು ದಾಟಿದ್ದ ಗುಂಪಿನ ಓಟವನ್ನು ಕಂಡ, ರಸ್ತೆಯ ಎಡಭಾಗದಲ್ಲಿದ್ದ ಏಕಾಂತಪ್ಪ ಮೇಷ್ಟ್ರ ಮನೆಯ ಓಣಿಯಲ್ಲಿದ್ದ ಏಳೆಂಟರ ಸಂಖ್ಯೆಯಲ್ಲಿದ್ದ ಬೀದಿನಾಯಿಗಳೂ ಜೋರಾದ ಧ್ವನಿಯಲ್ಲಿ ಬೊಗಳುತ್ತಾ ವಿದ್ಯಾರ್ಥಿಗಳ ಗುಂಪನ್ನು ಅಟ್ಟಿಸಿಕೊಂಡು ಓಡುವುದಕ್ಕೆ ಮೊದಲಿಟ್ಟವು. ಅನಿರೀಕ್ಷಿತವಾಗಿ ಉದ್ಭವಿಸಿದ ಈ ಗಂಡಾಂತರಕ್ಕೆ ಹೆದರಿದಂತೆ ಕಂಡುಬಂದ ಗುಂಪು ತನ್ನ ವೇಗದ ತೀವ್ರತೆಯನ್ನು ಹೆಚ್ಚು ಮಾಡಿತು. ಗುಂಪಿನಿಂದ ಒಂದೆರೆಡು ಮಾರು ದೂರದ ಅನಂತರದಲ್ಲಷ್ಟೆ ಓಡುತ್ತಿದ್ದ ಅಂಚೆಪೇದೆ, ಹೀಗೆ ಗುಂಪು ಇದ್ದಕ್ಕಿದ್ದಂತೆ ತನ್ನ ವೇಗವನ್ನು ಗಣನೀಯ ಪ್ರಮಾಣದಲ್ಲಿ ವೃದ್ಧಿಗೊಳಿಸಿದ್ದನ್ನು ಕಂಡು, ತನ್ನ ವೇಗವನ್ನೂ ಶಕ್ತಿ ಮೀರಿ ಹೆಚ್ಚಿಸಿಕೊಂಡು, ತ್ವರಿತಗತಿಯಲ್ಲಿ ಅಂಚೆಕಚೇರಿಯನ್ನು ತಲುಪಿದವನು ಮುಂಬಾಗಿಲಿನಿಂದ ಕಚೇರಿಯನ್ನು ಹೊಕ್ಕು ಬಾಗಿಲನ್ನು ಭದ್ರವಾಗಿ ಮುಚ್ಚಿ, ಒಳಗಿನಿಂದ ಚಿಲಕ ಹಾಕಿ, ಬೀಗವನ್ನೂ ಜಡಿದ. ವಿಜಯಣ್ಣನನ್ನು ಹಿಂಬಾಲಿಸಿ ಅಂಚೆ ಕಚೇರಿಯ ಮುಂಬಾಗಿಲವರೆಗೂ ಧಾವಿಸಿದ ಹುಡುಗರ ಗುಂಪು ಅಂಚೆಪೇದೆ ಬಾಗಿಲನ್ನು ಭದ್ರಗೊಳಿಸಿದ್ದು ಖಾತ್ರಿಯಾಗುತ್ತಲೇ, ಪಕ್ಕದಲ್ಲಿದ್ದ, ಕಚೇರಿಯ ಸಕಲ ವ್ಯವಹಾರಕ್ಕೆ ಕಿಂಡಿಯಾದ, ಕಬ್ಬಿಣದ ಜಾಲರಿಗಳಿಂದ ಭದ್ರಗೊಳಿಸಲ್ಪಟ್ಟ, ಕಿಟಕಿಯ ಕೆಳಭಾಗದಲ್ಲಿ ವ್ಯವಹಾರ ನಡೆಸಲು ಅನುವಾಗುವಷ್ಟೆ ಗಾತ್ರದ ಅರ್ಧಚಂದ್ರಾಕೃತಿಯ ತೆರವನ್ನು ಹೊಂದಿದ್ದ, ಕಿಟಕಿಯತ್ತ ಧಾವಿಸಿತು. ಗುಂಪನ್ನು ಹಿಂಬಾಲಿಸಿಕೊಂಡು ಬಂದ ನಾಯಿಗಳ ಗುಂಪು, ಹುಡುಗರು ನಿಂತಿದ್ದನ್ನು ನೋಡಿ, ತಾವೂ ಮುಖ್ಯರಸ್ತೆಯ ಮಧ್ಯದಲ್ಲಿಯೇ ನಿಂತು ಬೊಗಳುವುದನ್ನು ಮುಂದುವರೆಸಿದವು. ಈ ವೇಳೆಗೆ ಎರಡು ಹೋಳಾದ ಗುಂಪಿನ ಒಂದು ಭಾಗ ಅಂಚೆಕಚೇರಿಯ ಮುಂದಿದ್ದ ಸಣ್ಣ ಬೆಣಚು ಕಲ್ಲುಗಳಿಂದ ನಾಯಿಗಳನ್ನು ಹೊಡೆದು ಓಡಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರೆ, ಮತ್ತೊಂದು ಗುಂಪು ಕಿಟಕಿಯ ಮುಂದೆ ನಿಂತು, ಕಚೇರಿಯ ಒಳಗೆ, ಕಿಟಕಿಯ ಹಿಂಭಾಗದಲ್ಲಿ ಕುಳಿತ ಪೋಸ್ಟ್ ಮಾಸ್ಟರ್ ತಳವಾರರನ್ನು ಮಾತನಾಡಿಸುವ ಪ್ರಯತ್ನದಲ್ಲಿ ತೊಡಗಿತು. ಯಾವುದೋ ಗಹನವಾದ ಕಚೇರಿಯ ಕಡತವೊಂದರಲ್ಲಿ ಉಷ್ಟ್ರಪಕ್ಷಿಯಂತೆ ಮುಖ ಹುದುಗಿಸಿ, ತನ್ಮಯತೆಯಿಂದ ಅಭ್ಯಸಿಸುತ್ತಿದ್ದ ತಳವಾರರು ವಿದ್ಯಾರ್ಥಿಗಳು ಏಕಾಏಕಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ತಮ್ಮ ಮುಂದೆ ಹಾಜರಾದ ಪರಿಗೆ ಒಂದು ಕ್ಷಣ ದಿಗ್ಭ್ರಮೆಗೆ ಒಳಗಾದವರು, ಕಿಟಕಿಯ ಕಡೆಗೆ ಮುಖ ತಿರುವಿಸಿ ವಿದ್ಯಾರ್ಥಿಗಳತ್ತ ಪ್ರಶ್ನಾರ್ಥಕ ನೋಟವೊಂದನ್ನು ಹರಿಸಿದರು. “ಸರ್, ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂದಿದೆಯಾ ತಿಳಿಸಿ” ಎಂದು ದುಂಬಾಲು ಬಿದ್ದಿದ್ದ ಹುಡುಗರನ್ನು ನೋಡಿ ಸ್ವಭಾವತಃ ಮುಂಗೋಪದವರಾದ ತಳವಾರರ ಮೈ ನಖಶಿಖಾಂತ ಉರಿದು ಹೋದರೂ ಅದನ್ನು ತೋರ್ಪಡಿಸದೆ, “ವಿಜಯಣ್ಣ, ಇದೇನು ಮಕ್ಕಳ ಅವಾಂತರ ಹೀಗೆ ನಡೆದಿದೆ? ಇವತ್ತಿನ ಅಂಚೆಯನ್ನು ಶೀಘ್ರವಾಗಿ ಪರಿಶೀಲಿಸು, ಎಸ್ಸೆಸ್ಸೆಲ್ಸಿ ರಿಸಲ್ಟ್ ಏನಾದರೂ ಇದೆಯೇ ಹುಡುಕಿ ಹೇಳು” ಎನ್ನುವ ಖಡಕ್ ಆದೇಶ ಕೊಡಲು ಮುಂದಿನ ಹತ್ತು ನಿಮಿಷಗಳ ನೀರವಮೌನದ ಹೊದಿಕೆ ಹೊದ್ದಿದ್ದ ಹುಡುಗರ ಅತೀವ ನಿರೀಕ್ಷೆಯ ಕಾಲಘಟ್ಟದ ನಂತರ, ಕಚೇರಿಯ ಹಾಲಿನಿಂದ ವಿಜಯಣ್ಣನ ಕೂಗು ಕೇಳಿಬಂತು. “ಇಲ್ಲ ಸಾಹೇಬರೇ, ಇವತ್ತೂ ಫಲಿತಾಂಶದ ಪಟ್ಟಿ ಬಂದಿಲ್ಲ” ಎಂದು ಹೊರಗೆ ನಿಂತ ನಮಗೂ ಸಲೀಸಾಗಿ ಕೇಳಿಸುವಷ್ಟು ಜೋರಾಗಿಯೇ ತೂರಿಬಂದ ಅಂಚೆಪೇದೆಯ ಧ್ವನಿ ನಮ್ಮನ್ನು ನಿರಾಶೆಯ ಆಳವಾದ ಕೂಪಕ್ಕೆ ತಳ್ಳಿತು. “ಇವತ್ತೂ ನಿಮ್ಮ ಫಲಿತಾಂಶ ಬಂದಿಲ್ಲ ಕಣ್ರಯ್ಯ, ನಾಳೆ ಬನ್ನಿ, ನೋಡೋಣ” ಎನ್ನುವ ಅಂಚೆಮಾಸ್ತರ ಮಾತಿಗೆ ತಲೆದೂಗುತ್ತಾ ಹುಡುಗರು ಜಾಗ ಖಾಲಿಮಾಡುವ ಹೊತ್ತು, “ಸರ್, ನೀವೇನಾದರೂ ದುರ್ಗಕ್ಕೆ ಫೋನಿನಲ್ಲಿ ಮಾತನಾಡಿ ಫಲಿತಾಂಶ ತರಿಸುವುದಕ್ಕೆ ಆಗುತ್ತದೆಯಾ, ದಯವಿಟ್ಟು ನೋಡಿ” ಎಂದು ಗೊಲ್ಲರ ರಾಮಾಂಜನೇಯ ತಳವಾರರನ್ನು ಬೇಡತೊಡಗಿದ. “ಈ ವಿಷಯದಲ್ಲಿ ನಾನು ಏನೂ ಮಾಡುವುದಕ್ಕೆ ಆಗುವುದಿಲ್ಲ ಕಣಪ್ಪ, ನಾವು ಅಂಚೆ ಕಚೇರಿಯವರಷ್ಟೆ, ನಮಗೆ ಬಂದ ಅಂಚೆಗಳನ್ನ ನಿಮಗೆ ತಲುಪಿಸುವ ಕೆಲಸ ಮಾಡುತ್ತೇವಲ್ಲದೆ, ನಿಮಗೆ ಬರಬೇಕಾದ ಅಂಚೆ ವಿಳಂಬವಾಯಿತು ಎಂದರೆ ನಾವು ಏನನ್ನೂ ಮಾಡಲಾಗುವುದಿಲ್ಲ. ಇನ್ನೂ ಒಂದೆರೆಡು ದಿನ ಕಾಯ್ದು ನೋಡಿ” ಎನ್ನುವ ಉತ್ತರ ಪೋಸ್ಟ್ ಮಾಸ್ಟರ್ ಬಾಯಿಂದ ಹೊರಬಂದಿತು. ಈ ವೇಳೆಗಾಗಲೇ ಅಂಚೆಚೀಲಗಳಲ್ಲಿ ಇದ್ದ ಕಾಗದಪತ್ರಗಳನ್ನು ಹಾಲಿನ ನೆಲದ ಮೇಲೆ ಸುರುವಿ, ಗುಡ್ಡೆ ಹಾಕಿಕೊಂಡು, ಒಂದೊಂದು ಅಂಚೆಯನ್ನೂ ಎತ್ತಿ ಟೇಬಲ್ ಮೇಲಿಡುತ್ತಾ ಅದರ ಮೇಲೆ ತಮ್ಮ ಕಚೇರಿಯ ಮೊಹರನ್ನು ಲಗತ್ತಿಸಲು ಮುಂದಾದ ವಿಜಯಣ್ಣನ ರಾಕ್ಷಸಗಾತ್ರದ ಸೀಲ್ ಶಬ್ಧದ ತೀವ್ರತೆಯ ಸದ್ದು ಕಚೇರಿಯಿಂದ ಮನೆಗಳಿಗೆ ತೆರಳುತ್ತಿದ್ದ ನಮ್ಮ ಕರ್ಣಪಟಲಗಳಿಗೆ ಕ್ರಮೇಣ ಕಡಿಮೆಯಾಗುತ್ತಿದ್ದ ತೀವ್ರತೆಯಿಂದ ತಟ್ಟುತ್ತಲೇ ಸಾಗಿತ್ತು.

