ಶ್ರೀ ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ
ಮನಸ್ಸಿದ್ದರೆ ಮಾರ್ಗ.
ಮನಸ್ಸು ದೇಹ ವಸ್ತುಗಿಂತ ಬಲಿಷ್ಠ. ಅದ್ಭುತ ಸಾಧಕ. ಜಾಂಬವಂತನ ಮಾತಿನಿಂದ ಮನಸ್ಸು ಮಾಡಿದ ಆಂಜನೇಯ ಸಮುದ್ರ ಹಾರಿ, ಸೀತೆಯ ಕಂಡ! ಎತ್ತರಿಳಿಜಾರಿನ ಅಂಕುಡೊಂಕಿನ ಕಲ್ಲು ಬೆಟ್ಟಗಳ ರಸ್ತೆ! ಸುರಂಗಮಾರ್ಗ! ಗಗನಯಾತ್ರೆ! ಸಮುದ್ರದಾಳದ ಈಜು! ಶಿಕ್ಷಣ – ವಿಜ್ಞಾನ ಪ್ರಗತಿ! ಮೊಬೈಲ್ ನಲ್ಲಿ ವಿಶ್ವ! ಕ್ಷಣದಲ್ಲಿ ಹಣ ಸಾವಿರ ಮೈಲಿ ದೂರ ರವಾನೆ! ಕೆಲಸಕ್ಕಾಗಿ ಅಲೆದವರಿಂದ ಸಾವಿರ ಸಾವಿರ ಜನರಿಗೆ ಉದ್ಯೋಗ! ಹಿರಿಯೂರು ತರಕಾರಿ ವ್ಯಾಪಾರಿ ಮಗಳು ಲಲಿತಾ ಏರೋನ್ಯಾಟಿಕ್ ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ! ಕೋಲ್ಕತ್ತದ ಬಡ ಕಿರಾಣಿ ವ್ಯಾಪಾರಿ ಮಗಳು ಶ್ವೇತಾ ಅಗರ್ವಾಲ್ ಐಎಎಸ್! ಮಹಾರಾಷ್ಟ್ರದ ಪ್ರಾಂಜಲ್ ಪಾಟೀಲ್ ದೇಶದ ಮೊದಲ ಅಂಧ ಐಎಎಸ್! ಕೋಲಾರ ಕೆಂಬೋಡಿಯ ಶಾಲಾ ಶಿಕ್ಷಕನ ಮಗಳು ನಂದಿನಿ ಪ್ರಥಮ ರ್ಯಾಂಕ್ – ಐಎಎಸ್! ಇಂಥ ಅಸಂಖ್ಯ ಸಾಧನೆ ಮಾಡಿದ್ದು ಮನಸ್ಸು! ಅದು ಅಡ್ಡಿ ಭೇದಿಸಿ ನುಗ್ಗುವುದು. ಸಾಧನೆ ಯಾರದೋ ಸ್ವತ್ತಲ್ಲ. ಪ್ರತಿ ಮನಸ್ಸಿನದು! ಮನಸ್ಸು ಯೋಜನೆ ಸತತ ಪ್ರಯತ್ನಗಳಿಂದ ಕಾರ್ಯಸಿದ್ಧಿ! ಮನಸ್ಸು ಮಾಡಿದ್ದು ಈಡೇರದಿದ್ದರೆ ಚಿಂತೆ ಏಕೆ? ಮನಸ್ಸು ಬದಲಿಸಿ! ಮನಸ್ಸು ದುರ್ಬಲಗೊಂಡರೆ ಸಾವಿರ ಕೋಟಿಯವನು ನದಿಗೆ ಹಾರುವ! ಸುಖ ದುಃಖಗಳಿಗೆ ಮನಸ್ಸೇ ಕಾರಣ ಎಂಬ ಶಂಕರರ ಮಾತು ನೆನಪಿರಲಿ!
ಒಳ್ಳೆಯ ಮನಸ್ಸು ಮಾಡೋಣ, ಕಾರ್ಯ ಸಾಧಿಸಿ ಸುಖಿಸೋಣ!!