
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಮನೆಯೊಳಗೆ ಮಠ ನಿನಗೆ ಮಂಕುತಿಮ್ಮ.
ಸಂಸಾರದಲ್ಲಿ ತಂದೆ ತಾಯಿ ಅಜ್ಜ ಅಜ್ಜಿ ಸಹೋದರ ಸಹೋದರಿ ಅತ್ತೆ ಮಾವ ಗಂಡ ಹೆಂಡತಿ ಮಕ್ಕಳ ಹೊಣೆ. ನಿಭಾಯಿಸಲು ಪರದಾಡಬೇಕು. ಸಂಸಾರ ದುಃಖ.ಸಂನ್ಯಾಸಿಯಾಗಿ ಮಠ ಸೇರಿದರೆ ಇದಿಲ್ಲ!ಉಚಿತ ಪ್ರಸಾದ, ಪಾದ ಕಾಣಿಕೆ, ವಸ್ತ್ರ ಗೌರವ ಸಮ್ಮಾನ ಪೂಜೆ ಸೇವೆ ಎಲ್ಲ ಲಭ್ಯ! ಸಂನ್ಯಾಸ ಸುಖ! ಎನ್ನುವರುಂಟು. ಸಂನ್ಯಾಸವೇನು ಹೊಣೆಗೇಡಿತನವೇ? ಕಾಷಾಯ ತೊಟ್ಟರೆ ಸಂನ್ಯಾಸವೇ? ಭಾವ ನಿರ್ಭಾವ ಆಗುವುದು ಸಂನ್ಯಾಸ! ನಾಯಮಾತ್ಮಾ ಬಲಹೀನೇನ ಲಭ್ಯಃ=ಸಂನ್ಯಾಸ ಆತ್ಮಜ್ಞಾನ ನಿಷ್ಠೆಗಳು ಬಲಹೀನನಿಗೆ ದಕ್ಕವು. ಹೊಣೆಗೇಡಿ ಸಂನ್ಯಾಸಕ್ಕಿಂತ, ಹೊಣೆಯುಳ್ಳ ಸಂಸಾರಿ ಲೇಸು! “ಮನೆ ಮಾರು ತೊರೆಬೇಡ” ಎಂಬ ನಿಜಗುಣರ, “ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದಗಳ ತೋರಿಸಿ ಬದುಕಿಸಯ್ಯ”ಎಂಬ ಬಸವಣ್ಣನ ಮಾತು ಸ್ಮರಣೀಯ.ಡಿವಿಜಿ ಹೇಳುವರು:ಋಣವ ತೀರಿಸಬೇಕು. ಬದುಕಿಗೆ ನೆರವಾದುದೆಲ್ಲ ಋಣ=ಸಾಲ. ತೀರಿಸದಿದ್ದರಾಗದು. ಮಾತೃ ಪಿತೃ ದೇವ ಋಷಿ ಗುರು ಪ್ರಕೃತಿ ಸಮಾಜ ಋಣಗಳನಂತ!ಋಣ ತೀರಿಸುತ್ತ ಎಲ್ಲರೊಳಗೊಂದಾಗಿ ಬೆರೆತು, ಜಗದಾದಿ ತತ್ತ್ವ ಪರಮಾತ್ಮನನ್ನು ಕಂಡವನಿಗೆ ಮನೆಯೇ ಮಠ.
ಋಣವನು ಮುಗಿಸೋಣ, ಮನೆ ಮಠವಾಗಿಸಿ ಬೆಳಗೋಣ!!