ಮಾರನೇ ದಿನ, ಎಂದಿನಂತೆ ಬಸ್ ಸ್ಟ್ಯಾಂಡಿನಲ್ಲಿ ಗುಂಪುಗೂಡಿದ ನಾವು ಬಸ್ ನಿರೀಕ್ಷೆಯಲ್ಲಿ ತೊಡಗಿದೆವು. ಆ ವೇಳೆಗೆ ನಿಲ್ದಾಣಕ್ಕೆ ಆಗಮಿಸಿದ ವಿಜಯಣ್ಣನ ಹಿಂದೆ ಊರ ಪೊಲೀಸ್ ಠಾಣೆಯ ಇಬ್ಬರು ಪೊಲೀಸು ಪೇದೆಗಳು ಕಂಡುಬಂದರು. ಕೈಯಲ್ಲಿ ಹಿಡಿದ ಲಾಠಿಯನ್ನು ಠಳಾಯಿಸುತ್ತಾ, ವಿಜಯಣ್ಣನ ಬೆಂಗಾವಲಿಗೆ ಬಂದಿದ್ದ ಪೊಲೀಸರನ್ನು ನಿಯುಕ್ತಿಗೊಳಿಸುವಂತೆ ತಳವಾರ ಸಾಹೇಬರು, ವಿಜಯಣ್ಣನ ಹಿಂದಿನ ದಿನದ ಘಟನೆಯ ಆಧಾರದ ಮೇಲೆ, ಸುರಕ್ಷತಾದೃಷ್ಟಿಯ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲು ಅಂದಿನ ಠಾಣಾದಾರರಾಗಿದ್ದ ಸಬ್ ಇನ್ಸ್ಪೆಕ್ಟರ್ ದಸ್ತಗೀರ್ ಸಾಹೇಬರಿಗೆ ಮೌಖಿಕರೂಪದ ಮನವಿಯೊಂದನ್ನು ಮಾಡಿಕೊಂಡಿದ್ದರು. ದಸ್ತಗೀರ್ ಸಾಹೇಬರ ಪುತ್ರಿ ಸಝಿಲಾಬಾನು ಸಹಾ ನಮ್ಮೊಟ್ಟಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದವಳು ಕಳೆದ ಎರಡು ದಿನಗಳಿಂದ ಸಾವಿತ್ರಮ್ಮನ ಮನೆ ಮುಂದಿನ ಹುಡುಗಿಯರ ಗುಂಪಿನ ಭಾಗವಾಗಿ ಕಾಣಿಸಿಕೊಂಡಿದ್ದಳು. ಪೊಲೀಸರ ಆಗಮನದಿಂದ ಭಯಬಿದ್ದ ನಾವುಗಳು ಎಂದಿನಂತೆ ವಿಜಯಣ್ಣನ ಬಳಿಸಾರದೆ, ದೂರದಲ್ಲಿಯೇ ನಿಂತು ಬಸ್ಸಿನ ಪ್ರತೀಕ್ಷೆ ಮಾಡಹತ್ತಿದ್ದೆವು. ನಿಖರವಾದ ಸಮಯಕ್ಕೆ ನಿಲ್ದಾಣ ಪ್ರವೇಶಿಸಿದ ಬಸ್ಸಿನ ಬಳಿಯೂ ಸುಳಿಯದೆ, ದೂರದಿಂದಲೇ ಅಂಚೆಚೀಲಗಳನ್ನು ವಿಜಯಣ್ಣ ಕಚೇರಿಗೆ ಹೊತ್ತೊಯ್ದಿದ್ದನ್ನು ಗಮನಿಸಿದ ನಾವು ಒಂದರ್ಧ ಗಂಟೆಯ ತರುವಾಯ ನಿಧಾನಗತಿಯಲ್ಲಿ ಪೋಸ್ಟ್ ಆಫೀಸ್ ಬಳಿ ಹೋಗಿ ಅಂಚೆಮಾಸ್ಟರನ್ನು ಫಲಿತಾಂಶದ ಟಪಾಲಿನ ಬಗ್ಗೆ ವಿಚಾರಿಸಿದೆವು. “ಇಂದೂ ನಿಮ್ಮ ಫಲಿತಾಂಶ ಬಂದಿಲ್ಲ ಕಣ್ರಪ್ಪಾ” ಎನ್ನುವ ತಳವಾರರ ತಣ್ಣನೆಯ, ಯಾಂತ್ರಿಕವಾದ ಉತ್ತರ, ಬೇಸಿಗೆಯ ಬಿಸಿಲಿನ ಝಳವನ್ನು ಹೆಚ್ಚುಮಾಡಿದ ಅನುಭವ ಅಂದು ಅಲ್ಲಿ ನೆರೆದ ನಮ್ಮದಾಗಿತ್ತು. ಇಲ್ಲಿಂದ ಮುಂದೆ ಪೊಲೀಸರ ಸರ್ಪಗಾವಲಿನಲ್ಲಿಯೇ ನಿಲ್ದಾಣಕ್ಕೆ ಬಂದು ಹೋಗಿ ಮಾಡುತ್ತಿದ್ದ ವಿಜಯಣ್ಣನನ್ನು ದೂರದಿಂದಲೇ ನೋಡುತ್ತಿದ್ದ ನಾವು ಆತನನ್ನು ಫಲಿತಾಂಶದ ಬಗ್ಗೆ ಮತ್ತೆ ಪ್ರಶ್ನೆ ಮಾಡುವ ಧೈರ್ಯವನ್ನು ಮಾಡಲಿಲ್ಲ. ಇಲ್ಲಿಂದ ಮುಂದೆ ಒಂದು ವಾರದಷ್ಟು ಕಾಲ ನಮ್ಮನ್ನು ನಿರೀಕ್ಷೆಯ ತುದಿಗಾಲಲ್ಲೇ ನಿಲ್ಲಿಸಿದ್ದ ಪ್ರೌಢಶಿಕ್ಷಣ ಮಂಡಳಿ ಕೊನೆಗೂ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಅಂಚೆಚೀಲವೊಂದರಲ್ಲಿ ಬಂಧಿಯಾಗಿಸಿ ಊರ ಅಂಚೆಕಚೇರಿಗೆ ತಲುಪಿಸಿದ ಸವಿಸುದ್ದಿಯನ್ನು ತಳವಾರರ ಮೂಲಕ ತಿಳಿದ ಹುಡುಗರ ಗುಂಪು ಒಡನೆಯೇ ಹೈಸ್ಕೂಲಿಗೆ ಹೋಗಿ, ವಿಜಯಣ್ಣ ಸ್ಕೂಲಿಗೆ ಅಂಚೆ ಬಟವಾಡೆ ಮಾಡುವುದನ್ನೇ ಸುಮಾರು ಒಂದು ಗಂಟೆಯವರೆಗೆ ಕಾಯುತ್ತಾ ಕುಳಿತಿದ್ದು, ಅಲ್ಲಿಂದ ಮುಂದೆ ಗುಮಾಸ್ತ ಬಸವರಾಜ್ ಸಿದ್ಧಪಡಿಸಿದ ಫಲಿತಾಂಶದ ಪಟ್ಟಿಯನ್ನು, ಶಾಲೆಯ ಮುಖ್ಯದ್ವಾರದ ಬಲಭಾಗದ ಮೊದಲ ಕೋಣೆಯ ತೆರೆದ ಕಿಟಕಿಯ ಹಿಂಭಾಗದಲ್ಲಿ ನಿಲ್ಲಿಸಿದ್ದ ನೋಟಿಸ್ ಬೋರ್ಡಿಗೆ ಅಂಟಿಸುವವರೆಗೂ ಕಾಯ್ದಿದ್ದು, ನಮ್ಮ ಫಲಿತಾಂಶಗಳನ್ನು ನೋಡಿಕೊಂಡೇ ಹಗುರವಾದ ಎದೆಗಳೊಂದಿಗೆ ಮನೆಗಳನ್ನು ಸೇರಿದೆವು. ಪರೀಕ್ಷೆಯಲ್ಲಿ ನಪಾಸಾದ ನಮ್ಮ ಹಲವು ಮಿತ್ರರು, ಅಲ್ಲಿಯವರೆಗೂ ವಾರಗಳ ಕಾಲ ನಡೆದ ಬಸ್ ಸ್ಟ್ಯಾಂಡಿನ ಪ್ರಹಸನಕ್ಕೆ ನಮಗೆ ಭರಪೂರ ಸಾಥ್ ಕೊಟ್ಟಿದ್ದರೂ, ಫಲಿತಾಂಶದ ಪಟ್ಟಿಯನ್ನು ನೋಡಿದ ನಂತರದಲ್ಲಿ ನಮ್ಮಿಂದ ಬೇರೆಯಾಗಿ, ಸಾಕಷ್ಟು ಹಿಂದೆಯೇ ಮತ್ತೊಂದು ಗುಂಪಾಗಿ ನಿಧಾನಗತಿಯಲ್ಲಿ ನಡೆದು ಬರತೊಡಗಿದ್ದರ ಕಾರಣ ಆ ಹೊತ್ತಿನಲ್ಲಿಯೇ ನನಗೆ ನಿಚ್ಚಳವಾಗಿ ಅರಿವಾಗಿತ್ತು. ನಮ್ಮ ಫಲಿತಾಂಶ ನಿರೀಕ್ಷೆಯ ಪ್ರಹಸನದ ಒಟ್ಟಂದದ ಫಲಶೃತಿ ಎಂದರೆ ಅಲ್ಲಿಂದ ಮುಂದೆ ಮೇ ಮೊದಲನೇ ವಾರದಿಂದ ಮೊದಲುಗೊಂಡಂತೆ, ಆ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಬರುವ ದಿನದವರೆಗೂ, ಅಂಚೆಪೇದೆ ವಿಜಯಣ್ಣನಿಗೆ ಬೆಂಗಾವಲಿನ ರೂಪದಲ್ಲಿ, ಅಂಚೆಕಚೇರಿಗೆ ಕಲ್ಲೆಸೆತದ ದೂರದಲ್ಲಿಯೇ ಇದ್ದ ಊರ ಪೊಲೀಸು ಠಾಣೆಯ ಇಬ್ಬರು ಪೊಲೀಸ್ ಪೇದೆಗಳ ನೇಮಕವಾಗುತ್ತಿದ್ದದ್ದು ಆಗಬಾರದ ಘಟನೆಯೊಂದರ ಕಾರಣದಿಂದ ಮೊದಲುಗೊಂಡರೂ, ವರ್ಷಗಳು ಉಳಿದ ಹಾಗೆ ಈ ಪೊಲೀಸು ಬೆಂಗಾವಲಿನ ಪದ್ಧತಿ, ಎಸ್ಸೆಸ್ಸೆಲ್ಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ಪ್ರತೀಕ್ಷೆಯ ಪ್ರಹಸನದ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದ್ದು ಮತ್ತು ಈ ಮೊದಲು ಮೇ ತಿಂಗಳು ಬಂತೆಂದರೆ ವಿಚಿತ್ರವಾದ ಚಡಪಡಿಕೆಗೆ ಈಡಾದಂತೆ ತೋರಿಬರುತ್ತಿದ್ದ ವಿಜಯಣ್ಣ ತನಗೆ ದೊರೆತ ಈ “ಸ್ಟೇಟಸ್ ಸಿಂಬಲ್” ನಿಂದಾಗಿ ಮೇ ಮೊದಲನೇ ವಾರದ ನಿರೀಕ್ಷೆಯನ್ನು, ಫಲಿತಾಂಶದ ನಿರೀಕ್ಷೆಯಲ್ಲಿ ತೊಡಗಿರುತ್ತಿದ್ದ ವಿದ್ಯಾರ್ಥಿಮಿತ್ರರಿಗಿಂತ ಒಂದು ಕೈ ಹೆಚ್ಚೇ ಎನ್ನುವ ಮಟ್ಟದ ನಿರೀಕ್ಷೆಯೊಂದಿಗೆ ಮಾಡತೊಡಗಿದ್ದು ಕೂಡ ನಮ್ಮ ಎಸ್ಸೆಸ್ಸೆಲ್ಸಿ ತಂಡದ ಹುಡುಗರ ದೊಡ್ಡ ಸಾಧನೆಯಾಗಿಯೇ ಉಳಿಯತಕ್ಕದ್ದು.

ಹೊರ ಪ್ರಪಂಚಕ್ಕೂ, ನನ್ನೂರಿಗೂ ಮಾಹಿತಿಯ, ಅರಿವಿನ, ಜ್ಞಾನದ ಏಕೈಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಊರ ಅಂಚೆಕಚೇರಿ ಊರ ಜನರ ಬದುಕಿನಲ್ಲಿ ಒಂದಲ್ಲ ಒಂದು ಕಾರಣಗಳಿಗಾಗಿ ಸದಾ ಹಸಿರನ್ನು ಮುರಿಯುತ್ತಲೇ ಮುಂದುವರೆದಿತ್ತು. ಅಂಚೆಕಚೇರಿಯ ಸಂಪರ್ಕಕ್ಕೆ ಬಾರದ ಜನರೇ ವಿರಳ ಎನ್ನುವಷ್ಟರ ಮಟ್ಟಿಗೆ ಜನರ ಬಾಳಬಟ್ಟೆಯಲ್ಲಿ ಹಾಸುಹೊಕ್ಕಾಗಿದ್ದ ಊರ ಅಂಚೆಕಚೇರಿ, ತನ್ನ ಗಾಢವಾದ ನೆನಪಿನ ಗಟ್ಟಿಜಾಡನ್ನೇ ನನ್ನ ತಲೆಮಾರನ್ನೂ ಒಳಗೊಂಡಂತೆ ಹಿಂದಿನ ನಾಲ್ಕಾರು ತಲೆಮಾರಿನ ಮತ್ತು ಮುಂದಿನ ಒಂದೆರೆಡು ತಲೆಮಾರಿನ ಯುವಕರ ಚಿತ್ತಭಿತ್ತಿಯಲ್ಲಿ ಭದ್ರವಾಗಿ ಬಿತ್ತಿದ್ದ ಸಂಗತಿಯನ್ನು ಆ ಸಮಯದಲ್ಲಿ ನನ್ನೂರಿನ ಜನಸಂಖ್ಯೆಯ ಭಾಗವಾದ ಯಾರೂ ಸುಲಭದಲ್ಲಿ ಅಲ್ಲಗಳೆಯಲಾರರು. ಈ ತಲೆಮಾರುಗಳ ಊರ ಯುವಕರು ಹೊರ ಊರಿನ ಉದ್ಯೋಗಗಳಿಗೆ ಈ ಅಂಚೆ ಕಚೇರಿಯ ವ್ಯವಹಾರದ ಕಿಂಡಿಯ ಕಿಟಕಿಯಿಂದಲೇ ಆವೇದನಾ ಪತ್ರಗಳನ್ನು, ಅಗತ್ಯ ಫೀಸಿನೊಂದಿಗೆ ಸಲ್ಲಿಸುತ್ತಿದ್ದು, ಮುಂದೆ ಅವರಿಗೆ ಬಂದ ಸಂದರ್ಶನದ ಕರೆಗಳೂ, ಉದ್ಯೋಗ ದೃಢೀಕರಣ ಪತ್ರಗಳೂ ಇದೇ ಕಚೇರಿಯಿಂದ, ವಿಜಯಣ್ಣ ಒತ್ತಿದ ಅಂಚೆ ಮೊಹರಿನೊಂದಿಗೆ ಪ್ರತ್ಯಾಷಿಗಳ ಕೈ ಸೇರಿದ್ದು ಸುಳ್ಳಲ್ಲ. ಬಳ್ಳಾರಿ ಮೃತ್ಯುಂಜಯಪ್ಪನ ಕೆಎಎಸ್ ಪರೀಕ್ಷೆಯ ಪ್ರತಿಯೊಂದು ಮಜಲಿಗೂ ಈ ಅಂಚೆಕಚೇರಿ ಸಾಕ್ಷಿಯಾದ ಹೊತ್ತು ಮಿಲಿಟರಿ ಗಂಗಣ್ಣ ಮಿಲ್ಟ್ರಿ ಸೇವೆಗೆ ಆಯ್ಕೆಯಾದ ಸಂತೋಷದ ಸಮಾಚಾರಕ್ಕೆ ಮಾಧ್ಯಮ ರೂಪದಲ್ಲಿ ಒದಗಿ ಬಂದಿದ್ದೂ ಇದೇ ಪೋಸ್ಟ್ ಆಫೀಸು. ವರ್ಷಗಳ ಕಾಲ ಸ್ವಾತಂತ್ರ್ಯ ಯೋಧರ ಗೌರವಧನಕ್ಕಾಗಿ ದುರ್ಗದ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲುಗಳನ್ನು ಹತ್ತೀ, ಇಳಿದು, ಹಲವಾರು ಜೊತೆ ಚಪ್ಪಲಿಗಳನ್ನು ಸವೆಸಿಕೊಂಡಿದ್ದ ಗೌಡರ ತಿಪ್ಪೇರುದ್ರಪ್ಪ ಮೇಷ್ಟ್ರ ಗೌರವಧನವನ್ನು ಅಖೈರಾಗಿ ಖಾತ್ರಿಗೊಳಿಸಿದ್ದೂ ಈ ಕಚೇರಿ ತಲುಪಿಸಿದ ಒಂದು ಪತ್ರವೇ. ರಾಯ್ನಳ್ಳಿ ವಸಂತಕುಮಾರನಿಗೆ ದೊರೆತ ದಾವಣಗೆರೆಯ ಸರ್ಕಾರಿ ಇಂಜಿನಿಯರಿಂಗ್ ಸೀಟನ್ನೂ, ಕುರಬರ ಸತ್ಯಪ್ಪನಿಗೆ ದೊರೆತ ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಸೀಟನ್ನೂ ದೃಢೀಕರಿಸಿದ್ದು ಈ ಅಂಚೆಕಚೇರಿಯ ಮುಖಾಂತರ ಸಂದಾಯವಾದ ಪತ್ರಗಳ ಮೂಲಕವೇ. ಬಳ್ಳಾರಿ ಮಂಜುನಾಥನಿಗೆ ಸ್ವಾತಂತ್ರ್ಯಯೋಧರ ಮೀಸಲಾತಿಯ ಕೋಟಾದಡಿ ದೊರೆತ ಬೆಂಗಳೂರು ಮೆಡಿಕಲ್ ಕಾಲೇಜಿನ ಸರ್ಕಾರಿ ಮೆಡಿಕಲ್ ಸೀಟನ್ನೂ, ಮೆಲಕೆತ್ತೆ ರಂಗನಾಥನಿಗೆ ಸಿಕ್ಕಿದ ದಾವಣಗೆರೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸೀಟಿನ ದೃಢೀಕರಣ ನಡೆದಿದ್ದೂ ಊರಿನ ಈ ಅಂಚೆಕಚೇರಿಯ ಮುಖಾಂತರವೇ. ಊರಿನ ಇಂತಹ ಅನೇಕ ಸುಖದ ಕೊಳ್ಳೆ ಹೊಡೆಯುವಂತ್ತಿದ್ದ ಸುದ್ದಿಗಳಲ್ಲಿ ಪ್ರಾತಿನಿಧಿಕ ಎನ್ನಬಹುದಾದ ಕೇವಲ ಕೆಲವೇ ಕೆಲವು ಘಟನೆಗಳನ್ನಷ್ಟೆ ನಾನು ಇಲ್ಲಿ ಉಲ್ಲೇಖಿಸಿರುವುದು. ನನ್ನ ವೈಯಕ್ತಿಕ ಜೀವನದ ವಿಷಯದಲ್ಲಿ ಉಲ್ಲೇಖಿಸಬೇಕು ಎಂದಾದಲ್ಲಿ ನನ್ನ ಪ್ರೌಢಶಾಲಾ ಅವಧಿಯ ಮೂರೂ ವರ್ಷಗಳ ಕಾಲ ನನಗೆ ಪ್ರಾಪ್ತವಾದ ರಾಷ್ಟ್ರಮಟ್ಟದ ಪ್ರತಿಭಾ ವಿದ್ಯಾರ್ಥಿವೇತನದ ಸಿಹಿಸುದ್ದಿಯನ್ನು ನನಗೆ ನೀಡಿದ್ದೂ ಈ ಅಂಚೆಕಚೇರಿಯ ಅಂಚೆಪೇದೆ ವಿಜಯಣ್ಣನೇ. ಹೀಗೆ ಈ ಅಂಚೆಕಚೇರಿಯಿಂದ ಉಪಕೃತರಾದ ಅಗಣಿತ ಜನಗಳ ಪಟ್ಟಿಯೇ ನನ್ನ ಬಳಿ ಇದೆ. ಈ ಲೇಖನವನ್ನು ಓದುತ್ತಿರುವ ಆ ಹೊತ್ತಿನ ಊರ ಹುಡುಗರು ತಮ್ಮದೇ ಆದ ವೈಯಕ್ತಿಕ ಸುಖದ ವಿಚಾರವನ್ನು ಪೋಸ್ಟ್ ಆಫೀಸಿನಿಂದ ಪಡೆದ ಸಂಗತಿಗಳ ನೆನಪನ್ನು ಖಂಡಿತಾ ಮತ್ತೊಮ್ಮೆ ಮೆಲುಕು ಹಾಕುತ್ತಾರೆ ಎನ್ನುವ ಗಟ್ಟಿನಂಬಿಕೆ ನನಗಿದೆ. ಹೀಗೆ, ಅಂಚೆಕಚೇರಿಯ, ಅಂಚೆಪೇದೆ ವಿಜಯಣ್ಣನಿಂದ ಪಡೆದ ಒಂದು ಸರ್ಕಾರಿ ಅಥವಾ ಸರ್ಕಾರೇತರ ತುಂಡು ಕಾಗದದ ಮುಖೇನ ತಮ್ಮ ಜೀವನದಲ್ಲಿ ಆದ ಪವಾಡಸದೃಶ ಘಟನೆಗಳ ಎಂದೂ ಮುಗಿಯದ ಗಾಥೆಗಳು ನನ್ನೂರಿನ ಇತಿಹಾಸದ ಭಾಗವಾಗಿಯೇ ಉಳಿದು ಹೋಗಿವೆ.

ಹಾಗಾದರೆ, ಅಂಚೆಕಚೇರಿ ಊರ ಮಟ್ಟಿಗೆ ಬರಿಯ ಸುಖವನ್ನಷ್ಟೆ ಬಗೆಬಗೆದು ಕೊಟ್ಟ ಸತ್ಪಾತ್ರಕ್ಕೆ ಪಾತ್ರವಾಗಿತ್ತೇ? ಪೋಸ್ಟ್ ಆಫೀಸ್ ವತಿಯಿಂದ ಎಂದೂ ಊರಜನರಿಗೆ ದುಃಖವನ್ನು ಹಂಚವ ಪ್ರಯತ್ನಗಳು ನಡೆದೇ ಇಲ್ಲವೇ? ಇರಲಿಕ್ಕಿಲ್ಲ, ಊರ ಜನರ ಜೀವನದ ಎಲ್ಲಾ ಸುಖದುಃಖಗಳನ್ನೂ ಸಮಾನವಾದ ರೀತಿಯಲ್ಲಿಯೇ ಹಂಚಿ ಅಂಚೆಕಚೇರಿ ಕೃತಕೃತ್ಯತೆಯ ಭಾವನೆಗೆ ಸರಿದಿದೆ ಎಂದು ನನ್ನ ಅಂಬೋಣ. ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳು, ಮಾನವಜೀವವೊಂದು ಅನುಭವಿಸಿಯೇ ತೀರಬೇಕಾದ ನದಿಯ ಎರಡು ತಟಗಳ ಹಾಗೆ ಎಂದಾದರೆ, ಊರ ಅಂಚೆಕಚೇರಿಯೂ ಅದನ್ನು ತನ್ನ ಕಾರ್ಯವೈಖರಿಯಲ್ಲಿ ಪ್ರತಿಫಲಿಸಿರಬೇಕಲ್ಲವೇ? ಹೌದು, ಖಂಡಿತವಾಗಲೂ ಅಂಚೆಪೇದೆ ವಿಜಯಣ್ಣ ಸುಖಗಳನ್ನು ಊರ ಜನರಿಗೆ ವಿತರಿಸಿದ ಹಾಗೆ ಅವರ ದುಃಖಗಳಿಗೂ ಕಾರಣೀಭೂತನಾದದ್ದಿದೆ. ಬಳ್ಳಾರಿ ಗಂಗಣ್ಣ ಮಿಲಿಟ್ರಿ ಸೇವೆಯಿಂದ ಬರಕಾಸ್ತಾದ ವಿಷಯವೇ ಆಗಲಿ, ಸರ್ಕಾರಿ ಬಸ್ ಡ್ರೈವರ್ ನರಸಪ್ಪನವರ ತಿಪ್ಪೇಸ್ವಾಮಿಯ ಅಕಾಲಿಕ ಮರಣವಾರ್ತೆಯೇ ಆಗಲಿ ಸಂಬಂಧಪಟ್ಟವರಿಗೆ ತಲುಪಿದ್ದು ಊರ ಅಂಚೆಕಚೇರಿಯ ಮೂಲಕವೇ. ಹರೆಯದಲ್ಲೇ ತನ್ನನ್ನು ನಂಬಿದವರನ್ನು ನಡುನೀರಿನಲ್ಲಿ ಕೈಬಿಟ್ಟು ಎಂದೂ ಬಾರದ ಲೋಕಕ್ಕೆ ಪಯಣಿಸಿದ ನನ್ನ ಸೋದರಮಾವ ಗೌಡರ ಸೋಮಣ್ಣ ಭದ್ರಾವತಿಯಲ್ಲಿ ಹೃದಯಾಘಾತದಿಂದ ಮಡಿದ ವಿಷಯವೇ ಆಗಲಿ, ಗೌಡರ ಪರಮಶಿವಣ್ಣನ ಮಗ ಜಿ.