
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು.
ನಾವು ಆಳವಾಗಿ ಯೋಚಿಸುತ್ತೇವೆ, ಯೋಜಿಸುತ್ತೇವೆ! ಸಾಧಕ ಬಾಧಕಗಳ ಅಳೆದು ತೂಗಿ ನಿರ್ಣಯಿಸುತ್ತೇವೆ. ಗೌರವಿಸುವ ಬದಲು ಅನುಮಾನಿಸುತ್ತೇವೆ. ಕಳ್ಳ ಸುಳ್ಳ ನಕಲಿ ಇರಬಹುದೇ? ಎಂದು ಪರೀಕ್ಷಿಸುತ್ತೇವೆ! ಆದರೂ ಬಹುತೇಕ ನಕಲಿ ಪಾಸ್! ಅದು ಮೆರೆಯುವುದು, ಹಲ್ಲು ಕಿರಿಯುವುದು. ಅಸಲಿ ಸೋತು ಸೊರಗುವುದು, ಮೂಲೆ ಸೇರುವುದು! ನೋಡಿಕೊಂಡವರ ಕಾರ್ಯವೆಸಗಲು, ನಿಯಮ ಬಾಹಿರ ಕಾಣದು! ಕಂಡರೂ ಅಡ್ಡಿಯಾಗದು! ದೂರ ಸರಿಯುವುದು! ನೋಡಿಕೊಳ್ಳದವರ ಕಾರ್ಯವೆಸಗಲು, ಇರುವ ಪೂರಕ ನಿಯಮವೂ ಅಡ್ಡಿಯಂತೆ ಕಾಮಣಿ! ಸಾಗುವ ಬಾಳುವ ನಮಗೆ ನಮ್ಮ ದಾರಿ ಎಂದು ಹೆತ್ತ-ಹಿರಿಯರ ಧಿಕ್ಕರಿಸಿ ಪ್ರೀತಿಸಿ ಪರಸ್ಪರ ಭಾರೀ ಚರ್ಚಿಸಿ ಕೈ ಹಿಡಿದು ಪರಾರಿ! ಮಾಸ ವರ್ಷದೊಳಗೆ ಬಾಳು ಬಿಕಾರಿ! ಇದು ಸ್ವಾರ್ಥಿ ಮಾನವರ ಅತಿ ಬುದ್ಧಿಯ ದುಷ್ಟ ಪ್ರತಿಫಲ. ಹಕ್ಕಿಯ ಗಮನಿಸಿ! ಹಾರುವ ಮುನ್ನ ಯೋಜನೆ ಇಲ್ಲ! ಸುಮ್ಮನೇ ಹಾರುವುದು! ಸಾಗಿದಂತೆ ದಾರಿ ತಂತಾನೇ ಹೊಳೆಯುವುದು!ಕರೆದು ಅದಕೆ ಆಹಾರ ಇಕ್ಕುವರಾರು? ಪಕ್ಷಿಗಳೆಷ್ಟು? ಪಕ್ಷಿಪ್ರಿಯರೆಷ್ಟು? ಅವರಲ್ಲಿ ಆಹಾರ ಇಕ್ಕುವರೆಷ್ಟು? ಅಲ್ಲಲ್ಲಿ ಪ್ರಕೃತಿಯೇ ಅದಕೆ ಆಹಾರ ಒದಗಿಪುದು! ಅದು ಸಿಕ್ಕಿದ್ದನ್ನು ತಿಂದು ನಲಿಯುವುದು! ಬಂದಂತೆ ಸಾಗುವ ನಿರ್ಲಿಪ್ತ ಬಾಳು ಅದರದ್ದು. ಅಂಥ ಬದುಕು ನಮ್ಮದಿರೆ ಬಾಳು ಸೊಗಸು. ಬಂದಂಗ ಹೋದರೆ ಬಂಧನವಿಲ್ಲ! ಕಾಲಕ್ಕೆ ತಕ್ಕಂತೆ ಹೊಂದಿ ಹೆಜ್ಜೆ ಹಾಕಿದರೆ ದುಃಖ ಜಗಳ ದ್ವೇಷ ತಲೆಬಿಸಿ ರಕ್ತದೊತ್ತಡ ಮಧುಮೇಹ ಬಲು ಕಡಿಮೆ!
ಯೋಜನೆ ನಮಗಿರಲಿ, ಹೊಂದಿ ಬಾಗಿ ಬಾಳೋಣ!!