ಸುಖ

Share

 

 

                  ಶ್ರೀ ಆರೂಢ ಭಾರತೀ ಸ್ವಾಮೀಜಿ

ಸಿದ್ಧಸೂಕ್ತಿ :
ಸುಖ.
ಸುಖ ಎಲ್ಲರಿಗೂ ಬೇಕು. ಅದಕ್ಕಾಗಿ ನಡೆದಿದೆ ನಿರಂತರ ಪ್ರಯಾಸ. ಯಾರಿಗೆ ಎಲ್ಲಿ ಎಷ್ಟು ಸುಖ ಸಿಕ್ಕಿದೆ? ಅವರವರೇ ಬಲ್ಲರು! ಪಂಚೇಂದ್ರಿಯಸುಖ, ಮನದಾಳದ ಸುಖ, ಸುಖಗಳನಂತ! ಕೆಲರಿಗೆ ಭಕ್ತಿ ಭಜನೆ ಸಂಗೀತ ಹಾಡು ಕಲೆ ಸಾಹಿತ್ಯ ತ್ಯಾಗ ಸೇವೆಯಲ್ಲಿ ಸುಖ! ಬಹುತೇಕರಿಗೆ ಭುಕ್ತಿ ಭೋಗದಲ್ಲಿ ಸುಖ! ಚಟದಾಸರಿಗೆ ತಿಂದು ಕುಡಿದು ಸೇದಿ ತೇಗಿದರೆ ಸುಖ, ಭಿನ್ನರಿಗೆ ಅದಿಲ್ಲದಿರೆ ಸುಖ! ಲೌಕಿಕಗೆ ಜನಮನ್ನಣೆ ಸಂಭ್ರಮ ಸಂಪತ್ತಿನ ಸುಖ, ತ್ಯಾಗಿ ವಿರಕ್ತ ಸಂನ್ಯಾಸಿಗೆ ಲೋಕ ವಿಮುಖ ಏಕಾಂತದ ಸುಖ! ಅನ್ನ ವಸ್ತ್ರ ವಸತಿ ಗಂಡ ಹೆಂಡತಿ ಮಕ್ಕಳು ಹಣ ಆಸ್ತಿಗಳಲ್ಲಿ ಸುಖವಿದೆ ಎಂಬುದು ಕಲ್ಪನೆ! ಅವು ಸಹಾಯಕಗಳು ಮಾತ್ರ! ಅರಮನೆಯಲ್ಲಿದ್ದು ಅಮೃತಾನ್ನ ಉಂಡು ಮೃದು ಭವ್ಯ ಹಾಸಿಗೆಯಲ್ಲಿ ಮಲಗಿಯೂ ನಿದ್ರೆ ಬಾರದವನು ಸುಖಿಯೇ? ಗುಡಿಸಲಿನಲ್ಲಿದ್ದು ಅಂಬಲಿಯನ್ನುಂಡು ಚಾಪೆಯ ಮೇಲೆ ಗಾಢ ನಿದ್ರೆಗೈಯ್ಯುವವನು ಸುಖಿಯಲ್ಲವೇ? ಪಡೆಯುವ ಮುನ್ನ ಚಡಪಡಿಕೆ! ಪಡೆದಾಗ ಅಲ್ಪ ಸುಖ! ಮತ್ತೆ ಸುಖ ಮಂಗಮಾಯ! ಮದುವೆಯ ಮುನ್ನ ಅದರ ಹುಚ್ಚು! ಹೆತ್ತು ಹೊತ್ತಾದ ಮೇಲೆ ಶುರು ಅದರ ಗೋಳು! ಆಗವರು ಹೇಳುವರು “ಸಂಸಾರದಲ್ಲಿ ಸುಖವಿಲ್ಲ. ಸಾಸಿವೆಯಷ್ಟು ಸುಖಕ್ಕೆ, ಬೆಟ್ಟದಷ್ಟು ಕಷ್ಟ”! ಸುಖ ಕೊಳ್ಳುವ ವಸ್ತುವಲ್ಲ. ಅದು ನಮ್ಮೊಳಗಿನ ಭಾವ! ನಾಯಿ ಎಲುಬ ಕಚ್ಚಿ ದವಡೆ ಗಾಯವಾಗಿಸಿಕೊಂಡು ಬಳಲಿ ಮಲಗಿ ಬಾಯಲ್ಲಿ ವಸರಿದ ರಕ್ತ ಚಪ್ಪರಿಸಿ ಅದು ಎಲುಬಿನ ರುಚಿ ಎಂದಿತಂತೆ!!

Girl in a jacket
error: Content is protected !!