ಪಿ. ತಿಪ್ಪೇಸ್ವಾಮಿ, ಮೈಸೂರಿನಲ್ಲಿ ಜರುಗಿದ ಅಪಘಾತವೊಂದರಲ್ಲಿ ಅಕಾಲಮೃತ್ಯುವಿಗೆ ಎರವಾದ ಎದೆನಡುಗಿಸುವ ಸುದ್ದಿಯೇ ಆಗಲಿ, ಊರಲ್ಲಿದ್ದ ಸಂಬಂಧಿಕರ ಕಿವಿಗಳನ್ನು ತಲುಪಿದ್ದು ಮಾತ್ರ ಈ ಪೋಸ್ಟ್ ಆಫೀಸ್ ಮುಖಾಂತರವೇ. ಸುಖ ಮತ್ತು ದುಃಖದ ಅರುಹುವಿಕೆಯಲ್ಲಿ, ಅಂಚೆಕಚೇರಿ ವತಿಯಿಂದ ಆಗುತ್ತಿದ್ದ ವಿಷಯಗಳ ಬಟವಾಡೆಯಲ್ಲಿ ಸಾಮ್ಯತೆಗಳು ಹೇರಳವಾಗಿದ್ದ ಹೊತ್ತೂ ಮಾಧ್ಯಮಗಳ ಆಯ್ಕೆಯಲ್ಲಿ ಇದ್ದ ವ್ಯತ್ಯಾಸಗಳು ನನ್ನ ಕಣ್ಣುಗಳನ್ನು ಕುಕ್ಕದೇ ಬಿಟ್ಟಿಲ್ಲ. ಅಪರಿಮಿತ ಸಂತೋಷವನ್ನು ಸೂರೆಗೊಳ್ಳುತ್ತಿದ್ದ ಸಂಗತಿಗಳು ಕಾಗದಪತ್ರಗಳ ಮುಖೇನ ಸಂಬಂಧಪಟ್ಟವರಿಗೆ ರವಾನೆಯಾಗುತ್ತಿದ್ದ ಹೊತ್ತು, ದುಃಖಕ್ಕೆ ಮೂಲವಾಗಬಹುದಾದ ಸಂಗತಿಗಳನ್ನು ಟೆಲಿಗ್ರಾಂ ಅಥವಾ ಆ ಹೊತ್ತಿಗೆ ಊರ ಏಕೈಕ ದೂರವಾಣಿ ಸಂಪರ್ಕವಿದ್ದ ಅಂಚೆಕಚೇರಿಯ ಮಾಧ್ಯಮಗಳನ್ನು ಬಳಸಿಯೇ ತಿಳಿಸುವ ಸಂಗತಿ ನನ್ನ ಗಮನವನ್ನು ಸೆಳೆದಿತ್ತು. ಸುಖಕರ ವಿಷಯಗಳನ್ನು ನಿಧಾನವಾಗಿ ಅರಿತರೂ ಪರವಾಗಿಲ್ಲ, ಅಳಲಿಗೆ ಕಾರಣವಾಗಬಹುದಾದ ವಿಷಯಗಳ ವಿಲೇವಾರಿ ಶೀಘ್ರದಲ್ಲಿಯೇ ಆಗಬೇಕು ಎನ್ನುವ ವಿಧಿನಿಯಾಮಕ ತತ್ವವನ್ನೇ ನನ್ನೂರಿನ ಅಂಚೆಕಚೇರಿ ಪಾಲಿಸಿದ್ದ ಹಾಗೆ ಕಂಡುಬಂದಿದ್ದು ನನ್ನ ಅನಂತ ಚಕಿತಕ್ಕೆ ಕಾರಣವಾಗಿತ್ತು. ವಿಜಯಣ್ಣ ಮನೆಮನೆಗೆ ಬಂದು ಕಾಗದಪತ್ರಗಳನ್ನು ವಿತರಿಸುವ ಹೊತ್ತು ಗಾಬರಿಗೆ ಒಳಗಾಗದ ಊರ ಜನರ ಮನಗಳು ವಿಜಯಣ್ಣ ಟೆಲಿಗ್ರಾಂ ತಂದ ಅಂದಮಾತ್ರಕ್ಕೆ ಅಥವಾ “ನಿಮಗೆ ಫೋನ್ ಬಂದಿದೆ, ಪೋಸ್ಟ್ ಆಫೀಸಿಗೆ ಬನ್ನಿ” ಎಂದು ವಿಜಯಣ್ಣ ಆಹ್ವಾನಿಸುವ ಹೊತ್ತು ಇನ್ನಿಲ್ಲದಂತೆ ಹೊಡೆದುಕೊಳ್ಳುತ್ತಿದ್ದ ಹಿಂದಿನ ನಿಜವಾದ ಕಾರಣಗಳು ಇನ್ನೂ ನನಗೆ ಗೋಚರಿಸಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾದ ಘಟನೆಗಳೂ ನಡೆದೇ ಇಲ್ಲವೆಂದು ಏನೂ ಇಲ್ಲ. ಪತ್ರಗಳ ಮೂಲಕ ಅರುಹಿದ ಹೃದಯ ವಿದ್ರಾಹಕ ಸಂಗತಿಗಳೂ, ಟೆಲಿಗ್ರಾಂ ಯಾ ಫೋನಿನ ಮುಖಾಂತರ ಅರುಹಲ್ಪಟ್ಟ ಸಂತೋಷದ ವಿಚಾರಗಳಿಗೂ ಬರವೇನೂ ಇರಲಿಲ್ಲ. ಸಂತೋಷದ ಸಮಾಚಾರವನ್ನು ಲೇಟಾಗಿ ಕೇಳುವ ಮುಖೇನ ಸಂಚಿತವಾಗಬಹುದಾದ ಸಂತಸವನ್ನು ತುಸು ತಡವಾಗಿಯಾದರೂ ಅನುಭವಿಸೋಣ ಆದರೆ ದುಃಖದ ವಿಷಯಗಳನ್ನು ಅವು ಘಟಿಸಿದ ಅನಿತರಲ್ಲಿಯೆ ತಿಳಿಯಬೇಕು ಎನ್ನುವ ಮನುಷ್ಯಜನ್ಯ ಸ್ವಭಾವ, ಸುದ್ದಿ ಬಿತ್ತರಿಕೆಯಲ್ಲಿ ಮಾಧ್ಯಮಗಳ ಆಯ್ಕೆಯಲ್ಲಿ ಇದ್ದಂತಹ ಈ ಮಹತ್ತರ ಬದಲಾವಣೆಯ ಹಿನ್ನೆಲೆಯಲ್ಲಿ ಇಣುಕುತ್ತಿತ್ತೇ? ನಾ ಅರಿಯೆ.

ಊರಮಟ್ಟಿಗೆ ದಶಕಗಳ ಕಾಲ ಜ್ಞಾನದ ಏಕೈಕ ಕಿಂಡಿಯ ರೂಪದಲ್ಲಿ ಕೆಲಸ ಮಾಡಿದ ಅಂಚೆಕಚೇರಿ ನನ್ನೂರನ್ನು ಹೊರಜಗತ್ತಿಗೆ ಬೆಸೆದ ಒಂಟಿಕೊಂಡಿಯಾಗಿಯೇ ತನ್ನ ಪ್ರಾಧ್ಯಾನ್ಯತೆಯನ್ನು ಮೆರೆಯುತ್ತಿತ್ತು. ಊರ ಒಳಗೆ ಹರಿದು ಬರುತ್ತಿದ್ದ ಅಂದಿನ ಹೊರ ಜಗತ್ತಿನ ಎಲ್ಲಾ ಜ್ಞಾನಗಂಗೆಯ ಟಿಸಿಲುಗಳೂ ಅಂಚೆಕಚೇರಿ ಎನ್ನುವ ದ್ವೀಪವನ್ನು ಬಳಸಿಯೇ ಊರ ಜನರ ಸಾರ್ವತ್ರಿಕ ಬಳಕೆಗೆ ಅರ್ಪಿತವಾಗಬೇಕಿತ್ತು . ಅಂದಿನ ಘನಸರ್ಕಾರಗಳು ಕೊಡಮಾಡಿದ ಹತ್ತೂ ಹಲವು ಸವಲತ್ತುಗಳು ಅಂಚೆಕಚೇರಿಯ ಮುಖಾಂತರವೇ ಫಲಾನುಭವಿಗಳನ್ನು ತಲುಪಬೇಕಿತ್ತು. ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ನನ್ನೂರಿನ ಅಂಚೆಕಚೇರಿಯೇ ಕೇಂದ್ರಬಿಂದು, ಬೆನ್ನುಹುರಿಯೆನ್ನಿಸಿ ಜೀವನಾಧಾರ ಸ್ತಂಭವೊಂದರ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನಾನು ಬೆಳೆದು ದೊಡ್ಡವನಾದ ಹಾಗೆ ಸಾವಿರಗಳ ಸಂಖ್ಯೆಯಲ್ಲಿ ಅನೇಕ ವಿಧವಾದ ಸಂಖ್ಯೆಗಳನ್ನು ನೆನಪಿಟ್ಟುಕೊಂಡಿದ್ದೇನೆ. ಆದರೆ ನನ್ನ ಈ ಸಾಹಸದ ಉಗಮ ಬಿಂದು ಮಾತ್ರ ನನ್ನ ಪಾಲಿನ ವಿಶೇಷ ಸಂಖ್ಯೆಯಾದ ೫೭೭ ೫೧೭. ಇದು ನನ್ನೂರಿನ ಅಂಚೆಕಚೇರಿಯ ಪಿನ್ ಕೋಡ್ ಸಂಖ್ಯೆ. ನಮ್ಮ ಊರಿನ ಪ್ರಾಥಮಿಕ ಶಾಲೆಗಳಲ್ಲಿ, ನಮ್ಮ ಗುರುಗಳು, ಈ ನಂಬರನ್ನು ಉರುಲು ಹೊಡೆಯಲು ಹೇಳುತ್ತಿದ್ದರು. ಪರ ಊರುಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಹೊತ್ತು ನಮ್ಮ ಸಹಾಯಕ್ಕೆ ಈ ಪಿನ್ ಕೋಡ್ ಬಂದೇ ಬರುತ್ತದೆ ಎಂದೇ ಚಿಣ್ಣರಾದ ನಾವು ನಂಬಿದ್ದೆವು.

ಯಾವುದೇ ಸರ್ಕಾರಿ ಸೇವೆಯಿರಲಿ, ಅದನ್ನು ಜನರಿಗೆ ತಲುಪಿಸುವಲ್ಲಿ ಆ ಸೇವೆಗಳನ್ನು ನಿರ್ವಹಿಸಲು ನಿಯುಕ್ತಿ ಹೊಂದಿದ ಜನಗಳ ಮಾನಸಿಕ ಸ್ಥಿತಿಗತಿ, ಮನೋಭಾವ ಮತ್ತು ವರ್ತನೆಗಳು ಬಹಳ ಮುಖ್ಯವಾಗುತ್ತವೆ. ಇಲಾಖೇತರ ನೌಕರನಾಗಿ, ಯಾವ ವಿಶೇಷ ಸೌಲಭ್ಯಗಳೂ ಇಲ್ಲದೆ, ವಾರ್ಷಿಕ ರಜೆಯಿಂದಲೂ ವಂಚಿತನಾಗಿ, ನೌಕರಿಯಲ್ಲಿ ಒಂದು ಬಡ್ತಿಯನ್ನೂ ಕಾಣದೆ, ಅತ್ಯಲ್ಪ ಮಾಸಿಕ ಸಂಬಳದಲ್ಲಿ, ನಿವೃತ್ತಿಯ ನಂತರದ ಪಿಂಚಣಿಯೂ ಇಲ್ಲದೆ ದಶಕಗಳ ಕಾಲ ಅವ್ಯಾಹತವಾಗಿ ತುರುವನೂರು ಮತ್ತು ಸುತ್ತಮುತ್ತಲ ಸುಮಾರು ಹತ್ತು ಹನ್ನೆರೆಡು ಕಿಮೀಗಳ ಫಾಸಲೆಯಲ್ಲಿ ಬರುವ ಏಳೆಂಟು ಹಳ್ಳಿಗಳಿಗೆ ಅಂಚೆ ಕಾಗದಪತ್ರಗಳನ್ನು ವಿತರಿಸುತ್ತಲೇ ತನ್ನ ಯೌವನವನ್ನೂ ಅಂಚೆಸೇವೆಯ ಹೆಸರಿನಲ್ಲಿಯೇ ದಹಿಸಿದ ವಿಜಯಣ್ಣ ಸೇವೆಗೆ ಇಡಬಹುದಾದ ಮತ್ತೊಂದು ಪರ್ಯಾಯ ಹೆಸರಿನ ರೂಪದಲ್ಲಿಯೇ ನನ್ನನ್ನು ದಶಕಗಳ ಬಳಿಕವೂ ಕಾಡುತ್ತಲೇ ಇದ್ದಾನೆ. ಜಾತಿಯಿಂದ ಬ್ರಾಹ್ಮಣನಾದ ವಿಜಯಣ್ಣ ಅತ್ಯಂತ ಸಂಭಾವಿತ ಮತ್ತು ದೈವಭೀರು ಎನಿಸಿದ್ದವನು. ಕುಳ್ಳಗೆ, ಸಣ್ಣಗೆ, ಗೌರವರ್ಣದವನಾಗಿದ್ದ ವಿಜಯಣ್ಣ ಒಂದು ತುಂಡು ಬಿಳಿ ಲುಂಗಿ ಮತ್ತು ತೋಳುಮಟ್ಟಕ್ಕೆ ಮಡಿಚಿರುತ್ತಿದ್ದ ಶರ್ಟ್ ಬಿಟ್ಟರೆ ಬೇರೆ ದಿರಿಸುಗಳಲ್ಲಿ ನನಗೆ ಕಂಡಿದ್ದೇ ಇಲ್ಲ. ದೂರಕ್ಕೂ ಢಾಳಾಗಿ ಎದ್ದು ಕಾಣುವಂತಿದ್ದ ಆತನ ಹಣೆಯ ಮೇಲಿರುತ್ತಿದ್ದ ದೊಡ್ಡಗಾತ್ರದ ಕುಂಕುಮ, ಬಲಕಿವಿಯಲ್ಲಿ ಮುಡಿದ ಒಂಟಿ ಮಲ್ಲಿಗೆ ಹೂವು ವಿಜಯಣ್ಣನ ಹೊರಜಗತ್ತಿಗೆ ಅತಿಪರಿಚಿತವಾದ ಸಿದ್ದ ಪರಿಕರಗಳು. ಸದಾ ನಗೆಯನ್ನೇ ಮುಖದ ಮೇಲೆ ಹೊದ್ದಿರುತ್ತಿದ್ದ ವಿಜಯಣ್ಣನ ಸರ್ವಋತುವಿನ ಸಂಗಾತಿ ಎಂದರೆ ಆತನ ಬೈಸಿಕಲ್ ಮಾತ್ರ. ಊರಲ್ಲಿ ಮನೆಮನೆಗೆ ನಡೆದೇ ಅಂಚೆ ಹಂಚುತ್ತಿದ್ದ ವಿಜಯಣ್ಣ, ಸುತ್ತಮುತ್ತಲ ಊರುಗಳಿಗೆ ಅಂಚೆ ಬಟವಾಡೆ ಮಾಡಲು ಹೊರಡುವ ವೇಳೆಯಲ್ಲಿ ಮಾತ್ರ ತನ್ನ ಸೈಕಲನ್ನು ಜರೂರಾಗಿ ಬಳಸುತ್ತಿದ್ದ. ಮಧ್ಯಾಹ್ನದ ಸುಮಾರು ಮೂರು ಗಂಟೆಯ ವೇಳೆಗೆ, ಊರಿನ ಎಲ್ಲಾ ಅಂಚೆ ಸಂಬಂಧಿತ ಕೆಲಸಗಳನ್ನೂ ತೃಪ್ತಿಕರವಾದ ರೀತಿಯಲ್ಲಿ ಮುಗಿಸಿ, ಸುತ್ತಮುತ್ತಲ ಹಳ್ಳಿಗಳ ಕಾಗದಪತ್ರಗಳನ್ನು ಅಂಚೆ ಚೀಲದಲ್ಲಿ ತುಂಬಿಕೊಂಡು ವಿಜಯಣ್ಣ ಊರು ತೊರೆದ ಎಂದರೆ ಅಂಚೆ ವಿತರಣೆಯ ತರುವಾಯ ಆ ಊರುಗಳಲ್ಲಿ ಸಂಗ್ರಹವಾದ ಅಂಚೆಪೆಟ್ಟಿಗೆಗಳ ಕಾಗದಪತ್ರಗಳನ್ನು ಸಂಗ್ರಹಿಸಿ ಮತ್ತೆ ಊರಿಗೆ ಆತ ಮರಳುವ ವೇಳೆಗೆ ರಾತ್ರಿ ಸುಮಾರು ಒಂಬತ್ತು ಗಂಟೆಯಾಗಿರುತ್ತಿತ್ತು. ಸುಮಾರು ಎಂಟಕ್ಕಿಂತಲೂ ಹೆಚ್ಚಿನ ಸಂಖ್ಯೆಯ, ನಮ್ಮೂರಿನ ಪೋಸ್ಟ್ ಆಫೀಸ್ ಅಧೀನದಲ್ಲಿದ್ದ, ಊರಿನ ನಾಲ್ಕೂ ದಿಕ್ಕಿಗೆ ಹರಡಿದ್ದ ಸಣ್ಣಪುಟ್ಟ ಹಳ್ಳಿಗಳನ್ನು ಒಂದೇ ದಿನದಲ್ಲಿ ಕವರ್ ಮಾಡುವುದು ಅಸಾಧ್ಯವಾದ ಕಾರಣದಿಂದಾಗಿ ಪ್ರತೀ ಮೂರು ದಿನಗಳಿಗೊಮ್ಮೆ ಮಾತ್ರ ವಿಜಯಣ್ಣ ನಿರ್ದಿಷ್ಟ ಹಳ್ಳಿಗೆ ಮತ್ತೊಮ್ಮೆ ಭೇಟಿಕೊಡುತ್ತಿದ್ದ. ಬಿಸಿಲೇ ಇರಲಿ, ಚಳಿಯೇ ಇರಲಿ, ಮಳೆ “ಧೋ” ಎಂದು ಹುಯ್ಯುತ್ತಲಿರಲಿ, ಬಿರುಗಾಳಿ ತನ್ನ ಭೀಷಣ ತಾಂಡವನೃತ್ಯವನ್ನು ನಡೆಸುತ್ತಲೇ ಇರಲಿ ವಿಜಯಣ್ಣನ ಕಾಯಕಯಜ್ಞಕ್ಕೆ ಯಾವತ್ತೂ ಅಡ್ಡಿ ಬಂದಿದ್ದೇ ಇಲ್ಲ. ತಾನು ಹುಟ್ಟುವಾಗ ಕೈಲಾಸದಲ್ಲಿ, ತನ್ನನ್ನು ಹುಟ್ಟಿಸಿದ ದೇವರಿಗೆ ಮಾತು ಕೊಟ್ಟು ಬಂದವನ ಹಾಗೆ, ಭಾರತೀಯ ಅಂಚೆ ಇಲಾಖೆಯ ಸಕಲ ಸದ್ಗುಣಗಳನ್ನೂ ತನ್ನಲ್ಲಿ ಮೇಳೈಸಿಕೊಂಡ ತೆರನಾಗಿ, ಅಂಚೆಸೇವೆಯ ಪೂಜಾರ್ಚನೆಯಲ್ಲಿ ತನ್ನನ್ನು ತಾನು ಗಂಧದಂತೆ ತೇಯ್ದುಕೊಂಡ ವಿಜಯಣ್ಣ ಅಂಚೆ ಇಲಾಖೆಗೆ ಮಾಡಿದ ಸೇವೆಯ ವ್ಯಾಪ್ತಿವಿಸ್ತಾರಗಳನ್ನು ಅರಿಯುವುದು ಅತ್ಯಂತ ಜಟಿಲವಾದ ವಿಷಯವೇ. ವಿಜಯಣ್ಣ ಕಾಗದಪತ್ರಗಳನ್ನು ತಲುಪಿಸುತ್ತಿದ್ದ ವ್ಯಕ್ತಿಗಳಲ್ಲಿ ಶೇಕಡಾ ಎಪ್ಪತ್ತರಷ್ಟು ಭಾಗದವರು ಅನಕ್ಷರಸ್ಥರೇ. ಕಾಗದ ಕೈಯಲ್ಲಿ ಹಿಡಿದವರಿಗೆ ಅದರ ತಲೆಬುಡ ಕೂಡಾ ಅರ್ಥವಾಗದ ಸನ್ನಿವೇಶಗಳೇ ಹೆಚ್ಚು. ಇಂತಹವರ ದಯನೀಯ ಸ್ಥಿತಿ ಕಂಡು ಮನಸ್ಸಿನಲ್ಲಿಯೇ ಮಮ್ಮಲ ಮರುಗುತ್ತಿದ್ದ ಹೆಂಗರುಳಿನ ವಿಜಯಣ್ಣ, ಅಂತಹ ಸಂದರ್ಭಗಳಲ್ಲಿ ತಾನೇ ಪತ್ರಗಳನ್ನು ಸಂಬಂಧಿಸಿವರಿಗೆ ಓದಿ ಹೇಳುತ್ತಿದ್ದ. ಕೆಲವು ಬಾರಿ ತಾನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕಾಗದ, ಇನ್ಲ್ಯಾಂಡ್ ಲೆಟರ್ ಗಳನ್ನು ಹಳ್ಳಿಗರಿಗೆ ಕೊಟ್ಟು, ಅವುಗಳ ಮೇಲೆ ಹಳ್ಳಿಗರು ಅರುಹಿದ ಉತ್ತರಗಳನ್ನು ಬರೆದು, ಪತ್ರಗಳನ್ನು ತನ್ನೊಟ್ಟಿಗೇ ತಂದು, ಊರಿನ ಹೊರ ಹೋಗುವ ಟಪಾಲಿನಲ್ಲಿ ಸೇರಿಸುತ್ತಿದ್ದ. ವಿಜಯಣ್ಣನ ಬಗ್ಗೆ ಹೇಳಬಹುದಾದ ಮತ್ತೊಂದು ಬಂಗಾರದ ಮಾತು ಎಂದರೆ ಆತ ಲಕ್ಷಾಂತರ ಕಾಗದ ಪತ್ರಗಳನ್ನು ಅಂದರೆ ಸಹಸ್ರಾರು ಮನೆಗಳ ಸುದ್ದಿಗಳನ್ನು ಓದಿ ಸಂಬಂಧಪಟ್ಟ ಮನೆಯವರಿಗೆ ಅರುಹಿದ್ದರೂ ಆ ವಿಷಯಗಳಲ್ಲಿ ಒಂದನ್ನೂ ತನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಲೇ ಇರಲಿಲ್ಲ. ಕೋರಾ ಕಾಗದದಂತೆ ತನ್ನ ಮನಸ್ಸನ್ನು ಸದಾ ಶುಭ್ರವಾಗಿಯೆ ಇಟ್ಟುಕೊಳ್ಳಬಯಸುತ್ತಿದ್ದ ವಿಜಯಣ್ಣ ಬಂಗಾರಕ್ಕನಹಳ್ಳಿ ಪಟೇಲರ ಮನೆಗೆ ಬಂದ ಪಟೇಲರ ವಿವಾಹಿತ ಮಗಳನ್ನು ಮಾತನಾಡಿಸುತ್ತಾ “ಯಾವಾಗ ಬಂದ್ರಿ ತಾಯೀ?” ಎಂದು ಕೇಳಲು ಅಲ್ಲಿಯೇ ಅಂಗಳದಲ್ಲಿ ಬಿಸಿಲಿಗೆ ಮಜ್ಜಿಗೆ ಮೆಣಸಿನಕಾಯಿಯನ್ನು ಹರಡುತ್ತಿದ್ದ ಪಟೇಲರ ಹೆಂಡತಿ ಗೌರಮ್ಮ “ಯಾಕೆ ವಿಜಯಣ್ಣ, ಹತ್ತು ದಿನಗಳ ಹಿಂದೆ ನೀನೇ ಅಲ್ಲವೇನು, ಊರಿನಿಂದ ನಮ್ಮ ಹುಡುಗಿ ತವರುಮನೆಗೆ ಬರುವ ವಿಚಾರವನ್ನು ನಮಗೆ ಓದಿ ಹೇಳಿದ್ದು” ಎಂದರೆ “ಹೌದಾ? ಹಾಗೇನು? ನಾನು ಮರೆತುಬಿಟ್ಟಿದ್ದೇನೆ ಅಮ್ಮಾ” ಎಂದು ನುಡಿಯುತ್ತಿದ್ದ. “ಎಲ್ಲೋ ಸಾಹುಕಾರರ ಸವಾರಿ ಹೊರಟಹಾಗಿದೆ” ಎಂದು ಪರ ಊರಿಗೆ ಹೊರಟುನಿಂತಿದ್ದ ಹವಳೇನಹಳ್ಳಿ ಸಾಹುಕಾರರನ್ನು ಕೇಳಿದರೆ “ಅಯ್ಯೋ ಇದೇನಪ್ಪಾ ವಿಜಯಣ್ಣ, ಹದಿನೈದು ದಿನಗಳ ಹಿಂದೆ ನಿನ್ನ ಮುಖಾಂತರವೇ ಅಲ್ಲವೇ ನಾನು ಬೆಂಗಳೂರಿನಲ್ಲಿ ಇರುವ ನನ್ನ ಮಗನಿಗೆ ಆರೋಗ್ಯ ತಪಾಸಣೆಯ ಕಾರಣಕ್ಕೆ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಬರೆದಿದ್ದು” ಎಂದು ಉಸುರಲು, “ಹೌದಾ? ಹಾಗೋ ಸಮಾಚಾರ, ನಾನೇ ಕಾಗದ ಬರೆದಿದ್ದೆನೇ? ನನಗೆ ನೆನಪಿಲ್ಲ ಬಿಡಿ ಬುದ್ದಿ” ಎಂದು ನಯವಾಗಿ ಜಾರಿಕೊಳ್ಳುತ್ತಿದ್ದ ನಮ್ಮ ಜಾಣ ಅಂಚೆಪೇದೆ ವಿಜಯಣ್ಣ.

ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ವಿಜಯಣ್ಣ ತನ್ನ ಸೇವೆಯನ್ನು ಮೆರೆದ ಮತ್ತು ಅಂಚೆ ಇಲಾಖೆಯ ಖಾಯಂ ನೌಕರನಾಗದ ಹೊತ್ತೂ ಇಲಾಖೆಯ ಬಹು ದೊಡ್ಡ ಆಸ್ತಿಯಾಗಿಯೇ ಸಾಬೀತುಗೊಂಡಿದ್ದ ಎನ್ನುವ ಕಾರಣಕ್ಕಾಗಿ ಆತ ವಿಶೇಷ ಉಲ್ಲೇಖಕ್ಕೆ ಪಾತ್ರನಾದವನು ಎಂದು ನನಗನ್ನಿಸುತ್ತದೆ. ಅಂದಿನ ಘನತೆವೆತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಘೋಷಿಸಿದ ಅನೇಕ, ಬಡವರ ಉದ್ಧಾರವನ್ನು ಮತ್ತು ಗ್ರಾಮೀಣ ಜನತೆಯ ಏಳಿಗೆಯನ್ನು ಗುರಿಯಾಗಿರಿಸಿಕೊಂಡು, ಜಾರಿಗೆ ತಂದ ಯೋಜನೆಗಳ ಯಾವತ್ತೂ ವಿವರಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ, ವಿವರಿಸುವ, ಅವರ ವತಿಯಿಂದ ಸೂಕ್ತ ಮಾದರಿಯಲ್ಲಿ ನಿವೇದನಾ ಪತ್ರಗಳನ್ನು ಪಡೆದು, ಸಂಬಂಧಿತ ಇಲಾಖೆಗೆ ತಲುಪಿಸುವ ಕೆಲಸಕಾರ್ಯಗಳನ್ನ ವಿಜಯಣ್ಣ ತನ್ನ ಆದ್ಯಕರ್ತವ್ಯವೆಂಬಂತೆ ನಿರ್ವಹಿಸುತ್ತಿದ್ದ. ವಿಜಯಣ್ಣನ ಈ ನಿಸ್ವಾರ್ಥಸೇವೆಯ ಕಾರಣದಿಂದಲೇ ಈ ಹೊತ್ತು ವಿಧವಾವೇತನ, ವೃದ್ಧಾಪ್ಯವೇತನ, ಅಂಗವಿಕಲವೇತನ, ವಿದ್ಯಾರ್ಥಿವೇತನ ಮುಂತಾದ ಅನೇಕ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಅರ್ಹ ಫಲಾನುಭವಿಗಳ ಹಿಂಡೇ ನನ್ನ ಊರು ಮತ್ತು ವಿಜಯಣ್ಣನ ದಶಕಗಳ ಸಾರ್ಥಕ ಸೇವೆಗೆ ಸಾಕ್ಷಿಯಾದ ಹಳ್ಳಿಕೇರಿಗಳಲ್ಲಿವೆ. ಇವರಲ್ಲಿ ಎಷ್ಟು ಮಂದಿಗೆ ವಿಜಯಣ್ಣನ ನೆನಪು ಈಗಲೂ ಕಾಡುತ್ತದೆಯೋ ನಾ ತಿಳಿಯೆ. ಆದರೆ ವಿಜಯಣ್ಣನಿಂದ ಉಪಕೃತರಾದ ಈ ಮಂದಿ ಊಟ ಮಾಡುವ ಪ್ರತಿಯೊಂದು ಆಗುಳಿನ ಮೇಲೂ ಅಂಚೆಪೇದೆ ವಿಜಯಣ್ಣನ ಹೆಸರಿನ ಅಳಿಯದ ಉಲ್ಲೇಖವಿದೆ ಎಂದು ನಾನು ಭಾವಿಸಿದ್ದೇನೆ.

ನಾನು ಕಂಡ ಊರಿನ ಉಳಿದ ಸೇವಾಸಕ್ತಗಣದ ಹಾಗೆಯೇ ವಿಜಯಣ್ಣ ತನ್ನ ಜನಸೇವೆಯನ್ನ ನಿಸ್ವಾರ್ಥವಾದ ತುಂಬು ಮನದೊಂದಿಗೇ ಮಾಡಿದವನು. ಮನೆಯಲ್ಲಿ ಬಡತನ ಕಿತ್ತು ತಿನ್ನುವಂತೆ ಇದ್ದರೂ ಅನ್ಯರ ಹಣಕ್ಕೆ ಎಂದೂ ಜೊಲ್ಲು ಸುರಿಸದವನು. ಪಿಂಚಣಿಯನ್ನೋ, ಮಾಸಾಶನವನ್ನೋ ವಿತರಿಸುವ ವೇಳೆ ಒಂದಷ್ಟು ಚಿಲ್ಲರೆ ಕಾಸನ್ನು ಕೈಗಿಡಲು ಮುಂದಾದ ಊರ ಮಂದಿಯಿಂದ ಹಣ ತೆಗೆದುಕೊಂಡು ಅದನ್ನು ಅವರ ಜೇಬಿಗೇ ಹಾಗೆಯೇ ಮರಳಿ ಇಟ್ಟವನು. “ಇದು ಸರ್ಕಾರ ನಿಮ್ಮ ಕಷ್ಟಗಳಿಗೆ ಪರಿಹಾರದ ರೂಪದಲ್ಲಿ ನೀಡುತ್ತಿರುವ ಭತ್ಯೆ, ಇದರಲ್ಲಿ ನನ್ನ ಹಕ್ಕೇನಿದೆ?” ಎಂದು ಕಡ್ಡಿ ತುಂಡುಮಾಡುವ ರೀತಿಯಲ್ಲಿ ತಿಳಿ ಹೇಳಿ, ಫಲಾನುಭವಿಗಳನ್ನು ಲಂಚದ ಆಮಿಷ ಒಡ್ಡುವ ಖತರ್ನಾಕ್ ಖೇಲಿನಿಂದ ಸದೂರ ಇಟ್ಟವನು. ಯಾರಾದರೂ ಅತಿ ಬಲವಂತಪಡಿಸಿದಲ್ಲಿ ಮಾತ್ರ ಒಂದು ಲೋಟ ನೀರುಮಜ್ಜಿಗೆ ಸೇವಿಸಿ ಅವರಿಗೆ ಅನಂತ ಧನ್ಯವಾದಗಳನ್ನು ಹೇಳುತ್ತಲೇ ತನ್ನ ಸೈಕಲ್ ಏರಿ ಕುಳಿತು ಕ್ಷಣಾರ್ಧದಲ್ಲಿಯೇ ಮುಂದಿನ ತಿರುವಿನಲ್ಲಿ ಮಾಯವಾಗುತ್ತಿದ್ದವನು. ಕೇವಲ ಊರ ಜನರಿಗಷ್ಟೇ ಅಲ್ಲದೆ ಅಂಚೆಕಚೇರಿಗೆ, ಪ್ರತೀ ಮೂರು ವರ್ಷಗಳಿಗೊಮ್ಮೆ ವರ್ಗವಾಗಿ ಬರುತ್ತಿದ್ದ ಪೋಸ್ಟ್ ಮಾಸ್ಟರ್ ಗಳಿಗೆ ಅಣ್ಣನ ಸಮಾನವಾದ ಪ್ರೀತಿ ಪ್ರೇಮಗಳ ಎಂದೂ ಬತ್ತದ ಧಾರೆಯನ್ನೇ ಹರಿಸಿದವನು. “ತುರುವನೂರಿನ ಅಂಚೆಕಚೇರಿಗೆ ವರ್ಗವಾಗಿ ಹೋಗುತ್ತಿದ್ದೀರಂತೆ ಅಲ್ಲವೇ? ಹಾಗಿದ್ದರೆ ಮುಂದಿನ ನಿಮ್ಮ ಮೂರು ವರ್ಷಗಳ ಸೇವೆಯ ಬಗ್ಗೆ ನೀವು ಚಿಂತಿಸುವುದೇ ಬೇಡ, ಅಲ್ಲಿರುವ ಅಂಚೆಪೇದೆ ವಿಜಯಣ್ಣ ನಿಮ್ಮ ಸಕಲಕಾರ್ಯಗಳಿಗೂ ಬೆಂಬಲವಾಗಿ ನಿಲ್ಲುತ್ತಾನೆ” ಎನ್ನುವ ವಿಜಯಣ್ಣನ ಕುರಿತಾದ ಅಭಿಮಾನದ ನುಡಿಗಳಿಗೆ ದುರ್ಗದ ಮುಖ್ಯ ಅಂಚೆಕಚೇರಿಯ ಗೋಡೆಗಳಷ್ಟೇ ಸಾಕ್ಷಿಯೆನಿಸದೆ ಬೆಂಗಳೂರಿನ ಮುಖ್ಯ ಅಂಚೆಕಚೇರಿಯ ಗೋಡೆಗಳೂ ಅಪರೂಪಕ್ಕೊಮ್ಮೆ ಈ ನುಡಿಗಳ ಸಾಕ್ಷಾತ್ಕಾರ ಮಾಡಿಕೊಂಡಿದ್ದೂ ಉಂಟು. ಒಟ್ಟಾರೆ ಆಫೀಸಿನಲ್ಲಿಯೇ ಆಗಲಿ, ಮನೆಯಲ್ಲಿಯೇ ಆಗಲಿ, ಬಾಹ್ಯ ಪ್ರಪಂಚದ ವ್ಯವಹಾರಗಳ ವಿಷಯದಲ್ಲಿಯೇ ಆಗಲಿ ತನಗೇ ಸೀಮಿತವಾದ ಅಪರೂಪದ ಸಭ್ಯಗುಣಗಳನ್ನು ಹೇರಳವಾಗಿ ಪ್ರದರ್ಶಿಸಿದ ವಿಜಯಣ್ಣ ತನ್ನ ಹುಟ್ಟೂರು ಮೈಸೂರಿನ ಸಭ್ಯತೆಯ ಸೊಗಡನ್ನು ತನ್ನ ಜೀವನದುದ್ದಕ್ಕೂ ನನ್ನೂರನ್ನೂ ಒಳಗೊಂಡಂತೆ ಸುತ್ತಮುತ್ತಲ ಪರಿಸರದಲ್ಲಿ ಅಹರ್ನಿಶಿ ಪಸರಿಸುತ್ತಲೇ ಸಾಗಿದವನು. ತನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ವಿಜಯಣ್ಣ ಜೀವನದಲ್ಲಿ ದುರ್ಲಭ ಎನ್ನಬಹುದಾದ ಧನಾತ್ಮಕತೆಯನ್ನೇ ಧಾರೆ ಎರೆದವನು. ಜೀವನವನ್ನು ಅರ್ಥೈಸಿಕೊಳ್ಳುವ ಋಷಿಸದೃಶ ಮನಃಸ್ಥಿತಿಗೆ ದೊಡ್ಡ ಗವಾಕ್ಷದ ಕಿಂಡಿಯನ್ನು ಇಟ್ಟವನು. ತನ್ನ ದೇಹ ಕೇವಲ ಮೂಳೆಮಾಂಸದ ತಡಿಕೆಯಾಗಿರದೆ ಸೇವೆ, ಪ್ರಾಮಾಣಿಕತೆ, ಸಭ್ಯತೆ, ನಿಷ್ಕಲ್ಮಷ ಪ್ರೀತಿ, ಪ್ರೇಮಗಳು ವಿಶೇಷ ಪ್ರಮಾಣದಲ್ಲಿ ಎರಕ ಹೊಯ್ದು ಮಾಡಿದ ವಿಶೇಷ ರೂಪದ ಮಾನವಮೂರ್ತಿ ಎನ್ನುವ ಸಂದೇಹವನ್ನು ಅನೇಕರ ತಲೆಯಲ್ಲಿ ಬಿತ್ತಿದವನು. ಸಮಾಜದ ಸೇವೆಯಲ್ಲಿ ತಾವು ಹಿಡಿದ ಎಂತಹುದೇ ಕೆಲಸವಾದರೂ ಸರಿ, ಅದು ಕಾಯಕದ ಗರಿಮಾ ರೂಪವನ್ನು ಧರಿಸಿಬೇಕಲ್ಲದೆ ಸಮಾಜಸೇವೆಗಾಗಿಯೇ ಮುಡುಪಾಗಿದೆ ಎನ್ನುವ ಯಾವ ಸೇವೆಯೂ ಜಗತ್ತಿನಲ್ಲಿ ಇಲ್ಲ ಎನ್ನುವುದನ್ನು ಬಹಳ ಸೂಚ್ಯವಾಗಿ ಹೇಳುವ ಮೂಲಕ ಇಂದಿನ ರಾಜಕಾರಣಿಗಳ ಎದೆಯಲ್ಲಿ ಬಹಳ ದೊಡ್ಡ ಮಟ್ಟದ ನಡುಕವನ್ನೇ ಹುಟ್ಟು ಹಾಕುವಂತಿದ್ದವನು ನಮ್ಮ ಅಂಚೆಪೇದೆ ವಿಜಯಣ್ಣ.

ಒಟ್ಟಾರೆ ವಿಜಯಣ್ಣನ ಸೇವೆಯ ಯಜ್ಞದಿಂದ ನನ್ನೂರಿನ ಮಣ್ಣು ಪವಿತ್ರವಾಗಿದೆ, ವಿಜಯಣ್ಣ ತನಗೆ ತುತ್ತು ಅನ್ನ ನೀಡಿ, ಸಮಾಜದಲ್ಲಿ ತನ್ನ ಗೌರವಕ್ಕೆ ಕಾರಣವಾದ ಅಂಚೆ ಇಲಾಖೆಯ ಪ್ರಸಿದ್ದಿಯನ್ನು ಮುಗಿಲೆತ್ತರಕ್ಕೆ ಏರಿಸಲು ಸದಾ ಕಾರ್ಯಸನ್ನದ್ಧನಾಗಿದ್ದವನು. ಬಡತನದ ಮೂಸೆಯಲ್ಲಿ ಬೆಂದರೆ ಮಾತ್ರ ಪ್ರಾಮಾಣಿಕತೆ ಉದ್ಭವಿಸೀತು ಎಂದು ಊಹಿಸಿ ಈ ಹೊತ್ತಲ್ಲಿ ನನ್ನ ಚಿಂತನೆಯ ಪರಿಗೆ ಬೀಗುತ್ತಿರುವ ನನ್ನಲ್ಲಿ ಇಂತಹುದೇ ಅನಂತ ಚಿಂತನ-ಮಂಥನಗಳ ಉಗಮಕ್ಕೆ ಎಂದೂ ತೀರದ ಉರುವಲನ್ನು ಒದಗಿಸುತ್ತಿರುವನೇ ನನ್ನ ಪ್ರೀತಿಪಾತ್ರ ಅಂಚೆಪೇದೆ ವಿಜಯಣ್ಣ.

 

Girl in a jacket
error: Content is protected !!